-

ಗುಜರಾತ್ ನರಮೇಧದಲ್ಲಿ ಅರಳಿದ ಮೋದಿ-ಅದಾನಿ ದೋಸ್ತಾನ ಮತ್ತು ಭಾರತದ ಅಧಃಪತನ

-

Photo: PTI

ನರೇಂದ್ರ ಮೋದಿಯವರ ಹಿಂದುತ್ವ ದ್ವೇಷ ರಾಜಕಾರಣದ ಆರ್ಥಿಕ ನೀತಿ ಅದಾನಿ ಪ್ರತಿನಿಧಿಸುವ ಅತ್ಯಂತ ಭ್ರಷ್ಟಾತಿಭ್ರಷ್ಟ ಹಾಗೂ ಮೋಸ ವಂಚನೆಯ ಬಂಡವಾಳಶಾಹಿ ಆರ್ಥಿಕತೆಯೇ ಆಗಿದೆ. ಹಾಗೆಯೇ ಅದಾನಿ ಪ್ರತಿನಿಧಿಸುವ ಕಾರ್ಪೊರೇಟ್ ಉದ್ಯಮಪತಿಗಳ ರಾಜಕೀಯ ಹಿಂದುತ್ವವಾದಿ ದ್ವೇಷ ರಾಜಕಾರಣವಾಗಿದೆ. ಇವೆರಡಕ್ಕೂ ಹೊಕ್ಕಳಬಳ್ಳಿ ಸಂಬಂಧವಿದೆ. ಒಂದನ್ನು ಆಧರಿಸಿ ಇನ್ನೊಂದು ಬೆಳೆದಿದೆ.

ಹೀಗಾಗಿ ಈ ಮೋದಿ-ಅದಾನಿ ಮೈತ್ರಿಯೂ ರೂಪಕಾರ್ಥದಲ್ಲಿ ಈ ದೇಶದ ಆರ್ಥಿಕ ಮತ್ತು ರಾಜಕೀಯದ ಅಧಃಪತನದ ಸಂಕೇತವೇ ಆಗಿದೆ.

ಅದಾನಿ ಶೇರು ಹಗರಣದ ಹಿಂದಿರುವ ನಿಗೂಢಗಳು ಒಂದೊಂದಾಗಿ ಬಯಲಾಗುತ್ತಿರುವಂತೆ ಇದು ಕೇವಲ ಅದಾನಿ ಹಗರಣವಲ್ಲ, ಬದಲಿಗೆ ಮೋದಿ ಸರಕಾರ-ಅದಾನಿ ಜಂಟಿ ಬ್ರಹ್ಮಾಂಡ ಭ್ರಷ್ಟಾಚಾರವೆನ್ನುವುದು ಬಯಲಿಗೆ ಬರುತ್ತಿದೆ. ಏಕೆಂದರೆ ಅದಾನಿ ಸಮೂಹವು ಅಸ್ತಿತ್ವದಲ್ಲಿದ್ದ ಎಲ್ಲಾ ಕಾನೂನುಗಳನ್ನು ಮುರಿದು ಶೇರುಗಳ ಬೆಲೆಯನ್ನು ಏರಿಕೆ ಮಾಡಿಕೊಳ್ಳುತ್ತಿರುವಾಗ ಮೋದಿ ಸರಕಾರದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಿಸಲ್ಪಡುವ ಸೆಬಿ, ಆರ್‌ಬಿಐ, ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಹಾಗೂ ಇನ್ನಿತರ ರೆಗ್ಯುಲೇಟರಿ ಸಂಸ್ಥೆಗಳು ಗಾಂಧಾರಿ ಕುರುಡನ್ನು ಅನುಸರಿಸಿರುವುದು ಸ್ಪಷ್ಟವಾಗಿದೆ. ಅಷ್ಟು ಮಾತ್ರವಲ್ಲ ಕುಸಿಯುತ್ತಿರುವ ಅದಾನಿ ಶೇರುಗಳ ಬೆಲೆಯನ್ನು ಏರಿಸಲು ಈಗಲೂ ಎಲ್‌ಐಸಿ, ಎಸ್‌ಬಿಐ, ಎಸ್‌ಬಿಐ ನೌಕರರ ಪಿಂಚಣಿ ನಿಧಿ ಇನ್ನಿತ್ಯಾದಿಗಳು ಅದಾನಿ ಶೇರುಗಳಲ್ಲಿ ಹೂಡುತ್ತಿರುವುದು ಮೋದಿ ಸರಕಾರದ ನೇರ ನಿರ್ದೇಶನದ ಮೇರೆಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಗಾಧ ವಿದ್ವತ್ತಿನ ಅಗತ್ಯವೇನಿಲ್ಲ.

ಅದೇ ರೀತಿ ಅದಾನಿ ಮತ್ತವರ ಜೊತೆಗೆ ಅಂಬಾನಿಯವರು ಮೋದಿಯನ್ನು ಪ್ರಧಾನಿಯಾಗಿಯೂ ಮತ್ತು ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಶತಾಯ ಗತಾಯ ಉಳಿಸಿಕೊಳ್ಳಲು ಅರ್ಥಾತ್ ದೇಶಾದ್ಯಂತ ಆಪರೇಷನ್ ಕಮಲವನ್ನು ಯಶಸ್ವಿಯಾಗಿಸಲು, ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನೆಲ್ಲಾ ಬುಲ್ಡೋಜ್ ಮಾಡಲು ಕಳೆದ ಕೆಲವು ವರ್ಷಗಳಲ್ಲಿ ಏನಿಲ್ಲವೆಂದರೂ ಕನಿಷ್ಠ ರೂ. ೮ ಸಾವಿರ ಕೋಟಿ ಸುರಿದಿದ್ದಾರೆ.

ಹೀಗಾಗಿ ಈ ಮೋದಿ-ಅದಾನಿ ದೋಸ್ತಿಯ ಕಥನ ಹಿಂದುತ್ವ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿಗಳ ಜಂಟಿ ಆಕ್ರಮಣದ ಕಥನವೂ ಆಗಿದೆ. ದುಷ್ಟ ರಾಜಕೀಯ- ಭ್ರಷ್ಟ ಬಂಡವಾಳಶಾಹಿ ಮೈತ್ರಿಕೂಟವು ಭಾರತದ ಪ್ರಜಾತಂತ್ರವನ್ನು ಹೈಜಾಕ್ ಮಾಡಿರುವ ಕಥನವಾಗಿದೆ.

ಹೀಗಾಗಿ ಮೋದಿ-ಅದಾನಿ ಮೈತ್ರಿಯ ಇತಿಹಾಸ ಹಾಗೂ ಅದು ಪ್ರಾರಂಭಿಸಿದ ಅನೈತಿಕ-ಆಕ್ರಮಣಕಾರಿ ರಾಜಕೀಯ ಮತ್ತು ಆರ್ಥಿಕತೆಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಪ್ರಸಕ್ತ ವಿದ್ಯಮಾನಗಳು ಹಾಗೂ ಕಾದಿರುವ ಭವಿಷ್ಯಗಳು ಇನ್ನಷ್ಟು ಸ್ಪಷ್ಟವಾಗಿ ಆರ್ಥವಾದೀತು. ಹಿಂಡನ್‌ಬರ್ಗ್ ವರದಿ ಪ್ರಕಟವಾಗುವ ಮುಂಚಿನಿಂದಲೂ ಮೋದಿ ಸರಕಾರ ಅದಾನಿ ಮತ್ತು ಅದರಂತಹ ಕಂಪೆನಿಗಳ ಅವ್ಯವಹಾರಗಳನ್ನು ರಕ್ಷಿಸುತ್ತಿರುವುದು ಮಾತ್ರವಲ್ಲದೆ ಪ್ರೋತ್ಸಾಹಿಸುತ್ತಿರುವ ಬಗ್ಗೆ , ಈ ಮೈತ್ರಿಯ ಇತಿಹಾಸದ ಬಗ್ಗೆ ಜೆಸ್ಸಿ ಜೋಸೆಫ್, ಪರೋಂಜಯ್ ಗುಹ ತಾಕುರ್ತಾ, ನೀಲಾಂಜನ್ ಮುಖ್ಯೊಪಾಧ್ಯಾಯ, ಕ್ರಿಸ್ಟೊಫೆ ಜಾಫರ್ಲೆ ಮುಂತಾದ ಹಿರಿಯ, ವೃತ್ತಿಪರಿಣಿತ ಹಾಗೂ ಜನಪರ  ಚಿಂತಕರು ಮತ್ತು ಪತ್ರಕರ್ತರು ಈ ವಿಷಯದ ಬಗ್ಗೆ ಅಪಾರ ಅಧ್ಯಯನ ಮಾಡಿ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿಷ್ಠಿತ ಪತ್ರಿಕೆಗಳಾದ Caravan, The Wire, Newsclick,  EPWಗಳು ಈ ವಿಷಯದ ಬಗ್ಗೆ ಸುದೀರ್ಘ ಅದ್ಯಯನ ವರದಿಗಳನ್ನು ಪ್ರಕಟಿಸಿವೆ.

ಅವುಗಳೆಲ್ಲವನ್ನು ಗಮನಿಸಲಾಗದ ಆಸಕ್ತರು ಇತಿಹಾಸಕಾರ ಮತ್ತು ಹಿರಿಯ ಪತ್ರಕರ್ತ ನೀಲಾಂಜನ್ ಮುಖ್ಯೋಪಾಧ್ಯಾಯ ಅವರು ಬರೆದಿರುವ Narendra Modi: The Man, The Times ಮತ್ತು ಹಿರಿಯ ಪತ್ರಕರ್ತ ಜೆಸ್ಸಿ ಜೋಸೆಫ್ ಬರೆದಿರುವ A Feast Of Vultures  ಹಾಗೂ ವಿದ್ವಾಂಸ ಕ್ರಿಸ್ಟೊಫೆ ಜಾಫರ್ಲೆ ಅವರ Modi’s India- Rise Of Hindu Nationalism and Ethnic Democracy  ಪುಸ್ತಕಗಳಲ್ಲಿ ಸಂಗ್ರಹರೂಪದಲ್ಲಿ ಕೊಟ್ಟಿರುವ ಈ ಅವಧಿಯ ಇತಿಹಾಸವನ್ನು ಗಮನಿಸಬಹುದು.

ಮಾರುಕಟ್ಟೆ ಆರ್ಥಿಕತೆ ಮತ್ತು ಹಿಂದುತ್ವದ ರಾಜಕಾರಣದ ಹೊಸ್ತಿಲಲ್ಲಿ

ಮೋದಿಯವರು ಅವರೇ ಹೇಳಿಕೊಳ್ಳುವಂತೆ ಚಿಕ್ಕಂದಿನಲ್ಲೇ ಮನೆ ತೊರೆದು ಗುಜರಾತಿನ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ಅಡ್ವಾಣಿಯವರ ರಥಯಾತ್ರೆಯ ಹಿಂದೆಮುಂದೆ ಮುಂಚೂಣಿಗೆ ಬಂದಿದ್ದರು. ಹಾಗೆಯೇ ಅದರ ಭಾಗವಾಗಿ ಗುಜರಾತಿನ ಬಿಜೆಪಿ ರಾಜಕಾರಣದಲ್ಲೂ ಸಕ್ರಿಯರಾಗಿದ್ದರೂ ಗುಜರಾತಿನ ದುರ್ಬಲ ಬಿಜೆಪಿಯ ಒಳಜಗಳಗಳಿಂದ ದಿಲ್ಲಿ ಕಾರ್ಯಾಲಯಕ್ಕೆ ಅಟ್ಟಲ್ಪಟ್ಟಿದ್ದರು.

ಅದಾನಿಯವರು ಬಾಲ್ಯದಲ್ಲೇ ಶಿಕ್ಷಣ ತೊರೆದು ಸಣ್ಣಮಟ್ಟದ ವ್ಯಾಪಾರದಲ್ಲಿ ತೊಡಗಿದ್ದರೂ, ೧೯೮೮ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿದ ರಫ್ತು-ಆಮದು ಉದಾರೀಕರಣದ ನೀತಿಯ ಲಾಭವನ್ನು ಪಡೆದು ಪ್ಲಾಸ್ಟಿಕ್ ಆಮದು ಉದ್ಯಮದಲ್ಲಿ ಲಾಭ ಕಾಣತೊಡಗಿದರು. ಹಾಗೆಯೇ ವಜ್ರದ ಆಮದು-ರಫ್ತುಗಳ ವ್ಯವಹಾರಗಳಲ್ಲೂ ಪ್ರಾರಂಭಿಕ ತರಬೇತಿ ಪಡೆಯುತ್ತಿದ್ದರು. ೧೯೯೦ರ ದಶಕದಲ್ಲಿ ಚಿಮನ್‌ಬಾಯಿ ಪಟೇಲ್ ನೇತೃತ್ವದ ಬಿಜೆಪಿ ಬೆಂಬಲಿತ ಜನತಾದಳ ಸರಕಾರವು ಅದಾನಿಗೆ ಮುಂದ್ರಾ ಕಡಲತೀರದಲ್ಲಿ ಉಪ್ಪುತಯಾರಿಸಲು ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡಿತು. ಅದರ ಬದಲಿಗೆ ಆತ ಆಲ್ಲಿ ಒಂದು ಬಂದರನ್ನು ಕಟ್ಟಿ ಇಂಡೋನೇಶ್ಯದಿಂದ ಕಲ್ಲಿದ್ದಲು ಆಮದು ವ್ಯವಹಾರ ಪ್ರಾರಂಭಿಸಿದ್ದರು.

ಹೀಗೆ ಭಾರತವು ತನ್ನ ಗಣರಾಜ್ಯದ ಸಮಾಜವಾದಿ ಆಶಯಗಳಿಗೆ ವ್ಯತಿರಿಕ್ತವಾಗಿ ಮಾರುಕಟ್ಟೆ ಆರ್ಥಿಕತೆಗೆ ಮತ್ತು ಧರ್ಮ ನಿರಪೇಕ್ಷತೆಯ ಬದಲಿಗೆ ಹಿಂದೂ ಪಾರಮ್ಯದ ರಾಜಕಾರಣಕ್ಕೆ ನಿಧಾನವಾಗಿ ಹೊರಳಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಈ ಇಬ್ಬರು ಗುಜರಾತಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮಧ್ಯಮಗಾತ್ರದ ನಾಯಕರಾಗಿ ಬೆಳೆದು ಎತ್ತರಕ್ಕೆ ನೆಗೆಯುವ ಅವಕಾಶಕ್ಕೆ ಕಾಯುತ್ತಿದ್ದರು.

ಅಂಥ ಸಂದರ್ಭವನ್ನು ೨೦೦೨ರ ಗುಜರಾತ್ ನರಮೇಧ ಒದಗಿಸಿತು.

2002ರ ಗುಜರಾತ್ ನರಮೇಧ ಮತ್ತು ದಿಗ್ಭ್ರಾಂತವಾದ ಭಾರತ

ಒಳಜಗಳದಿಂದ ಕೈಗೆ ಸಿಕ್ಕ ಅಧಿಕಾರವನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದ ಕೇಶುಭಾಯ್ ಪಟೇಲ್ ನೇತೃತ್ವದ ಗುಜರಾತ್ ಬಿಜೆಪಿಯನ್ನು ಉಳಿಸಲು ಮತ್ತು ಬರಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಲು ಆ ವೇಳೆಗಾಗಲೇ ತನ್ನ ಆಕ್ರಮಣಕಾರಿ ಹಿಂದುತ್ವ ರಾಜಕೀಯದಿಂದ ತಕ್ಕಮಟ್ಟಿಗೆ ಆರೆಸ್ಸೆಸ್-ಬಿಜೆಪಿ ವಲಯದಲ್ಲಿ ಹೆಸರು ಮಾಡಿದ ನರೇಂದ್ರ ಮೋದಿಯನ್ನು ಬಿಜೆಪಿ ಗುಜರಾತಿನ ಮುಖ್ಯಮಂತ್ರಿಯಾಗಿ 2001ರಲ್ಲಿ ನೇಮಿಸಿತು. ಆಗ ಮೋದಿಯ ಮುಂದಿದ್ದ ಪ್ರಧಾನ ಸವಾಲು 2002ರಲ್ಲಿ ನಡೆಯಬೇಕಿದ್ದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ದ್ವೇಷ ರಾಜಕಾರಣ. ಮುಸ್ಲಿಮರ ಮೇಲೆ ಆಕ್ರಮಣ ಹಾಗೂ ಸಮಾಜದ ಕೋಮು ಧ್ರುವೀಕರಣ. ಇವೆಲ್ಲಾ ಆರೆಸ್ಸೆಸ್‌ನ ಕಾರ್ಯತಂತ್ರದ ಭಾಗವೇ ಆಗಿದ್ದರೂ ಅದರ ಸಂಪೂರ್ಣ ಹಾಗೂ ದೀರ್ಘಕಾಲೀನ ಪ್ರಯೋಜನವಾಗುವಂತೆ ಪ್ರಯೋಗಿಸಿದ್ದು ಮಾತ್ರ ಮೋದಿ ನೇತೃತ್ವದಲ್ಲಿ-ಗುಜರಾತಿನಲ್ಲಿ.

೨೦೦೨ರ ಫೆಬ್ರವರಿಯಲ್ಲಿ ಗೋಧ್ರಾದಲ್ಲಿ ಸಬರಮತಿ ರೈಲಿನ ಕೋಚಿಗೆ ಬೆಂಕಿಬಿದ್ದು ೫೬ ಜನರು ಸಾವಿಗೀಡಾದ ಸಂದರ್ಭವನ್ನು ಮೋದಿನೇತೃತ್ವದ ಬಿಜೆಪಿ ಸರಕಾರ ಮತ್ತು ಸಂಘಪರಿವಾರ ಇಡೀ ಗುಜರಾತಿನ ಶಾಶ್ವತ ಕೋಮು ಧ್ರುವೀಕರಣಕ್ಕೆ ಮತ್ತು ಹಿಂದುತ್ವದ ನರಮೇಧ ಕಾರ್ಯತಂತ್ರಕ್ಕೆ ಯಶಸ್ವಿಯಾಗಿ ಬಳಸಿಕೊಂಡಿತು. ಗೋಧ್ರೋತ್ತರ ಪ್ರಭುತ್ವ ಬೆಂಬಲಿತ, ಪ್ರಾಯೋಜಿತ ಹಾಗೂ ಸಂಘಪರಿವಾರ ಜಾರಿ ಮಾಡಿದ ಆ ನರಮೇಧದಲ್ಲಿ ೩,೦೦೦ಕ್ಕೂ ಹೆಚ್ಚು ಅಮಾಯಕ ಮುಸ್ಲಿಮರ ಹತ್ಯೆ, ಸಾಮೂಹಿಕ ಅತ್ಯಾಚಾರಗಳು ನಡೆದವು. ೨೦೦೨ರ ಫೆಬ್ರವರಿ ೨೮, ಮಾರ್ಚ್ ೧ ಮತ್ತು ೨ರಂದು ಇಡೀ ಗುಜರಾತಿನಲ್ಲಿ ನಾಗರಿಕ ಸಮಾಜ, ಸರಕಾರ ಮತ್ತು ಕಾನೂನು ಸಂಪೂರ್ಣವಾಗಿ ಕಣ್ಮರೆಯಾಗಿತ್ತು. ಸೇನೆಯನ್ನು ಕರೆಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತು.

ಈ ಎಲ್ಲಾ ವಿವರಗಳು ಅಳಿಸಿಹಾಕಲಾಗದಷ್ಟು ಭಾರತದ ಇತಿಹಾಸದ ಕಣ್ಣೀರಿನಲ್ಲಿ ದಾಖಲಾಗಿದೆ.

ಈ ನರಮೇಧವನ್ನು ತಡೆಯುವಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ತೋರಿದ ಉದ್ದೇಶಪೂರ್ವಕ ನಿರ್ಲಕ್ಷ್ಯ ಹಾಗೂ ಪರೋಕ್ಷ ಉತ್ತೇಜನ ಇವೆಲ್ಲವೂ ಇಡೀ ಭಾರತವನ್ನು ದಿಗ್ಭ್ರಾಂತಗೊಳಿಸಿತ್ತು.

ಹಾಗೆಯೇ ಕೇವಲ ತಮ್ಮ ಲಾಭದ ಬಗ್ಗೆ ಮಾತ್ರ ಕಾಳಜಿಯಿಡುವ ಭಾರತದ ದೊಡ್ಡ ಕಾರ್ಪೊರೇಟ್ ಉದ್ಯಮಪತಿಗಳ ಅಂತಃಸಾಕ್ಷಿಯೂ ತಾತ್ಕಾಲಿಕವಾಗಿ ಕದಡಿತು.

ಗುಜರಾತ್ ನರಮೇಧ-ಮೋದಿಯ ಮೇಲೆ ಕಾರ್ಪೊರೇಟ್ ಕುಲದ (ತಾತ್ಕಾಲಿಕ!) ದಾಳಿ!

ಗುಜರಾತ್ ನರಮೇಧ ಇಡೀ ಭಾರತದ ಅಂತಃಸಾಕ್ಷಿಯನ್ನು ಕಲಕಿತ್ತು. ಇದರಿಂದಾಗಿ ಯಾವುದೇ ಸರಕಾರ ಬಂದರೂ ತಮ್ಮ ಲಾಭವನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಕಾರ್ಪೊರೇಟ್ ಕುಲವೂ ಮೊತ್ತ ಮೊದಲಬಾರಿಗೆ ಬಾಯಿಬಿಟ್ಟು ಮೋದಿ ಸರಕಾರವನ್ನು ಖಂಡಿಸಲಾರಂಭಿಸಿತ್ತು.

೨೦೦೨ರ ಎಪ್ರಿಲ್‌ನಲ್ಲಿ ಭಾರತದ ಬಹುದೊಡ್ಡ ಉದ್ಯಮಪತಿಗಳ ಒಕ್ಕೂಟವಾದ ಸಿಐಐ, ಸಭೆ ಸೇರಿ ಒಕ್ಕೊರಲಿಂದ ಗುಜರಾತ್ ನರಮೇಧವನ್ನು ಖಂಡಿಸಿತು. ಆ ಸಭೆಯಲ್ಲಿ ಅಂದು ಮಾತಾಡಿದ ಪುಣೆಯ ಥರ್ಮೆಕ್ಸ್ ಕಂಪೆನಿಯ ಮುಖ್ಯಸ್ಥೆಯಾದ ಅನು ಆಘಾ ಅವರು ಮಾಡಿದ ಭಾಷಣವನ್ನು ಈಗಲೂ ಕಾರ್ಪೊರೇಟ್ ಉದ್ಯಮಿಯೊಬ್ಬರು ಮಾಡಿದ ಅತ್ಯುತ್ತಮ ಮಾನವತಾವಾದಿ ಭಾಷಣ ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ಮಾತಿಗೆ ಯಾವುದೇ ಬಟ್ಟೆ ತೊಡಿಸದೆ ಗುಜರಾತ್ ನರಮೇಧದಲ್ಲಿ ಮೋದಿ ಸರಕಾರದ ಪಾತ್ರವನ್ನು ವಿವರಿಸಿ ಖಂಡಿಸಿದ್ದು ಮಾತ್ರವಲ್ಲದೆ ಕಾರ್ಪೊರೇಟ್ ಕುಲವು ತಮ್ಮ ಸಹಜ ಲಾಭಾಸಕ್ತಿಯಿಂದ ಒಮ್ಮೆಯಾದರೂ ಹೊರಬಂದು ಇಂತಹ ಬೆಳವಣಿಗೆಯನ್ನು ಖಂಡಿಸಬೇಕೆಂದು ಕರೆಕೊಟ್ಟರು. ಅಂದಿನ ಸಭೆಯಲ್ಲಿ ಹಾಜರಿದ್ದ ಅಜೀಂ ಪ್ರೇಂಜಿ, ನಾರಾಯಣಮೂರ್ತಿ, ಗೋದ್ರೆಜ್, ಬಜಾಜ್ ಇನ್ನಿತರ ಎಲ್ಲಾ ಕಾರ್ಪೊರೇಟ್ ದಿಗ್ಗಜರು ಕೂಡ ಗುಜರಾತ್ ನರಮೇಧವನ್ನು ಮತ್ತು ಮೋದಿಯನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದರು. ಅಷ್ಟು ಮಾತ್ರವಲ್ಲ, ಇಂತಹ ಸಾಮಾಜಿಕ ಉದ್ವಿಗ್ನ ಸಂದರ್ಭದಲ್ಲಿ ಗುಜರಾತಿನಲ್ಲಿ ಬಂಡವಾಳ ಹೂಡಿಕೆ ಮಾಡುವುದರ ಬಗ್ಗೆ ಎರಡು ಮೂರುಬಾರಿ ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆದರೆ ಆನಂತರ ೨೦೦೨ರ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲಿ ಮೋದಿ ನೇತೃತದ ಬಿಜೆಪಿ ಅಗಾಧ ಬಹುಮತದೊಂದಿಗೆ ಆರಿಸಿ ಬಂದಿತ್ತು. ಗುಜರಾತ್ ನರಮೇಧದ ಹಿನ್ನೆಲೆಯಲ್ಲಿ ‘ಹಿಂದೂ ಹೃದಯ ಸಾಮ್ರಾಟ’ನಾಗಿ ಮತ್ತೊಮ್ಮೆ ಮೋದಿ ಗಣರಾಜ್ಯದ ಗೋರಿಯ ಮೇಲೆ ಅಭಿಷಿಕ್ತರಾದರು. ಜನರ ಮನ್ನಣೆ ಪಡೆದಿರುವುದರಿಂದ ಕಾರ್ಪೊರೇಟುಗಳೂ ತನ್ನ ಬಗ್ಗೆ ಆದರ ತೋರಬಹುದೆಂದು ಮೋದಿ ನಿರೀಕ್ಷಿಸಿದ್ದರು. ಕೆಲವು ಕಾರ್ಪೊರೇಟ್ ಪತಿಗಳು ತಮ್ಮ ರಾಗವನ್ನು ಬದಲಿಸಿಯೂ ಇದ್ದರು.

ಆದರೆ ೨೦೦೩ರ ೆಬ್ರವರಿಯಲ್ಲಿ ದಿಲ್ಲಿ ಮತ್ತು ಮುಂಬೈನಲ್ಲಿ ನಡೆದ ಸಿಐಐನ ಸಭೆಗಳಲ್ಲಿ ಗೋದ್ರೆಜ್ ಮತ್ತು ರಾಹುಲ್ ಬಜಾಜ್‌ನಂತಹ ಉದ್ಯಮಿಗಳು ತಮ್ಮ ಆಕ್ಷೇಪಣೆಗಳನ್ನು ಮುಂದುವರಿಸಿದರು. ಚುನಾವಣೆಯಲ್ಲಿ ನರಮೇಧದ ರಾಜಕಾರಣಕ್ಕೆ ಅಭೂತಪೂರ್ವ ಮನ್ನಣೆ ಪಡೆದರೂ ಪತ್ರಿಕೆಗಳು ಮತ್ತು ಮಾಧ್ಯಮಗಳು ಈಗಲೂ ಆಕ್ಷೇಪಣೆ ಮುಂದುವರಿಸುತ್ತಾ ತಮ್ಮ ಸರಕಾರವನ್ನು ಮತ್ತು ತಮ್ಮ ನಾಯಕತ್ವವನ್ನು ದಾಳಿ ಮಾಡಿ ಮೂಲೆಗುಂಪು ಮಾಡುತ್ತಿರುವುದರ ಬಗ್ಗೆ ಮೋದಿಯವರು ಕೆಂಡಾಮಂಡಲವಾಗುತ್ತಾ ಹೋದರು.

ಆಗ ಅವರ ಸಹಾಯಕ್ಕೆ ಮತ್ತು ಬೆಂಬಲಕ್ಕೆ ಬಂದ ಮತ್ತೊಬ್ಬ ಗುಜರಾತಿ ಕಾರ್ಪೊರೇಟ್‌ಪತಿ ಈ ಅದಾನಿ.

‘ಆಪತ್ತಿ’ಗಾದ ಅದಾನಿ - ಸಿಐಐಗೆ ಪರ್ಯಾಯವಾಗಿ ಆರ್‌ಜಿಜಿ!

ಹೀಗೆ ಮೋದಿ ಕಾರ್ಪೊರೇಟ್ ಮತ್ತು ಮಾಧ್ಯಮ ಲೋಕದಿಂದ ಪರೋಕ್ಷ ಬಹಿಷ್ಕಾರವನ್ನು ಎದುರಿಸುತ್ತಿದ್ದ ಮೋದಿಯ ಬೆಂಬಲಕ್ಕೆ ನಿಂತಿದ್ದು ಅದಾನಿ. 2003ರಲ್ಲಿ ಕಾರ್ಪೊರೇಟ್ ನಾಯಕರ ಸಂಸ್ಥೆಯಾಗಿದ್ದ ಸಿಐಐ ಮೋದಿಯವರನ್ನು ಮಾನ್ಯ ಮಾಡಲು ಒಪ್ಪದಿದ್ದಾಗ ಅದಾನಿಯವರು ಅದಕ್ಕೆ ಪರ್ಯಾಯವಾಗಿ ಗುಜರಾತಿನ ಮೂಲದ ಕಾರ್ಪೊರೇಟ್ ಉದ್ಯಮಿಗಳನ್ನು ಕಟ್ಟಿಕೊಂಡು Resurgent Group Of Gujarat (ಆರ್‌ಜಿಜಿ) ಎಂಬ ಪರ್ಯಾಯ ಕೂಟವನ್ನು ಸ್ಥಾಪಿಸಿ ಅದರ ನಾಯಕತ್ವ ವಹಿಸಿಕೊಂಡರು. ನರೇಂದ್ರ ಮೋದಿಯವರು ಹಿಂದುತ್ವವಾದಿ ದ್ವೇಷ ರಾಜಕಾರಣದ ಬಗ್ಗೆ ಕಾರ್ಪೊರೇಟ್ ಉದ್ಯಮಿಗಳು ಮಾಡಿದ ಟೀಕೆಯನ್ನು ಗುಜರಾತ್ ರಾಜ್ಯದ ಮೇಲೆ ಮತ್ತು ಗುಜರಾತಿನ ಅಸ್ಮಿತೆಯ ಮೇಲೆ ಮಾಡಿದ ದಾಳಿ ಎಂದು ಚಿತ್ರಿಸಲಾರಂಭಿಸಿದರು. ಈ ಕೂಟಕ್ಕೆ ನಿರ್ಮಾ ಸಂಸ್ಥೆಯ ಮಾಲಕ ಕರ್ಸೆನ್ ಭಾಯ್ ಪಟೇಲ್, ಕ್ಯಾಡಿಲಾ ಫಾರ್ಮಸುಟಿಕಲ್ಸ್ ಸಂಸ್ಥೆಯ ಮೋದಿ, ಅಶಿಮ ಗುಂಪಿನ ಚಿಂತನ್ ಪಾರೀಕ್, ಬಕೇರಿ ಗುಂಪಿನ ಅನಿಲ್ ಬಕೇರಿ ಇನ್ನಿತ್ಯಾದಿ ಗುಜರಾತ್ ಮೂಲದ ಉದ್ಯಮಿಗಳು ಅತೀ ಹೆಚ್ಚು ಸಕ್ರಿಯರಾದರು. ಅವರ ನಾಯಕತ್ವವನ್ನು ಅದಾನಿ ವಹಿಸಿಕೊಂಡರು.

ಅಷ್ಟು ಮಾತ್ರವಲ್ಲ ಗುಜರಾತ್ ಸರಕಾರ ಆ ನಂತರ ನಡೆಸುತ್ತಿದ್ದ ಹೂಡಿಕೆದಾರ ಸಮ್ಮೇಳನದ ಸಕಲ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದ ಅದಾನಿಯವರು ಆಗ ನಡೆಸಲಾಗುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಾಯೋಜಿಸುತ್ತಿದ್ದರು. ಇವೆಲ್ಲದರಿಂದ ಕ್ರಮೇಣವಾಗಿ ನರಮೇಧದ ಮೋದಿಯ ಇಮೇಜನ್ನು ಸಹ್ಯವಾಗಿಸಿ ಸರ್ವಮಾನ್ಯಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ೨೦೧೩ರಲ್ಲಿ ಅಮೆರಿಕದ ವಾರ್ಟನ್ ಇಕಾನಾಮಿಕ್ ಫೋರಂ ಸಂಸ್ಥೆ ಮೋದಿಯವರಿಗೆ ಕೊಟ್ಟ ಆಹ್ವಾನವನ್ನು ರದ್ದುಗೊಳಿಸಿದಾಗ ಅದಾನಿಯವರು ಆ ಸಮ್ಮೇಳನಕ್ಕೆ ತಾವು ಕೊಟ್ಟಿದ್ದ ಪ್ರಾಯೋಜಕತ್ವವನ್ನೇ ರದ್ದುಗೊಳಿಸಿ ತಮ್ಮ ಮೈತ್ರಿಯನ್ನು ಮೆರೆದರು.

ಗುಜರಾತ್ ನರಮೇಧದ ಬಗ್ಗೆ ಮತ್ತು ಅದರಲ್ಲಿ ಮೋದಿ ಸರಕಾರದ ಪಾತ್ರದ ಬಗ್ಗೆ ಮಾತನಾಡುವುದು ಹೆಚ್ಚು ಕಡಿಮೆ ಗುಜರಾತ್ ವಿರೋಧಿ ಎಂಬಂತೆ ಮಾಡುವಲ್ಲಿ ಈ ಗುಂಪು ಯಶಸ್ವಿಯಾಯಿತು ಮತ್ತು ಗುಜರಾತ್ ನರಮೇಧ ಅಂತಹ ದೊಡ್ಡ ಸಂಗತಿಯೇ ಅಲ್ಲ, ಅದನ್ನು ಗುಜರಾತ್ ವಿರೋಧಿ ಮಾಧ್ಯಮಗಳು ಮತ್ತು ಮುಸ್ಲಿಮ್ ಪರ ಮನಸ್ಸುಗಳು ಅಪಪ್ರಚಾರ ಮಾಡುತ್ತಿವೆ ಎಂದು ಗುಜರಾತಿನ ಜನರನ್ನು ಒಪ್ಪಿಸಿ ಗುಜರಾತ್ ಸಮಾಜದಲ್ಲಿ ಇದ್ದ ಅಲ್ಪಸ್ವಲ್ಪಅಪರಾಧಿ ಭಾವವನ್ನು ಇಲ್ಲದಂತೆ ಮಾಡಿ ಮತ್ತಷ್ಟು ಮೃಗೀಯಗೊಳಿಸಿದರು.

ಈ ಆರ್‌ಜಿಜಿ ಗುಂಪಿನ ಸಹಕಾರದೊಂದಿಗೆ ಮೋದಿ ಸರಕಾರ ೨೦೦೪ರಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ‘ವೈಬ್ರೆಂಟ್ ಗುಜರಾತ್’ ಎಂಬ ಹೂಡಿಕೆದಾರರ ಸಮ್ಮೇಳನವನ್ನು ಆಯೋಜಿಸಲಾರಂಭಿಸಿತು ಹಾಗೂ ಗುಜರಾತಿನಲ್ಲಿ ಹೂಡಿಕೆ ಮಾಡುವ ಕಾರ್ಪೊರೇಟುಗಳಿಗೆ ಬೇರೆ ಯಾವ ರಾಜ್ಯಗಳಲ್ಲೂ ಇರದ ರಿಯಾಯಿತಿ, ವಿನಾಯಿತಿ ಮತ್ತು ಪ್ರೋತ್ಸಾಹ ಧನ ಮತ್ತು ಲಾಭದಾಯಕತೆಗಳನ್ನು ಘೋಷಿಸಿತು. ಇದರ ಮೊದಲ ಫಲಾನುಭವಿ ಅದಾನಿಯೇ ಆದರೂ ಮೋದಿ ಸರಕಾರ ಮುಂದಿಟ್ಟ ಲಾಭ ಲಾಲಸೆಯೆದುರು ಕಾರ್ಪೊರೇಟ್ ಕುಲದ ಅಂತಃಸಾಕ್ಷಿ ಸಂಪೂರ್ಣವಾಗಿ ಮಂಡಿಯೂರಿ ಮಣಿಯಿತು. ದುಷ್ಟ ರಾಜಕೀಯ ಮತ್ತು ಮತ್ತು ಭ್ರಷ್ಟ ಬಂಡವಾಳಶಾಹಿ ಮೈತ್ರಿಕೂಟದ ಹೊಸ ಅವನತಿಯ ಶಕೆ ಭಾರತದಲ್ಲಿ ಪ್ರಾರಂಭವಾಯಿತು.

ಮೋದಿ ಮುಂದೆ ಮಂಡಿಯೂರಿ ಮಣಿದ ಕಾರ್ಪೊರೇಟ್ ಕುಲ

ಮೋದಿಯೆದುರು ಮಂಡಿಯೂರಿ ಮೊದಲು ಮಣಿದದ್ದು ಈ ದೇಶದ ಅತ್ಯಂತ ಸಜ್ಜನ ಹಾಗೂ ಸುಸಂಸ್ಕೃತ ಉದ್ಯಮಿ ಎಂದು ಹೆಸರು ಮಾಡಿರುವ ಟಾಟಾರವರೇ. ೨೦೦೮ರಲ್ಲಿ ಅವರ ನ್ಯಾನೋ ಕಾರಿನ ಉತ್ಪಾದನಾ ಘಟಕವನ್ನು ಪ. ಬಂಗಾಳದಿಂದ ಗುಜರಾತಿಗೆ ಸ್ಥಳಾಂತರಿಸಲು ಮೋದಿ ಸರಕಾರ ಯಾವ ಪ್ರಮಾಣದ ಲಾಭ ಲಾಲಸೆಗಳನ್ನು ಮುಂದಿಟ್ಟಿದ್ದರೆಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಲಾಭದ ಮುಂದೆ ಈ ಕಾರ್ಪೊರೇಟಿಗರ ಅಂತಃಸಾಕ್ಷಿ ಆತ್ಮಹತ್ಯೆ ಮಾಡಿಕೊಂಡಿತು.

ಮೋದಿಯ ನರಮೇಧ ರಾಜಕಾರಣವನ್ನು ತಿರಸ್ಕರಿಸಬೇಕೆಂದು ಕರೆನೀಡಿದ್ದ ಟಾಟಾರವರು ನ್ಯಾನೋ ಡೀಲ್‌ಗೆ ಸಹಿ ಹಾಕಿದ ನಂತರ ಮೋದಿಯವರ ಮೇಲೆ ಹೊಗಳಿಕೆಯ ಮಳೆ ಸುರಿಸಿಬಿಟ್ಟರು. ಭಾರತದ ಅಭಿವೃದ್ಧಿಯ ವೇಗವರ್ಧಕ ಎಂದೆಲ್ಲಾ ಹೊಗಳಿದರು. ೨೦೦೮ರ ‘ವೈಬ್ರೆಂಟ್ ಗುಜರಾತ್’ ಸಮ್ಮೇಳನದಲ್ಲಿ ಮಾತನಾಡಿದ ಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್  ‘‘ಒಂದು ರಾಜ್ಯವನ್ನು ಇಷ್ಟು ಯಶಸ್ವಿಯಾಗಿ ನಡೆಸುತ್ತಿರುವ ಮೋದಿ ದೇಶವನ್ನು ಯಶಸ್ವಿಯಾಗಿ ನಡೆಸಬಲ್ಲರು’’ ಎಂದು ಆಗಲೇ ಅವರನ್ನು ಪ್ರಧಾನ ಮಂತ್ರಿ ಪದವಿಗೆ ಕಾರ್ಪೊರೇಟ್ ಅಭ್ಯರ್ಥಿಯಾಗಿ ಸೂಚಿಸಿದ್ದರು. ಅದೇ ಸಮ್ಮೇಳನದಲ್ಲಿ ಅನಿಲ್ ಅಂಬಾನಿ ಮೋದಿಯವರನ್ನು ‘‘ಮನುಕುಲದ ದೊರೆ, ನಾಯಕರ ನಾಯಕ ಮತ್ತು ರಾಜರುಗಳ ರಾಜ’’ ಎಂದೆಲ್ಲ ಹೊಗಳಿದ್ದರು. ಮಹೀಂದ್ರ ಕಂಪೆನಿಯ ಮಾಲಕ ಆನಂದ ಮಹೀಂದ್ರಾ ಅವರಂತೂ ‘‘ಗುಜರಾತಿನ ಯಶೋಗಾಥೆಯನ್ನು ಚೀನಾದಲ್ಲೂ ಜನರು ಹೊಗಳುತ್ತಾರೆ’’ ಎಂದು ಕೊಂಡಾಡಿದ್ದರು!

೨೦೧೩ರಲ್ಲಿ ಇಕನಾಮಿಕ್ ಟೈಮ್ಸ್ ನಡೆಸಿದ ಒಂದು ಸರ್ವೇಯಲ್ಲಿ ಭಾರತದ ಕಾರ್ಪೊರೇಟ್ ಮುಖ್ಯಸ್ಥರಲ್ಲಿ ಶೇ.೮೫ರಷ್ಟು ಉದ್ಯಮಿಗಳು ಮೋದಿಯು ಪ್ರಧಾನಿಯಾಗಬೇಕೆಂದು ಬಯಸಿದ್ದರು.

೨೦೦೨ರ ಎಪ್ರಿಲ್‌ನಲ್ಲಿ ನೂರಕ್ಕೆ ೮೫ ಭಾಗ ಉದ್ಯಮಿಗಳು ಮೋದಿಯನ್ನು ತಿರಸ್ಕರಿಸಿದ್ದರೆ ೨೦೧೩ರಲ್ಲಿ ಅದಕ್ಕೆ ತದ್ವಿರುದ್ಧವಾಗಿ ಮೋದಿ ಕಾರ್ಪೊರೇಟಿಗರ ಅಚ್ಚುಮೆಚ್ಚಿನ ನಾಯಕರಾಗಿ ಬದಲಾಗಿದ್ದರು.

ಈ ಬದಲಾವಣೆಯನ್ನು ತರುವಲ್ಲಿ ಅದಾನಿಯ ಪಾತ್ರ ಕೀಲಕವಾದದ್ದು. ಇದಕ್ಕೆ ಪ್ರತಿಯಾಗಿ ಮೋದಿ ಸರಕಾರ ಅದಾನಿಯ ಆರ್ಥಿಕ ದಗಲ್ಬಾಜಿತನಕ್ಕೆ, ಹಗಲು ದರೋಡೆಗೆ ಕಾನೂನು ರಕ್ಷೆ ಕೊಟ್ಟಿದೆೆ. ಅದಾನಿ ಮೋದಿಯವರ ಹಿಂದುತ್ವ ರಾಜಕೀಯಕ್ಕೆ ಆರ್ಥಿಕ ಬಲವನ್ನು ಒದಗಿಸಿದ್ದಾರೆ. ಕಾರ್ಪೊರೇಟ್ ಮಾನ್ಯತೆಯನ್ನು ಗಳಿಸಿಕೊಟ್ಟಿದ್ದಾರೆ.

ಹಾಗೆಯೇ ಇಂದು ಬಯಲಾಗುತ್ತಿರುವ ಶೇರು ಹಗರಣದ ಎಲ್ಲಾ ಘಟ್ಟಗಳಲ್ಲೂ ಮೋದಿ ಸರಕಾರದ ಬೆಂಬಲ ಮತ್ತು ಶ್ರೀ ರಕ್ಷೆ ಅದಾನಿಗೆ ದಕ್ಕಿರುವುದರಲ್ಲಿ ಯಾವ ರಹಸ್ಯವೂ ಇಲ್ಲ. ಹಿಂಡನ್‌ಬರ್ಗ ವರದಿ ಬಯಲು ಮಾಡಿರುವುದು ಕೇವಲ ಅದಾನಿ ಸಮೂಹದ ಮೋಸ ವಂಚನೆಗಳನ್ನು ಮಾತ್ರವಲ್ಲ. ಅದು ಪರೋಕ್ಷವಾಗಿ ಮೋದಿ ಸರಕಾರದ ಪಾಲುದಾರಿಕೆಯನ್ನು ಬಯಲು ಮಾಡಿದೆ. ಇದು ಕೇವಲ ಅದಾನಿ ಮಾತ್ರ ಮಾಡುತ್ತಿರುವ ವಂಚನೆಯೂ ಅಲ್ಲ.

ನರೇಂದ್ರ ಮೋದಿಯವರ ಹಿಂದುತ್ವ ದ್ವೇಷ ರಾಜಕಾರಣದ ಆರ್ಥಿಕ ನೀತಿ ಅದಾನಿ ಪ್ರತಿನಿಧಿಸುವ ಅತ್ಯಂತ ಭ್ರಷ್ಟಾತಿಭ್ರಷ್ಟ ಹಾಗೂ ಮೋಸ ವಂಚನೆಯ ಬಂಡವಾಳಶಾಹಿ ಆರ್ಥಿಕತೆಯೇ ಆಗಿದೆ. ಹಾಗೆಯೇ ಅದಾನಿ ಪ್ರತಿನಿಧಿಸುವ ಕಾರ್ಪೊರೇಟ್ ಉದ್ಯಮಪತಿಗಳ ರಾಜಕೀಯ ಹಿಂದುತ್ವವಾದಿ ದ್ವೇಷ ರಾಜಕಾರಣವಾಗಿದೆ. ಇವೆರಡಕ್ಕೂ ಹೊಕ್ಕಳಬಳ್ಳಿ ಸಂಬಂಧವಿದೆ. ಒಂದನ್ನು ಆಧರಿಸಿ ಇನ್ನೊಂದು ಬೆಳೆದಿದೆ.

ಹೀಗಾಗಿ ಈ ಮೋದಿ-ಅದಾನಿ ಮೈತ್ರಿಯೂ ರೂಪಕಾರ್ಥದಲ್ಲಿ ಈ ದೇಶದ ಆರ್ಥಿಕ ಮತ್ತು ರಾಜಕೀಯದ ಅಧಃಪತನದ ಸಂಕೇತವೇ ಆಗಿದೆ. ಇವೆರಡನ್ನು ಏಕಕಾಲದಲ್ಲಿ ನಿವಾರಿಸಿಕೊಳ್ಳದೆ ಈ ಗಣರಾಜ್ಯಕ್ಕೆ ಭವಿಷ್ಯವಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top