ಪರ್ಶಿಯನ್ ಕ್ಯಾಟ್
-

ದಕ್ಷಿಣ ಕನ್ನಡ ಜಿಲ್ಲೆಯ ಜೋಗಿಬೆಟ್ಟು ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕತೆಗಾರ ಮುನವ್ವರ್. ಬದುಕಿನ ಓಘದಲ್ಲಿ ಎದುರಾಗುವ ಸಣ್ಣ ಸಣ್ಣ ಘಟನೆಗಳನ್ನೂ ತೀವ್ರತರವಾಗಿ ಅನುಭವಿಸಿ ಬರೆಯುವವರು. ಇವರ ಕಥೆಗಳನ್ನು ಓದುವುದೇ ಒಂದು ಉಲ್ಲಾಸದ ಅನುಭವ. ತಮ್ಮ ಕತೆಗಳಿಗಾಗಿ ರಾಜ್ಯ ಮಟ್ಟದ ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಮುನವ್ವರ್, ‘ಇಶ್ಕಿನ ಒರತೆಗಳು’ ಮತ್ತು ‘ಮೊಗ್ಗು’ ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಡರ್ಬನ್ ಇದಿನಬ್ಬ’ ಅವರು ಇತ್ತೀಚೆಗೆ ಬರೆದಿರುವ ಕಾದಂಬರಿ . ಕೆಂಡ ಸಂಪಿಗೆ ಜಾಲ ತಾಣದಲ್ಲಿ ಈ ಕಾದಂಬರಿ ಧಾರಾವಾಹಿಯಾಗಿ ಜನ ಮನವನ್ನು ತಲುಪಿತ್ತು.
ಮುನವ್ವರ್ ಜೋಗಿಬೆಟ್ಟು
ಹತ್ತೊಂಬತ್ತು ನಂಬರಿನ ಡೂಬಿಯಸ್ ಸಿಟಿ ಬಸ್ಸು ನಗರದ ಅತ್ಯಂತ ಸುಂದರ ‘ಸಿಎ ವಿಲ್ಲಾ’ ಹೆಸರಿನ ಗೇಟಿನ ಎದುರುಗಡೆ ನಿಂತಿತು. ಯಾರೋ ಇಳಿಯಲು ಕಾದ ನಂತರ ರಸ್ತೆಯ ಬದಿಯ ರಾಶಿ ಧೂಳನ್ನು ಆಕಾಶದಲ್ಲೆಲ್ಲಾ ಹರಡಿ ಅದು ಮತ್ತೆ ಹೊರಟಿತು. ಧೂಳೆದ್ದ ಮಬ್ಬಿನ ಮಧ್ಯೆ ಗಾಳಿಯಲ್ಲಿ ಕೈಯಾಡಿಸಿ ಧೂಳನ್ನು ಸರಿಸುತ್ತಾ ನಿಂತ ಮನುಷ್ಯಾಕೃತಿ ಕಂಕುಳದಲ್ಲಿದ್ದ ಪ್ಲಾಸ್ಟಿಕ್ ಲಕೋಟೆಯನ್ನು ಇನ್ನಷ್ಟು ಭದ್ರವಾಗಿರಿಸಿ ಎಡಗೈಯಲ್ಲಿ ಕಟ್ಟಿದ್ದ ವಾಚನ್ನೊಮ್ಮೆ ನೋಡಿತು. ವಾಚು ಬೆಳಗ್ಗಿನ ಸಮಯ ಒಂಭತ್ತು ಐದು ಎಂದು ತೋರಿಸಿತು. ಧೂಳು ಸ್ವಲ್ಪ ಸರಿದು ಆ ದೃಶ್ಯ ತಿಳಿಯಾಗತೊಡಗಿತು.
ತಕ್ಷಣವೇ ಆ ಮನುಷ್ಯಾಕೃತಿಯು ಉಟ್ಟಿದ್ದ ದೊಗಳೆ ಶರಾಯಿಯ ಕಿಸೆಗೆ ಕೈ ಹೂತು ಹೋಗಿ ಮಾಸಲು ಬಣ್ಣದ ಕರ್ಚೀಫೊಂದು ಹೊರಬಂತು. ಕ್ಷಣಾರ್ಧದಲ್ಲೇ ಆಸ್ಫೋಟನೆ ಗೊಂಡಂತೆ ಬೆನ್ನುಬೆನ್ನಿಗೆ ಎರಡು ಸೀನು ಸಿಡಿದು ಬಂತು. ಧೂಳು ಮಿಶ್ರಿತ ಸಿಂಬಳ ಅಲ್ಲೆಲ್ಲಾ ಗಾಳಿಯಲ್ಲಿ ತೇಲಿತು. ಕುರುಚಲು ಮೀಸೆಯ ಮೇಲೆ ಬಿದ್ದು ಸಿಕ್ಕಿ ಹಾಕಿಕೊಂಡ ಸಿಂಬಳವನ್ನು ಆ ಕರ್ಚೀಫು ಒರೆಸಿ ಹಾಕಿತು. ಅಷ್ಟರಲ್ಲೇ ಆಸಾಮಿ ನಡೆಯುತ್ತಾ ಬಂದು ಗೇಟಿನ ಮುಂಭಾಗದಲ್ಲಿ ನಿಂತಿದ್ದ. ಕೆದರಿದ ಕೂದಲು- ಕುರುಚಲು ಗಡ್ಡ, ಇಸ್ತ್ರಿ ಕಾಣದ ಅಂಗಿ- ದೊಗಳೆ ಶರಾಯಿಯನ್ನು ಕಂಡ ಕೂಡಲೇ ವಾಚ್ ಮೆನ್ ಗಂಭೀರವಾಗಿಯೇ ಗೇಟಿನ ಬಾಗಿಲು ಸಣ್ಣಗೆ ಸರಿಸಿದ.
ವಾಚ್‌ಮೆನ್ ಹತ್ತಿರದಲ್ಲಿರಿಸಿದ್ದ ಟೇಬಲ್ ಮೇಲಿನ ಸಂದರ್ಶಕರ ಪುಸ್ತಕದಲ್ಲಿ ಹೆಸರಿದ್ದಲ್ಲಿ ‘ಪ್ರಶಾಂತ್’ ಎಂದು ಬರೆದು ರುಜು ಹಾಕಿ ಆ ಮನುಷ್ಯ ಓಡು ನಡಿಗೆಯಲ್ಲೇ ಗೇಟು ದಾಟಿದ. ಬಿಳಿಯ ಎರಡಂತಸ್ತಿನ ಎಲ್ಲಾ ಸೌಕರ್ಯಗಳುಳ್ಳ ಆ ಸುಸಜ್ಜಿತ ಮನೆಯು ಬೆಳಗಿನ ಎಳೆಬಿಸಿಲು ಬಿದ್ದು ಮಿರಮಿರನೆ ಮಿಂಚುತ್ತಿತ್ತು. ಅವನು ನಡಿಗೆ ವೇಗಗೊಳಿಸುತ್ತಾ ಅಂಗಳದ ಅಂದದ ಹಸಿರು ಹೂದೋಟ ಬಳಸಿ ಹೋಗುವಷ್ಟರಲ್ಲಿ ಗಾರ್ಡನ್‌ಗೆ ನೀರು ಬಿಡುತ್ತಿದ್ದ ನರಪೇತಲನೊಬ್ಬ ‘‘ಪಚ್ಚೂ.. ಇವತ್ತೂ ಲೇಟಾ?’’ ಎಂದು ಕೇಳಿದ. ಅದನ್ನು ಕೇಳಿಸಿಕೊಂಡರೂ ಉತ್ತರಿಸಲು ಪುರ್ಸೊತ್ತಿಲ್ಲದೆ ಅವನು ಮನೆಯ ಮುಂಬಾಗಿಲು ಪ್ರವೇಶಿಸಿದ್ದ. ಅಷ್ಟರಲ್ಲಿ ಡ್ರೈವರ್ ಶೆಡ್ಡಿನಲ್ಲಿದ್ದ ಬೆನ್ಝ್ ಕಾರ್ ತಂದು ಬಾಗಿಲಿನ ನೇರಕ್ಕೆ ತಂದಿರಿಸಿ ನಿಲ್ಲಿಸಿದ. ಪಚ್ಚು ಬಾಗಿಲು ಪ್ರವೇಶಿಸುವುದಕ್ಕೂ ಆ ಮನೆಯ ಮಾಲಕ ಕಾರಿಗೆ ಹತ್ತಲು ಬರುವುದಕ್ಕೂ ಸರಿ ಹೋಯಿತು.
‘‘ಯಾವಗ್ಲೂ ತಡವಾಗಿ ಬರುವುದಕ್ಕೇನಾದ್ರೂ ಹರಕೆ ಹೊತ್ಕೊಂಡಿದ್ದೀಯಾ.. ಎಲ್ಲಿಂದ ಬರ್ತಾರೆ ಮಾರ್ರೇ ಇವ್ರೆಲ್ಲ, ನೆಟ್ಟಗೆ ಕೆಲಸ ಮಾಡೋಕು ಬರಲ್ಲ ಮೈಗಳ್ಳರು’’ ಎಂದು ಸಿಡುಕುತ್ತಲೇ ತನ್ನ ಕೋಟನ್ನು ಸರಿಪಡಿಸುತ್ತ ಕಾರಿಗೆ ಹತ್ತಲು ಮೆಟ್ಟಿಲಿಳಿದು ಹೋದ. ಬೆಳಗ್ಗಿನ ಮಂಗಳಾರತಿ ಕೇಳಿಸಿಕೊಂಡ ಪಚ್ಚು ಯಾಂತ್ರಿಕವಾಗಿ ಮೆಲ್ಲಗೆ ಮನೆಯೊಳಗೆ ಪ್ರವೇಶಿಸಿದ. ಗೋಡೆಯಲ್ಲಿ ನೇತು ಹಾಕಿದ್ದ ವಿವಿಧ ಪೈಂಟಿಂಗುಗಳು ತನ್ನೆರಡು ಕಿಡ್ನಿ ಮಾರಿದರೂ ಸಾಲದಷ್ಟು ದೊಡ್ಡ ಹಣ ಕೊಟ್ಟು ಆ ಮಾಲಕ ಹರಾಜಿನಲ್ಲಿ ಕೊಂಡುಕೊಂಡಿದ್ದು. ಇನ್ನೇನು ಒಳಮನೆಗೆ ಪ್ರವೇಶಿಸಬೇಕೆನ್ನುವಷ್ಟರಲ್ಲಿ ಆ ಬಿಳಿಯ ಬಣ್ಣದ ದಷ್ಟಪುಷ್ಟ ಪರ್ಶಿಯನ್ ಬೆಕ್ಕು ಓಡಿ ಬಂತು, ಪಚ್ಚುವನ್ನು ನೋಡಿದ ಕೂಡಲೇ ಗಕ್ಕನೆ ನಿಂತುಕೊಂಡಿತು.
ಅದರ ಹಿಂದಿನಿಂದ ‘‘ಸೈರಸ್.. ಹೇ ಸೈರಸ್.. ಸ್ಟಾಪ್- ಸ್ಟಾಪ್’’ ಎಂದು ಕೂಗುತ್ತಾ ದುಬಾರಿ ಐಫೋನ್ ಹಿಡಿದು ಕೊಂಡು ಓಡಿ ಬಂದ ಮಾಲಕನ ಮಗಳು ಪಚ್ಚುವನ್ನು ಕಂಡೊಡನೆ ವೇಗ ಕಡಿಮೆಗೊಳಿಸಿ ದಳು. ಮತ್ತೆ ಗಣನೆಗೆ ತೆಗೆದುಕೊಳ್ಳದೆ ಅಲ್ಲಿ ನಿಂತು ಕೆಕ್ಕರಿಸಿ ನೋಡುತ್ತಿದ್ದ ಬೆಕ್ಕನ್ನು ಹಿಂದಿನಿಂದ ಎತ್ತಿಕೊಂಡಳು. ‘‘ಪ್ಚ್’’ ಎಂದು ಮುತ್ತಿಕ್ಕಿ ನಾಲಗೆಯನ್ನು ಓರೆಯಾಗಿ ಹೊರ ಹಾಕಿ ಸೆಲ್ಫಿ ಕ್ಲಿಕ್ಕಿಸಿ ಕೊಂಡಳು. ಅಷ್ಟರಲ್ಲೇ ನಡೆಯುತ್ತಿದ್ದಾಳೋ, ಉರುಳುತ್ತಿದ್ದಾಳೋ ಎಂದು ತಿಳಿಯಲಾಗದ ಸ್ಥಿತಿಯಲ್ಲಿ ಅಡುಗೆ ಕೋಣೆಯಿಂದ ಬಂದ ಧಡೂತಿ ಮನೆಯೊಡತಿ ಪಚ್ಚುವನ್ನು ಕಂಡು ಕೆಂಡಾಮಂಡಲವಾದಳು.
‘‘ಥೂ.. ಒಂದು ಟೈಂ ಸೆನ್ಸ್ ಇಲ್ಲ. ಎಷ್ಟು ದಿನ ಅಂತ ಹೇಳುವುದು. ಸೈರಸ್‌ಗೆ ಟಾಯ್ಲೆಟ್‌ಗೆ ಲೇಟಾದ್ರೆ ಯಾರು ಬಾಚ್ತಾರೆ. ಅದು ಎಲ್ಲೆಂದರಲ್ಲಿ ಗಲೀಜು ಮಾಡಿಟ್ರೆ ನಿಮ್ಮಪ್ಪ ಬಂದು ತೋಳಿತಾನಾ? ನಿಮ್ಗೆಲ್ಲಾ ಸಂಬಳ ಕೊಡುವುದೇ ವೇಸ್ಟ್’’ ಎಂದು ಸಿಡುಕುತ್ತಿರುವಾಗಲೇ, ‘‘ಮ್ಯಾಮ್.. ಸ್ವಲ್ಪ ತಡವಾಯಿತು. ಮಕ್ಕಳು ಶಾಲೆಗೆ...’’
‘‘ಏನ್ ದೊಡ್ಡ ಶಾಲೆ, ತಿಂಗಳ ಸಂಬಳ ಬರುವಾಗ ಯಾವ ತಡವೂ ಆಗ್ಬಾರ್ದು ಅಲ್ವಾ. ನಿನ್ಗೆಲ್ಲಾ ತಿಂಗಳ ಕೊನೆಗೆ ಮಾಡ್ತೇನೆ’’ ಎಂದು ಇನ್ನಷ್ಟು ಕೋಪಗೊಂಡು ತನ್ನ ಬಿಳಿ ಮೂತಿಯನ್ನಿಷ್ಟು ಕೆಂಪಗಾಗಿಸಿ ದುರದುರನೆ ಹೊರಟು ಹೋದಳು.
ಪಚ್ಚುವಿಗೆ ಇದೇನೂ ಕೊನೆ ಮೊದಲಲ್ಲ, ಅಲ್ಲಿನ ಎಲ್ಲಾ ನೌಕರರಿಗೂ ಈ ಬೈಗುಳ ತಪ್ಪಿದ ದಿನ ಇಲ್ಲ. ಅವನು ಸುಮ್ಮನೆ ತನ್ನ ಪ್ಲಾಸ್ಟಿಕ್ ಲಕೋಟೆಯನ್ನು ಬದಿಗಿರಿಸಿ ಸೈರಸ್ ಹೇಸಿಗೆ ಮಾಡಿರುವಲ್ಲಿಗೆ ಬಂದ. ಇತ್ತೀಚೆಗಷ್ಟೇ ಮನೆಗೆ ಬಂದಿದ್ದ ಆ ಪರ್ಶಿಯನ್ ಬೆಕ್ಕಿಗೆ ಟಾಯ್ಲೆಟ್‌ಗೆ ಹೋಗುವುದು ಅಭ್ಯಾಸವಾಗಿರಲಿಲ್ಲ. ಲಿಟ್ಟರ್ ಸ್ಯಾಂಡ್ ಬಳಸಿ ಅದಕ್ಕೆ ಟಾಯ್ಲೆಟ್‌ಗೆ ಅಭ್ಯಾಸ ಮಾಡಿಸಬೇಕಿತ್ತು. ಆದರೆ ಪಚ್ಚು ಬಂದು ತಲುಪುವ ಅರ್ಧ ತಾಸು ಮೊದಲೇ ಅದು ಅಲ್ಲೆಲ್ಲಾ ಗಲೀಜು ಮಾಡಿ ಹಾಕುತ್ತಿತ್ತು. ವಿಧಿಯಿಲ್ಲದೆ ಅವುಗಳನ್ನು ಸಾರಿಸಿ ನೀರು ಹಾಕಿ ತೊಳೆಯತೊಡಗಿದ.
ಕಟುವಾಸನೆ ವಾಂತಿ ತರಿಸುವಂತಿದ್ದರೂ ಬದುಕಿಗೊಂದು ಆಸರೆಯಾಗಿ ಸಿಕ್ಕ ಕೆಲಸವಾಗಿತ್ತು. ಅದನ್ನು ಸರಿಯಾಗಿ ಲಿಟ್ಟರ್ ಸ್ಯಾಂಡ್‌ಗೆ ಕುಳ್ಳಿರಿಸಿ ಶೌಚ ಮಾಡುವುದನ್ನು ಕಲಿಸಿಕೊಡಬೇಕಿತ್ತು. ಒಂದೆರಡು ಬಾರಿ ಮಾಡಿ ತೋರಿಸಿದ್ದನಾದರೂ ಆ ಮೊಂಡು ಬೆಕ್ಕು ಮನೆಯವರ ಮುದ್ದಿನಿಂದಲೋ ಏನೋ ಅಷ್ಟು ವೇಗವಾಗಿ ಕಲಿತುಕೊಳ್ಳದೆ ಅಲ್ಲಲ್ಲಿ ಗಲೀಜು ಮಾಡಿ ರಾದ್ಧಾಂತವೆಬ್ಬಿಸುತ್ತಿತ್ತು. ಸೈರಸ್ ಜೊತೆ ಪಚ್ಚುವಿಗೂ ಕೃತಜ್ಞತಾ ಭಾವವಿತ್ತು. ಯಾವತ್ತೂ ಅದರ ಅನುಪಸ್ಥಿತಿಯಲ್ಲಿ ಅದು ತನಗಾಗಿ ಕೆಲಸವೊಂದು ಕೊಟ್ಟಿದೆಯೆಂದನಿಸಿದರೂ, ಅದು ಪ್ರತ್ಯಕ್ಷವಾಗುವ ಹೊತ್ತಿಗೆ ಆ ಭಾವವೆಲ್ಲವೂ ಕಳೆದು ಅದರ ಗಂಭೀರ ಮುಖವನ್ನು ಕಾಣುತ್ತಿದ್ದಂತೆ ಟೊಣಪ ಮಾಲಕನ ಗಂಭೀರ ಮುಖ ನೆನಪಿಗೆ ಬಂದು ಕೋಪ ನೆತ್ತಿಗೇರುತ್ತಿತ್ತು.
ಎಲ್ಲವನ್ನೂ ತೊಳೆದು ಹಾಕಿ, ಬಾಸ್ಕೆಟ್‌ಗೆ ಲಿಟ್ಟರ್ ಸ್ಯಾಂಡ್ ತುಂಬಿ ‘‘ಸೈರಸ್.. ಸೈರಸ್’’ ಎಂದು ಪಚ್ಚು ಎರಡು ಬಾರಿ ಕರೆದ. ಅದು ಮಾಲಕನ ಮಗಳ ಬಳಿ ಆಟವಾಡುತ್ತಿದ್ದುದರಿಂದ ಬಡವ ನೌಕರನ ಕರೆಗೆ ಓಗೊಡಲಿಲ್ಲ. ಆ ದಿನಕ್ಕೆ ಅದಕ್ಕೆ ತಂದಿರಿಸಿದ್ದ ಆಹಾರ ಮುಗಿದು ಹೋಗುವುದಿತ್ತು. ಇದ್ದ ಕೊನೆಯ ಬೊಗಸೆಯನ್ನು ಆಹಾರ ಬೋಗುಣಿಗೆ ಸುರುವಿ ಅವನು ಎದ್ದು ನಿಂತ.
ಅಷ್ಟರಲ್ಲೇ ಚಾವಡಿಯಿಂದ ‘‘ಓಯ್...’’ ಎಂದು ಕರೆದದ್ದು ಕೇಳಿಸಿತು. ತನನ್ನೇ ಕರೆಯುವುದೆಂದು ಖಾತ್ರಿ ಪಡಿಸಿಕೊಂಡ ಪಚ್ಚು ಶರಾಯಿಯ ಮೇಲಿದ್ದ ಧೂಳನ್ನು ಕೊಡವಿಕೊಂಡು ಚಾವಡಿಗೆ ಬಂದ. ಮಾಲಕನ ಮಗಳು ಯಾವುದೋ ಮಾಗಝಿನ್ ತಿರುವಿಕೊಂಡು ‘‘ಸೈರಸ್ ಮತ್ತೆ ಕಕ್ಕ ಮಾಡಿದ್ದಾನೆ.. ಹೋಗಿ ಕ್ಲೀನ್ ಮಾಡು’’ ಎಂದು ಮುಖಕ್ಕೂ ನೋಡದೆ ಹೇಳಿ ಪೇಜ್ ತಿರುವುತ್ತಾ ಕುಳಿತುಬಿಟ್ಟಳು. ಐಶಾರಾಮಿ ಸೋಫಾದ ಕೆಳಗೆ ಹಾಕಿದ್ದ ಜಮಖಾನೆಯ ಮೇಲೆ ಟಾಯ್ಲೆಟ್ ಮಾಡಿಕೊಂಡು ಅದು ಹತ್ತಿರದಲ್ಲೇ ಕುಳಿತು ಕೆಕ್ಕರಿಸಿಕೊಂಡು ನೋಡುತ್ತಿತ್ತು. ಒಳ ತೆರಳಿದವನೇ ಬಕೆಟ್ ತುಂಬಾ ನೀರು- ಮೋಫು ಮತ್ತು ಪೊರಕೆಯನ್ನು ಜೊತೆಯಾಗಿಯೇ ತಂದ. ಅವನಿಗೆ ಈ ಕಿಲಾಡಿ ಬೆಕ್ಕಿನ ಬೇಜವಾಬ್ದಾರಿ ಕಂಡು ತನ್ನ ಮನೆಯ ಕಪ್ಪು ಬಿಳುಪಿನ ಅಬ್ಬೇಪಾರಿ ಬೆಕ್ಕಿನ ನೆನಪು ಬಂತು. ಅದರ ಹೆಸರೇನು? ಥೋ.. ನೆನಪಿಗೆ ಬರ್ತಿಲ್ಲ. ಹಾ.. ಸಣ್ಣವನು ಗಿರಿ ಅಂಥ ಏನೋ ಹೆಸರಿಟ್ಟಿದ್ದಿರ ಬೇಕು.
ಕಂತ್ರಿ ಬೆಕ್ಕಿಗೆಲ್ಲ ಯಾವ ಹೆಸರಾದರೇನು? ಅದು ಯಾವತ್ತೂ ಮನೆಯೊಳಗೆ ಕಕ್ಕ ಮಾಡಿದ್ದಿಲ್ಲ. ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗಾಗಿ ವೆಟರ್ನಿಟಿ ಡಾಕ್ಟರ್ ಬಂದದ್ದಿಲ್ಲ. ಅದರ ಟಾಯ್ಲೆಟ್ ತೊಳೆದುಕೊಳ್ಳಲು ಜನ ನೇಮಿಸಿದ್ದಿಲ್ಲ. ಸಾದಾ ಸೀದಾ ಬೆಕ್ಕು, ಇಲ್ಲೋ ಹೊರ ಹೋಗಿ ಹೊಯ್ಗೆಯನ್ನು ಬಾಚಿ ತನ್ನ ನೈಸರ್ಗಿಕ ಕರ್ಮಗಳನ್ನು ಮುಗಿಸುವುದು ನೆನಪಿಗೆ ಬಂತು. ಪಾಪ ಅದು ಬಡತನವನ್ನೂ ಅರ್ಥ ಮಾಡಿಕೊಂಡ ಬೆಕ್ಕು. ನಮ್ಮ ಚಿಕ್ಕ ಮನೆಯಲ್ಲಿ ಅದು ಹೇಗೆ ಹೊಂದಿಕೊಂಡು ಬಿಟ್ಟಿತು? ಎಂದೆಲ್ಲಾ ಚಿಂತಿಸುತ್ತಲೇ ಅವನು ಅಲ್ಲಿನ ಜಮಾಖಾನೆ ಮೇಲಿದ್ದದನ್ನು ಚೆನ್ನಾಗಿ ಸಾರಿಸಿ ತೆಗೆದು ಶುಭ್ರಗೊಳಿಸಿದ್ದ.
ಈ ಮಧ್ಯೆ ಕುಳಿತಲ್ಲಿಂದ ಎದ್ದು ಹೋದ ಮಾಲಕನ ಮಗಳು ಹೊರಗಿನಿಂದ ಕ್ಷೀಣ ಧ್ವನಿಯಲ್ಲಿ ತಾಯಿಯೊಂದಿಗೆ ಆಗಾಗ ಟಾಯ್ಲೆಟ್ ಮಾಡುತ್ತಿರುವ ಸೈರಸ್ ಬಗ್ಗೆ ಹೇಳುತ್ತಿದ್ದುದು ಕೇಳಿಸಿತು. ಸ್ವಲ್ಪ ಹೊತ್ತಿನಲ್ಲಿ ಅವರು ಫೋನಿನಲ್ಲಿ ವೆಟರ್ನಿಟಿ ಡಾಕ್ಟರ್ ಜೊತೆಯೂ ಸಮಾಲೋಚಿಸುತ್ತಿದ್ದರು. ಅದಾಗಲೇ ಮುಗಿದು ಹೋಗಲಿರುವ ಅದರ ಆಹಾರದ ಬಗ್ಗೆ ಹೇಳಲೆಂದು ಪಚ್ಚು ಹೊರಬಂದ. ‘‘ಮ್ಯಾಮ್... ಸೈರಸ್‌ನ ಫುಡ್ ಇವತ್ತಿಗೆ ಮುಗಿಯುತ್ತೆ’’ ಅಂದ. ಹೂ.. ‘‘ಹೋಗಿ ಮಾರ್ಟಿನ್ ನಲ್ಲಿ ಹೋಗಿ ಬಿಲ್ ಮಾಡಿ ಕೊಂಡು ತಾ’’ ಎಂದು ಮನೆಯೊಡತಿ ಬೆಕ್ಕಿನ ಬೆನ್ನು ನೇವರಿಸುತ್ತಲೇ ಚಕ್ಕನೆ ಉತ್ತರಿಸುತ್ತಾ ಒಳ ಹೊರಟು ಹೋದಳು. ಅವನು ಸದ್ಯ ಯಾವ ಬೈಗುಳವೂ ಸಿಗಲಿಲ್ಲವೆಂದು ನಿಟ್ಟುಸಿರಿಟ್ಟು ಮನೆಯ ಅಂಗಳದ ಮೇಲೆ ಹಾಕಿದ ವಿವಿಧ ಬಣ್ಣಗಳ ಬಿಸಿಯೇರಿದ ಟೈಲ್ಸ್ ನ ಮೇಲೆ ಮೆದುವಾಗಿ ಚಪ್ಪಲಿ ಮೆಟ್ಟಿಕೊಂಡು ಗೇಟಿನಿಂದ ಹೊರ ಬಿದ್ದ. ಮನಸ್ಸು ಸ್ವಲ್ಪ ನಿರಾಳವೆನಿಸಿ ಕಿಸೆಯಿಂದ ಬೀಡಿಯೊಂದನ್ನು ತೆಗೆದು ದೀರ್ಘವಾಗಿ ಎಳೆಯುತ್ತಾ ಮಾರ್ಟಿನ್ ಸೂಪರ್ ಮಾರ್ಕೆಟ್ ಬಳಿಗೆ ನಡೆದ.
***
ಪಚ್ಚು ಈ ರೀತಿ ಸೈರಸ್‌ಗೆ ಆಹಾರ ತರುವುದು ಇದೇ ಮೊದಲಲ್ಲ. ಈ ತಿಂಗಳಲ್ಲಿ ನಾಲ್ಕೈದು ಸಾರಿಯಾದರೂ ಆ ಸೂಪರ್ ಮಾರ್ಕೆಟ್‌ನಿಂದ ಈ ಆಹಾರ ಪೊಟ್ಟಣ ತಂದಿರಬಹುದು. ಆ ಬಕಾಸುರ ಪರ್ಶಿಯನ್ ಬೆಕ್ಕು ತಿನ್ನಲು ಕುಳಿತರೆ ಅದಕ್ಕೆ ಯಾವ ಪರಿಜ್ಞಾನವೂ ಇರುವುದಿಲ್ಲ. ಕೆಲವೊಮ್ಮೆ ಬೇಯಿಸಿದ ಚಿಕನ್ ತುಂಡುಗಳನ್ನು ಹಾಕುತ್ತಾರೆ. ಅದನ್ನು ಗಬಗಬನೆ ತಿಂದು ಹಾಕಿ ಗಂಭೀರ ನೋಟವನ್ನು ಬೀರುವುದಿದೆ. ಆಗೆಲ್ಲಾ ಪಚ್ಚುವಿಗೆ ಹೇ..ಇದರ ಸೊಕ್ಕೇ? ಎಂದು ಅನಿಸುವುದಿದೆ. ಪಚ್ಚು ಮಾರ್ಟಿನ್ ಸೂಪರ್ ಮಾರ್ಕೆಟ್ ತಲುಪಿದವನೇ, ಒಳಹೋಗಿ ‘ಎನ್ ಡಿ ಪ್ರೈಮ್ ಅಡಲ್ಟ್’ ಎಂದು ಹೇಳಿ ಐದು ಕೆಜಿಯ ಪೊಟ್ಟಣವನ್ನು ತಂದು ಕ್ಯಾಶಿಯರ್ ನ ಮುಂದಿಟ್ಟ, ಅವನು ಪರಿಚಯದ ನಗು ನಕ್ಕು ‘‘ಸಿಎ ವಿಲ್ಲಾ ವಾ?’’ ಎಂದು ಕೇಳಿದ.
ಹೌದೆಂದು ತಲೆಯಾಡಿಸಿದರೆ, ಅವನು ಬಿಲ್ ಮಾಡಿ ಸಾಲಕ್ಕೆ ಬರೆದಿಟ್ಟು ಥ್ಯಾಂಕ್ಸ್ ಎನ್ನುತ್ತಾ ಕಳಿಸಿಕೊಟ್ಟ. ತಿಂಗಳಿಗೊಂದು ಬಾರಿ ಸಿಎ ವಿಲ್ಲಾದ ಹಣ ಸಂದಾಯವಾಗುತ್ತಿ ದ್ದುದರಿಂದ ಅಗತ್ಯ ಸಾಮಗ್ರಿಗಳು ಅಲ್ಲಿಂದಲೇ ಸರಬರಾಜಾಗುತ್ತಿತ್ತು. ಪರ್ಶಿಯನ್ ಕ್ಯಾಟ್ ಆಹಾರ ಪಡೆದುಕೊಂಡು ಸೂಪರ್ ಮಾರ್ಕೆಟಿನಿಂದ ಹೊರಬಂದ ಪಚ್ಚು ಇನ್ನೊಂದು ಕಡ್ಡಿಗೀರಿ ಬೀಡಿಯನ್ನು ಸುಟ್ಟ. ಅದು ಕರಗಿ ಹೊಗೆಯಾಗಿ ಆಕಾಶಕ್ಕೇರುತ್ತಿದ್ದಂತೆ ಅವನ ನಡಿಗೆ ಸಿಎ ವಿಲ್ಲಾದ ಕಡೆಗಿತ್ತು. ಸುಮ್ಮನೆ ಏನೋ ಕುತೂಹಲ ಹುಟ್ಟಿ ಅವನ ಆಹಾರ ಪೊಟ್ಟಣದ ಬೆಲೆಗೊಮ್ಮೆ ಕಣ್ಣಿಟ್ಟ. ಎಂಆರ್‌ಪಿ ಎಂದು ಬರೆದಿದ್ದರ ಸ್ವಲ್ಪವೇ ಆಚೆಗೆ ಐನೂರು ರೂಪಾಯಿ ನಮೂದಿಸಿದಂತೆ ಕಂಡಿತು, ಏನೋ ಮಬ್ಬಾದಂತನಿಸಿ ಇನ್ನೊಮ್ಮೆ ಸೂಕ್ಷ್ಮವಾಗಿ ನೋಡಿದ. ಬರೋಬ್ಬರಿ ಐದು ಸಾವಿರದ ಐನೂರು ರೂಪಾಯಿ! ಪಚ್ಚುವಿನ ಜಂಘಾಬಲವೇ ಉಡುಗಿತು.
ಕಣ್ಣು ಕತ್ತಲು ಬಂತು. ಇದು ಈ ತಿಂಗಳಿನ ಐದನೇ ಪೊಟ್ಟಣ. ಒಟ್ಟು ಇಪ್ಪತ್ತೆರಡು ಸಾವಿರ ರೂಪಾಯಿ ಬರೀ ತಿನ್ನುವುದಕ್ಕಾಗಿ! ಅಬ್ಬಾ ಭಾಗ್ಯವಂತ ಬೆಕ್ಕು, ಬೆಳಗೆ ತಿಂದಿದ್ದ ಬೆಳ್ತಿಗೆ ಅಕ್ಕಿ ತಿಳಿ ಗಂಜಿ- ಯಾವಗಲೋ ಕರಗಿತ್ತು. ಮಕ್ಕಳು ಶಾಲೆಗೆ ಹೊಗುವ ಮುಂಚೆ ಹೆಂಡತಿ ಗಡಿಬಿಡಿಯಿಂದಲೇ ಮಾಡಿಟ್ಟಿದ್ದ ಗಂಜಿ. ಲಗುಬಗನೆ ಕುಡಿದು ಅವು ಶಾಲೆಗೆ ಹೊರಟಿದ್ದ ನೆನಪು. ಅವರ ಹಿಂದೆ ಹೊರಡುವ ಅವರ ಪ್ರೀತಿಯ ಬೆಕ್ಕು. ಸಣ್ಣವನ ಮುದ್ದಿನ ಬೆಕ್ಕು. ಅದರ ಮೇಲೆ ಅವನ ಕಕ್ಕುಲಾತಿ ಅಧಿಕಗೊಂಡು ಅದು ಮನೆಯೊಳಗೆ ಬಂದು ಬೀಡು ಬಿಟ್ಟಿತ್ತು. ಪಾಪ, ಒಂದು ರೂಪಾಯಿಯೂ ಹೆಚ್ಚಿಗೆ ಖರ್ಚಾಗುವಂತೆ ಮಾಡದ ಬಡವನ ಬೆಕ್ಕದು.
ಒಂದು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಯ ರೆಡಿಮೇಡ್ ಆಹಾರ ತಿನ್ನುವ ಬೆಕ್ಕಿನೊಡನೆ ಯಾವ ಹೋಲಿಕೆ? ಅವನಿಗೆ ಅದನ್ನು ನೋಡಿಕೊಳ್ಳಲು ಸಿಗುವುದು ಆರು ಸಾವಿರ ರೂಪಾಯಿ! ಪುಣ್ಯಕ್ಕೆ ನಗರದ ಗ್ರೀನ್ ಹಿಲ್ ಫ್ಲ್ಯಾಟ್‌ನಲ್ಲಿ ವಾಚ್ ಮೆನ್ ಕೆಲಸವೂ ದಕ್ಕಿ ಹೆಂಡತಿ- ಮಕ್ಕಳಿಗೂ ಇರಲು ಸೂರಾಗಿದೆ. ಪಾರ್ಕಿಂಗ್ ಏರಿಯಾದ ಸ್ಟೈರ್ ಕೇಸ್ ಅಡಿಯಲ್ಲಿ ಸಣ್ಣ ಎರಡು ಕೊಠಡಿಯ ಜೋಪಡಿಯಂತಹ ಮನೆ. ಮಲಗಿಕೊಳ್ಳಲು ಬಳಸುವ ಒಂದು ಕೊಠಡಿ. ಇನ್ನೊಂದು ಹಜಾರ- ಅಡುಗೆ ಮನೆ- ಸ್ಟೋರ್ ರೂಂ- ಎಲ್ಲವೂ
ಒಂದಾಗಿರುವ ಸಣ್ಣ ಜಾಗ. ಹನ್ನೆರಡು ಸಾವಿರ ಸಂಬಳ ಅಲ್ಲಿ ಮಾತನಾಡಿದರೂ ಆರು ಸಾವಿರ ಉಳಿದುಕೊಳ್ಳಲು ಅವಕಾಶ ಮಾಡಿದ್ದಕ್ಕಾಗಿ ಮುರಿದುಕೊಳ್ಳುತ್ತಾರೆ. ಮಕ್ಕಳಿಬ್ಬರೂ ಸರಕಾರಿ ಶಾಲೆಗೆ ಸೇರಿದ್ದಾರೆ. ಆಗೊಮ್ಮೆ ಈಗೊಮ್ಮೆ ಬರೆಯಲು ಪುಸ್ತಕ ಪೆನ್ನೆಂದು ಕೇಳುತ್ತಾರೆ. ತಿಂಗಳ ಸಂಬಳದ ಹಣದಲ್ಲಿ ಮನೆಯ ಖರ್ಚು- ಗ್ಯಾಸ್‌ಗೆ ಹೊಂದಿಸಬೇಕು. ಅಷ್ಟಕ್ಕೇ ಪೂರ್ತಿ ಖರ್ಚಾಗುವುದಿಲ್ಲ. ಹೆಂಡತಿಯ ಕೆಮ್ಮಿಗಾಗಿ ತಿಂಗಳಿಗೆ ಐದು ಸಾವಿರ ಮದ್ದಿಗೆ ಹೋಗುತ್ತದೆ. ಮಕ್ಕಳ ಬಟ್ಟೆ ಬರೆ ಶಾಲೆಗೆ ಹೋಗಲು ಬಸ್ಸಿನ ವೆಚ್ಚ ಎಲ್ಲವೂ ಕಳೆದು ಏನು ಉಳಿಯುತ್ತದೆ. ಅವನು ನಡೆಯುತ್ತಿರುವ ದಾರಿಯಲ್ಲಿ ಸುಮ್ಮನೆ ಬದುಕನ್ನು ಅವಲೋಕಿಸುತ್ತಿದ್ದಾನೆ. ಮತ್ತೆ ಮತ್ತೆ ಬೇಡಬೇಡವೆಂದರೂ ಅದರ ಪೊಟ್ಟಣದ ಮೇಲಿನ ಬೆಲೆಯ ಮೇಲೆ ಕಣ್ಣು ಹೋಗಿ ತಲೆ ಧಿಂ ಅನ್ನುತ್ತಿದೆ.
ಆ ಅಮೂಲ್ಯ ಆಹಾರದ ಪೊಟ್ಟಣವನ್ನು ಮತ್ತಷ್ಟು ಭದ್ರವಾಗಿರಿಸುತ್ತಾ ನಡೆಯುತ್ತಿದ್ದಾನೆ. ಸಿಎ ವಿಲ್ಲಾಗೆ ಹೋಗುವ ದಾರಿಯತ್ತ ತಿರುಗಬೇಕಾದರೆ ಅಚಾನಕ್ಕಾಗಿ ಅವನ ಕಣ್ಣು ಅಲ್ಲಿ ಹಾಕಿದ್ದ ಪೋಸ್ಟರ್ ಕಡೆಗೆ ಹೊರಳುತ್ತದೆ. ‘‘ಪರ್ಶಿಯನ್ ಕ್ಯಾಟ್ ಕಾಣೆಯಾಗಿದೆ. ಹುಡುಕಿ ಕೊಟ್ಟವರಿಗೆ 20,000 ರೂಪಾಯಿ ಬಹುಮಾನ. ಸಂಪರ್ಕಿಸಿ 99..................’’ ಕೆಳಗೊಂದು ಅಂದವಾದ ಗಂಭೀರ ಮುಖದ ಬೆಕ್ಕಿನ ಫೋಟೊ. ಅಬ್ಬಾ! ಈ ಪರ್ಶಿಯನ್ ಬೆಕ್ಕುಗಳದ್ದೊಂದು ಭಾಗ್ಯವೇ? ಉದ್ಗಾರವೊಂದು ಮನಸ್ಸಿನಿಂದ ಅವನಿಗರಿವಿಲ್ಲದೆ ಹೊರಬೀಳುತ್ತದೆ. ಪಚ್ಚು ಗೇಟು ದಾಟಿ ಮನೆ ಪ್ರವೇಶಿಸುತ್ತಾನೆ. ನಿಶ್ಶಬ್ದವಾದ ಐಶಾರಾಮಿ ಸಿಎ ವಿಲ್ಲಾದಲ್ಲಿ ಬೆಕ್ಕು ರಾಜನಂತೆ ಸೋಫಾದ ಮೇಲೆ ಮಲಗಿದೆ. ಎಚ್ಚರವಾಗದಂತೆ ಪಚ್ಚು ಒಳ ಹೊಕ್ಕು ಆಹಾರ ಪೊಟ್ಟಣವನ್ನು ಭದ್ರವಾಗಿ ಜೋಡಿಸಿಡುತ್ತಾನೆ.
ಸೈರಸ್ ಆಗ ತಾನೆ ಸುರಿದು ಹೋದ ಆಹಾರವನ್ನು ತಿಂದು ತೇಗಿದೆ. ಬಟ್ಟಲಲ್ಲಿ ಇರಿಸಿದ ಮಾಂಸದ ತುಂಡೊಂದು ಹಾಗೆಯೇ ಉಳಿದಿದೆ. ಮುಳ್ಳು ಪ್ರತ್ಯೇಕಿಸಲ್ಪಟ್ಟ ಬರಿಯ ನೀರಲ್ಲಿ ಬೇಯಿಸಿದ ಬಿಸಿ ಮಾಂಸ.
ಅದನ್ನು ಕಾಣುವಾಗಲೆಲ್ಲಾ ಪಚ್ಚುವಿಗೆ ತನ್ನ ಮಕ್ಕಳ ನೆನಪು ಬರುತ್ತದೆ.
ಅಪ್ಪಾ... ಎಲ್ಲರೂ ಶಾಲೆಯ ಹುಡುಗರು ಟಿಕ್ಕ ತಿಂತಾರಂತೆ? ತುಂಬಾ ರುಚಿಯಂತೆ. ಒಮ್ಮೆಯಾದ್ರೂ ನಮ್ಗೂ ತಿನ್ಬೇಕು
ಮಕ್ಕಳ ಆಸೆಗಾಗಿ ಚಿಕನ್ ಟಿಕ್ಕ ಮಾರುವ ಅಂಗಡಿಗೆ ಹೋದರೆ ಒಂದು ತುಂಡಿಗೆ ಅರುವತ್ತು ರೂಪಾಯಿ. ನಾಲ್ಕು ತುಂಡು ಕೊಂಡುಕೊಳ್ಳಬೇಕೆಂದರೆ ಇನ್ನೂರ ನಲುವತ್ತು ರೂಪಾಯಿ
ಬೇಕು. ನನಗೆ ಬೇಡವೆಂದು ಮೂರಕ್ಕಿಳಿಸಿದರೆ ಹೆಂಡತಿ ಖಡಾಖಂಡಿತವಾಗಿ ನಿಮಗೆ ಬೇಡದ್ದು ನನಗೂ ಬೇಡವೆಂದು ಆಸೆಯಿದ್ದರೂ ನಿರಾಕರಿಸುವವಳು. ಅಷ್ಟು ದೊಡ್ಡ ಮೊತ್ತವನ್ನು ಕೇಳಿ ಪಚ್ಚು ಹಾಗೆಯೇ ಹಿಂದಿರುಗಿದ್ದ.
ಈಗ ಅಂಥದ್ದೇ ಒಂದು ಕೋಳಿ ತುಂಡು, ಸ್ವಲ್ಪ ಮೆಣಸಿನ ಪುಡಿಹಾಕಿ ಬೇಯಿಸಿದರೆ ಟಿಕ್ಕಕ್ಕೇನೂ ಕಡಿಮೆ ಬಾರದೆಂದು ಲೆಕ್ಕ ಹಾಕಿ, ಮೆಲ್ಲನೆ ಆ ಮಾಂಸದ ತುಂಡನ್ನು ಎಗರಿಸಿ ಪ್ಲಾಸ್ಟಿಕ್ ಲಕೋಟೆಯೊಳಗೆ ಪೇಪರ್ ಸುತ್ತಿ ಭದ್ರವಾಗಿಟ್ಟ. ನಾನು ಮಾಡಿದ್ದು ಕಳ್ಳತನ.. ಛೇ ಛೇ.. ಒಂದು ಯಕಶ್ಚಿತ್ ಬೆಕ್ಕು ತಿನ್ನಲು ಬೇಡವೆಂದು ಬಿಟ್ಟು ಹೋದದ್ದನ್ನು ಎತ್ತಿಕೊಂಡರೆ ಏನು ತಪ್ಪು.
ಮತ್ತೆ ಮನೆಯ ಅಬ್ಬೇಪಾರಿ ಬೆಕ್ಕಿನ ನೆನಪು ಬಂತು. ಬಹುಶಃ ಆ ಜೀವವೊಂದು ಇಲ್ಲದೆ ಹೋಗಿದ್ದರೆ ತನ್ನ ಮಕ್ಕಳ ಕೊರಗು ಹೇಗಿರುತ್ತಿತ್ತೋ? ಪಚ್ಚು ಗತ ದಿನಗಳ ನನೆಗುದಿಗೆ ಬಿದ್ದ.
ಆ ದಿನ ಫ್ಲ್ಯಾಟ್ ಮಕ್ಕಳ ಜೊತೆಗೂಡಿ ಆಟವಾಡಿ ಮನೆಗೆ ಬಂದ ಮಕ್ಕಳು ಬೇಸರ ದಿಂದಿದ್ದರು, ‘‘ಅಮ್ಮಾ.. ನಾವು ಆಟವಾಡಲು ಬರಬಾರದಂತೆ. ನಮ್ಮನ್ನು ಮುಟ್ಟಿದರೆ ಗಲೀಜಾಗುತ್ತಂತೆ. ಅವರ ಬಾಲ್ ಕೂಡಾ ನಾವು ಹಿಡಿಯಲು ಬಾರದಂತೆ’’ ಎಂದು ಮಕ್ಕಳು ಹೇಳಿದ್ದು ಕೇಳಿಸಿತು.
‘‘ಅವರೆಲ್ಲಾ ದೊಡ್ಡವರ ಮಕ್ಕಳು, ನೀವು ಅವರ ಜೊತೆ ಆಟಕ್ಕೆ ಹೋಗ್ಬಾರ್ದು. ಅವರಿಗೆ ಕಾರು ಇದೆ, ಹಣ ಇದೆ. ನಾವು ಬಡವರಲ್ವಾ?’’ ಎಂದು ಮಕ್ಕಳ ತಾಯಿ ಸಮಜಾಯಿಷಿ ಕೊಟ್ಟಿದ್ದಳು. ಪಚ್ಚು ಅದನ್ನೆಲ್ಲಾ ಕೇಳಿಯೂ ಕೇಳಿಸದೆ ಸುಮ್ಮನಿದ್ದ. ಚಿಕ್ಕವನು ‘‘ಅಮ್ಮಾ ನಾವು ಕಾರು ಕೊಳ್ಳುವುದು ಯಾವಾಗ?’’ ಎಂದು ಕೇಳಿದ. ‘‘ಅದೆಲ್ಲಾ ಈಗ ಆಗಲ್ಲ, ನೀನು ಕಲಿತು ದೊಡ್ಡವನಾಗಿ ಕಾರು ಖರಿದೀಸಬೇಕು’’ ಎಂದು ಸಮಾಧಾನದ ಮಾತುಗಳನ್ನು ಹೇಳಿ ಅವರನ್ನು ಆಟದ ಗುಂಗಿನಿಂದ ಹೊರತರುತ್ತಿದ್ದಳು ಪಚ್ಚುವಿನ ಹೆಂಡತಿ. ಇದನ್ನು ಕೇಳಿಸಿಕೊಂಡು ಸಹಿಸಲಾಗದೆ ಪಚ್ಚು ನಿಧಾನವಾಗಿ ಎದ್ದು ಹೊರಬಂದ.
ಕಿಸೆಯೊಳಕ್ಕೆ ಕೈ ಹಾಕಿ ಬೀಡಿಯೊಂದನ್ನು ತೆಗೆದು ಎಳೆಯುತ್ತಾ, ಫ್ಲ್ಯಾಟ್ ಮುಂಭಾಗಕ್ಕೆ ಬಂದಿದ್ದ. ಆಗಷ್ಟೇ ಸಂಜೆ ಕಳೆದಿದ್ದರಿಂದ ಫ್ಲ್ಯಾಟ್ ಹೊರಗಿನ ದೀಪಗಳು ಉರಿಸಬೇಕಿತ್ತು. ಸಾಲು ದೀಪಗಳ ಸ್ವಿಚ್ಚನ್ನು ಒಂದೊಂದನ್ನೇ ಹಾಕಿ, ಬೆಳಕು ತುಂಬತೊಡಗಿದ. ಫ್ಲ್ಯಾಟ್ ಮುಂಭಾಗದಲ್ಲಿ ಮಕ್ಕಳು ಆಡಲು ಸಣ್ಣ ಜಾಗವಿತ್ತು. ಅದರ ಕೊನೆಯಲ್ಲೊಂದು ಆವರಣ ಗೋಡೆ. ಪಚ್ಚು ದೀಪಗಳನ್ನು ಉರಿಸುತ್ತಾ ಕೊನೆಯ ದೀಪವನ್ನು ಉರಿಸಿದಂತೆ ಅಲ್ಲಿ ಬರೆದಿದ್ದ ಅಕ್ಷರಗಳು ದೃಗ್ಗೋಚರವಾಯಿತು. ‘‘ವಾಚ್‌ಮನ್ ಮಕ್ಕಳು ನಮ್ಮೋಂದಿಗೆ ಆಟಡಲು ಬರಬಾರದು’’ ಎಂದು ಯಾರೋ ಉಳ್ಳವರ ಮಕ್ಕಳು ಅವರಿಗೆ ತಿಳಿದ ಇಂಗ್ಲಿಷ್ ವಿದ್ವತ್ ಬಳಸಿ ಕನ್ನಡದಲ್ಲಿ ಬರೆದಿದ್ದರು. ಪಚ್ಚುವಿನ ಹೊಟ್ಟೆಯೊಳಗೆ ಸಂಕಟವಾಯಿತು. ನಡೆದದ್ದಿಷ್ಟೇ, ಅವರು ಆಡುವ ಆಟದಲ್ಲಿ ಹೆಚ್ಚೇ ಚುರುಕಾಗಿದ್ದ ಪಚ್ಚುವಿನ ಮಕ್ಕಳು ಬಾಲ್ ಸಿಕ್ಕಿದ ಕೂಡಲೇ ಜಿಗಿದು ಓಡುತ್ತಾ ಗುರಿ ತಲುಪುತ್ತಿದ್ದರು.
ಉಳಿದ ಶ್ರೀಮಂತರ ಮಕ್ಕಳಿಂದ ಅದು ಆಗದಿದ್ದುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ಅದನ್ನೇ ನೆಪಮಾಡಿ ಅವರೂ ಅವರ ಶ್ರೀಮಂತ ಪೋಷಕರಲ್ಲಿ ತಿಳಿಸಿದ್ದಿರಬೇಕು, ‘‘ಆ ಗತಿಕೆಟ್ಟ ಗಲೀಜು ಮಕ್ಕಳಲ್ಲಿ ನಿಮಗೆಂತ ಸಹವಾಸ’’ ಅಂತ ದೊಡ್ಡವರು ಗದರಿರಬಹುದು. ಇಷ್ಟು ಊಹಿಸಲು ಪಚ್ಚುವಿಗೆ ಸಮಯ ಬೇಕಿರಲಿಲ್ಲ. ಹೊಟ್ಟೆಯೊಳಗಿನ ಸಂಕಟ ಕ್ರೋಧವಾಗಿ ಮಾರ್ಪಟ್ಟು ಸುಟ್ಟ ಎರಡನೇ ಬೀಡಿಯನ್ನು ಎಸೆದು ಮನೆಗೆ ಬಂದವನೇ ಒಂದೇ ಸಮನೆ ಮೂಲೆಯಲ್ಲಿರಿಸಿದ್ದ ಬೆತ್ತ ಹಿಡಿದು ಮಕ್ಕಳಿಬ್ಬರಿಗೂ ಬಾರಿಸುತ್ತಾ ‘‘ಅವರೊಂದಿಗೆ ಆಟವಾಡಲು ಹೋಗಲೇಬೇಡಿ’’ ಎಂದು ಸಿಡುಕುತ್ತಾ ತಾಕೀತು ಮಾಡಿದ್ದ. ಆ ಬಳಿಕ ಪೆಟ್ಟಿನ ಭಯಕ್ಕೆ ಆಟಕ್ಕೆ ಹೋಗುವುದು ತಡೆಯಾಯಿತು. ದೊಡ್ಡವನು ಒಂದೆರಡು ಬಾರಿ ತಪ್ಪಿಸಿಕೊಂಡು ಆಟಕ್ಕೆ ಹೋಗಿದ್ದರೂ, ಅವರ್ಯಾರೂ ಸೇರಿಸಿಕೊಳ್ಳದ್ದರಿಂದ ಹಿಂದಿರುಗುತ್ತಿದ್ದ. ಸಣ್ಣವನು ಆ ಬೆಳವಣಿಗೆಯ ಬಳಿಕ ಹೊರಗೆಲ್ಲೂ ಹೋಗದೆ ಇನ್ನಷ್ಟು ಅಂತರ್ಮುಖಿಯಾಗಿದ್ದ. ಅದನ್ನು ಕಂಡು ಅಸಹಾಯಕನಾಗಿ ಪಚ್ಚು ಒಳಗೊಳಗೆ ಸಂಕಟಪಟ್ಟಿದ್ದ.
ಆ ಹೊತ್ತಿಗೆ, ಅಪತ್ಬಾಂಧವನಾಗಿ ಆಟವಾಡಲು ಅತ್ಯುತ್ತಮ ಗೆಳೆಯನಾಗಿ ಆ ಬೆಕ್ಕು ಮನೆಗೆ ಬಂದು, ಸಣ್ಣವನ ಬೇಸರವನ್ನು ಕಳೆಯಲು ಸಹಾಯ ಮಾಡಿತ್ತು. ಈಗ ಅಬ್ಬೇಪಾರಿ ಬೆಕ್ಕಿಗೆ ಅವನೇ ಬಂಟ.
ಆ ದಿನದ ಪಾಳಿ ಮುಗಿಯಿತು. ಪಚ್ಚು ಮನೆಗೆ ಬಂದ. ಲಕೋಟೆಯಲ್ಲಿ ಭದ್ರವಾಗಿರಿಸಿದ ಮಾಂಸದ ತುಂಡನ್ನು ತೆಗೆದಿರಿಸಿದ. ಅದು ಸುಮಾರು ಹೊತ್ತು ಗಾಳಿ ಸೋಕದಿದ್ದರಿಂದಲೇ ಇನ್ನಷ್ಟು ಮುದ್ದೆಯಂತಾಗಿತ್ತು. ಅಡುಗೆ ಮನೆಗೆ ಬಂದು ಟಿಕ್ಕಾದಂತೆ ಕರಿಯಲು ತವಾ ಹುಡುಕಿಕೊಂಡ. ಗ್ಯಾಸ್ ಇವತ್ತೋ ನಾಳೆಯೋ ಮುಗಿಯಬಹುದೆಂಬ ಭಯವೂ ಸಣ್ಣಮಟ್ಟಿನಲ್ಲಿ ಅವನನ್ನು ಕಾಡಿತು. ಮೆಣಸಿನ ಪುಡಿಗಾಗಿ ತಡಕಾಡಿದ. ಎಣ್ಣೆಯೂ ಮುಗಿದಿತ್ತು. ಮಕ್ಕಳು ಹೊರಗೆ ಬೆಕ್ಕಿನೊಂದಿಗೆ ಆಡುತ್ತಿದ್ದರು. ಅಷ್ಟರಲ್ಲೇ ಹೊರಗೆಯೇನೋ ಕೆಲಸ ನಿರ್ವಹಿಸುತ್ತಿದ್ದ ಮಡದಿಯೂ ಕೆಮ್ಮತ್ತಾ ಒಳ ಬಂದಳು.
ಅವಳಿಗೂ ಅದನ್ನು ತಿಳಿ ಹೇಳಿದರೆ - ಅವಳು ಪೇಟೆಗೆ ಇತರ ಸಾಮಾನು ತರಲು ಅಟ್ಟುತ್ತಾಳೆ- ಎಂದು ಅರ್ಥ ಮಾಡಿಕೊಂಡು ಮಾಂಸದ ತುಂಡನ್ನು ಅಡುಗೆ ಕೋಣೆಯ ಎತ್ತರದ ಸ್ಥಳದಲ್ಲಿ ಸಣ್ಣ ಪಾತ್ರೆಯಲ್ಲಿ ಮುಚ್ಚಿಟ್ಟು ಸೀದಾ ಅಂಗಡಿಯ ಕಡೆಗೆ ನಡೆದ. ಐವತ್ತು ಗ್ರಾಂ ಮೆಣಸಿನ ಪುಡಿ- ನೂರು ಮಿಲಿ ಲೀಟರ್ ತೆಂಗಿನ ಎಣ್ಣೆ ಸಾಲಕ್ಕೆ ಒಪ್ಪಿಸಿ ಮನೆಗೆ ಬಂದ. ಆಡುತ್ತಿದ್ದ ಮಕ್ಕಳು ಒಳಗಿನ ಸ್ಟೇರ್ ಕೇಸ್‌ನಲ್ಲಿ ಕುಳಿತಿದ್ದರು. ಹೆಂಡತಿ ಕೆಮ್ಮುತ್ತಾ ಸರದಿ ಪ್ರಕಾರ ಒಬ್ಬೊಬ್ಬನನ್ನೂ ಮಡಿಲಲ್ಲಿ ಮಲಗಿಸಿ ಹೇನು ನೋಡುತ್ತಿದ್ದಳು. ವೌನವಾಗಿಯೇ ಪಚ್ಚು ಬಂದು ಅಡುಗೆ ಕೋಣೆಗೆ ನುಗ್ಗಿದ. ಮಾಂಸದ ತುಂಡು ಕಲಸಿಡಲು ಪಾತ್ರೆಯನ್ನೊಂದು ತೊಳೆದುಕೊಂಡ. ಎತ್ತಿಟ್ಟ ಮಾಂಸದ ಪಾತ್ರೆಯನ್ನು ತುದಿಗಾಲಲ್ಲಿ ನಿಂತು ಎಟಕಿಸುತ್ತಾ ಪಾತ್ರೆ ತೆಗೆದ.
ಏನಾಶ್ಚರ್ಯ! ಮಾಂಸ ತುಂಡು ಮಾಯವಾಗಿತ್ತು. ಅಷ್ಟರಲ್ಲಿ ಅಲ್ಲೆಲ್ಲೋ ಅಡ್ಡಾಡುತ್ತಿದ್ದ ಕಳ್ಳ ಬೆಕ್ಕಿನ ‘ಮಿಯಾಂ’ ಸದ್ದು ಕೇಳಿಸಿತು. ಕೋಪ ಎಲ್ಲಿತ್ತೋ ಗೊತ್ತಿಲ್ಲ, ಒಂದು ದೊಣ್ಣೆ ಎತ್ತಿಕೊಂಡು, ‘‘ಹಚೀ.. ಬೇವರ್ಸಿ’’ ಎಂದು ಹಳಿಯುತ್ತಾ ಅದರ ಹಿಂದೆ ಓಡಿದ. ಅಷ್ಟರಲ್ಲೇ ಸಣ್ಣವನು ಆ ಗದ್ದಲಕ್ಕೆ ಓಡಿ ಬಂದ. ಅಪ್ಪನ ರೌದ್ರಾವತಾರ ನೋಡಿ ‘‘ಅಪ್ಪ ಹೊಡಿಬೇಡಿ ಅಪ್ಪಾ ’’ ಎಂದು ಅಡ್ಡ ಬಂದ. ಆದರೂ ಪಚ್ಚುವಿನ ಕೈಯಲ್ಲಿರುವ ಕೋಲು ರಪ್ಪನೆ ಬೀಸಿತು. ಬೆಕ್ಕು ಬೀಳುವ ಪೆಟ್ಟನ್ನು ಕೂದೆಲೆಳೆಯ ಅಂತರದಿಂದ ತಪ್ಪಿಸಿಕೊಂಡು ನಾಗಾಲೋಟದಲ್ಲಿ ಓಡತೊಡಗಿತು. ಸಣ್ಣವನು ಅದರ ಹಿಂದೆಯೇ ಓಡಿದ. ದೊಣ್ಣೆ ಎಸೆದು ಪಚ್ಚು ಏದುಸಿರು ಬಿಡುತ್ತಾ ಮೆಟ್ಟಿಲ ಮೇಲೆ ಕುಳಿತ. ಹೆಂಡತಿ ಕೆಮ್ಮ್ಮುತ್ತಲೇ ಹತ್ತಿರ ಬಂದು ‘‘ಏನು.. ?’’ ಪ್ರಶ್ನಾರ್ಥಕವಾಗಿ ನಿಂತಳು.
ನಡೆದದ್ದೆಲ್ಲಾ ವಿಶಾದದಲ್ಲಿಯೇ ಪಚ್ಚು ಹೇಳಿದ. ಅವಳೇನೂ ಮಾತನಾಡಲಿಲ್ಲ. ಆಗಲೇ ಸಂಜೆಯ ಸೂರ್ಯನನ್ನು ನೀಲಿ ಹೆಬ್ಬಾವು ಇಂಚಿಂಚಾಗಿ ನುಂಗಿ ಹಾಕುತ್ತಿತ್ತು. ಇಡೀ ನಗರವೇ ಹಳದಿ ಹಚ್ಚಿ ಶೋಕವನ್ನಾಚರಿಸುತ್ತಿತ್ತು. ಪಚ್ಚು ಸುಸ್ತಾಗಿ ಸುಮ್ಮನೆ ಅಲ್ಲೇ ಮಲಗಿ ಬೀಡಿ ಸೇದತೊಡಗಿದ. ಹೆಂಡತಿ ಕೆಮ್ಮುತ್ತಾ ಅಡುಗೆ ಕೋಣೆಯಲ್ಲಿ ರಾತ್ರಿಯ ಗಂಜಿಗೆ ಸಿದ್ಧತೆ ಮಾಡತೊಡಗಿದಳು. ಸ್ವಲ್ಪ ಹೊತ್ತು ವೌನ ನೆಲೆಸಿತು. ಆಗೊಮ್ಮೆ- ಈಗೊಮ್ಮೆ ಫ್ಲ್ಯಾಟ್‌ನ ಜನರು ಸಂಜೆಯ ಕೆಲಸ ಮುಗಿಸಿ ಬೇಸ್ಮೆಂಟ್ ಪಾರ್ಕಿಂಗಿಗೆ ಬರುವ ಬೈಕ್- ಕಾರಿನ ಸದ್ದು ಕೇಳುತ್ತಿತ್ತು. ಗಲಾಟೆ ಕೇಳಿ ಮನೆ ಬಿಟ್ಟು ಹೊರ ಹೋಗಿದ್ದ ದೊಡ್ಡವನು ಕತ್ತಲಾದಂತೆ ಮನೆಯೊಳಗೆ ಬಂದ. ಅವನ ಬರವನ್ನು ಕಾದವಳಂತೆ ‘‘ಮಗು ಎಲ್ಲೋ ಎಂದೋ?’’ ಎಂದು ಅಮ್ಮ ಕೆಮ್ಮುತ್ತಲೇ ಕೇಳಿದಳು.
‘‘ನಾನು ನೋಡಿಲ್ಲಮ್ಮಾ’’ ಎಂಬ ಉತ್ತರವಷ್ಟೇ ಹೇಳಿ- ಅವನು ಸ್ನಾನಕ್ಕೆಂದು ಹೊರಗಿನ ಶೌಚಾಲಯಕ್ಕೆ ಹೊರಟ. ಹೊತ್ತು ಮೀರಿ, ಕತ್ತಲಾವರಿಸಿತು. ಪಾರ್ಕಿಂಗ್ ತುಂಬಾ ಗವ್ವನೆ ಕತ್ತಲು ಆವರಿಸಿತು. ಪಚ್ಚು ಬೀಡಿಯ ಕೊನೆಯ ಧಂ ಎಳೆದು ಹೊರ ಬಂದು ಅಲ್ಲೆಲ್ಲಾ ಲೈಟು ಉರಿಸಿದ. ಸಣ್ಣವನು ಇನ್ನೂ ಮನೆಗೆ ಬಂದಿರಲಿಲ್ಲ. ಪಚ್ಚು ಮಗನನ್ನು ಅಲ್ಲೆಲ್ಲಾ ಒಂದು ಸುತ್ತು ಹುಡುಕಾಡಿದ. ಎಲ್ಲೂ ಮಗನ ಸುಳಿವಿಲ್ಲ. ಸಣ್ಣಗೆ ಭಯ ಆವರಿಸಿತು. ಅವನಿಗೆ ಇಷ್ಟು ಹೊತ್ತು ತಡಮಾಡಿ ಬಂದದ್ದೇ ನೆನಪಿಲ್ಲ. ಏನೋ ಎಡವಟ್ಟಾಗಿದೆ. ಹಾಗಾಗಿರಲಿಕ್ಕಿಲ್ಲ ಎಂದು ತನ್ನನ್ನು ತಾನೇ ಸಮಾಧಾನ ಮಾಡಿಕೊಂಡು ಜನರೇಟರ್ ಕೊಠಡಿ ಬಳಿಯ ದೇವರ ಕೋಣೆಗೆ ಬಂದ. ಅದು ತಿಂಗಳುಗಟ್ಟಲೆ ಬಳಸದೆ ಅಸ್ತವ್ಯಸ್ತವಾಗಿತ್ತು.
ದೀಪ ನಂದಿ ಎಷ್ಟೋ ದಿನಗಳಾಗಿದ್ದವು. ಕಡ್ಡಿಯೊಂದು ಗೀರಿ ದೀಪವನ್ನು ಹೊತ್ತಿಸಿದ. ಆಗಲೇ ಮುಗಿದು ಹೋಗಿದ್ದ ಎಣ್ಣೆಯ ದೀಪದ ಬತ್ತಿ ತುಣುಕು ಮಿಣುಕು ಉರಿದು ಗಾಳಿಯಲ್ಲಿ ಇದೀಗ ನಂದ ಬಹುದೆಂಬಂತೆ ಗಾಳಿಯಲ್ಲಿ ಓಲಾಡಿತು. ಸುಮ್ಮನೆ ಒಮ್ಮೆ ಕೈ ಮುಗಿದು ಪ್ರಾರ್ಥಿಸಿದ. ಮೆಲ್ಲನೆ ಹೊರಗಿನ ಲೈಟ್ ಉರಿಸಿ ಅಲ್ಲೆಲ್ಲಾ ಮತ್ತೊಂದು ಸುತ್ತು ಹಾಕಿದ. ಮಗನ ಪತ್ತೆಯೇ ಇಲ್ಲ. ಹತ್ತು ಅಂತಸ್ತಿನ ಫ್ಲ್ಯಾಟ್ ಮೇಲೆ ಲಿಫ್ಟ್ ಬಳಸದೆ ನಡೆದ, ಸುಳಿವೇ ಇಲ್ಲ. ಅವನ ಹೆಂಡತಿ ಮತ್ತು ಮಗ ಕೂಡಾ ವಿಶಾಲ ಬೇಸ್ಮೆಂಟ್ ಹೊರಾಂಗಣವೆಲ್ಲಾ ಹುಡುಕುತ್ತಿದ್ದರು. ಕೊನೆಗೂ ಧೈರ್ಯ ಮಾಡಿಕೊಂಡು ಒಂಭತ್ತನೇ ಫ್ಲೋರ್‌ನ 907 ನಂಬರ್ ಮನೆಯ ಬಾಗಿಲು ಬಡಿದ. ಸ್ವಲ್ಪ ಸಮಯದ ನಂತರ ಫ್ಲ್ಯಾಟ್ ಓನರ್ ಬಾಗಿಲು ತೆಗೆದ.
ಪಚ್ಚುವಿನ ಮುಖ ಕಂಡೊಡನೆ ‘‘ಥತ್.. ಈ ರಾತ್ರಿಲೀ ಅಡ್ವಾನ್ಸ್ ಕೇಳೋಕೆ ಬರುವುದಾ.. ಹೋಗ್ ಹೋಗ್’’ ಎಂದು ಅಸಡ್ಡೆಯಿಂದ ಹೇಳಿ ಬಾಗಿಲು ಮುಚ್ಚಲು ಹೋದ. ಪಚ್ಚುವಿನ ಕಣ್ಣಲ್ಲಿ ಪುಳಕ್ಕನೆ ಕಣ್ಣ ಹನಿಯೊಂದು ಜಾರಿ ಬಿತ್ತು. ಧೈರ್ಯ ತಂದು ‘‘ಧನೀ.. ಸಣ್ಣವನು ಕಾಣ್ತಾ ಇಲ್ಲ... ಸಂಜೆ ಹೋದವನು ಮನೆಗೆ ಬಂದೇ ಇಲ್ಲ’’ ಎಂದ. ‘‘ಓ.. ಅದಕ್ಕೆ ನಾನೇನ್ಮಾಡ್ಬೇಕು. ಯಾರದೋ ಮನೆಗೋ- ಅಂಗಡಿಗೋ ಹೋಗಿರ್ಬೇಕು. ರಾತ್ರಿ ಹಸಿವಾದಾಗ ಮನೆಗೆ ಬಂದಾನು’’ ಎಂದು ಧಡ್ ಎಂದು ಬಾಗಿಲು ಮುಚ್ಚಿದ. ಪಚ್ಚುವಿನ ಜಂಘಾಬಲವೇ ಉಡುಗಿ ಹೋಯಿತು. ಕಣ್ಣೀರು ಹಾಕುತ್ತಾ, ಯಾಂತ್ರಿಕವಾಗಿ ಮೆಟ್ಟಿಲಿಳಿಯುತ್ತಾ ಮೂರನೇ ಫ್ಲೋರ್‌ಗೆ ಬಂದ. ಆಗಷ್ಟೇ ಕೆಲಸ ಮುಗಿಸಿ ಬರುತ್ತಿದ್ದವನೊಬ್ಬ ಎದುರ್ಗೊಂಡ.
ಅಳುತ್ತಲೇ ಪಚ್ಚು ಮಗ ಕಾಣೆಯಾಗಿದ್ದನ್ನು ಹೇಳಿಕೊಂಡ. ‘‘ಕಾಣೆಯಾದರೆ ಅಳುವುದು ಯಾಕೆ ಮಾರಾಯ. ಹೋಗಿ ಪೊಲೀಸ್‌ಗೆ ಕಂಪ್ಲೈಂಟ್ ಮಾಡು’’ ಎಂದು ಪುಕ್ಕಟೆ ಸಲಹೆ ಕೊಟ್ಟು ಅವನು ಹೊರಟು ಹೋದ. ಪಚ್ಚು ಮತ್ತೆ ಮನೆಗೆ ಬಂದ. ಅವನ ಹೆಂಡತಿ ಕೆಮ್ಮುತ್ತಾ, ಏದುಸಿರು ಬಿಡುತ್ತಾ ಅಳುತ್ತಿದ್ದಳು. ಮನೆಯಲ್ಲಿದ್ದ ಟಾರ್ಚೊಂದನ್ನು ತೆಗೆದುಕೊಂಡು ಪಚ್ಚು ಹೊರಗೆಲ್ಲಾ ಒಂದು ಸುತ್ತು ನಡೆದಾಡಿದ. ಎರಡು ಬಾರಿ ಜೋರಾಗಿ ಹೆಸರೆತ್ತಿ ಮಗನನ್ನು ಕರೆದ. ಯಾವ ಸ್ಪಂದನೆಯೂ ಬರಲಿಲ್ಲ. ಅಲ್ಲಿಂದ ಸೀದಾ ಮನೆಗೆ ಬಂದು ಚಾರ್ಜಿಗೆ ಹಾಕಿದ್ದ ತನ್ನ ಮೊಬೈಲನ್ನು ಕಿಸೆಗೆ ತುರುಕಿ ಹೊರಬಂದು ಗೇಟು ದಾಟಿ ನಡೆಯತೊಡಗಿದ. ದಾರಿ ದೀಪಗಳ ಬೆಳಕಿದ್ದುದರಿಂದ ಅದು ರಾತ್ರಿಯನ್ನು ತುಸು ಧೈರ್ಯವಾಗಿರಿಸಿತ್ತು. ಸರ್ವೀಸ್ ಬಸ್ಸಿನ ಅವಧಿ ಮುಗಿದಿತ್ತು. ರಾತ್ರಿಯಾದ್ದರಿಂದ ರಸ್ತೆಯಲ್ಲಿ ಅಷ್ಟೇನೂ ವಾಹನ ದಟ್ಟಣೆ ಇರಲಿಲ್ಲ. ಅವನು ನಡೆಯುತ್ತಾ ಅಂಗಡಿ ಬದಿ- ಬಸ್ ನಿಲ್ದಾಣಗಳಲ್ಲಿ ಮಗನನ್ನು ಹುಡುಕುತ್ತಲೇ ನಡೆದ. ಅವನಿಗೆ ಅದು ಸದಾ ಬಸ್ಸಿನಲ್ಲಿ ಹೋಗಿ ಬರುವ ದಾರಿಯಾದ್ದರಿಂದ ಕೊಂಚ ಧೈರ್ಯವಿತ್ತು. ನಡೆಯುತ್ತಾ, ಬರುತ್ತಿದ್ದವನೇ ಆ ಪೋಸ್ಟರನ್ನು ಮತ್ತೊಮ್ಮೆ ಗಮನಿಸಿದ.
‘‘ಪರ್ಶಿಯನ್ ಕ್ಯಾಟ್ ಕಾಣೆಯಾಗಿದೆ. ಹುಡುಕಿ ಕೊಟ್ಟವರಿಗೆ 20,000 ರೂಪಾಯಿ ಬಹುಮಾನ. ಸಂಪರ್ಕಿಸಿ 99..................’ ಮತ್ತೊಮ್ಮೆ ಓದಿದ. ಮೂರು ನಾಲ್ಕು ಬಾರಿಯಾದರೂ ಓದಿದ. ಅವನ ಕಣ್ಣಿನಲ್ಲಿ ಗಳಗಳನೆ ನೀರು ಹರಿಯಿತು. ಪರ್ಷಿಯನ್ ಕ್ಯಾಟ್ ಗಿದ್ದ ಬೆಲೆಯಾದರೂ ನಮಗಿದ್ದಿದ್ದರೆ; ಅವನು ಕಣ್ಣೀರು ಒರೆಸಿಕೊಂಡು ಮತ್ತೂ ನಡೆದ, ಪೊಲೀಸ್ ಸ್ಟೇಷನ್ ತಲುಪಿದ. ಆಗಷ್ಟೇ ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪೊಂದು ಗೇಟು ಪ್ರವೇಶಿಸುವುದರಲ್ಲಿತ್ತು. ಪಚ್ಚು ಓಡಿ ಹೋಗಿ ಆ ಜೀಪಿನ ಮುಂದೆ ನಿಂತ. ಅವನನ್ನು ಕಂಡೊಡನೆ ಜೀಪೂ ನಿಂತಿತು.
ಪಚ್ಚು ಜೀಪು ನಿಂತದ್ದೆ ಭಯದಿಂದ ಸ್ವಲ್ಪ ದೂರದಲ್ಲೇ ನಿಂತ. ಯಾರೋ ಅದು ಜೀಪಿನಿಂದ ಶಬ್ದವೊಂದು ಕೇಳಿತು. ಪಚ್ಚು ಹೆದರಿಕೆಯಿಂದ ಮುಂದಡಿಯಿಡದೆ ಸುಮ್ಮನೆ ನಿಂತ ‘‘ಬೋಳಿ ಮಗನೇ.. ಯಾರೋ ನೀನು.. ಬಾರೋ ಇಲ್ಲಿ’’ ಎಂದು ಅಧಿಕಾರಿಯೊಬ್ಬ ಜೀಪಿನಿಂದ ಕರೆದ. ಮೆಲ್ಲಮೆಲ್ಲನೆ ಹೆಜ್ಜೆ ಹಾಕುತ್ತಾ ಹತ್ತಿರ ಬಂದು ಪಚ್ಚು ಕೈ ಮುಗಿದು ಗಳಗಳನೆ ಅಳುತ್ತಾ, ‘‘ಸರ್ ನನ್ನ ಮಗ ಸಂಜೆಯಿಂದ ಕಾಣೆಯಾಗಿದ್ದಾನೆ. ದಯವಿಟ್ಟು ಹುಡುಕಿ ಕೊಡಿ ಸರ್’’ ಎಂದು ಗೋಗರೆದ. ‘‘ಫೋಟೊ-ಗೀಟೊ ಏನಾದ್ರೂ ಇದ್ಯಾ?’’ ಎಂದು ಅಧಿಕಾರಿ ಕೇಳಿದ. ‘‘ಮನೆಯಲ್ಲಿದೆ ಸರ್...’’ ಎಂದು ಪಚ್ಚು ಮುಗ್ಧವಾಗಿ ಉತ್ತರಿಸಿದ.
‘‘ಫೋಟೊ ಇಲ್ದೆ ಹುಡುಕುವುದು ಹೇಗೆ? ಸರಿ ಒಂದು ಕಂಪ್ಲೈಂಟ್ ಬರೆದುಕೊಟ್ಟು ಹೋಗು.. ಫೋಟೊ ತಂದ ಮೇಲೆ ಯಾರೂಂತ ಹುಡುಕ್ಬಹುದು. ಇಲ್ಲಾಂದ್ರೆ ಈ ಸಿಟಿನಲ್ಲಿ ಯಾರನ್ನು ಅಂತ ಹುಡುಕುವುದು’’ ಎಂದು ಹೇಳಿ ಜೀಪು ಗೇಟು ದಾಟಿ ಸ್ಟೇಷನ್ ನೊಳಗೆ ಹೋಯಿತು. ಮಡಚಿದ್ದ ಅಂಗಿಯ ಕೈಗಳನ್ನು ನೀಳವಾಗಿ ಬಿಟ್ಟು ಕೆದರಿದ ಕೂದಲನ್ನು ಕೈನಲ್ಲೇ ಬಾಚಿ ಪಚ್ಚು ಸ್ಟೇಷನ್ ಬಳಿ ನಡುಗುತ್ತಲೇ ಬಂದ. ಅವನ ಕೈಕಾಲುಗಳು ನಡುಗುತ್ತಿದ್ದವು. ಅಲ್ಲೇ ಕುಳಿತಿದ್ದ ದಢೂತಿ ದೇಹದ ದಪ್ಪ ಮೀಸೆಯ ಆಸಾಮಿಗೆ ನಮಸ್ಕಾರವೆಂದು ಕೈ ಮುಗಿದ. ಪ್ರತಿಯಾಗಿ ಏನು ಎಂದು ಕಣ್ಣಿನಲ್ಲಿಯೇ ಪ್ರಶ್ನಿಸಿದ.
‘‘ಸಾರ್... ಮಗ ಕಾಣೆಯಾಗಿದ್ದಾನೆ.. ಒಂದು ಕಂಪ್ಲೈಂಟು ಕೊಡಬೇಕೆಂದು ದೊಡ್ಡ ಸಾಹೇಬರು ಹೇಳಿದರು’’ ಎಂದು ಕೈ ಮುಗಿದ. ಅವನು ಕುಳಿತು ಕೊಳ್ಳಲು ಹೇಳಿ, ಮಗನ ಹೆಸರು, ಗುರುತನ್ನು ಬರೆದಿಟ್ಟ. ‘‘ಫೋಟೊ ಇದೆಯಾ?’’ ಎಂದು ಕೇಳಿದ್ದಕ್ಕೆ ‘‘ಇಲ್ಲ ಸರ್’’ ಅಂದ. ‘‘ಫೋಟೊ ಇಲ್ಲದೆ ಹೇಗಯ್ಯೆ ಹುಡುಕುವುದು? ಹುಂ.. ಸೈನ್ ಹಾಕು ಇಲ್ಲಿ’’ ಅಂದ. ಪಚ್ಚು ಪೆನ್ನು ಪಡೆದುಕೊಂಡು ಅಚ್ಚಗನ್ನಡದಲ್ಲೇ ಸಹಿ ಹಾಕಿದ. ಕಂಪ್ಲೈಂಟು ಬರೆದದ್ದಕ್ಕೆ ನೂರು ರೂಪಾಯಿ ಆಗುತ್ತೆ ಎಂದು ಕಾನ್‌ಸ್ಟೇಬಲ್ ಗೊಣಗಿದ. ಪಚ್ಚು ಕಿಸೆ ತಡಕಾಡಿ ‘‘ಹಣ ಇಲ್ಲ’’ವೆಂದು ಖಾಲಿ ನೋಟವೊಂದು ಹರಿಸಿದ.
‘‘ಕಂಪ್ಲೈಂಟು ಬರೆಸಲು ಹಣವಿಲ್ಲದವರು ಬರ್ತಾರೆ, ಗತಿಕೆಟ್ಟವರು. ಏನು ದೊಡ್ಡ ವಿಐಪಿ ಮಕ್ಕಳು, ಇವರುಗಳ ಮಕ್ಕಳನ್ನು ಹುಡುಕಿ ಕೊಡಲಿಕ್ಕೆ. ಹೋಗಿ, ನಾಳೆ ಬರುವಾಗ ಫೋಟೊ ತಗೊಂಡು ಬನ್ರೀ’’ ಎಂದು ದಬಾಯಿಸಿದ. ಪಚ್ಚು ಇವರಾಗಿಯೇ ಫೋಟೊ ತಂದು, ಮಗನನ್ನು ಹುಡುಕಿಸಿಕೊಡುವುದು ದೂರದ ಮಾತು ಎಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಮನೆಯ ಕಡೆಗೆ ನಿರಾಶೆಯಿಂದಲೇ ಹೆಜ್ಜೆ ಹಾಕಿದ.
ಸುಮಾರು ಮುಕ್ಕಾಲು ಗಂಟೆಯ ತರುವಾಯ ಪಚ್ಚು ನಡೆದು ಮನೆ ತಲುಪಿದ್ದ. ಕಾಲುಗಳು ವಿಪರೀತ ನೋಯುತ್ತಿದ್ದವು. ಅವನ ಹೆಂಡತಿ ಅತ್ತೂ ಅತ್ತೂ ಏದುಸಿರು ಬಿಡುತ್ತಿದ್ದಳು. ದೊಡ್ಡ ಮಗ ಖಿನ್ನನಾಗಿ ಕುಳಿತಿದ್ದ. ಅಲ್ಲೇ ಸುಮ್ಮನೆ ಕುಳಿತಿದ್ದ ಬೆಕ್ಕು ಪಚ್ಚುವನ್ನು ಕಂಡೊಡನೆ ಹೊರೆಗೆಲ್ಲೋ ಮರೆಗೋಡಿತು. ಅದೇ ಬೆಕ್ಕಿನ ಹಿಂದೆ ಓಡಿದ ಹುಡುಗ ಕಾಣೆಯಾದದ್ದು ನೆನೆದು ಪಚ್ಚುವಿನ ಕಣ್ಣುಗಳಲ್ಲಿ ನೀರಾಡಿತು. ಯಾಂತ್ರಿಕವಾಗಿ ಟಾರ್ಚ್ ಎತ್ತಿಕೊಂಡು, ಮಗ ಸಂಜೆ ಓಡಿದ ದಿಕ್ಕಿನೆಡೆಗೆ ನಡೆದ. ಒಂದು ಸಿಮೆಂಟು ದಿಡ್ಡು ಕಳೆದು ಎತ್ತರದ ಮಣ್ಣಿನ ರಾಶಿ ಏರಿ ಎಡಗಡೆಯ ಓಣಿ ಮತ್ತು ಸಣ್ಣ ಕಾಲು ದಾರಿ ಇತ್ತು. ಮೆಲ್ಲಗೆ ನಡೆಯುತ್ತಾ ಮುಂದೆ ಬಂದ. ಆ ದೃಶ್ಯ ನೋಡಿದವನ ಕಾಲುಗಳು ನಡುಗಿದವು.
ಎಡಕ್ಕೆ ಒಂದು ಭೀಕರ ಕೊಳವೆ ಬಾವಿ ಬಾಯಿ ತೆರೆದು ಗಹಗಹಿಸಿ ನಗುತ್ತಿತ್ತು. ಮತ್ತಷ್ಟು ಹತ್ತಿರ ಬಂದು ಕೊಳವೆ ಬಾವಿಯೊಳಗೆ ಇಣುಕಿದ. ಗವ್ವಂಬ ಕತ್ತಲ ಕೂಪ ವಿಕಾರವಾಗಿ ಕಾಣುತ್ತಿತ್ತು. ಸುತ್ತಲೂ ಟಾರ್ಚ್ ಲೈಟು ಹರಿಸಿದ. ಅಷ್ಟರಲ್ಲೇ ಮಗನ ಒಂಟಿ ಚಪ್ಪಲಿ ಕಣ್ಣಿಗೆ ಬಿತ್ತು. ಅವನ ಎದೆ ಹೊಡೆದುಕೊಳ್ಳಲಾರಂಭಿಸಿತು. ಒಂಟಿ ಚಪ್ಪಲಿ ಕೊಳವೆ ಬಾವಿಯ ಸಾಕಷ್ಟು ಹತ್ತಿರದಲ್ಲೇ ಇತ್ತು. ಕೊಳವೆ ಬಾವಿಗೊಮ್ಮೆ ಕಿವಿಯಾನಿಸಿದ. ಗವ್ವೆಂಬ ಶಬ್ದವೇ ಹೊರತು ಇನ್ನೇನೂ ಕೇಳಿಸಲಿಲ್ಲ. ಅವನಿಗೆ ಪರಿಸ್ಥಿತಿಯು ಕೈ ಮೀರಿದ್ದು ನಿಧಾನಕ್ಕೆ ಅರ್ಥವಾಯಿತು. ಜೋರಾಗಿ ಅಳಬೇಕೆನಿಸಿತು. ಸುಮ್ಮನೆ ಸ್ವಲ್ಪ ಹೊತ್ತು ಕುಸಿದು ಕುಳಿತ. ಮತ್ತೆ ಸುಧಾರಿಸಿಕೊಂಡವನಂತೆ ಎದ್ದು ನಿಂತವನೇ, ಸ್ವಲ್ಪ ಹೊತ್ತು ನೆನಪು ಮಾಡಿಕೊಂಡು ಕಿಸೆಯಿಂದ ಮೊಬೈಲ್ ತೆಗೆದು ಆ ನಂಬರನ್ನು ಡಯಲ್ ಮಾಡಿದ.
99................... ಒಂದು ಬಾರಿ ಪೂರ್ಣ ರಿಂಗಾದರೂ ಯಾರೂ ಎತ್ತಿಕೊಳ್ಳಲಿಲ್ಲ. ಎರಡನೇ ಬಾರಿಯೂ ನೀರಸ ಪ್ರತಿಕ್ರಿಯೆ. ಮೂರನೇ ಬಾರಿಗೆ ಯಾರೋ ಫೋನ್ ಎತ್ತಿಕೊಂಡರು. ‘‘ಹಲೋ...’’ ಅಂದಿದ್ದೇ ತಡ, ಪಚ್ಚು ಒಂದೇ ಮಾತಿನಲ್ಲಿ ‘‘ಸರ್... ನಿಮ್ಮ ಪರ್ಶಿಯನ್ ಕ್ಯಾಟ್ ಗ್ರೀನ್ ಹಿಲ್ ಫ್ಲ್ಯಾಟ್‌ನ ಕೊಳವೆ ಬಾವಿಯೊಂದರಲ್ಲಿ ಬಿದ್ದಿದೆ. ದಯವಿಟ್ಟು ಬನ್ನಿ’’ ಎಂದ. ಆ ಕಡೆಯಿಂದ ಅವನು ಅಡ್ರೆಸ್- ಮತ್ತು ದಾರಿ ಕೇಳಿ ಪಡೆದು ಫೋನ್ ತುಂಡರಿಸಿದ. ಪಚ್ಚು ಇನ್ನೇನು ಕ್ಷಣಾರ್ಧದಲ್ಲಿ ಬಂದು ಸೇರಲಿರುವ ಜನಸ್ತೋಮ- ಪೊಲೀಸ್- ಅಗ್ನಿ ಶಾಮಕ ದಳವನ್ನು ನಿರೀಕ್ಷಿಸುತ್ತಾ ಆಕಾಶ ನೋಡಿ, ತನ್ನ ಮಗ ಜೀವಂತವಾಗಿಯೇ ಬದುಕಿ ಬರಲಿ ಎಂದು ಮಣ್ಣಿನ ದಿಣ್ಣೆಯಲ್ಲಿ ಕುಳಿತು ಪ್ರಾರ್ಥಿಸತೊಡಗಿದ.
ಪರ್ಶಿಯನ್ ಕ್ಯಾಟ್ ಆಹಾರ ಪಡೆದುಕೊಂಡು ಸೂಪರ್ ಮಾರ್ಕೆಟಿನಿಂದ ಹೊರಬಂದ ಪಚ್ಚು ಇನ್ನೊಂದು ಕಡ್ಡಿಗೀರಿ ಬೀಡಿಯನ್ನು ಸುಟ್ಟ. ಅದು ಕರಗಿ ಹೊಗೆಯಾಗಿ ಆಕಾಶಕ್ಕೇರುತ್ತಿದ್ದಂತೆ ಅವನ ನಡಿಗೆ ಸಿಎ ವಿಲ್ಲಾದ ಕಡೆಗಿತ್ತು. ಸುಮ್ಮನೆ ಏನೋ ಕುತೂಹಲ ಹುಟ್ಟಿ ಅವನ ಆಹಾರ ಪೊಟ್ಟಣದ ಬೆಲೆಗೊಮ್ಮೆ ಕಣ್ಣಿಟ್ಟ. ಎಂಆರ್‌ಪಿ ಎಂದು ಬರೆದಿದ್ದರ ಸ್ವಲ್ಪವೇ ಆಚೆಗೆ ಐನೂರು ರೂಪಾಯಿ ನಮೂದಿಸಿದಂತೆ ಕಂಡಿತು, ಏನೋ ಮಬ್ಬಾದಂತನಿಸಿ ಇನ್ನೊಮ್ಮೆ ಸೂಕ್ಷ್ಮವಾಗಿ ನೋಡಿದ. ಬರೋಬ್ಬರಿ ಐದು ಸಾವಿರದ ಐನೂರು ರೂಪಾಯಿ!
ಯಾಂತ್ರಿಕವಾಗಿ ಟಾರ್ಚ್ ಎತ್ತಿಕೊಂಡು, ಮಗ ಸಂಜೆ ಓಡಿದ ದಿಕ್ಕಿನೆಡೆಗೆ ನಡೆದ. ಒಂದು ಸಿಮೆಂಟು ದಿಡ್ಡು ಕಳೆದು ಎತ್ತರದ ಮಣ್ಣಿನ ರಾಶಿ ಏರಿ ಎಡಗಡೆಯ ಓಣಿ ಮತ್ತು ಸಣ್ಣ ಕಾಲು ದಾರಿ ಇತ್ತು. ಮೆಲ್ಲಗೆ ನಡೆಯುತ್ತಾ ಮುಂದೆ ಬಂದ. ಆ ದೃಶ್ಯ ನೋಡಿದವನ ಕಾಲುಗಳು ನಡುಗಿದವು.ಎಡಕ್ಕೆ ಒಂದು ಭೀಕರ ಕೊಳವೆ ಬಾವಿ ಬಾಯಿ ತೆರೆದು ಗಹಗಹಿಸಿ ನಗುತ್ತಿತ್ತು. ಮತ್ತಷ್ಟು ಹತ್ತಿರ ಬಂದು ಕೊಳವೆ ಬಾವಿಯೊಳಗೆ ಇಣುಕಿದ. ಗವ್ವಂಬ ಕತ್ತಲ ಕೂಪ ವಿಕಾರವಾಗಿ ಕಾಣುತ್ತಿತ್ತು. ಸುತ್ತಲೂ ಟಾರ್ಚ್ ಲೈಟು ಹರಿಸಿದ. ಅಷ್ಟರಲ್ಲೇ ಮಗನ ಒಂಟಿ ಚಪ್ಪಲಿ ಕಣ್ಣಿಗೆ ಬಿತ್ತು. ಅವನ ಎದೆ ಹೊಡೆದುಕೊಳ್ಳಲಾರಂಭಿಸಿತು. ಒಂಟಿ ಚಪ್ಪಲಿ ಕೊಳವೆ ಬಾವಿಯ ಸಾಕಷ್ಟು ಹತ್ತಿರದಲ್ಲೇ ಇತ್ತು. ಕೊಳವೆ ಬಾವಿಗೊಮ್ಮೆ ಕಿವಿಯಾನಿಸಿದ. ಗವ್ವೆಂಬ ಶಬ್ದವೇ ಹೊರತು ಇನ್ನೇನೂ ಕೇಳಿಸಲಿಲ್ಲ. ಅವನಿಗೆ ಪರಿಸ್ಥಿತಿಯು ಕೈ ಮೀರಿದ್ದು ನಿಧಾನಕ್ಕೆ ಅರ್ಥವಾಯಿತು. ಜೋರಾಗಿ ಅಳಬೇಕೆನಿಸಿತು. ಸುಮ್ಮನೆ ಸ್ವಲ್ಪ ಹೊತ್ತು ಕುಸಿದು ಕುಳಿತ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.