-

ಹೆಣ್ಣನ್ನು ಸುತ್ತಿಕೊಂಡ ಆತ್ಮವಂಚನೆ ಮತ್ತು ಲೋಕವಂಚನೆಗಳ ಪರಿವೇಷ

-

ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26ರಂದು ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್.ಡಿ. ‘ಸ್ತ್ರೀಮತವನುತ್ತರಿಸಲಾಗದೆ’ (ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು), ‘ಉರಿಚಮ್ಮಾಳಿಗೆ’( ಡಿ.ಆರ್.ನಾಗರಾಜ್ ಅವರ ದಿ ಫ್ಲೇಮಿಂಗ್ ಫೀಟ್ ಕೃತಿಯ ಅನುವಾದ), ‘ವಚನ ಪ್ರವೇಶ’ (ಸಂಪಾದನೆ), ‘ನಡುವೆ ಸುಳಿವಾತ್ಮ’, ‘ಭಾರತದ ಬಂಗಾರ ಪಿ.ಟಿ.ಉಷಾ’ ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸಕ್ತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕೆ.ಇಂದಿರಾ ಪ್ರಶಸ್ತಿ, ಇನ್‌ಫೋಸಿಸ್ ಪ್ರಶಸ್ತಿ, ಜಿಎಸ್‌ಎಸ್ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಇಂಥದ್ದು ನಡೆಯದೇ ಇದ್ದರೆ ಆಶ್ಚರ್ಯ ಪಡಬೇಕಲ್ಲವೇ ಎಂದಳು ಗೆಳತಿ. ನಿಜ, ಆದರೆ ಇದಕ್ಕೆ ಕೊನೆಯೇ ಇಲ್ಲವೆಂದರೆ...ಈ ಪ್ರಶ್ನೆ, ಉದ್ಗಾರ, ವಿಷಾದ ಎಲ್ಲ ಕಾಲದ ಹೆಣ್ಣುಮಕ್ಕಳಲ್ಲೂ ಇದ್ದೇ ಇರಬೇಕು ಮತ್ತು ಇದೆ. ಸಾಹಿತ್ಯದಲ್ಲಿ ನಾವು ಕಾಲಾತೀತ ಎನ್ನುವುದನ್ನು ಅಪ್ಪಟ ಕಲಾಪಠ್ಯದ ಬಗ್ಗೆ ಬಲು ಹೆಮ್ಮೆಯಿಂದ, ಪ್ರೀತಿಯಿಂದ ಹೇಳಿಕೊಳ್ಳುತ್ತೇವೆ. ಆದರೆ ಹೆಣ್ಣಿನ ಮಟ್ಟಿಗೆ ಇಂಥ ದುರಂತ ವಾಸ್ತವಗಳು ಕಾಲಾತೀತವಾಗುವುದು ಎಂದರೆ ಏನರ್ಥ? ಏನೂ ಏನೂ ಬದಲಾಗಿಯೇ ಇಲ್ಲವೆಂದೆ? ಸಾವು ಬದುಕಿನ ಪ್ರಶ್ನೆಯೆಂಬಂತೆ ಹೆಣ್ಣು ನಡೆಸುತ್ತಲೇ ಇರುವ ಹೋರಾಟ, ಅದಕ್ಕೆ ಗಂಡು ಕೊಟ್ಟ, ಕೊಡುತ್ತಿರುವ ಒಪ್ಪಿತ, ಅರೆ ಒಪ್ಪಿತ, ಜಾಣ ಕುರುಡಿನ ಸಹಕಾರ, ಕಾನೂನಿನ ಸೋಗು ..ಈ ಎಲ್ಲದರ ಆಚೆಗೂ ಇದೇ ಉಳಿಯುವ ಅಂತಿಮ ವಾಸ್ತವ ಎಂದಾದರೆ ಇದೆಲ್ಲವನ್ನೂ ಎದುರಿಸಿಯೂ ಹೆಣ್ಣು ಉಳಿಸಿಕೊಂಡಿರುವ ಜೀವ ಜೀವನ ಪ್ರೀತಿಯನ್ನು ಏನೆಂದು ಕರೆಯಬೇಕು?

  ಹೆಣ್ಣು, ಹೆಣ್ಣಿನ ದೇಹದ ಬಗ್ಗೆ ಏನಿದ್ದೀತು ಗಂಡಿನ ಮನಸ್ಸಿನಲ್ಲಿ? ನಾಡು ಕೊಂಡಾಡುವ, ಭಾರತದ ಬಹುದೊಡ್ಡ ಲೇಖಕನೊಬ್ಬ, ನಾಡಿನ ಪ್ರಖ್ಯಾತ ಮಹಿಳೆಯೊಬ್ಬರ ಬಗ್ಗೆ ಆಡಿದಮಾತುಗಳನ್ನು ನೆನೆಸಿಕೊಂಡರೆ ಮೈಮೇಲೆ ಮುಳ್ಳುಗಳೇಳುತ್ತವೆ. ಪುರುಷಮೃಗ ಎನ್ನುವುದೂ ಆತನ ವ್ಯಕ್ತಿತ್ವದ ವಿಕಾರವನ್ನು ಸರಿಯಾಗಿ ಹೇಳಲಾರದು. ಆಕೆ ಬಿಡಿ gate way of india. ಯಾರು ಬೇಕಾದರೂ ಹೋಗಬಹುದು ಎಂದು.ಒಂದು ಘಳಿಗೆ ಆತ ಹೇಳುತ್ತಿರುವುದರ ಅರ್ಥವೇ ನನಗಾಗಲಿಲ್ಲ. ಅರ್ಥವಾದ ಮೇಲೆ ಆತ ಮನುಷ್ಯನಲ್ಲ ಅನ್ನುವುದು ಖಾತ್ರಿಯಾಯಿತು. ಈತನ ಹೆಂಡತಿ ಮತ್ತು ಮಕ್ಕಳು ಈತನ ಜೊತೆ ಬದುಕುತ್ತಿರುವುದರ ಬಗೆಗೆ ದುಃಖವಾಯಿತು ನನಗೆ. ಆದರೆ ಆ ಮೃಗವನ್ನು ಏನು ಮಾಡಲೂ ಸಾಧ್ಯವಿಲ್ಲವಲ್ಲ ನಮಗೆ. ನನಗೆ ಇನ್ನೂ ಮುಂದುವರಿದು ಅನ್ನಿಸುತ್ತದೆ, ಇದನ್ನು ಸಾರ್ವಜನಿಕಗೊಳಿಸಿದರೆ ಆತನಲ್ಲ, ಆಕೆಯೇ ನನ್ನ ಮೇಲೆ ಕೇಸ್ ಹಾಕಬಹುದೇನೋ ಎಂದು! ಇದನ್ನಾದರೂ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ನಾವು ಅರ್ಥ ಮಾಡಿಕೊಳ್ಳಬೇಕಾಗಿರುವ ಸತ್ಯ ಇದೇ. ಸಾರ್ವಜನಿಕಗೊಳಿಸುವುದು, ಗೊಳಿಸದೇ ಇರುವುದು ವಿಷಯವಲ್ಲ, ಇಂಥದ್ದು ನೂರು ಯಾಕೆ ಲಕ್ಷ ಉದಾಹರಣೆಗಳನ್ನು ಎಲ್ಲ ಕ್ಷೇತ್ರಗಳಿಂದಲೂ ಕೊಡಬಹುದು. ಜೈಲಿನಲ್ಲಿರುವ ಕಾವಿಧಾರಿಯ ಪ್ರಸಂಗ ಮಠ ವ್ಯವಸ್ಥೆಯ ಬಗೆಗೆ ಎತ್ತುವುದಕ್ಕಿಂತ ಗಂಭೀರವಾದ ಪ್ರಶ್ನೆಗಳನ್ನು ಹೆಣ್ಣಿಗೆ ಸಂಬಂಧಪಟ್ಟಂತೆ ನಮ್ಮೆದುರಿಗೆ ತರುತ್ತಿದೆ. ಧರ್ಮ ಮತ್ತು ಪ್ರಭುತ್ವಗಳ ಅನೈತಿಕ ಸಂಬಂಧ ಇಂದು ಇನ್ನೂ ಬಲಿಷ್ಠವಾಗಿದೆ. ಅದರೊಂದಿಗೆ ಪ್ರಗತಿ ಪರತೆಯ ಸೋಗೂ ಸೇರಿ ಬಿಟ್ಟರೆ, ಅಲ್ಲಿಗೆ ವೃತ್ತ ಪೂರ್ಣವಾದಂತೆಯೇ. ಅರಿಯದ ವಯಸ್ಸಿನಲ್ಲಿ ಅಥವಾ ಯೌವನದ ತುದಿಯಲ್ಲಿರುವಾಗಲೇ ಅವರನ್ನು ಜಿತೇಂದ್ರಿಯರಾಗುವ ವ್ರತವಲ್ಲದ ವ್ರತಕ್ಕೆ ಒಡ್ಡುವಾಗಲೇ ಅವರಿಗೆ ಅದು ವ್ರತವೇ ಅಲ್ಲವೆನ್ನುವ ಅರಿವೂ ಇರುತ್ತದೆ. ಯಾವ ಲಂಪಟ, ಕಾಮಿಗಳಿಗಿಂತ ಹೆಚ್ಚಿನ ಸೌಲಭ್ಯತಮಗೆ ಸಿಗುತ್ತದೆ ಎನ್ನುವುದು ಅವರಿಗೆ ಗೊತ್ತೇ ಇರುತ್ತದೆ ಎನ್ನುವುದು ಒಂದು ವಿಕಟ ಸತ್ಯ. ಮಠ ವ್ಯವಸ್ಥೆಯು ಪ್ರಭುತ್ವದ ಇನ್ನೊಂದು ಕ್ಷೇತ್ರವೇ ಎಂದ ಮೇಲೆ ಹೆಣ್ಣಿನ ಶತ್ರು ಇನ್ನೂ ಬಲಿಷ್ಠವಾದಂತೆಯೇ. ‘ಕಾಮಿ ಬೆಕ್ಕು’ಗಳ ಬಿಡಾರಗಳಾಗಿವೆ ಅವು. ಹೆಣ್ಣನ್ನು ಉಂಡು ಬಿಸಾಡುವ ಕಳ್ಳದಾರಿ, ದಾರಿ ಮಾತ್ರವಲ್ಲ ಅದು ಅವರ ಹಕ್ಕು ಎನ್ನುವಂತೆ ಸ್ಥಾಪಿತವಾಗಿದೆ. ಇದರ ಎದುರಿಗೆ ಹೆಣ್ಣಿನ ಸಹಾಯಕ್ಕೆ ಬರಬಹುದಾದದ್ದು ಯಾರು ಮತ್ತು ಯಾವುದು? ಪ್ರಭುತ್ವ? ಕಾನೂನು? ಜನಸಮುದಾಯ? ಮಹಿಳಾ ಸಂಘಟನೆಗಳು? ಈ ಎಲ್ಲವನ್ನೂ ಒಟ್ಟಾಗಿಯೇ ಬಳಸಲಾಗುತ್ತಿದೆ. ಆದರೂ ನ್ಯಾಯ ಸಿಗಬಹುದು ಎನ್ನುವ ಖಾತ್ರಿಯಿಲ್ಲ. ಇಷ್ಟಕ್ಕೂ ಈ ಸಂದರ್ಭದಲ್ಲಿ ನ್ಯಾಯವೆನ್ನುವುದರ ಸ್ವರೂಪವಾದರೂ ಏನು ಹೆಣ್ಣಿನ ವಿಷಯದಲ್ಲಿ ಎನ್ನುವ ಪ್ರಶ್ನೆಯೂ ನಮ್ಮೆದುರಿಗಿದೆ. ಒಲೆ ಬದಲಾದರೂ ಉರಿ ಬದಲಾಗದ ಕಟು ವಾಸ್ತವದಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳಿಗೆ ಕೊಡಬಹುದಾದ, ಅವರ ತಂದೆ ತಾಯಿಯರಿಗೆ ಕೊಡಬಹುದಾದ ಹಣವನ್ನು ನ್ಯಾಯವೆಂದು ಕರೆದು ಸಮಾಧಾನದಿಂದ ಇರಬಹುದೆ?ಹೆಣ್ಣು ಇದನ್ನು ಬೇಕಾಗಿ ಒಪ್ಪಿರಬಹುದು, ಬೇಡವಾಗಿ ಸಹಿಸಿಕೊಂಡಿರಬಹುದು. ಜೆಂಡರ್ ನ ಬಗೆಗೆ ಏನೆಷ್ಟೆಲ್ಲ ಸಿದ್ಧಾಂತಗಳನ್ನು ಚರ್ಚೆಗಳನ್ನು ಮಾಡುತ್ತಲೇ ಇರುವಾಗಲೂ ಬಹುತೇಕ ಸನ್ನಿವೇಶಗಳಲ್ಲಿ ಗಂಡು ಪಡೆಯುವ ಯಶಸ್ಸನ್ನು (ಯಶಸ್ಸೆಂದು ಕರೆಯಬಹುದೇ ಇದನ್ನು? ಅಥವಾ ತನ್ನ ಆಸೆಯನ್ನು ಗಂಡು ದಕ್ಕಿಸಿಕೊಳ್ಳುವುದನ್ನು ಗಂಡಿನ ಶೀಲಹೀನತೆ, ಬರ್ಬರತೆ ಎಂದು ಸ್ಥಾಪಿಸುವುದರಲ್ಲಿ ಸೋತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು.

ಇದು ಒಂದು ಅಂಶವಾದರೆ, ಮತ್ತೊಂದು ಅಂಶ, ಇದು ಬಲು ಸಂಕೀರ್ಣವಾದುದು. ತನ್ನ ದೇಹದ ಬಗ್ಗೆ ಹೆಣ್ಣಿಗೇ ಇರುವ ಮಿಥ್ಯೆ, ಆಮಿಷಗಳು, ಅದನ್ನು ಬಂಡವಾಳವಾಗಿ ಹೂಡಿ ಪಡೆಯಬಹುದಾದ ಲಾಭಗಳು, ಅದರಲ್ಲಿ ಏನು ತಪ್ಪು ಎನ್ನುವ ಮನೋಭಾವ, ಗಂಡು ಮತ್ತು ವ್ಯವಸ್ಥೆ ಅದಕ್ಕೆ ಕೊಡುವ ಸಹಕಾರ, ಇದೆಲ್ಲದರ ಜೊತೆಗೆ ಒಂದು ವೇಳೆ ಬಹಿರಂಗವಾದರೆ, ಗಂಡಿನ ದೌರ್ಜನ್ಯ ಎಂದು ಹೇಳಲು ಇರುವ ಅವಕಾಶ, ಬಯಸಿದ್ದು ಸಿಗದಿದ್ದಾಗ ಲೋಕ ಅದನ್ನು ನಿರಾಕರಿಸುತ್ತಿರುವಾಗ ಒಳದಾರಿಯಲ್ಲೋ, ಹಿಂಬಾಗಿಲ ಮೂಲಕವೋ ಪಡೆದರೆ ತಪ್ಪಿಲ್ಲ ಎನ್ನುವ ಸಮರ್ಥನೆ ಇದೆಲ್ಲವೂ ಸೇರಿ ಹೆಣ್ಣಿನ ಪರಿಸ್ಥಿತಿಯನ್ನು ಬಿಡಿಸಲೇ ಕಷ್ಟವಾದ ರಚನೆಯಾಗಿಸಿವೆ. 

ಇದೆಲ್ಲದರ ಆತ್ಯಂತಿಕ ಲಾಭ ಸಿಗುತ್ತಿರುವುದು ಗಂಡಿಗೆ ಎನ್ನುವುದನ್ನು ಹೇಳುವ ಅಗತ್ಯವೇ ಇಲ್ಲ. ಹಾಗಿದ್ದರೆ ಹೆಣ್ಣು ‘ಬಲಿಪಶು’ವಾಗುತ್ತಿರುವ ಸ್ಥಿತಿಯ ಹೊಣೆಗಾರಿಕೆಯನ್ನು ಯಾರು ಹೊರಬೇಕು? ದಕ್ಕಿಸಿಕೊಂಡು ಪಾರಾಗುವ ದಾರಿಯನ್ನೂ ನಿರ್ಮಿಸಿಕೊಂಡಿರುವ ಸವಲತ್ತಿನ ಗಂಡಿನ ಮೇಲೆ ಎನ್ನುವುದು ಸಹಜ. 

ಈ ಇಂಥ ವಿಷಮ ಸನ್ನಿವೇಶದಲ್ಲಿ ಹೆಣ್ಣಿನ ಮುಂದಿರುವ ದಾರಿ/ದಾರಿಗಳು ಯಾವುವು? ದೇಹದ ಮೇಲಾಗುವ ಅತ್ಯಾಚಾರಗಳ ಬಗೆಗೆ ಮಾತ್ರವಲ್ಲ ಮನಸ್ಸು ಮತ್ತು ಜೀವನದ ಮೇಲಾಗುವ ಅತ್ಯಾಚಾರಗಳನ್ನು ಹೇಗೆ ಎದುರಿಸುವುದು? ನನ್ನ ಒಪ್ಪಿಗೆಯಿಲ್ಲದೆ, ನನ್ನ ಪ್ರತಿರೋಧದ ನಂತರವೂ ದೇಹದ ಮೇಲಾಗುವ ಆಕ್ರಮಣವನ್ನು ಅದೊಂದು ಅಪಘಾತವೆಂದು, ಬದುಕಿನಲ್ಲಿ ನಡೆಯುವ ಅನೇಕ ಅಹಿತಕರ ಸಂಗತಿಗಳಲ್ಲಿ ಒಂದು ಎಂದು ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಒಂದು ಪ್ರಾಯೋಗಿಕವಾದ ದಾರಿ. ಕೇಳಲು, ಅಳವಡಿಸಿಕೊಳ್ಳಲು ಇದು ಅಹಿತವಾಗಿರಬಹುದು, ಆದರೆ ಬೇರೆ ದಾರಿಯಿಲ್ಲ.ನನ್ನನ್ನು ನಾನು ಮತ್ತೆ ಬದುಕಿಗೆ ವಾಪಸ್ ತಂದುಕೊಳ್ಳಲು ಇರುವ ಶಕ್ತವಾದ ದಾರಿ ಇದು. ಇದು ಹೆಣ್ಣಿನ ಮನೋಧೀರತೆಯನ್ನು ಲೋಕಕ್ಕೆ ಸಾರಲು ಇರುವ ದಾರಿಯೂ ಹೌದು. ಗಂಡಿನ ದೌರ್ಬಲ್ಯ, ವಿಕಾರ, ಅಕಾರಣ ಪುರುಷಾಹಂಕಾರ. ಅದಕ್ಕೆ ರಹದಾರಿ ಪತ್ರ ನೀಡಿರುವ ಗಂಡಾಳಿಕೆಯ ಅಮಾನವೀಯತೆ ಎಲ್ಲದಕ್ಕೂ ನೀಡಬಹುದಾದ ಹೆಣ್ಣಿನ ಉತ್ತರವಾಗಿ ಇದನ್ನು ಬೆಳೆಸಬೇಕು. ಆದರೆ ದುರಂತ ಇಷ್ಟಕ್ಕೆ ಮುಗಿಯುವುದಿಲ್ಲ. ಹೆಣ್ಣಿನ ಈ ಧೋರಣೆಯು ಅವರಿಗೆ ಇನ್ನೂ ಹೆಚ್ಚಿನ ಭಂಡತನವನ್ನು ಕೊಡಬಹುದು. ಅವಳು ಇದಕ್ಕೆ ಲೆಕ್ಕಿಸುವುದಿಲ್ಲ ಎನ್ನುವುದು ಅವರಿಗೆ ವರವಾಗಿಯೇ ಬಿಡಬಹುದು. ಪೆಪ್ಪರ್ ಸ್ಪ್ರೇ, ವಿಶಿಷ್ಟವಾಗಿ ರೂಪಿಸಲ್ಪಟ್ಟ ಪಿನ್ನುಗಳು, ಸಹಾಯವಾಣಿ ಆ್ಯಪ್‌ಗಳು ಈ ಎಲ್ಲವೂ ಎಷ್ಟರಮಟ್ಟಿಗೆ ಸಹಾಯ ಮಾಡಬಲ್ಲವು? ಅವುಗಳನ್ನೂ ‘ಪುರುಷಸ್ನೇಹಿ’ಗಳಾಗಿ ಇವರು ಬದಲಿಸುವುದರಲ್ಲಿ ಶಕ್ತರು.                                                 

ಈ ಎಲ್ಲವೂ ಇದ್ದೂ ಹೆಣ್ಣು ದೇಹದ ಮೇಲಿನ ಆಕ್ರಮಣಗಳನ್ನು ಎದುರಾಗಲು ಅದನ್ನೊಂದು ಅಪಘಾತ, ಇಂದಲ್ಲ ನಾಳೆ ಮಾಯುವ ಗಾಯ ಎಂದು ತಿಳಿಯುವುದು ಅವಳ ಮನಸ್ಸಿನ ಘಾಸಿಯನ್ನು ದಾಟಲು ಇರುವ ಪರಿಹಾರವೆಂದೇ ಸದ್ಯದ ಪರಿಸ್ಥಿತಿಯಲ್ಲಂತೂ ಕಾಣಿಸುತ್ತದೆ. ವ್ಯಕ್ತಿತ್ವದ ಮೇಲಿನ ಆಕ್ರಮಣಗಳನ್ನು ಎದುರಿಸುವ ಹಲವು ದಾರಿಗಳನ್ನು ನಾವು ಪ್ರಯೋಗಕ್ಕೂ ತಂದುಕೊಳ್ಳುತ್ತಿದ್ದೇವೆ. ಆದರೆ ಅದರ ಬಗೆಗೆ ನಾವು ಇನ್ನೂ ಹೆಚ್ಚು ಗಂಭೀರವಾಗ ಬೇಕು ಮತ್ತು ಇನ್ನೂ ಹೆಚ್ಚಿನ ಬದ್ಧತೆಯನ್ನೂ ಅದು ಅಪೇಕ್ಷಿಸುತ್ತದೆ. ವಿಚ್ಚೇದನವೊಂದೇ ಇದಕ್ಕೆ ಪರಿಹಾರವಲ್ಲ. ಆ ವ್ಯವಸ್ಥೆಯ ಒಳಗಿದ್ದೇ ಅದನ್ನು ನಿಭಾಯಿಸುವ ಮನಸ್ಥಿತಿಯನ್ನು ನಾವು ರೂಢಿಸಿಕೊಳ್ಳಬೇಕು. ಭಿನ್ನವಿದ್ದೂ ಬೆರೆಯಬಹುದು ಎನ್ನುವ ನೆಲೆಯನ್ನು ಅದರ ತಾತ್ವಿಕ ಮತ್ತು ಪ್ರಾಯೋಗಿಕ ನೆಲೆಯಲ್ಲಿ ನಾವೂ ಜಾರಿಗೆ ತಂದುಕೊಳ್ಳುತ್ತಾ ಗಂಡನ್ನೂ ಆ ಪ್ರಕ್ರಿಯೆಯ ಭಾಗವಾಗಿಸಿಕೊಳ್ಳಬೇಕು. ಹೆಣ್ಣಿನ ಶಕ್ತಿ ವಿಶೇಷಗಳನ್ನೆಲ್ಲ ಅದರ ಆತ್ಯಂತಿಕ ನೆಲೆಯಲ್ಲಿ ಜಾರಿಗೆ ತರಬೇಕು. ದುರ್ಬಲರ ಗೊಣಗುವಿಕೆಯಂತೆ, ಏನೋ ನೋಡೋಣ ಎನ್ನುವ ಅಪನಂಬಿಕೆಯಲ್ಲಲ್ಲದೆ ಇದು ಸಾಧ್ಯ ಎಂದು ಮತ್ತೆ ಮುಂದುವರಿಯುವುದೊಂದೇ ನಮಗಿರುವ ದಾರಿ. ಈ ಮಾತುಗಳು ಹುಸಿ ಭಾವುಕತೆಯಂತೆ, ಅತಿ ಆಶಾವಾದದಂತೆ ಪ್ರಸ್ತುತ ಸಂದರ್ಭದ ದುರಂತದ ಹಿನ್ನೆಲೆಯಲ್ಲಿ ಕಾಣಿಸುತ್ತವೆ . ಆದರೆ ಚರಿತ್ರೆಯುದ್ದಕ್ಕೂ ನಾವು ಹೆಣ್ಣುಮಕ್ಕಳು ನಡೆದು ಬಂದ ದಾರಿ ಇದೇ ಅಲ್ಲವೆ. ಜಾಹೀರಾತಿನಿಂದ ಹಿಡಿದು ಪ್ರವಾಸೋದ್ಯಮದ ತನಕ ಎಲ್ಲಿಂದ ಎಲ್ಲಿಗೆ ಹೋದರೂ ಹೆಣ್ಣನ್ನು ಲಾಭದ ಸರಕಾಗಿಸಿಕೊಳ್ಳುವಲ್ಲಿ ಅವರು ಪಡೆದಿರುವ ಹಿಡಿತ ಬಿಡುಗಡೆಯ ದಾರಿಯಲ್ಲ, ಅದು ಇನ್ನೂ ಹೆಚ್ಚಿನ ಸರಕೀಕರಣಕ್ಕೆ ಒಳಗಾಗುವ ಹುನ್ನಾರ ಎನ್ನುವುದನ್ನು ಹೆಣ್ಣು ಅಂತರ್ಗತ ಮಾಡಿಕೊಳ್ಳುವ ತನಕ ಈ ಪ್ರಯಾಣದಲ್ಲಿ ಸ್ಪಷ್ಟವಾದ ಮೈಲಿಗಲ್ಲನ್ನು ಸ್ಥಾಪಿಸುವುದು ಕಠಿಣ.                                                                         

ಸೂಳೆ ಸಂಕವ್ವೆಗಿದ್ದ ಸ್ಪಷ್ಟತೆ ಇದಕ್ಕೆ ನಾವು ಕೊಟ್ಟುಕೊಳ್ಳಬಹುದಾದ ಅತ್ಯುತ್ತಮ ಉದಾಹರಣೆ. ಅನೈತಿಕತೆಯ ವ್ಯಾಖ್ಯಾನ ಎಂದು ಕರೆಯಲಾಗುತ್ತಿದ್ದುದನ್ನು ಘನತೆಯ ವೃತ್ತಿಯಾಗಿ ಮಾತ್ರವಲ್ಲ ಭಕ್ತಿಯ ಘನ ಮಾದರಿಯಾಗಿಯೂ ಸ್ಥಾಪಿಸುವುದು ಅವಳಿಗೆ ಸಾಧ್ಯವಾಯಿತು. ಇದನ್ನೂ ಮೀರಿದ ನೆಲೆಯಲ್ಲಿ ಆಕೆ ಅದನ್ನು ಗಂಡಾಳಿಕೆಯ ಆತ್ಮಸಾಕ್ಷಿಯನ್ನು ತಿವಿದು ಎಚ್ಚರಿಸುವ ಪ್ರತಿರೋಧದ ಮಾದರಿಯಾಗಿಯೂ ಕಟ್ಟಿದಳು. ನಿರ್ಲಜ್ಜೇಶ್ವರಾ ಎನ್ನುವ ಅಂಕಿತ ನಾಮದಲ್ಲಿಯೇ ಆಕೆ ಇದನ್ನು ಸಾಧಿಸುತ್ತಾಳೆ. ಯಾವ ಕಾರಣಕ್ಕೂ ತಾನು ‘ಬಳಕೆಯ ವಸ್ತು’ವಲ್ಲ ಎನ್ನುವುದನ್ನು ಘೋಷಿಸಿ ಆಕೆ ಶೋಷಣೆಯ, ಅನಗತ್ಯ ಅವಮಾನ ಮತ್ತು ಹೀಯಾಳಿಕೆಯ ದುರಂತದಿಂದ ಪಾರಾಗುತ್ತಾಳೆ. ಆಕೆ ಉಳಿಸಿಕೊಂಡ ಆತ್ಮಾಭಿಮಾನ ನಮಗೆ ದಾರಿದೀಪ. ಇತ್ತೀಚಿನ ಮತ್ತೊಂದು ಪ್ರಸಂಗದಲ್ಲಿ ವಿದ್ಯಾರ್ಥಿನಿಯನ್ನು ಹನಿಟ್ರಾಪ್ ಗಾಗಿ ಬಳಸಿಕೊಂಡದ್ದನ್ನು ನೋಡಿದರೆ, ಹೆಣ್ಣನ್ನು ಟ್ರಾಪ್ ಮಾಡಲು ಅವರು ಏನೆಲ್ಲ ಆಮಿಷಗಳನ್ನು ಒಡ್ಡಿರಬಹುದು ಮತ್ತು ಅದಕ್ಕೆ ಈ ಹುಡುಗಿ ಬಲಿಯಾಗಿಬಿಟ್ಟಳು ಎಂದು ಮಾತ್ರ ಹೇಳಿ ಬಿಟ್ಟರೆ ಸಾಲದು. ಬಲೆ ಬೀಸುವವರ ಹುನ್ನಾರಗಳು ನಮಗೆ ಎಂದಿನಿಂದಲೂ ಪರಿಚಿತ. ಆದರೆ ಆಮಿಷಗಳಿಗೆ ಒಳಗಾಗದಿರುವ ಮನಸ್ಥಿತಿಯನ್ನು ಹೆಣ್ಣು ಮಾತ್ರ ಬೆಳೆಸಿಕೊಳ್ಳಬೇಕು ಎನ್ನುವುದೂ ಅಷ್ಟೇ ಅರ್ಥಹೀನ. ಸಂಕವ್ವೆಯ ಮಾತನ್ನು ಕೇಳಿ, ಆತ್ಮಸಾಕ್ಷಿಯನ್ನು ಒಮ್ಮೆ ಮುಟ್ಟಿ ನೋಡಿಕೊಳ್ಳಬಲ್ಲ ಮನಸ್ಥಿತಿಯನ್ನು ಹನ್ನೆರಡನೆಯ ಶತಮಾನ ನಿಧಾನವಾಗಿಯಾದರೂ ಬೆಳೆಸಿಕೊಳ್ಳುತ್ತಿತ್ತು. ಕ್ಷಣ ನಿಂತು ಆಕೆಯ ಮಾತನ್ನು ವ್ಯಷ್ಟಿ ಮತ್ತು ಸಮಷ್ಟಿಯ ನೆಲೆಯಲ್ಲಿ ಯೋಚಿಸಬೇಕಾದ ಅನಿವಾರ್ಯತೆಯನ್ನಾದರೂ ಅದು ಗ್ರಹಿಸಿತ್ತು.

ಮಹಿಳಾ ಸಂಕಥನವು ಬಲು ಎಚ್ಚರಿಕೆಯಿಂದಿರಬೇಕಾದ ತುರ್ತು ಇಂದಿನದು. ಒಂದೆಡೆ ಸ್ವಾಯತ್ತತೆಯ ಮಾತು ಮತ್ತು ಆವರಣಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ ಎನ್ನುತ್ತಿರುವಾಗಲೇ ಮತ್ತೊಂದೆಡೆ ಅದನ್ನು ಕೊಚ್ಚಿ ಕೆಡವುವ ಸಂದರ್ಭಗಳು ಹೆಚ್ಚಾಗುತ್ತಲೇ ಇವೆ. ಸನಾತನ ಧರ್ಮದ ಪುನರುತ್ಥಾನದ ಪ್ರಯತ್ನಗಳು ಹೆಣ್ಣನ್ನು ಸೀದಾ ಕ್ರಿಸ್ತಪೂರ್ವಕ್ಕೆ ಒಯ್ಯಲು ತಯಾರಾಗಿ ನಿಂತಿವೆ. ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯ ನಡುವೆ ಯಾವ ವ್ಯಾತ್ಯಾಸವೂ ಇಲ್ಲದಂತ ತಾತ್ವಿಕತೆ ಮತ್ತು ಕಾರ್ಯಮಾದರಿಗಳನ್ನು ಅವು ಗಟ್ಟಿಯಾಗಿ ಕಟ್ಟುತ್ತಿವೆ. 

ಗಂಡಾಳಿಕೆಯು ಮಹಿಳಾ ಸಬಲೀಕರಣ ಮಾಡುತ್ತೇವೆ ಎನ್ನುವ ಸೋಗು, ಅಹಂಕಾರ, ರಾಜಕೀಯ ಮತ್ತು ಸಾಂಸ್ಕೃತಿಕ ಹುನ್ನಾರಗಳ ಆತ್ಮವಂಚನೆ ಮತ್ತು ಲೋಕವಂಚನೆಗಳ ಪರಿವೇಷದಿಂದ ಹೊರಬರಲೇಬೇಕು. ಹೆಣ್ಣು ಕೂಡ ಆತ್ಮವಂಚನೆಯ, ನೆಪಗಳ ದಾರಿಯಿಂದ ನಿರ್ಗಮಿಸಬೇಕು. ತನಗೆ ಬೇಕಾದ್ದನ್ನು ಅಡ್ಡದಾರಿಯಲ್ಲಿ ಪಡೆಯುವುದೂ ಬೇಕು, ಅದಕ್ಕೆ ಗಂಡಾಳಿಕೆಯ ಮೇಲೆ ಆರೋಪ ಹೊರಿಸುವ ಗುರಾಣಿಯೂ ಬೇಕು ಎನ್ನುವ ಮನಸ್ಥಿತಿಯಿಂದ ಅನಿವಾರ್ಯವಾಗಿ ಹೊರಬರಬೇಕು. ಅನಿವಾರ್ಯ ಎಂದು ಹೇಳುತ್ತಿರುವುದು ಏಕೆಂದರೆ, ಗಂಡಾಳಿಕೆ ಬಹುತೇಕ ಸಂದರ್ಭಗಳಲ್ಲಿ ಹೆಣ್ಣಿಗೆ ಉಳಿಸಿರುವ ಪ್ರಾಯೋಗಿಕ ದಾರಿ ಇದೊಂದೇ ಆಗಿರುತ್ತದೆ. ಆದರೆ ವಿಶಾಲಾರ್ಥದಲ್ಲಿ ಮತ್ತು ನಿಜಾರ್ಥದಲ್ಲಿ ಹೆಣ್ಣಿನ ಹೋರಾಟದ ನೈತಿಕತೆಯನ್ನೇ ಇವು ನಾಶ ಮಾಡುತ್ತಾ ಮತ್ತೆ ಹಿಮ್ಮುಖ ಪ್ರಯಾಣಕ್ಕೆ ನಮ್ಮನ್ನು ದೂಡುತ್ತವೆ.

ಗಂಡಾಳಿಕೆಯು ಮಹಿಳಾ ಸಬಲೀಕರಣ ಮಾಡುತ್ತೇವೆ ಎನ್ನುವ ಸೋಗು, ಅಹಂಕಾರ, ರಾಜಕೀಯ ಮತ್ತು ಸಾಂಸ್ಕೃತಿಕ ಹುನ್ನಾರಗಳ ಆತ್ಮವಂಚನೆ ಮತ್ತು ಲೋಕವಂಚನೆಗಳ ಪರಿವೇಷದಿಂದ ಹೊರಬರಲೇಬೇಕು. ಹೆಣ್ಣು ಕೂಡ ಆತ್ಮವಂಚನೆಯ, ನೆಪಗಳ ದಾರಿಯಿಂದ ನಿರ್ಗಮಿಸಬೇಕು. ತನಗೆ ಬೇಕಾದ್ದನ್ನು ಅಡ್ಡದಾರಿಯಲ್ಲಿ ಪಡೆಯುವುದೂ ಬೇಕು, ಅದಕ್ಕೆ ಗಂಡಾಳಿಕೆಯ ಮೇಲೆ ಆರೋಪ ಹೊರಿಸುವ ಗುರಾಣಿಯೂ ಬೇಕು ಎನ್ನುವ ಮನಸ್ಥಿತಿಯಿಂದ ಅನಿವಾರ್ಯವಾಗಿ ಹೊರಬರಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top