ಉನ್ನತ ಶಿಕ್ಷಣದ ಮರು-ಅಗ್ರಹಾರೀಕರಣ!
-

ಸರಕಾರವು ದಲಿತರಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಅರ್ಧಕ್ಕರ್ಧದಷ್ಟು ಕತ್ತರಿಸುತ್ತಿದೆ ಹಾಗೂ ಸರಕಾರವೇ ರಾಜ್ಯಸಭೆಯಲ್ಲಿ ಕೊಟ್ಟಿರುವ ಉತ್ತರದ ಪ್ರಕಾರ ಈ ಕಡಿತ ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ.
ಮತ್ತೊಂದು ಕಡೆ ಕಾರ್ಪೊರೇಟ್ ಕಂಪೆನಿಗಳು ದಮನಿತ ಸಮುದಾಯಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಬೇಕಿಲ್ಲ, ತನ್ನ ಅದ್ಯತೆ ಮತ್ತು ತನ್ನ ಅಗತ್ಯಗಳನ್ನು ನೋಡಿಕೊಂಡು ಸಂಶೋಧನೆಯನ್ನು ಪ್ರೋತ್ಸಾಹಿಸಬಹುದೆಂದು ಎನ್‌ಇಪಿ-೨೦೨೦ ನೀತಿಯ ೧೭.೧೦ನೇ ಅಂಶದಲ್ಲಿ ಸ್ಪಷ್ಟವಾಗಿ ಅನುಮತಿಸಲಾಗಿದೆ. ಅದರ ಭಾಗವಾಗಿಯೇ ಬೇಯರ್, ಗ್ಲಾಕ್ಸೊದಂತಹ ‘ಪರೋಪಕಾರಿ’ ಪರಹಿತದ ಕಾರ್ಪೊರೇಟ್ ಸಂಸ್ಥೆಗಳು ಇಡಬ್ಲ್ಯುಎಸ್‌ನ ಮೇಲ್ಜಾತಿಗಳಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ಒದಗಿಸುತ್ತವೆ.
ಉನ್ನತ ಶಿಕ್ಷಣದಿಂದ ದಲಿತರನ್ನು, ಅದಿವಾಸಿಗಳನ್ನು, ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ಮತ್ತು ಹಿಂದುಳಿದ ವರ್ಗಗಳನ್ನು ಯೋಜಿತವಾಗಿ ಹೊರಹಾಕಿ ಅದನ್ನು ಸಂಪೂರ್ಣವಾಗಿ ಅಗ್ರಹಾರೀಕರಣಗೊಳಿಸುವುದೇ ಮೋದಿ ಸರಕಾರದ ಹೊಸ ಶಿಕ್ಷಣ ನೀತಿ (ಎನ್‌ಇಪಿ-೨೦೨೦)ಯ ದೂರ ಮತ್ತು ದುಷ್ಟ ಉದ್ದೇಶವೆಂಬುದು ದಿನೇದಿನೇ ಸಾಬೀತಾಗುತ್ತಿದೆ.
ಈ ಹೊಸ ನೀತಿಯ ಪ್ರಕಾರ ಸರಕಾರ ಜಾರಿಗೆ ತರುತ್ತಿರುವ ಕಡ್ಡಾಯ ಶೇ. ೪೦ರಷ್ಟು ಆನ್‌ಲೈನ್ ಶಿಕ್ಷಣ, ನಾಲ್ಕು ವರ್ಷಗಳ ಪದವಿ ಶಿಕ್ಷಣ, ಕಡಿಮೆ ಹಾಜರಾತಿಯ ಶಾಲೆ-ಕಾಲೇಜುಗಳ ರದ್ದು, ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳದೆ ಶಿಕ್ಷಣದ ಗುಣಮಟ್ಟ ಕುಸಿತ, ಕಾರ್ಪೊರೇಟ್ ಆರ್ಥಿಕತೆಗೆ ಮತ್ತು ಹಿಂದುತ್ವದ ಬ್ರಾಹ್ಮಣ್ಯದ ಮುಂದುವರಿಕೆಗೆ ಬೇಕಾದ ಪಠ್ಯ ಮತ್ತು ಭಾಷಾ ನೀತಿಗಳು, ಹಾಸ್ಟೆಲ್ ಸೌಲಭ್ಯ ವಂಚನೆ ಇತ್ಯಾದಿಗಳಿಂದಾಗಿ ಈಗಾಗಲೇ ದಮನಿತ ಸಮುದಾಯದ ಹಿನ್ನೆಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕ್ಯಾಂಪಸ್‌ಗಳಿಂದ ‘‘ಹೊಗೆಯನಿಕ್ಕಿ ಹೊರದಬ್ಬಲಾಗುತ್ತಿತ್ತು.’’
ದಮನಿತ ಸಮುದಾಯಗಳ ವಿರುದ್ಧ ಸಾಂಸ್ಥಿಕ ಸೇಡು!
ಈಗ ಆ ಹೊರದಬ್ಬುವ ಪ್ರಕ್ರಿಯೆ ಇನ್ನಷ್ಟು ಆಕ್ರಮಣಕಾರಿಯಾಗಿ ಮತ್ತು ಬಹಿರಂಗವಾಗಿ ನಡೆಯುವ ನೀತಿಗಳು ಜಾರಿಯಾಗುತ್ತಿವೆ. ಉನ್ನತ ಶಿಕ್ಷಣದಲ್ಲಿ ದಮನಿತ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮುಂದುವರಿಯಬೇಕೆಂದರೆ ವಿದ್ಯಾರ್ಥಿ ವೇತನಗಳು, ಫೆಲೋಶಿಪ್‌ಗಳು ಅತ್ಯಗತ್ಯ. ರೋಹಿತ್ ವೇಮುಲಾರ ಸಾಂಸ್ಥಿಕ ಕೊಲೆಯಾದದ್ದೇ ದಮನಿತ ಸಮುದಾಯಗಳ ಮೇಲೆ ಈ ವ್ಯವಸ್ಥೆ ಹೇರಿರುವ ಇಂತಹ ಬಲಹೀನತೆಯನ್ನು ಬಳಸಿಕೊಂಡು ಫೆಲೋಶಿಪ್ ನಿರಾಕರಿಸುವ ಸೇಡಿನ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕೆ. ಈ ಬ್ರಾಹ್ಮಣೀಯ ಕಾರ್ಪೊರೇಟ್ ವ್ಯವಸ್ಥೆಗೆ ದಮನಿತ ಸಮುದಾಯದ ಮೇಲಿರುವ ಸಾಂಸ್ಥಿಕ ಅಸಹನೆ ಈಗ ಸಾಂಸ್ಥಿಕ ಸೇಡಿನ ಸ್ವರೂಪವನ್ನೇ ತೆಗೆದುಕೊಂಡಿದೆ.
ಎನ್‌ಇಪಿ-2020ರ ಕರಡಿನಲ್ಲಿ ಭಾರತೀಯ ಸಮಾಜದಲ್ಲಿ ಹೀಗೆ ಐತಿಹಾಸಿಕವಾಗಿ ದಮನಿತ ಸಮುದಾಯಗಳನ್ನು ವಂಚಿಸಲಾಗಿದೆ ಎಂದು ಒಪ್ಪಿಕೊಳುವುದೇ ಇಲ್ಲ. ಬದಲಿಗೆ ದಮನಿತ ಸಮುದಾಯಗಳನ್ನು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳನ್ನು ಅದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅನನುಕೂಲಕ್ಕೆ ಗುರಿಯಾಗಿರುವ ಗುಂಪು (Socio-Economically Disadvantaged Groups- SEDG) ಎಂದು ಗುರುತಿಸುತ್ತದೆ. (https://www.education.gov.in/sites/upload_files/mhrd/files/NEP_Final_Eng...)
ಹೀಗೆ ಅವರ ಅನನುಕೂಲ ಪರಿಸ್ಥಿತಿಗೆ ಕಾರಣ, ಇತಿಹಾಸ ಯಾವುದೂ ಇಲ್ಲ. ಇರಲಿ. ಆದರೂ ಎನ್‌ಇಪಿ-೨೦೨೦ ಕರಡಿನ ಉದ್ದಕ್ಕೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅನನುಕೂಲಕ್ಕೆ ಗುರಿಯಾಗಿರುವ ಗುಂಪುಗಳಿಗೆ ವಿಶೇಷ ಆದ್ಯತೆಯಲ್ಲಿ ಪ್ರೋತ್ಸಾಹ, ಸಹಾಯ ಮತ್ತು ಸಹಕಾರಗಳನ್ನು ಕೊಟ್ಟು ಉನ್ನತ ಶಿಕ್ಷಣದಲ್ಲಿ ಒಳಗೊಳ್ಳುವ ಪ್ರಸ್ತಾವಗಳನ್ನು ಹಲವು ಸಾರಿ ಕರಡಿನ 9.3, 12.10, 14.4.1, 17.10 ಅಂಶಗಳಲ್ಲಿ ಪದೇಪದೇ ಮಾಡಲಾಗಿದೆ.
ಒಂದು ಕಡೆ ಸರಕಾರದಿಂದ ಹೆಚ್ಚಿನ ವಿದ್ಯಾರ್ಥಿ ವೇತನಗಳನ್ನು ಒದಗಿಸುವುದಾಗಿ ಹೇಳುವ ಈ ನೀತಿಯು ಅದಕ್ಕಾಗಿ ವಿಶೇಷವಾಗಿ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ (National Scholarship Portal) ಒಂದನ್ನು ಪ್ರಾರಂಭಿಸುವ ಭರವಸೆ ನೀಡಿದೆ.
ಮತ್ತೊಂದು ಕಡೆ ಸರಕಾರದಿಂದ ಮಾತ್ರವಲ್ಲ ಖಾಸಗಿ ಮತ್ತು ಪರೋಪಕಾರಿ ಸಂಸ್ಥೆಗಳಿಂದ ಈ ವಂಚಿತ ಸಮುದಾಯಗಳಿಗೆ ಸ್ನಾತಕವೇತನ ದೊರಕುವಂತೆ ನೋಡಿಕೊಳ್ಳುವುದಾಗಿ ಪುಂಕಾನುಪುಂಕವಾಗಿ ಪುಂಗುತ್ತಾ ಹೋಗಿದೆ.
ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ.
ಕಾರ್ಪೊರೇಟ್ ಸ್ಕಾಲರ್‌ಶಿಪ್-ತನಗೆ ಬೇಕಾದವರಿಗೆ ಮಾತ್ರ!
ಮೊದಲನೆಯದಾಗಿ ಖಾಸಗಿ ಮತ್ತು ಪರೋಪಕಾರಿ ಕಾರ್ಪೊರೇಟ್ ಸಂಸ್ಥೆಗಳು ಈವರೆಗೆ ಸರಕಾರಿ ವಿಶ್ವವಿದ್ಯಾನಿಲಯಗಳ ಸಂಶೋಧನಾ ಹಾಗೂ ಡಾಕ್ಟೋರಲ್ ಅಭ್ಯರ್ಥಿಗಳಿಗೆ ತನ್ನ ಸಂಸ್ಥೆಯಿಂದ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡುವಾಗ ಸರಕಾರದ ನೀತಿ-ನಿಯಮಗಳಿಗೆ ಬದ್ಧವಾಗಿ ನೀಡಬೇಕಿತ್ತು. ಅದರಲ್ಲಿ ಸಾಮಾಜಿಕ ನ್ಯಾಯ ನೀತಿಯನುಸಾರ ಪ್ರತಿಭೆ ಹಾಗೂ ಸಾಮಾಜಿಕ ವಂಚಿತ ಹಿನ್ನೆಲೆಯನ್ನು ಎರಡಕ್ಕೂ ನ್ಯಾಯವಾಗುವಂತೆ ಅದರ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.
ಆದರೆ ಎನ್‌ಇಪಿ-೨೦೨೦ರ ಮೂಲ ತಿಳುವಳಿಕೆಯೇ ಈ ಸಾಮಾಜಿಕ ನ್ಯಾಯಕ್ಕೆ ಹಾಗೂ ಸರಕಾರದ ಜವಾಬ್ದಾರಿಗಳಿಗೆ ವಿಮುಖವಾಗಿದೆ. ಏಕೆಂದರೆ ಈ ಶಿಕ್ಷಣ ನೀತಿಯಲ್ಲಿ ಖಾಸಗಿ ಕ್ಷೇತ್ರಕ್ಕೆ ಮತ್ತು ಅದರ ಲಾಭಾಸಕ್ತಿಗೆ ಕಡಿವಾಣ ಹಾಕುವ ಎಲ್ಲಾ ಆಡಳಿತಾತ್ಮಕ ಕ್ರಮಗಳನ್ನು ರದ್ದು ಮಾಡುವ ಭರವಸೆಯನ್ನು ನೀಡಲಾಗಿದೆ. ಅದರ ಭಾಗವಾಗಿಯೇ ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಸರಕಾರದ ಮೂಗುತೂರಿಸುವಿಕೆಯನ್ನು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಮಾಡುವ ಖಚಿತ ಭರವಸೆಯನ್ನು ನೀಡಲಾಗಿದೆ.
ಅದರ ಮುಂದುವರಿಕೆಯಾಗಿಯೇ ಎನ್‌ಇಪಿ-೨೦೨೦ ನೀತಿ ಕರಡಿನ ೧೭.೧೦ನೇ ಅಂಶದಲ್ಲಿ ಖಾಸಗಿ ಕ್ಷೇತ್ರವು ‘‘will continue to independently fund research according to their priorities and needs’’ ತನ್ನ ಆದ್ಯತೆ ಮತ್ತು ಅಗತ್ಯಗಳಿಗೆ ತಕ್ಕಂತೆ ಸಂಶೋಧನೆಗಳಿಗೆ ಸ್ವತಂತ್ರವಾಗಿ ಹಣದ ಪ್ರೋತ್ಸಾಹ ನೀಡುವುದನ್ನು ಮುಂದುವರಿಸಬಹುದೆಂಬ- ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಖಾಸಗಿ ಕ್ಷೇತ್ರಕ್ಕೆ ದಮನಿತ ಸಮುದಾಯ ಯಾವತ್ತು ತಾನೇ ಆದ್ಯತೆಯಾಗಿತ್ತು? ಅಗತ್ಯವಾಗಿತ್ತು?
BAYER-ಫೆಲೋಶಿಪ್-ಇಡಬ್ಲ್ಯುಎಸ್‌ಗಳಿಗೆ ಮಾತ್ರ!
ಹೀಗಾಗಿಯೇ ಮೊನ್ನೆ BAYER ಎಂಬ ಜರ್ಮನಿ ಮೂಲದ ಬಯೋಟೆಕ್ನಾಲಜಿ ಮತ್ತು ಔಷಧ ಕ್ಷೇತ್ರದ ಬೃಹತ್ ಬಹುರಾಷ್ಟ್ರೀಯ ಕಂಪೆನಿಯು ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ಗಳನ್ನು ಘೋಷಿಸಿದೆ. ೧೦೦ ಆಯ್ದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ತಿಂಗಳಿಗೆ ೨೦,೦೦೦ ರೂ. ವೇತನ ಹಾಗೂ ೨೫ ಸಂಶೋಧನಾ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ತಿಂಗಳಿಗೆ ೪೦,೦೦೦ ರೂ. ವೇತನವನ್ನು ಅದು ನೀಡುತ್ತದೆ. ಉಳಿದವರಷ್ಟೇ ಪ್ರತಿಭಾನ್ವಿತರಾಗಿದ್ದರೂ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದಾಗಿ ಎರಡು-ಮೂರು ವರ್ಷಗಳ ಕಾಲ ಉದ್ಯೋಗ ಮಾಡದೆ ಓದು ಮುಂದುವರಿಸಲಾಗದ ಪರಿಸ್ಥಿತಿಯಲ್ಲಿರುವವರಿಗೆ ಇಂತಹ ವಿದ್ಯಾರ್ಥಿ ವೇತನಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಹಾಗಾಗಿ ಇಂತಹ ಅವಕಾಶಗಳನ್ನು ಎಲ್ಲರಿಗೂ ಸಮಾನವಾಗಿ ಹಂಚುವ ಬಾಧ್ಯತೆ ಸರಕಾರದ್ದು.
ಆದರೆ BAYER ಎಂಬ ಖಾಸಗಿ ಸಂಸ್ಥೆ ನೀಡುವ ಈ ಮೇಧಾ ವಿದ್ಯಾರ್ಥಿ ವೇತನಗಳು ಕೇವಲ ಇಡಬ್ಲ್ಯುಎಸ್-ಅರ್ಥಾತ್ ಮೇಲ್ಜಾತಿಗಳಿಗೆ ಮಾತ್ರ ಎಂದು ಸರಕಾರವೇ ಜಾಹೀರಾತು ನೀಡಿದೆ. ಬೇಯರ್ ಕಂಪೆನಿಯು ಈ ವಿದ್ಯಾರ್ಥಿ ವೇತನವನ್ನು ಭಾರತ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯದ ಮೂಲಕ ನೀಡುತ್ತದೆ. ಆದರೂ ಸರಕಾರವೇ ಮೊತ್ತ ಮೊದಲ ಬಾರಿಗೆ ಈ ವಿದ್ಯಾರ್ಥಿ ವೇತನಗಳು ಮೇಲ್ಜಾತಿಗಳಿಗೆ ಮಾತ್ರವೇ ಹೊರತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ಜಾತಿಗಳಿಗಲ್ಲ ಎಂದು ಸಾಮಾಜಿಕ ಅನ್ಯಾಯದ ನೀತಿಯನ್ನು ಪ್ರಾರಂಭಿಸಿದೆ. ಹಾಗೆ ನೋಡಿದರೆ ಇಡಬ್ಲ್ಯುಎಸ್ -ಮೀಸಲಾತಿ ಎಂಬ ಕ್ರಮವೇ ಸಾಮಾಜಿಕ ಹಾಗೂ ಆರ್ಥಿಕವಾಗಿ ದಮನಿತ ಮತ್ತು ವಂಚಿತರಿಗಾಗಿ ಮೀಸಲಾತಿ ಒದಗಿಸುತ್ತಿದ್ದ ಸಾಮಾಜಿಕ ನ್ಯಾಯದ ನೀತಿಯನ್ನು ತಲೆೆಕೆಳಗು ಮಾಡಲಿಕ್ಕೆ. ಈಗ ಅದನ್ನು ಬ್ರಾಹ್ಮಣೀಯ ಸರಕಾರ ಮತ್ತು ಕಾರ್ಪೊರೇಟ್‌ಗಳು ವ್ಯವಸ್ಥಿತವಾಗಿ ದಮನಿತರನ್ನು ಉನ್ನತ ಶಿಕ್ಷಣ ಕ್ಷೇತ್ರದಿಂದ ಹೊರದಬ್ಬುವುದಕ್ಕೆ ಬಳಸಿಕೊಳ್ಳುತ್ತಿವೆ.
ಹೆಚ್ಚಿನ ವಿವರಗಳಿಗೆ ಆಸಕ್ತರು ಈ ವೆಬ್ ವಿಳಾಸವನ್ನು ಸಂಪರ್ಕಿಸಬಹುದು:
https://www.bckic.in/medha/images/faq.pdf
ಅಷ್ಟು ಮಾತ್ರವಲ್ಲ ಬಯೋಟೆಕ್ನಾಲಜಿಯಂತಹ ಭವಿಷ್ಯದ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ನಾತಕೋತ್ತರ ಶಿಕ್ಷಣದಲ್ಲಿ ಸರಕಾರ ಕ್ರಮೇಣ ಹಿಂದೆ ಸರಿಯುತ್ತಿದ್ದು ಖಾಸಗಿ ಕ್ಷೇತ್ರವೇ ಅವರಿಸಿಕೊಳ್ಳುತ್ತಿದೆ. ಹೀಗಾಗಿ ಅಲ್ಲಿ ಬೇಯರ್ ಮಾತ್ರವಲ್ಲದೆ ಗ್ಲಾಕ್ಸೋದಂತಹ ಮತ್ತೊಂದು ಬೃಹತ್ ಔಷಧ ಕಂಪೆನಿಯು ನೀಡುವ ಸಹಾಯ ಧನವೇ ಪ್ರಧಾನವಾಗುತ್ತಿದೆ.
(https://wellcome.org/press-release/five-year-extension-agreed-wellcomedb...)
ಯಾವುದೇ ಸಾಮಾಜಿಕ ಹೊಣೆಗಾರಿಕೆ ಇಲ್ಲದ ಆರ್ಥಿಕವಾಗಿ ಕತ್ತುಕೊಯ್ಯುವ ಲಾಭಾಸಕ್ತಿಯನ್ನು, ಸಾಮಾಜಿಕವಾಗಿ ಪ್ರತಿಭಾ ಪುರಸ್ಕಾರದ ಹೆಸರಿನಲ್ಲಿ ದಮನಿತ ಸಮುದಾಯಗಳ ಅಪರ ಬ್ರಾಹ್ಮಣೀಯ ಅಸಹನೆ-ತಿರಸ್ಕಾರಗಳನ್ನೇ ಉಸಿರಾಡುವ ಈ ಕಾರ್ಪೊರೇಟ್ ಕಂಪೆನಿಗಳು ಶಿಕ್ಷಣ ಕ್ಷೇತ್ರವನ್ನು ಆಳಲು ಅವಕಾಶ ಮಾಡಿಕೊಡುವ ಮೂಲಕ ಮೋದಿ ಸರಕಾರ ಪರೋಕ್ಷವಾಗಿ ದಮನಿತ ಸಮುದಾಯದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಗೇಟುಗಳನ್ನು ಮುಚ್ಚುತ್ತಿದೆ.
ಮತ್ತೊಂದು ಕಡೆ ಸರಕಾರವಾದರೂ ದಮನಿತ ಸಮುದಾಯಗಳಿಗೆ ಅನುದಾನವನ್ನು ಹೆಚ್ಚಿಸಿ ಸಾಮಾಜಿಕ ನ್ಯಾಯದ ನೀತಿಯನ್ನು ಕಾಪಾಡುತ್ತಿದೆಯೇ?
ಸರಕಾರಿ ಸ್ಕಾಲರ್‌ಶಿಪ್ ಶೇ. 50 ಕಡಿತ - ಮೋದಿ ಮಾಸ್ಟರ್ ಸ್ಟ್ರೋಕ್!
ಅದಕ್ಕೆ ತದ್ವಿರುದ್ಧವಾಗಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕಳೆದ ಎಂಟು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಜಾತಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನಗಳ ಪ್ರಮಾಣ ಹಾಗೂ ಅನುದಾನ ಎರಡನ್ನೂ ತೀವ್ರವಾಗಿ ಕಡಿತಗೊಳಿಸಲಾಗುತ್ತಿದೆ.
೨೦೨೨ರ ಫೆಬ್ರವರಿಯಲ್ಲಿ ಸಿಪಿಎಂ ಪಕ್ಷದ ಸಂಸದರಾದ ಡಾ. ಸಿವದಾಸನ್ ಅವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಮೋದಿ ಸರಕಾರ ಕೊಟ್ಟಿರುವ ಉತ್ತರ ಆತಂಕವನ್ನು ಮತ್ತು ಗಾಬರಿಯನ್ನು ಹುಟ್ಟಿಸುತ್ತದೆ. ಕಳೆದ ಐದು ವರ್ಷಗಳಲ್ಲಿ UGC- University Grants Commission- ಕೊಡುತ್ತಿರುವ ವಿದ್ಯಾರ್ಥಿ ವೇತನಗಳ ಸಂಖ್ಯೆ ಮತ್ತು ಮೊತ್ತ ಎರಡೂ ಕಡಿಮೆಯಾಗಿದೆಯೇ? ಕಡಿಮೆಯಾಗಿದ್ದರೆ ಅದರ ವಿವರ ಮತ್ತು ಕಾರಣವನ್ನು ಕೇಳಲಾಗಿತ್ತು.
ಅದಕ್ಕೆ ಉತ್ತರ ನೀಡಿರುವ ಮೋದಿ ಸರಕಾರ ೧೨ನೇ ಯೋಜನಾವಧಿಯ ನಂತರದಲ್ಲಿ ಸ್ನಾತಕ ವೇತನಗಳನ್ನು ಮರುಪರಿಶೀಲಿಸಿ ಅವನ್ನು ಸಕ್ಷಮಗೊಳಿಸುವ (ಅರ್ಥಾತ್ ಕಡಿತಗೊಳಿಸುವ) ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲಾಗಿತ್ತೆಂದೂ, ಅದು ಕೊಟ್ಟ ವರದಿಯನ್ನು ಸರಕಾರ ಒಪ್ಪಿಕೊಂಡಿದೆಯೆಂದೂ ಉತ್ತರಿಸಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಯುಜಿಸಿ ಕೊಡುತ್ತಿದ್ದ ವಿದ್ಯಾರ್ಥಿ ವೇತನಗಳಲ್ಲಿ ಆಗಿರುವ ಬದಲಾವಣೆಯ ಕೋಷ್ಟಕವನ್ನೂ ಕೊಟ್ಟಿದೆ.
ಆಸಕ್ತರು ಅದರ ಸಂಪೂರ್ಣ ವಿವರವನ್ನು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು:
https://pqars.nic.in/annex/256/AU24.pdf ಸರಕಾರ ಕೊಟ್ಟಿರುವ ಮಾಹಿತಿಯ ಕೆಲವು ಆತಂಕಕಾರಿ ವಿವರಗಳು ಹೀಗಿವೆ:
-2017-18ರಲ್ಲಿ 581 ಸಂಶೋಧಕರಿಗೆ 26 ಕೋಟಿ ರೂ. ಮೊತ್ತದ ಡಾ. ರಾಧಾಕೃಷ್ಣನ್ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ದೊರೆತಿದ್ದರೆ 2020-21ನೇ ಸಾಲಿನಲ್ಲಿ ಅದನ್ನು ಕೇವಲ 200 ವಿದ್ಯಾರ್ಥಿಗಳಿಗೆ ಇಳಿಸಲಾಗಿದೆ. ಅಂದರೆ ಶೇ. 60ರಷ್ಟು ಕಡಿತ.
-ಎಸ್‌ಸಿ, ಎಸ್‌ಟಿ ಪೋಸ್ಟ್ ಡಾಕ್ಟೋರಲ್ ವಿದ್ಯಾರ್ಥಿ ವೇತನಗಳ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. 2017-18ನೇ ಸಾಲಿನಲ್ಲಿ ಯುಜಿಸಿಯು 620 ದಲಿತ-ಬುಡಕಟ್ಟು ವಿದ್ಯಾರ್ಥಿಗಳಿಗೆ ರೂ. 28.66 ಕೋಟಿಯಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗಿದ್ದರೆ 2020-21ನೇ ಸಾಲಿನಲ್ಲಿ ಕೇವಲ 332 ದಲಿತ-ಬುಡಕಟ್ಟು ವಿದ್ಯಾರ್ಥಿಗಳಿಗೆ ರೂ. 17.58 ಕೋಟಿಯಷ್ಟೇ ವಿದ್ಯಾರ್ಥಿ ವೇತನವನ್ನು ನೀಡಲಾಗಿತ್ತು. ಎಂದರೆ ಶೇ. 50ರಷ್ಟು ಕಡಿತ.
-2017-18 ರಲ್ಲಿ 766 ಮಹಿಳಾ ಪೋಸ್ಟ್ ಡಾಕ್ಟೋರಲ್ ಫೆಲೋಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿದ್ದರೆ ಈಗ ಅದು 434ಕ್ಕೆ ಇಳಿದಿದೆ.
-2017-18ರಲ್ಲಿ 4,939 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೌಲಾನ ಆಝಾದ್ ಫೆಲೋಷಿಪ್ ಸಿಗುತ್ತಿದ್ದರೆ 2020-21ರಲ್ಲಿ ಅದು 2,348ಕ್ಕೆ ಕುಸಿಯಿತು.
ಈಗ ಅದನ್ನು ರದ್ದೇ ಮಾಡಿಬಿಡಲಾಗಿದೆ.
-ಅದೇ ರೀತಿ ದಲಿತ ವಿದ್ಯಾರ್ಥಿಗಳಿಗೆ 2017-18ರಲ್ಲಿ ರೂ. 215.97 ಕೋಟಿ ಮೊತ್ತದಷ್ಟು ವಿದ್ಯಾರ್ಥಿ ವೇತನಗಳು 10,877 ದಲಿತ ವಿದ್ಯಾರ್ಥಿಗಳಿಗೆ ಸಿಕ್ಕಿತ್ತು. 2020-21ರಲ್ಲಿ ಅದು ಶೇ. 70ರಷ್ಟು ಕಡಿತವಾಗಿ ಕೇವಲ 3,986 ದಲಿತ ವಿದ್ಯಾರ್ಥಿಗಳಿಗೆ ರೂ. 133.07 ಕೋಟಿಯಷ್ಟೇ ವಿದ್ಯಾರ್ಥಿ ವೇತನ ಸಿಕ್ಕಿದೆ.
ಶಿಕ್ಷಣದ ಮರು ಅಗ್ರಹಾರೀಕರಣ
ಅಂದರೆ ತಾತ್ಪರ್ಯವಿಷ್ಟೆ: ಸರಕಾರವು ದಲಿತರಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಅರ್ಧಕ್ಕರ್ಧದಷ್ಟು ಕತ್ತರಿಸುತ್ತಿದೆ ಹಾಗೂ ಸರಕಾರವೇ ರಾಜ್ಯಸಭೆಯಲ್ಲಿ ಕೊಟ್ಟಿರುವ ಉತ್ತರದ ಪ್ರಕಾರ ಈ ಕಡಿತ ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ.
ಮತ್ತೊಂದು ಕಡೆ ಕಾರ್ಪೊರೇಟ್ ಕಂಪೆನಿಗಳು ದಮನಿತ ಸಮುದಾಯಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಬೇಕಿಲ್ಲ, ತನ್ನ ಅದ್ಯತೆ ಮತ್ತು ತನ್ನ ಅಗತ್ಯಗಳನ್ನು ನೋಡಿಕೊಂಡು ಸಂಶೋಧನೆಯನ್ನು ಪ್ರೋತ್ಸಾಹಿಸಬಹುದೆಂದು ಎನ್‌ಇಪಿ-2020 ನೀತಿಯ 17.10ನೇ ಅಂಶದಲ್ಲಿ ಸ್ಪಷ್ಟವಾಗಿ ಅನುಮತಿಸಲಾಗಿದೆ. ಅದರ ಭಾಗವಾಗಿಯೇ ಬೇಯರ್, ಗ್ಲಾಕ್ಸೊದಂತಹ ‘ಪರೋಪಕಾರಿ’ ಪರಹಿತದ ಕಾರ್ಪೊರೇಟ್ ಸಂಸ್ಥೆಗಳು ಇಡಬ್ಲ್ಯುಎಸ್‌ನ ಮೇಲ್ಜಾತಿಗಳಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ಒದಗಿಸುತ್ತವೆ.
ಇದರ ಪರಿಣಾಮಗಳು ಏನೆಂಬುದು ಸಹ ಸರಕಾರವೇ ಸ್ಪಷ್ಟ ಪಡಿಸಿದೆ. 2021ರ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಸಂಸದ ಕರೀಮ್ ಮತ್ತು ವಿಕಾಸ್ ಭಟ್ಟಾಚಾರ್ಯ ಅವರು 2016ರ ನಂತರ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಅಧ್ಯಯನಗಳಿಗೆ ಪ್ರವೇಶ ಪಡೆದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹಿನ್ನೆಲೆಯ ವಿದ್ಯಾರ್ಥಿಗಳು ಎಷ್ಟು ಮತ್ತು ಅವರಲ್ಲಿ ಎಷ್ಟು ಜನ ಅಧ್ಯಯನ ಪೂರೈಸದೆ ಬಿಟ್ಟುಹೋದರು ಎಂಬ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಮೋದಿ ಸರಕಾರ ನೀಡಿದ ಉತ್ತರ ಗಾಬರಿಗೊಳಿಸುವಂತಿದೆ. ಉನ್ನತ ಶಿಕ್ಷಣದಲ್ಲಿ ಒಬಿಸಿಗಳಿಗೆ ಶೇ.27ರಷ್ಟು ಮೀಸಲಾತಿ ಇದ್ದರೂ, ಎಸ್‌ಸಿಗಳಿಗೆ ಶೇ. 15 ಮತ್ತು ಎಸ್‌ಟಿಗಳಿಗೆ ಶೇ. 7.5ರಷ್ಟು ಮೀಸಲಾತಿ ಇದ್ದರೂ ಬೆಂಗಳೂರಿನ ಐಐಎಸ್‌ಸಿಯಲ್ಲಿ 2016-2020ರ ನಡುವೆ ಡಾಕ್ಟರೇಟ್ ಪದವಿಗೆ ರಿಜಿಸ್ಟರ್ ಮಾಡಿಕೊಂಡವರಲ್ಲಿ ಶೇ.2.1ರಷ್ಟು ಮಾತ್ರ ಎಸ್‌ಟಿಗಳು, ಶೇ. 8.9 ಎಸ್‌ಸಿ ಮತ್ತು ಶೇ.8ರಷ್ಟು ಮಾತ್ರ ಒಬಿಸಿಗಳು. ದೇಶದಲ್ಲಿರುವ 17 ಮಾಹಿತಿ ವಿಜ್ಞಾನ ಅಧ್ಯಯನ ಕೇಂದ್ರಗಳಲ್ಲಿ ಡಾಕ್ಟರೇಟ್ ಪದವಿಗೆ ಸೇರಿದವರಲ್ಲಿ ಶೇ. 9ರಷ್ಟು ಮಾತ್ರ ಎಸ್‌ಸಿ ಹಾಗೂ ಕೇವಲ ಶೇ.1.7ರಷ್ಟು ಮಾತ್ರ ಎಸ್‌ಟಿ ಹಿನ್ನೆಲೆಯ ವಿದ್ಯಾರ್ಥಿಗಳು. ಅದೇ ರೀತಿ ಇದೇ ಅವಧಿಯಲ್ಲಿ ಈ 17 ಸಂಸ್ಥೆಗಳಿಂದ ಡಾಕ್ಟರೇಟ್ ಅಧ್ಯಯನವನ್ನು ಅರ್ಧಕ್ಕೆ ಬಿಟ್ಟು ಹೋದವರಲ್ಲಿ ಒಬ್ಬರೂ ಇಡಬ್ಲ್ಯುಎಸ್ ವರ್ಗಕ್ಕೆ ಸೇರಿದವರಿಲ್ಲ. ಎಲ್ಲರೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳೇ. ಅದರಲ್ಲಿ ಎಸ್‌ಟಿಗಳ ಪಾಲು ಅತ್ಯಧಿಕ!
ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್‌ಸೈಟಿನಲ್ಲಿ ಪಡೆಯಬಹುದು:
https://pqars.nic.in/annex/253/A369.pdf
ಒಟ್ಟಿನಲ್ಲಿ ಕಾರ್ಪೊರೇಟ್ ಬಂಡವಾಳಶಾಹಿಗಳು ಮತ್ತು ಮೋದಿ ಸರಕಾರ ಎರಡೂ ಜಂಟಿ ಕಾರ್ಯಾಚರಣೆ ನಡೆಸಿ ಉನ್ನತ ಶಿಕ್ಷಣವನ್ನು ಕಾರ್ಪೊರೇಟ್ ಬ್ರಾಹ್ಮಣ್ಯದ ಅಗ್ರಹಾರವನ್ನಾಗಿ ಮಾಡುತ್ತಿವೆ. ದಲಿತ- ಆದಿವಾಸಿ, ಮಹಿಳೆ, ಅಲ್ಪಸಂಖ್ಯಾತ ಸಮುದಾಯವನ್ನು ಶಿಕ್ಷಣದಿಂದ ಹೊರಗಟ್ಟುತ್ತಿವೆ.
ಇಡಬ್ಲ್ಯುಎಸ್-೨೦೨೦ ನೀತಿ ಜಾರಿಗೆ ತಂದಿದ್ದೇ ಈ ಕಾರ್ಪೊರೇಟ್ ಬ್ರಾಹ್ಮಣ್ಯವನ್ನು ಜಾರಿ ಮಾಡುವುದಕ್ಕೆ ಎಂದು ಈಗಲಾದರೂ ಅರ್ಥಮಾಡಿಕೊಂಡು ವಿದ್ಯಾರ್ಥಿ-ಪೋಷಕ-ಶಿಕ್ಷಕ ಸಮುದಾಯ ಬೃಹತ್ ಹೋರಾಟವನ್ನು ಕಟ್ಟುವ ಅಗತ್ಯವಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.