-

‘ಬೆಳಗಿನೊಳಗು’ ಪ್ರತಿರೋಧದ ದೇದೀಪ್ಯಮಾನ

-

ಗುಡ್ಡದಲ್ಲೋ ಗಿರಿಯಲ್ಲೋ ಹುಟ್ಟುವ ನೀರ ಬುಗ್ಗೆ ಝರಿಯಾಗಿ ಹರಿದು, ಹಲವು ಝರಿಗಳು ಕೂಡಿ ತೊರೆಯಾಗಿ, ನಾನಾ ತೊರೆಗಳು ಸಂಗಮಿಸಿ ನದಿಯಾಗಿ ವಿಸ್ತಾರವಾಗಿ ಹರಿದು ಕಡಲು ಸೇರುತ್ತದೆ. ಹರಿಯುವ ನದಿಯೂ ಎಲ್ಲರಿಗೆ ಬೇಕಾಗಿಯೂ ಯಾರಿಗೂ ಅಂಟದಂತೆಯೂ ಅಡೆತಡೆಗಳನ್ನು ಮೀರುತ್ತ ನಿರ್ಮಲವಾಗಿ ನಿಶ್ಚಲವಾಗಿ ತನ್ನ ಗುರಿ ಮುಟ್ಟುತ್ತದೆ.

ಉಡುತಡಿಯ ಶಿಶುವಾಗಿ ಬಯಲಿನೊಳಗೆ ಬೆಳೆಯುತ್ತ, ನಡೆಯುತ್ತ, ನೊಂದು-ಬೆಂದು, ಅರಳುತ್ತ ಶರಣರ ನಿಕಷಕ್ಕೂ ಒಳಗಾಗಿ ಕಲ್ಯಾಣದೊಳಗೆ ಅಕ್ಕನಾದ ಮಹಾದೇವಿಯೂ ಎಲ್ಲರೊಂದಿಗೆ ಬೆರೆಯುತ್ತ ಎಲ್ಲರಿಂದಲೂ ಅನುಭವ ದಕ್ಕಿಸಿಕೊಳ್ಳುತ್ತ ಯಾರೊಂದಿಗೂ ಅಂಟಿಕೊಳ್ಳದ ನದಿಯ ಗುಣದ ಧೀರೆ. ಅಕ್ಕ ಮಹಾದೇವಿ ಹಾಡಾಗಿ ಕತೆಯಾಗಿ ಮಾತಾಗಿ ಜನಜನಿತ-ಜೀವಂತ. ಕನ್ನಡ ಕಟ್ಟಿದ ಜಾನಪದರು, ಪ್ರಾಜ್ಞರು, ವಿದ್ವಾಂಸರು, ಕವಿ-ಸಾಹಿತಿಗಳು ಮಹಾದೇವಿಯನ್ನು ಕಾಲಕಾಲಕ್ಕೆ ಜೀವಂತಗೊಳಿಸಿದ್ದಾರೆ. ನಿಂತ ನೀರಾಗಿಸದೆ ಸದಾ ಹರಿಯುವ ನದಿಯಾಗಿಸಿದ್ದಾರೆ.

ಈಗ ಲೇಖಕರಾದ ಡಾ.ಎಚ್.ಎಸ್.ಅನುಪಮಾ ಅವರು ಅಕ್ಕನ ಬದುಕನ್ನು ಶೋಧಿಸಿ ಸಂಶೋಧಿಸಿ ವಿಸ್ತರಿಸಿ ಹರಿಯುವಿಕೆಗೆ ವೇಗಕೊಟ್ಟಿದ್ದಾರೆ. ವೈದ್ಯರಾದ ಅನುಪಮಾ ಅವರು ಸಾಹಿತ್ಯ ಕೃಷಿ ನಡೆಸುತ್ತ ಫಲವತ್ತಾದ ಫಸಲನ್ನು ಕನ್ನಡ ಸಾಹಿತ್ಯ ಕ್ಷಿತಿಜಕ್ಕೆ ಸಮರ್ಪಿಸುತ್ತಿರುವ ಈ ಹೊತ್ತಿನ ಕನ್ನಡ ನೆಲದ ಮುಖ್ಯ ಲೇಖಕರು. ‘ಬೆಳಗಿನೊಳಗು ಮಹಾದೇವಿಯಕ್ಕ’ ಕಾದಂಬರಿಯ ಮೂಲಕ ಅಕ್ಕನೆಂಬ ಪ್ರಖರ ಜ್ಯೋತಿಯನ್ನು ದೇದೀಪ್ಯಮಾನವಾಗಿಸಿದ್ದಾರೆ. ಬೆಳಗಿನೊಳಗೆ ಅಕ್ಕನನ್ನು ಕಂಡ ಅನುಪಮಾರ ಪ್ರಯತ್ನವೂ ವರ್ತಮಾನ ಮತ್ತು ಭವಿಷ್ಯದ ತಲೆಮಾರಿಗೆ ದಾರಿ ತೋರುವ ಕೈದೀವಿಗೆಯಾಗಲಿದೆ. 

ಹೆಣ್ಣಾದ ತನ್ನ ಮೇಲೆ ನಡೆದ ದೌರ್ಜನ್ಯದಿಂದಲೇ ತಾನೇ 900 ವರ್ಷಗಳ ಹಿಂದೆ ಮಹಾದೇವಿ ಮನೆಮಠ ಬಿಟ್ಟು ದಿಗಂಬರೆಯಾಗಿ ನಡೆದು ಹೋದದ್ದು. ಯಾರ ಹಂಗಿರದೆ ತನ್ನಿಚ್ಛೆಯ ಬದುಕಿಗಾಗಿ ದುರ್ಗಮ ಹಾದಿಯಲ್ಲಿ ಸಾಗಿದ್ದು. ಲೋಕವೇ ಅಚ್ಚರಿಪಡುವಂತೆ ಬದುಕಿ ತೋರಿದ್ದು. ಆದರೂ ಹೆಣ್ಣಿನ ಮೇಲಿನ ಶೋಷಣೆ ನಿಂತಿತೆ? ಕಾಲಕಾಲವೂ ವಿಕೃತಗೊಳ್ಳುತ್ತ ಬಲಗೊಳುತ್ತಲೇ ಇಲ್ಲವೇ? ಮಹಿಳೆಯರು ಸ್ವಾವಲಂಬಿಯಾಗಿಯೂ ಪಡಬಾರದ ಕಷ್ಟಗಳನ್ನು ಅನುಭವಿಸುತ್ತಲೇ ಇದ್ದಾರೆ. ಹೀಗಿದ್ದರೂ ಹಂಗಿರದ, ಸ್ವತಂತ್ರ ಮತ್ತು ತನ್ನಿಷ್ಟದಂತೆ ಬದುಕುವ ಹೆಣ್ಣುಗಳಿಗೆ ಅಕ್ಕ ಮಹಾಮಾರ್ಗಿ. ಈ ಕಾದಂಬರಿಯಲ್ಲಿನ ಉಪಕತೆಗಳು, ಬಯಲಿನ ಸಂಗಾತಿಗ ಳೊಂದಿಗಿನ ಸಂವಾದಗಳು, ಏಕಾಂತದ ನಡಿಗೆಯಲ್ಲಿ ಪ್ರಕೃತಿ ಕಲಿಸುವ ಪಾಠಗಳು, ತನ್ನ ಪಯಣದಲ್ಲಿ ಅಕ್ಕ ನೆಟ್ಟ ಬೀಜಗಳು ಹೂವಾಗಿ, ಕಾಯಾಗಿ, ಹಣ್ಣಾಗಿ ಅರಿವನ್ನು ಬಿತ್ತಿವೆ. ಲೋಕದ ಸ್ತ್ರೀಯರು ಬಾಲ್ಯದಿಂದ ಕಾಲವಾಗುವ ತನಕ ಎದುರಿಸುವ ದೌರ್ಜನ್ಯ, ಸವಾಲು, ಸಮಸ್ಯೆಗಳ ಬಗ್ಗೆ ಅಕ್ಕನಿಂದ ನೀಡಲಾಗಿದೆ. ಅದೇ ಈ ಕಾದಂಬರಿಯ ಹಿರಿಮೆಯೂ ಆಗಿದೆ. ಬಾಲ್ಯದಲ್ಲಿ ಮಹಾದೇವಿ ಕಾಡುಮೇಡು ಅಲೆಯುವಂತಿಲ್ಲ. ಪ್ರಶ್ನೆ ಕೇಳುವುದು ನಿಷಿದ್ಧ. ಜಪದ ಕಟ್ಟೆಯಲ್ಲಿ ಎಕ್ಕಮ್ಮಗಳೊಂದಿಗೆ ಕುಳಿತದ್ದಕ್ಕೆ ಅಪ್ಪನಿಂದ ನಾಗರಬೆತ್ತದ ಹೊಡೆತ ತಿನ್ನಬೇಕು. ಹೆಣ್ಣಾದ ಕಾರಣದಿಂದ ಹಿಂಸೆ ಅನುಭವಿಸಬೇಕು.

ತದನಂತರ ಉಡುತಡಿಯ ಗವುಂಡ ಕಸಪಯ್ಯ ರಾಯನನ್ನು ವಿವಾಹವಾದ ಮಹಾದೇವಿಗೆ ಮಂಡಲಮನೆ ಬಂದಿಖಾನೆ. ‘ನಿಂತ ನೆಲ, ಉಟ್ಟ ಬಟ್ಟೆ, ತಿನ್ನುವ ಆಹಾರ ತನ್ನದೆಂಬ’ ಗವುಂಡ ರಾಯನ ಅಹಂಕಾರಕ್ಕೆ ಪೆಟ್ಟುಕೊಟ್ಟ ಮಹಾದೇವಿ ದಿಗಂಬರೆಯಾಗಿ ಆ ನೆಲವನ್ನು ಬಿಟ್ಟು ನಡೆಯುತ್ತಾಳೆ. ಮಂಡಲಮನೆ ದಾಟಿ ಭುವನದ ಶಿಶುವಾಗುತ್ತಾಳೆ. ಬಯಲಿಗೆ ಬಂದ ಮಹಾದೇವಿ ಬೆಟ್ಟದಂತಹ ಸವಾಲುಗಳನ್ನು ಎದುರಿಸಿದಳು. ಒಬ್ಬಂಟಿಯಾಗಿ ಕಾಡುಮೇಡು ದಾಟಿದಳು. ನದಿಗಳನ್ನು ಹಾಯ್ದಳು. ಬಲಾತ್ಕಾರದ ಕ್ರೌರ್ಯದಿಂದಲೂ ಪಾರಾದಳು. ನಾನಾ ಪರೀಕ್ಷೆಗಳಿಗೂ ಒಳಗಾಗಿ ಕಲ್ಯಾಣದತ್ತ ನಡೆದಳು.

ಏಕಾಂಗಿ ಪಯಣದಲ್ಲಿ ಮಹಾದೇವಿ ನಾಥರು, ಸಿದ್ಧರು, ಅವಧೂತರು, ಜೈನ ಸಾಧ್ವಿಯರಲ್ಲದೆ ಜನ ಸಾಮಾನ್ಯರೊಂದಿಗೆ ಸಂವಾದಿಸುತ್ತ ಪ್ರತಿಕ್ರಿಯಿಸುತ್ತ ಮುಂಬರಿದಳು. ನಾಥ ಸಂಪ್ರದಾಯದಲ್ಲಿ ಹೆಣ್ಣುಗಳಿಗೆ ಸ್ಥಾನವಿಲ್ಲ ಎಂಬುದನ್ನು ಕಟು ಶಬ್ದಗಳಲ್ಲಿ ಟೀಕಿಸುವಳು. ‘‘ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ. ನಿಮ್ಮ ಮನದ ಭ್ರಾಂತಿಯೇ ಮಾಯೆ’’ ಎಂದು ಎಚ್ಚರಿಸುವಳು. ಮಹಾದೇವಿಯ ಬಯಲ ಸಂಗಾತಿ ಮಾಯವ್ವ ‘ಎಲ್ಲಾ ಪಂಥಕ್ಕಿಂತ ಹೆಣ್ಣು ಪಂಥಾನೆ ಹಿರೇದು. ಬದುಕು ಅದಕ್ಕಿಂತ ದೊಡ್ಡದು. ‘‘ನೀನ್ ಆಗಿ ನಿನ್ನಷ್ಟ ಬಂದಂಗಿರುವ ಅಂತ ಅಪ್ಪ ಆಸ್ತಿ ಕೊಡತನ ನಮಗೆ?’’ ಎಂದು ಮಹಾದೇವಿಯನ್ನು ಸಮಾಧಾನಪಡಿಸುವ ಮಾತುಗಳು, ಇವತ್ತಿಗೂ ಮಹಿಳೆಯರನ್ನು ನಡೆಸಿಕೊಳ್ಳುವಲ್ಲಿ ಯಾವ ಬದಲಾವಣೆಗಳೂ ಆಗಿಲ್ಲ ಎಂಬುದು ವಿಷಾದ ತರುತ್ತದೆ. ಮಹಾದೇವಿ ಕಲ್ಯಾಣದ ಶರಣರ ಬಗ್ಗೆ ಕೇಳುತ್ತ ಕುತೂಹಲಗೊಳ್ಳುತ್ತ ನಡೆಯುತ್ತಿದ್ದಾಳೆ.

ಬಸವಣ್ಣನ ಹಿರಿಮೆಯನ್ನು ಜನ ಹೆಮ್ಮೆಯಿಂದ ಹೇಳುವುದನ್ನು ಆಲಿಸುತ್ತಿದ್ದಾಳೆ. ಹಾಗೆಯೇ ಮಹಾದೇವಿ ಕಲ್ಯಾಣ ತಲುಪುವ ಮುನ್ನವೇ ಅವಳ ಧೀರೋಧಾತ್ತ ಬದುಕು ಕಲ್ಯಾಣ ತಲುಪಿದೆ. ಕಲ್ಯಾಣದಲ್ಲಿ ಶರಣರು ಮಹಾದೇವಿಯನ್ನು ಪರೀಕ್ಷೆಗೆ ಒಳಪಡಿಸಿದರು. ಇದನ್ನು ಮಹಾದೇವಿ ಪ್ರಶ್ನಿಸದೆ ಇರುವಳೇ? ಶೂನ್ಯಪೀಠದ ಪ್ರಭುದೇವರನ್ನು ನನ್ನನ್ನು ಈ ಪರೀಕ್ಷೆಗೆ ಒಳಪಡಿಸಿದ್ದೇಕೆಂದು ಪ್ರಶ್ನಿಸಿದಳು. ಪ್ರಭುದೇವರು ‘‘ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ಮಾಯೆ ನಿನ್ನ ಮುಟ್ಟಲಿಲ್ಲ. ಮರಹು ನಿನ್ನ ಸೋಂಕಲಿಲ್ಲ. ಕಾಮ ನಿನ್ನ ಕೆಡಿಸಲಿಲ್ಲ. ಮಹಾದೇವಿ ನೀನು ವಿಶ್ವಜ್ಯೋತಿ. ದಿಟ್ಟ ಹೆಜ್ಜೆ. ಧೀರ ನುಡಿಯ ತಾಯಿ. ವಿನಯ ವಿಶ್ವಾಸಗಳ ರತ್ನಗಣಿ. ನಿನ್ನ ಪಾದಗಳಿಗೆ ಈ ಸಭೆಯು ನಮೋ ನಮೋ ಎನ್ನುವುದು’’ ಎಂದು ಪ್ರಶಂಸಿಸುತ್ತಾರೆ. 

ಮುಂದುವರಿದು ‘‘ತೇಯ್ದಷ್ಟೂ ಗಂಧದ ಪರಿಮಳ ಪಸರಿಸುವುದು, ಪುಟವಿಕ್ಕಿದಷ್ಟು ಹೊನ್ನು ಥಳಥಳನೆ ಹೊಳೆಯುವುದು. ನಿನ್ನ ಕೀರ್ತಿಯೂ ಲೋಕಕ್ಕೆ ತಿಳಿಯಲೆಂದೇ ಪರೀಕ್ಷೆಗೆ ಒಳಪಡಿಸಲಾಯಿತು.’’ ಕ್ಷಮಿಸುವಂತೆ ಪ್ರಭುದೇವರು ನಮಸ್ಕರಿಸುತ್ತಾರೆ. ಶರಣರು ಮಹಾದೇವಿಯನ್ನು ಅಕ್ಕನೆಂದು ಒಪ್ಪಿಕೊಳ್ಳುತ್ತಾರೆ.ಕಲ್ಯಾಣದ ಶರಣ-ಶರಣೆಯರಿಗೆ ಬಿಸಿ ತುಪ್ಪವಾಗುವ ಅಕ್ಕ, ಕಲ್ಯಾಣ, ಅನುಭವಮಂಟಪದ ಚರ್ಚೆ, ಶರಣರನ್ನೂ ವಿಮರ್ಶೆಗೆ ಒಳಪಡಿಸುತ್ತಾಳೆ. ದಾಸೋಹ, ಕಲ್ಯಾಣದ ರಾಜಕಾರಣದಲ್ಲಿ ಬೇಯುವ ಬಸವಣ್ಣನ ಬಗ್ಗೆ ಮರುಗುತ್ತಾಳೆ. ಅನುಭವ ಮಂಟಪದಲ್ಲಿ ಕಾಯಕ ಕುರಿತಾದ ಚರ್ಚೆಯಲ್ಲಿ ಮಹಾದೇವಿಯು ‘‘ಕಾಯಕ ಎನ್ನಲು ಇಷ್ಟೇಕೆ ನಿಯಮಗಳು ಬೇಕು? ನ್ಯಾಯದ ಕಣ್ಣಿಟ್ಟುಕೊಂಡು, ಲೋಕದ ಹಿತವ ಮನದಲ್ಲಿಟ್ಟುಕೊಂಡು ನಿಷ್ಠೆಯಿಂದ ಬದುಕಿ ತೋರಿದರೆ ಸಾಲದೆ? ಕಾಯಕ ಎನ್ನುವುದೇ ಒಂದು ಅಹಮ್ಮಾಗಿ ನುಸುಳಬಾರದಲ್ಲವೇ?’’ ಬಾಣಬಿಟ್ಟಂತಹ ಅಭಿಪ್ರಾಯ ಅವಳದು. 

ಬಳಿಕ ತನ್ನ ಕಾಯಕವೇನೆಂದು ಪ್ರಶ್ನಿಸಿಕೊಳ್ಳುವ ಅಕ್ಕ, ಕಾಯಕ ನಿರತ ಜೀವಿಗಳ ಕಾಯಕಕ್ಕೆ ನಿಲ್ಲುತ್ತಾಳೆ. ಶರಣ-ಶರಣೆಯರ ಪ್ರಶಂಸೆಗೂ ಪಾತ್ರಳಾಗುತ್ತಾಳೆ. ನಿತ್ಯ ಸಾವಿರಾರು ಜನರಿಗೆ ದಾಸೋಹ ತಯಾರಿಸಲು ಕಲ್ಯಾಣ ಹೇಗೆ ತನ್ನನ್ನು ತೇಯ್ದುಕೊಳ್ಳುತ್ತಿತ್ತು. ಯಾವ ಲೋಪವೂ ಆಗದಂತೆ ಅಣ್ಣನ ಸಹೋದರಿ ನಾಗಮ್ಮ ತೋರುತ್ತಿದ್ದ ಶ್ರದ್ಧೆ. 12ನೇ ಶತಮಾನದಲ್ಲೇ ಸಮಾನತೆಯ ಬೀಜಾಂಕುರ ಮಾಡಿದ ಕಲ್ಯಾಣ ಪಟ್ಟಣ ಅರಿಯುವಲ್ಲಿಯೂ ಈ ಕಾದಂಬರಿ ಮಹತ್ವದ್ದಾಗಿದೆ. ಮೇಲು-ಕೀಳಿನ ಸಮಾಜವನ್ನು ಬದಲಾಯಿಸಲು ಬಸವಣ್ಣ ಕ್ರಾಂತಿಕಾರಕ ಹೆಜ್ಜೆ ಇಟ್ಟ. ಸಾಮಾಜಿಕ ಬದಲಾವಣೆಗೂ ಕಾರಣೀಭೂತನಾದ. ಹಾಗಂತ ಕಲ್ಯಾಣದಲ್ಲಿಯೇ ಎಲ್ಲವನ್ನೂ ಸರಿಪಡಿಸಲು ಬಸವಣ್ಣನಿಂದಲೂ ಸಾಧ್ಯವಾಗಲಿಲ್ಲ ಎಂಬುದು ಈ ಕೃತಿ ಓದಿದರೆ ಅರಿವಾಗುತ್ತದೆ.

ಅಕ್ಕ ಕಲ್ಯಾಣದಿಂದ ಶ್ರೀಶೈಲದತ್ತ ನಡೆಯಲು ಇದೇ ಕಾರಣವಾಗುತ್ತದೆ. ಉಡುತಡಿಯಲ್ಲಿ ಬಂಧು ಬಳಗವನ್ನು ಬಿಟ್ಟು ನಡೆದಾಗ, ಬಯಲಿನಲ್ಲಿ ಗೆಳತಿ ಚಂದ್ರಿಯನ್ನು ತೊರೆದಾಗ ಮತ್ತು ಕಲ್ಯಾಣದ ಶರಣರಿಂದಲೂ ನಿರ್ಗಮಿಸಿದಾಗಲೂ ಯಾವ ನಂಟಿನ ಅಂಟಿಗೂ ಒಳಗಾಗದ ಅಕ್ಕ, ಶ್ರೀಶೈಲಗಿರಿಯ ದಟ್ಟಾರಣ್ಯದಲ್ಲೂ ತನ್ನ ಗುಂಪನ್ನು ಬಿಟ್ಟು ರಾತ್ರಿ ಏಕಾಂಗಿಯಾಗುತ್ತಾಳೆ. ಹುಲ್ಲುಗಾವಲಿನ ದಟ್ಟಾರಣ್ಯದಲ್ಲಿ ಭಾವ ಸಂಗಾತಿ ಚೆನ್ನ ಮಲ್ಲಯ್ಯನನ್ನು ಧ್ಯಾನಿಸುತ್ತ ಹೆಜ್ಜೆಯಿಡುತ್ತಾಳೆ. ಹುಲಿ ಹಾದಿಯಲ್ಲಿ ಚೇಳು ಕಚ್ಚಿದಾಗ ಅಕ್ಕ ಪಡುವ ಯಾತನೆಯೂ ಕಣ್ಣೀರು ತರುತ್ತದೆ. ಚೆಂಚುಮಲ್ಲಯ್ಯನ ಒಕ್ಕಲುಗಳ ಕಕ್ಕುಲಾತಿಗೂ ಮರುಳಾಗದೆ ಚೆನ್ನಮಲ್ಲಿಕಾರ್ಜುನನಲ್ಲಿ ಲೀನವಾಗುತ್ತಾಳೆ. ಭಾವಶಿವನ ಸ್ಮರಣೆಯಲ್ಲೇ ಕದಳಿ ಗುಹೆಯಲ್ಲಿ ಐಕ್ಯವಾಗುತ್ತಾಳೆ. ಅಕ್ಕ ಅಮರಳಾಗುತ್ತಾಳೆ. ಉಳಿದವರಿಗೆ ಬೆರಗಾಗಿ ಉಳಿಯುತ್ತಾಳೆ.

ಓದಿದಾಗ ದರ್ಶನ ಲಭಿಸುವ ಕನ್ನಡದ ಕೃತಿಗಳ ಸಾಲಿಗೆ ಎಚ್.ಎಸ್.ಅನುಪಮಾ ಅವರ ‘ಬೆಳಗಿನೊಳಗು’ ಕಾದಂಬರಿಯೂ ಸೇರಿದೆ. ಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ಸಾಹಿತಿ ದೇವನೂರ ಮಹಾದೇವರ ‘ಕುಸುಮಬಾಲೆ’ ಕಾದಂಬರಿಗಳನ್ನು ಓದಿದಾಗ ಪಡೆದ ಅನುಭೂತಿಯೂ ಈ ಕಾದಂಬರಿಯಲ್ಲೂ ಲಭಿಸಿದೆ.

ಪುಸ್ತಕ: ಬೆಳಗಿನೊಳಗು

ಲೇ: ಡಾ. ಎಚ್.ಎಸ್. ಅನುಪಮಾ

ಪ್ರಕಾಶನ: ಲಡಾಯಿ ಪ್ರಕಾಶನ

ಪುಟಗಳು: 776

ಬೆಲೆ: 650 ರೂ.

ಮೊ: 9480286844

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top