-

ಸತ್ಯ ಮತ್ತು ಮಿಥ್ಯೆಗಳ ಸಂಘರ್ಷ ಹಾಗೂ ದುರ್ಬಲವಾಗುತ್ತಿರುವ ಪ್ರಜಾತಂತ್ರ

-

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಕೆಲಸ ಮಾಡಿ ನಿವೃತ್ತರಾದ ಟಿ.ಆರ್. ಭಟ್ ಅವರು ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘದ ನಾಯಕರಾಗಿ, ಬ್ಯಾಂಕ್ ನಿರ್ದೇಶಕರಾಗಿ ಹಾಗೂ ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಅಧಿಕಾರಿಗಳ ಸಂಘದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವರ್ಷಗಳಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಮತ್ತು ರಾಜಕೀಯ ಮತ್ತು ಪ್ರಸಕ್ತ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಲೇಖನಗಳನ್ನು ಮುದ್ರಣ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ಬರೆಯುತ್ತಿದ್ದಾರೆ. ಭಟ್ ಅವರು ಬರೆದ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘದ ಆತ್ಮಕಥನ 'In Search of an identity-25 years of a bank officers' union',ಅಧಿಕಾರಿಗಳ ಸಂಘದಲ್ಲಿನ ಅವರ ಅನುಭವದ ಬರಹಗಳ ಸಂಗ್ರಹ ‘ಸಂಘರ್ಷದಿಂದ ಸಾಮರಸ್ಯದೆಡೆಗೆ’, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಅವರ ಪುಸ್ತಕ ‘ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಸುಧಾರಿಸುವುದು: ಪಾಠಗಳು ಮತ್ತು ಸವಾಲುಗಳು’ (‘Reforming the Indian Public Sector Banks: The Lessons and the Challenges’) ಪುಸ್ತಕಗಳು ಪ್ರಕಟಿತವಾಗಿವೆ. ಭಟ್ ಹಲವಾರು ವರ್ಷಗಳಿಂದ (MRPL), ಕರಾವಳಿ ಕರ್ನಾಟಕದಲ್ಲಿ ವಿಶೇಷ ಆರ್ಥಿಕ ವಲಯದ ಅನುಷ್ಠಾನ ಮತ್ತು ಇತರ ಸಾಮಾಜಿಕ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳ ವಿರುದ್ಧ ನಡೆದಿರುವ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಒಬ್ಬ ಸಂಬಂಧಿಕರ ಮಗನ ಉಪನಯನ ಸಮಾರಂಭದಲ್ಲಿ ಯಜ್ಞೋಪವೀತ ಧಾರಣೆಯಾಗಿ ಗಾಯತ್ರಿ ಮಂತ್ರದ ಉಪದೇಶವಾದ ಬಳಿಕ ಪುರೋಹಿತರು ಹೊಸದಾಗಿ ದೀಕ್ಷೆತೊಟ್ಟ ವಟುವು ಪಾಲಿಸಬೇಕಾದ ಶಿಸ್ತಿನ ಬಗ್ಗೆ ಅವನಿಗೆ ಉಪದೇಶಮಾಡುವುದನ್ನು ಗಮನಿಸಿದೆ. ಸಂಸ್ಕೃತದಲ್ಲಿ ಮಂತ್ರವನ್ನು ಹೇಳಿ ಆ ಬಳಿಕ ಕನ್ನಡದಲ್ಲಿ ಅದರ ಅರ್ಥವನ್ನು ಹೇಳಿದರು. ಅದರಲ್ಲಿ ಒಳಗೊಂಡ ಒಂದು ನಿಯಮ: ‘ಸುಳ್ಳು ಹೇಳಬಾರದು’. ಒಂಭತ್ತು ವರ್ಷದ ವಟುವಿನ ಕಿವಿ ನೆಟ್ಟಗಾಗಿ ಕೇಳಿದ, ‘ಸುಳ್ಳು ಹೇಳಬಾರದೆ?’ ಈ ತನಕ ಅವನು ತನ್ನ ಪಾಠ ಪುಸ್ತಕಗಳಲ್ಲಿ, ಓದಿದ ಪೌರಾಣಿಕ ಕತೆಗಳಲ್ಲಿ, ತನ್ನ ಅಮ್ಮ ಹೇಳಿದ ಕತೆಗಳಲ್ಲಿ ಎಲ್ಲೆಡೆಯೂ ಸತ್ಯವೇ ಶ್ರೇಷ್ಠವೆಂಬ ನೀತಿಯನ್ನು ಕೇಳಿಕೊಂಡಿದ್ದ. ಈಗ ಪುರೋಹಿತರ ಬಾಯಿಂದಲೂ ಆ ವಿಷಯ ಬಂತು. ಅನುಭವದಿಂದ ಪಳಗಿದ ಪುರೋಹಿತರು ನಗುತ್ತಾ ಶಾಸ್ತ್ರ ಹಾಗೆ ಹೇಳುತ್ತದೆ ಎಂದು ಅವನಿಗೆ ಸಮಾಧಾನ ಹೇಳಿದರು.

ಇನ್ನೊಂದು ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಸಹೋದ್ಯೋಗಿಯಾಗಿದ್ದವರು ದೂರವಾಣಿ ಯಲ್ಲಿ ಮಾತನಾಡುತ್ತಾ ದೇಶದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಹೇಳುತ್ತಾ ‘ಲವ್ ಜಿಹಾದ್’ ಮತ್ತು ಮತಾಂತರದ ಮೂಲಕ ಮುಸ್ಲಿಮರು ನಮ್ಮ ಸಮಾಜವನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದರು. ಅವರ ಮಾತನ್ನು ತಡೆದು ಮರುಪ್ರಶ್ನೆ ಹಾಕಿದೆ: ‘ನಿಮ್ಮ ಬಂಧುಬಳಗದವರಲ್ಲಿ ಎಷ್ಟು ಹೆಣ್ಣು ಮಕ್ಕಳು ‘ಲವ್ ಜಿಹಾದಿ’ಗೆ ಬಲಿಯಾಗಿದ್ದಾರೆ? ಒಂದು ವೇಳೆ ಪರಸ್ಪರ ಪ್ರೀತಿಸಿ ಬಾಳ ಸಂಗಾತಿಗಳಾಗಲು ನಿರ್ಧರಿಸಿದರೆ ಅವರು ಪ್ರಾಯಕ್ಕೆ ಬಂದವರಲ್ಲವೇ?’ ಉತ್ತರ ಬರಲಿಲ್ಲ. ವಿಷಯಾಂತರ ಮಾಡಿದರು.

 ಈ ಎರಡು ಘಟನೆಗಳು ಅತ್ಯಂತ ಖಾಸಗಿಯಾದ ಸನ್ನಿವೇಶಗಳು; ಆದರೆ ಅವೆರಡೂ ಭಾರತದ ರಾಷ್ಟ್ರೀಯ ಧ್ಯೇಯವಾದ ‘ಸತ್ಯಮೇವ ಜಯತೆ’ ಎಂಬುದರ ಬಗ್ಗೆ ವ್ಯಕ್ತಿಯ ನೆಲೆಯಲ್ಲಿ ನಾವು ಕಾಣಬಹುದಾದ ವೈರುಧ್ಯಗಳನ್ನು ಬಿಂಬಿಸುತ್ತವೆ. ಈ ವೈರುಧ್ಯ ಇಂದಿನ ದಿನಗಳಲ್ಲಿ ಎದ್ದು ಕಾಣುತ್ತದೆ. ದೇಶದಾದ್ಯಂತ ಪ್ರಚಲಿತವಾದ ಪುರಾಣಗಳಲ್ಲಿ, ಜನಪದ ಕತೆಗಳಲ್ಲಿ, ಜಾತಕ ಕತೆಗಳಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ವಚನಗಳಲ್ಲಿ, ಸ್ವಾತಂತ್ರ ಚಳವಳಿಯಲ್ಲಿ-ಹೀಗೆ ಅನೇಕ ಕಡೆ ಮನುಷ್ಯ ಜೀವನದಲ್ಲಿ ಸತ್ಯದ ಮೌಲ್ಯವನ್ನು ಬಹುತೇಕ ಓದು ಬರಹ ಬಲ್ಲವರೂ, ಅನಕ್ಷರಸ್ಥರೂ ತಿಳಿದು ಮೆಚ್ಚಿಕೊಂಡ ವಿಷಯ, ಸತ್ಯಕ್ಕೆ ಯಾವತ್ತೂ ಜಯವೆ ಎಂಬುದು. ದೇಶದ ಜೀವನಕ್ರಮದ ಅವಿಭಾಜ್ಯ ಮೌಲ್ಯವಾಗಿದ್ದ ‘ಸತ್ಯಮೇವ ಜಯತೆ’, ದೇಶದ ಸ್ವಾತಂತ್ರ್ಯಾನಂತರ ಹೊಸ ರಾಷ್ಟ್ರದ ಧರ್ಮಚಕ್ರ ಮತ್ತು ಮೂರು ಸಿಂಹಗಳ ಲಾಂಛನದ ಜೊತೆಗೆ ಧ್ಯೇಯವಾಕ್ಯವೂ ಆಗಿ 1949ರ ಸಂವಿಧಾನದಲ್ಲಿ ಸೇರಿಕೊಂಡಿತು.

‘ಸತ್ಯಮೇವ ಜಯತೆ’ ಯಾಕೆ ಧ್ಯೇಯವಾಯಿತು?

1918ರಲ್ಲಿ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ ಮದನ ಮೋಹನ ಮಾಳವೀಯರು ದೇಶದ ಸ್ವಾತಂತ್ರ ಸಂಗ್ರಾಮ ಸತ್ಯನಿಷ್ಠವಾಗಿರಬೇಕು ಮತ್ತು ಹೊಸ ದೇಶವಾಗಲಿರುವ ಭಾರತದ ಧ್ಯೇಯವಾಕ್ಯವಾಗಿ ಮುಂಡಕೋಪನಿಷತ್ತಿನ ‘ಸತ್ಯಮೇವ ಜಯತೇ’ ನುಡಿಕಟ್ಟನ್ನುಅನುಸರಿಸುವಂತೆ ಶಿಫಾರಸು ಮಾಡಿದರು. ಕಾಂಗ್ರೆಸ್ ಪಕ್ಷವು ಅವರ ಸಲಹೆಯನ್ನು ಒಪ್ಪಿಕೊಂಡಿತು. ಮುಂದೆ ದೇಶ ಸ್ವತಂತ್ರವಾದಾಗ ಹೊಸ ಸಂವಿಧಾನದ ಲಾಂಛನದಲ್ಲಿ ಸತ್ಯಮೇವ ಜಯತೆಯನ್ನು ಅಳವಡಿಸಿಕೊಳ್ಳಲಾಯಿತು.

ಇನ್ನೂ ಅನೇಕ ಉಪನಿಷತ್ತುಗಳಲ್ಲಿ ಸತ್ಯಕ್ಕೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ತೈತ್ತಿರೀಯವು ಸ್ನಾತಕನಿಗೆ ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು ಎಂದು ನಿರ್ದೇಶನವನ್ನು ನೀಡಿದೆ. ಈಶಾವಾಸ್ಯವು ಸತ್ಯವು ಚಿನ್ನದ ಪಾತ್ರೆಯ ಅಂತರ್ಗತವಾಗಿದೆ; ಆ ಪಾತ್ರೆಯನ್ನು ತೆರೆದು ಸತ್ಯದರ್ಶನವನ್ನು ಮಾಡಬೇಕು ಎನ್ನುತ್ತದೆ. ರಾಮಾಯಣ, ಮಹಾಭಾರತಗಳ ಕತೆಗಳೂ ಸತ್ಯವಾಕ್ಯದ ಹಿರಿಮೆಯನ್ನು ಕೊಂಡಾಡುತ್ತವೆ. ಹರಿಶ್ಚಂದ್ರನ ಕತೆಯೂ ಪುರಾಣಕಾಲದಲ್ಲಿ ಸತ್ಯಕ್ಕೆ ನೀಡುತ್ತಿದ್ದ ಮಹತ್ವದ ಇನ್ನೊಂದು ಪ್ರಮುಖ ನಿದರ್ಶನ. ಜನಪದದಲ್ಲಿಯೂ ಅನೇಕ ಕತೆಗಳು ಓದು ಬರಹವಿಲ್ಲದವರನ್ನು ರಂಜಿಸಿವೆ ಮಾತ್ರವಲ್ಲ ಜೀವನದಲ್ಲಿ ಸತ್ಯವನ್ನು ಅಳವಡಿಸಿ ಕೊಳ್ಳಬೇಕೆಂದು ನೀತಿಯನ್ನು ಬೋಧಿಸಿವೆ. ಶಾಲೆಗಳಲ್ಲಿ ಪಠ್ಯವಾಗಿರುತ್ತಿದ್ದ ಪುಣ್ಯಕೋಟಿಯ ಕತೆ ಮಕ್ಕಳು ಸತ್ಯನಿಷ್ಠರಾಗಿರಬೇಕು ಎಂದು ನೀತಿಯನ್ನು ಬೋಧಿಸುತ್ತದೆ. ಮನರಂಜನೆಯ ಜೊತೆಗೆ ನೀತಿಯನ್ನೂ ಎಳೆಮನಸ್ಸಿಗೆ ತಿಳಿಸುತ್ತದೆ. ಇಂದು ಜನಪ್ರಿಯವಾಗುತ್ತಿರುವ ಯೋಗದ ಅಷ್ಟಾಂಗಗಳಲ್ಲಿ ಸತ್ಯವೂ ಒಂದು.

ಮೂಲತಃ ಧರ್ಮಗ್ರಂಥ ಮತ್ತು ಪೌರಾಣಿಕ ಕತೆಗಳಿಗೆ ಸೀಮಿತವಾಗಿದ್ದ ಸತ್ಯಪ್ರತಿಪಾದನೆ ಯನ್ನು ರಾಜಕೀಯ ಹೋರಾಟದ ಪ್ರಮುಖ ಅಸ್ತ್ರವಾಗಿ ಮುನ್ನೆಲೆಗೆ ತಂದವರು ಮಹಾತ್ಮಾ ಗಾಂಧೀಜಿ ಅವರು. ತಮ್ಮ ಆತ್ಮ ಕತೆಯ ಹೆಸರನ್ನೇ ‘ಸತ್ಯಾನ್ವೇಷಣೆ’ ಎಂದಿಟ್ಟ ಅವರು ಸ್ವತಂತ್ರ ಭಾರತದ ಮೂಲ ಧ್ಯೇಯವು ಸತ್ಯಬದ್ಧತೆಯಾಗಬೇಕೆಂದು ಆಶಿಸಿದವರು.

ಸಂವಿಧಾನದ ಕರ್ತೃಗಳು ದೇಶದ ಲಾಂಛನವಾದ ಅಶೋಕಸ್ತಂಭದ ಬುಡದಲ್ಲಿ ‘ಸತ್ಯಮೇವ ಜಯತೆ’ಯನ್ನು ಅಳವಡಿಸಿ ದೇಶದ ಮುಂದಿನ ದಾರಿಗೆ ದೀಪವನ್ನು ಹಾಕಿಸಿದರು. ವಿಭಿನ್ನ ಸಂಸ್ಕೃತಿ, ಭಾಷೆ, ಆರ್ಥಿಕತೆ, ಸಾಮಾಜಿಕ ತಾರತಮ್ಯವುಳ್ಳ ಹೊಸ ರಾಷ್ಟ್ರವನ್ನು ಏಕೀಕರಿಸಲು ಅಗತ್ಯವಾದ ಕೊಂಡಿ ಈ ಆಶಯವೇ ಆಗಿತ್ತು.

ಮರೆಯಾಗುತ್ತಿರುವ ಧ್ಯೇಯ:

ಈ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಈ ಧ್ಯೇಯ ವಾಕ್ಯಕ್ಕೆ ನಮ್ಮ ದೇಶ ಎಷ್ಟು ಬದ್ಧವಾಗಿದೆ ಎಂಬ ಪ್ರಶ್ನೆ ಮುನ್ನೆಲೆಗೆ ಬರಲೇ ಇಲ್ಲ. ಇಂದಿನ ಆಗುಹೋಗುಗಳನ್ನು ಗಮನಿಸಿದರೆ ‘ಸತ್ಯಮೇವ ಜಯತೆ’ ಧ್ಯೇಯದಿಂದ ದೇಶವು ವಿಮುಖ ವಾಗುತ್ತಿದೆ ಎಂಬ ಶಂಕೆ ಬಲವಾಗುತ್ತಿದೆ. ನಾಲ್ಕು ಪ್ರಮುಖ ರಂಗಗಳಲ್ಲಿನ ಆಗುಹೋಗುಗಳು ಈ ಶಂಕೆಯನ್ನು ಉಂಟು ಮಾಡುತ್ತವೆ. ಅವುಗಳು ಹೀಗಿವೆ:

   1.ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳ ಹೇಳಿಕೆಗಳು ಮತ್ತು ವರ್ತನೆಗಳು

   2.ಆಡಳಿತದ ಪ್ರಮುಖ ಅಂಗಗಳ ನಡತೆ

   3.ದೇಶದ ಸಮೂಹ ಮಾಧ್ಯಮಗಳ ವರ್ತನೆ

   4.ವೈಯಕ್ತಿಕ ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಉಪಯೋಗ

ಇವುಗಳ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಅವುಗಳನ್ನು ಇಲ್ಲಿ ನಾನು ಮತ್ತೆ ಉದ್ಧರಿಸಲು ಬಯಸುವುದಿಲ್ಲ.

ಆತಂಕಕಾರಿಯಾಗುವ ನೈಜ ಘಟನೆಗಳು:

ರಾಜಕೀಯದಲ್ಲಿ ಪ್ರಭಾವಿಗಳಾದ ಗಣ್ಯರ ಹೇಳಿಕೆಗಳ ಹಿಂದೆ ವೈಯಕ್ತಿಕ ಹಿತಾಸಕ್ತಿಗಳು ಇವೆ. ಆದರೆ ಸರಕಾರ ಅಥವಾ ಅದರ ಅಂಗಸಂಸ್ಥೆಗಳು ವಸ್ತುಸ್ಥಿತಿಯನ್ನು ಮರೆಮಾಚಿ, ಸತ್ಯವನ್ನು ಬದಿಗೆ ಸರಿಸುವ ಪ್ರಯತ್ನವನ್ನು ಮಾಡಿದರೆ ಅದು ಆತಂಕಕಾರಿ.

ಇದಕ್ಕೆ ಒಂದು ಉದಾಹರಣೆ- ಕೋವಿಡ್ ಮಹಾಮಾರಿಯಿಂದ ದೇಶದಲ್ಲಿ ಜೀವತೆತ್ತವರ ಬಗೆಗಿನ ಮಾಹಿತಿ. ಕೇಂದ್ರ ಸರಕಾರದ ಹೇಳಿಕೆಯ ಪ್ರಕಾರ ಆಗಸ್ಟ್ 26, 2021ರ ತನಕ ಕೋವಿಡ್ ನಿಂದ ಅಸುನೀಗಿದವರ ಸಂಖ್ಯೆ 4,36,000. ಒಂದು ಸ್ವತಂತ್ರ ಅಧ್ಯಯನದ ಪ್ರಕಾರ ಜನನ-ಮರಣಗಳ ನೋಂದಣಿ ಕಚೇರಿಗಳಲ್ಲಿನ ದಾಖಲೆಗಳನ್ನು ಮತ್ತು ಆಸ್ಪತ್ರೆಗಳ ದಾಖಲೆಗಳನ್ನು ಹೊಂದಾಣಿಸಿ ನೋಡಿದಾಗ ಎಪ್ರಿಲ್ 2020 ಮತ್ತು ಮೇ 2021ರ ಅವಧಿಯಲ್ಲಿಯೇ ಸರಕಾರವು ವರದಿ ಮಾಡಿದುದಕ್ಕಿಂತ 28ಲಕ್ಷ ಹೆಚ್ಚು ನಾಗರಿಕರು ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ (ವರದಿ: ‘ದ ಹಿಂದು’, ಆಗಸ್ಟ್ 20, 2021). ಇನ್ನೊಂದು ವರದಿಯಂತೆ ವಾಸ್ತವಿಕವಾಗಿ 49 ಲಕ್ಷ ಮಂದಿಯನ್ನು ಕೋವಿಡ್ ನುಂಗಿದೆ (ವರದಿ: ‘ದ ಟೆಲಿಗ್ರಾಫ್’, ಕೋಲ್ಕತಾ, ಆಗಸ್ಟ್ 27, 2021). ಅಂತರ್‌ರಾಷ್ಟ್ರೀಯ ಖ್ಯಾತಿಯ ಲಂಡನಿನ ಸಾಪ್ತಾಹಿಕ ದ ಎಕನಾಮಿಸ್ಟ್ (The Economist) ಕೂಡ ಅಧಿಕೃತ ಸಂಖ್ಯೆಯ ಹತ್ತು ಪಟ್ಟು ಜನ ಅಸು ನೀಗಿರಬಹುದು ಎಂದು ತಜ್ಞರ ಅಧ್ಯಯನದ ಆಧಾರದಲ್ಲಿ ಹೇಳಿದೆ; ಅದರ ಜುಲೈ 22, 2021ರ ಸಂಚಿಕೆಯ ವರದಿಯಂತೆ 40 ಲಕ್ಷ ಮಂದಿ ಜೂನ್ 2021ಕ್ಕೆ ಬಲಿಯಾಗಿದ್ದರು. ಈ ವರ್ಷ ಮೇ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO- ‘ಹೂ’)ತನ್ನ ವರದಿಯಲ್ಲಿ ಜಗತ್ತಿನಲ್ಲಿ 1.5 ಕೋಟಿ ಜನರು ಪ್ರಾಣ ಕಳಕೊಂಡರು ಅವರಲ್ಲಿ 47 ಲಕ್ಷ ಭಾರತೀಯರೇ ಆಗಿದ್ದರು ಎಂದು ಹೇಳಿದೆ (ವರದಿ: ‘ದ ಟ್ರೈಬ್ಯೂನ್’, ಚಂಡಿಗಡ, ಮೇ 5, 2022). ಯಾವ ಮಾಹಿತಿ ಸತ್ಯ? ಯಾವುದು ಮಿಥ್ಯೆ? ‘ಹೂ’ ಮತ್ತು ‘ಎಕನಾಮಿಸ್ಟ್’ಗಳಿಗೆ ಭಾರತದ ಹೆಸರನ್ನು ಕೆಡಿಸುವ ಉದ್ದೇಶವಿತ್ತೆಂದು ಹೇಳಲಾಗದು. ಸತ್ಯಕ್ಕೆ ಬದ್ಧವಾಗಿರುವ ಸರಕಾರ ತಾನು ಸಂರಕ್ಷಿಸಬೇಕಾದ ಮತ್ತು ತನ್ನನ್ನು ಚುನಾಯಿಸಿದ ಪ್ರಜಾವರ್ಗಕ್ಕೆ ದೇಶದ ಎಷ್ಟುಮಂದಿ ನಾಗರಿಕರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿಸಬೇಕಾದ ಕರ್ತವ್ಯವಿಲ್ಲವೇ?

ಇನ್ನೊಂದು ಉದಾಹರಣೆಯು ನಮ್ಮ ದೇಶದಲ್ಲಿ ಶೌಚಗುಂಡಿಗಳನ್ನು ಮನುಷ್ಯರೇ ಶುದ್ಧೀಕರಿಸುವ ಸಂದರ್ಭದಲ್ಲಿ ಆಗುವ ಮೃತ್ಯುಗಳ ಕುರಿತಾದ ಮಾಹಿತಿಗೆ ಸಂಬಂಧಿಸಿದ್ದು. ಇದು ಒಂದು ಅನಿಷ್ಠ ಕ್ರಮವಾದುದರಿಂದ ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಕೇಂದ್ರ ಸರಕಾರವು 2013ರಲ್ಲಿ ಊರ್ಜಿತಗೊಳಿಸಿದ ‘ಕೈಯಿಂದ ಮಲ ಸ್ವಚ್ಛ ಮಾಡುವುದಕ್ಕೆ ನೇಮಕ ಮಾಡುವುದಕ್ಕೆ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ’(Prohibition of Employment as Manual Scavengers and their Rehabilitation Act, 2013) -  ಪ್ರಕಾರ ಕೈಯಿಂದ ಮಲವನ್ನು ಸ್ವಚ್ಛಮಾಡುವುದು ಮತ್ತು ಮಾಡಿಸುವುದು ಅಪರಾಧ. ಆದರೆ ವರದಿಗಳ ಪ್ರಕಾರ ದೇಶದ ಹಲವೆಡೆಗಳಲ್ಲಿ ಮಲಗುಂಡಿಗೆ ಇಳಿದು ಅದನ್ನು ಕೈಯಿಂದಲೇ ಸ್ವಚ್ಛಗೊಳಿಸುವ ಪದ್ಧತಿ ಇನ್ನೂ ಜಾರಿಯಲ್ಲಿದೆ. ಮುಖಗವಸು, ಕೈಚೀಲ, ಕಾಲುಗಳಿಗೆ ದೊಡ್ಡ ಬೂಟ್‌ಗಳಿಲ್ಲದೆ ಕಾರ್ಮಿಕರನ್ನು ಗುಂಡಿಗೆ ಇಳಿಸಲಾಗುತ್ತದೆ. ಅಲ್ಲಿರುವ ವಿಷಾನಿಲದ ಪರಿಣಾಮವಾಗಿ ಆಗಾಗ ಮಾರಣಾಂತಿಕ ಅವಘಡಗಳು ಸಂಭವಿಸುತ್ತಿವೆ. ಇವುಗಳನ್ನು ಸಂಬಂಧಪಟ್ಟ ರಾಜ್ಯಸರಕಾರಗಳು ವರದಿಮಾಡುತ್ತಿಲ್ಲವೆಂಬ ಆರೋಪವಿದೆ. ಕೇಂದ್ರ ಸರಕಾರವೂ ಎಷ್ಟು ಮಂದಿ ನೈರ್ಮಲ್ಯ ಕಾರ್ಮಿಕರು ಕೈಯಿಂದಲೇ ಮಲಗುಂಡಿ ಸ್ವಚ್ಛಮಾಡುವಾಗ ಮೃತರಾಗಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಆ ಕಾರಣದಿಂದ ಯಾರೂ ಸತ್ತ ವರದಿಗಳಿಲ್ಲ ಎಂದು ಹೇಳುವುದು ಮಾತ್ರವಲ್ಲ, ಸತ್ತಿರುವುದು ಅವಘಡಗಳಲ್ಲಿ ಎಂದು ಸಮಜಾಯಿಷಿ ನೀಡುತ್ತಿದೆ. ಉದಾಹರಣೆಗೆ ಇದೇ ಆಗಸ್ಟ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ ಅಠಾವಳೆಯವರು ಕೈಯಿಂದ ಸ್ವಚ್ಛಮಾಡುವಾಗ 2016-21ರಲ್ಲಿ ಯಾರೂ ಸತ್ತಿಲ್ಲ ಎಂದರು. ಆದರೆ ಅವರ ಪ್ರಕಾರವೇ ಇದೇ ಅವಧಿಯಲ್ಲಿ 330 ಕಾರ್ಮಿಕರು ಅಪಾಯಕಾರಿ ಶೌಚಗುಂಡಿಗಳನ್ನು ಮತ್ತು ಚರಂಡಿಗಳನ್ನು ಶುದ್ಧೀಕರಿಸುವಾಗ ಸತ್ತು ಹೋದರು. (ವರದಿ: ದ ಕ್ವಿಂಟ್. ಆಗಸ್ಟ್ 2, 2022). ನೈರ್ಮಲ್ಯ ಕಾರ್ಮಿಕರ ರಾಷ್ಟ್ರೀಯ ಚಳವಳಿಯ ನೇತಾರ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಕೊಟ್ಟ ಮಾಹಿತಿಯಂತೆ 2016-21ರ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 472 ಕಾರ್ಮಿಕರು ಮೃತರಾಗಿದ್ದರು. ಯಾವುದು ನಂಬಲರ್ಹ: ಸಚಿವರ ಹೇಳಿಕೆಯೇ ಅಥವಾ ಜೀವಮಾನವಿಡೀ ನೈರ್ಮಲ್ಯ ಕಾರ್ಮಿಕರ ಏಳಿಗೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರ ಹೇಳಿಕೆಯೇ? ಇಂದಿನ ದಿನಗಳಲ್ಲಿ ಈ ತೆರನಾಗಿ ತಿರುಚಿದ ಮಾಹಿತಿಗಳನ್ನು ನೀಡುವ, ಇಲ್ಲವೇ ತಡೆಹಿಡಿಯುವ ಧೋರಣೆ ಸರ್ವೇ ಸಾಮಾನ್ಯವಾಗಿದೆ.

ಇನ್ನು ನ್ಯಾಯಾಂಗ ಮತ್ತು ನ್ಯಾಯ ನೀಡುವಿಕೆಯಲ್ಲಿ ಇಂದು ಸತ್ಯಕ್ಕೆ ಯಾವ ಬೆಲೆಯಿದೆ ಎಂದು ವಿಮರ್ಶಿಸಿದರೆ ಮತ್ತೆ ದಿಗಿಲಾಗುವ ಸಾಧ್ಯತೆ ಹೆಚ್ಚು. ಕೆಲವು ತಿಂಗಳುಗಳ ಹಿಂದೆ ನನಗೆ ಬಂದ ‘ವಾಟ್ಸ್ ಆ್ಯಪ್’ ಸಂದೇಶದ ಒಕ್ಕಣೆ ಹೀಗಿತ್ತು: ಕೋರ್ಟಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುವ ಪ್ರತಿಜ್ಞೆ ಮಾಡುತ್ತಾರೆ, ಆದರೆ ಅತ್ಯಂತ ಹೆಚ್ಚು ಸುಳ್ಳು ಹೇಳುವ ಸ್ಥಳವೇ ಕೋರ್ಟು; ಅತ್ಯಂತ ಹೆಚ್ಚು ಸತ್ಯ ಹೇಳುವ ಸ್ಥಳ ಬಾಟಲ್ ಹಿಡಿದಿರುವ ಬಾರುಗಳಲ್ಲಿ’. ಇದು ಉತ್ಪ್ರೇಕ್ಷೆಯೆಂಬುದರಲ್ಲಿ ಸಂದೇಹವಿಲ್ಲ. ಆದರೆ ಕೆಲವು ಘಟನೆಗಳು ನಮ್ಮ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ.

ಕ್ರಿಮಿನಲ್ ಕೋರ್ಟಿನಲ್ಲಿ ತನಿಖಾಧಿಕಾರಿ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂದು ಪ್ರತಿಜ್ಞೆ ಮಾಡುವುದು ಅಗತ್ಯ. ಆದರೆ ನ್ಯಾಯಮೂರ್ತಿಗಳು ವಿಚಾರಣೆಯ ಕೊನೆಗೆ ತನಿಖಾಧಿಕಾರಿಯ ಸಾಕ್ಷ ನಂಬಲರ್ಹವಲ್ಲವೆಂದು ಹೇಳಿದರೆ ಆತನ ಪ್ರತಿಜ್ಞೆಯ ಮೌಲ್ಯವೇನು? ಅಥವಾ ನ್ಯಾಯಮೂರ್ತಿಯೇ ತನಿಖಾಧಿಕಾರಿ ನೀಡಿದ ಸಾಕ್ಷದಲ್ಲಿ ಒಳಗೊಂಡ ಅಸತ್ಯವನ್ನು ಗಮನಿಸದಿದ್ದರೆ, ಆರೋಪಿಯು ತಾನು ಮಾಡದ ತಪ್ಪಿಗೆ ಹೊಣೆಗಾರನಾಗಿ ಶಿಕ್ಷೆಗೆ ಬಲಿಯಾಗುವ ಸನ್ನಿವೇಶವು ಉಂಟಾಗಬಹುದು. 2021ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದ ಒಂದು ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾ. ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ವಿ. ರಾಮಸುಬ್ರಮಣಿಯನ್ ಅವರ ಖಂಡಪೀಠ ಈ ರೀತಿ ಹೇಳಿತು: ‘ಪೊಲೀಸರು ಸತ್ಯವನ್ನು ಶೋಧಿಸುವ ಬದಲು ಅದನ್ನು ಆಳವಾಗಿ ಹುದುಗಿಡಲು ಪ್ರಯತ್ನಿಸಿದರು. ರಾಜಕೀಯ ಪ್ರೇರಣೆಯಿಂದ ಪೊಲೀಸರು ತಮ್ಮ ಕಾರ್ಯವನ್ನು ನಿಭಾಯಿಸದಿರುವುದು ಆಘಾತಕಾರಿ. ಈ ವರ್ತನೆಯನ್ನು ಸತ್ರ ನ್ಯಾಯಾಲಯ ವಾಗಲೀ, ರಾಜ್ಯದ ಉಚ್ಚ ನ್ಯಾಯಾಲಯವಾಗಲೀ ಗಮನಿಸದಿರುವುದು ವಿಷಾದನೀಯ.’ 13 ವರ್ಷಗಳ ಹಿಂದೆ ರಾಜಕೀಯ ಕಾರಣಕ್ಕೋಸ್ಕರ ಪೊಲೀಸರು ಸಿಕ್ಕಿಸಿ ಹಾಕಿದ ಕೇಸಿನಲ್ಲಿ ಕೆಳಗಿನ ಕೋರ್ಟುಗಳು ತಪ್ಪಿತಸ್ಥರೆಂದು ನಿರ್ಣಯಿಸಿ ಆಜೀವ ಸಜೆ ವಿಧಿಸಲ್ಪಟ್ಟ ಒಂದೇ ಕುಟುಂಬದ ಮೂವರು ಆರೋಪಿಗಳ ಮೇಲ್ಮನವಿಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಅವರು ನಿರ್ದೋಷಿಗಳೆಂದು ತೀರ್ಮಾನಿಸಿ ಬಿಡುಗಡೆಮಾಡಲು ಆದೇಶ ನೀಡಿತು (ವರದಿ: ‘ದ ಹಿಂದು’, ಮಂಗಳೂರು ಆವೃತ್ತಿ, ಆಗಸ್ಟ್ 20, 2021)

ಇದು ನ್ಯಾಯಾಂಗದಲ್ಲಿರುವ ಲೋಪಕ್ಕೆ ಒಂದು ಉದಾಹರಣೆ ಅಷ್ಟೆ. ಅಸತ್ಯದ ದಬ್ಬಾಳಿಕೆಗೆ ನ್ಯಾಯದೇಗುಲದಲ್ಲಿಯೇ ನಿರಪರಾಧಿಗಳಾದವರು ಬಲಿಯಾದರೆ ಅದು ಸತ್ಯಕ್ಕೆ ಅಪಚಾರವೆನ್ನಲೇಬೇಕಾಗುತ್ತದೆ. ಸತ್ಯವನ್ನು ಹೇಳುತ್ತೇನೆ ಎಂಬ ಪ್ರತಿಜ್ಞೆಯೇ ಅಲ್ಲಿ ಹಾಸ್ಯಾಸ್ಪದವಾಗುತ್ತದೆ ಮಾತ್ರವಲ್ಲ ಅದರ ಪರಿಣಾಮ ಘೋರವಾಗುತ್ತದೆ. ಮರಣದಂಡನೆ ಅಥವಾ ಆಜೀವ ಸಜೆಯ ಮೊಕದ್ದಮೆಗಳಲ್ಲಿ ದೇಶದ ಸುಪ್ರೀಂ ಕೋರ್ಟೇ ತನ್ನ ನಿರ್ಣಯ ದಲ್ಲಿ ತಪ್ಪು ಮಾಡಿದೆ ಎಂದು ಕೆಲವು ಬಾರಿ ನಿವೃತ್ತ ನ್ಯಾಯಾಧೀಶರು ಹೇಳಿಕೆ ನೀಡಿದ್ದು ಇದಕ್ಕೆ ಪೂರಕ. ಇಲ್ಲಿ ಸತ್ಯದ ಬದಲು ಅಸತ್ಯಕ್ಕೇ ಜಯವಾಯಿತು ಎನ್ನದೆ ನಿರ್ವಾಹವಿಲ್ಲ. ಪ್ರಜಾತಂತ್ರದ ನಾಲ್ಕನೆಯ ಆಧಾರಸ್ತಂಭವಾದ ಸಮೂಹ ಮಾಧ್ಯಮಕ್ಕೆ ಸತ್ಯವನ್ನು ಅಧಿಕಾರಿ ವರ್ಗಕ್ಕೆ ಹೇಳುವ ನೈತಿಕ ಜವಾಬ್ದಾರಿಯಿದೆ. ಈ ಜವಾಬ್ದಾರಿಯನ್ನು ನಮ್ಮ ಮಾಧ್ಯಮಗಳು ಎಷ್ಟರ ಮಟ್ಟಿಗೆ ಪೂರೈಸುತ್ತಿವೆ? ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವ ಮೊದಲೇ ಯಾವುದೇ ಕಾರಣಕ್ಕೆ ಆರೋಪಿ ಎನ್ನಲಾಗುವ ವ್ಯಕ್ತಿಯ ಬಗ್ಗೆ ನಮ್ಮ ಮಾಧ್ಯಮಗಳು ಹೇಗೆ ವರ್ತಿಸುತ್ತವೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. 2021ರಲ್ಲಿ ಶಾರುಕ್ ಖಾನ್ ರ ಮಗ ಆರ್ಯನ್ ಖಾನ್ ಮತ್ತು ಕಿರು ತೆರೆಯ ಯುವ ನಟಿ ರಿಯಾ ಚಕ್ರವರ್ತಿಯರ ಕುರಿತಾದ ಟಿವಿಯ ಚರ್ಚೆಗಳು, ವಿಚಾರಣೆಗಳು, ದೋಷಾರೋಪಗಳು ಹಾಗೂ ‘ನ್ಯಾಯ ತೀರ್ಮಾನಗಳು’ ಈ ಮಾಧ್ಯಮಗಳು ಸತ್ಯಕ್ಕೆ ಎಷ್ಟು ಮಹತ್ವ ನೀಡುತ್ತವೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತವೆ. ಸಾಕ್ಷ್ಯಾಧಾರಗಳೇ ಇಲ್ಲದೆ ಆರೋಪಗಳು ಹುಸಿಯಾಗಿ ಅವರಿಬ್ಬರು ಜೈಲಿನಿಂದ ಬಿಡುಗಡೆಯಾದ ಬಳಿಕ ಇಬ್ಬರು ಯುವನಾಗರಿಕರನ್ನು ಅಸಭ್ಯರಾಗಿ ನೋಡಿಕೊಂಡೆವೆಂಬ ಭಾವನೆ ಯಾವುದೇ ಟಿವಿ ಚಾನೆಲ್‌ಗಳಿಗೆ ಬರಲಿಲ್ಲ. ಅಕ್ಟೋಬರ್ ತಿಂಗಳ ಕೊನೆಗೆ ಗುಜರಾತಿನ ಮೊರ್ಬಿಯ ತೂಗು ಸೇತುವೆ ಕುಸಿದು ನೂರಾರು ಅಮಾಯಕರು ಜಲಸಮಾಧಿಯಾದರು. ಸೇತುವೆಯ ರಿಪೇರಿ ಮತ್ತು ನಿರ್ವಹಣೆಯಲ್ಲಿ ಆದ ಲೋಪದಿಂದ ದುರಂತ ಸಂಭವಿಸಿದ್ದು ಎಂದು ತಿಳಿದಿದ್ದರೂ ಅನೇಕ ಮಾಧ್ಯಮಗಳು ಸೇತುವೆಯಲ್ಲಿ ಯುವಕರು ಹಾರಿ, ಕುಣಿದು ಅದನ್ನು ಅಲುಗಾಡಿಸಿದ ಕಾರಣಕ್ಕೆ ಅದು ಕುಸಿಯಿತು ಎಂದು ಪ್ರಚಾರ ಮಾಡಿದವು. ವಸ್ತು ಸ್ಥಿತಿಯನ್ನು ಅರಿತುಕೊಂಡು ಅಧಿಕಾರಿ ವರ್ಗ ಎಲ್ಲಿ ಎಡವಿದೆ ಎಂದು ಪ್ರಶ್ನಿಸುವ ವೃತ್ತಿಪರತೆಯನ್ನು ತೋರಿಸಲಿಲ್ಲ. ಮಾಧ್ಯಮಗಳು ಸತ್ಯಭ್ರಷ್ಟರಾಗುವ ದಾರಿಯಲ್ಲಿವೆ ಎಂಬುದಕ್ಕೆ ಇವು ಜ್ವಲಂತ ಉದಾಹರಣೆಗಳು.

ಪ್ರಸಕ್ತ ಪರಿಸ್ಥಿತಿಯಲ್ಲಿ ಅನೇಕ ಧಾರ್ಮಿಕ ನಂಬಿಕೆಗಳನ್ನು ವೈಜ್ಞಾನಿಕ ಸತ್ಯವೆಂದು ಬಿಂಬಿಸುವ ಕ್ರಿಯೆಯೂ ನಡೆಯುತ್ತಿದೆ. ಜೊತೆಗೆ ಚರಿತ್ರೆಯಲ್ಲಿ ದಾಖಲಾದ ವಾಸ್ತವವನ್ನು ಅಲ್ಲಗಳೆದು, ಜನರ ನಂಬಿಕೆಗಳನ್ನು ವಾಸ್ತವವೆಂದು ಪ್ರಚಾರ ಮಾಡುವ ಪ್ರಕ್ರಿಯೆಗಳನ್ನೂ ನಾವು ಕಾಣಬಹುದು. ಆದರೆ ಈ ವರ್ತನೆ ಮಿತಿಮೀರಿದಾಗ ಸತ್ಯ ಮತ್ತು ಮೌಢ್ಯದ ನಡುವೆ ಸಂಘರ್ಷ ಉಂಟಾಗಿ ರಾಷ್ಟ್ರದಲ್ಲಿ ಆಧುನಿಕತೆಯು ನೇಪಥ್ಯಕ್ಕೆ ಸರಿದು ಮೌಢ್ಯ ವಿಜೃಂಭಿಸುತ್ತದೆ -ಆ ಪರಿಸ್ಥಿತಿ ದೇಶದ ಪ್ರಗತಿಗೆ ಮಾರಕವಾಗುತ್ತದೆ.

ಪ್ರಬಲವಾಗುತ್ತಿರುವ ‘ಒಲಿಗಾರ್ಕಿ’ (ಮಿತಜನತಂತ್ರ): ಇದೇ ಸಂದರ್ಭದಲ್ಲಿ ದೇಶದ ಇಬ್ಬರು ಗಣ್ಯರ ಮಾತುಗಳು ಉಲ್ಲೇಖನೀಯ. ಆಗಸ್ಟ್ 2021ರಲ್ಲಿ ಈಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾ.ಧನಂಜಯ ಚಂದ್ರಚೂಡರು ತಮ್ಮ ಎಂ.ಸಿ. ಛಾಗ್ಲಾ ಸ್ಮಾರಕ ಭಾಷಣದಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಗಳು ಸತ್ಯನಿಷ್ಠರಾಗಿರಬೇಕೆಂದು ಹಾಗೂ ಅವರು ಸತ್ಯದ ಚೌಕಟ್ಟನ್ನು ಮೀರಿ ನಡೆದಾಗ ಬುದ್ಧಿ ಜೀವಿಗಳು ಅವರನ್ನು ಎಚ್ಚರಿಸಬೇಕೆಂಬ ಕರೆ ನೀಡಿದರು. ಅದೇ ವರ್ಷ ಸೆಪ್ಟಂಬರ್ 3ನೇ ತಾರೀಕಿನ ತಮ್ಮ ಅಂಕಣ ಬರಹದಲ್ಲಿ ನಮ್ಮ ದೇಶದ ಶ್ರೇಷ್ಠ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಜೂಲಿಯೊ ರೆಬೇರೋ ಅವರು ಅಧಿಕಾರದ ದಾಹಕ್ಕೆ ತುತ್ತಾಗಿರುವ ರಾಜಕಾರಣಿಗಳು ನ್ಯಾಯದ ಆಧಾರಸ್ತಂಭವಾದ ಸತ್ಯದ ಪಾವಿತ್ರವನ್ನೇ ನಾಶಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದರು(Noam Chomsky) (ದ ಟ್ರೈಬ್ಯೂನ್, ಚಂಡಿಗಡ). ಈ ಹೇಳಿಕೆಗಳ ಮಹತ್ವವನ್ನು ದೇಶದ ಧ್ಯೇಯವಾಕ್ಯದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ನ್ಯಾಯಮೂರ್ತಿ ಚಂದ್ರಚೂಡರ ಕರೆಯನ್ನು ಓದುವಾಗ ವಿಶ್ವದ ಅಗ್ರಗಣ್ಯ ಚಿಂತಕರಲ್ಲಿ ಒಬ್ಬರೆನಿಸಿದ ನೊಆಮ್ ಚಾಂಸ್ಕಿ ಅವರು 1967ರಲ್ಲಿ ಬರೆದ ಪ್ರಸಿದ್ಧ ಲೇಖನ ‘ಬುದ್ಧಿಜೀವಿಗಳ ಜವಾಬ್ದಾರಿ’  (The Responsibility of Intellectuals) ನೆನಪಾಗುತ್ತದೆ. ಅದನ್ನು ಬರೆದ ಕಾಲಘಟ್ಟ ಅಮೆರಿಕದ ವಿಯೆಟ್ನಾಂ ಧೋರಣೆ ಉಚ್ಛ್ರಾಯಸ್ಥಿತಿಯಲ್ಲಿದ್ದು ಸಾವಿರಾರು ಯುವಕರು ದೂರದ ಯುದ್ಧದಲ್ಲಿ ‘ಪ್ರಜಾತಂತ್ರದ ರಕ್ಷಣೆ’ಯ ನೆಪದಲ್ಲಿ ಆಗಲೇ ಪ್ರಾಣ ತೆತ್ತಿದ್ದರು. ಅಮೆರಿಕದಲ್ಲಿ ಯುವಕರು ಕಡ್ಡಾಯವಾಗಿ ಸೇನೆಗೆ ಭರ್ತಿಯಾಗಬೇಕಿತ್ತು. ಈ ಧೋರಣೆಯನ್ನು ವಿರೋಧಿಸಿ ದೇಶದಾದ್ಯಂತ ಯುದ್ಧವಿರೋಧಿ ಚಳವಳಿ ತೀವ್ರವಾಗುತ್ತಿತ್ತು. ಚಾಂಸ್ಕಿಯವರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಲೇಖನದಲ್ಲಿ ಒಂದು ಸಮಾಜದ ಹಿತಕಾಯುವಲ್ಲಿ ಬುದ್ಧಿಜೀವಿಗಳೆನ್ನಿಸುವವರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಶ್ರುತಪಡಿಸಿದರು. (ಭಾರತದಲ್ಲಿಂದು ‘ಬುದ್ಧಿಜೀವಿ’ಗಳನ್ನು ಪರಿಹಾಸಮಾಡುವ ಸನ್ನಿವೇಶ ನಮ್ಮ ಮುಂದಿದೆ; ಚಾಂಸ್ಕಿಯವರನ್ನು ಹೀಗಳೆಯುವ ಪ್ರಯತ್ನಗಳೂ ನಡೆದಿವೆ).

ಕಟು ಸತ್ಯದ ಕಹಿಯನ್ನು ಸಹಿಸಲು ಅಸಾಧ್ಯವಾದಾಗ ತಾತ್ಕಾಲಿಕವಾಗಿ ಹಿತನೀಡುವ ಅವಾಸ್ತವಿಕತೆಗೆ ಮೊರೆಹೋಗುವುದರ ಬಗ್ಗೆ ಇಬ್ಬರು ಪ್ರಮುಖ ಚಿಂತಕರ ವಿಶ್ಲೇಷಣೆಗಳು ನಮ್ಮ ದೇಶಕ್ಕೆ ಅನ್ವಯವಾಗುತ್ತವೆ. ಸರ್ಬಿಯ ಮೂಲದ ಅಮೆರಿಕದ ನಾಟಕಕಾರ ಸ್ಟೀವ್ ಟೆಶಿಚ್ (Steve Tesich) 1992ರಲ್ಲಿ ಬರೆದ ‘ಮಿಥ್ಯೆಗಳ ಒಂದು ಸರಕಾರ’(A Government of Lies) ಎಂಬ ಪ್ರಬಂಧದಲ್ಲಿ ‘ಸತ್ಯವು ಕೆಟ್ಟ ಸುದ್ದಿಯನ್ನು ಹೇಳುತ್ತದೆ; ಅದು ಅಮೆರಿಕದ ನಾಗರಿಕರಿಗೆ ಅಪಥ್ಯವಾಗುತ್ತಿದೆ. ಹೀಗಾಗಿ ನಾಗರಿಕರು ಸರಕಾರವು ತಮ್ಮನ್ನು ಸತ್ಯದಿಂದ ರಕ್ಷಿಸಬೇಕೆಂದು ಆಶಿಸುತ್ತಿದ್ದಾರೆ. ಈ ಹಿಂದೆ ಎಲ್ಲಾ ಸರ್ವಾಧಿಕಾರಿಗಳೂ ಸತ್ಯವನ್ನು ಮರೆಮಾಚಲು ಶತಪ್ರಯತ್ನಗಳನ್ನು ಮಾಡುವ ಅಗತ್ಯವಿತ್ತು. ಆದರೆ ಇಂದು ಅಂತಹ ಪ್ರಯತ್ನಗಳ ಅಗತ್ಯವಿಲ್ಲವೆಂದು ನಾವು ನಮ್ಮ ವರ್ತನೆಯಿಂದ ತೋರಿಸಿ ಕೊಟ್ಟಿದ್ದೇವೆ. ನಾವಿಂದು ಅಮಾನುಷರಾದ ಸರ್ವಾಧಿಕಾರಿಗಳು ಕಟ್ಟುವ ಸ್ವಪ್ನಗಳನ್ನು ಪ್ರಶಂಸಿಸುವ ಮೊದಲ ಮಾದರಿಗಳಾಗುತ್ತಿದ್ದೇವೆ. ಮೂಲಭೂತವಾಗಿ ಸ್ವತಂತ್ರರಾದ ನಾವು ಒಂದು ತರದ ‘ಸತ್ಯೋತ್ತರ’ ಜಗತ್ತಿನಲ್ಲಿ ನಿರಾತಂಕವಾಗಿ ಜೀವಿಸಲು ಬಯಸು ತ್ತೇವೆ’ ಎಂದು ಹೇಳಿದರು. (ಇಂದು ಬಳಕೆಯಲ್ಲಿರುವ ‘ಪೋಸ್ಟ್ ಟ್ರುಥ್- ಸತ್ಯೋತ್ತರ’ ಎಂಬ ಶಬ್ದವನ್ನು ಮೊದಲ ಬಾರಿಗೆ ಉಪಯೋಗಿಸಿದ ಕೀರ್ತಿ ಅವರಿಗೆ ಸಲ್ಲಬೇಕು).

 ಇಂಗ್ಲೆಂಡಿನ ಪ್ರಸಿದ್ಧ ನಾಟಕಕಾರ ಹರೋಲ್ಡ್ ಪಿಂಟರ್(Harold Pinter) ಅವರು ‘ಕಲೆ, ಸತ್ಯ ಮತ್ತು ರಾಜಕೀಯ’ (Art, truth and politics) ಎಂಬ ಹೆಸರಿನಲ್ಲಿ ಮಾಡಿದ ತಮ್ಮ 2005ರ ನೊಬೆಲ್ ಪಾರಿತೋಷಕ ಸ್ವೀಕಾರದ ಭಾಷಣದಲ್ಲಿ ಹೇಳಿದ್ದರು: ‘‘ಬಹಳ ಮಂದಿ ರಾಜಕೀಯ ಧುರೀಣರಿಗೆ ಸತ್ಯದ ಬಗ್ಗೆ ಆಸಕ್ತಿ ಇಲ್ಲ. ಬದಲಾಗಿ ಅಧಿಕಾರ ಮತ್ತು ಅದರ ರಕ್ಷಣೆಗೆ ಅವರು ಬದ್ಧರಾಗಿರುತ್ತಾರೆ. ತಾವು ಅಧಿಕಾರದಲ್ಲಿ ಉಳಿಯಲು ಜನಸಾಮಾನ್ಯರು ಸತ್ಯದಿಂದ ವಂಚಿತರಾಗಬೇಕು, ಅವರ ಜೀವನದ ಸತ್ಯವೂ ಅವರಿಗೆ ತಿಳಿದಿರಕೂಡದು. ಹಾಗಾಗಿ ನಮ್ಮ ಸುತ್ತಲೂ ಮಿಥ್ಯೆಯ ಚಿತ್ತಾರವೇ ಆವೃತವಾಗಿದ್ದು ನಾವೆಲ್ಲ ಅದರಲ್ಲೇ ಜೀವಿಸುತ್ತೇವೆ’

 ಭಾರತದ ಸದ್ಯದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಪರಾಮರ್ಶಿಸುವಾಗ ಕೆಳಗಿನ ಐದು ಮುಖ್ಯ ವಿಷಯಗಳು ಮುನ್ನೆಲೆಗೆ ಬರುತ್ತವೆ:

   1. ವಾಸ್ತವದ ಕುರಿತು ತಿರಸ್ಕಾರ ಭಾವನೆ 

   2.ಸತ್ಯವು ಎಷ್ಟೇ ನಿಖರವಾದರೂ ಅದನ್ನು ಒಪ್ಪಲು ಹಿಂದೇಟು ಹಾಕುವ ಪ್ರವೃತ್ತಿ

   3. ಮಾಧ್ಯಮ ಮತ್ತು ವಾರ್ತಾ ಜಾಲತಾಣಗಳು ಮಿಥ್ಯೆಯನ್ನು ಬಿತ್ತರಿಸುವ ಸಾಧನೆಗಳೆಂಬ ಅನಿಸಿಕೆ

   4. ಬೆಂಬಲಿಗರ ಉದ್ರೇಕಗಳನ್ನು ಪೋಷಿಸಿ ತಾವು ಏನು ಹೇಳಿದರೂ ಅದು ವಾಸ್ತವ ಎಂದು ಒಪ್ಪಿಕೊಳ್ಳುವಂತೆ ಮಾಡುವುದು

   5. ವೈಜ್ಞಾನಿಕ ತಥ್ಯಗಳನ್ನೂ ಸಂಶಯಕ್ಕೆ ಗುರಿ ಮಾಡಿ, ತಜ್ಞರನ್ನು ನೇಪಥ್ಯದ ಆಚೆ ಹೊರದಬ್ಬುವುದು. ಈ ವಿಷಮ ಪರಿಸ್ಥಿತಿಯಲ್ಲಿ ಸತ್ಯದ ಸ್ಥಾನವನ್ನು ಮಿಥ್ಯೆಯು ಆಕ್ರಮಿಸಿಕೊಂಡು ಪ್ರಜಾತಂತ್ರ ದುರ್ಬಲವಾಗಿ ಕೆಲವೇ ಮಂದಿ ದೇಶದ ಆಡಳಿತದ ಸೂತ್ರವನ್ನು ಕರಗತಗೊಳಿಸುತ್ತಾರೆ. ಡೆಮಾಕ್ರಸಿ-ಪ್ರಜಾತಂತ್ರದ ಬದಲು ‘ಒಲಿಗಾರ್ಕಿ’ ಮಿತಜನತಂತ್ರ ಮೇಲ್ಗೈ ಸಾಧಿಸುತ್ತದೆ.

ಪ್ರಜಾತಂತ್ರದ ರಕ್ಷಣೆಯ ಮಾರ್ಗ:

 ಚಿಂತಕಿ ಹನ್ನಾ ಅರೆಂಡ್ಟ್(Hannah Arendt) ತನ್ನ ‘ಸತ್ಯ ಮತ್ತು ರಾಜಕೀಯ’ (Truth and Politics 1967)ಎಂಬ ಪ್ರಬಂಧದಲ್ಲಿ ಹೇಳಿದ ಮಾತು ನಾವು ನಿರಾಶರಾಗ ಬೇಕಾಗಿಲ್ಲ ಎಂಬ ಸಂದೇಶವನ್ನು ನೀಡುತ್ತದೆ. ಅವರು ಹೇಳಿದ್ದರು: ‘ಸತ್ಯವು ಅಧಿಕಾರದ ಮುಂದೆ ದುರ್ಬಲವೆಂದು ಗೋಚರಿಸಿದರೂ ಅದಕ್ಕೆ ತನ್ನದೇ ಆದ ಶಕ್ತಿಯಿದೆ. ಅಧಿಕಾರಸ್ಥರು ಬಲಾತ್ಕಾರ ಮತ್ತು ಹಿಂಸೆಯಿಂದ ಸತ್ಯವನ್ನು ನಾಶಮಾಡಬಹುದು; ಆದರೆ ಅದರ ಸ್ಥಾನವನ್ನು ತುಂಬಬಲ್ಲ ಪರ್ಯಾಯ ಮೌಲ್ಯವು ಸಮಾಜದ ಮುಂದೆ ಇಲ್ಲ.’ ಹನ್ನಾ ಯಹೂದಿಗಳ ಹತ್ಯಾಕಾಂಡದಿಂದ ಬದುಕಿ ಉಳಿದು ಅಮೆರಿಕಕ್ಕೆ ವಲಸೆ ಹೋದವರು.

ದೇಶದ ಪ್ರಜಾತಂತ್ರದ ಮೂಲಧ್ಯೇಯವಾದ ಸತ್ಯಮೇವ ಜಯತೆಗೆ ಹಿಡಿದ ಗ್ರಹಣದ ಬಿಡುಗಡೆ ಸುಲಭಸಾಧ್ಯವಲ್ಲ. ಆದರೆ ಚರಿತ್ರೆಯಲ್ಲಿ ಸಾಮೂಹಿಕ ಪ್ರಯತ್ನದಿಂದ ಸತ್ಯವು ಜಯಗಳಿಸಿದ ಘಟನೆಗಳು ಇವೆ. ನಮ್ಮ ದೇಶದಲ್ಲಿ 1975-77ರ ನಿರಂಕುಶಪ್ರಭುತ್ವವನ್ನು ಪ್ರಬುದ್ಧ ಮತದಾರರು ಸೋಲಿಸಿದ್ದು ಒಂದು ಮರೆಯಲಾಗದ ಉದಾಹರಣೆ. ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಮತ್ತು ವಿಯೆಟ್ನಾಂ ಯುದ್ಧ ವಿರೋಧಿ ಹೋರಾಟ, 1980ರ ದಶಕದಲ್ಲಿ ಪೋಲ್ಯಾಂಡ್‌ನಲ್ಲಿ ಸಂಭವಿಸಿದ ರಾಜಕೀಯ ಬದಲಾವಣೆಗಳು- ಇವುಗಳೆಲ್ಲ ಮನುಷ್ಯನು ಸತ್ಯಕ್ಕಾಗಿ ಹೋರಾಡಿ ಯಶಸ್ವಿಯಾದ ಘಟನೆಗಳು ಹಾಗಾಗಿ ಅವು ಸ್ಫೂರ್ತಿದಾಯಕಗಳು. ಇತ್ತೀಚೆಗಷ್ಟೆ ನಡೆದ ರೈತ ಹೋರಾಟ ಸಂಘಟಿತ ಶಕ್ತಿಯ ಸಾಧ್ಯತೆಗಳನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ದೇಶವು ಸತ್ಯಮೇವ ಜಯತೆಗೆ ಬದ್ಧವಾಗಿದೆ ಎಂಬುದನ್ನು ಪ್ರಜ್ಞಾವಂತ ಸಮಾಜವು ಸಂಘಟಿತ ಹೋರಾಟದಿಂದ ಮತ್ತೆ ತೋರಿಸಬೇಕಾಗಿದೆ.

ಇನ್ನು ನ್ಯಾಯಾಂಗ ಮತ್ತು ನ್ಯಾಯ ನೀಡುವಿಕೆಯಲ್ಲಿ ಇಂದು ಸತ್ಯಕ್ಕೆ ಯಾವ ಬೆಲೆಯಿದೆ ಎಂದು ವಿಮರ್ಶಿಸಿದರೆ ಮತ್ತೆ ದಿಗಿಲಾಗುವ ಸಾಧ್ಯತೆ ಹೆಚ್ಚು. ಕೆಲವು ತಿಂಗಳುಗಳ ಹಿಂದೆ ನನಗೆ ಬಂದ ‘ವಾಟ್ಸ್ ಆ್ಯಪ್’ ಸಂದೇಶದ ಒಕ್ಕಣೆ ಹೀಗಿತ್ತು: ಕೋರ್ಟಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುವ ಪ್ರತಿಜ್ಞೆ ಮಾಡುತ್ತಾರೆ, ಆದರೆ ಅತ್ಯಂತ ಹೆಚ್ಚು ಸುಳ್ಳು ಹೇಳುವ ಸ್ಥಳವೇ ಕೋರ್ಟು; ಅತ್ಯಂತ ಹೆಚ್ಚು ಸತ್ಯ ಹೇಳುವ ಸ್ಥಳ ಬಾಟಲ್ ಹಿಡಿದಿರುವ ಬಾರುಗಳಲ್ಲಿ’. ಇದು ಉತ್ಪ್ರೇಕ್ಷೆಯೆಂಬುದರಲ್ಲಿ ಸಂದೇಹವಿಲ್ಲ. ಆದರೆ ಕೆಲವು ಘಟನೆಗಳು ನಮ್ಮ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ.

ಅಕ್ಟೋಬರ್ ತಿಂಗಳ ಕೊನೆಗೆ ಗುಜರಾತಿನ ಮೊರ್ಬಿಯ ತೂಗು ಸೇತುವೆ ಕುಸಿದು ನೂರಾರು ಅಮಾಯಕರು ಜಲಸಮಾಧಿಯಾದರು. ಸೇತುವೆಯ ರಿಪೇರಿ ಮತ್ತು ನಿರ್ವಹಣೆಯಲ್ಲಿ ಆದ ಲೋಪದಿಂದ ದುರಂತ ಸಂಭವಿಸಿದ್ದು ಎಂದು ತಿಳಿದಿದ್ದರೂ ಅನೇಕ ಮಾಧ್ಯಮಗಳು ಸೇತುವೆಯಲ್ಲಿ ಯುವಕರು ಹಾರಿ, ಕುಣಿದು ಅದನ್ನು ಅಲುಗಾಡಿಸಿದ ಕಾರಣಕ್ಕೆ ಅದು ಕುಸಿಯಿತು ಎಂದು ಪ್ರಚಾರ ಮಾಡಿದವು. ವಸ್ತು ಸ್ಥಿತಿಯನ್ನು ಅರಿತುಕೊಂಡು ಅಧಿಕಾರಿ ವರ್ಗ ಎಲ್ಲಿ ಎಡವಿದೆ ಎಂದು ಪ್ರಶ್ನಿಸುವ ವೃತ್ತಿಪರತೆಯನ್ನು ತೋರಿಸಲಿಲ್ಲ. ಮಾಧ್ಯಮಗಳು ಸತ್ಯಭ್ರಷ್ಟರಾಗುವ ದಾರಿಯಲ್ಲಿವೆ ಎಂಬುದಕ್ಕೆ ಇವು ಜ್ವಲಂತ ಉದಾಹರಣೆಗಳು.

ದೇಶದ ಪ್ರಜಾತಂತ್ರದ ಮೂಲಧ್ಯೇಯವಾದ ಸತ್ಯಮೇವ ಜಯತೆಗೆ ಹಿಡಿದ ಗ್ರಹಣದ ಬಿಡುಗಡೆ ಸುಲಭಸಾಧ್ಯವಲ್ಲ. ಆದರೆ ಚರಿತ್ರೆಯಲ್ಲಿ ಸಾಮೂಹಿಕ ಪ್ರಯತ್ನದಿಂದ ಸತ್ಯವು ಜಯಗಳಿಸಿದ ಘಟನೆಗಳು ಇವೆ. ನಮ್ಮ ದೇಶದಲ್ಲಿ 1975-77ರ ನಿರಂಕುಶಪ್ರಭುತ್ವವನ್ನು ಪ್ರಬುದ್ಧ ಮತದಾರರು ಸೋಲಿಸಿದ್ದು ಒಂದು ಮರೆಯಲಾಗದ ಉದಾಹರಣೆ. ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಮತ್ತು ವಿಯೆಟ್ನಾಂ ಯುದ್ಧ ವಿರೋಧಿ ಹೋರಾಟ, 1980ರ ದಶಕದಲ್ಲಿ ಪೋಲ್ಯಾಂಡ್‌ನಲ್ಲಿ ಸಂಭವಿಸಿದ ರಾಜಕೀಯ ಬದಲಾವಣೆಗಳು- ಇವುಗಳೆಲ್ಲ ಮನುಷ್ಯನು ಸತ್ಯಕ್ಕಾಗಿ ಹೋರಾಡಿ ಯಶಸ್ವಿಯಾದ ಘಟನೆಗಳು. ಹಾಗಾಗಿ ಅವು ಸ್ಫೂರ್ತಿದಾಯಕಗಳು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top