-

ವ್ಲಾಗಿಂಗ್ ಎಂಬ ಅಂಗೈ ಆಕಾಶ

-

ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಗಿರೀಶ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್, ತಾಯಿ ಸುಲೋಚನಾ. ದೀಪಾ ಹುಟ್ಟಿದ್ದು ಹಳ್ಳಿಯಲ್ಲಾದರೂ ಓದಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಪತ್ರಿಕೋದ್ಯಮ ಅಧ್ಯಯನ ಮಾಡಿರುವ ದೀಪಾ ಎಂ.ಎ.ಪದವೀಧರರು. ಓದಿದ್ದು ಪತ್ರಿಕೋದ್ಯಮವಾದರೂ ರಂಗಭೂಮಿ, ಸಾಹಿತ್ಯದೆಡೆಗೆ ಸದಾ ತುಡಿತ ಉಳ್ಳವರು. ಹಲವು ಸಂಘಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳೊಂದಿಗೆ ಕೆಲಸ ಮಾಡಿರುವ ದೀಪಾ ಗಿರೀಶ್ ಸದ್ಯ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಇವರ ಪ್ರಕಟಿತ ಕೃತಿ-ಅಸ್ಮಿತೆ. ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕವೂ ಅವರು ನಾಡಿನ ಸಾಹಿತ್ಯಾಸಕ್ತರನ್ನು ತಲುಪಿದ್ದಾರೆ. ಜಾಲತಾಣಗಳಲ್ಲೂ ಇವರು ತಮ್ಮ ಬರಹಗಳ ಮೂಲಕ ಜನಪ್ರಿಯರಾಗಿದ್ದಾರೆ.

ದೀಪದಮಲ್ಲಿ

ಈಗ ಜಗತ್ತು ಎಂದಿಗಿಂತ ವೇಗವಾಗಿದೆ. ಈಗಿನ ಕಾಲವನ್ನು ಕೊರೋನ ಪೂರ್ವ ಮತ್ತು ಕೊರೋನೋತ್ತರ ಎಂದು ಕರೆಯಲಾಗುತ್ತಿದೆ. ಕೊರೋನ ಮಹಾಮಾರಿಯು ಲಕ್ಷಾಂತರ ಜೀವಗಳನ್ನು ಬಲಿಪಡೆದ ಕರುಣಾಜನಕ ವ್ಯಥೆ ಒಂದು ಕಡೆಯಾದರೆ, ಈ ಕಾಲ ಸಮಾಜದಲ್ಲಿ ಆದ ಕ್ರಾಂತಿಯದು ಮತ್ತೊಂದು ಕತೆ! ಹೌದು. ಇದು ಯೂಟ್ಯೂಬ್ ಜಮಾನ. 2005ರ ಫೆಬ್ರವರಿಯಲ್ಲಿ ಪ್ರಾರಂಭವಾದ ಯೂಟ್ಯೂಬ್, 2006ರ ನವೆಂಬರ್‌ನಲ್ಲಿ ಗೂಗಲ್ ಕುಟುಂಬದ ತೆಕ್ಕೆಗೆ ಬಿತ್ತು. ಈಗ ಯೂಟ್ಯೂಬ್ ಜಗತ್ತಿನ ಎರಡನೇ ಅತಿದೊಡ್ಡ ಸರ್ಚ್ ಇಂಜಿನ್. 2022ರ ಹೊತ್ತಿಗೆ ಭಾರತ ವೊಂದರಲ್ಲೇ 467 ಮಿಲಿಯನ್ ಬಳಕೆದಾರರು ಹುಟ್ಟಿಕೊಂಡಿದ್ದಾರೆ. ಶೇ.70ರಷ್ಟು ಬಳಕೆದಾದರು ಮೊಬೈಲ್ ಮೂಲಕವೇ ವೀಡಿಯೊಗಳನ್ನು ವೀಕ್ಷಿಸಲು ಬಯಸುತ್ತಾರೆ. 2020 ರಲ್ಲಿ ಭಾರತೀಯ ಆರ್ಥಿಕತೆಗೆ ಯೂಟ್ಯೂಬರ್ಸ್‌ಗಳ ಕೊಡುಗೆ 6,800 ಕೋಟಿ ರೂ.

ವ್ಯಾಪಾರಿ ಲೆಕ್ಕಾಚಾರಗಳೇನೇ ಇರಲಿ, ಮೊಬೈಲ್ ಕಂಪೆನಿಗಳು ಡಾಟಾ ಪ್ಯಾಕುಗಳ ಮೇಲೆ ತರಹಾವಾರಿ ಆಫರ್‌ಗಳನ್ನು ಕೊಟ್ಟ ಮೇಲಂತೂ ಜನಸಾಮಾನ್ಯರೆಲ್ಲರ ಕೈಗೂ ಇಂಟರ್ನೆಟ್ ಸುಲಭ ದಕ್ಕಿದೆ. ಈಗ ದೂರದ ರಶ್ಯ, ಉಕ್ರೇನ್, ಚಿಲಿ, ಬ್ರೆಝಿಲ್, ಅಮೆರಿಕ ಗಳೆಲ್ಲಾ ನೆರೆಕೆರೆಯ ವಠಾರಗಳಂತೆ! ಇಷ್ಟೆಲ್ಲಾ ಸರಿ. ಹೀಗೆ ಸುಲಭಕ್ಕೆ ದಕ್ಕಿಬಿಟ್ಟ ಈ ಅಂಗೈನ ಆಕಾಶ ಮಹಿಳೆಯರ ಬದುಕುಗಳಲ್ಲಿ, ಆಶಯಗಳಲ್ಲಿ, ದೃಷ್ಟಿಕೋನಗಳಲ್ಲಿ ಏನಾದರೂ ಬದಲಾವಣೆ ತಂದಿದೆಯೇ? ಉತ್ತರ ಕೇಳಿದರೆ, ಕೊಂಚಮಟ್ಟಿಗಾದರೂ ಹೌದು! ಭಾರತದ ಮಟ್ಟಿಗೆ ಮಾತಾಡುವುದಾದರೆ, ಐದಾರು ದಶಕದಿಂದೀಚೆಗೆ ನಮ್ಮ ಸಮಾಜ ಮಹಿಳೆಯರು ಡಾಕ್ಟರ್, ಇಂಜಿನಿಯರ್, ಲಾಯರ್, ಟೀಚರ್ ಮುಂತಾದ ಕೆಲವು ಘನತೆವೆತ್ತ ಸೋ ಕಾಲ್ಡ್ ಸಭ್ಯ ಉದ್ಯೋಗಗಳನ್ನು ಆಯ್ದುಕೊಳ್ಳುವುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಿವೆ.

ಇವುಗಳನ್ನು ಹೊರತಾಗಿಸಿ ಸಂಗೀತ, ನೃತ್ಯ, ಚಿತ್ರಕಲೆ, ಯೋಗ ಇವೆಲ್ಲಾ ಇಷ್ಟವಿದ್ದವರಿಗೆ ಶ್ರೇಷ್ಠವಾಗೂ, ಕಷ್ಟವಾದವರಿಗೆ ಕನಿಷ್ಠವಾಗೂ ಹಾಗೂ ಹೀಗೂ ಸೀಮಿತ ವಲಯಗಳಲ್ಲಿ ತಕ್ಕಮಟ್ಟಿಗಿನ ಸ್ಥಾನಮಾನ ಪಡೆದಿವೆ. ಇನ್ನಿತರ ಕೆಲವು ಹವ್ಯಾಸಗಳಾದ ಅಡುಗೆ, ಕಸೂತಿ, ಫ್ಯಾಷನ್, ಮೇಕಪ್ ಇವೆಲ್ಲಾ ಮನೆಮಂದಿ, ಬಳಗವನ್ನು ಮೆಚ್ಚಿಸಲು ಮಾತ್ರ ಸೀಮಿತವಾಗಿತ್ತು. ಅದಕ್ಕೆಂದೇ ಚಾನೆಲ್‌ಗಳ ಮುಂದೆ ಪೆನ್ನು ಪೇಪರ್ ಹಿಡಿದು ಮಧ್ಯಾಹ್ನದ ಹೊತ್ತಿಗೆ ಬರುತ್ತಿದ್ದ ‘ಕೇಳೇ ಸಖಿ’, ‘ಅಂಗೈಲಿ ಅರಮನೆ’ ಮುಂತಾದ ಮಹಿಳಾ ವಿಶೇಷ ಕಾರ್ಯಕ್ರಮಗಳನ್ನು ನೋಡಿಕೊಂಡು ಅದನ್ನು ಮನೆಯಲ್ಲಿ ಪ್ರಯೋಗಿಸುತ್ತಿದ್ದ ಹೆಂಗಸರು, ಅಂಥಾ ಕಾರ್ಯಕ್ರಮಗಳಲ್ಲಿ ತಾವು ಕಾಣಿಸಿಕೊಳ್ಳಲು ಮನವಿ ಪತ್ರ ಬರೆದು, ಫೋಟೊ ಹೊಡೆಸಿ ಕಳಿಸಿ ಉತ್ತರಕ್ಕೆ ಕಾಯುತ್ತಿದ್ದ ದಿನಗಳವು.

ಈಗ ಕಾಲ ಬದಲಾಗಿದೆ. ಕೊರೋನ ನಂತರದಲ್ಲಿ ಮನೆಮನೆಯಲ್ಲಿ ಯೂಟ್ಯೂಬರ್ಸ್ ಹುಟ್ಟಿಕೊಂಡಿದ್ದಾರೆ. ಮನೆಯೊಳಗಿದ್ದುಕೊಂಡು ತಮ್ಮ ಸಾಧಾರಣ ಮೊಬೈಲುಗಳನ್ನು ಬಳಸಿ ತರತರ ರೆಸಿಪಿಗಳು, ಬ್ಯೂಟಿ ಟಿಪ್‌ಗಳನ್ನು, ಕಿಚನ್ ಹ್ಯಾಕ್ ಗಳ ವೀಡಿಯೊಗಳನ್ನು ಅಪ್ಲೋಡ್ ಮಾಡಿ ತಮ್ಮದೇ ಸ್ವತಂತ್ರ ಚಾನೆಲ್‌ಗಳನ್ನು ನಡೆಸುತ್ತಿದ್ದಾರೆ. ಹಾಯ್, ಹಲೋ, ನಮಸ್ಕಾರ! ಅಂತಲೋ ‘ಹಲೋ ಫ್ರೆಂಡ್ಸ್’ ಅಂತಲೋ ತಮ್ಮದೇ ಸಿಗ್ನೇಚರ್ ಸ್ಟೈಲ್ ಹುಡುಕಿಕೊಂಡಿದ್ದಾರೆ. ತಿಂಗಳುಗಳು ಉರುಳುವುದರಲ್ಲಿ ಯೂಟ್ಯೂಬ್ ಮಾನಟೈಸೇಷನ್ ಮಾನದಂಡಗಳನ್ನು ಮುಟ್ಟಿ ಹಣ ಗಳಿಸಲು ಶುರುವಿಟ್ಟಿದ್ದಾರೆ.

ಮೊದಮೊದಲು ಹುಚ್ಚಾಟವೆಂದು ಮೂಗುಮುರಿಯುತ್ತಿದ್ದ ಮನೆಯ ಸಭ್ಯ ಸದಸ್ಯರುಗಳು ಈಗ ತಾವೂ ಜೊತೆಯಲ್ಲಿ ಕುಳಿತು ತರಕಾರಿ ಹೆಚ್ಚುತ್ತಲೋ, ಕನ್ನಡಿ ಹಿಡಿಯುತ್ತಲೋ, ವೀಡಿಯೊ ರೆಕಾರ್ಡ್ ಮಾಡುತ್ತಲೋ, ಆದಾಯಗಳಿಕೆಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟಾದರೂ?.

ಹೌದು, ಇಷ್ಟಾದರೂ ಆಕಾಶವೇ ಗಡಿ ಎನ್ನುವಷ್ಟು ಅವಕಾಶ ಅಂಗೈಲೇ ಇದ್ದರೂ ಮಹಿಳೆಯರು ಅವವೇ ಸಿದ್ಧಮಾದರಿಯ ಚೌಕಟ್ಟುಗಳೊಳಗೇ ಹೊಸತನವನ್ನು ಹುಡುಕುತ್ತಿದ್ದಾರೆ. ಸೀಮಿತ ಸಂಖ್ಯೆಯ ಮಹಿಳೆಯರು ಮಾತ್ರ ಅಗೋಚರ ಗಾಜಿನ ಪರದೆ ಯನ್ನು ಒಡೆದು ಆಚೆಗೆ ಜಿಗಿದಿದ್ದಾರೆ. ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರೇ ಮಾಡಿಕೊಂಡ ಅನೇಕ ವ್ಲಾಗ್ ಗಳು ಜನರ ಗಮನ ಸೆಳೆದಿವೆ. ಇವರು ಯಾರೋ ಕಟ್ಟಿಕೊಟ್ಟ ಪಾತ್ರಗಳಿಗೆ ಕಟ್ಟುಬೀಳದೆ ತಮ್ಮ ಆಸಕ್ತಿಗಳ ಜೊತೆಗೂ ರಾಜಿ ಮಾಡಿಕೊಳ್ಳದೆ ತಮ್ಮ ‘ಸಾಮರ್ಥ್ಯ’ ಮತ್ತು ‘ಮಿತಿ’ ಎರಡನ್ನೂ ಸಾಮರ್ಥ್ಯವೆಂದೇ ಕಂಡವರು!

ಭಾರತದ ಮಹಿಳಾ ಯೂಟ್ಯೂಬರ್‌ಗಳಲ್ಲಿ ಪ್ರಮುಖ ಹೆಸರುಗಳೆಂದರೆ ಪ್ರಜಾಕ್ತಾ ಕೋಲಿ, ಅನಿಶಾ ದೀಕ್ಷಿತ್, ನತಾಶಾ ನೋಯಲ್, ವಿದ್ಯಾ ಅಯ್ಯರ್ (ವಿದ್ಯಾ ವಾಕ್ಸ್) ಮುಂತಾದವರು. ಇವರಿಗೆಲ್ಲಾ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬುಗಳಲ್ಲಿ ಮಿಲಿಯನ್ನು ಗಟ್ಟಲೆ ಫಾಲೋವರ್ಸ್, ಸಬ್‌ಸ್ಕ್ರೈಬರ್ಸ್ ಇದ್ದಾರೆ. ಇವರುಗಳೂ ಬಹುತೇಕ ಬ್ಯೂಟಿ, ಲೈಫ್ ಸ್ಟೈಲ್, ಫಿಟ್‌ನೆಸ್, ಮ್ಯೂಸಿಕ್ ಅಥವಾ ಡಾನ್ಸ್ ಪ್ರಿಯರು ಮತ್ತು ಅವನ್ನೇ ಬಿತ್ತರಿಸುವವರು. ಮೊನಚಾದ ವ್ಯಂಗ್ಯಗಳನ್ನು ಹಾಸ್ಯಲೇಪಿಸಿ ಬಡಿಸುವುದರಲ್ಲಿ ನಿಹಾರಿಕಾ ಎನ್.ಎಂ., ಲಿಲ್ಲಿ ಸಿಂಗ್ ಮುಂತಾದವರು ವಿಶೇಷವಾಗಿ ಕಾಣಸಿಗುತ್ತಾರೆ. ಇವರೆಲ್ಲಾ ಅದಾಗಲೇ ಸಾರ್ವಜನಿಕವಾಗಿ ತಮ್ಮದೇ ಛಾಪು ಮೂಡಿಸಿ ಐಕಾನಿಕ್ ಆದವರು. ಟ್ರಾವೆಲ್ ವ್ಲಾಗ್ ಮೂಲಕ ಊರೂರು ಸುತ್ತಿ ಜಾಗಗಳನ್ನು ಪರಿಚಯಿಸುವ ಅರ್ಚನಾ ಸಿಂಗ್, ಅನ್ನಾ, ಅನುರಾಧಾ ಗೋಯಲ್, ಜೋತ್ಸ್ನಾರಮಣಿ ಮುಂತಾದವರು ಪ್ರವಾಸಿ ಪ್ರಿಯರಿಗೆ ಇಷ್ಟವಾಗುತ್ತಾರೆ.

ಇವರ ನಡುವೆ ನಮ್ಮ ಕನ್ನಡದ ಶಾಲಿನಿ, ಅನುಪಮ, ಶ್ವೇತಾ ಚಂಗಪ್ಪ, ಅನುಶ್ರೀ, ರಚನಾ, ಸೌಜನ್ಯಾ, ಅಯ್ಯೋ ಶ್ರದ್ಧಾ, ರೇಖಾ ಅಡುಗೆ, ಅಂಬಿಕಾ ಶೆಟ್ಟಿ ಕಿಚನ್ ಇತ್ಯಾದಿ ವ್ಲಾಗ್‌ಗಳನ್ನು ಜನ ಕಾದಿದ್ದು ನೋಡುತ್ತಾರೆ. ಆದರೂ ಹೊರಗಿನ ಪರಿಸರಕ್ಕೆ ಜಿಗಿದು, ಜನಸಂದಣಿಯ ನಡುವೆ ಓಡಾಡಿ ವ್ಲಾಗಿಂಗ್ ಮಾಡುವವರ ಸಂಖ್ಯೆ ತೀರಾತಿವಿರಳ ಅನ್ನಬಹುದು. ಕೆಲವರು ಅಂತಹ ಪ್ರಯತ್ನ ಮಾಡಿದ್ದಾರಾದರೂ ರೆಸ್ಟೋರೆಂಟ್, ರೆಸಾರ್ಟ್ ಅಥವಾ ಇನ್ಯಾವುದೋ ಪ್ರಾಡಕ್ಟ್ ಪ್ರಮೋಷನ್‌ಗಳಲ್ಲಿ ಕಳೆದುಹೋಗುತ್ತಾರೆ. ಹಾಗಿದ್ದರೆ ಹೆಣ್ಣುಮಕ್ಕಳು ಹೊಸತರದ ಪ್ರಯತ್ನ ಮಾಡದಿರುವ ಕಾರಣಗಳೇನು?

ಮೊನ್ನೆ ಇನ್ಸ್ಟಾಗ್ರಾಂನಲ್ಲಿ ಕನ್ನಡದ ನಟಿ ನಿವೇದಿತಾ ಗೌಡ ಬರೆದುಕೊಂಡಿದ್ದ ಒಂದು ಫೋಸ್ಟ್ ಈಗಲೂ ಹೆಣ್ಣುಮಕ್ಕಳಿಗೆ ಹೊಸತನ್ನು ಎಕ್ಸ್‌ಪ್ಲೋರ್ ಮಾಡುವಲ್ಲಿ ಉಸಿರುಗಟ್ಟಿಸುವ ವಾತಾವರಣ ಇರುವುದಕ್ಕೆ ಒಂದು ತಾಜಾ ಸಾಕ್ಷಿ. ಆಕೆಯ ಸೋಲೋ ಟ್ರಿಪ್‌ನ ಫೋಟೊಗಳನ್ನು ಹಂಚಿಕೊಂಡಿದ್ದಕ್ಕೆ ಅನೇಕರು ‘ಗಂಡನ ದುಡ್ಡಲ್ಲಿ ಶೋಕಿ’, ‘ಸೋಲೋ ಟ್ರಿಪ್’ನಲ್ಲಿ ಫೋಟೊ ತೆಗೆದದ್ದು ಯಾರು? ಇತ್ಯಾದಿಯಾಗಿ ಕಮೆಂಟ್ ಮಾಡಿದ್ದಾರೆ. ಆಕೆಯೂ ಅದಕ್ಕೆ ‘‘ಎದ್ದು ಹೋಗಿ ಜಗತ್ತನ್ನು ನೋಡಿ ಬನ್ನಿ, ನಾನೊಬ್ಬ ಸ್ವತಂತ್ರ ದುಡಿಯುವ ಹೆಣ್ಣು. ನನ್ನ ಆಯ್ಕೆ ನನ್ನ ಖರ್ಚು’’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಹೇಗೆ ಹೋಗಿ ಹೇಗೆ ಬಂದರೂ ಎಲ್ಲಾ ಕುಹಕಗಳೂ ಮುಟ್ಟುವುದು ಹೆಣ್ಣು ಪರಾವಲಂಬಿ ಎನ್ನುವುದನ್ನು ಸಾಬೀತುಪಡಿಸುವಲ್ಲಿಗೇ.

ಬೆನ್ನಹಿಂದೆ ಆಕೆಯ ನಡತೆಯ ಬಗ್ಗೆ ನಿರಾಧಾರ ವಾಗಿ ಮಾತನಾಡುವುದು ಅವಳನ್ನು ಕುಗ್ಗಿಸಬಲ್ಲ ಏಕಮಾತ್ರ ಸಶಕ್ತ ಸಾಧನವೆಂದು ಸಮಾಜ ಬಗೆದಿರುವ ಹಾಗಿದೆ. ಆಕೆಯ ಹುಡುಕಾಟ, ಆಯ್ಕೆ ಮತ್ತು ಹೋರಾಟ ಎಲ್ಲವನ್ನೂ ಅಗೌರವದಿಂದ ಕಾಣುತ್ತಾ ಖುಲ್ಲಂಖುಲ್ಲಾ ನಿರಾಕರಿಸಿಬಿಡುವುದು ಅತ್ಯಂತ ಹೀನ ಮನಸ್ಥಿತಿ. ಅಷ್ಟಾಗಿಯೂ ಹೆಣ್ಣುಮಕ್ಕಳು ಒಬ್ಬಂಟಿಯಾಗಿ ತನ್ನಿಚ್ಛೆಯಂತೆ ಬೇಕಿದ್ದ ಪ್ರವಾಸಿ ತಾಣಗಳಿಗೆ ಹೋಗುವ, ಹೊಟೇಲಿನಲ್ಲಿ ತಂಗುವ, A/U ಸಿನೆಮಾಗಳನ್ನಾದರೂ ನೋಡುವ, ಬೇಕಿದ್ದ ಸಾರಿಗೆಯಲ್ಲಿ ಪ್ರಯಾಣಿಸುವ, ಅಷ್ಟೇಕೆ? ಮುಕ್ತವಾಗಿ ಫಾಸ್ಟ್ ಫುಡ್ ಒಂದರಲ್ಲಿ ತಿನ್ನುವ, ಸಾರ್ವಜನಿಕ ಶೌಚಾಲಯಕ್ಕೆ ನಿರ್ಭಿಡೆಯಿಂದ ಹೋಗುವ ಅವಕಾಶಕ್ಕೆ 21ನೇ ಶತಮಾನದಲ್ಲೂ ಎಷ್ಟೊಂದು ತೊಡರು! ನಾನೂ ಸಹ ಸೋಲೋ ಟ್ರಿಪ್ ಪ್ರಿಯಳೇ. 

ನನಗೂ ಹಾಗೆ ಹೊರಗೆ ಅಡ್ಡಾಡಬೇಕು ಅನಿಸಿ ಹಲವಾರು ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿ ಆದ ಕಹಿ ಅನುಭವ ಅಷ್ಟಿಷ್ಟಲ್ಲ. ಸಾಕಷ್ಟು ದುಡ್ಡು ಇಟ್ಟುಕೊಂಡು ಪ್ರವಾಸ ಕೈಗೊಳ್ಳುವವರದ್ದು ಒಂದು ಪಾಡಾದರೆ, ಅಲ್ಲಿಗಲ್ಲಿಗೆ ಲೆಕ್ಕ ಹಾಕಿ ಅಲ್ಪಸ್ವಲ್ಪ ದುಡ್ಡಿಟ್ಟುಕೊಂಡಿದ್ದರಂತೂ ಕಷ್ಟ ಕಷ್ಟ. ಅಂತದರಲ್ಲಿ ಹೆಣ್ಣುಮಕ್ಕಳು ಎಷ್ಟೇ ರಿಸ್ಕ್ ತೆಗೆದುಕೊಳ್ಳಲು ತಯಾರಿದ್ದರೂ, ಆ ರಿಸ್ಕ್‌ಗಳನ್ನು ನಿರ್ವಹಿಸುವುದರಲ್ಲೇ ಒಟ್ಟಾರೆ ಟ್ರಿಪ್ ಪ್ಲಾನ್ ಹದಗೆಟ್ಟಿರುತ್ತದೆ. ಇನ್ನು ಬಂದದ್ದು ಬರಲೆಂದು ಪ್ರಯೋಗಶೀಲರಾಗಿದ್ದರೆ, ಧೈರ್ಯವಂತರಾಗಿದ್ದರೆ, ಎಲ್ಲಾ ಪ್ರತಿಕೂಲತೆಗೆ ಸನ್ನದ್ಧರಾಗಿದ್ದರೆ ಮಾತ್ರ ಅದೇ ಒಂದು ದೊಡ್ಡ ಶಕ್ತಿ. ನಾವು ಹೋಗಿ ತಲುಪಲಿರುವ ಸ್ಥಳವನ್ನು ಮಾತ್ರವಲ್ಲದೆ ಒಟ್ಟಾರೆ ಪ್ರಯಾಣದ ಅನುಭವವೂ ಒಂದು ಸಶಕ್ತ ಕಂಟೆಂಟ್.

                       ***  ***   ***

ತೊಡಕುಗಳೇನೇ ಇರಲಿ, ಸದ್ಯದ ಪರಿಸ್ಥಿತಿಯಲ್ಲಿ, ಯಾವ ಅಂಕಗಳು, ಪ್ರಮಾಣಪತ್ರಗಳ ಮಾನದಂಡವಿಲ್ಲದೆ, ಸ್ವತಂತ್ರವಾಗಿ ನಮ್ಮದೇ ಆಲೋಚನೆಗಳು, ನಮ್ಮದೇ ಅಭಿವ್ಯಕ್ತಿ, ನಮ್ಮದೇ ಫಾಲೋವರ್ಸ್ ಹೊಂದಿದ್ದರೆ ದುಡ್ಡು ದುಡಿಯಬಹುದೆನ್ನುವುದೇ ರೋಮಾಂಚಕ ವಿಷಯ. ಆರ್ಥಿಕ ಸ್ವಾವಲಂಬನೆ ಮಹಿಳೆಯರ ಪ್ರಗತಿಯ ಮೊದಲ ಯಶಸ್ಸು. ಅದನ್ನು ಸಾಧಿಸಲು ಸಾಧ್ಯವಾಗುವ ಮಾಧ್ಯಮವೊಂದು ಮುಷ್ಟಿಯಲ್ಲಿದೆ. ಜಗತ್ತಿಗೂ ಒಳ್ಳೆಯ ಕಂಟೆಂಟ್ ಬೇಕಿದೆ. ಮತ್ತದು ನಮ್ಮೆಳಗೇ ಇದೆ. ಗರಿಬಿಚ್ಚಿ ಹಾರುವುದಷ್ಟೇ ಈಗ ಆಗಬೇಕಿರುವ ಕೆಲಸ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top