-

ಭಾರತೀಯ ಸೆಕ್ಯುಲರ್ ವಾದದ ಪೂರ್ವಾಪರ 

-

ಡಾ.ರಾಜಾರಾಮ ತೋಳ್ಪಾಡಿ: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಪದವಿ, ಮಂಗಳೂರು ವಿವಿಯಿಂದ ಪ್ರೊ.ಕೆ.ರಾಘವೇಂದ್ರ ರಾವ್ ಮತ್ತು ಪ್ರೊ. ವಲೇರಿಯನ ರಾಡ್ರಿಗಸ್ ಅವರ ಮಾರ್ಗದರ್ಶನದಲ್ಲಿ ರಾಮಮನೋಹರ ಲೋಹಿಯಾ ಅವರ ಕುರಿತು ನಡೆಸಿದ ಸಂಶೋಧನೆಗೆ ಪಿಎಚ್.ಡಿ. ಪದವಿ.CSDS , ಹೊಸದಿಲ್ಲಿಯಲ್ಲಿ ಎರಡು ವರ್ಷ ರಿಸರ್ಚ್ ಫೆಲೋ ಆಗಿ ಸಂಶೋಧನೆ ನಡೆಸಿದ್ದಾರೆ. ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಒಟ್ಟು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಭಾಷಾ ಭಾರತಿಗಾಗಿ ಸಮಾಜವಾದಿ ವಾಚಿಕೆ ಪುಸ್ತಕ ಸಂಪಾದಿಸಿದ್ದಾರೆ. ಲೌಕಿಕವಾದ, ಮತ್ತೆಮತ್ತೆ ಲೋಹಿಯಾ ಇವರ ಇತರೆ ಕೃತಿಗಳು. ಮಂಗಳೂರು ವಿವಿಯ ನೆಹರೂ ಚಿಂತನ ಕೇಂದ್ರದ ನಿರ್ದೇಶಕರಾಗಿ ಕಳೆದ ಎರಡು ವರ್ಷಗಳಿಂದ ಪ್ರಜಾತಂತ್ರ, ಸೆಕ್ಯುಲರ್ ವಾದ, ಅಭಿವೃದ್ಧಿ, ಗಾಂಧಿ-ನೆಹರೂ ಚಿಂತನೆ ಕುರಿತು ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಡಾ. ನಿತ್ಯಾನಂದ ಬಿ. ಶೆಟ್ಟಿ: ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಧ್ಯಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿರುವ ನಿತ್ಯಾನಂದ ಬಿ. ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೋಟೆಕಾರು ಗ್ರಾಮದ ಬಲ್ಯಬಾಳಿಕೆಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದವರು.ಕರಾವಳಿ ಕರ್ನಾಟಕದ ಕೋಮುವಾದ (ಡಾ. ಎಂ. ಚಂದ್ರ ಪೂಜಾರಿಯವರೊಂದಿಗೆ), ಪರಂಪರೆ-ಆಧುನಿಕತೆ-ಪ್ರತಿಸಂಸ್ಕೃತಿ (ಯು.ಆರ್. ಅನಂತಮೂರ್ತಿ ಪುಸ್ತಕದ ಅನುವಾದ), ಅಳಿಕೆ (ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸ್ಮೃತಿ ಕೃತಿ) ಸ್ವತಂತ್ರ, ಅನುವಾದಿತ ಮತ್ತು ಸಂಪಾದಿತ ಕೃತಿಗಳು. ಭಾರತದ ಹೆಸರಾಂತ ವಿದುಷಿ ಕಪಿಲಾ ವಾತ್ಸಾಯನರ ಬಹುಪ್ರಸಿದ್ಧ ‘ಕಲಾತತ್ತ್ವಕೋಶ’ ಪುಸ್ತಕಗಳ ಮೊದಲ ನಾಲ್ಕು ಸಂಪುಟಗಳ ಕನ್ನಡ ಆವೃತ್ತಿಯ ಸಂಪಾದಕರು. ತುಮಕೂರು ವಿ.ವಿ.ಯ ‘ಲೋಕಜ್ಞಾನ’ ಎಂಬ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದಗಳ ಸಂಶೋಧನಾ ಪತ್ರಿಕೆಯ ಸಂಪಾದಕರು.

           

ಬಹುಶಃ, ಒಂದು ಸಮಾಜವಾಗಿ ಹಾಗೂ ರಾಷ್ಟ್ರವಾಗಿ ಸೆಕ್ಯುಲರ್‌ವಾದದ ಕುರಿತು ಆಧುನಿಕ ಭಾರತ ಚಿಂತನೆ ನಡೆಸಿದಷ್ಟು ತೀಕ್ಷ್ಣವಾಗಿ ದಕ್ಷಿಣ ಏಶ್ಯದ ಇನ್ಯಾವುದೇ ಸಮಾಜ ಚಿಂತನೆ ನಡೆಸಿಲ್ಲವೆಂದರೆ ತಪ್ಪಾಗಲಾರದು. ಕಳೆದ ಶತಮಾನದ ಕೊನೆಯ ಭಾಗದಲ್ಲಿ ಮತ್ತು ಈ ಶತಮಾನದ ಮೊದಲ ಭಾಗದಲ್ಲಿ ಸೆಕ್ಯುಲರ್‌ವಾದಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ದೃಷ್ಟಿಕೋನಗಳು ಭಾರತದಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಕೆಲವು ಆಳವಾದ ತಾತ್ತ್ವಿಕ ಚಿಂತನೆಯನ್ನು ಮತ್ತು ರಾಜಕೀಯ ಸಂವೇದನೆಯನ್ನು ವ್ಯಕ್ತಪಡಿಸಿವೆ. ವಿಶೇಷವಾಗಿ, ರಾಮಜನ್ಮಭೂಮಿ ವಿವಾದದ ಕಾಲಘಟ್ಟದಲ್ಲಿ ಸೆಕ್ಯುಲರ್‌ವಾದದ ಭಾರತೀಯ ಸ್ವರೂಪಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗಳು ನಿಜಕ್ಕೂ ಬಹಳ ಗಹನವಾದವುಗಳು. ಭಾರತದಲ್ಲಿ ನಡೆದ ಸೆಕ್ಯುಲರ್‌ವಾದದ ಕುರಿತ ಜಿಜ್ಞಾಸೆಯ ಚರಿತ್ರೆಯನ್ನು ಕನಿಷ್ಠ ಮೂರು ಕಾಲಘಟ್ಟಗಳಲ್ಲಿ ನಿರೂಪಿಸಬಹುದು. ಅದರಲ್ಲಿ ಮೊದಲನೆಯದು ಭಾರತದ ಸ್ವಾತಂತ್ರ ಹೋರಾಟ ಮತ್ತು ಸಂವಿಧಾನ ರಚನೆಯ ಕಾಲಘಟ್ಟ. ಎರಡನೆಯದು 60ರ ದಶಕದಲ್ಲಿ ಸೆಕ್ಯುಲರ್‌ವಾದಿ ರಾಜನೀತಿಯ ಕುರಿತಾಗಿ ನಡೆದ ಜಿಜ್ಞಾಸೆ. ಮೂರನೆಯದಾಗಿ ಇಪ್ಪತ್ತನೆಯ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಸೆಕ್ಯುಲರ್‌ವಾದದ ಭಾರತೀಯ ಸ್ವರೂಪದ ಬಗೆಗಿನ ತಾತ್ತ್ವಿಕ ಚಿಂತನೆ. ಈ ಮೂರು ಕಾಲಘಟ್ಟಗಳಲ್ಲಿ ವ್ಯಕ್ತಗೊಂಡ ಭಾರತೀಯ ಸೆಕ್ಯುಲರ್‌ವಾದದ ಕೆಲವು ಪ್ರಮುಖವಾದ ನಿರ್ವಚನ ಮತ್ತು ನಿರೂಪಣೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸೋಣ.

ಸ್ವಾತಂತ್ರ ಹೋರಾಟ, ಸಂವಿಧಾನ ರಚನೆ ಮತ್ತು ಭಾರತೀಯ ಸೆಕ್ಯುಲರ್ ದೃಷ್ಟಿ

ಭಾರತದ ಸ್ವಾತಂತ್ರ ಹೋರಾಟ ಮತ್ತು ತದನಂತರದಲ್ಲಿ ನಡೆದ ಸಂವಿಧಾನ ಸಭೆಯ ಚರ್ಚೆಗಳು ಭಾರತೀಯ ಸೆಕ್ಯುಲರ್‌ವಾದಿ ದೃಷ್ಟಿಕೋನ ಮೊಳಕೆಯೊಡೆದ ಕಾಲಘಟ್ಟವೆಂದು ವರ್ಣಿಸಬಹುದು. ಅತ್ಯಂತ ಸಂಕೀರ್ಣವಾದ ಭಾರತದ ಸ್ವಾತಂತ್ರ ಹೋರಾಟದ ಚರಿತ್ರೆ ಅನೇಕ ಬಗೆಯ ತಾತ್ತ್ವಿಕ ಸಂದಿಗ್ಧ ಹಾಗೂ ಸಾಮಾಜಿಕ ಒಡಕುಗಳನ್ನು ಪ್ರತಿಬಿಂಬಿಸುತ್ತದೆ. ಹಾಗಿದ್ದೂ, ಅದು ಅನೇಕ ಮತ-ಧರ್ಮಗಳ, ಸಾಂಸ್ಕೃತಿಕ ಅಸ್ಮಿತೆಗಳ ಹಾಗೂ ಸಾಮಾಜಿಕ ವರ್ಗಗಳ ಹಿನ್ನೆಲೆಯಿಂದ ಬಂದ ಜನರ ಕೂಡುವಿಕೆ ಮತ್ತು ಭಾಗವಹಿಸುವಿಕೆಯ ವಿದ್ಯಮಾನವಾಗಿತ್ತು. ವಿವಿಧ ಕಾಲಘಟ್ಟಗಳಲ್ಲಿ ಅದು ವಿವಿಧ ಬಗೆಯ ಸೈದ್ಧಾಂತಿಕ ಒಲವುಗಳನ್ನು ಮತ್ತು ಸಾಮಾಜಿಕ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುತ್ತಿದ್ದುದು ಆಗಿದ್ದರೂ ಅಂತಿಮವಾಗಿ ಅದರ ನಾಯಕತ್ವ ಲಿಬರಲ್ ನೆಲೆಯ ರಾಜಕೀಯ ಧೋರಣೆಯನ್ನು ಪ್ರತಿನಿಧಿಸುವ ವಿದ್ಯಮಾನವಾಗಿತ್ತು.

ಪ್ರಖರವಾದ ವಸಾಹತುಶಾಹಿ ವಿರೋಧಿ ನೆಲೆಯಲ್ಲಿ ಅ-ಹಿಂಸಾತ್ಮಕವಾಗಿ ಸಂಘಟಿಸಲ್ಪಟ್ಟ ಭಾರತದ ಸ್ವಾತಂತ್ರ ಹೋರಾಟದ ತಾತ್ತ್ವಿಕ ಪ್ರಸ್ಥಾನ ಅವ್ಯಕ್ತವಾದ ಪ್ರಜಾತಾಂತ್ರಿಕ ಸೆಳೆತದಿಂದ ರೂಪಿಸಲ್ಪಟ್ಟಿತ್ತು. ಈ ಪ್ರಜಾತಾಂತ್ರಿಕ ಸೆಳೆತ ಅನೇಕ ತಾತ್ತ್ವಿಕ ಹಾಗೂ ರಾಜಕೀಯ ವೈರುಧ್ಯಗಳನ್ನು ಹೊಂದಿತ್ತಾದರೂ ಭಾರತೀಯ ಸಮಾಜದ ಸಾಂಸ್ಕೃತಿಕ ವಾಸ್ತವ ರಾಷ್ಟ್ರೀಯ ಹೋರಾಟವನ್ನು ಪ್ರಜಾತಾಂತ್ರಿಕ ನೆಲೆಯಲ್ಲಿ ಮುನ್ನಡೆಯುವಂತೆ ಮಾಡಿತು. ಸ್ವಾತಂತ್ರ ಹೋರಾಟದಲ್ಲಿ ನಿಹಿತವಾಗಿದ್ದ ಪ್ರಜಾತಾಂತ್ರಿಕ ಜೀವನದೃಷ್ಟಿ, ಧಾರ್ಮಿಕ ಸಮುದಾಯಗಳ ನಡುವಿನ ಸಂಘರ್ಷವನ್ನು ಗುರುತಿಸುವಂತೆ ಮತ್ತು ಅವುಗಳ ನಡುವೆ ಸೌಹಾರ್ದವನ್ನು ಸಾಧಿಸುವ ನೆಲೆಯಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡಿದೆ. ಹಾಗಾಗಿಯೇ, ಭಾರತದ ಸ್ವಾತಂತ್ರ ಹೋರಾಟದ ಸೈದ್ಧಾಂತಿಕ ಗರ್ಭದಲ್ಲಿ ಪ್ರಜಾತಂತ್ರ ಮತ್ತು ಸರ್ವಧರ್ಮ ಸಮಭಾವವೆನ್ನುವ ಅವಳಿ ಕಲ್ಪನೆಗಳು ಹುಟ್ಟಿಕೊಂಡವು. ಭಾರತದ ಸ್ವಾತಂತ್ರ ಹೋರಾಟದಲ್ಲಿ ಸರ್ವಧರ್ಮ ಸಮಭಾವದ ಅಥವಾ ಮತ ಧರ್ಮಗಳ ಕುರಿತು ಸಹನಾ ಭಾವದ ತಾತ್ತ್ವಿಕ ಧೋರಣೆ ಅಸ್ಪಷ್ಟವಾಗಿಯಾದರೂ ಅಭಿವ್ಯಕ್ತಗೊಂಡಿದ್ದರಿಂದಲೇ ಸ್ವಾತಂತ್ರ್ಯ ಹೋರಾಟದ ನಂತರದಲ್ಲಿ ಸಮಾವೇಶಗೊಂಡ ಸಂವಿಧಾನ ಸಭೆೆಯ ಚರ್ಚೆಗಳಲ್ಲಿ ಈ ಸರ್ವಧರ್ಮ ಸಮಭಾವದ ಸೆಕ್ಯುಲರ್ ದೃಷ್ಟಿಕೋನ ಪರಿಕಲ್ಪನಾತ್ಮಕವಾಗಿ ಮೂಡಿಬಂತು. ಹಾಗಾಗಿ, ಅದು ಭಾರತೀಯ ಸಂವಿಧಾನದ ತಾತ್ತ್ವಿಕ ಬುನಾದಿಯ ಭಾಗವಾಗಿ ಬೆಸೆಯಲ್ಪಟ್ಟಿತ್ತು.

ಸಂವಿಧಾನ ಸಭೆಯ ಚರ್ಚೆಗಳಲ್ಲಿ ಸೆಕ್ಯುಲರ್‌ವಾದಿ ಚಿಂತನೆ ಅದರ ತಾತ್ತ್ವಿಕ ಗಹನತೆಯ ಸ್ಪಷ್ಟ ತಿಳಿವಳಿಕೆಯಿಂದ ವ್ಯಕ್ತಗೊಳ್ಳಲಿಲ್ಲ. ಅಂತೆಯೇ, ಅಂದಿನ ಕಾಲದ ರಾಜಕೀಯ ಸಂಕಥನದಲ್ಲಿ ಸೆಕ್ಯುಲರ್‌ವಾದ ಅಷ್ಟೇನೂ ಪ್ರಮುಖವಾದ ಸ್ಥಾನವನ್ನೂ ಪಡೆದಿರಲಿಲ್ಲ. ಹಾಗಿದ್ದೂ, ಭಾರತದಂತಹ ಬಹುಸಂಸ್ಕೃತೀಯ ಮತ್ತು ಬಹುಧಾರ್ಮಿಕ ಸಮಾಜದಲ್ಲಿ ಸೆಕ್ಯುಲರ್‌ವಾದದ ತಾತ್ತ್ವಿಕ ಹಾಗೂ ರಾಜಕೀಯ ಮರುನಿರೂಪಣೆಗೆ ಪ್ರಮುಖವಾಗುವ ಪ್ರಶ್ನೆಗಳನ್ನು ಸಂವಿಧಾನ ಸಭೆಯಲ್ಲಿ ಮಂಡಿಸಲಾಯಿತು. ಉದಾಹರಣೆಗೆ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರದ ಸ್ವರೂಪವೇನು, ಅದು ವ್ಯಕ್ತಿ ಸ್ವಾತಂತ್ರವೇ ಅಥವಾ ಅದು ಸಾಮುದಾಯಿಕ ಸ್ವಾತಂತ್ರವೇ ಎನ್ನುವ ಪ್ರಶ್ನೆಯನ್ನು ಪ್ರಮುಖವಾಗಿ ಇಲ್ಲಿ ಕೇಳಲಾಗಿತ್ತು. ಅಂತೆಯೇ, ಧಾರ್ಮಿಕ ಸಮುದಾಯಗಳ ನಡುವಣ ತಕರಾರುಗಳನ್ನು ಪರಿಹರಿಸುವ ನೆಲೆಯಲ್ಲಿ ರಾಜ್ಯದ ಕಾರ್ಯಸೂಚಿ ಯಾವುದಾಗಿರಬೇಕು ಮತ್ತು ರಾಷ್ಟ್ರದ ಸಂಪತ್ತನ್ನು ನ್ಯಾಯಸಮ್ಮತವಾಗಿ ಸಮುದಾಯಗಳ ನಡುವೆ ವಿತರಿಸುವ ಬಗೆ ಹೇಗೆ ಇವೇ ಮೊದಲಾದ ಪ್ರಶ್ನೆಗಳು ಸಂವಿಧಾನ ಸಭೆಯ ಚರ್ಚೆಗಳಲ್ಲಿ ಮತ್ತೆಮತ್ತೆ ಕೇಳಲ್ಪಟ್ಟವು. ಈ ಪ್ರಶ್ನೆಗಳು ಸೆಕ್ಯುಲರ್‌ವಾದದ ಭಾರತೀಯ ಅವತರಣಿಕೆಯಲ್ಲಿ ಪ್ರಮುಖವಾದ ಪ್ರಶ್ನೆಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಧರ್ಮದ ಪ್ರಶ್ನೆಯನ್ನು ಮತ್ತು ಧಾರ್ಮಿಕ ಸಮುದಾಯಗಳ ನಡುವಿನ ಕ್ಲೇಶಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಹೇಗೆ ಅಥವಾ ಧಾರ್ಮಿಕ ಹಾಗೂ ಸಾಮಾಜಿಕ ಸ್ವಾಸ್ಥವನ್ನು ಭಾರತದಲ್ಲಿ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಪ್ರಮುಖವಾದ ಕಾಳಜಿಯನ್ನು ಪ್ರತಿಬಿಂಬಿಸಿದ ಸಂವಿಧಾನ ಸಭೆಯ ಚರ್ಚೆಯನ್ನು ಭಾರತದ ಸೆಕ್ಯುಲರ್‌ವಾದದ ತಾತ್ತ್ವಿಕ ತಳಹದಿ ಎಂದು ನಿಸ್ಸಂಶಯವಾಗಿ ಪರಿಗಣಿಸಬಹುದು.

ಸ್ವಾತಂತ್ರೋತ್ತರ ಭಾರತದಲ್ಲಿ ಸೆಕ್ಯುಲರ್‌ವಾದಿ ಚಿಂತನೆಗೆ ಸ್ಥಾನ-ಮಾನಗಳನ್ನು ಒದಗಿಸಿದವರಲ್ಲಿ ಪಂಡಿತ್ ಜವಾಹರ ಲಾಲ್ ನೆಹರೂ ಪ್ರಮುಖರು. ಅವರು ಭಾರತದ ಪ್ರಥಮ ಪ್ರಧಾನ ಮಂತ್ರಿಗಳಾಗಿ ಸೆಕ್ಯುಲರ್‌ವಾದವನ್ನು ಈ ದೇಶದ ರಾಜನೀತಿಯ ಪ್ರಮುಖ ತತ್ತ್ವವನ್ನಾಗಿ ಪರಿಕಲ್ಪಿಸಲು ಯತ್ನಿಸಿದರು. ಭಾರತ ಒಂದು ಬಹುಸಂಸ್ಕೃತೀಯ ಸಮಾಜವೆನ್ನುವ ಸಂಪೂರ್ಣ ಎಚ್ಚರದಲ್ಲಿ ಪಂಡಿತ್ ನೆಹರೂ ಸೆಕ್ಯುಲರ್ ನೋಟವನ್ನು ಆಧುನಿಕ ಭಾರತದ ಪ್ರಜಾತಾಂತ್ರಿಕ ರಾಜಕಾರಣದ ಪ್ರಮುಖ ಭಾಗವನ್ನಾಗಿಸಿದರು. ಭಾರತೀಯ ಜನಸಮುದಾಯ ತನ್ನನ್ನು ಯಾವುದೇ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪ್ರತಿಪಾದಕನೆಂದು ತಿಳಿಯುವುದಾದರೆ ಅದು ಸೆಕ್ಯುಲರ್‌ವಾದವೆಂದು ನೆಹರೂ ಅನೇಕ ಬಾರಿ ಘೋಷಿಸಿದ್ದರು. ಅಂತೆಯೇ, ರಾಜಕೀಯ ಕ್ರಿಯಾಚರಣೆಯ ಅಗತ್ಯತೆಯ ನೆಲೆಯಲ್ಲಿ ಸೆಕ್ಯುಲರ್‌ವಾದದ ತಾತ್ತ್ವಿಕ ರೂಪುರೇಷೆಗಳನ್ನೂ ಅವರು ವಿಶದಪಡಿಸಿದರು. ಪಂಡಿತ್ ನೆಹರೂರವರ ಸೆಕ್ಯುಲರ್ ದೃಷ್ಟಿ ಅವರ ಜೀವನ ದೃಷ್ಟಿಯ ಒಂದು ಭಾಗವೂ ಆಗಿತ್ತು. ಭಾರತೀಯ ಚರಿತ್ರೆಯ ಆಳವಾದ ತಿಳುವಳಿಕೆ, ಭಾರತೀಯ ಸಾಂಸ್ಕೃತಿಕ ಅಸ್ಮಿತೆಯ ಕುರಿತಾದ ಅಪಾರ ಸಂವೇದನಾಶೀಲತೆ ಹಾಗೂ ಆಧುನಿಕ, ವೈಚಾರಿಕ, ವೈಜ್ಞಾನಿಕ ದೃಷ್ಟಿಗಳಿಂದ ರೂಪುಗೊಂಡ ನೆಹರೂರವರ ಸೆಕ್ಯುಲರ್ ನೋಟ ಸ್ವಾತಂತ್ರೋತ್ತರ ಭಾರತದ ಅವರ ರಾಜಕೀಯ ಕ್ರಿಯಾಚರಣೆಯಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಅಂದಿನ ರಾಷ್ಟ್ರಾಧ್ಯಕ್ಷ ಬಾಬು ರಾಜೇಂದ್ರ ಪ್ರಸಾದರ ಧರ್ಮ ಪ್ರಣೀತ ರಾಜಕಾರಣದ ಕುರಿತು ಅವರು ಎತ್ತಿದ ತಕರಾರುಗಳು ಹಿಂದೂ ಸಮಾನ ಕಾಯ್ದೆಯ ಅನುಷ್ಠಾನಕ್ಕಾಗಿ ಅಂಬೇಡ್ಕರ್ ಜೊತೆಗೂಡಿ ಅವರು ನಡೆಸಿದ ಪ್ರಯತ್ನಗಳು ಹಾಗೂ ಮತಧರ್ಮಗಳ ನಡುವಿನ ಸಾಮರಸ್ಯಕ್ಕಾಗಿ ಅವರು ಪಟ್ಟ ಪರಿಶ್ರಮ ಭಾರತೀಯ ಸೆಕ್ಯುಲರ್‌ವಾದದ ಚರಿತ್ರೆಯಲ್ಲಿ ಅವರಿಗೆ ಮಹತ್ವದ ಸ್ಥಾನವನ್ನು ನೀಡುತ್ತದೆ.

ಸ್ವಾತಂತ್ರೋತ್ತರ ಭಾರತದ ಎರಡು ದಶಕಗಳ ಇತಿಹಾಸದಲ್ಲಿ ಪಂಡಿತ್ ನೆಹರೂರವರ ವಿಶೇಷ ಪ್ರಯತ್ನದಿಂದಾಗಿ ಭಾರತದ ರಾಜ್ಯ, ಸೆಕ್ಯುಲರ್ ಧೋರಣೆಯನ್ನು ತನ್ನ ಸಾರ್ವಜನಿಕ ನೀತಿಯ ಪ್ರಮುಖ ಭಾಗವನ್ನಾಗಿ ಬಿಂಬಿಸಿತು. ಆದರೆ, ಭಾರತೀಯ ಸಮಾಜದಲ್ಲಿ ರೂಢಮೂಲವಾಗಿರುವ ಮತಧರ್ಮಕ್ಕೆ ಸಂಬಂಧಿಸಿದ ತೊಡಕುಗಳನ್ನು ಹಾಗೂ ಜಾತಿ ಸಮುದಾಯಗಳ ಕ್ಲೇಶಗಳನ್ನು ನೆಹರೂರವರಿಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಭಾರತೀಯ ಸಮಾಜ ಆಧುನಿಕ ವೈಜ್ಞಾನಿಕ ಚಿಂತನೆಯಿಂದ ತನ್ನನ್ನು ಸಮಗ್ರವಾಗಿ ಮರುಸಂಘಟಿಸಿಕೊಳ್ಳುತ್ತದೆ ಎನ್ನುವ ನೆಹರೂರವರ ವಿಶ್ವಾಸ ಅವರ ಕಣ್ಣೆದುರಿನಲ್ಲಿಯೇ ಭಗ್ನಗೊಂಡಿತು. ಈ ನಡುವೆ, ಸ್ವಾತಂತ್ರೋತ್ತರ ಭಾರತದ 60ರ ಕಾಲಘಟ್ಟದಲ್ಲಿ ಸೆಕ್ಯುಲರ್‌ವಾದದ ಸ್ವರೂಪಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಯೊಂದು ಶೈಕ್ಷಣಿಕ ವಲಯದಲ್ಲಿ ಸಂಭವಿಸಿತು. ಇದನ್ನು ಅನೇಕರು ಭಾರತೀಯ ಸೆಕ್ಯುಲರ್‌ವಾದದ ಎರಡನೆಯ ಚರ್ಚೆಯೆಂದು ಕರೆದಿದ್ದಾರೆ. ಆ ಕಾಲದ ಅನೇಕ ಚಿಂತಕರು, ಸಾಮಾಜಿಕ ಶಾಸ್ತ್ರಜ್ಞರು ಹಾಗೂ ಸಾರ್ವಜನಿಕ ನೀತಿಯ ಕುರಿತು ಸಂಶೋಧನೆ ನಡೆಸಿದ ತಜ್ಞರು ಇದರಲ್ಲಿ ಪಾಲ್ಗೊಂಡಿದ್ದಾರೆ. ಈ ಚರ್ಚೆ ಅತ್ಯಂತ ಪ್ರಮುಖವಾಗಿ ಭಾರತೀಯ ಸೆಕ್ಯುಲರ್‌ವಾದದ ಸಾರ್ವಜನಿಕ ನೀತಿಯ ಸ್ವರೂಪದ ಕುರಿತು ತನ್ನ ಚಿಂತನೆಯನ್ನು ಕೇಂದ್ರೀಕರಿಸಿತು. ಆದ್ದರಿಂದಲೇ, ಬಹು ಧರ್ಮೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು ಈ ಚರ್ಚೆಯ ಕೇಂದ್ರ ಬಿಂದುಗಳಾಗಿದ್ದವು. 20ನೆಯ ಶತಮಾನದ 90ರ ದಶಕದಲ್ಲಿ ಭಾರತೀಯ ಸೆಕ್ಯುಲರ್‌ವಾದದ ಕುರಿತು ನಡೆದ ಶೈಕ್ಷಣಿಕ ವಾಗ್ವಾದ ತಾತ್ತ್ವಿಕವಾಗಿ ದಟ್ಟವಾದದ್ದು ಮಾತ್ರವಲ್ಲ, ಅದು ಭಾರತೀಯ ಸೆಕ್ಯುಲರ್‌ವಾದದ ಚರಿತ್ರೆ ಮತ್ತು ಸ್ವರೂಪ ಹಾಗೂ ಅದು ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಒಂದು ಸಮಗ್ರವಾದ ಸಾಂಸ್ಕೃತಿಕ ವಿಶ್ವದಲ್ಲಿ ಇಡಲು ಯತ್ನಿಸಿದೆ. ದೇಶದ ಅನೇಕ ಹೆಸರಾಂತ ಚಿಂತಕರು ಈ ವಾಗ್ವಾದದಲ್ಲಿ ತಮ್ಮ ವಿಶಿಷ್ಟ ದೃಷ್ಟಿಕೋನಗಳನ್ನು ಮುಂದಿರಿಸಿದ್ದಾರೆ. ರಾಮಜನ್ಮ ಭೂಮಿ ವಿವಾದದ ಸಮಕ್ಷಮದಲ್ಲಿ ಉತ್ಕರ್ಷಕ್ಕೆ ಬಂದ ಹಿಂದುತ್ವದ ರಾಜಕಾರಣದ ಪ್ರಖರತೆಯ ನಡುವೆ ಮತ್ತು ದೇಶದೆಲ್ಲೆಡೆ ಬಿಗಡಾಯಿಸುತ್ತಿರುವ ಸಾಮುದಾಯಿಕ ಕ್ಷೇಶಗಳ ಸಂಕೀರ್ಣ ಸನ್ನಿವೇಶದಲ್ಲಿ ಈ ವಾಗ್ವಾದ ನಡೆಯಿತು. ಭಾರತೀಯ ಸೆಕ್ಯುಲರ್‌ವಾದದ ತಾತ್ತ್ವಿಕ ರೂಪುರೇಷೆಗಳೇನು? ಅದರ ಸಾಮಾಜಿಕ ನೆಲೆಗಟ್ಟುಗಳು ಯಾವುವು ಮತ್ತು ರಾಜಕೀಯ ಕಾರ್ಯಭಾರಗಳಾವುವು? ಎನ್ನುವ ಕುರಿತು ವಿವಿಧ ಬಗೆಯ ದೃಷ್ಟಿಕೋನಗಳು ಈ ವಾಗ್ವಾದದಲ್ಲಿ ಮೂಡಿಬಂದವು. ಅಂತೆಯೇ, ಸೆಕ್ಯುಲರ್‌ವಾದದ ಪಾಶ್ಚಿಮಾತ್ಯ ಪರಿಪ್ರೇಕ್ಷ ಮತ್ತು ಭಾರತೀಯ ಸಂದರ್ಭದಲ್ಲಿ ಅದರ ಮರುನಿರ್ವಚನದ ತೊಡಕುಗಳ ಕುರಿತೂ ಈ ವಾಗ್ವಾದ ಮಹತ್ವದ ಬೆಳಕನ್ನು ಚೆಲ್ಲುತ್ತದೆ. 

 ಭಾರತೀಯ ಸೆಕ್ಯುಲರ್‌ವಾದದ ಅತ್ಯಂತ ಪ್ರಮುಖ ಪ್ರತಿಪಾದಕರೆಂದು ಪರಿಗಣಿಸ ಬಹುದಾದ ಪ್ರೊ. ರಾಜೀವ್ ಭಾರ್ಗವ್ 90ರ ದಶಕದಲ್ಲಿ ಪ್ರಕಟಿಸಿದ ಸೆಕ್ಯುಲರ್‌ವಾದ ಮತ್ತು ಅದರ ಟೀಕಾಕಾರರು (Secularism and its Critiques) ಎನ್ನುವ ತಮ್ಮ ಮಹತ್ವದ ಸಂಪಾದಿತ ಕೃತಿಯಲ್ಲಿ ಭಾರತೀಯ ಸೆಕ್ಯುಲರ್‌ವಾದದ ಮೇಲೆ ಮಾಡಲಾದ ಐದು ಪ್ರಮುಖ ಆರೋಪಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ. 

1.ಸೆಕ್ಯುಲರ್‌ವಾದ ಪಶ್ಚಿಮ ಜನ್ಯವಾದದ್ದು. ಅದರ ತಾತ್ತ್ವಿಕತೆ ಮತ್ತು ರಾಜಕಾರಣದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಚಹರೆಗಳು ದಟ್ಟವಾಗಿವೆ. ಆದ್ದರಿಂದ ಭಾರತದಂತಹ ಪಶ್ಚಿಮೇತರ ಸಮಾಜಗಳಿಗೆ ಅದು ಪರಕೀಯವಾದದ್ದು. 

2.ಸೆಕ್ಯುಲರ್‌ವಾದ ಯುರೋಪಿನ ನಿರ್ದಿಷ್ಟ ಮತೀಯ ಸಂದರ್ಭದಲ್ಲಿ ರೂಪುಗೊಂಡದ್ದು. ಅದು ಒಂದು ಅರ್ಥದಲ್ಲಿ ಕ್ರೈಸ್ತ ಮತದ ಪ್ರತಿಬಿಂಬ ಅಥವಾ ಅದು ತಲೆಕೆಳಗಾಗಿ ನಿಂತ ಕ್ರೈಸ್ತಮತ. ಆದ್ದರಿಂದ, ಯುರೋಪಿಗಿಂತ ಸಂಪೂರ್ಣವಾಗಿ ಭಿನ್ನವಾದ ಭಾರತೀಯ ಸಂದರ್ಭದಲ್ಲಿ ಅದನ್ನು ಯಾವ ರೂಪದಲ್ಲಾದರೂ ಅಳವಡಿಸುವುದು ವಿನಾಶಕಾರಿ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ.

 3.ಸೆಕ್ಯುಲರ್‌ವಾದ ತನ್ನ ಆಂತರ್ಯದಲ್ಲಿ ನಿರೀಶ್ವರವಾದ ಅಥವಾ ದೈವ ನಿರಾಸಕ್ತವಾದದ ತಾತ್ತ್ವಿಕ ಎಳೆಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಧಾರ್ಮಿಕತೆ ತುಂಬಿ ತುಳುಕುತ್ತಿರುವ ಭಾರತೀಯ ಸಮಾಜದಲ್ಲಿ ಅದು ನಂಬಿಕಸ್ಥರನ್ನು ಘಾಸಿಗೊಳಿಸುತ್ತದೆ. 

4.ಸೆಕ್ಯುಲರ್‌ವಾದ ತಾತ್ತ್ವಿಕವಾಗಿ ಧರ್ಮ ನಿರಪೇಕ್ಷತೆಯ ನೆಲೆಯ ಒಂದು ತಟಸ್ಥ ರಾಜ್ಯ ವನ್ನು ಪ್ರತಿಪಾದಿಸುತ್ತದೆ. ಹಾಗಾಗಿ, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಭಾರತದಲ್ಲಿ ಪರಿಕಲ್ಪಿಸಲ್ಪಟ್ಟ ಕ್ರಿಯಾಶೀಲ ರಾಜ್ಯಕ್ಕೆ ಅದರ ತಾತ್ತ್ವಿಕತೆ ವ್ಯತಿರಿಕ್ತವಾಗಿದೆ.

 5.ಸೆಕ್ಯುಲರ್‌ವಾದ ಭಾರತೀಯ ಸಮಾಜದ ಮೇಲೆ ಹೇರಲ್ಪಟ್ಟ ತತ್ತ್ವ. ಅದು ಜನ ಜೀವನದ ಅವಿಭಾಜ್ಯ ಭಾಗವಾಗಿ ರೂಪುಗೊಂಡಿಲ್ಲ. ಭಾರತದ ದೈತ್ಯ ರಾಜ್ಯದ ಮೇಲುಸ್ತುವಾರಿ ಯಲ್ಲಿ ಆಳುವ ವರ್ಗಗಳ ಸಹಮತದಲ್ಲಿ ಜನಸಮುದಾಯಗಳಿಗೆ ಬೋಧಿಸಲ್ಪಡುತ್ತಿರುವ ಸೆಕ್ಯುಲರ್‌ವಾದ ಗಂಡಾಂತರಕಾರಿಯಾದದ್ದು.

ಈಗ ಈ ಆಕ್ಷೇಪಗಳನ್ನು ಸ್ವಲ್ಪ ವಿವರವಾಗಿ ಪರಿಶೀಲಿಸೋಣ.

1.ಸೆಕ್ಯುಲರ್‌ವಾದದ ಮೇಲೆ ಮಾಡಲಾದ ಮೊದಲನೆಯ ಆರೋಪ ಅದರ ಪಾಶ್ಚಿಮಾತ್ಯ ಹಿನ್ನೆಲೆಗೆ ಸಂಬಂಧಿಸಿದ್ದು. ಈ ಆರೋಪವನ್ನು ಮಾಡಿದವರಲ್ಲಿ ಪ್ರಮುಖರಾದವರು ಭಾರತದ ಪ್ರಖ್ಯಾತ ಸಂಸ್ಕೃತಿ ಚಿಂತಕರಾದ ಆಶಿಶ್ ನಂದಿ ಮತ್ತು ಸಮಾಜಶಾಸ್ತ್ರಜ್ಞ ಟಿ.ಎನ್.ಮದನ್. ನಂದಿಯವರು ಸೆಕ್ಯುಲರ್‌ವಾದದ ಬಗೆಗಿನ ತಮ್ಮ ಮೊತ್ತಮೊದಲ ಅತ್ಯಂತ ವಿಚಾರಪ್ರಚೋದಕವಾದ ಸೆಕ್ಯುಲರ್ ವಿರೋಧಿ ಪ್ರಣಾಳಿಕೆ  (Anti Secular Menifesto)  ಎನ್ನುವ ಲೇಖನದಲ್ಲಿ ಸೆಕ್ಯುಲರ್‌ವಾದವನ್ನು ತೀವ್ರವಾಗಿ ಖಂಡಿಸುತ್ತಾರೆ. ಅವರ ಪ್ರಕಾರ ಸೆಕ್ಯುಲರ್‌ವಾದ ಭಾರತೀಯ ಬದುಕಿಗೆ ಅತ್ಯಂತ ಘಾತುಕಕಾರಿಯಾದ ವಿದ್ಯಮಾನ. ಅದು ರಾಷ್ಟ್ರವಾದ ಎನ್ನುವ ಅಷ್ಟೇ ಘಾತುಕಕಾರಿಯಾದ ಇನ್ನೊಂದು ಪಾಶ್ಚಿಮಾತ್ಯ ವಿದ್ಯಮಾನದ ಸೋದರ ಸಂಬಂಧಿ. ಆಧುನಿಕ ಕಾಲಘಟ್ಟದಲ್ಲಿ ಭಾರತವನ್ನು ಮತ್ತು ಅದರ ಸಾಂಸ್ಕೃತಿಕ ಅಸ್ಮಿತೆಯನ್ನು ಈ ಎರಡು ಅವಳಿ ಸಿದ್ಧಾಂತಗಳು ವಿರೂಪಗೊಳಿಸಿದಷ್ಟು ಬೇರ್ಯಾವುದೂ ವಿರೂಪಗೊಳಿಸಿಲ್ಲ ಎಂದು ಪ್ರತಿಪಾದಿಸುವ ನಂದಿಯವರು ಆಧುನಿಕ ರಾಷ್ಟ್ರವಾದದಲ್ಲಿ ಕಂಡು ಬರುವ ಎಲ್ಲ ಬಗೆಯ ಹಿಂಸೆ ಮತ್ತು ದಬ್ಬಾಳಿಕೆಗಳನ್ನು ಸೆಕ್ಯುಲರ್‌ವಾದದಲ್ಲಿಯೂ ಕಾಣುತ್ತಾರೆ.

 ತಮ್ಮ ಇನ್ನೊಂದು ಪ್ರಮುಖ ಗ್ರಂಥವಾದ ರಾಷ್ಟ್ರವಾದದ ನ್ಯಾಯಬಾಹಿರತೆ (the illegitimacy of Nationalism) ಯಲ್ಲಿ ನಂದಿಯವರು ರಾಷ್ಟ್ರವಾದ ಹೇಗೆ ಭಾರತದಲ್ಲಿ ಹಿಂದೆಂದೂ ಕಂಡು ಕೇಳರಿಯದ ಹಿಂಸೆಯನ್ನು ಮಾಡಿದೆ ಎಂದು ವಾದಿಸುತ್ತಾರೆ. ಅವರ ಪ್ರಕಾರ ಸೆಕ್ಯುಲರ್‌ವಾದವು ಭಾರತೀಯ ಬದುಕಿಗೆ ಹೊರತಾದದ್ದು ಮತ್ತು ಮೇಲಿನಿಂದ ಹೇರಲ್ಪಟ್ಟದ್ದು. ಆಧುನಿಕ ಹಿಂಸಾತ್ಮಕ ಭಾರತ ರಾಜ್ಯದ ಸೈದ್ಧಾಂತಿಕ ಅಸ್ತ್ರವಾದ ಸೆಕ್ಯುಲರ್‌ವಾದ ಪೇಟೆ-ಪಟ್ಟಣಗಳಲ್ಲಿ ಬದುಕುವ ಮಧ್ಯಮ ವರ್ಗದ ಕಾಸ್ಮೋಪೊಲಿಟನ್ ಸಂಕಥನದ ಮೂಲಕ ನ್ಯಾಯ ಸಮ್ಮತಗೊಳಿಸಲ್ಪಟ್ಟಿದೆ. ಆದರೆ ಭಾರತೀಯ ಜನಸಮುದಾಯ ಈ ಕಾಸ್ಮೋಪೊಲಿಟನ್ ವರ್ಗದ ಸೆಕ್ಯುಲರ್‌ವಾದದ ಪಾಠಕ್ಕಿಂತ ಬಹು ಮೊದಲೇ ತಮ್ಮ ಧಾರ್ಮಿಕ ಜಗಳಗಳನ್ನು ಅಥವಾ ಸಾಮುದಾಯಿಕ ಕ್ಲೇಶಗಳನ್ನು ಪರಿಹರಿಸುವ ದಾರಿಗಳನ್ನು ಕಂಡುಕೊಂಡಿದೆ. ಹಾಗಾಗಿ, ಪಾಶ್ಚಿಮಾತ್ಯ ಸೆಕ್ಯುಲರ್‌ವಾದ ಬೋಧಿಸುವ ಶಾಂತಿಮಂತ್ರ ಅದಕ್ಕೆ ಅಗತ್ಯವಿಲ್ಲ. ಹೀಗೆ, ಆಶಿಶ್ ನಂದಿ ಭಾರತೀಯ ಬದುಕಿನಲ್ಲಿ ಸೆಕ್ಯುಲರ್‌ವಾದದ ಅಪ್ರಸ್ತುತತೆಯ ಕುರಿತು ತಮ್ಮ ಪ್ರತಿಪಾದನೆಯನ್ನು ಮಾಡುತ್ತಾರೆ.ಹೆಚ್ಚು-ಕಡಿಮೆ ಆಶಿಶ್ ನಂದಿಯವರು ಪ್ರತಿಪಾದಿಸಿದ ನೆಲೆಯಲ್ಲಿಯೇ ಟಿ.ಎನ್.ಮದನ್ ಕೂಡಾ ಸೆಕ್ಯುಲರ್‌ವಾದದ ವಿಮರ್ಶೆಯನ್ನು ಮಾಡುತ್ತಾರೆ. ತಮ್ಮ ಆಧುನಿಕ ಮಿಥ್ಯಗಳು ಮತ್ತು ಮುಚ್ಚಿದ ಮನಸ್ಸುಗಳು     (Modern Myths and Locked Minds) ಎನ್ನುವ ಅಧ್ಯಯನಶೀಲ ಕೃತಿಯಲ್ಲಿ ಅವರು ಭಾರತೀಯ ಧಾರ್ಮಿಕ ಪರಂಪರೆಗಳ ಸಮಗ್ರ ನೋಟವನ್ನು ನೀಡುತ್ತಾ ಹೇಗೆ ಸೆಕ್ಯುಲರ್‌ವಾದ ಭಾರತದ ಸಾಂಸ್ಕೃತಿಕ ಪರಂಪರೆಗಳಿಗೆ ಹೊರತಾದದ್ದು ಎಂದು ವಾದಿಸುತ್ತಾರೆೆ. ಮದನ್‌ರವರ ಪ್ರತಿಪಾದನೆ ನಂದಿಯವರ ಸೆಕ್ಯುಲರ್‌ವಾದದ ಕಟು ವಿಮರ್ಶೆಯ ವಿಸ್ತೃತ ರೂಪವೇ ಆಗಿದೆ.

 2.ಸೆಕ್ಯುಲರ್‌ವಾದದ ಮೇಲೆ ಮಾಡಲಾದ ಎರಡನೆಯ ಆರೋಪವೆಂದರೆ ಅದಕ್ಕಿರುವ ಕ್ರೈಸ್ತ ಮತೀಯ ನೆಲೆಗಟ್ಟಿಗೆ ಸಂಬಂಧಿಸಿದ್ದು. ಇದನ್ನು ಪ್ರತಿಪಾದಿಸಿದವರು ಬೆಲ್ಜಿಯಮ್ ದೇಶದ ಗೆಂಟ್ ವಿಶ್ವವಿದ್ಯಾನಿಲಯದ ಧರ್ಮ ಚಿಂತನೆಯ ಪ್ರಾಧ್ಯಾಪಕರಾದ ಎಸ್.ಎನ್.ಬಾಲಗಂಗಾಧರ್. ಅವರ ಪ್ರಕಾರ ಸೆಕ್ಯುಲರ್‌ವಾದ ಯುರೋಪಿನ ಕ್ರೈಸ್ತ ಮತದ ಅದರಲ್ಲೂ ವಿಶೇಷವಾಗಿ ಪ್ರೊಟೆಸ್ಟೆಂಟ್ ಮತದ ಪ್ರತಿರೂಪ. ತಮ್ಮ (ಸ್ಮತಿ-ವಿಸ್ಮತಿ: ಭಾರತೀಯ ಸಂಸ್ಕೃತಿ) ಎನ್ನುವ ಸಂಶೋಧನಾ ಕೃತಿಯಲ್ಲಿ ಬಾಲಗಂಗಾಧರ್ ಕ್ರೈಸ್ತ ಮತದಂತಹ ಸೆಮೆಟಿಕ್ ಧರ್ಮಗಳಿರುವ ಸಮಾಜಗಳಲ್ಲಿ ಮಾತ್ರ ಸೆಕ್ಯುಲರ್‌ವಾದ ಸೂಕ್ತವಾಗಬಹುದೇ ಹೊರತು ಭಾರತದಂತಹ ಸಂಪ್ರದಾಯ ನಿಬಿಡ ನಾಡಿನಲ್ಲಿ ಅಲ್ಲ ಎಂದು ಪ್ರತಿಪಾದಿಸುತ್ತಾರೆ.

 3.ಸೆಕ್ಯುಲರ್‌ವಾದದ ಮೇಲೆ ಮಾಡಲಾದ ಮೂರನೆಯ ಆರೋಪ, ಅದು ಪ್ರತಿನಿಧಿಸುತ್ತದೆ ಎನ್ನಲಾದ ತಟಸ್ಥ ರಾಜ್ಯದ ಕಲ್ಪನೆ ಮತ್ತು ಅದರ ಭಾರತೀಯ ಔಚಿತ್ಯಕ್ಕೆ ಸಂಬಂಧಿಸಿದ್ದು. ಈ ಟೀಕೆಯನ್ನು ಮಾಡಿದವರಲ್ಲಿ ಭಾರತದ ಸುಪ್ರಸಿದ್ಧ ರಾಜಕೀಯ ತತ್ತ್ವಶಾಸ್ತ್ರಜ್ಞರಾದ ಪಾರ್ಥ ಚಟರ್ಜಿ ಮೊದಲಿಗರು. ಅವರ ಪ್ರಕಾರ, ಸೆಕ್ಯುಲರ್‌ವಾದದ ತಾತ್ತ್ವಿಕತೆ ಧರ್ಮ ಮತ್ತು ರಾಜಕಾರಣಗಳ ನಡುವಿನ ಪ್ರತ್ಯೇಕತೆಯನ್ನು ಆಧರಿಸಿದೆ. ಧರ್ಮವನ್ನು ಆಯಾ ಸಮಾಜಗಳ ನಾಗರಿಕರ ಖಾಸಗಿ ಕ್ಷೇತ್ರವೆಂದು ಪರಿಭಾವಿಸುವ ಸೆಕ್ಯುಲರ್‌ವಾದ ರಾಜಕಾರಣವನ್ನು ಸಾರ್ವಜನಿಕ ಎಂದು ಬಗೆಯುತ್ತದೆ. ಈ ಅರ್ಥದಲ್ಲಿ ಧರ್ಮ ಮತ್ತು ರಾಜಕಾರಣಗಳ ಪ್ರತ್ಯೇಕತೆ, ಚಟರ್ಜಿಯವರ ಪ್ರಕಾರ, ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳ ಪ್ರತ್ಯೇಕತೆಯೂ ಹೌದು. ಸೆಕ್ಯುಲರ್‌ವಾದ ಪ್ರತಿಪಾದಿಸುವಂತೆ (ಅದು ಲಿಬರಲ್ ರಾಜಕಾರಣದ ತರ್ಕವೂ ಹೌದು) ರಾಜ್ಯ ನಾಗರಿಕರ ಖಾಸಗಿ ಬದುಕಿನಲ್ಲಿ ನಡುಪ್ರವೇಶಿಸದೆ ಸಾರ್ವಜನಿಕ ವಲಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ದೃಢಪಡಿಸುವ ಸಂಸ್ಥೆ. ಹಾಗಾಗಿ, ಅದು ಧರ್ಮ ಅಥವಾ ಧಾರ್ಮಿಕ ತಕರಾರುಗಳ ಗೊಡವೆಗೆ ಹೋಗದೆ ತಟಸ್ಥವಾಗಿ ಅಥವಾ ಧರ್ಮ ನಿರಪೇಕ್ಷವಾಗಿ ತನ್ನ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸಬೇಕು.

 ಪಾರ್ಥ ಚಟರ್ಜಿ ಮುಂದಿಡುವಂತೆ ಲಿಬರಲ್ ಚಿಂತನೆಯ ಅವಿಭಾಜ್ಯ ಭಾಗವಾದ ಸೆಕ್ಯುಲರ್‌ವಾದದಲ್ಲಿ ನಿಹಿತವಾಗಿರುವ ತಟಸ್ಥ ರಾಜ್ಯದ ಕಲ್ಪನೆಗೂ, ಭಾರತದ ಸಂವಿಧಾನ ಮುಂದಿಡುವ ಕ್ರಿಯಾಶೀಲ ಪ್ರಜಾತಾಂತ್ರಿಕ ರಾಜ್ಯದ ಕಲ್ಪನೆಗೂ ಪರಿಹರಿಸ ಲಾಗದ ಸಮಸ್ಯೆ ಇದೆ. ಭಾರತದ ಸಂವಿಧಾನ ಪರಿಕಲ್ಪಿಸುವ ರಾಜ್ಯ; ಪ್ರಜಾತಂತ್ರ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿನಿಧಿಸುವ ಕ್ರಿಯಾಶೀಲ ಅಥವಾ ಪ್ರಗತಿಶೀಲ ರಾಜ್ಯ. ಅಸಮಾನ ಸಮಾಜದಲ್ಲಿ ಸಕ್ರಿಯ ಮಧ್ಯೆಪ್ರವೇಶದ ಮೂಲಕ ಸಮುದಾಯಗಳ ನಡುವೆ ಸೌಹಾರ್ದವನ್ನು ಸಾಧಿಸಬಯಸುವ ಭಾರತ ರಾಜ್ಯಕ್ಕೂ ಪಾಶ್ಚಿಮಾತ್ಯ ಸೆಕ್ಯುಲರ್‌ವಾದ ಮುಂದಿಡುವ ತಟಸ್ಥ ರಾಜ್ಯಕ್ಕೂ ಚಟರ್ಜಿಯವರ ಪ್ರಕಾರ ಅಜಗಜಾಂತರವಿದೆ.

 ಪಾರ್ಥ ಚಟರ್ಜಿಯವರಂತೆಯೇ ಸೆಕ್ಯುಲರ್‌ವಾದದ ಬಗ್ಗೆ ಇನ್ನೊಂದು ನಿಟ್ಟಿನಲ್ಲಿ ಆಕ್ಷೇಪವನ್ನು ಎತ್ತುವವರು ಕೊಲಂಬಿಯಾ ವಿಶ್ವವಿದ್ಯಾನಿಲಯದ ತತ್ತ್ವಶಾಸ್ತ್ರದ ಪ್ರಾಧ್ಯಾಪಕ ರಾದ ಅಖಿಲ್ ಬಿಲ್‌ಗ್ರಾಮಿ. ರಾಜ್ಯದ ಸಾರ್ವಜನಿಕ ನೀತಿಯನ್ನು ನಿರೂಪಿಸುವ ಸೆಕ್ಯುಲರ್‌ವಾದ, ಮೂಲ ಸ್ವರೂಪದಲ್ಲಿ ಮೇಲಿನಿಂದ ಹೇರಲ್ಪಡುವ ವಿದ್ಯಮಾನ ವಾಗಿದೆ. ಬಲಶಾಲಿ ಆರ್ಕಿಮೀಡಿಯನ್ ರಾಜ್ಯದಿಂದ ಜಬರ್‌ದಸ್ತ್‌ನ ಹೇರಿಕೆಯಾಗಿರುವ ಅದು ಜನಸಮುದಾಯಗಳ ವಾಸ್ತವ ಬದುಕಿನ ಅನುಭವದಿಂದ ಜನಿಸಿರುವುದಲ್ಲ. ಹಾಗಾಗಿ, ಅದು ಪ್ರತಿನಿಧಿಸುವ ವಿಶ್ವನೋಟದಲ್ಲಿ ಒಂದು ಬಗೆಯ ಪ್ರಭುತ್ವ ನಿಹಿತ ಅವಾಸ್ತವಿಕತೆ ಇದೆ. ಸೆಕ್ಯುಲರ್‌ವಾದ ಎಲ್ಲಿಯವರೆಗೆ ರಾಜ್ಯದ ದಬ್ಬಾಳಿಕೆಯ ವಿದ್ಯಮಾನ ವಾಗಿರುತ್ತದೋ ಅಲ್ಲಿಯವರೆಗೆ ಅದು ಅಪ್ರಜಾಸತ್ತಾತ್ಮಕವೂ ಹಾಗೂ ಅನಪೇಕ್ಷಣಿಯವೂ ಆಗುತ್ತದೆ- ಎಂದು ವಾದಿಸುವ ಅಖಿಲ್ ಬಿಲ್‌ಗ್ರಾಮಿ ಸೆಕ್ಯುಲರ್‌ವಾದವನ್ನು ಭಾರತೀಯ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕಗೊಳಿಸುವ ಮತ್ತು ಅದನ್ನು ನಾಗರಿಕ ಸಮಾಜದ ಮನಸ್ಥಿತಿಯನ್ನಾಗಿಸುವ ಮಾರ್ಗೋಪಾಯಗಳ ಕುರಿತು ನಿಷ್ಕರ್ಷೆ ನಡೆಸುತ್ತಾರೆ. 4.ಸೆಕ್ಯುಲರ್‌ವಾದದ ಮೇಲೆ ಮಾಡಲಾದ ನಾಲ್ಕನೆಯ ಆಕ್ಷೇಪ ಅದರ ಲೌಕಿಕವಾದಿ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು. ಸೆಕ್ಯುಲರ್‌ವಾದ ಅದರ ಮೂಲ ಸ್ವರೂಪದಲ್ಲಿ ಇಹಲೋಕದ ಸ್ವಾಯತ್ತತೆ ಮತ್ತು ಪ್ರಾಥಮಿಕತೆಯನ್ನು ಪ್ರತಿಪಾದಿಸುತ್ತದೆ. ಹೀಗಾಗಿ, ದೇವರು, ಧರ್ಮ, ಪಾಪ ಹಾಗೂ ಪುಣ್ಯಗಳಂತಹ ಪರಿಕಲ್ಪನೆಗಳ ಮೂಲಕ ಈ ಲೋಕವನ್ನು ಕಣ್ಣಿಗೆ ಕಾಣದ ಅಥವಾ ಇಂದ್ರಿಯಾನುಭವಕ್ಕೆ ಸಿಗದ ಇನ್ನೊಂದು ಲೋಕದೊಂದಿಗೆ ಜೋಡಿಸುವುದು ಅಥವಾ ಪರಾಧೀನಗೊಳಿಸುವುದು ಸೆಕ್ಯುಲರ್‌ವಾದ ಪ್ರತಿನಿಧಿಸುವ ತಾತ್ತ್ವಿಕತೆಗೆ ವ್ಯತಿರಿಕ್ತವಾದದ್ದು. ಈ ಅರ್ಥದಲ್ಲಿ ಸೆಕ್ಯುಲರ್‌ವಾದದಲ್ಲಿ ನಿಹಿತವಾಗಿರುವ ದೈವ ನಿರಾಕರಣೆ ಅಥವಾ ದೈವ ನಿರಾಸಕ್ತಿ ಧರ್ಮಿಷ್ಟರನ್ನು ಅಥವಾ ನಂಬಿಗಸ್ಥರನ್ನು ಕಂಗೆಡಿಸುತ್ತದೆ ಎನ್ನುವ ಆಕ್ಷೇಪವನ್ನು ಎತ್ತಲಾಗಿದೆ. ಭಾರತ ಆಳವಾದ ಧಾರ್ಮಿಕತೆಯನ್ನು ಬಿಂಬಿಸುವ ದೇಶ. ಇಲ್ಲಿನ ವಿವಿಧ ಜನಸಮುದಾಯಗಳು ಬೇರೆಬೇರೆ ಬಗೆಯ ದೈವ ಕಲ್ಪನೆಯನ್ನು ನಂಬುವ ಹಾಗೂ ಧಾರ್ಮಿಕಾಚರಣೆಗಳನ್ನು ನಿಷ್ಠೆಯಿಂದ ಪರಿಪಾಲಿಸುವ ರೂಢಿಯನ್ನು ಇರಿಸಿಕೊಂಡವರು. ಇಂತಹ ದೇಶದಲ್ಲಿ ಸೆಕ್ಯುಲರ್‌ವಾದ ಬೇರೂರಲು ಸಾಧ್ಯವಿಲ್ಲ. ಆಧ್ಯಾತ್ಮಿಕತೆಯನ್ನು ಅಲ್ಲಗಳೆಯುವ, ಜನಸಮುದಾಯಗಳ ಧಾರ್ಮಿಕ ಶ್ರದ್ಧೆಯನ್ನು ಗೌರವಿಸದ, ಅವರ ಧರ್ಮಾಚರಣೆಗಳನ್ನು ಅಂಧಶ್ರದ್ಧೆಯೆಂದು ಪರಿಭಾವಿಸುವ ಸೆಕ್ಯುಲರ್‌ವಾದದ ವಿಜ್ಞಾನ ನಿಹಿತ ವೈಚಾರಿಕತೆ ಭಾರತದಲ್ಲಿ ಅಪ್ರಸ್ತುತವಾದದ್ದು ಮಾತ್ರವಲ್ಲ. ಅದು ವಿನಾಶಕಾರಿ ಪರಿಣಾಮಗಳಿಗೆ ಎಡೆಮಾಡಿಕೊಡಬಹುದು ಎನ್ನುವ ನಿಲುವನ್ನು ಭಾರತದಲ್ಲಿ ಅನೇಕ ವಿಮರ್ಶಕರು ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೆಕ್ಯುಲರ್‌ವಾದದ ಕಾರ್ಯಸೂಚಿ 

ಭಾರತೀಯ ಸೆಕ್ಯುಲರ್‌ವಾದದ ಕುರಿತಾದ ನಮ್ಮ ಈ ಚರ್ಚೆಯ ಕೊನೆಯ ಭಾಗ ಸೆಕ್ಯುಲರ್‌ವಾದದ ಮೇಲೆ ಮಾಡಲಾದ ಆಕ್ಷೇಪಗಳ ಹಿನ್ನೆಲೆಯಲ್ಲಿ ಭಾರತೀಯ ಸೆಕ್ಯುಲರ್‌ವಾದದ ಕಾರ್ಯಸೂಚಿಯ ಕುರಿತು ಕೆಲವು ಪ್ರತಿಫಲನಗಳನ್ನು ಮುಂದಿಡಬಯಸುತ್ತದೆ.

ಮೊದಲನೆಯದಾಗಿ, ಸೆಕ್ಯುಲರ್‌ವಾದದ ಮೇಲೆ ಮಾಡಲಾದ ಬಹುತೇಕ ಆಕ್ಷೇಪಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾಬಲ್ಯದಲ್ಲಿರುವ ಚರ್ಚ್-ರಾಜ್ಯ ಮಾದರಿಯೊಂದೇ ಸೆಕ್ಯುಲರ್‌ವಾದದ ಏಕೈಕ ರೂಪವೆಂದು ತಿಳಿದಂತಿದೆ. ಅಂತೆಯೇ, ಈ ಚರ್ಚ್-ರಾಜ್ಯ ಮಾದರಿಯ ಸೆಕ್ಯುಲರ್‌ವಾದ ಪ್ರತಿನಿಧಿಸುವ ಧರ್ಮ ಮತ್ತು ರಾಜಕಾರಣದ ನಡುವಣ ವಿಶ್ಲೇಷಣಾತ್ಮಕ ವ್ಯತ್ಯಾಸವನ್ನು ಒಂದು ಅಳಿಸಲಾಗದ ದಪ್ಪಗೆರೆಯೆಂದು ಪರಿಭಾವಿಸಿದಂತಿದೆ. ಆದರೆ ಚರ್ಚ್ -ರಾಜ್ಯ ಮಾದರಿಯ ಸೆಕ್ಯುಲರ್‌ವಾದವೇ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಸೆಕ್ಯುಲರ್‌ವಾದದ ಏಕೈಕ ಮಾದರಿಯಲ್ಲ. ಅಂತೆಯೇ, ಅದು ಪ್ರತಿನಿಧಿಸುವ ಧರ್ಮ ಹಾಗೂ ರಾಜಕಾರಣದ ನಡುವಣ ವ್ಯತ್ಯಾಸ ಅಳಿಸಲಾಗದ ಅಥವಾ ಏಕರೂಪದ ವ್ಯತ್ಯಾಸವೂ ಅಲ್ಲ. ಬೇರೆಬೇರೆ ಸಮಾಜಗಳು ಧರ್ಮ ಮತ್ತು ರಾಜಕಾರಣಗಳ ನಡುವಣ ವ್ಯತ್ಯಾಸವನ್ನು ತಮ್ಮತಮ್ಮ ಬದುಕಿನ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನಿರ್ದಿಷ್ಟತೆಯಲ್ಲಿ ಮರುನಿರ್ವಚಿಸಿಕೊಳ್ಳಬಹುದು ಮತ್ತು ಆ ಮೂಲಕ ಸೆಕ್ಯುಲರ್ ರಾಜನೀತಿಯ ಸ್ವರೂಪವನ್ನು ಭಿನ್ನವಾಗಿ ಅನುಷ್ಠಾನಗೊಳಿಸಬಹುದು.

ಬಹುಮುಖ್ಯವಾದ ಸಂಗತಿಯೆಂದರೆ ಯುರೋಪಿನಲ್ಲಿ ಚರ್ಚ್-ರಾಜ್ಯ ಮಾದರಿಯ ಸೆಕ್ಯುಲರ್‌ವಾದಕ್ಕಿಂತ ಭಿನ್ನವಾದ ಇನ್ನೊಂದು ಮಾದರಿಯೂ ಇದೆ ಮತ್ತು ಅದನ್ನು ಧಾರ್ಮಿಕ ಕ್ಲೇಶಗಳ ಮಾದರಿಯೆಂದು ಗುರುತಿಸಲಾಗಿದೆ ಎನ್ನುವ ಮಾತನ್ನು ರಾಜೀವ್ ಭಾರ್ಗವ್ ಬರೆದಿದ್ದಾರೆ. ಆ ಮಾದರಿಯನ್ನು ಭಾರತೀಯ ಸೆಕ್ಯುಲರ್‌ವಾದದ ಮರು ಸಂಘಟನೆಯ ಸಂದರ್ಭದಲ್ಲಿ ನಾವು ವಿಶೇಷವಾಗಿ ಪರಿಗಣಿಸಬೇಕು ಎಂದು ಅವರು ವಾದಿಸುತ್ತಾರೆ. ಬಹುಸಂಸ್ಕೃತೀಯ ಭಾರತ ಎದುರಿಸುತ್ತಿರುವ ಧಾರ್ಮಿಕ ಸಂಘರ್ಷಗಳ ಸಮಕ್ಷಮದಲ್ಲಿ ಭಾರತದ ಸಂವಿಧಾನದ ತಾತ್ತ್ವಿಕ ನೆಲೆಗಟ್ಟಿನಲ್ಲಿ ನಾವು ಸೆಕ್ಯುಲರ್‌ವಾದವನ್ನು ಧರ್ಮ ಸಮನ್ವಯ ಮತ್ತು ಸೌಹಾರ್ದಗಳ ನೆಲೆಯಲ್ಲಿ ಮರುನಿರ್ವಚಿಸುವ ಅನಿವಾರ್ಯತೆಯಲ್ಲಿ ಇದ್ದೇವೆ.

ಬಹುಸಂಸ್ಕೃತೀಯ ನೆಲೆಯ, ಧರ್ಮ ಸಹಿಷ್ಣುತೆಯ ಭಾರತೀಯ ಸೆಕ್ಯುಲರ್‌ವಾದವನ್ನು ಧರ್ಮ ಮತ್ತು ರಾಜಕಾರಣಗಳ ನಡುವಣ ಸಹಸಂಬಂಧದಲ್ಲಿ ನೋಡಬೇಕಾಗಿದೆ. ಯಾವುದೇ ಸೆಕ್ಯುಲರ್‌ವಾದಿ ಚಿಂತನೆ ಮತ್ತು ರಾಜಕಾರಣದಲ್ಲಿ ಧರ್ಮ ಮತ್ತು ರಾಜಕಾರಣಗಳ ನಡುವಿನ ಅಂತರ ಬಹುಮುಖ್ಯವಾದದ್ದೇ. ಆದರೆ ಈ ಅಂತರದ ಸ್ವರೂಪವೇನು ಮತ್ತು ಅದನ್ನು ಸೆಕ್ಯುಲರ್ ರಾಜಕಾರಣ ಹೇಗೆ ನಿರ್ವಹಿಸಬೇಕು ಎನ್ನುವ ಪ್ರಶ್ನೆಯನ್ನು ಭಾರತೀಯ ಸೆಕ್ಯುಲರ್‌ವಾದ ಎದುರಿಸಬೇಕಾದ ರೀತಿಯೇ ಬೇರೆ. ರಾಜೀವ್ ಭಾರ್ಗವ್‌ರವರ ಪ್ರಕಾರ ಭಾರತೀಯ ಸೆಕ್ಯುಲರ್‌ವಾದ ಧರ್ಮ ಮತ್ತು ರಾಜಕಾರಣಗಳ ನಡುವೆ ಸಮಾನಂತರ (Equi Distance) ವನ್ನು ಪ್ರತಿಪಾದಿಸುವುದಿಲ್ಲ. ಬದಲಾಗಿ ಅದು ತತ್ತ್ವಾಧರಿತ(principled distance) ಅಂತರ ವನ್ನು ಪ್ರತಿಪಾದಿಸುತ್ತದೆ. ಈ ಅರ್ಥದಲ್ಲಿ ಭಾರತದ ಸೆಕ್ಯುಲರ್ ರಾಜ್ಯ ತಟಸ್ಥ ಅಥವಾ ನಿಷ್ಪಕ್ಷಪಾತಿ ರಾಜ್ಯ ಅಲ್ಲ. ಅದು ಕಡೆಗಣಿಸಲ್ಪಟ್ಟ ಅಥವಾ ಮೂಲೆಗೊತ್ತಲ್ಪಟ್ಟ ಅಥವಾ ಅವಮಾನಿಸಲ್ಪಟ್ಟ ಸಮುದಾಯಗಳ ನ್ಯಾಯ ಸಂರಕ್ಷಣೆಯನ್ನು ಮಾಡುವ ಹೊಣೆಗಾರಿಕೆಯನ್ನು ಹೊರುತ್ತದೆ. ಅದು ಭಾರತದ ಸಂವಿಧಾನ ಪ್ರತಿಪಾದಿಸುವ ಪ್ರಜಾತಾಂತ್ರಿಕ ವೌಲ್ಯಗಳ ಆಧಾರದಲ್ಲಿ ಜನಸಮುದಾಯಗಳ ಸ್ವಾತಂತ್ರವನ್ನು ಮತ್ತು ಅಸ್ಮಿತೆಗಳನ್ನು ಸಂರಕ್ಷಿಸುವ ಕಲ್ಯಾಣ ರಾಜ್ಯ. ಈ ಹಿನ್ನೆಲೆಯಲ್ಲಿ ಭಾರತದ ಸೆಕ್ಯುಲರ್‌ವಾದವನ್ನು ರಾಜೀವ್ ಭಾರ್ಗವ್ ಸಂದರ್ಭೋಚಿತ ಸೆಕ್ಯುಲರ್‌ವಾದ ಎಂದು ಕರೆದಿದ್ದಾರೆ. 

ಸೆಕ್ಯುಲರ್‌ವಾದ ಪಶ್ಚಿಮಜನ್ಯವಾದದ್ದು ನಿಜ. ಆದರೆ ಅದು ಭಾರತೀಯ ಜಾಯಮಾನಕ್ಕೆ ಅಸಂಗತವಾದದ್ದೇನೂ ಅಲ್ಲ. ವಸಾಹತುಶಾಹಿ ಯಜಮಾನಿಕೆಯ ದೀರ್ಘಾವಧಿಯಲ್ಲಿ ಭಾರತ ಅನೇಕ ಪಾಶ್ಚಿಮಾತ್ಯ ವೌಲ್ಯಗಳಿಗೆ ಮುಖಾಮುಖಿಯಾಗಿದೆ ಮತ್ತು ಅವುಗಳನ್ನು ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ಪುನರ್ ನಿರ್ವಚಿಸಿಕೊಂಡಿದೆ. ಸ್ವಾತಂತ್ರ, ಪ್ರಜಾತಂತ್ರ, ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳಂತಹ ಪರಿಕಲ್ಪನೆಗಳನ್ನು ನಾವು ನಮ್ಮ ಆಯ್ಕೆಯಲ್ಲಿ ನಮ್ಮ ಸಮಾಜದ ಭಾಗವನ್ನಾಗಿಸಿಕೊಳ್ಳಲು ಯತ್ನಿಸುತ್ತಿದ್ದೇವೆ. ಸೆಕ್ಯುಲರ್‌ವಾದ ಕೂಡಾ ನಮ್ಮ ಈ ಆಯ್ಕೆಯ ಭಾಗ. ಅದನ್ನು ನಾವು ಬಹುಧಾರ್ಮಿಕತೆಯ ಸನ್ನಿವೇಶದಲ್ಲಿ ರೂಪಾಂತರಿಸಿದ್ದೇವೆ, ಭಾಷಾಂತರಿಸಿದ್ದೇವೆ ಮತ್ತು ನಮ್ಮ ಪ್ರಜಾತಾಂತ್ರಿಕ ರಾಜಕಾರಣದ ಭಾಗವನ್ನಾಗಿಸಲು ಯತ್ನಿಸಿದ್ದೇವೆ. ಈ ಮಾತಿನ ಅರ್ಥ ಸೆಕ್ಯುಲರ್‌ವಾದಕ್ಕೆ ಈ ದೇಶದಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ ಅಥವಾ ಅದು ಪ್ರಶ್ನಾತೀತವೆಂದೂ ಅಲ್ಲ. ನಿಖರ ನಿಷ್ಕರ್ಷೆಯ ಮೂಲಕ ಅದರ ಇತಿಮಿತಿಗಳನ್ನು ಗುರುತಿಸುವ, ಅದು ಎದುರಿಸಬೇಕಾದ ಸವಾಲುಗಳನ್ನು ಸ್ಪಷ್ಟಪಡಿಸಿಕೊಳ್ಳುವ ಹಾಗೂ ಸಂದರ್ಭೋಚಿತವಾಗಿ ಅದರ ತಾತ್ತ್ವಿಕ ರಾಜಕೀಯ ಪ್ರಸ್ಥಾನವನ್ನು ಮರುನಿರೂಪಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ. ಈ ದಿಸೆಯಲ್ಲಿ ಕೊನೆಯ ಕೆಲವು ಮಾತುಗಳು.

ಬಹುಶಃ, ಧರ್ಮದ ಪ್ರಶ್ನೆ ಮತ್ತು ಧಾರ್ಮಿಕ ಸಮುದಾಯಗಳ ನಡುವಿನ ಸಂಘರ್ಷದ ಪ್ರಶ್ನೆ ಭಾರತೀಯ ಸೆಕ್ಯುಲರ್‌ವಾದ ಎದುರಿಸುತ್ತಿರುವ ಮತ್ತು ಎದುರಿಸಬೇಕಾದ ಬಲುದೊಡ್ಡ ಸವಾಲು. ಧರ್ಮದ ಪ್ರಶ್ನೆಯನ್ನು ಸ್ವಾತಂತ್ರೋತ್ತರ ಭಾರತದ 75 ವರ್ಷಗಳಲ್ಲಿ ನಾವು ಕಡೆಗಣಿಸಿದ್ದೇವೆ. ಜನಸಮುದಾಯಗಳ ಧಾರ್ಮಿಕ ನಂಬಿಕೆಗಳನ್ನು ಮತ್ತು ಆಚರಣೆಗಳನ್ನು, ಸೆಕ್ಯುಲರ್‌ವಾದ ಪ್ರತಿನಿಧಿಸುತ್ತದೆ ಎಂದು ತಿಳಿಯಲಾದ ವೈಜ್ಞಾನಿಕ ಮನೋಭಾವದ ನೆಲೆಯಿಂದ ಮೂಢನಂಬಿಕೆ ಅಥವಾ ಆಧುನಿಕ ಪೂರ್ವ ಸಮಾಜದ ಪಳೆಯುಳಿಕೆ ಎಂದು ಭಾವಿಸಿ ಬದಿಗೆ ಸರಿಸಿದ್ದೇವೆ. ಆಧುನಿಕತೆಯ ನಮ್ಮ ಸಂಭ್ರಮಾಚರಣೆಯಲ್ಲಿ ಜಾತಿ, ಮತ, ಧರ್ಮ ಮೊದಲಾದ ಅಸ್ಮಿತೆಗಳು ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಒಂದು ಕಾಲಾವಧಿಯಲ್ಲಿ ನಾವು ಈ ಸಂಕುಚಿತ ಅಸ್ಮಿತೆಗಳನ್ನು ದಾಟಿ ಸಮಗ್ರವಾದ ಆಧುನಿಕ ಸಮಾಜವಾಗುತ್ತೇವೆ ಎನ್ನುವ ನೆಲೆಯಲ್ಲಿ ವ್ಯವಹರಿಸಿದ್ದೇವೆ.

ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಗಳ ಕುರಿತು ಸೆಕ್ಯುಲರ್‌ವಾದ ಈ ದೇಶದಲ್ಲಿ ತೋರಿಸಿರುವ ಕನಿಷ್ಠ ಅನಾಸಕ್ತಿಯನ್ನು ನಾವಿಂದು ಗಂಭೀರವಾಗಿ ಮರುಪರಿಶೀಲಿಸಬೇಕಾಗಿದೆ. ಈ ಅನಾಸಕ್ತಿ ಸೆಕ್ಯುಲರ್‌ವಾದಿ ಚಿಂತನೆಯಲ್ಲಿ ನಿಹಿತವಾಗಿದೆ ಎನ್ನುವುದಕ್ಕಿಂತಲೂ ಈ ದೇಶದ ನಮ್ಮ ಸೆಕ್ಯುಲರ್‌ವಾದಿ ಕ್ರಿಯಾಚರಣೆ ಅವುಗಳ ಕುರಿತು ನಿರ್ಲಕ್ಷದ ಧೋರಣೆಯನ್ನು ತೋರಿಸಿದೆ ಎಂದು ಹೇಳುವುದೇ ಹೆಚ್ಚು ಸೂಕ್ತವಾಗುತ್ತದೆ.

ಸೆಕ್ಯುಲರ್‌ವಾದದ ತಾತ್ತ್ವಿಕ ಇತಿಹಾಸದಲ್ಲಿ ಧರ್ಮದ ಕುರಿತು ಒಂದು ವಿಜ್ಞಾನ ಪ್ರಣೀತ ವೈಚಾರಿಕ ದೃಷ್ಟಿಕೋನವಿದೆ ಎನ್ನುವುದು ನಿಜ. ಮಧ್ಯಕಾಲೀನ ಚರ್ಚ್ ವ್ಯವಸ್ಥೆಯ ಧಾರ್ಮಿಕ ಹಿಡಿತದಿಂದ ಪಾರಾಗುವ, ಆಧುನಿಕ ಮನೋಭಾವದ ಅವಿಭಾಜ್ಯ ಭಾಗವಾಗಿರುವ ಸೆಕ್ಯುಲರ್‌ವಾದ ತನ್ನ ಚಿಂತನ ವಿಶ್ವವನ್ನು ಜ್ಞಾನಪರ್ವದ ವೈಚಾರಿಕ ವಿನ್ಯಾಸಗಳಲ್ಲಿ ರೂಪಿಸಿಕೊಂಡಿದೆ. ಹಾಗಾಗಿ, ವೈಜ್ಞಾನಿಕ ಚಿಂತನೆ ಪ್ರತಿಪಾದಿಸುವ ಒಂದು ವಿಶಿಷ್ಟ ಬಗೆಯ ಭೌತಿಕ ಅನುಭವವಾದ ಅದರ ಮತೀಯ ಶರೀರವನ್ನು ರೂಪಿಸಿದೆ. ಇದರಿಂದಾಗಿ ಮಾನವ ಬದುಕಿನ ಧಾರ್ಮಿಕ ಶ್ರದ್ಧೆ ಹಾಗೂ ಆಧ್ಯಾತ್ಮಿಕ ಸೆಳೆತಗಳು ಅದರ ವಿಶೇಷ ಆಸಕ್ತಿಯ ಮಜಲುಗಳಾಗಿಲ್ಲ.

ಆದರೆ ಧರ್ಮ ಮತ್ತು ಆಧ್ಯಾತ್ಮಿಕತೆ ಮಾನವ ಬದುಕಿನ ಒಂದು ಬಹುಮುಖ್ಯವಾದ ಹಾಗೂ ಅನಿವಾರ್ಯವಾದ ಭಾಗ. ಮಾನವ ಬದುಕಿನಲ್ಲಿ ಅನೇಕ ಸ್ತರಗಳಲ್ಲಿ ಕೆಲಸ ಮಾಡುವ ಧಾರ್ಮಿಕತೆಯನ್ನು ಮತ್ತು ಮಾನವ ಬದುಕಿಗೆ ಅರ್ಥವನ್ನು ಒದಗಿಸುವ ಆಧ್ಯಾತ್ಮಿಕ ಸೆಳೆತಗಳನ್ನು ನಾವು ಸರಳವಾಗಿ ನಿರಾಕರಿಸುವಂತಿಲ್ಲ. ಮಾನವ ಸಮಾಜದ ಸಂಘಟನೆಯಲ್ಲಿ ವಿವೇಕವಾಗಿ, ಶ್ರದ್ಧೆಯಾಗಿ, ನೈತಿಕ ನಿಯಮವಾಗಿ ಮತ್ತು ಸಾಮುದಾಯಿಕ ಸಂಘಟನೆಯ ತತ್ತ್ವವಾಗಿ ಕೆಲಸ ಮಾಡುವ ಧರ್ಮವನ್ನು ಮತ್ತು ಮಾನವ ಬದುಕಿಗೆ ಸಾರ್ಥಕ್ಯದ ಭಾವವನ್ನು ಕೊಡುವ ಆಧ್ಯಾತ್ಮಿಕತೆಯನ್ನು ಗಂಭೀರವಾಗಿ ಪರಿಗಣಿಸುವ ಕಾಲಘಟ್ಟದಲ್ಲಿ ನಾವು ಇಂದು ಇದ್ದೇವೆ. ಈ ದಿಸೆಯಲ್ಲಿ ಸೆಕ್ಯುಲರ್‌ವಾದದ ತಾತ್ತ್ವಿಕತೆ ಮತ್ತು ಭಾರತೀಯ ಸೆಕ್ಯುಲರ್‌ವಾದದ ಕಾರ್ಯಸೂಚಿ ಮರುನಿರ್ವಚಿಸಲ್ಪಡಬೇಕಾಗಿದೆ.

ಭಾರತೀಯ ಸೆಕ್ಯುಲರ್‌ವಾದವನ್ನು ನಾವು ಕನಿಷ್ಠ ಎರಡು ನೆಲೆಗಳಲ್ಲಿ ನಮ್ಮ ಸಾರ್ವಜನಿಕ ಜೀವನದಲ್ಲಿ ಗ್ರಹಿಸಬೇಕಾಗುತ್ತದೆ ಮತ್ತು ಅಳವಡಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದನ್ನು ನಾವು ನಮ್ಮ ಅನುಕೂಲಕ್ಕೆ ರಾಜಕೀಯ ಸೆಕ್ಯುಲರ್‌ವಾದ(Political Securalism) ಹಾಗೂ ಇನ್ನೊಂದನ್ನು ಪೌರತ್ವದ ನೆಲೆಯ ಸೆಕ್ಯುಲರ್‌ವಾದ  (Civic Secularism) ಎಂದು ಕರೆಯಬಹುದು. ರಾಜಕೀಯ ಸೆಕ್ಯುಲರ್‌ವಾದ ರಾಜ್ಯಾಧಿಕಾರದ ನೆಲೆಯಿಂದ ನಿರ್ವಹಿಸಲ್ಪಡಬೇಕಾದ ಕೆಲವು ನೀತಿ-ನಿಯಮಗಳು. ಪ್ರಜಾತಾಂತ್ರಿಕ ರಾಜ್ಯ ಜಾತಿ-ಪಾತಿಗಳಲ್ಲಿ ವಿಘಟಿತವಾದ ಬಹುಧಾರ್ಮಿಕ ಸಮಾಜವೊಂದನ್ನು ಹೇಗೆ ಶಾಸನಬದ್ಧವಾಗಿ ಮತ್ತು ನ್ಯಾಯೋಚಿತವಾಗಿ ನಿರ್ವಹಿಸಬೇಕು ಎನ್ನುವುದಕ್ಕೆ ಸಂಬಂಧಿಸಿದ ವಿಧಿ ವಿಧಾನಗಳನ್ನು ನಾವು ಈ ವಿಭಾಗದಲ್ಲಿ ನಿರೂಪಿಸಬೇಕಾಗುತ್ತದೆ. ಅಂತೆಯೇ, ಜನಸಮುದಾಯಗಳು ತಮ್ಮತಮ್ಮ ಧಾರ್ಮಿಕ ಅಸ್ಮಿತೆಗಳ ನಡುವೆ ತಮ್ಮಂತೆಯೇ ಇರುವ ಅಥವಾ ತಮ್ಮಂಥಲ್ಲದ ಇತರ ಅಸ್ಮಿತೆಗಳ ಜೊತೆಗೆ ಹೇಗೆ ನ್ಯಾಯೋಚಿತವಾಗಿ ಮತ್ತು ಪ್ರಜಾತಾಂತ್ರಿಕವಾಗಿ ವ್ಯವಹರಿಸಬೇಕು ಎನ್ನುವುದಕ್ಕೆ ಸಂಬಂಧಿಸಿದ ನೀತಿ-ಸಂಹಿತೆಯನ್ನು ನಾವು ಪೌರತ್ವದ ಸೆಕ್ಯುಲರ್‌ವಾದ ಎನ್ನುವ ವಿಂಗಡನೆಯಲ್ಲಿ ಗುರುತಿಸಬಹುದು. ಈ ಎರಡು ಪರಿಕಲ್ಪನಾತ್ಮಕ ವಿಂಗಡನೆಗಳು ಪರಸ್ಪರ ಸಹ ಸಂಬಂಧದಲ್ಲಿ ಸದಭಿರುಚಿಯ ತಾಳಮೇಳದಲ್ಲಿ ಒಂದಾದಾಗ ಮಾತ್ರ ಭಾರತೀಯ ಸೆಕ್ಯುಲರ್‌ವಾದ ತನ್ನ ಉದ್ದೇಶಿತ ಸಾಧನೆಯನ್ನು ಸಮೀಪಿಸಬಹುದು.

ಸ್ವಾತಂತ್ರೋತ್ತರ ಭಾರತದಲ್ಲಿ ಸೆಕ್ಯುಲರ್‌ವಾದಿ ಚಿಂತನೆಗೆ ಸ್ಥಾನ-ಮಾನಗಳನ್ನು ಒದಗಿಸಿದವರಲ್ಲಿ ಪಂಡಿತ್ ಜವಾಹರ ಲಾಲ್ ನೆಹರೂ ಪ್ರಮುಖರು. ಅವರು ಭಾರತದ ಪ್ರಥಮ ಪ್ರಧಾನ ಮಂತ್ರಿಗಳಾಗಿ ಸೆಕ್ಯುಲರ್‌ವಾದವನ್ನು ಈ ದೇಶದ ರಾಜನೀತಿಯ ಪ್ರಮುಖ ತತ್ತ್ವವನ್ನಾಗಿ ಪರಿಕಲ್ಪಿಸಲು ಯತ್ನಿಸಿದರು. ಭಾರತ ಒಂದು ಬಹುಸಂಸ್ಕೃತೀಯ ಸಮಾಜವೆನ್ನುವ ಸಂಪೂರ್ಣ ಎಚ್ಚರದಲ್ಲಿ ಪಂಡಿತ್ ನೆಹರೂ ಸೆಕ್ಯುಲರ್ ನೋಟವನ್ನು ಆಧುನಿಕ ಭಾರತದ ಪ್ರಜಾತಾಂತ್ರಿಕ ರಾಜಕಾರಣದ ಪ್ರಮುಖ ಭಾಗವನ್ನಾಗಿಸಿದರು. ಭಾರತೀಯ ಜನಸಮುದಾಯ ತನ್ನನ್ನು ಯಾವುದೇ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪ್ರತಿಪಾದಕನೆಂದು ತಿಳಿಯುವುದಾದರೆ ಅದು ಸೆಕ್ಯುಲರ್‌ವಾದವೆಂದು ನೆಹರೂ ಅನೇಕ ಬಾರಿ ಘೋಷಿಸಿದ್ದರು.

ಭಾರತ ಆಳವಾದ ಧಾರ್ಮಿಕತೆಯನ್ನು ಬಿಂಬಿಸುವ ದೇಶ. ಇಲ್ಲಿನ ವಿವಿಧ ಜನಸಮುದಾಯಗಳು ಬೇರೆಬೇರೆ ಬಗೆಯ ದೈವ ಕಲ್ಪನೆಯನ್ನು ನಂಬುವ ಹಾಗೂ ಧಾರ್ಮಿಕಾಚರಣೆಗಳನ್ನು ನಿಷ್ಠೆಯಿಂದ ಪರಿಪಾಲಿಸುವ ರೂಢಿಯನ್ನು ಇರಿಸಿಕೊಂಡವರು. ಇಂತಹ ದೇಶದಲ್ಲಿ ಸೆಕ್ಯುಲರ್‌ವಾದ ಬೇರೂರಲು ಸಾಧ್ಯವಿಲ್ಲ. ಆಧ್ಯಾತ್ಮಿಕತೆಯನ್ನು ಅಲ್ಲಗಳೆಯುವ, ಜನಸಮುದಾಯಗಳ ಧಾರ್ಮಿಕ ಶ್ರದ್ಧೆಯನ್ನು ಗೌರವಿಸದ, ಅವರ ಧರ್ಮಾಚರಣೆಗಳನ್ನು ಅಂಧಶ್ರದ್ಧೆಯೆಂದು ಪರಿಭಾವಿಸುವ ಸೆಕ್ಯುಲರ್‌ವಾದದ ವಿಜ್ಞಾನ ನಿಹಿತ ವೈಚಾರಿಕತೆ ಭಾರತದಲ್ಲಿ ಅಪ್ರಸ್ತುತವಾದದ್ದು ಮಾತ್ರವಲ್ಲ. ಅದು ವಿನಾಶಕಾರಿ ಪರಿಣಾಮಗಳಿಗೆ ಎಡೆಮಾಡಿಕೊಡಬಹುದು ಎನ್ನುವ ನಿಲುವನ್ನು ಭಾರತದಲ್ಲಿ ಅನೇಕ ವಿಮರ್ಶಕರು ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ.

 ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಗಳ ಕುರಿತು ಸೆಕ್ಯುಲರ್‌ವಾದ ಈ ದೇಶದಲ್ಲಿ ತೋರಿಸಿರುವ ಕನಿಷ್ಠ ಅನಾಸಕ್ತಿಯನ್ನು ನಾವಿಂದು ಗಂಭೀರವಾಗಿ ಮರುಪರಿಶೀಲಿಸಬೇಕಾಗಿದೆ. ಈ ಅನಾಸಕ್ತಿ ಸೆಕ್ಯುಲರ್‌ವಾದಿ ಚಿಂತನೆಯಲ್ಲಿ ನಿಹಿತವಾಗಿದೆ ಎನ್ನುವುದಕ್ಕಿಂತಲೂ ಈ ದೇಶದ ನಮ್ಮ ಸೆಕ್ಯುಲರ್‌ವಾದಿ ಕ್ರಿಯಾಚರಣೆ ಅವುಗಳ ಕುರಿತು ನಿರ್ಲಕ್ಷದ ಧೋರಣೆಯನ್ನು ತೋರಿಸಿದೆ ಎಂದು ಹೇಳುವುದೇ ಹೆಚ್ಚು ಸೂಕ್ತವಾಗುತ್ತದೆ. ಸೆಕ್ಯುಲರ್‌ವಾದದ ತಾತ್ತ್ವಿಕ ಇತಿಹಾಸದಲ್ಲಿ ಧರ್ಮದ ಕುರಿತು ಒಂದು ವಿಜ್ಞಾನ ಪ್ರಣೀತ ವೈಚಾರಿಕ ದೃಷ್ಟಿಕೋನವಿದೆ ಎನ್ನುವುದು ನಿಜ. ಪರಿಣಾಮಗಳಿಗೆ ಎಡೆಮಾಡಿಕೊಡಬಹುದು ಎನ್ನುವ ನಿಲುವನ್ನು ಭಾರತದಲ್ಲಿ ಅನೇಕ ವಿಮರ್ಶಕರು ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ.ಸತ್ಯ ಮತ್ತು ಮಿಥ್ಯೆಗಳ ಸಂಘರ್ಷ ಹಾಗೂ ದುರ್ಬಲವಾಗುತ್ತಿರುವ ಪ್ರಜಾತಂತ್ರ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top