-

ಋಗ್ವೇದ ಮತ್ತು ತಳಿ ವಿಜ್ಞಾನ

-

ವಿಮರ್ಶೆಯೆನ್ನುವುದು ಬೌದ್ಧಿಕ ಕಸರತ್ತು ಎನ್ನಿಸಿಕೊಳ್ಳುವ ಕಾಲದಲ್ಲಿ, ಅದಕ್ಕೆ ಸಮಕಾಲೀನತೆಯನ್ನು, ಹೃದಯವಂತಿಕೆಯನ್ನು ಕೊಟ್ಟವರು ನೆಲ್ಲುಕುಂಟೆ ವೆಂಕಟೇಶ್. ವರ್ತಮಾನದ ತಲ್ಲಣಗಳನ್ನು ಗ್ರಹಿಸಿ ಬರೆಯಬಲ್ಲವರು. ವೀಣೆಯ ತಂತಿಯಂತೆ ಮೀಟಬಲ್ಲವರು. ಇವರ ರಾಜಕೀಯ ಲೇಖನಗಳೂ ಹೃದ್ಯವಾಗುವುದು ಈ ಕಾರಣಕ್ಕಾಗಿ. ಕಾವ್ಯ, ಕತೆ ಮೊದಲಾದ ಸೃಜನಶೀಲ ಬರಹಗಳಲ್ಲೂ ಗುರುತಿಸಿಕೊಂಡಿರುವ ನೆಲ್ಲುಕುಂಟೆ ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ತಳಸಂಸ್ಕೃತಿಯ ಬೇರುಗಳನ್ನು ಅರಸುವ ಅವರ ಸಂಶೋಧನಾ ಬರಹಗಳು ಕನ್ನಡದ ಮಟ್ಟಿಗೆ ತೀರಾ ಹೊಸತು ಅನ್ನಿಸಬಲ್ಲವುಗಳು. ವರ್ತಮಾನಕ್ಕೆ ಸಂಬಂಧಿಸಿದಂತೆ ಅವುಗಳು ಹಲವು ಹೊಸ ಒಳನೋಟಗಳನ್ನು ನೀಡಿವೆ. 

ಚರಿತ್ರೆಯನ್ನು ವೈಜ್ಞಾನಿಕವಾಗಿ ನಿರ್ವಹಿಸದೆ ಸಂಕೇತಗಳ ಮೂಲಕ ನೆನಪುಗಳನ್ನು ಹಿಡಿದು ದಾಖಲಿಸಿದ ಸಂಸ್ಕೃತಿ-ನಾಗರಿಕತೆಗಳು ವಿಪರೀತ ಸಮಸ್ಯೆಗಳನ್ನು ಎದುರಿಸುತ್ತಿವೆ. ಕಥೆಯೊಂದು ಚರಿತ್ರೆಯಾಗುವ, ನಂಬಿಕೆಗಳನ್ನು ಇತಿಹಾಸವೆಂದು ವ್ಯಾಖ್ಯಾನಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ. ನಾವೂ ಇಂಥದ್ದೆ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸಾವಿರಗಟ್ಟಲೆ ವರ್ಷಗಳಿಂದಲೇ ಟರ್ಕಿ, ಗ್ರೀಕ್, ಚೀನಾ, ಪರ್ಶಿಯಾ ಮುಂತಾದ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದರೂ ನಮ್ಮಲ್ಲಿ ಚರಿತ್ರೆ ಎಂಬ ಶಿಸ್ತು ತನ್ನ ನಿಜಾರ್ಥದಲ್ಲಿ ಬೆಳೆಯಲೇ ಇಲ್ಲ. ಹಾಗಾಗಿ ಇತಿಹಾಸ ಎಂಬ ಶಿಸ್ತು ಇಲ್ಲದ ಕಾರಣಕ್ಕೆ ವೈದಿಕ ಆಕರಗಳನ್ನೆ ನಂಬಿಕೊಳ್ಳಬೇಕಾದ ಪರಿಸ್ಥಿತಿ ಇದೆ. ನಮ್ಮಲ್ಲಿ ಪುರಾತತ್ವ ಶಾಸ್ತ್ರವೆಂಬ ಶಿಸ್ತು ಇದ್ದರೂ ಇಲ್ಲಿನ ಹವಾಮಾನದ ಕಾರಣಕ್ಕೆ ಪಶ್ಚಿಮ ಏಶ್ಯ, ಯುರೋಪ್ ಮುಂತಾದ ಕಡೆ ಸಿಗುವಂತೆ ಸಾಂದ್ರವಾದ ಸಾಕ್ಷಗಳು ಲಭಿಸುವುದಿಲ್ಲ. ಹಾಗಿರುವಾಗ ತೌಲನಿಕ ಭಾಷಾಶಾಸ್ತ್ರ ಮತ್ತು ಆಧುನಿಕವೂ ಹೆಚ್ಚು ನಿಖರವೂ ಆದ ತಳಿ ವಿಜ್ಞಾನಗಳು ತುಸು ಮಟ್ಟಿಗೆ ಮನುಷ್ಯರ ಇತಿಹಾಸ ಮತ್ತು ಚಲನೆಯನ್ನು ವಿವರಿಸುತ್ತಿವೆ. ಬಹು ಸಂಸ್ಕೃತಿಗಳ ಜನರು ಒಟ್ಟಿಗೆ ಬಾಳುತ್ತಿರುವ ಈ ನೆಲದಲ್ಲಿ ಜಾತಿ ವರ್ಣಗಳ ಹೈರಾರ್ಕಿಯನ್ನು ನೆಲೆಗೊಳಿಸಲು ಪ್ರಯತ್ನಿಸಲಾಗಿದೆ. ಪುರಾಣ, ಕಥೆ, ಕಾವ್ಯಗಳ ಮೂಲಕ ವಿಧಿ ನಿಷೇಧಗಳನ್ನು ರೂಪಿಸಲಾಗಿದೆ. ಆ ಮೂಲಕ ತನ್ನ ಮೇಲಿನ ಎಲ್ಲರ ಭಾರವನ್ನು ಹೊರುತ್ತಿರುವ ಕಟ್ಟ ಕಡೆಯ ಜಾತಿಯ ಮನುಷ್ಯನಿಗೂ ಒಂದು ಸಾಂಸ್ಕೃತಿಕ ಐಡೆಂಟಿಟಿಯನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ. ಡಿ.ಡಿ. ಕೊಶಾಂಬಿಯವರು ತಮ್ಮ ಮಿಥ್ ಆ್ಯಂಡ್ ರಿಯಾಲಿಟಿ ಕೃತಿಯಲ್ಲಿ ಅಭಿಪ್ರಾಯ ಪಟ್ಟಿರುವಂತೆ ಅತಿ ಹೆಚ್ಚು ತುಳಿತಕ್ಕೆ ಒಳಗಾದ ಜಾತಿ/ ಬುಡಕಟ್ಟುಗಳ ಜನರ ಲಾಂಛನಗಳನ್ನು ಆಳುವ ಸಮುದಾಯಗಳು ತಮ್ಮ ಲಾಂಛನಗಳ ಜೊತೆಯಲ್ಲಿ ಸೇರಿಸಿಕೊಂಡಿವೆ. ಈ ಸೇರಿಸಿಕೊಳ್ಳುವಿಕೆಯು ಏಕ ಕಾಲದಲ್ಲಿ ಎರಡು ಕೆಲಸಗಳನ್ನು ಮಾಡುತ್ತಿದೆ. ಹಾವು, ಅಳಿಲು, ಕಾಗೆ, ಆನೆ, ಸಿಂಹ, ಗೂಬೆ ಹೀಗೆ ಅನೇಕ ಬುಡಕಟ್ಟುಗಳ ಲಾಂಛನಗಳ ಮೇಲೆ ಕೂತ ದೇವ/ದೇವತೆಗಳ ಮೂಲಕ ನಿಮ್ಮ ಅಸ್ಮಿತೆಯನ್ನು ನಾವು ನಿರಾಕರಣೆ ಮಾಡುವುದಿಲ್ಲವೆಂತಲೂ ಮತ್ತು ನಿಮ್ಮ ಮೇಲಿನ ನಮ್ಮ ಜಯವನ್ನು ಒಪ್ಪಿಕೊಳ್ಳಿ ಎಂತಲೂ ಈ ಕಥನಗಳು ತೋರಿಸುತ್ತಿರಬಹುದು. ಪುರಾಣ ಮತ್ತು ಕಾವ್ಯಗಳ ಮೂಲಕ ನಡೆದಿರುವ ಸಂಸ್ಕೃತಿ ರಾಜಕಾರಣವು ಕೆಲವೊಮ್ಮೆ ಗಾಬರಿ ಹುಟ್ಟಿಸುತ್ತದೆ. ಜನ ಸಮುದಾಯಗಳ ನೋವುಗಳನ್ನು ನೀಗಲು ನೆರವಾಗುವ ಇವುಗಳು ಸದ್ದಿಲ್ಲದೆ ಹೈರಾರ್ಕಿಯನ್ನು, ಕರ್ಮಸಿದ್ಧಾಂತ, ಹಣೆ ಬರಹ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಮಾಡಿವೆ. ಅದರ ಮೂಲಕ ಮೇಲಿನವರ ಭಾರವನ್ನು ನಿರಾಕರಿಸದೆ ಸವೆದು ಅಸ್ಥಿಪಂಜರವಾಗುತ್ತಿದ್ದರೂ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ನೆನೆಸಿಕೊಂಡು ಬದುಕುವಂಥ ವ್ಯವಸ್ಥೆ ಬಹುಶಃ ಬೇರೆಲ್ಲೂ ಇರಲಾರದು. ವರ್ಣ ವ್ಯವಸ್ಥೆಯ ಮೊದಲ ಪ್ರಸ್ತಾವ ಋಗ್ವೇದದ 10ನೇ ಮಂಡಲದಲ್ಲಿ ಬರುತ್ತದೆ. ಸರಿ ಸುಮಾರು 3,200 ವರ್ಷಗಳ ಹಿಂದೆ ಋಗ್ವೇದದ ಈ ಮಂಡಲವು ರಚನೆಯಾಗಿರಬಹುದೆಂದು ಅಂದಾಜಿಸಲಾಗಿದೆ. ತಳಿ ವಿಜ್ಞಾನವು ಭಾರತದಲ್ಲಿ ಸುಮಾರು 2,500 ವರ್ಷಗಳಿಂದ ಈಚೆಗೆ ಜಾತಿ/ ಬುಡಕಟ್ಟುಗಳು ಇತರ ಜಾತಿ ಬುಡಕಟ್ಟುಗಳ ಜೊತೆಗೆ ರಕ್ತ ಸಂಬಂಧ ಬೆಳೆಸದೆ ಪ್ರತ್ಯೇಕವಾಗಿ ಉಳಿಯಲು ಪ್ರಾರಂಭಿಸಿದ್ದಾರೆ ಎಂಬ ಸತ್ಯಗಳನ್ನು ಲೋಕದ ಮುಂದೆ ಮಂಡಿಸುತ್ತಿದೆ. ಅದಕ್ಕೂ ಮೊದಲು? ತಳಿ ವಿಜ್ಞಾನದ ಅನ್ವೇಷಣೆಗಳ ಪ್ರಕಾರ ಉಪಖಂಡದ ಶೇ.80ಕ್ಕೂ ಹೆಚ್ಚು ಜನರ ತಾಯಿ ಮೂಲ ಒಂದೇ ಆಗಿದೆ. ಮೈಟೊಕಾಂಡ್ರಿಯಾ ಡಿಎನ್‌ಎ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ. ಸುಮಾರು 65 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ದೊಡ್ಡ ಅಲೆಯ ಮೂಲಕ ಕಡೆಯದಾಗಿ ವಲಸೆ ಬಂದ ಹೋಮೊ ಸೇಪಿಯನ್ ಜನರ ಜೊತೆ ಬಂದ ಹೆಣ್ಣಿನಿಂದಲೇ ನಮ್ಮಲ್ಲಿ ವಿಕಾಸ ನಡೆದಿದೆ. ಆದರೆ ವೈ ಕ್ರೋಮೊಸೋಮುಗಳ ಮೂಲಕ ತಂದೆ ಯಾರು ಎಂದು ನಿರ್ಧರಿಸಲಾಗುತ್ತದೆ. ಅದರಂತೆ ಕಾಶ್ಮೀರವೂ ಸೇರಿದಂತೆ ಉತ್ತರದ ಮೇಲಿನ ಸ್ತರಗಳ ಸಮುದಾಯಗಳ ಜನರಲ್ಲಿ ಶೇ.70 ಕ್ಕೂ ಹೆಚ್ಚು ಪ್ರಮಾಣದ ತಂದೆಯ ಮೂಲ ಯುರೇಶಿಯಾದಿಂದ ಬಂದವರದ್ದಾಗಿದೆ. ಆರ್1ಎ1 ತಳಿ ಗುಂಪಿನ ಈ ಜನರೊಳಗೂ ಶೇ.30ರಷ್ಟು ಸ್ಥಳೀಯ ಸಮುದಾಯಗಳ ವೈ ಕ್ರೋಮೊಸೋಮುಗಳು ಪತ್ತೆಯಾಗಿವೆ. ದಕ್ಷಿಣದ ಆದಿಮ ಜಾತಿಗಳಲ್ಲಿ ಶೇ.18ರಿಂದ 40-50 ರವರೆಗೆ ಆರ್ಯ ಬುಡಕಟ್ಟುಗಳ ಮಿಶ್ರಣವಾಗಿದೆ. ತಳಿವಿಜ್ಞಾನವು ವೈಜ್ಞಾನಿಕ ಹುಡುಕಾಟದ ಮೂಲಕ ಮಂಡಿಸುತ್ತಿರುವ ಈ ಸತ್ಯ ಗೊತ್ತಿಲ್ಲದಿದ್ದಾಗಲೂ ನಮ್ಮ ತತ್ವಪದಕಾರರು ಭಿನ್ನ ಭೇದವ ಮಾಡಬ್ಯಾಡಿರಿಎಂದು ಕೇಳಿಕೊಂಡಿದ್ದರು. ಒಟ್ಟಿಗೆ ಬಾಳುವ ತೆರದಲಿ ಹರಸು ಎಂಬುದು ಒತ್ತಾಯವೂ ಹೌದು, ಆಶಯವೂ ಹೌದು. ವಚನಕಾರರ ಪ್ರಮುಖ ಪ್ರಮೇಯ ಒಳಗೊಂಡು ಇವನಾರವನೆನ್ನದೆ ಇವ ನಮ್ಮವನೆಂದೆಣಿಸು ಬಾಳುವ ಆಶಯ ಹೊಂದಿದೆ. ದ್ವೇಷ ತತ್ವವನ್ನು ಪ್ರತಿಪಾದಿಸುವ ನಿಲುವು ಅಲ್ಲಿ ಮನುಷ್ಯ ವಿರೋಧಿ. ದೈವ ವಿರೋಧಿಯೂ ಕೂಡ. ಋಗ್ವೇದದಲ್ಲಿಯೇ ದೇವತೆಗಳು, ಅಸುರರು ಪಕ್ಷ ಬದಲಾಯಿಸುವ ಅಸಂಖ್ಯ ನಿದರ್ಶನಗಳಿವೆ. ಅನೇಕ ಕಡೆ ಮಿಶ್ರಣಗಳ ಕತೆಗಳೂ ಇವೆ. ಯಯಾತಿ- ದೇವಯಾನಿ- ಶರ್ಮಿಷ್ಠೆಯ ಕಥೆ ಇದಕ್ಕೆ ಉದಾಹರಣೆ. 10ನೇ ಮಂಡಲಕ್ಕೆ ಮೊದಲು ಬ್ರಾಹ್ಮಣ, ಕ್ಷತ್ರಿಯ ಎಂಬ ವಿಂಗಡಣೆ ಕಾಣುವುದಿಲ್ಲ. ಆಗ ಗುರು, ಪುರೋಹಿತ, ಕವಿ, ರಾಜ, ಅಸುರ, ದಸ್ಯು, ದಾಸ ಹೀಗೆ ಉಲ್ಲೇಖಗಳಿವೆ. ಈ ಕವಿ- ಪುರೋಹಿತರೆ ಮುಂದೆ ಬ್ರಾಹ್ಮಣರಾಗಿರಬಹುದು. ನಿರ್ದಿಷ್ಟ ಮನೆತನಗಳಲ್ಲಿ ಹುಟ್ಟಿ ತಾವು ಪ್ರತಿನಿಧಿಸುವ ಬುಡಕಟ್ಟಿನ ನಾಯಕರ ಕಥನಗಳನ್ನು ಹಾಡುವ ಕೆಲಸ ಮಾಡುತ್ತಿದ್ದ ಇವರುಗಳು ಚರಿತ್ರೆಯ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಹೀಗಾಗಿ ಋಗ್ವೇದದ ಓದು ಹೊಸ ತಿಳುವಳಿಕೆಗಳ ಕಡೆಗೆ ತಿರುಗಿಸುವ ಸಾಧ್ಯತೆ ಇದೆ.

ಋಗ್ವೇದವನ್ನು ಚರಿತ್ರೆ, ತೌಲನಿಕ ಭಾಷಾವಿಜ್ಞಾನ, ಪುರಾತತ್ವ ವಿಜ್ಞಾನ ಮುಂತಾದ ಪ್ರಮೇಯಗಳ ಮೂಲಕ ವಿಶ್ಲೇಷಣೆ ಮಾಡುವ ಕೆಲಸಗಳು ಬಹಳ ಹಿಂದಿನಿಂದಲೇ ನಡೆದಿವೆ. ಆದರೆ ತಳಿ ವಿಜ್ಞಾನದ ಪ್ರಮೇಯಗಳ ಮೂಲಕ ವಿಶ್ಲೇಷಣೆ ಮಾಡುವ ಕೆಲಸಗಳು ಬಹಳ ಇತ್ತೀಚೆಗೆ ಪ್ರಾರಂಭವಾಗಿವೆ. ಈ ಬರಹವು ಅಂಥದ್ದೊಂದು ಪ್ರಯತ್ನದ ಭಾಗ.

ವೇದಕಾಲೀನ ಜನರ ಚಲನೆ, ಸಂಘರ್ಷ, ಸಾಮರಸ್ಯ ಮತ್ತು ನೆಲೆಗೊಳ್ಳುವಿಕೆ ಮುಂತಾದವುಗಳು ಪ್ರಮೇಯಗಳಂತೆಯೆ ಚರ್ಚೆಗೆ ಒಳಗಾಗಿವೆ. ಒಳಗಾಗುತ್ತಲೂ ಇವೆ. ಇವುಗಳನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮೆಲ್ಲ ಸಂಕುಚಿತ ದೃಷ್ಟಿಕೋನಗಳಿಂದ ಹೊರಬರಬೇಕು. ನಮ್ಮ ತುರ್ತುಗಳಿಗಾಗಿ ಚರಿತ್ರೆಯನ್ನು ತಿರುಚಬಾರದು. ತಮಗೆ ಬೇಕಾದ್ದನ್ನು ಮಾತ್ರ ಆಯ್ದು ಕಟ್ಟುವ ಬೈಪಾಸು ಮೆಥೆಡಾಲಜಿಯೆ ಅಪಾಯಕರವಾದುದು.

ವಸಾಹತುವಾದಿಗಳು ಉಪಖಂಡದ ಮೇಲೆ ದಾಳಿ ಮಾಡಿದಾಗ ಇಲ್ಲಿನ ಅನೇಕ ಗ್ರಂಥಗಳನ್ನು ಯುರೋಪಿನ ಭಾಷೆಗಳಿಗೆ ಅನುವಾದ ಮಾಡುವ ಕೆಲಸ ಮಾಡಿದರು. ಅಂಥ ಗ್ರಂಥಗಳಲ್ಲಿ ಋಗ್ವೇದವೂ ಒಂದು. ಮೊದಲ ಸಂಸ್ಕೃತ ವೈದಿಕ ಗ್ರಂಥ ಋಗ್ವೇದವು ಯುರೋಪು ಮತ್ತು ಏಶ್ಯದ ವಿದ್ವಾಂಸರನ್ನು ಇನ್ನೂ ಕಾಡುತ್ತಿದೆ. 1830 ರಲ್ಲಿ ಫ್ರೆಡರಿಕ್ ಆಗಸ್ಟ್ ರೇಸೊನ್ ಎಂಬಾತ ಮೊದಲಿಗೆ ಋಗ್ವೇದವನ್ನು ಲ್ಯಾಟಿನ್‌ಗೆ ಭಾಗಶಃ ಅನುವಾದ ಮಾಡಿದ. 1849 ರಲ್ಲಿ ಮ್ಯಾಕ್ಸ್ ಮುಲ್ಲರ್ ಜರ್ಮನ್ ಭಾಷೆಗೆ ಭಾಷಾಂತರಿಸಿದ. ವಿಲ್ಸನ್ ಎಂಬಾತ 1850 ರಲ್ಲಿ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ. ದಯಾನಂದ ಸರಸ್ವತಿಯವರು 1877 ರಲ್ಲಿ ಹಿಂದಿ ಭಾಷೆಗೆ ಅನುವಾದಿಸಿದರು. ಕನ್ನಡ ಭಾಷೆಗೆ 1947 ರಲ್ಲಿ ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಪಂಡಿತ ವೆಂಕಟರಾವ್ ಮುಂತಾದವರ ಮೂಲಕ ಅನುವಾದ ಮಾಡಿಸಿದರು. ಇಷ್ಟೆಲ್ಲದರ ನಡುವೆ ಆರ್‌ಟಿಎಚ್ ಗ್ರಿಫಿತ್ 1889-92 ರವರೆಗೆ ಇಂಗ್ಲಿಷ್ ಭಾಷೆಗೆ ಮಾಡಿದ ಅನುವಾದವನ್ನು ಬಹುಪಾಲು ವಿದ್ವಾಂಸರು ಇಂದಿಗೂ ಆಕರವಾಗಿ ಬಳಸುತ್ತಾರೆ. ಒಂದು ಅಂದಾಜಿನ ಪ್ರಕಾರ 31 ಕ್ಕೂ ಹೆಚ್ಚು ವಿದ್ವಾಂಸರು ಋಗ್ವೇದವನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿದ್ದಾರೆ. ಈಗಲೂ ಅನುವಾದಗಳು ನಡೆಯುತ್ತಲೇ ಇವೆ.

ಪುರಾಣ ಮತ್ತು ತೌಲನಿಕ ಭಾಷಾಶಾಸ್ತ್ರವನ್ನು ಮುಖ್ಯವಾದ ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡುವ ವಿದ್ವಾಂಸರ ಪ್ರಕಾರ ಇರಾನಿನ ಅವೆಸ್ತಾ ಮತ್ತು ವಾಯುವ್ಯ ಭಾರತದ ಋಗ್ವೇದ ಇವೆರಡನ್ನೂ ರಚಿಸಿದವರು ಒಂದೇ ಗುಂಪಿನ ಜನ. ಋಗ್ವೇದದ ಅಂತಿಮತೆ ಸಾಧ್ಯವಾಗಿದ್ದು ಭರತ- ಪುರು ಕುಲಗಳ ಆಶ್ರಯದಲ್ಲಿ ಎಂದು ಮೈಖೆಲ್ ವಿಟ್ಝೆಲ್ ಹೇಳುತ್ತಾರೆ.

ಕೋಲ್ಕೊತಾ ವಿಶ್ವವಿದ್ಯಾನಿಲಯದ ಪ್ರೊ. ಕಾನಡ ಸಿನ್ಹಾ ಅವರ ಆಸಕ್ತಿಕರ ಅಧ್ಯಯನದ ಪ್ರಕಾರ ಸ್ವತಃ ಋಗ್ವೇದವೇ ವೇದಗಳ ಬುಡಕಟ್ಟು ಜನರು ಇರಾನಿನ ಬಯಲುಗಳಿಂದ ವಾಯುವ್ಯ ಭಾರತದತ್ತ ಬಂದ ಕುರಿತು ಪುರಾವೆಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ ದೇವ ಮತ್ತು ಅಸುರರ ಕುರಿತಾದ ಕಥನಗಳು ಈ ಕುರಿತಂತೆ ಹಲವು ಆಸಕ್ತಿಕರ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಅವೆಸ್ತಾದಲ್ಲಿ ಅಹುರ ಅಸುರ ಅಲ್ಲಿನ ವಿವೇಕದ ದೇವತೆಯಾದರೆ, ಇಲ್ಲಿ ಅಸುರ ಎನ್ನುವುದು ರಾಕ್ಷಸತ್ವವನ್ನು ಪ್ರತಿನಿಧಿಸುತ್ತದೆ. ಇರಾನಿನಲ್ಲಿ ದೇವ ಎನ್ನುವುದನ್ನು ದುಷ್ಟತನದ ಜೊತೆ ಸಮೀಕರಿಸಿ ನೋಡಲಾಗುತ್ತಿತ್ತು. ಇಲ್ಲಿ ದೇವ ಎನ್ನುವುದು ರಕ್ಷಕ, ಮೋಕ್ಷದಾತ ಎಂಬುದಾಗಿ ಕಥನಗಳನ್ನು ಕಟ್ಟಲಾಗಿದೆ. ಯಾಕೆ ಹೀಗಾಯಿತು? ಒಟ್ಟಿಗೆ ಇದ್ದ ಬುಡಕಟ್ಟುಗಳು ಆಚೀಚೆ ಚೆದುರಿ ವಲಸೆ ಹೋದಾಗ ವರ್ತನೆಗಳು ಬದಲಾಗುತ್ತವೆಯೆ? ಡಾ.ಸಿನ್ಹಾ ಪ್ರಕಾರ ಪ್ರಧಾನ ಕವಿ-ಪುರೋಹಿತ ಕುಲಗಳ ಮೇಲಾಟದಲ್ಲಿ ಆಗಿ ಹೋದ ಪಾತ್ರಗಳು ದೇವರು ಮತ್ತು ಅಸುರರಾಗಿ ಬದಲಾಗುತ್ತಾರೆ. ಇಸ್ಲಾಮ್ ಪೂರ್ವದ ಇರಾನಿನಲ್ಲಿ ದಯೇವ ದುಷ್ಟತೆಗೆ ಕೆಡುಕಿಗೆ ಸಂಕೇತವಾದರೆ ಇಲ್ಲಿ ಅಸುರರನ್ನು ನಕಾರಾತ್ಮಕ ಶಕ್ತಿಗಳ ಪ್ರತಿನಿಧಿಗಳನ್ನಾಗಿಸಲಾಗಿದೆ. ಅಹುರ ಮಝ್ದಾ ಎಂಬ ಇರಾನಿನ ಬಯಲುಗಳ ದೇವತೆ ಅತ್ಯಂತ ಪ್ರಭಾವಶಾಲಿಯಾಗಿದ್ದವನು.

 ವೇದಪೂರ್ವ ಮತ್ತು ವೇದಕಾಲದಲ್ಲಿ ಪ್ರಧಾನ ಪಾತ್ರ ವಹಿಸಿದ ಎರಡು ಕವಿ-ಪುರೋಹಿತ ಕುಲದ ಮನೆತನಗಳಾದ ಅಂಗೀರಸ ಮತ್ತು ಭಾರ್ಗವ ಇವುಗಳ ಮೇಲಾಟಗಳು ಉಪಖಂಡದ ಚರಿತ್ರೆಯ ದಿಕ್ಕನ್ನೇ ಬದಲಿಸಿದವು. ಅಂಗೀರಸ ಕುಲದ ಕವಿ ಪುರೋಹಿತರುಗಳು ದೇವತೆಗಳ ಪರವಾಗಿಯೂ ಭಾರ್ಗವ ಕುಲದವರು ಅಸುರರ ಪರವಾಗಿಯೂ ನಿಂತು ಎದುರಾ ಬದುರಾದ ಮಹಾ ಕಥನಗಳನ್ನು ಕಟ್ಟಿದರು. ಈ ಎರಡು ಕಥನಗಳು ಮುಂದೆ ಉಪಖಂಡವನ್ನು ಎರಡು ಭಾಗವನ್ನಾಗಿಸಿದವು. ಕಥನಗಳು ಎರಡು ಪ್ರಮೇಯಗಳಾಗಿ ಇಂದಿಗೂ ನಮ್ಮನ್ನು ಕಂಗೆಡಿಸಿ ಕೂತಿವೆ.

ಅಂಗೀರಸ ಬುಡಕಟ್ಟಿನ ಕವಿ ಪುರೋಹಿತರು ತುಸು ಮೊದಲು ಇರಾನಿನತ್ತಣಿಂದ ಉಪಖಂಡದತ್ತ ಬಂದರು. ಭಾರ್ಗವ ಬುಡಕಟ್ಟಿನವರು ತುಸು ತಡವಾಗಿ ಬಂದರು. ಈ ಭಾರ್ಗವ ಬುಡಕಟ್ಟಿನ ಶುಕ್ರಾಚಾರ್ಯ ಮುಂತಾದವರು ಅಸುರರ ಗುರುಗಳಾಗಿದ್ದರು. ಆದರೆ ನಂತರ ಬದಲಾದ ಕಾಲಘಟ್ಟದಲ್ಲಿ ಈ ಕುಲದವರೇ ಮನುಸ್ಮತಿಯಂತಹ ಭಾರತದ ಅಧಃಪತನಕ್ಕೆ ಕಾರಣವಾದ ಧರ್ಮಸೂತ್ರ ರೂಪದ ಕೃತಿಯನ್ನು ರಚಿಸಿದರು. ಎರಡು ಮಹಾಕಾವ್ಯಗಳನ್ನು ಬ್ರಾಹ್ಮಣ್ಯದ ವೌಲ್ಯಗಳನ್ನು ಪ್ರತಿಪಾದಿಸುವ ವ್ಯಾಖ್ಯಾನಗಳನ್ನು ಮಾಡಿದರು. ಋಗ್ವೇದದಲ್ಲಿ ದೇವರುಗಳೆಂದು ಕರೆಸಿಕೊಳ್ಳುತ್ತಿದ್ದ ಇಂದ್ರ, ಅಗ್ನಿ, ಮಿತ್ರ, ವರುಣ, ರುದ್ರ, ಸೋಮ, ಮರುತರು, ವಸುಗಳು ಮುಂತಾದವರನ್ನು ಅಸುರರು ಅಥವಾ ಅಸುರೀ ಶಕ್ತಿಗಳುಳ್ಳವರು ಎಂದು ವರ್ಣಿಸಲಾಗಿದೆ. ವೈದಿಕರ ಪ್ರಧಾನ ದೇವತೆಯಾದ ಅಗ್ನಿಯನ್ನು 14 ಸೂಕ್ತಗಳಲ್ಲಿ ಅಸುರ ಎನ್ನಲಾಗಿದೆ. ಇಂದ್ರನನ್ನು ಸುಮಾರು 10 ಕ್ಕೂ ಹೆಚ್ಚಿನ ಸೂಕ್ತಗಳಲ್ಲಿ, ಮಿತ್ರ ಮತ್ತು ವರುಣರನ್ನು 7 ಬಾರಿ, ರುದ್ರನನ್ನು 5 ಕ್ಕೂ ಹೆಚ್ಚು ಬಾರಿ, ಸವಿತೃವನ್ನು 3 ಕ್ಕೂ ಹೆಚ್ಚು ಸೂಕ್ತಗಳಲ್ಲಿ ಅಸುರ ಎಂದು ವರ್ಣಿಸಲಾಗಿದೆ. ಮರುತರನ್ನು ಅಸುರಾಯ ನಿಲಯಃ ಎಂದು ಕರೆಯಲಾಗಿದೆ. 10 ನೇ ಮಂಡಲದ 124 ನೇ ಸೂಕ್ತದಲ್ಲಿ ಇಂದ್ರನು ಅಗ್ನಿ, ವರುಣ ಮತ್ತು ಸೋಮನನ್ನು ಅಸುರ ಪಿತೃವಿನ ಪಕ್ಷವನ್ನು ತ್ಯಜಿಸಿ ತನ್ನ ಕಡೆ ಬರುವಂತೆ ಕೇಳಿಕೊಳ್ಳುತ್ತಾನೆ. ಈ ಎಲ್ಲ ದೇವತೆಗಳನ್ನು ದೇವಾನಾಂ ಅಸುರ ದೇವರುಗಳಲ್ಲಿನ ಅಸುರರು ಎಂದು ವರ್ಣಿಸಲಾಗಿದೆ. ವೇಲ್ಸ್ ಎಂಬ ವಿದ್ವಾಂಸ ಗುರ್ತಿಸುವಂತೆ ಅಸುರತ್ವ ಎನ್ನುವುದು ಆಳುವವನ

ಉಪಖಂಡದಲ್ಲಿ ಅಸಂಖ್ಯಾತ ಸಾಂಸ್ಕೃತಿಕ-ಜನಾಂಗಿಕ ಗುಂಪುಗಳಿದ್ದರೂ ಸಹ ತಳಿ ವಿಜ್ಞಾನವು ಪ್ರಧಾನವಾಗಿ 3 ಗುಂಪುಗಳಿರುವುದನ್ನು ಗುರ್ತಿಸುತ್ತದೆ. 1. ಆದಿ ಪ್ರಾಚೀನ ದಕ್ಷಿಣ ಭಾರತೀಯರು 2. ಪ್ರಾಚೀನ ದಕ್ಷಿಣ ಭಾರತೀಯರು ಮತ್ತು 3. ಪ್ರಾಚೀನ ಉತ್ತರ ಭಾರತೀಯರು ಎಂದು. ಭಾಷಾಶಾಸ್ತ್ರೀಯವಾಗಿ ನೋಡಿದರೆ ಪ್ರಧಾನವಾಗಿ 6 ಗುಂಪುಗಳು ಇಲ್ಲಿ ನೆಲೆಸಿರುವುದು ಕಂಡು ಬರುತ್ತದೆ. ತಳಿ ವಿಜ್ಞಾನದ ಅಧ್ಯಯನಗಳಲ್ಲಿ 1. ಮೈಟೊ ಕಾಂಡ್ರಿಯಾ, 2. ಕ್ರೋಮೊಸೋಮುಗಳು, 3.ಆಟೊಸೋಮುಗಳು ಇವುಗಳ ಅಧ್ಯಯನವನ್ನು ವೈಜ್ಞಾನಿಕ ಅಧ್ಯಯನವೆಂತಲೂ ಮತ್ತು ತೌಲನಿಕ ಭಾಷಾಶಾಸ್ತ್ರ ಹಾಗೂ ಪುರಾತತ್ವಶಾಸ್ತ್ರವನ್ನು ಪೂರಕ ಶಿಸ್ತುಗಳೆಂತಲೂ ವಿಭಾಗಿಸಿಕೊಳ್ಳಲಾಗುತ್ತದೆ. ತಳಿ ವಿಜ್ಞಾನದ ಪ್ರಮೇಯಗಳನ್ನು ಮನುಷ್ಯನ ಇತಿಹಾಸ, ಚಲನೆ, ನೆಲೆಸುವಿಕೆ, ಜಾತಿ, ಕುಲಗಳ ಉಗಮ ಮುಂತಾದ ವಿಷಯಗಳನ್ನು ಅಧ್ಯಯನ ಮಾಡುವಾಗ ಅಳವಡಿಸಿಕೊಳ್ಳಲಾಗುತ್ತದೆ.

ಆರ್ಯರು ಇಂದಿನ ಭಾರತದ ನೆಲಕ್ಕೆ ಹೊರಗಿನಿಂದ ಬಂದವರೊ ಇಲ್ಲ ಭಾರತದ ನೆಲದಿಂದ ಹೊರಕ್ಕೆ ಹೋದವರೊ ಎಂಬುದು ಶತಮಾನ ಮೀರಿದ ಕಗ್ಗಂಟಿನ ಪ್ರಶ್ನೆ. ಈ ಪ್ರಶ್ನೆಯನ್ನು ಸಾಧ್ಯವಾದ ಮಟ್ಟಿಗೆ ಬಿಡಿಸಲು ನೆರವಾಗಿದ್ದು ಮಾತ್ರ ತಳಿವಿಜ್ಞಾನವೆ. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪದೇ ಪದೇ ಬಳಕೆಯಾದ ಆಕರಗಳಲ್ಲಿ ಮುಖ್ಯವಾಗಿ ಋಗ್ವೇದ, ಅವೆಸ್ತ, ಸಿಂಧೂ ಕಣಿವೆ ಮತ್ತು ಅದಕ್ಕೆ ಸಂಬಂಧಿಸಿದ ಕಡೆಗಳಲ್ಲಿ ಸಿಗುವ ದಾಖಲೆಗಳು ಮತ್ತು ಮಹಾಭಾರತಗಳು ಸೇರಿವೆ. ಈ ಮೂರೂ ಕೂಡ ಹೊಸ ಹೊಸ ಜ್ಞಾನ ಶಿಸ್ತುಗಳ ಬೆಳಕಿನಲ್ಲಿ ಅಪಾರ ಪ್ರಮಾಣದ ಸತ್ಯವನ್ನು ಹೊರಗೆಡಹುತ್ತಿವೆ.

ಹಾಗೆ ಹುಡುಕಾಟದ ಸಂದರ್ಭದಲ್ಲಿ ಕಣ್ಣಿಗೆ ಬಿದ್ದ ಪ್ರಮುಖ ಬರಹ, ದ ದೇವಾಸ್, ದ ಅಸುರಾಸ್ ಆ್ಯಂಡ್ ಗಿಲ್ಗಮೇಶ್; ಎಕ್ಸ್ ಪ್ರೋರಿಂಗ್ ದ ಕ್ರಾಸ್ ಕಲ್ಚರಲ್ ಜರ್ನಿ ಆಫ್ ಮಿಥ್ಸ್ ಕೂಡ ಒಂದು. ಈ ಬರೆಹವನ್ನು ಕೋಲ್ಕತ್ತುದ ಸಂಸ್ಕೃತ ಕಾಲೇಜಿನ 33 ವರ್ಷ ವಯಸ್ಸಿನ ಪ್ರತಿಭಾವಂತ ಪ್ರೊಫೆಸರ್ ಕಾನಡ್ ಸಿನ್ಹಾ ಎಂಬವವರು ಬರೆದಿದ್ದಾರೆ. ಇವರು 2014 ರಲ್ಲಿ ಜೆಎನ್‌ಯುವಿನಲ್ಲಿ ತನ್ನ ಸಂಶೋಧನಾ ಪ್ರಬಂಧವನ್ನು ಮಂಡಿಸಿದ ಪ್ರತಿಭಾವಂತರಲ್ಲೊಬ್ಬರು. ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಹೊಸ ಹೊಳಹುಗಳನ್ನು ಹೆಕ್ಕಿ ತೆಗೆದು ವಿವರಿಸುವ, ಕಡಿದು ಹೋಗಿರುವ ತಂತುಗಳನ್ನು ಹಿಡಿದು ಜೋಡಿಸುವ ಅವರ ಕೆಲಸ ಗಮನಾರ್ಹವಾದುದು.

ಋಗ್ವೇದದಲ್ಲಿ ಪ್ರಾಣಿ, ಪಕ್ಷಿಗಳ ಉಲ್ಲೇಖಗಳ ಆಧಾರದ ಮೇಲೆ ವೇದಕಾಲೀನ ಜನರು ಯಾವ ಪ್ರದೇಶದಲ್ಲಿ ವಾಸಿಸಿದ್ದರು ಎಂಬ ಸಂಗತಿಗಳನ್ನು ತೀರ್ಮಾನಿಸಬಹುದಾಗಿದೆ. 2 ರಿಂದ 9 ರವರೆಗಿನ ಮಂಡಲಗಳನ್ನು ಋಗ್ವೇದದ ಪ್ರಾಚೀನ ಮಂಡಲಗಳೆಂದು 2ರಿಂದ 8ರವರೆಗಿನ ಮಂಡಲಗಳನ್ನು ಅತಿ ಪ್ರಾಚೀನವೆಂದು ಬಹುತೇಕ ಎಲ್ಲ ವಿಭಾಗಗಳ ವಿದ್ವಾಂಸರು ಒಪ್ಪಿದ್ದಾರೆ. ಪ್ರಾಣಿ ಪಕ್ಷಿಗಳ ವಿವರಗಳನ್ನು ಆಧರಿಸಿ ತಾಳಗೇರಿಯಂಥವರು ವೇದಕಾಲೀನ ಆರ್ಯರು ಭಾರತದಿಂದ ಯುರೋಪಿನ ಕಡೆಗೆ ಹೋದರು ಎಂಬ ಪ್ರಮೇಯವನ್ನು ಮಂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಸ್ತು ಸ್ಥಿತಿ ಭಿನ್ನವಾಗಿದೆ. ತಾಳಗೇರಿ ಮುಂತಾದ ವಿದ್ವಾಂಸರ ಪ್ರಮೇಯಗಳಲ್ಲಿ ಅಪಾರ ಪ್ರಮಾಣದ ವೈರುಧ್ಯವಿದೆ. ಋಗ್ವೇದದಲ್ಲಿ ಅತಿ ಹೆಚ್ಚು ಪ್ರಸ್ತಾಪವಾದ ಪ್ರಾಣಿ ಕುದುರೆ. ಸುಮಾರು 349 ಬಾರಿ ಈ ಪ್ರಾಣಿಯ ಉಲ್ಲೇಖವಿದೆ. ಇದರಲ್ಲಿ ಮೊದಲ ಮತ್ತು ಕಡೆಯ ಎರಡು ಮಂಡಲಗಳಲ್ಲಿ 170 ಬಾರಿ ಪ್ರಸ್ತಾಪವಾಗಿದೆ. ಹಳೆಯ ಮಂಡಲಗಳಲ್ಲಿ ಕಡಿಮೆ ಪ್ರಸ್ತಾಪವಾಗುವ ಕುದುರೆಯು ಕಡೆಯ ಮಂಡಲಗಳ ಹೊತ್ತಿಗೆ ಹೆಚ್ಚು ಸ್ತುತಿಸಲ್ಪಡುತ್ತದೆ. ಇದು ಕುದುರೆಯ ಬಳಕೆ ಹೆಚ್ಚಾಗುತ್ತಿದ್ದಂತೆ ಅದರ ಕುರಿತಾದ ಸ್ತುತಿಗಳೂ ಹೆಚ್ಚಾಗಿರಬಹುದು ಅಥವಾ ಕುದುರೆಗಳ ಅಭಾವವೂ ಇದಕ್ಕೆ ಕಾರಣ ಇರಬಹುದು. ಇಂದಿನ ಭಾರತದ ನೆಲದಲ್ಲಿ ಕುದುರೆಯ ಮೊದಲ ಅವಶೇಷ ಸಿಗುವುದೇ ಕ್ರಿ.ಪೂ. 1800 ರ ವೇಳೆಗೆ ಗುಜರಾತಿನ ಕರಾವಳಿಯಲ್ಲಿ. ಮನುಷ್ಯರು ಕುದುರೆ ಸಾಕಣೆಯನ್ನು ಪ್ರಾರಂಭಿಸಿದ್ದೇ ಸುಮಾರು 6,000 ರಿಂದ 6,500 ವರ್ಷಗಳ ಹಿಂದೆ ಎಂದು ತಳಿ ವಿಜ್ಞಾನ ಮತ್ತು ಪುರಾತತ್ವ ಶಾಸ್ತ್ರಗಳು ಹೇಳುತ್ತಿವೆ. ಕಾಕಸಸ್ ಬೆಟ್ಟಗಳ ಉತ್ತರದ ತಪ್ಪಲು, ಡಾನ್ಯೂಬ್ ನದಿ ತೀರ ಹಾಗೂ ಇಂದಿನ ಉಕ್ರೇನ್ ಹಾಗೂ ಕಜಕ್‌ಸ್ತಾನದ ಬಯಲುಗಳಲ್ಲಿ ಕಾಡು ಕುದುರೆಗಳನ್ನು ಪಳಗಿಸಿರುವ ಕುರಿತು ವ್ಯಾಪಕ ಅಧ್ಯಯನ ಮಾಡಿರುವ ಡೇವಿಡ್ ಆಂಟನಿದ ಹಾರ್ಸ್, ದ ವ್ಹೀಲ್ ಆ್ಯಂಡ್ ದ ಲಾಂಗ್ವೇಜ್ ಎಂಬ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ಕುದುರೆ ಸಾಕಣೆಯ 500-1,000 ವರ್ಷಗಳ ನಂತರ ಒಂಟೆ ಸಾಕಣೆ ಪ್ರಾರಂಭವಾಗಿದೆಯೆಂದು ವಿದ್ವಾಂಸರು ಅಂದಾಜಿಸಿದ್ದಾರೆ. ಬಹುಶಃ ವೈದಿಕ ಆರ್ಯರು ಉಪಖಂಡಕ್ಕೆ ಬರುವ ಹಾದಿಯಲ್ಲಿ ಒಂಟೆಗಿಂತ ಕುದುರೆ ಬಹಳ ಮುಖ್ಯ ಪ್ರಾಣಿಯಾಗಿರಬಹುದು ಅಥವಾ ಒಂಟೆಯ ಬಳಕೆ ವಿರಳವಾಗಿದ್ದ ಪ್ರದೇಶಗಳಲ್ಲಿ ಹಾದು ಬಂದವರಿರಬೇಕು. ಆ ಕಾರಣಕ್ಕಾಗಿಯೆ ಕೇವಲ 4 ಕಡೆ ಮಾತ್ರ ಪ್ರಸ್ತಾಪವಿದೆ.

ಎರಡನೆಯದಾಗಿ ಹಸುವಿನ ಪ್ರಸ್ತಾಪ ಸುಮಾರು 336 ಕ್ಕೂ ಅತಿ ಹೆಚ್ಚು ಬಾರಿ ಪ್ರಸ್ತಾಪವಾಗಿದೆ. ಹಸು ಸಂಬಂಧಿ ಮಾತುಗಳು ಸುಮಾರು 7,000 ಕ್ಕೂ ಹೆಚ್ಚು ಬಾರಿ ಪ್ರಸ್ತಾಪವಾಗಿದೆ. ಸಿಂಧೂ ಕಣಿವೆಯ ಹಾಗೂ ಪಶ್ಚಿಮ ಮತ್ತು ವಾಯುವ್ಯ ಭಾರತದ ಪ್ರಧಾನ ಸಾಕುಪ್ರಾಣಿಯಾದ ಎಮ್ಮೆಯ ಕುರಿತಾದ ಪ್ರಸ್ತಾಪ ಕೇವಲ 16 ಬಾರಿ ಮಾತ್ರ ಆಗಿದೆ. ಅದರಲ್ಲಿ 8ನೇ ಮಂಡಲದಲ್ಲಿ 7 ಬಾರಿ ಪ್ರಸ್ತಾಪವಾಗಿದೆ. ಪುರಾತತ್ವ ದಾಖಲೆಗಳ ಪ್ರಕಾರ ಸಿಂಧೂ ಕಣಿವೆಯಿಂದ ಮೆಸಪೊಟೆಮಿಯಾಕ್ಕೆ ಎಮ್ಮೆಗಳನ್ನು ಸಾಗಿಸುತ್ತಿದ್ದ ಪ್ರಸ್ತಾಪವಿದೆ. ವಾಯುವ್ಯ ಭಾರತಕ್ಕೆ ತುಸು ಅಪರಿಚಿತವಾಗಿದ್ದ ಸಿಂಹದ ಪ್ರಸ್ತಾಪ 14 ಕಡೆ ಇದೆ. ಅದರಲ್ಲಿ 7 ಪ್ರಸ್ತಾಪಗಳು ಹೊಸ ಮಂಡಲಗಳಲ್ಲೇ ಇದೆ. ಕುರಿ ಮೇಕೆಗಳ ಪ್ರಸ್ತಾಪವೂ ಅಷ್ಟಕ್ಕಷ್ಟೆ. ಆಸಕ್ತಿಯ ವಿಚಾರವೆಂದರೆ ಹುಲಿಯ ಚಿತ್ರಗಳಿರುವ ಟೆರ್ರಾಕೋಟ ಮುದ್ರೆಗಳು ಅಪಾರ ಪ್ರಮಾಣದಲ್ಲಿ ಸಿಂಧೂ ಕೊಳ್ಳದ ನಾಗರಿಕತೆಯುದ್ದಕ್ಕೂ ದೊರಕುತ್ತವೆ. ಆದರೆ ಇಡೀ ಋಗ್ವೇದದಾದ್ಯಂತ ಎಲ್ಲೂ ಕೂಡ ಹುಲಿಯ ಪ್ರಸ್ತಾಪವೇ ಇಲ್ಲ. ಆರ್ಯರು ಹಾದು ಬಂದ ಮಾರ್ಗಗಳಲ್ಲಿ ಹುಲಿಗಳ ವಾಸಸ್ಥಾನವಿರಲಿಲ್ಲವೆಂದು ಕಾಣುತ್ತದೆ. ಹಾಗೆಯೇ ಸಿಂಧೂ-ಗಂಗಾ ಬಯಲಿನಲ್ಲಿ ಯಥೇಚ್ಛವಾಗಿದ್ದ ಮಾವು-ಭತ್ತ ಮುಂತಾದವುಗಳ ಪ್ರಸ್ತಾಪವೂ ಋಗ್ವೇದದಲ್ಲಿ ಇಲ್ಲ. ಮಾವು, ಭತ್ತ ಮುಂತಾದವು ಉಪಖಂಡದದಲ್ಲಿ ಸುಮಾರು 9,000 ವರ್ಷಗಳಿಂದೀಚೆಗೆ ಜನರ ಬದುಕಿನ ಭಾಗವಾಗಿವೆ. ಈ ಎರಡರ ಉಲ್ಲೇಖವಿಲ್ಲದ ಜನಜೀವನದ ಕಥನಗಳು ಅಪೂರ್ಣವೆನ್ನಿಸುವ ಮಟ್ಟಿಗೆ ಹಾಸು ಹೊಕ್ಕಾಗಿವೆ. ಅಂಥದ್ದರಲ್ಲಿ ಋಗ್ವೇದದಲ್ಲಿ ಇವುಗಳ ಪ್ರಸ್ತಾಪವೆ ಇಲ್ಲ ಯಾಕೆ?

ಇಡೀ ಋಗ್ವೇದದುದ್ದಕ್ಕೂ ಅಸ್ತಿತ್ವದ ಪ್ರಶ್ನೆಗಳ ವಿಚಾರವಿರುವುದು ದ್ಯಾವಾ-ಅಸುರರ ವಿಚಾರ. ಅಸುರ ಕುರಿತಾದ ಪ್ರಸ್ತಾಪ 71 ಕಡೆ ಇದೆ. ಅದರಲ್ಲಿ ಹೊಸ ಮಂಡಲಗಳಲ್ಲಿ 35 ಬಾರಿ ಪ್ರಸ್ತಾಪವಾಗಿದೆ. ಕೃಷಿ ಚಟುವಟಿಕೆಗಳ ಕುರಿತಂತೆ ಸುಮಾರು 21 ಬಾರಿ ಪ್ರಸ್ತಾಪಗಳಿವೆಯೆಂದು ಪಶುಪಾಲನೆಗೆ ಸಂಬಂಧಿಸಿದಂತೆ ಸಾವಿರಾರು ಬಾರಿ ಉಲ್ಲೇಖಗಳಿವೆ. ಋಗ್ವೇದ ಮತ್ತು ಅವೆಸ್ತಾಗಳಲ್ಲಿ ಪ್ರಾಣಿಬಲಿ ಕುರಿತಂತೆ ಅಸಂಖ್ಯಾತ ಪ್ರಸ್ತಾಪಗಳಿವೆ. ವೇದಗಳ ಯಜ್ಞ, ಅವೆಸ್ತಾದ ಯಸ್ನಾಗಳು ಸಂವಾದಿ ಪದಗಳು ಎಂದು ಡಿ ಎನ್ ಝಾ ಉಲ್ಲೇಖಿಸುತ್ತಾರೆ.

ನಿಸರ್ಗದ ಜೊತೆ ನೇರ ಒಡನಾಟ ಹೊಂದಿದ ವೇದಕಾಲೀನ ಆರ್ಯರು ಪ್ರಸ್ತಾಪಿಸಿರುವ ಪ್ರಾಣಿ ಮತ್ತು ಮರಗಿಡಗಳು, ದೇವರುಗಳು ಬಹಳ ಮುಖ್ಯವಾದ ಚಾರಿತ್ರಿಕವಾದ ಗುಟ್ಟುಗಳನ್ನು ಒಳಗೊಂಡಿವೆ. ಈ ಗುಟ್ಟುಗಳನ್ನು ಆಧರಿಸಿ ಅವರ ಗಮನ, ಧ್ಯಾನ, ಅವಲಂಬನೆ ಯಾವುದರ ಮೇಲಿತ್ತು ಎಂದು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಆದರೆ ಶ್ರೀೀಕಾಂತ್ ತಾಳಗೇರಿ ಮುಂತಾದವರು ಈ ಎಲ್ಲ ವಿಚಾರಗಳನ್ನು ತಿರುಚಿ ಪ್ರಮೇಯಗಳನ್ನು ಮಂಡಿಸುತ್ತಾರೆ. ಋಗ್ವೇದದ ಹೆಸರಲ್ಲಿ ಉಳಿದ ವೇದಗಳ, ಬ್ರಾಹ್ಮಣಗಳನ್ನು ಉಲ್ಲೇಖಿಸಿ ಬರೆಯುತ್ತಾರೆ. ಹಾಗಾಗಿ ಇದು ಪ್ರೊಪಗಾಂಡ ಕೆಲಸವೇ ಹೊರತು ಚಾರಿತ್ರಿಕ ಸತ್ಯಗಳನ್ನು ಹೆಕ್ಕಿ ದಾಖಲಿಸುವ ಉಮೇದು ಈ ರೀತಿಯವರಲ್ಲಿ ಕಾಣಿಸುವುದಿಲ್ಲ.

 ಹಾಗಿದ್ದರೆ ವೇದಕಾಲೀನ ಜನರು ಎಲ್ಲಿನವರು?

ಈ ಕುರಿತಂತೆ ಹಿಂದಿನ ವಿದ್ವಾಂಸರಿಗೆ ಗೊಂದಲಗಳಿರಲಿಲ್ಲ. ಅವರು ತೌಲನಿಕ ಭಾಷಾಶಾಸ್ತ್ರ ಮತ್ತು ಪುರಾತತ್ವಶಾಸ್ತ್ರಗಳನ್ನು ಆಧರಿಸಿ ವೇದಕಾಲದ ಆರ್ಯರು ಪಶ್ಚಿಮ ಮತ್ತು ಯುರೇಶಿಯಾ ಕಡೆಯಿಂದ ಬಂದವರೆಂದು ಖಚಿತವಾಗಿ ಹೇಳಿದ್ದರು. ಸಂಸ್ಕೃತ ವಿದ್ವಾಂಸರಿಂದ ಮೋಕ್ಷ ಮುಲ್ಲ ಎಂದು ಕರೆಸಿಕೊಳ್ಳುತ್ತಿದ್ದ ಮ್ಯಾಕ್ಸ್ ಮುಲ್ಲರ್ ಅವರು ಇಂಡೋ ಆರ್ಯನ್ನರು ಮತ್ತು ಇಂಡೋ ಇರಾನಿಯನ್ನರ ಮೂಲ ವಾಸಸ್ತಾನ ಮಧ್ಯ ಏಶ್ಯ ಎಂದು ಗುರುತಿಸುತ್ತಾರೆ. ಅವರು 1862 ರಲ್ಲಿ ದಿಲ್ಲಿಯಲ್ಲಿ ಮಾಡಿದ ಭಾಷಣ ಲೆಕ್ಚರ್ಸ್‌ ಆನ್ ಸೈನ್ಸ್ ಆಫ್ ಲಾಂಗ್ವೇಜ್ ಮತ್ತು ಈ ವಿಚಾರದಲ್ಲಿ ಅವರ ಬರಹಗಳಾದ ಇಂಡಿಯಾ ವಾಟ್ ಕ್ಯಾನ್ ಇಟ್ ಟೀಚ್ ಅಸ್ ಹಾಗೂ ಬಯಾಗ್ರಫೀಸ್ ಆಫ್ ವರ್ಡ್ಸ್ ಆ್ಯಂಡ್ ಹೋಮ್ ಆಫ್ ದ ಆರ್ಯಾಸ್. ಕ್ರಿ.ಪೂ. 2300-1900ದ ಆಸುಪಾಸಿನಲ್ಲಿ ಬ್ಯಾಕ್ಟ್ರಿಯಾ-ಮಾರ್ಜಿಯಾನ ಆರ್ಕಿಯಾಲಜಿಕಲ್ ಕಾಂಪ್ಲೆಕ್ಸ್ ಇರಾನಿನ ಪ್ರಸ್ಥಭೂಮಿ, ಬಲೂಚಿಸ್ತಾನ ಹಾಗೂ ಸ್ಟೆಪ್ಪಿ ಹುಲ್ಲುಗಾವಲುಗಳ ಬಯಲುಗಳಲ್ಲಿ ಒಟ್ಟಿಗೆ ಇದ್ದ ಪುರಾವೆಗಳನ್ನು ಪುರಾತತ್ವಶಾಸ್ತ್ರಜ್ಞರು ಉಲ್ಲೇಖಿಸುತ್ತಾರೆ.

ಆರ್.ಎಸ್. ಶರ್ಮಾ ಅವರು ಕ್ರಿ.ಪೂ. 2300 ರ ಆಸುಪಾಸಿನ ಅಗಾಡೆ ಶಾಸನದಲ್ಲಿದ್ದ ಅರಿಸೇನ, ಸೋಮಸೇನ ಎಂಬ ಹೆಸರುಗಳು ಇಂಡೋ-ಆರ್ಯನ್ನರಲ್ಲಿ ಸಾಮಾನ್ಯವಾಗಿದ್ದವು ಎನ್ನುತ್ತಾರೆ. ಹ್ಯೂಗೊ ವಿಂಕ್ಲರ್ 1906 ರಲ್ಲಿ ಉತ್ತರ ಟರ್ಕಿಯ ಬಳಿಯಿರುವ ಬೊಘಾಝ್ಕೈ ಕಾಶ್ಮೀರದಿಂದ ವೈಮಾನಿಕ ದೂರವೇ ಸುಮಾರು 3,600 ಕಿ.ಮೀ. ಎಂಬಲ್ಲಿ ಪತ್ತೆ ಹಚ್ಚಿದ ಮಿತಾನ್ನಿಯ ಅರಸ ಮತ್ತಿವಾಝ ಮತ್ತು ಹಿಟ್ಟೈಟ್ ರಾಜ ಸಬ್ಬಿಲಿಯುಲಿಮ ನಡುವೆ ನಡೆದ ಒಪ್ಪಂದದ ಶಾಸನದಲ್ಲಿ ಕ್ರಿ. ಪೂ.1250 ಇಂದ್ರ, ವರುಣ, ನಾಸತ್ಯ ಮತ್ತು ಮಿತ್ರ ಎಂಬ ಆರ್ಯರ ದೇವತೆಗಳ ಉಲ್ಲೇಖವಿದೆ. ಕುದುರೆಗಳನ್ನು ಪಳಗಿಸುವ ಕುರಿತಂತೆ ಕಿಕ್ಕುಲಿಯ ಎಂಬಾತನ ಸುಟ್ಟ ಇಟ್ಟಿಗೆ ಸ್ಲೇಟ್ ಮಾದರಿಯವು ಯ ಬರಹಗಳಲ್ಲಿ ಕ್ರಿ.ಪೂ. 1345 ರಲ್ಲಿ ಸಂಸ್ಕೃತದ ಸಂಖ್ಯೆಗಳಿವೆ. ಹಿಟ್ಟೈಟ್ ರಾಜ ಸಬ್ಬಿಲಿಯುಲಿಮಾನೆ ಈ ಕಿಕ್ಕುಲಿಯ ಮೂಲಕ ಅಶ್ವ ತರಬೇತಿ ಕುರಿತಾದ ಪಠ್ಯವನ್ನು ಸಿದ್ಧಪಡಿಸಿದ್ದಾಗಿ ಹೇಳಲಾಗುತ್ತದೆ. ಸಿರಿಯಾ, ಟರ್ಕಿ, ಲೆಬನಾನ್, ಉತ್ತರ ಇರಾಕಿನ ಪ್ರದೇಶಗಳನ್ನೊಳಗೊಂಡ ಹಿಟ್ಟೈಟ್ ಸಾಮ್ರಾಜ್ಯವು ಮನುಷ್ಯನ ನಾಗರಿಕತೆಯಲ್ಲಿ ಅತ್ಯಂತ ಪ್ರಭಾವಯುತವಾದ ಸ್ಥಾನ ಪಡೆದಿದೆ.

ಹಲವು ವಿದ್ವಾಂಸರ ಪ್ರಕಾರ ಇಂಡೋ ಆರ್ಯನ್ನರು ಕ್ರಿ.ಪೂ. 3500 ರ ಆಸುಪಾಸಿನಲ್ಲಿ ಪ್ರತ್ಯೇಕಗೊಂಡಿದ್ದಾರೆ. ಆದಿ ಇಂಡೋ ಆರ್ಯನ್ನರ ಒಂದು ಗುಂಪು ಉತ್ತರ ಮತ್ತು ಪಶ್ಚಿಮದ ಕಡೆಗೆ ಮತ್ತೊಂದು ಗುಂಪು ಪೂರ್ವ ಹಾಗೂ ದಕ್ಷಿಣದ ಕಡೆಗೆ ಚಲಿಸಿದೆ. ಎರಡನೇ ಗುಂಪು ಕ್ಯಾಸ್ಪಿಯನ್ ಸಮುದ್ರ ಮತ್ತು ಗೊರಗಾನ್ ಕಣಿವೆಗಳ ಬಳಿಯ ಬುಡಕಟ್ಟುಗಳ ಮೇಲೆ ದಾಳಿ ನಡೆಸಿದೆ. ದಾಳಿ ನಡೆದಿರುವುದಕ್ಕೆ ಸಾಕ್ಷಿಯೆಂಬಂತೆ ಈಶಾನ್ಯ ಇರಾನಿನ ಗೊರಗಾನ್ ಕಣಿವೆಯಲ್ಲಿ ಅಪಾರ ಪ್ರಮಾಣದ ಕುದುರೆಗಳ ಅಸ್ಥಿಪಂಜರಗಳು ಪತ್ತೆಯಾಗಿವೆಯೆಂದು ಪುರಾತತ್ವಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಪುರಾತತ್ವಶಾಸ್ತ್ರಜ್ಞರು ಮತ್ತು ತೌಲನಿಕ ಭಾಷಾಶಾಸ್ತ್ರಜ್ಞರ ಈ ಅಂದಾಜುಗಳನ್ನು ಇಂದಿನ ತಳಿ ವಿಜ್ಞಾನದ ಪ್ರಮೇಯಗಳೂ ಸಹ ನಿರಾಕರಿಸುತ್ತಿಲ್ಲ. ಸುಮಾರು 22,000 ವರ್ಷಗಳ ಹಿಂದೆ ಹಲವು ಜನಾಂಗಗಳ ಮಿಶ್ರಣದಿಂದ ಯುರೇಶಿಯಾದ ಭಾಗಗಳಲ್ಲಿ ಮ್ಯುಟೇಶನ್ ಹೊಂದಿದ ಆರ್1ಎ1 ಎಂಬ ಆರ್ಯನ್ನರ ಪ್ರಭೇದವು 14,000 ವರ್ಷಗಳ ಹಿಂದೆ ಕೃಷಿಯನ್ನು ಮತ್ತು ಅದರ ಎರಡು ಸಾವಿರ ವರ್ಷಗಳ ನಂತರ ಪಶುಪಾಲನೆಯನ್ನು ಆರಂಭಿಸಿವೆ. ಪಶುಪಾಲನೆಯನ್ನು ಪ್ರಾರಂಭಿಸಿದ ಮೇಲೆ ಮೇವು, ನೀರು ಮತ್ತು ಅವುಗಳ ರಕ್ಷಣೆಗೋಸ್ಕರ ಪ್ರಾರಂಭವಾದ ಸಂಘರ್ಷಗಳು ನಿಧಾನವಾಗಿ ಯುದ್ಧಗಳ ಮಟ್ಟಕ್ಕೆ ತಲುಪಿದವು. ಕೃಷಿ ಮತ್ತು ಪಶುಪಾಲನೆಯಿಂದಾಗಿ ಮಿಗುತಾಯವಾದ ಸಂಪತ್ತು ಸಾಮ್ರಾಜ್ಯಗಳ ಉಗಮಕ್ಕೆ ಕಾರಣವಾಯಿತು ಎಂಬ ಕುರಿತಂತೆ ಹಲವು ಶಿಸ್ತುಗಳ ವಿದ್ವಾಂಸರು ಬಹುತೇಕ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ. ಕಪ್ಪು ಸಮುದ್ರ, ಕ್ಯಾಸ್ಪಿಯನ್ ಸಮುದ್ರ ಹಾಗೂ ಕಾಕಸಸ್ ಬೆಟ್ಟಗಳ ಕಡೆಯಿಂದ ಇಳಿದು ಬಂದ ಆರ್ಯನ್ ಪಶುಪಾಲಕರು ಹಲವಾರು ಸಂಸ್ಕೃತಿಗಳ ಹುಟ್ಟಿಗೆ ಕಾರಣವಾಗಿದ್ದಾರೆ. ಹರಪ್ಪಾದ ನೆಲಕ್ಕೆ ದಾಂಗುಡಿಯಿಡುವ ಮೊದಲು ಸ್ವಾಟ್ ಕಣಿವೆಯಲ್ಲಿ ಘಾಲಿಗಾಯ್ ಸಂಸ್ಕೃತಿ ಕ್ರಿ.ಪೂ. 1800-1400 ಪಿರಾಕ್ ಸಂಸ್ಕೃತಿ ಕ್ರಿ. ಪೂ. 1600-1400 ಮುಂತಾದವುಗಳು ಇದಕ್ಕೆ ಉತ್ತಮ ಉದಾಹರಣೆಗಳು. ಪೂರ್ವದ ಇರಾನು ಮತ್ತು ಅಫ್ಘಾನಿಸ್ತಾನದ ಬಯಲುಗಳನ್ನೂ ಒಳಗೊಂಡಂತೆ ನೆಲೆಸಿರುವ ಬ್ಯಾಕ್ಟ್ರಿಯಾ ಮಾರ್ಜಿಯಾನ ಆರ್ಕಿಯಾಲಜಿಕಲ್ ಕಾಂಪ್ಲೆಕ್ಸ್ ನಲ್ಲಿ ಕ್ರಿ.ಪೂ. 2,000ಕ್ಕೂ ಮೊದಲು ಇಂಡೋ ಆರ್ಯನ್ನರು ವಾಸಿಸಿದ್ದ ಯಾವುದೇ ಕುರುಹುಗಳು ಇಲ್ಲವೆಂದು ತಳಿ ವಿಜ್ಞಾನಿಗಳು ಹಾಗೂ ಪುರಾತತ್ವಶಾಸ್ತ್ರಜ್ಞರು ಹೇಳುತ್ತಾರೆ.

ಆರ್ಯನ್ನರ ಪ್ರಧಾನ ತಳಿಯಾದ ಆರ್1ಎ1 ಎಂಬ ಗುಂಪು ಹೇಗೆ ಪ್ರಸರಣಗೊಂಡಿದೆ ಯಾವಾಗ ಪಸರಣಗೊಂಡಿದೆ? ಅದರ ಸಾಂದ್ರತೆ ಈಗ ಎಲ್ಲಿದೆ? ಯುರೇಶಿಯಾದ ದೇಶಗಳಲ್ಲಿ ದಟ್ಟವಾಗಿರುವ ಈ ಗುಂಪು ನಿಧಾನಕ್ಕೆ ತೆಳುವಾಗುತ್ತಾ ಸಾಗುತ್ತದೆ. ನಮ್ಮ ಸಿಂಧೂ ಬಯಲುಗಳಲ್ಲಿ ದಟ್ಟವಾಗಿರುವಂತೆ ಕಾಣುವ ಇದು ದಕ್ಷಿಣಕ್ಕೆ ಬರಬರುತ್ತಾ ತೆಳುವಾಗಲು ಕಾರಣವೇನು? ಈ ಎಲ್ಲ ಸಂಗತಿಗಳನ್ನು ಡೇವಿಡ್ ರೈಖ್ ಸೇರಿದಂತೆ ಅನೇಕ ತಳಿ ವಿಜ್ಞಾನಿಗಳು ನಿಖರವಾಗಿ ವಿವರಿಸಿದ್ದಾರೆ. ಈ ಎಲ್ಲ ಪ್ರಮೇಯಗಳೂ ಸಹ ವೈದಿಕ ಆರ್ಯ ಬುಡಕಟ್ಟುಗಳು ಸ್ಟೆಪ್ಪಿ ಹುಲ್ಲುಗಾವಲುಗಳ ಕಡೆಯಿಂದ ವಲಸೆ ಬಂದವರೆಂದು ತೋರಿಸುತ್ತಿವೆ.

ಋಗ್ವೇದದ ಪ್ರಮುಖ ಬುಡಕಟ್ಟುಗಳಾದ ಯದು, ತುರ್ವಶ, ದ್ರುಹ್ಯು, ಅನು ಮತ್ತು ಪುರುಗಳು ಖೈಬರ್, ಬೋಲಾನ್, ಗೋಮಾಳ್ ಮೂಲಕ ಇಳಿದು ಬಂದಿರಬಹುದು ಎಂದು ಅಂದಾಜಿಸುತ್ತಾರೆ. ಮಾರ್ಗ ಮಧ್ಯದಲ್ಲಿ ದಾಸರು ಕಟ್ಟಿದ್ದ ಕೋಟೆಗಳನ್ನು ಧ್ವಂಸ ಮಾಡಿದ್ದಾರೆ ಎಂದು ವಿದ್ವಾಂಸರು ವಿವರಿಸಿದ್ದಾರೆ. ತಳಿ ವಿಜ್ಞಾನ, ತೌಲನಿಕ ಭಾಷಾವಿಜ್ಞಾನ, ಪುರಾತತ್ವಶಾಸ್ತ್ರ, ಪುರಾಣಶಾಸ್ತ್ರಗಳಲ್ಲಿ ಸಮಾನ ಶ್ರದ್ಧೆ ಹಾಗೂ ತಿಳುವಳಿಕೆ ಹೊಂದಿರುವ ಮೈಖೆಲ್ ವಿಟ್ಝೆಲ್ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜರ್ಮನ್-ಅಮೆರಿಕನ್ ಆದ ಮೈಖೆಲ್ ಮೂಲತಃ ಭಾಷಾ ವಿಜ್ಞಾನಿ. ಆಧುನಿಕ ಸಂದರ್ಭದ ಪ್ರಮುಖ ಇಂಡಾಲಜಿಸ್ಟ್ ಗಳಲ್ಲಿ ಒಬ್ಬರು. ಮೈಖೆಲ್ ವಿಟ್ಝೆಲ್ ಪ್ರಕಾರ, ಪಂಚಜನಾಃ ಎಂದು ಕರೆಯಲಾಗುವ ಈ ಬುಡಕಟ್ಟುಗಳಲ್ಲಿ ಯದು, ತುರ್ವಶ, ದ್ರುಹ್ಯು ಮತ್ತು ಅನುಗಳು ತುಸು ಮೊದಲು ಸಿಂಧೂ ಕಣಿವೆಗೆ ಇಳಿದಿದ್ದಾರೆ. ಯದು ಮತ್ತು ತುರ್ವಶರು ಒಂದು ಗುಂಪಾಗಿ ಚಲಿಸಿದ್ದರೆ, ಅನು ಮತ್ತು ದ್ರುಹ್ಯುಗಳು ಇನ್ನೊಂದು ಗುಂಪಾಗಿ ಚಲಿಸಿದ್ದಾರೆ, ಆದರೆ ಋಗ್ವೇದದ ರಚನೆಯು ಪುರು ಮತ್ತು ಭರತರನ್ನು ಪ್ರಧಾನವಾಗಿ ಸ್ಮರಿಸುತ್ತದೆ. ತಡವಾಗಿ ಸಿಂಧೂ ಕಣಿವೆಗೆ ಬಂದ ಪುರುಗಳು ಮತ್ತು ಭರತರು ಈ ಮೊದಲೇ ಬಂದು ನೆಲೆಸಿದ್ದ ತಮ್ಮದೆ ಬುಡಕಟ್ಟುಗಳು ಹಾಗೂ ಅಳಿದುಳಿದಿದ್ದ ಮೊದಲ ನಿವಾಸಿ ಬುಡಕಟ್ಟುಗಳನ್ನು ಸೋಲಿಸಿ ತಮ್ಮ ಪಾರುಪತ್ಯವನ್ನು ಸ್ಥಾಪಿಸಿ ಅಂತಿಮವಾಗಿ ಕುರುಕ್ಷೇತ್ರದ ಬಯಲುಗಳಲ್ಲಿ ನೆಲೆಸಿದ್ದಾಗಿ ವಿವರಿಸುತ್ತಾರೆ. ಪುರುಗಳ ನಾಯಕ ಕುತ್ಸ ಹಾಗೂ ಭರತರ ನಾಯಕ ದಿವೋದಾಸರು ನಿರಂತರವಾಗಿ ಶಂಬರಾಸುರನ ಕೋಟೆಗಳ ಮೇಲೆ 40 ವರ್ಷಗಳ ಕಾಲ ದಾಳಿ ನಡೆಸಿ ಅಂತಿಮವಾಗಿ ಇಂದ್ರನ ನೆರವಿನಿಂದ ಗೆಲುವು ಸಾಧಿಸಿದ ಕುರಿತ ಸೂಕ್ತಗಳು ಋಗ್ವೇದದಲ್ಲಿವೆ.

ವಿಟ್ಝೆಲ್, ದ್ರುಹ್ಯುಗಳು ಗಾಂಧಾರ ಇಂದಿನ ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ನೆಲೆಸಿರಬೇಕು, ಅನುಗಳು ಪರುಷ್ಣಿ ರಾವಿ ನದಿಯ ಬಯಲುಗಳಲ್ಲಿ, ಯದುಗಳು ಗಂಗಾ-ಯಮುನಾ ಬಯಲುಗಳಲ್ಲಿ ನೆಲೆಸಿದ್ದ ಕುರಿತು ಆದಿ ವೇದವು ಸುಳಿವು ಕೊಡುತ್ತದೆ ಎನ್ನುತ್ತಾರೆ. ತುರ್ವಶರ ನೆಲೆಸುವಿಕೆಯ ಕುರಿತು ಸ್ಪಷ್ಟತೆಗಳಿಲ್ಲವಾದರೂ ಶತಪಥ ಬ್ರಾಹ್ಮಣದ ಪ್ರಕಾರ ಪಾಂಚಾಲ ಉತ್ತರ ಪ್ರದೇಶ ದಲ್ಲಿ ನೆಲೆಸಿದ್ದ ಕುರಿತು ಮಾಹಿತಿ ಇದೆ.

ತಡವಾಗಿ ಕಣಿವೆಗೆ ಬಂದ ಪುರುಗಳು ಹಾಗೂ ಭರತರು ಉಳಿದೆಲ್ಲರನ್ನು ಸೋಲಿಸಿ ತಮ್ಮ ಆಧಿಪತ್ಯ ಸ್ಥಾಪಿಸಿದರು. ಈ ಸಂದರ್ಭದಲ್ಲಿ 10 ಬುಡಕಟ್ಟು ನಾಯಕರ ನಡುವೆ ನಡೆದ ದಾಶರಾಜ್ಞ ಯುದ್ಧದ ಕುರಿತಂತೆ ವ್ಯಾಪಕ ಸೂಕ್ತಗಳಿವೆ. ಭರತರ ಕುಲ ಪುರೋಹಿತ ಹಾಗೂ ಕವಿಯಾದ ವಿಶ್ವಾಮಿತ್ರ ಹಾಗೂ ಪುರುಗಳ ಕವಿ ಪುರೋಹಿತರಾದ ಅತ್ರಿ ಹಾಗೂ ಸುದಾಸನ ಪುರೋಹಿತರಾದ ವಶಿಷ್ಟರು ಭರತರು ಮತ್ತು ಪುರುಗಳ ಯಶಸ್ಸನ್ನು ಹಾಡಿ ಹೊಗಳಿದ್ದಾರೆ. ಮಹಾಭಾರತದಲ್ಲಿ ಪ್ರಸ್ತಾಪವಾಗಿರುವ ಯಯಾತಿಯ ಕತೆ ಅನೇಕ ದೃಷ್ಟಿಕೋನಗಳಿಂದ ಆಕರ್ಷಕವಾಗಿದೆ. ಆಯುವಿನ ವಂಶದಲ್ಲಿ ಹುಟ್ಟಿದ ನಹುಷನ ಮಗ ಯಯಾತಿ. ಈತ ಮೊದಲು ಅಸುರರ ಗುರುವಾದ ಭಾರ್ಗವ ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನು ಮದುವೆಯಾದವ. ಈ ದೇವಯಾನಿಯೊ ದೇವರುಗಳ ಉಳಿವಿಗಾಗಿ ಶುಕ್ರಾಚಾರ್ಯರ ಶಿಷ್ಯನಾಗಿ ಬಂದಿದ್ದ ಕಚನನ್ನು ಮೋಹಿಸಿದಾಕೆ. ಕಚ ಎಲ್ಲ ವಿದ್ಯೆಯನ್ನೂ ಕಲಿಯುವವರೆಗೆ ಸುಮ್ಮನಿದ್ದು ಆ ನಂತರ ನಿನ್ನನ್ನು ಮದುವೆಯಾಗುವುದಿಲ್ಲವೆಂದು ತಿರಸ್ಕರಿಸಿ ಹೋದ. ಒಮ್ಮೆ ಅಸುರರ ದೊರೆಯಾದ ವೃಷಪರ್ವನ ಮಗಳಾದ ಶರ್ಮಿಷ್ಠೆ ಮತ್ತು ದೇವಯಾನಿ ಜಗಳವಾಡಿಕೊಂಡರು. ಜಗಳದಲ್ಲಿ ದೇವಯಾನಿ ಪಾಳು ಬಾವಿಗೆ ಬಿದ್ದಳು. ಬಾವಿಗೆ ಬಿದ್ದ ದೇವಯಾನಿಯನ್ನು ಬಾವಿಯಿಂದ ಎತ್ತದೆ ಸಿಟ್ಟು ಮಾಡಿಕೊಂಡು ಶರ್ಮಿಷ್ಠೆ ಹೊರಟು ಹೋದಳು. ದೇವಯಾನಿ ಅಸುರರನ್ನು, ಅವರ ರಾಜ ವೃಷಪರ್ವನನ್ನೂ ಜಗಳದಲ್ಲಿ ಅವಮಾನಿಸಿರಬೇಕು. ಆ ಹೊತ್ತಿನಲ್ಲಿ ಕುದುರೆ ಸವಾರಿ ಮಾಡಿಕೊಂಡು ಯಯಾತಿ ಬಂದ, ಬಾವಿಯೊಳಗಿನ ರೋದನೆ ಕೇಳಿ ದೇವಯಾನಿಯ ಕೈ ಹಿಡಿದೆತ್ತಿದ. ನೀನು ನನ್ನ ಕೈ ಹಿಡಿದಿರುವೆ ಮದುವೆ ಮಾಡಿಕೊ ಎಂದಳು. ಯಯಾತಿ ಆಗಲಿ ಎಂದ. ಇದರ ನಂತರ ದೊರೆ ಪುತ್ರಿ ಶರ್ಮಿಷ್ಠೆ ನನ್ನ ದಾಸಿಯಾಗಬೇಕು ಎಂದು ದೇವಯಾನಿ ಹಠ ಮಾಡಿದಳು. ಅಸುರರ ಹಿತಕ್ಕಾಗಿ ಗುರುವನ್ನು ನೋಯಿಸಲಾಗದ ವೃಷಪರ್ವ ಅದಕ್ಕೂ ವಿಷಾದದಿಂದ ಒಪ್ಪಿದ. ಕಡು ಮೋಹಿಯಾದ ಯಯಾತಿ ಶರ್ಮಿಷ್ಠೆಗೂ ಒಲಿದು ಬಿಟ್ಟ. ದೇವಯಾನಿಯಿಂದ ಯದು ಮತ್ತು ತುರ್ವಶರನ್ನು ಪಡೆದ. ಗುಪ್ತವಾಗಿ ಶರ್ಮಿಷ್ಠೆಯ ಮೂಲಕ ಅನು, ದ್ರುಹ್ಯು ಮತ್ತು ಪುರುಗಳನ್ನು ಪಡೆದ. ಶರ್ಮಿಷ್ಠೆ ಮತ್ತು ಯಯಾತಿಯ ಪ್ರಣಯ ಸಂಗತಿ ದೇವಯಾನಿಗೆ ತಿಳಿಯಿತು. ಸಂಸಾರ ರಣಾರಂಪವಾಯಿತು. ಉರಿದು ಕೆಂಡವಾದ ದೇವಯಾನಿ ತಂದೆಯ ಬಳಿಗೆ ಹೋಗಿ ಬೆಂಕಿ ಹೊತ್ತಿಸಿದಳು. ಶುಕ್ರಾಚಾರ್ಯರು ಯವ್ವನದಿಂದ ಕುದಿವ ಮನಸ್ಸು, ಮುಪ್ಪಿನಿಂದ ಹಣ್ಣಾದ ಒಡಲು ನಿನಗೆ ದಕ್ಕಲಿ ಎಂದು ಯಯಾತಿಗೆ ಶಾಪ ನೀಡಿದರು. ಶರ್ಮಿಷ್ಠೆಯ ಗೋಳಾಟದ ನಂತರ ಉಶ್ಯಾಪವನ್ನೂ ಕೊಟ್ಟರು. ಉಶ್ಯಾಪವೇನೆಂದರೆ; ನಿನ್ನ ಶಾಪವನ್ನು ಯಾರಾದರೂ ಹೊತ್ತುಕೊಂಡರೆ ನಿನ್ನ ಯವ್ವನ ನಿನಗೆ ಮರಳಿ ಬರುತ್ತದೆ ಎಂಬುದಾಗಿತ್ತು. ಯಾರೊಬ್ಬರೂ ಮುಂದೆ ಬರಲಿಲ್ಲ. ಯಯಾತಿ ದಮ್ಮಯ್ಯ, ಸ್ವಲ್ಪ ಕಾಲದ ನಂತರ ನಿಮಗೆ ವಾಪಸ್ ನೀಡುತ್ತೇನೆ ಎಂದ. ಆಗಲೂ ಯಾರೂ ಮುಂದೆ ಬರಲಿಲ್ಲ. ನಾಲ್ಕು ಮಕ್ಕಳು ಕೈ ಬಿಟ್ಟರು. ಆದರೆ ಪುರು ಮುಂದೆ ಬಂದ. ಶಾಪ ಹೊತ್ತುಕೊಂಡ. ಯಯಾತಿ ದರ್ಪದಿಂದ ಹಾಗೂ ಸಿಟ್ಟಿನಿಂದ ಎಲ್ಲ ಮಕ್ಕಳನ್ನೂ ಓಡಿಸಿದ. ಪುರುವನ್ನು ಬಿಟ್ಟು. ನಂತರ ಯಯಾತಿ ಬಂಗಾರದ ಬಣ್ಣದ ಕೂದಲಿನ ಹುಡುಗಿಯರ ಹಪಾಹಪಿಯಲ್ಲಿ ಬಿದ್ದನೆಂದು ಅನೇಕ ವಿವರಗಳಿವೆ. ಅದೆಷ್ಟೊ ವರ್ಷ ಭೋಗದಲ್ಲಿ ಬಿದ್ದವನು ಕಡೆಗೊಂದು ದಿನ ಪುರುವಿಗೆ ತನ್ನ ಯವ್ವನವನ್ನು ಮರಳಿಸಿದ. ರೂಪಕಾತ್ಮಕವಾದ ಈ ಕತೆಯು ಹಲವು ಸಂಕೇತಗಳನ್ನು ಒಳಗೊಂಡಿದೆ. ದೇವತೆಗಳ ಕಡೆಯವರಿಗೆ ತಮಗೆ ಗೊತ್ತಿದ್ದ ಮಂತ್ರ-ಮಾಯಗಳ ಹಾಗೂ ಅಮೃತ ವಿದ್ಯೆಯನ್ನು ಕಲಿಸಬೇಕು ಎಂಬ ಉಮೇದು ಶುಕ್ರಾಚಾರ್ಯರಿಗೆ ಯಾಕೆ ಬಂತು? ಶುಕ್ರಾಚಾರ್ಯರು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೆ ಅಸುರರಿಗೆ ಯಾಕೆ ಗುರುವಾಗಬೇಕಾಗಿತ್ತು? ಇದರ ಅರ್ಥ ಅಸುರರು ಮತ್ತು ದೇವತೆಗಳ ಕುಲದವರು ಒಟ್ಟಿಗೆ ಇದ್ದರೆಂದು ಅಲ್ಲವೆ? ಶರ್ಮಿಷ್ಠೆ ಮತ್ತು ದೇವಯಾನಿಯರ ಜಗಳ ಕ್ಷಾತ್ರ ಮತ್ತು ಬ್ರಾಹ್ಮಣತ್ವಗಳ ನಡುವಿನ ಹೆಚ್ಚುಗಾರಿಕೆಯ ಸಂಘರ್ಷವೆ? ಬ್ರಾಹ್ಮಣತ್ವದಂತಹ ವರ್ಣದ ಕಲ್ಪನೆ ಇಲ್ಲದೆ ಹೋದರೂ ಗುರು, ಕಲಿಸುವವನು, ಶ್ರೇಷ್ಠ ಎಂಬ ಭಾವನೆಯಾದರೂ ಇದ್ದಿರಬಹುದೆ? ಯಯಾತಿ ವಾಸಿಸುತ್ತಿದ್ದ ಪ್ರದೇಶದಲ್ಲಿ ಸುವರ್ಣ ಕೇಶಿಯರು ಇದ್ದರು ಆದರೆ ಅವರು ವಿರಳವಾಗುತ್ತಿದ್ದರು ಎಂಬ ಸೂಚನೆ ಇದೆಯಲ್ಲವೆ? ಹಾಗಿದ್ದರೆ ಸುವರ್ಣ ಕೇಶಿಯರಿದ್ದದ್ದು ಕಾಕಸಸ್ ಬೆಟ್ಟಗಳ ಉತ್ತರದ ತಪ್ಪಲುಗಳಲ್ಲಿ ಅಲ್ಲವೆ? ಈ ರೀತಿಯ ಅನೇಕ ಅಂಶಗಳನ್ನು ಆಧರಿಸಿ ವಿದ್ವಾಂಸರುಗಳು ಹೇಳುವಂತೆ ಈ ಕತೆಯು ಇರಾನಿನ ಯಾವುದೊ ಪ್ರದೇಶದಲ್ಲಿ ನಡೆದಿರಬಹುದು. ಈ ಪ್ರದೇಶಗಳಿಂದ ಹೊರಟ ಯಯಾತಿಯ ಮಕ್ಕಳು ಬುಡಕಟ್ಟುಗಳಾಗಿ ಪರ್ಣಿಗಳು, ದಾಸರನ್ನು ಸೋಲಿಸಿಕೊಂಡು ಬಂದು ಉಪಖಂಡದಲ್ಲಿ ನೆಲೆಸಿದ್ದಾರೆಂದು ಹೇಳಲಾಗುತ್ತದೆ. ಆರಂಭ ಕಾಲದ ಭಾರತದ ಚಿಂತಕರಾದ ಬಾಲ ಗಂಗಾಧರ ತಿಲಕ್ ಅವರು ಆರ್ಯರ ಮೂಲ ನಿವಾಸ ಉತ್ತರ ಧ್ರುವ ಪ್ರದೇಶ. ಹವಾಮಾನದ ಕಾರಣಗಳಿಗಾಗಿ ವಲಸೆ ಬಂದರು ಎನ್ನುತ್ತಾರೆ. ತೌಲನಿಕ ಭಾಷಾ ಶಾಸ್ತ್ರಜ್ಞರಾದ ಸುನೀತಿ ಕುಮಾರ್ ಚಟರ್ಜಿಯವರು ಸ್ಟೆಪ್ ಪ್ರದೇಶದಿಂದ ವಲಸೆ ಬಂದಿದ್ದಾರೆ ಎಂದು ವಿವರಿಸುತ್ತಾರೆ.

ಈ ದಾಸರು, ದಸ್ಯುಗಳು, ಪಣಿಗಳು ಯಾರು ಹಾಗಿದ್ದರೆ?

 ನಾವು ಸುಲಭವಾಗಿ ದಾಸರು, ದಸ್ಯುಗಳು ಮತ್ತು ಪಣಿಗಳು ಉಪಖಂಡದ ನೆಲದಲ್ಲಿದ್ದರು. ವೈದಿಕ ಆರ್ಯ ಬುಡಕಟ್ಟುಗಳಿಂದ ಸೋತವರನ್ನು ದಾಸರು, ದಸ್ಯುಗಳೆಂದು ಕರೆಯಲಾಯಿತು ಎಂದು ಓದಿಕೊಂಡಿದ್ದೇವೆ. ವಾಸ್ತವದಲ್ಲಿ ಈ ರೀತಿಯ ಬುಡಕಟ್ಟುಗಳು ನಮ್ಮಲ್ಲಿ ಇದ್ದ ಕುರಿತೆ ಸಂದೇಹಗಳಿವೆ. ಅದಕ್ಕೂ ಮಿಗಿಲಾಗಿ ಇಂದಿಗೂ ಈ ಬುಡಕಟ್ಟು ಜನರು ವ್ಯಾಪಕವಾಗಿ ಜೀವಿಸುತ್ತಿದ್ದಾರೆ. ಪೂರ್ವ ಇರಾನಿನ ಬಯಲುಗಳಲ್ಲಿ ವಾಸಿಸುತ್ತಿದ್ದ ಆದಿಮ ಬುಡಕಟ್ಟು ಜನರನ್ನು ದಹೇ, ದಾಹ, ದಹೇಯನ್ಸ್ ಎಂದು ಕರೆಯುತ್ತಿದ್ದರು. ದಹೆಸ್ತಾನ್ ಎಂಬುದು ಕ್ಯಾಸ್ಪಿಯನ್ ಸಮುದ್ರದ ಬಳಿ, ಚೆಚೆನ್ಯಾ ಪಕ್ಕದಲ್ಲಿ ಈಗಲೂ ಇದೆ. ದಾಸ, ದಾಸೇ, ದಾಸ ಎನ್ನಲಾಗುವ ಈ ಬುಡಕಟ್ಟುಗಳು ಬ್ಯಾಕ್ಟ್ರಿಯಾ ಮಾರ್ಜಿಯಾನ ಪ್ರದೇಶಗಳಲ್ಲಿ ಕಾರಕೋರಮ್ ಮರುಭೂಮಿಯಲ್ಲಿ ಬದುಕುತ್ತಿದ್ದರೆಂದು ಇತಿಹಾಸ ಹೇಳುತ್ತದೆ. ಪ್ರಾಚೀನ ಪಾರ್ಸಿ ಭಾಷೆಯಲ್ಲಿ ದಾಸ ಎಂದರೆ ಮನುಷ್ಯ ಎಂದು ಅರ್ಥವಿದೆಯಂತೆ. ಬಾಬಾ ಸಾಹೇಬ್ ಅಂಬೇಡ್ಕರರು ಶೂದ್ರರು ಯಾರು ಕೃತಿಯಲ್ಲಿ ದಾಸರಿಗೂ ಅವೆಸ್ತಾದ ಅಹಿ ದಹಕರಿಗೂ ಸಂಬಂಧವಿರುವಂತಿದೆ ಎಂಬ ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ವಿಟ್ಝೆಲ್ ದಾಸ ಎನ್ನುವ ಪದ ಮೂಲತಃ ಇಂಡೋ ಯುರೋಪಿಯನ್ ಆಗಿದೆ. ಈ ಭಾಷೆಗಳಲ್ಲಿ ಸಾಮಾನ್ಯವಾಗಿ ಈ ಪದಕ್ಕೆ ಶತ್ರು, ಹೊರಗಿನವ ಎಂಬ ಅರ್ಥಗಳಿವೆ ಎನ್ನುತ್ತಾರೆ. ವಿಟ್ಝೆಲ್, ಮ್ಯಾಕ್ಸ್ ಮುಲ್ಲರ್, ಪರ್ಪೊಲ ಮುಂತಾದವರು ಆರ್ಯ-ದಾಸ ಸಂಘರ್ಷ ನಡೆದಿರುವುದು ಬ್ಯಾಕ್ಟ್ರಿಯಾ ಮಾರ್ಜಿಯಾನ ಪ್ರದೇಶದಲ್ಲಿ ಎಂದು ವಿವರಿಸುತ್ತಾರೆ. ದಸ್ಯುಗಳು ಸೈನ್ಯ ಕಟ್ಟಿ ಈ ಪ್ರದೇಶಗಳಲ್ಲಿ ಸಾಮ್ರಾಜ್ಯವನ್ನೂ ನಿರ್ಮಿಸಿದ್ದರು. ಅಖೆಮೆನಿಡ್ ಸೈನ್ಯದೊಂದಿಗೆ ಹೋರಾಡಿ ಮಾರ್ಜಿಯಾನ ಪ್ರದೇಶವನ್ನು ಗೆದ್ದಿದ್ದರು ಎಂಬ ಉಲ್ಲೇಖಗಳಿವೆ.

ಪಣಿಗಳೂ ಹಾಗೆಯೆ. ಸಿಥಿಯನ್ ಮತ್ತು ಪಾರ್ಥಿಯನ್ ಸಾಮ್ಯಾಜ್ಯಗಳನ್ನು ಕಟ್ಟಿ ಕ್ರಿ.ಶ 3ನೇ ಶತಮಾನದವರೆಗೂ ಆಳ್ವಿಕೆ ಮಾಡಿದ್ದರು. ಆಗ್ನೇಯ ಕ್ಯಾಸ್ಪಿಯನ್ ಸಮುದ್ರದ ಪ್ರದೇಶಗಳಲ್ಲಿ ಇವರು ವಾಸಿಸುತ್ತಿದ್ದರು. ಪಾರ್ಥಿಯಾದ ಮೇಲೆ ದಾಳಿ ಮಾಡಿ ಗ್ರೀಕ್ ಶತ್ರಪರನ್ನು ಸೋಲಿಸಿ ಓಡಿಸಿದ್ದರು. ನಂತರ ಅರ್ಸಾಸಿಡ್ ಎಂಬ ಸಾಮ್ರಾಜ್ಯವನ್ನು ಕಟ್ಟಿದ್ದರು ಎಂಬ ಉಲ್ಲೇಖಗಳು ಬಹಿರಂಗಗೊಳ್ಳುತ್ತಿವೆ. ಹಾಗಾಗಿ ಋಗ್ವೇದವು ಪ್ರಸ್ತಾಪಿಸುವ ದಾಸರು, ಪಣಿಗಳು ಉಪಖಂಡದ ಆಚೆ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ನೆಲೆಸಿದ್ದವರು ಎಂದಾಗುತ್ತದೆ. ತಳಿವಿಜ್ಞಾನ, ಪುರಾತತ್ವಶಾಸ್ತ್ರ, ಇತಿಹಾಸವನ್ನು ಕುತೂಹಲದಿಂದ ಅಧ್ಯಯನ ಮಾಡುವವರು ರಾಹುಲ್ ಸಾಂಕೃತ್ಯಾಯನ ಮುಂತಾದವರ ಫಿಕ್ಷನ್ ಮಾದರಿಯ ಬರಹಗಳಿಂದ ಹೊರಬಂದು ವೈಜ್ಞಾನಿಕವಾಗಿ ಸತ್ಯಗಳನ್ನು ಹುಡುಕಬೇಕಾಗಿದೆ. ಇಲ್ಲದೆ ಹೋದರೆ ದಾಸರು, ದಸ್ಯುಗಳು, ಪಣಿಗಳು ಹಾಗೂ ವೈದಿಕ ಆರ್ಯ ಬುಡಕಟ್ಟುಗಳ ನಡುವಿನ ಸಂಘರ್ಷಗಳು ಉಪಖಂಡದ ನೆಲದಲ್ಲಿ ನಡೆದಿವೆಯೆಂದು ತಪ್ಪು ತಿಳುವಳಿಕೆಗೆ ಬರಲು ಸಾಧ್ಯವಿದೆ. ಆರ್ಯ ಎಂಬುದು ಶ್ರೇಷ್ಠ ಎಂಬುದಾಗಿ ನಾವು ಓದುತ್ತೇವೆ. ಆದರೆ ಇರಾನಿನ ಅಪಭ್ರಂಶ ರೂಪದ ಪದ ಆರ್ಯವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.

ಹಾಗಿದ್ದರೆ ಉಪಖಂಡದಲ್ಲಿ ಸಂಘರ್ಷಗಳು ನಡೆದಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಚರಿತ್ರೆಯು ಖಂಡಿತ ನಡೆದಿವೆ ಎಂದೇ ಹೇಳುತ್ತದೆ. ಸಿಂಧೂ ಬಯಲಿನ ಹರಪ್ಪಾ ಮತ್ತು ಮೆಹೆಂಜೊದಾರೊ ಎಂಬ ಬೃಹತ್ ನಾಗರಿಕತೆಯ ನಿವೇಶನಗಳಲ್ಲಿ ಸಂಘರ್ಷಗಳು ನಡೆದಿರುವುದಕ್ಕೆ ಅನೇಕ ಸಾಕ್ಷಿಗಳಿವೆ. ಶಿಶ್ನ ದೇವತೆಗಳನ್ನು ಪೂಜಿಸುವವರನ್ನು ಇಂದ್ರನು ಕೊಂದನೆಂದು ಋಗ್ವೇದದ 10.99.3ನೇ ಮಂತ್ರದಲ್ಲಿ ವರ್ಣಿಸಲಾಗಿದೆ. ಶಿಶ್ನದೇವರುಗಳನ್ನು ಪೂಜಿಸುವುದು ಪವಿತ್ರವಲ್ಲವೆಂದು ಏಳನೇ ಮಂಡಲದ 21.5 ನೇ ಮಂತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಇವುಗಳಿಗೆ ಸಾಕ್ಷ್ಯವೆಂಬಂತೆ ಗುಜರಾತ್‌ನ ಧೋಲವೀರ ಪ್ರದೇಶದಲ್ಲಿ ಸಿಂಧೂ ನಾಗರಿಕತೆ ಕಾಲದ ಲಿಂಗಾಕೃತಿಯ ವಿಗ್ರಹಗಳಿಗೆ ಹಾನಿ ಮಾಡಲಾಗಿದೆಯೆಂದು ಆರ್.ಎಸ್. ಭಿಷ್ತ್‌ರ ಉತ್ಖನನಗಳು ಹೇಳುತ್ತವೆಯೆಂದು ಟೋನಿ ಜೋಸೆಫ್ ತಮ್ಮ ಅರ್ಲಿ ಇಂಡಿಯನ್ಸ್ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಸಿಂಧೂ ಕಣಿವೆಯಲ್ಲಿ ಮೂರ್ತಿ ರೂಪದ ಶಿಶ್ನ ದೇವತೆಗಳೂ ಸೇರಿದಂತೆ ವಿಗ್ರಹಗಳ ಪೂಜೆಯ ದಾಖಲೆಗಳಿವೆ. ಅಸೋಕ ಪರ್ಪೊಲ ಈ ಎಲ್ಲ ಕುರುಹುಗಳು ದ್ರಾವಿಡ ಸಂಸ್ಕೃತಿಯವು ಎಂದು ವ್ಯಾಖ್ಯಾನಿಸಿದ್ದಾರೆ. ಅವರು ಸಿಂಧೂ ಕಣಿವೆಯ ಟೆರ್ರಾಕೋಟ ಮುದ್ರೆಗಳ ಮೇಲಿನ ಭಾಷೆ ದ್ರಾವಿಡ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಗಡಿಗಳ ಹಂಗಿಲ್ಲದೆ ಚಲಿಸುತ್ತಿದ್ದ ಜನರ ಗುಂಪುಗಳನ್ನು ದೇಶ, ರಾಷ್ಟ್ರ ಎಂಬ ಚೌಕಟ್ಟಿನಲ್ಲಿ ಹಿಡಿದು ಕೂರಿಸುವುದೇ ಅಪರಾಧ. ಡೇವಿಡ್ ಮೆಕಾಲ್ಪಿನ್ ಎಂಬ ಭಾಷಾಶಾಸ್ತ್ರಜ್ಞನು ತನ್ನ ಪ್ರೋಟೊ- ಎಲಾಮೊ- ದ್ರಾವಿಡಿಯನ್; ದ ಎವಿಡೆನ್ಸ್ ಆ್ಯಂಡ್ ಇಟ್ಸ್ ಇಂಪ್ಲಿಕೇಶನ್ಸ್ ಎಂಬ ಕೃತಿಯಲ್ಲಿ ದ್ರಾವಿಡ ಭಾಷಿಕರು ಏಳೆಂಟು ಸಾವಿರ ವರ್ಷಗಳ ಹಿಂದೆ ಪಶ್ಚಿಮ ಇರಾನಿನ ತಪ್ಪಲು ಪ್ರದೇಶಗಳಾದ ಝಾಗ್ರೋಸ್ ಬೆಟ್ಟಗಳವರೆಗೆ ನೆಲೆಸಿದ್ದರು ಎಂದು ದಾಖಲೆಗಳ ಮೂಲಕ ವಿವರಿಸುತ್ತಾರೆ. ನಾಗರಿಕತೆಗಳು ಒಂದಕ್ಕೊಂದು ಕೊಟ್ಟು ಕೊಂಡು ಬೆಳೆದಿವೆ. ಆ ಕಾರಣಕ್ಕಾಗಿಯೆ ಟಾಗೂರರು ನಾಗರಿಕತೆಗಳನ್ನು ರಾಷ್ಟ್ರವೆಂಬ ಚೌಕಟ್ಟಿನಲ್ಲಿ ಕೂರಿಸಲು ನಿರಾಕರಿಸುತ್ತಾರೆ.

ನಮ್ಮಲ್ಲಿ 1857ರ ವರೆಗೆ ಉಪಖಂಡದಲ್ಲಿ ಗಡಿಗಳು ನಿರಂತರವಾಗಿ ಬದಲಾಗುತ್ತಿದ್ದವು. ರಾಜ್ಯ- ಸಾಮ್ರಾಜ್ಯಗಳು ತಾವು ಕಲಿತ, ಅಳವಡಿಸಿಕೊಂಡ ಹೊಸ ವಿದ್ಯೆ, ಶಸ್ತ್ರ ಇತ್ಯಾದಿಗಳನ್ನು ಆಧರಿಸಿ ಗೆಲುವು ಸೋಲುಗಳು ನಿರ್ಧಾರಿತವಾಗುತ್ತಿದ್ದವು. ಬಹಳ ಸುಲಭವಾಗಿ ನಾವು ಭಾರತದ ಮೇಲೆ ತುರ್ಕರ, ಮುಸ್ಲಿಮರ, ಅರಬರ ದಾಳಿ ಎಂದು ಕರೆಯುತ್ತೇವೆ. ಆದರೆ ಘೋರಿ, ಘಜನಿ ಮುಂತಾದವರೆಲ್ಲ ಅಫ್ಘಾನಿಸ್ತಾನದಿಂದ ಬಂದವರು. ಅಕ್ಬರ್ ಹುಟ್ಟಿದ್ದು ಇಂದಿನ ಪಾಕಿಸ್ತಾನದಲ್ಲಿ. ಹಾಗಿರುವಾಗ ಚರಿತ್ರೆಗೆ ಗಡಿಗಳನ್ನು ಧರ್ಮಗಳನ್ನು ಆರೋಪಿಸಿ ವ್ಯಾಖ್ಯಾನಿಸುವುದು ಹೇಗೆ? ಮೇಲ್ಜಾತಿ ಹಿಂದುಗಳು ಮತ್ತು ಮೊಗಲರ ನಡುವೆ ಸುಮಾರು 27 ವೈವಾಹಿಕ ಸಂಬಂಧಗಳು ನಡೆದಿವೆಯೆಂದು ಹಾಗೂ ಅಕ್ಬರನ ಸೈನ್ಯದ ದಂಡನಾಯಕ ಹಿಂದೂವಾಗಿದ್ದ ಮತ್ತು ರಜಪೂತ ರಾಜರ ದಂಡನಾಯಕ ಮುಸ್ಲಿಮನಾಗಿದ್ದ ಕುರಿತು ರೊಮಿಲಾ ಥಾಪರ್ ಪ್ರಸ್ತಾಪಿಸುತ್ತಾರೆ. ಅಫ್ಘಾನಿಸ್ತಾನ ಉಪಖಂಡದ ಭಾಗವೇ ಆಗಿತ್ತಲ್ಲ ಎಂದು ಆಸಿಫ್ ಮನಾನ್ ತನ್ನ ‘ಲಾಸ್ ಆಫ್ ಹಿಂದುಸ್ತಾನ್’ ಪುಸ್ತಕದಲ್ಲಿ ಬರೆಯುತ್ತಾನೆ.

ತಳಿವಿಜ್ಞಾನದ ಅನ್ವೇಷಣೆಗಳನ್ನು ಕುತೂಹಲದಿಂದ ಗಮನಿಸುತ್ತಿರುವ ನನಗೆ ಯಯಾತಿಯ ವಂಶಸ್ಥರುಗಳು ಮುಂದೆ ವೈದಿಕರುಗಳು, ಮುಸ್ಲಿಮ್ ಮತ್ತು ಕ್ರೈಸ್ತರಾಗಿ ಬಡಿದಾಡುತ್ತಿರುವುದು ಆತಂಕ ಹುಟ್ಟಿಸುತಿದೆ. ಧರ್ಮ, ರಾಷ್ಟ್ರಗಳೆಂಬ ಆಧುನಿಕ ಪ್ರಮೇಯಗಳ ಕುರಿತು ಭಯ ಹುಟ್ಟುತ್ತಿದೆ. ಮೂಲದಲ್ಲಿ ಒಂದೇ ಬುಡಕಟ್ಟಿನಿಂದ ಹೊರಟ ಇವರುಗಳು ಕ್ರಿಸ್ತಾಬ್ಧದ ನಂತರ ವಿವಿಧ ಧರ್ಮಗಳಿಗೆ ಸೇರಿಕೊಂಡು ನೆಲವನ್ನು ದಾರುಣಗೊಳಿಸಿದ್ದಾರೆ. ಧರ್ಮಗಳೂ ವಿಭಿನ್ನ ಸಿದ್ಧಾಂತಗಳೇ ಆದ ಕಾರಣ ಕಳೆದ ಎರಡು ಸಾವಿರ ವರ್ಷಗಳನ್ನು ಆಳಿರುವುದು ಸಿದ್ಧಾಂತಗಳೇ ಆಗಿವೆ. ಹರಾರಿ ಪ್ರಕಾರ ಈ ಸಿದ್ಧಾಂತಗಳು ಒಂದು ರೀತಿಯ ಕಥನಗಳು. ನಂಬಿಕೆ, ಮೂಢ ನಂಬಿಕೆ, ಸುಳ್ಳು, ವಾಸ್ತವ, ಒಂದಿಷ್ಟು ತರ್ಕ, ತತ್ವಶಾಸ್ತ್ರ ಒಂದಿಷ್ಟು ಫ್ಯಾಂಟಸಿಗಳೆಲ್ಲ ಸೇರಿ ಅದ್ಭುತ ಕಥನಗಳಾಗಿವೆ. ಈ ಕಥನಗಳು ಜನರನ್ನು ನೆಮ್ಮದಿಯಲ್ಲಿಯೂ ಹಾಗೂ ದುಃಖದಲ್ಲಿಯೂ ಮುಳುಗಿಸಿವೆ. ಋಗ್ವೇದದ ಕವಿಗಳೆ ಮುಂದೆ ಋಷಿಗಳಾದರು. ಈ ಕವಿ ಪುರೋಹಿತರು ಪುರಗಳ ಕಲ್ಪನೆ ವೈದಿಕ ಆರ್ಯರಲ್ಲಿ ಇರಲಿಲ್ಲ ಆದರೂ ಅನುಕೂಲಕ್ಕಾಗಿ ಹಾಗೆ ಕರೆಯಲಾಗಿದೆ. ಇಂಗ್ಲಿಷಿನಲ್ಲಿ ಪ್ರೀಸ್ಟ್-ಪೊಯೆಟ್ ಎಂದು ಇವರನ್ನು ಕರೆಯಲಾಗುತ್ತದೆ. ಅಸ್ತಿತ್ವವೂ ಸೇರಿದಂತೆ ಯಾವ್ಯಾವುದೊ ಕಾರಣಕ್ಕೆ ಮಂತ್ರ ಕಟ್ಟಿ ಹಾಡಿದ್ದಾರೆ. ಆರ್ಯರ ಮೂಲನಿವಾಸ ಉಪಖಂಡ ಎಂಬ ಪ್ರಮೇಯಗಳನ್ನು ಮಂಡಿಸಲು ವಿಪರೀತ ಪ್ರಯಾಸ ಪಡುತ್ತಿರುವ ತಾಳಗೇರಿಯಂಥವರು 10ನೇ ಮಂಡಲವನ್ನು ರಚಿಸಿದವರ ಬಗ್ಗೆ ಆಕ್ಷೇಪವೆತ್ತುತ್ತಾರೆ. ಯಾಕೆಂದರೆ ಅದರಲ್ಲಿ ಜೂಜುಕೋರರ ಬವಣೆ, ಮನುಷ್ಯರ ದುಃಖಗಳು, ಕುಡುಕರ ವ್ಯಥೆ ಮುಂತಾದವುಗಳ ಬಗ್ಗೆ ಯಥೇಚ್ಛ ವಿವರಗಳಿವೆ. ಆಧುನಿಕ ಕಾಲಘಟ್ಟದ ಸಮಸ್ಯೆಗಳು ಎಂದು ಕೊಂಡ ಅನೇಕ ಸಂಗತಿಗಳ ಬಗ್ಗೆ ಅದರಲ್ಲಿ ವಿವರಗಳಿವೆ. ಸಂಪ್ರದಾಯಸ್ಥ ಹಾಗೂ ಋಗ್ವೇದದ ಆದಿ ನಿಲುವುಗಳ ಬಗ್ಗೆ ಶ್ರೇಷ್ಟತೆಯ ಭಾವನೆ ಹೊಂದಿರುವವರಿಗೆ ಕಡೆಯ ಮಂಡಲದ ಸಾಮಾನ್ಯ ಜನರು ತೊಡಕನ್ನುಂಟು ಮಾಡುತ್ತಾರೆ. 2 ರಿಂದ 8 ರವರೆಗಿನ ಮಂಡಲಗಳನ್ನು ರಚಿಸಿದವರು ಕ್ರಮವಾಗಿ ಗೃತ್ಸಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭಾರದ್ವಾಜ, ವಶಿಷ್ಠ, ಕಣ್ವ+ ಅಂಗೀರಸ ಕವಿ-ಪುರೋಹಿತರೆಂದು ಗುರುತಿಸಲಾಗಿದೆ. ಇವರನ್ನು ಪ್ರಧಾನವಾಗಿ ಎರಡು ಕುಟುಂಬಗಳ ಹಿನ್ನೆಲೆಯಲ್ಲಿಟ್ಟು ಕಾನಡ್ ಸಿನ್ಹಾ ಮುಂತಾದ ವಿದ್ವಾಂಸರು ವಿವರಿಸುತ್ತಾರೆ. ಈ ಕವಿ-ಪುರೋಹಿತರು ಸೂಕ್ತಗಳನ್ನು ರಚಿಸಿದ ಪ್ರದೇಶಗಳು ಯಾವುವಾಗಿರಬಹುದು ಎಂಬುದರ ಬಗ್ಗೆಯೂ ನಿಖರ ಅಂದಾಜುಗಳಿವೆ. ಇವರಲ್ಲಿ ಕೆಲವರು ಸಪ್ತ ಋಷಿಗಳ ಪಟ್ಟಿಯಲ್ಲೂ ಇದ್ದಾರೆ. ವಸಿಷ್ಠ ಮತ್ತು ವಿಶ್ವಾಮಿತ್ರ ಪರಂಪರೆಯ ನಡುವೆ ನಿರಂತರ ಸಂಘರ್ಷವಿದ್ದುದರ ಬಗ್ಗೆ ಪುರಾಣಗಳು, ಕಾವ್ಯಗಳಲ್ಲಿ ಉಲ್ಲೇಖವಿದೆ. ಭರತರು- ಪುರುಗಳು ಉಪಖಂಡದೊಳಕ್ಕೆ ತಡವಾಗಿ ಬಂದವರು ಎಂಬುದರ ಬಗ್ಗೆ ಹೆಚ್ಚು ತಕರಾರುಗಳಿಲ್ಲ. ಹೆಚ್ಚು ಸುಧಾರಿಸಿದ ಶಸ್ತ್ರಗಳೊಂದಿಗೆ ಬಂದ ಇವರು ಇತರೆಲ್ಲರನ್ನು ದಮನಿಸಿದರು. ಗೆಲುವನ್ನು ಸಾಧಿಸಿ ಮಹಾ ಸಂಘರ್ಷಗಳನ್ನು ದಮನಿಸಿದ ಈ ಬುಡಕಟ್ಟು ನಾಯಕರು ಕವಿ- ಪುರೋಹಿತರಾಗಲು ವಿಶ್ವಾಮಿತ್ರ ಮತ್ತು ವಶಿಷ್ಠರ ನಡುವೆ ತೀವ್ರ ಸಂಘರ್ಷ ನಡೆದಂತಿದೆ. ಭಾರ್ಗವ ಕುಲದ ಋಷಿಗಳು ಮೊದಲು ದ್ರುಹ್ಯು ಬುಡಕಟ್ಟಿನ ಯಶೋಗಾಥೆಗಳನ್ನು ಹಾಡುತ್ತಿದ್ದರಂತೆ. ಭರತ ಮತ್ತು ಪುರುಗಳು ಬಂದ ಮೇಲೆ ಅವರ ಬಗ್ಗೆ ಹಾಡಲಾರಂಭಿಸಿದರಂತೆ. ದಿವೋದಾಸನ ಬಗ್ಗೆ ವಿಶ್ವಾಮಿತ್ರರು ಹಾಡಿದ್ದರೆ, ದಿವೋದಾಸನ ನಂತರ ನಾಯಕತ್ವ ವಹಿಸಿದ ಸುದಾಸನಿಗೆ ವಶಿಷ್ಠರು ಕವಿ ಪುರೋಹಿತರಾಗುತ್ತಾರೆ. ವಿಟ್ಝೆಲ್ ಋಗ್ವೇದಿಕ್ ಹಿಸ್ಟರಿ ಕೃತಿ ಪುಟ-335 ಗಮನಿಸಿ ಅಂದಾಜಿಸುವಂತೆ ವಶಿಷ್ಠರು ಇರಾನಿನ ಬಯಲುಗಳಿಂದ ನೆನಪುಗಳನ್ನು ದಟ್ಟವಾಗಿ ಹೊಂದಿದ್ದವರು. ಋಗ್ವೇದದ ಕವಿ-ಪುರೋಹಿತರುಗಳು ಮನು ವನ್ನು ಆದಿ ಪುರುಷ ಎನ್ನುತ್ತಾರೆ. ಆದರೆ ವಶಿಷ್ಠರು ಮಾತ್ರ ಯಮನನ್ನು ಆದಿ ಪುರುಷ ಎನ್ನುತ್ತಾರೆ. ಅವೆಸ್ತಾದಲ್ಲಿ ಯಿಮ ಆದಿ ಪುರುಷ. ವಶಿಷ್ಠರು ವರುಣನನ್ನು ಮುಂದು ಮಾಡುತ್ತಾರೆ. ಅವೆಸ್ತಾದ ಅಹುರ ಮಝ್ದಾ ಅಸುರಮೇಧ ನಿಗೆ ಸಂವಾದಿಯಾಗಿ ವರುಣನ ಚಿತ್ರಣವಿದೆ. ಅಹುರ ಮಝ್ದಾನಂತೆ ವರುಣನು ಸತ್ಯ, ನೈತಿಕತೆ, ನಿಷ್ಠೆಯುಳ್ಳ ದೇವತೆ ಎಂಬ ವ್ಯಾಖ್ಯಾನವಿದೆ. ಇಂದ್ರ ಗೆಲ್ಲುವವನು, ವರುಣ ಆಳುವವನು ಎಂಬ ನಿಲುವು ವಶಿಷ್ಠರದ್ದಾಗಿರುವಂತಿದೆ. ನಂತರದ ಆರ್ಯ ಬುಡಕಟ್ಟುಗಳ ನಾಯಕರನ್ನು ಈ ಇಬ್ಬರಿಗೆ ಸಂವಾದಿಯಾಗಿಸಿ ಕಥನಗಳನ್ನು ಕಟ್ಟಲಾಗುತ್ತದೆ. ವರುಣ, ಅಗ್ನಿ ಮತ್ತು ಸೋಮರುಗಳು ಅಸುರ ಪಿತೃವಿನ ಪಕ್ಷವನ್ನು ತೊರೆದು ಇಂದ್ರನ ಪಕ್ಷದ ಕಡೆಗೆ ಚಲಿಸುವ ಪ್ರಕ್ರಿಯೆಯನ್ನು ಋಗ್ವೇದದ ಮಂತ್ರ 10.124 ರಲ್ಲಿದೆ. ಇದು ಸ್ಪಷ್ಟವಾಗಿ ಇರಾನಿನ ಬಯಲುಗಳ ಅಹುರ ಪ್ರತಿನಿಧಿಗಳು ಉಪಖಂಡದೊಳಗೆ ದೇವತೆಗಳಾಗುವ ಪ್ರಕ್ರಿಯೆಗೆ ಉದಾಹರಣೆಯಾಗಿದೆ. ಅಲ್ಲಿ ಅಹುರರು ಸತ್ಯ ದೈವತಗಳಾದರೆ ದಏವಗಳು ಕೆಡುಕನ್ನುಂಟು ಮಾಡುವವರು. ಇಲ್ಲಿ ಅದು ಉಲ್ಟಾ ಆಗುತ್ತದೆ. ಒಟ್ಟಿನಲ್ಲಿ ಈ ಕವಿ-ಪುರೋಹಿತರ ಮೇಲಾಟದಲ್ಲಿ ಈ ವಿರುದ್ಧದ ಕಥನಗಳು ಹುಟ್ಟಿ ಉಪಖಂಡದ ಬದುಕನ್ನು ದಿಕ್ಕೆಡಿಸಿವೆ. ಯಾಕೆಂದರೆ ದೇವ ಮತ್ತು ಅಸುರ ಕಥನಗಳು ಇಲ್ಲಿ ಪ್ರಸ್ತುತದ ಜನರ ಬದುಕಿನ ಮೇಲೂ ನಿರಂತರವಾಗಿ ಪ್ರಭಾವ ಬೀರುತ್ತಲೇ ಇವೆ. ಬಹುಶಃ ಈ ಕಾರಣಕ್ಕೆ ಇರಬಹುದು ಅಲ್ಲಮ ಪ್ರಭು ಅಳಿಸಲಾಗದ ಲಿಪಿಯನ್ನು ಬರೆಯಬಾರದು ಎಂದಿದ್ದಾರೆ. ನಿರೂಪಿತಗೊಂಡು ಸ್ಥಾಪಿತವಾದ ಕಥನವೊಂದು ಜನರ ಬದುಕನ್ನು ಸುಧಾರಿಸುವ ಬದಲು ಹಿಂಸಿಸತೊಡಗಿದರೆ ಹೇಗೆ? ಸಾವಿರಗಟ್ಟಲೆ ವರ್ಷಗಳ ವೌಲ್ಯಗಳು, ಚಿಂತನೆಗಳು ಮತ್ತು ಬದುಕುಗಳು ಇಂದಿಗೂ ಅನ್ವಯವಾಗಬೇಕು ಎಂದರೆ ಹೇಗೆ?

ಇಂದ್ರ- ವರುಣ- ನಾಸತ್ಯ ಮುಂತಾದವರು ಉತ್ತರ ಟರ್ಕಿಯಲ್ಲಿಯೂ ಪ್ರಭಾವ ಹೊಂದಿದ್ದ ದೈವತಗಳೆ. ವಿಶ್ವದ ಖ್ಯಾತ ಪುರಾತತ್ವಶಾಸ್ತ್ರಜ್ಞೆ ಮರಿಯಾ ಗಿಂಬುಟಾಸ್ ಮುಂತಾದವರು ಅಂದಾಜಿಸುವಂತೆ ಈ ಸ್ಟೆಪ್ ಪ್ರದೇಶದಲ್ಲಿದ್ದ ಆರ್ಯ ಪಶುಪಾಲಕರ ಗುಂಪುಗಳು ಯಾವ್ಯಾವುದೊ ಕಾರಣಕ್ಕಾಗಿ ಎರಡು ಭಿನ್ನ ದಿಕ್ಕುಗಳ ಕಡೆಗೆ ನಿಧಾನಕ್ಕೆ ಚಲಿಸಲಾರಂಭಿಸಿದರು. ಹಾಗೆ ಚಲಿಸಿದ ಒಂದು ಗುಂಪು ಉತ್ತರ ಯುರೋಪಿನಲ್ಲಿ ನೆಲೆಸಿತು. ಮತ್ತೊಂದು ಉತ್ತರ ಭಾರತದಲ್ಲಿ ನೆಲೆಸಿತು. ಎರಡರಲ್ಲು ಈಗಲೂ ಸಮಾನ ಆಚರಣೆಗಳಿವೆ. ಇಂದ್ರ ಮುಂತಾದ ದೈವತಗಳು ಉತ್ತರ ಯುರೋಪಿನ ಬುಡಕಟ್ಟುಗಳಲ್ಲಿ ಈಗಲೂ ಇವೆ. ಕೆಲವು ಚಿಂತಕರುಗಳು ಉತ್ತರ ಯುರೋಪಿಗೆ ತಲುಪಿದ ಆರ್ಯ ಬುಡಕಟ್ಟುಗಳು ಮರಳಿ ಭಾರತದ ಕಡೆಗೆ ಬಂದರು ಎಂದು ಹೇಳುತ್ತಾರೆ. ಆದರೆ ತಳಿ ವಿಜ್ಞಾನ ಮತ್ತು ಪುರಾತತ್ವ ವಿಜ್ಞಾನಗಳಲ್ಲಿ ಇದಕ್ಕೆ ಆಧಾರಗಳಿಲ್ಲ. ಕ್ರಿ.ಪೂ. 3000ದ ವೇಳೆಗೆ ಇಂದ್ರನಂತಹ ದೈವತಗಳ ಕಲ್ಪನೆಗಳು ಸ್ಟೆಪ್ಪಿಯ ಪಶುಪಾಲಕ ಬುಡಕಟ್ಟುಗಳಲ್ಲಿ ಇದ್ದಿರಬಹುದೆಂದು ಊಹಿಸಲಾಗಿದೆ. ಅದರ ನೆನಪುಗಳಲ್ಲಿ ಈ ಬುಡಕಟ್ಟುಗಳು ನಿರಂತರವಾಗಿ ಹಾಡುತ್ತಾ , ಕಥನವನ್ನು ವಿಸ್ತರಿಸುತ್ತಾ ನಡೆದಿದ್ದಾರೆ. ಋಗ್ವೇದದಲ್ಲಿ ಪ್ರಸ್ತಾಪವಾಗುವ ಆರ್ಯ ಪಶುಪಾಲಕ ಬುಡಕಟ್ಟು ನಾಯಕರುಗಳು ಇಂದ್ರನನ್ನು ಸ್ತುತಿಸಿ ಯುದ್ಧ ಮಾಡುವ ಪರಿಪಾಠವಿಟ್ಟುಕೊಂಡಿರುವುದನ್ನು ಕಾಣುತ್ತೇವೆ. ಉತ್ತರ ಯುರೋಪಿನಲ್ಲಿ ನೆಲೆಸಿದ ಪಶುಪಾಲಕ ಆರ್ಯ ಗುಂಪುಗಳು ಬಹು ಸಂಸ್ಕೃತಿಯ ಜನರೊಂದಿಗೆ ಸಮಾಗಮ ಹೊಂದುವ ಅವಕಾಶಗಳು ಕಡಿಮೆ ಬಂದಿರಬಹುದು. ಆದರೆ ಉಪಖಂಡದಲ್ಲಿ ಪಶುಪಾಲಕ ಆರ್ಯರ ಸಂಸ್ಕೃತಿಗಿಂತ ಮೇರು ಸ್ಥಿತಿಗೆ ತಲುಪಿದ್ದ ಸಂಸ್ಕೃತಿಗಳಿದ್ದವು. ಅವುಗಳೊಂದಿಗೆ ಹೊಂದಿಕೊಂಡು ಬದುಕಲೇ ಬೇಕಾಯಿತು. ಆದ್ದರಿಂದ ಇಲ್ಲಿ ಇಂದ್ರ- ವರುಣ, ಸವಿತೃ, ರಿಭು, ಪೂಷಣ್, ಅಪಾಸ್, ಏಪ್ರಿಸ್, ಮಿತ್ರ ಈ ಮಿತ್ರ ಪರಂಪರೆ ಗ್ರೀಕ್, ಇರಾನಿನ ಬಯಲುಗಳಲ್ಲಿ ಬಹುಕಾಲ ಜೀವಂತವಾಗಿತ್ತು. ಮುಂತಾದವರುಗಳು ಹಿಂದೆ ಸರಿದು ಶಿವ ಮತ್ತು ಕೃಷ್ಣ, ದುರ್ಗಿಯರ ಪರಂಪರೆಗಳು ಮುನ್ನೆಲೆಗೆ ಬಂದವು. ಹಾಗಾಗಿ ಆದಿ ಆರ್ಯ ಬುಡಕಟ್ಟುಗಳ ಆಚರಣೆಗಳು ಅವಶೇಷಗಳಂತೆ ಉಳಿದುಕೊಂಡಿವೆ. ಆದರೆ ಉತ್ತರ ಯುರೋಪಿನಲ್ಲಿ ಇನ್ನೂ ಜೀವಂತವಾಗಿವೆ ಎಂದು ಹಲವು ವಿದ್ವಾಂಸರು ಉಲ್ಲೇಖಿಸುತ್ತಾರೆ.

ವಚನಕಾರರು ವೇದವನ್ನು ಓದಿನ ಮಾತು ಎಂದು ಮಾತ್ರ ನೋಡಿ ಪರ್ಯಾಯ ಸಂಸ್ಕೃತಿಯ ನಿರ್ಮಾಣದ ಕಡೆಗೆ ಯೋಚಿಸಿದರು. ಅಲ್ಲಮ ಪ್ರಭುವಿಗೆ ರಾಷ್ಟ್ರಗಳ, ಧರ್ಮಗಳ ಇಂದಿನ ಸಂಘರ್ಷಗಳ ಅರಿವು ಇರಲಿಲ್ಲ. ಹಾಗಾಗಿ ನಾವು ಅಲ್ಲಮನಂತೆ ವೇದವೆಂಬುದು ಓದಿನ ಮಾತು ಎಂದು ಮುನ್ನಡೆಯಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿರುವುದನ್ನು ಏನೆಂದು ಕರೆಯಬೇಕು? ಹೇಗೆ ವ್ಯಾಖ್ಯಾನಿಸಬೇಕು? ಪ್ರಗತಿಯೆಂದೊ ಅಥವಾ ಪ್ರತಿಗಾಮಿತನವೆಂದೊ?

ವೇದಪೂರ್ವ ಮತ್ತು ವೇದಕಾಲದಲ್ಲಿ ಪ್ರಧಾನ ಪಾತ್ರ ವಹಿಸಿದ ಎರಡು ಕವಿ-ಪುರೋಹಿತ ಕುಲದ ಮನೆತನಗಳಾದ ಅಂಗೀರಸ ಮತ್ತು ಭಾರ್ಗವ ಇವುಗಳ ಮೇಲಾಟಗಳುಉಪಖಂಡದ ಚರಿತ್ರೆಯ ದಿಕ್ಕನ್ನೇ ಬದಲಿಸಿದವು. ಅಂಗೀರಸ ಕುಲದ ಕವಿ ಪುರೋಹಿತರುಗಳು ದೇವತೆಗಳ ಪರವಾಗಿಯೂ ಭಾರ್ಗವ ಕುಲದವರು ಅಸುರರ ಪರವಾಗಿಯೂ ನಿಂತು ಎದುರಾ ಬದುರಾದ ಮಹಾ ಕಥನಗಳನ್ನು ಕಟ್ಟಿದರು. ಈ ಎರಡು ಕಥನಗಳು ಮುಂದೆ ಉಪಖಂಡವನ್ನು ಎರಡು ಭಾಗವನ್ನಾಗಿಸಿದವು. ಕಥನಗಳು ಎರಡು ಪ್ರಮೇಯಗಳಾಗಿ ಇಂದಿಗೂ ನಮ್ಮನ್ನು ಕಂಗೆಡಿಸಿ ಕೂತಿವೆ.

ವಾಯುವ್ಯ ಭಾರತಕ್ಕೆ ತುಸು ಅಪರಿಚಿತವಾಗಿದ್ದ ಸಿಂಹದ ಪ್ರಸ್ತಾಪ 14 ಕಡೆ ಇದೆ. ಅದರಲ್ಲಿ 7 ಪ್ರಸ್ತಾಪಗಳು ಹೊಸ ಮಂಡಲಗಳಲ್ಲೇ ಇದೆ. ಕುರಿ ಮೇಕೆಗಳ ಪ್ರಸ್ತಾಪವೂ ಅಷ್ಟಕ್ಕಷ್ಟೆ. ಆಸಕ್ತಿಯ ವಿಚಾರವೆಂದರೆ ಹುಲಿಯ ಚಿತ್ರಗಳಿರುವ ಟೆರ್ರಾಕೋಟ ಮುದ್ರೆಗಳು ಅಪಾರ ಪ್ರಮಾಣದಲ್ಲಿ ಸಿಂಧೂ ಕೊಳ್ಳದ ನಾಗರಿಕತೆಯುದ್ದಕ್ಕೂ ದೊರಕುತ್ತವೆ. ಆದರೆ ಇಡೀ ಋಗ್ವೇದದಾದ್ಯಂತ ಎಲ್ಲೂ ಕೂಡ ಹುಲಿಯ ಪ್ರಸ್ತಾಪವೇ ಇಲ್ಲ. ಆರ್ಯರು ಹಾದು ಬಂದ ಮಾರ್ಗಗಳಲ್ಲಿ ಹುಲಿಗಳ ವಾಸಸ್ಥಾನವಿರಲಿಲ್ಲವೆಂದು ಕಾಣುತ್ತದೆ.

ಆರ್ಯನ್ನರ ಪ್ರಧಾನ ತಳಿಯಾದ ಆರ್1ಎ1 ಎಂಬ ಗುಂಪು ಹೇಗೆ ಪ್ರಸರಣಗೊಂಡಿದೆ? ಯಾವಾಗ ಪಸರಣಗೊಂಡಿದೆ? ಅದರ ಸಾಂದ್ರತೆ ಈಗ ಎಲ್ಲಿದೆ? ಯುರೇಶಿಯಾದ ದೇಶಗಳಲ್ಲಿ ದಟ್ಟವಾಗಿರುವ ಈ ಗುಂಪು ನಿಧಾನಕ್ಕೆ ತೆಳುವಾಗುತ್ತಾ ಸಾಗುತ್ತದೆ. ನಮ್ಮ ಸಿಂಧೂ ಬಯಲುಗಳಲ್ಲಿ ದಟ್ಟವಾಗಿರುವಂತೆ ಕಾಣುವ ಇದು ದಕ್ಷಿಣಕ್ಕೆ ಬರಬರುತ್ತಾ ತೆಳುವಾಗಲು ಕಾರಣವೇನು? ಈ ಎಲ್ಲ ಸಂಗತಿಗಳನ್ನು ಡೇವಿಡ್ ರೈಖ್ ಸೇರಿದಂತೆ ಅನೇಕ ತಳಿ ವಿಜ್ಞಾನಿಗಳು ನಿಖರವಾಗಿ ವಿವರಿಸಿದ್ದಾರೆ.

ಗಡಿಗಳ ಹಂಗಿಲ್ಲದೆ ಚಲಿಸುತ್ತಿದ್ದ ಜನರ ಗುಂಪುಗಳನ್ನು ದೇಶ, ರಾಷ್ಟ್ರ ಎಂಬ ಚೌಕಟ್ಟಿನಲ್ಲಿ ಹಿಡಿದು ಕೂರಿಸುವುದೇ ಅಪರಾಧ. ಡೇವಿಡ್ ಮೆಕಾಲ್ಪಿನ್ ಎಂಬ ಭಾಷಾಶಾಸ್ತ್ರಜ್ಞನು ತನ್ನ ಪ್ರೋಟೊ- ಎಲಾಮೊ- ದ್ರಾವಿಡಿಯನ್; ದ ಎವಿಡೆನ್ಸ್ ಆ್ಯಂಡ್ ಇಟ್ಸ್ ಇಂಪ್ಲಿಕೇಶನ್ಸ್ ಎಂಬ ಕೃತಿಯಲ್ಲಿ ದ್ರಾವಿಡ ಭಾಷಿಕರು ಏಳೆಂಟು ಸಾವಿರ ವರ್ಷಗಳ ಹಿಂದೆ ಪಶ್ಚಿಮ ಇರಾನಿನ ತಪ್ಪಲು ಪ್ರದೇಶಗಳಾದ ಝಾಗ್ರೋಸ್ ಬೆಟ್ಟಗಳವರೆಗೆ ನೆಲೆಸಿದ್ದರು ಎಂದು ದಾಖಲೆಗಳ ಮೂಲಕ ವಿವರಿಸುತ್ತಾರೆ. ನಾಗರಿಕತೆಗಳು ಒಂದಕ್ಕೊಂದು ಕೊಟ್ಟು ಕೊಂಡು ಬೆಳೆದಿವೆ.

ಋಗ್ವೇದವು ಪ್ರಸ್ತಾಪಿಸುವ ದಾಸರು, ಪಣಿಗಳು ಉಪಖಂಡದ ಆಚೆ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ನೆಲೆಸಿದ್ದವರು ಎಂದಾಗುತ್ತದೆ. ತಳಿವಿಜ್ಞಾನ, ಪುರಾತತ್ವಶಾಸ್ತ್ರ, ಇತಿಹಾಸವನ್ನು ಕುತೂಹಲದಿಂದ ಅಧ್ಯಯನ ಮಾಡುವವರು ರಾಹುಲ್ ಸಾಂಕೃತ್ಯಾಯನ ಮುಂತಾದವರ ಫಿಕ್ಷನ್ ಮಾದರಿಯ ಬರಹಗಳಿಂದ ಹೊರಬಂದು ವೈಜ್ಞಾನಿಕವಾಗಿ ಸತ್ಯಗಳನ್ನು ಹುಡುಕಬೇಕಾಗಿದೆ. ಇಲ್ಲದೆ ಹೋದರೆ ದಾಸರು, ದಸ್ಯುಗಳು, ಪಣಿಗಳು ಹಾಗೂ ವೈದಿಕ ಆರ್ಯ ಬುಡಕಟ್ಟುಗಳ ನಡುವಿನ ಸಂಘರ್ಷಗಳು ಉಪಖಂಡದ ನೆಲದಲ್ಲಿ ನಡೆದಿವೆಯೆಂದು ತಪ್ಪು ತಿಳುವಳಿಕೆಗೆ ಬರಲು ಸಾಧ್ಯವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top