ಸಂಘಿಗಳ ಉರಿನಂಜುಗಳು ಮತ್ತು ‘ಸಿಟಿಜನ್’ ಟಿಪ್ಪು ಸುಲ್ತಾನರು!
-

ಟಿಪ್ಪುವನ್ನು ದುರುಳೀಕರಿಸುವ ಸಂಘಿಗಳ ಈ ಸಂಚು ದೇಶದ್ರೋಹವೂ ಅಗಿದೆ. ಆ ನಾಡದ್ರೋಹ ಹಾಗೂ ಜನದ್ರೋಹದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕಿರುವುದು ಟಿಪ್ಪುವಿನ ಕೃಷಿ ನೀತಿಗಳು ಮತ್ತು ಅದು ಒಕ್ಕಲು ಸಮುದಾಯಕ್ಕೆ ಪಾಳೆಗಾರರಿಂದ ಮತ್ತು ಬ್ರಾಹ್ಮಣಶಾಹಿ ಆಡಳಿತ ವ್ಯವಸ್ಥೆಯಿಂದ ತಂದುಕೊಟ್ಟ ವಿಮೋಚನೆಯನ್ನು. ಆಗ ಮಾತ್ರ ಸಂಘಪರಿವಾರಿಗರು ವಿರೋಧಿಸುತ್ತಿರುವುದು ಏನನ್ನು ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅದೇ ರೀತಿ ಟಿಪ್ಪುವಿನ ಸಾಮ್ರಾಜ್ಯದ ಅವಸಾನವಾದರೆ ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಶೋಷಣೆಗೆ ಗುರಿಯಾಗಬೇಕಾದೀತೆಂಬ ಎಚ್ಚರದಿಂದ ಎಲ್ಲಾ ಒಕ್ಕಲು ಸಮುದಾಯಗಳು ಟಿಪ್ಪುವಿನ ಬ್ರಿಟಿಷ್ ವಿರೋಧಿ ಸಮರದಲ್ಲಿ ಭಾಗವಹಿಸಿದ್ದು ಮತ್ತು ಟಿಪ್ಪುವಿನ ನಂತರದಲ್ಲೂ ಅದನ್ನು ಮುಂದುವರಿಸಿದ ಇತಿಹಾಸವನ್ನು ಅರ್ಥ ಮಾಡಿಕೊಂಡರೆ ಉರಿಗೌಡ ಮತ್ತು ನಂಜೇಗೌಡ ಕಥನ ಹೇಗೆ ಇಂದಿನ ಬ್ರಾಹ್ಮಣಶಾಹಿಗಳ ಮರುಸೃಷ್ಟಿ ಎಂಬುದು ಕೂಡ ತಾನಾಗಿಯೇ ಆರ್ಥವಾಗುತ್ತದೆ.
ಒಂದು ಪ್ರಜಾತಂತ್ರದಲ್ಲಿ ಜನರು ಸರಕಾರವನ್ನು ಆಯ್ಕೆ ಮಾಡುತ್ತಾರೆ. ಹಾಗೆ ಆಯ್ಕೆಯಾದ ಸರಕಾರವು ಜನರ ಮತ್ತು ಇತಿಹಾಸದ ಶ್ವಾಸವನ್ನು ಪಡೆದುಕೊಳ್ಳಬೇಕು. ಆದರೆ, ಹಿಟ್ಲರನ ಕಾಲದಲ್ಲಿ ಬ್ರೆಕ್ಟ್ ಹೇಳಿದ್ದನ್ನೇ ಸ್ವಲ್ಪತಿದ್ದಿ ಹೇಳುವುದಾದರೆ, ಈ ಫ್ಯಾಶಿಸ್ಟ್ ಕಾಲದಲ್ಲಿ ಜನತೆ ಮತ್ತು ಇತಿಹಾಸ ಸರಕಾರದ ವಿಶ್ವಾಸ ಕಳೆದುಕೊಂಡಿರುವುದರಿಂದ ಮೋದಿ ಸರಕಾರವೇ ಈಗ ಸರಿಯಾದ ಜನರನ್ನು ಚುನಾಯಿಸುತ್ತಿದೆ ಹಾಗೂ ಸರಿಯಾದ ಇತಿಹಾಸ ವನ್ನು ಆಯ್ಕೆ ಮಾಡುತ್ತಿದೆ!
ಇತ್ತೀಚೆಗೆ ಮಂತ್ರಿ ಅಶ್ವತ್ಥ ನಾರಾಯಣ ಮತ್ತು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಇವರು ಈ ದೇಶದಲ್ಲಿ ಹನುಮಾನ್ ಭಕ್ತರು ಮಾತ್ರ ಇರಬೇಕು, ಟಿಪ್ಪುಅನುಯಾಯಿಗಳನ್ನು ದೇಶ ಬಿಟ್ಟು ತೊಲಗಬೇಕೆಂದೂ, ಟಿಪ್ಪುವನ್ನು ಮೇಲೆ ಕಳಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಮೇಲಕ್ಕೆ ಕಳಿಸಬೇಕು ಎಂದು ಕರೆ ನೀಡಿರುವುದು ಸರಕಾರವೇ ತನಗೆ ಬೇಕಾದ ಜನರನ್ನು ಆಯ್ಕೆ ಮಾಡಿಕೊಳ್ಳುವ, ತನಗೆ ಸೂಕ್ತವಾದ ಇತಿಹಾಸ ಕಟ್ಟುವ ಫ್ಯಾಶಿಸ್ಟ್ ಪ್ರಕ್ರಿಯೆಯ ಭಾಗವೇ ಆಗಿದೆ.
ಟಿಪ್ಪುಮೇಲಿನ ದಾಳಿಗಳು ಹಳೇ ಮೈಸೂರು ಪ್ರಾಂತದಲ್ಲಿ ಮುಸ್ಲಿಮ್ ದ್ವೇಷದ ಆಧಾರದಲ್ಲಿ ಹಿಂದೂ ವೋಟುಗಳನ್ನು ಧ್ರುವೀಕರಿಸುವ ಭಾಗ ಎನ್ನುವುದು ಸುಸ್ಪಷ್ಟ. ಏಕೆಂದರೆ ಮೈಸೂರು ಪ್ರಾಂತವು ಬಿಜೆಪಿಗೆ ದಕ್ಕದಿರುವುದಕ್ಕೆ ಟಿಪ್ಪು-ಹೈದರ್ ಜಾರಿ ಮಾಡಿದ ಸಾಮಾಜಿಕ-ಆರ್ಥಿಕ ನೀತಿಗಳಿಂದ ರೂಪುಗೊಂಡ ಹಿಂದೂ-ಮುಸ್ಲಿಮ್ ಐಕ್ಯತೆ ಹಾಗೂ ಕೃಷಿ ಆಧಾರಿತ ಹಾಗೂ ದಲಿತ ಜಾತಿಗಳ ಏಳಿಗೆಯ ಇತಿಹಾಸವೂ ಕಾರಣ.
ಹೀಗಾಗಿ ಇಲ್ಲಿ ಟಿಪ್ಪುವನ್ನು ವಿಲನ್ ಮಾಡದೆ ಈ ಐಕ್ಯತೆಯನ್ನು ಮುರಿಯಲು ಸಾಧ್ಯವಿಲ್ಲ. ಹಾಗೆಯೇ ಕೃಷಿಯಾಧಾರಿತ ಗ್ರಾಮ ಸಮುದಾಯದ ಬದುಕಿನ ಮಗ್ಗಲು ಮುರಿಯುತ್ತಿದ್ದ ವಸಾಹತು ಶಾಹಿ ಮತ್ತು ಬ್ರಾಹ್ಮಣಶಾಹಿಗಳ ವಿರುದ್ಧ ಟಿಪ್ಪುನಡೆಸಿದ ಸೈನಿಕ-ರಾಜಕೀಯ-ಸಾಮಾಜಿಕ ಸಮರವನ್ನು ಕಡೆಗಣಿಸದೆ ಅಥವಾ ಅದರ ಬಗ್ಗೆಯೂ ಸುಳ್ಳುಪೊಳ್ಳುಗಳಿಂದ ಕೂಡಿದ ಅಪಪ್ರಚಾರ ಮಾಡದೆ ಬಿಜೆಪಿಗೆ ಈ ಚುನಾವಣೆಯಲ್ಲಿ ಅಮಿತ್ ಶಾ ನೀಡಿರುವ ಗುರಿಗಳನ್ನು ಈಡೇರಿಸಲು ಸಾಧ್ಯವಿಲ್ಲ. ಈ ಚುನಾವಣಾ ಸಮರಕ್ಕಾಗಿಯೇ ಬಿಜೆಪಿ ಕಳೆದ ಒಂದು ವರ್ಷದಲ್ಲಿ ಕಷ್ಟಪಟ್ಟು ಇಬ್ಬರು ಹುಸಿ ಸೈನಿಕರನ್ನು ಸೃಷ್ಟಿಸಿದೆ.
ಅವರೇ ಈ ಉರಿಗೌಡ ಮತ್ತು ನಂಜೇಗೌಡ.
ಇವರಿಬ್ಬರು ಈ ದೇಶದ ದುಡಿಯುವ ಜನರ ಬಗ್ಗೆ ಸಂಘಪರಿವಾರಕ್ಕೆ ಇರುವ ಬ್ರಾಹ್ಮಣ್ಯದ ಉರಿ ಮತ್ತು ದ್ವೇಷದ ನಂಜಿನ ಪ್ರತೀಕ ಎಂಬುದು ಅವರ ಬಗ್ಗೆ ಸಂಘಪರಿವಾರಿಗರು ಬಿತ್ತುತ್ತಿರುವ ಕಥನಗಳೇ ಸ್ಪಷ್ಟವಾಗಿ ಹೇಳುತ್ತವೆ.
ಸಂಘಪರಿವಾರಿಗರ ಈ ನಂಜಿನ ಕಥನದ ಪ್ರಕಾರ 1799ರ ಮೇ 4ರಂದು ಟಿಪ್ಪುವನ್ನು ಕೊಂದದ್ದು ಬ್ರಿಟಿಷ್ ಸೈನಿಕರಲ್ಲ. ಬದಲಿಗೆ ಈ ನಂಜೇಗೌಡ ಮತ್ತು ಉರಿಗೌಡ ಎಂಬ ಇಬ್ಬರು ಒಕ್ಕಲಿಗ ಯೋಧರು. ಟಿಪ್ಪುಮುಸ್ಲಿಮ್ ಮತಾಂಧ ರಾಜನಾಗಿ ಹಿಂದೂಗಳ ಮೇಲೆ ನಡೆಸುತ್ತಿದ್ದ ಅತ್ಯಾಚಾರಗಳನ್ನು ಕಂಡು ಕುದಿಯುತ್ತಿದ್ದ ಈ ಇಬ್ಬರು ಒಕ್ಕಲಿಗ ಯೋಧರು ಟಿಪ್ಪುವನ್ನು ಕೊಂದು ಸಕಲ ಹಿಂದೂಗಳ ಪರವಾಗಿ ಸೇಡು ತೀರಿಸಿಕೊಂಡರು ಎಂಬುದು ಸಂಘಪರಿವಾರಿಗರ ಕಥನ.
ಈ ಸುಳ್ಳು ಕಥನದ ಮೂಲಕ ಸಂಘಪರಿವಾರಿಗರು ಟಿಪ್ಪುವನ್ನು ಇತಿಹಾಸದಲ್ಲಿ ಮತಾಂಧನನ್ನಾಗಿ ಚಿತ್ರಿಸುವ ಉದ್ದೇಶವನ್ನು ಹೊಂದಿದ್ದಾರೆ. ಅದರ ಜೊತೆಗೆ ಟಿಪ್ಪುತಾನು ತಂದ ಸುಧಾರಣೆಗಳ ಮೂಲಕ ಬ್ರಾಹ್ಮಣಶಾಹಿ ಸಾಮಾಜಿಕ-ಆಡಳಿತಾತ್ಮಕ ಹಿಡಿತದಲ್ಲಿ ನಲುಗುತ್ತಿದ್ದ ಸಕಲ ಕೃಷಿ ಸಮುದಾಯವನ್ನು ಬಿಡುಗಡೆ ಮಾಡಿ ದಲಿತ-ಶೂದ್ರ ಜಾತಿಗಳ ಅಭಿಮಾನದ ಬೆಂಬಲವನ್ನು ಪಡೆದುಕೊಂಡದ್ದನ್ನೂ ನಿರಾಕರಿಸುವ ಬ್ರಾಹ್ಮಣೀಯ ದುಷ್ಟ ಸಂಚನ್ನು ಮಾಡುತ್ತಿದ್ದಾರೆ.
ಹಾಗೆ ನೋಡಿದರೆ ಟಿಪ್ಪು-ಹೈದರ್ ತಂದ ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಗಳು, ಆನಂತರ ನಾಲ್ವಡಿ ಒಡೆಯರು ಮುಂದುವರಿಸಿದ ಸಾಮಾಜಿಕ ನ್ಯಾಯದ ಸುಧಾರಣೆಗಳೇ ಇಡೀ ಮೈಸೂರು ಪ್ರಾಂತವನ್ನು ಈವರೆಗೆ ದೇಶದ ಹಲವಾರು ಭಾಗಗಳಿಗಿಂತ ಸಾಮಾಜಿಕ-ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಶೀಲವನ್ನಾಗಿಸಿದೆ. ಹೀಗಾಗಿ ಟಿಪ್ಪುಕನ್ನಡಿಗರೆಲ್ಲರ ಹೆಮ್ಮೆ. ಅಂತಹ ಹೆಮ್ಮೆಯನ್ನು ದುರುಳೀಕರಿಸುವ ಮೂಲಕ ಸಂಘಿಗಳು ಇಡೀ ಕನ್ನಡಿಗರಿಗೆ, ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಪಮಾನವೆಸಗುತ್ತಿವೆ.
ಟಿಪ್ಪುವಿನ ದುರುಳೀಕರಣ-ಸ್ವಾತಂತ್ರ್ಯ ಸಮರದ ದುರುಳೀಕರಣ
ಏಕೆಂದರೆ ಟಿಪ್ಪುವಿನ ಬ್ರಿಟಿಷ್ ವಿರೋಧಿ ಸಮರ ಸುಭಾಷ್ ಚಂದ್ರ ಬೋಸರ ಆಝಾದ್ ಹಿಂದ್ ಫೌಜಿಗೂ ಸ್ಫೂರ್ತಿ ನೀಡಿತ್ತು. ಆಝಾದ್ ಹಿಂದ್ ಫೌಜಿನ ಬಾವುಟದಲ್ಲಿ ಇದ್ದದ್ದು ಟಿಪ್ಪುವಿನ ಹುಲಿ. ಸುಭಾಷರು ತಮ್ಮ ಸ್ವಾತಂತ್ರ್ಯ ಹೋರಾಟವನ್ನು ಟುಪ್ಪುಶುರು ಮಾಡಿದ ಹೋರಾಟದ ಮುಂದುವರಿಕೆಯೆಂದೇ ಭಾವಿಸಿದ್ದರು. ಟಿಪ್ಪುವಿನ ಸಮರ ಭಾರತದಾದ್ಯಂತ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿ ನೀಡಿತ್ತು. ಆದ್ದರಿಂದಲೇ ಭಾರತದ ಸಂವಿಧಾನದ ಕರಡಿನಲ್ಲಿ ಭಾರತದ ಚರಿತ್ರೆಯ ಹೆಮ್ಮೆಯ ಗುರುತಾಗಿ ಬಳಸಲಾದ ಹಲವಾರು ಚಿತ್ರಗಳಲ್ಲಿ ಮೈಸೂರು ಹುಲಿ ಟಪ್ಪುಸುಲ್ತಾನ್‌ಚಿತ್ರವೂ ಇದೆ.
ಆದ್ದರಿಂದ ಟಿಪ್ಪುವನ್ನು ದುರುಳೀಕರಿಸುವ ಸಂಘಿಗಳ ಈ ಸಂಚು ದೇಶದ್ರೋಹವೂ ಅಗಿದೆ. ಆ ನಾಡದ್ರೋಹ ಹಾಗೂ ಜನದ್ರೋಹದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕಿರುವುದು ಟಿಪ್ಪುವಿನ ಕೃಷಿ ನೀತಿಗಳು ಮತ್ತು ಅದು ಒಕ್ಕಲು ಸಮುದಾಯಕ್ಕೆ ಪಾಳೆಗಾರರಿಂದ ಮತ್ತು ಬ್ರಾಹ್ಮಣಶಾಹಿ ಆಡಳಿತ ವ್ಯವಸ್ಥೆಯಿಂದ ತಂದುಕೊಟ್ಟ ವಿಮೋಚನೆಯನ್ನು. ಆಗ ಮಾತ್ರ ಸಂಘಪರಿವಾರಿಗರು ವಿರೋಧಿಸುತ್ತಿರುವುದು ಏನನ್ನು ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ.
ಅದೇ ರೀತಿ ಟಿಪ್ಪುವಿನ ಸಾಮ್ರಾಜ್ಯದ ಅವಸಾನವಾದರೆ ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಶೋಷಣೆಗೆ ಗುರಿಯಾಗಬೇಕಾದೀತೆಂಬ ಎಚ್ಚರದಿಂದ ಎಲ್ಲಾ ಒಕ್ಕಲು ಸಮುದಾಯಗಳು ಟಿಪ್ಪುವಿನ ಬ್ರಿಟಿಷ್ ವಿರೋಧಿ ಸಮರದಲ್ಲಿ ಭಾಗವಹಿಸಿದ್ದು ಮತ್ತು ಟಿಪ್ಪುವಿನ ನಂತರದಲ್ಲೂ ಅದನ್ನು ಮುಂದುವರಿಸಿದ ಇತಿಹಾಸವನ್ನು ಅರ್ಥ ಮಾಡಿಕೊಂಡರೆ ಉರಿಗೌಡ ಮತ್ತು ನಂಜೇಗೌಡ ಕಥನ ಹೇಗೆ ಇಂದಿನ ಬ್ರಾಹ್ಮಣಶಾಹಿಗಳ ಮರುಸೃಷ್ಟಿ ಎಂಬುದು ಕೂಡ ತಾನಾಗಿಯೇ ಆರ್ಥವಾಗುತ್ತದೆ.
ಆದರೂ ಇತಿಹಾಸದ ಆ ಪ್ರಮುಖ ಅಂಶವನ್ನು ಚರ್ಚೆ ಮಾಡುವ ಮುನ್ನ ಈ ಉರಿಗೌಡ ಮತ್ತು ನಂಜೇಗೌಡರೆಂಬ ಸುಳ್ಳು ಸೈನಿಕರು ಇತಿಹಾಸದಲ್ಲಿ ಎಲ್ಲಾದರೂ ಕಾಣಿಸಿಕೊಂಡಿದ್ದರೇ ಎಂಬುದನ್ನು ಸಂಕ್ಷಿಪ್ತವಾಗಿ ಪರಿಶೀಲಿಸೋಣ.
ಕೇಶವಕೃಪದಲ್ಲಿ ಜನ್ಮ ಪಡೆದ ಉರಿಗೌಡ- ನಂಜೇಗೌಡ
ಉರಿಗೌಡ-ನಂಜೇಗೌಡರು ಸಂಘಪರಿವಾರದ ಸೃಷ್ಟಿ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಮಾನ್ಯಜ್ಞಾನ ಸಾಕು ಹಾಗೂ ಬಿಜೆಪಿಯ ನಾಯಕರ ಖಾಸಗಿ ಮಾತುಕತೆಗಳನ್ನು ಆಲಿಸಿದರೂ ಸಾಕು. ವಿಶೇಷ ಬೌದ್ಧಿಕ ಕಸರತ್ತಿನ ಅಗತ್ಯವಿಲ್ಲ. ಆದರೂ ಇತಿಹಾಸದಲ್ಲಿ ಇಂತಹ ಒಂದು ಪ್ರಕರಣದ ದಾಖಲೆಯೇನಾದರೂ ಇದೆಯೇ ಎಂದು ಶೈಕ್ಷಣಿಕ ಶಿಸ್ತಿನಿಂದ ಅನ್ವೇಷಣೆ ಮಾಡಿದರೂ ಸಂಘಿಗಳ ಈ ವಾದದಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮೊದಲನೆಯದಾಗಿ ಸಂಘಪರಿವಾರ ಟಿಪ್ಪುವಿನ ಜನಾನುರಾಗಿ ಆಡಳಿತದ ವಿರುದ್ಧ ಎತ್ತುತ್ತಿರುವ ಎಲ್ಲಾ ಅಪಕಥೆಗಳಿಗೂ ಮೂಲ ಟಿಪ್ಪುವನ್ನು ಖಂಡತುಂಡವಾಗಿ ದ್ವೇಷಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಈಸ್ಟ್ ಇಂಡಿಯಾ ಕಂಪೆನಿಯು ನಿಯೋಜಿಸಿದ ಇತಿಹಾಸಕಾರರು ಬರೆದ ಗ್ರಂಥಗಳೇ.
ತಮಗೆ ಏಳು ನದಿಗಳ ನೀರು ಕುಡಿಸಿದ ಟಿಪ್ಪುವಿನ ಬಗ್ಗೆ ಸಹಜವಾಗಿಯೇ ಬ್ರಿಟಿಷ್ ವಸಾಹತುಶಾಹಿಗಳಿಗೆ ದ್ವೇಷವಿತ್ತು ಹಾಗೂ ಟಿಪ್ಪುವನ್ನು ಜನಮಾನಸದಿಂದ ಕಿತ್ತುಹಾಕದೆ ಅವರ ಸಾಮ್ರಾಜ್ಯ ಸುರಕ್ಷಿತವಾಗಿ ಇರಲು ಸಾಧ್ಯವಿರಲಿಲ್ಲ. ಹೀಗಾಗಿ ತಮ್ಮ ಮೂಗಿನ ನೇರದ ಇತಿಹಾಸವನ್ನು ಬರೆಯಲು ಅವರು ವಿಶೇಷ ಪ್ರಯತ್ನಗಳನ್ನೇ ಹಾಕಿದರು.
ಟಿಪ್ಪುಹುತಾತ್ಮನಾದ ಮರುವರ್ಷವೇ ಇಡೀ ಮೈಸೂರು ಪ್ರಾಂತದ ಸಾಮಾಜಿಕ ಪರಿಸ್ಥಿತಿಗಳನ್ನು ದಾಖಲಿಸಿದ ಫ್ರಾನ್ಸಿಸ್ ಬುಖಾನನ್, 1840 ರಲ್ಲಿ ಮೈಸೂರು ಪ್ರಾಂತದ ಆಡಳಿತಾತ್ಮಕ ಇತಿಹಾಸ ಬರೆದ ಬ್ರಿಟಿಷ್ ಅಧಿಕಾರಿ ಸ್ಟೋಕ್ಸ್, ಆನಂತರದ ರೈಸ್, ಅದಕ್ಕೆ ಮುಂಚಿನ ಅಲೆಕ್ಸಾಂಡರ್ ಬೀಟ್ಸನ್, ಜೇಮ್ಸ್ ಸಾಲಂಡ್, ಇ. ಡಬ್ಲ್ಯು. ಥಾಮ್ಸನ್...ಇನ್ನಿತರ ಹಲವಾರು ಬ್ರಿಟಿಷ್ ಇತಿಹಾಸಕಾರರು ಟಿಪ್ಪುವಿನ ಆಡಳಿತದ ಬಗ್ಗೆ, ಸಮರ ಕೌಶಲ್ಯದ ಬಗ್ಗೆ ಹಾಗೂ ನಿರ್ದಿಷ್ಟವಾಗಿ 1799ರ ಕೊನೆಯ ಆಂಗ್ಲೋ-ಮೈಸೂರು ಯುದ್ಧದ ಬಗ್ಗೆ ಮತ್ತು 1799ರ ಮೇ4ರಂದು ಟಿಪ್ಪುರಣರಂಗದಲ್ಲೇ ಹತನಾದ ಬಗ್ಗೆ ವಿವರವಾಗಿ ದಾಖಲಿಸಿದ್ದಾರೆ.
ಆ ಎಲ್ಲಾ ದಾಖಲೆಗಳಲ್ಲೂ ಟಿಪ್ಪುವನ್ನು ಒಬ್ಬ ಕ್ರೂರಿ ಎಂದು ಚಿತ್ರಿಸುವ ವಸಾಹತು ಧೋರಣೆ ಸ್ಪಷ್ಟವಾಗಿ ಇದ್ದರೂ ಸಂಘಪರಿವಾರಿಗರ ರೀತಿ ಎಲ್ಲೂ ಅವರುಗಳು ತಾವು ಕಾಣದ್ದನ್ನು ಮತ್ತು ಇಲ್ಲದ್ದನ್ನು ಬರೆದಿಲ್ಲ. ಹಾಗೆಯೇ ಮೈಸೂರಿನವರೇ ಆದ ಹಯವದನರಾವ್ ಎಂಬ ಅಧಿಕಾರಿ 1920ರಲ್ಲಿ ಬರೆದ ಪುಸ್ತಕವೂ ಇದೆ.
ಹೆಚ್ಚೂ ಕಡಿಮೆ ಈ ಎಲ್ಲಾ ದಾಖಲೆಗಳು 1799ರ ಮೇ 4ರಂದು ನಡೆದ ಘಟನೆಗಳನ್ನು ಹೀಗೆ ಕಟ್ಟಿ ಕೊಡುತ್ತವೆ:
‘‘1799 ಮೇ 4ರಂದು ಸಿಪಾಯಿಗಳಿಗೆ ಸಂಬಳಕೊಡುವ ನೆಪದಲ್ಲಿ ಮೀರ್‌ಸಾದಿಕ್ ಬಿರುಕುಬಿಟ್ಟ ಕೋಟೆಯ ರಕ್ಷಣೆಯಲ್ಲಿದ್ದ ಮೈಸೂರು ಸೈನಿಕರನ್ನು ಅಲ್ಲಿಂದ ಬೇರೆಕಡೆ ಕಳುಹಿಸಿದ. ಇದೇ ಸಮಯ ಸಾಧಿಸಿ ಬ್ರಿಟಿಷ್ ಸೈನ್ಯ ಶ್ರೀರಂಗಪಟ್ಟಣದ ಕೋಟೆಯೊಳಗೆ ನುಗ್ಗಿತು. ಮೇ 4ರ ಬೆಳಗ್ಗೆ ಕೋಟೆಯ ಬಿರುಕನ್ನು ಪರಿಶೀಲಿಸಿದ ಟಿಪ್ಪುವಿಗೆ ಸಂಸ್ಥಾನಕ್ಕೆ ಬಂದಿರುವ ಆಪತ್ತಿನ ಅರಿವಾಗಿತ್ತು.
ಮಧ್ಯಾಹ್ನ ಊಟ ಮಾಡುವ ವೇಳೆಗೆ ಕೋಟೆಯ ರಕ್ಷಣೆಯಲ್ಲಿದ್ದ ತನ್ನ ನೆಚ್ಚಿನ ಸೇನಾಧಿಕಾರಿ ಗಫೂರ್ ಮರಣ ಹೊಂದಿದ ವಾರ್ತೆ ಬರುತ್ತದೆ. ಕೂಡಲೇ ಊಟ ಬಿಟ್ಟು ಟಿಪ್ಪುರಣರಂಗಕ್ಕೆ ಧಾವಿಸುತ್ತಾನೆ. ಬ್ರಿಟಿಷ್ ಸೇನೆ ಆ ವೇಳೆಗಾಗಲೇ ಶ್ರೀರಂಗಪಟ್ಟಣದ ಒಳ ನುಗ್ಗಿ ಲೂಟಿ-ಕಗ್ಗೊಲೆ ಆರಂಭಿಸಿತ್ತು. ಆಗ ಟಿಪ್ಪುಕೆಲವು ಸೈನಿಕರ ಜೊತೆಗೂಡಿ ಬ್ರಿಟಿಷ್ ಸೈನ್ಯದೊಂದಿಗೆ ಕಾದಾಡುತ್ತಿದ್ದ. ಆ ವೇಳೆಗಾಗಲೇ ನಾಲ್ಕಾರು ಗುಂಡೇಟುಗಳು ಟಿಪ್ಪುವಿನ ದೇಹ ಹೊಕ್ಕಿದ್ದವು. ಕಾಳಗದಲ್ಲಿ ಟಿಪ್ಪುವಿನ ಕುದುರೆ ಗುಂಡೇಟಿನಿಂದ ಪ್ರಾಣಬಿಟ್ಟಿತು. ಆದರೆ ಟಿಪ್ಪುತನ್ನ ಕೊನೆಯುಸಿರು ಇರುವವರೆಗೂ ಬ್ರಿಟಿಷ್ ಸೇನೆಯನ್ನು ಪ್ರತಿರೋಧಿಸುತ್ತ ಅಂತಿಮವಾಗಿ ನಿತ್ರಾಣನಾಗಿ ಕೆಳಗೆ ಕುಸಿದ. ಆತನ ಬಳಿ ಇದ್ದ ವಜ್ರದ ಹಿಡಿಯ ಖಡ್ಗ ಕಿತ್ತುಕೊಳ್ಳಲು ಬಂದ ಬ್ರಿಟಿಷ್ ಸೈನಿಕ ಟಿಪ್ಪುವನ್ನು ಒಬ್ಬ ಸೈನಿಕನೆಂದೇ ತಿಳಿದು ತಲೆಗೆ ಗುಂಡಿಟ್ಟು ಹೊಡೆದು ಖಡ್ಗ ಕಸಿದುಕೊಂಡ.’’
ಹೀಗೆ ನಾಲ್ಕು ದಶಕಗಳ ಕಾಲ ಬ್ರಿಟಿಷ್ ವಸಾಹತುಶಾಹಿಯಿಂದ ಮೈಸೂರು ಜನತೆಯನ್ನು ರಕ್ಷಿಸಿದ್ದ ಟಿಪ್ಪುಸುಲ್ತಾನ್ ಹುತಾತ್ಮನಾದ. ಇದರೊಂದಿಗೆ ಕರ್ನಾಟಕದ ಮಾತ್ರವಲ್ಲ, ಭಾರತದ ಸ್ವಾತಂತ್ರ್ಯದ ಸೂರ್ಯನೇ ಅಸ್ತಂಗತನಾದ.
ಬ್ರಿಟಿಷರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ವೆಲ್ಲೆಸ್ಲಿ ‘‘ಇದೀಗ ಇಂಡಿಯಾ ನಮ್ಮದು!’’ ಎಂದು ಉದ್ಗರಿಸಿದನಂತೆ. ಅತ್ತ ಇಂಗ್ಲೆಂಡಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ದೊರೆಗಳು ಟಿಪ್ಪುವಿನ ಸಾವಿನ ಸುದ್ದಿ ತಿಳಿದು ‘‘ಇದೋ ಭಾರತದ ಹೆಣದ ಮೇಲೆ ಮತ್ತೊಂದು ಗುಟುಕು, ಸ್ವಸ್ತಿಪಾನ’’ ಎಂದು ಸಂಭ್ರಮಿಸಿದರಂತೆ!
ಹೀಗೆ ಮೇಲಿನ ಲಿಖಿತ, ಬ್ರಿಟಿಷರ ‘ಅಧಿಕೃತ ಇತಿಹಾಸ’ಗಳಲ್ಲಿ ದಾಖಲಿಸಿರುವಂತೆ ಬ್ರಿಟಿಷ್ ಸೈನಿಕರು ತಾವು ಕೊಲ್ಲುತ್ತಿರುವುದು ಟಿಪ್ಪುಎಂದು ಗೊತ್ತಿಲ್ಲದೆ, ಗುಂಡೇಟಿನಿಂದ ಗಾಯಗೊಂಡು ರಕ್ತಸಿಕ್ತವಾಗಿದ್ದ ಟಿಪ್ಪುವಿನ ಬಳಿ ಇದ್ದ ವಜ್ರದ ಹಿಡಿಯ ಖಡ್ಗವನ್ನು ಕಸಿಯುತ್ತಾ ಕೊಂದುಹಾಕಿದರು.
ಇಲ್ಲೆಲ್ಲೂ ನಂಜೇಗೌಡನ ಅಥವಾ ಉರಿಗೌಡರ ಪ್ರಸ್ತಾವ ಇಲ್ಲವೇ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಉರಿ-ನಂಜುಗಳು ನಿಜವೇ ಆಗಿದ್ದರೆ ಬ್ರಿಟಿಷರು ಆ ಕಥೆಗೆ ಬೇಕಾದಷ್ಟು ಟಿಪ್ಪು ವಿರೋಧಿ ಮಸಾಲೆ ಸೇರಿಸಿ ದೇಶದೆದುರು ಮತ್ತು ಜಗತ್ತಿನೆದುರು ಉಣಬಡಿಸುತ್ತಿರಲಿಲ್ಲವೇ?
ಏಕೆಂದರೆ ಟಿಪ್ಪುವನ್ನು ಕ್ರೂರಿಯೆಂದೂ, ಜನವಿರೋಧಿ ರಾಜನೆಂದೂ, ತಮ್ಮನ್ನು ವಿಮೋಚಕರೆಂದೂ ತೋರಿಸಿಕೊಳ್ಳುವ ಹವಣಿಕೆಯಲ್ಲಿದ್ದರು. ಉರಿನಂಜರು ನಿಜವೇ ಆಗಿದ್ದರೆ ಅವರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಮೈಸೂರು ಸಂಸ್ಥಾನದಲ್ಲಿ ಸ್ಥಾಪಿಸಿಬಿಟ್ಟಿರುತ್ತಿದ್ದರು.
ಲಾವಣಿಗಳು ಹೇಳುವ ನೈಜ ಇತಿಹಾಸ
ಈ ಬ್ರಿಟಿಷ್ ಕಥನಗಳಿಗಿಂತ, ಲಿಪಿಕ ದಾಖಲೆಗಳಿಗಿಂತ ಅಂದಿನ ದಿನಮಾನಗಳ ಸತ್ಯವನ್ನು ಬಿಚ್ಚಿಡುವುದು ಜನರ ಬಾಯಿಂದ ಬಾಯಿಗೆ ಹರಿದು ಬಂದಿರುವ ಟಿಪ್ಪುವಿನ ಲಾವಣಿಗಳು. ರಾಜೋಜಿ, ನೀಲಕಂಥ, ಹಿ. ಮ. ನಾಗಯ್ಯ ಇನ್ನಿತರರು ಸಂಗ್ರಹಿಸಿರುವ ಈ ಲಾವಣಿಗಳಲ್ಲಿ 1799ರ ಮೇ 4 ಮತ್ತು ಟಿಪ್ಪುವಿನ ಶೌರ್ಯ ದಾಖಲಾಗಿರುವುದು ಹೀಗೆ:
ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು|
ಮಸಲತ್ ಮಾಡಿದ ಮೀರಸಾದಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು॥
ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ |
ಫರಂಗಿ ಪೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ॥
ಹಿಮ ನಾಗಯ್ಯನವರು ತಮ್ಮ ‘ಭವ್ಯ ಭಾರತ ಭಾಗ್ಯೋದಯ- ಸ್ವಾತಂತ್ರ್ಯ ಸಂಗ್ರಾಮ ಮಹಾಕಾವ್ಯ’ ದಲ್ಲಿ ಟಿಪ್ಪುವಿನ ಅಂತ್ಯವನ್ನು ಹೀಗೆ ವರ್ಣಿಸಿದ್ದಾರೆ:
ನಾಲ್ಕನೇ ಯುದ್ಧವದು ಮೇಲೇರಿ ಬಂತಕಟ
ಶಸ್ತ್ರಾಸ್ತ್ರದಲ್ಲಿ ಗೆಲ್ಲದಾಗಿದ್ದ ಆಂಗ್ಲಪಡೆ
ಚಿನ್ನದಾಸೆಯನು ತೋರಿ ಹಣದಾಸೆಯನು ಬೀರಿ
ಟಿಪ್ಪುವಿನ ಮಂತ್ರಿಗಳ ಕೊಂಡರದೇನೆಂಬೆ
ಮೋಸ ಮಾಡಿದರವರು ಮಂತ್ರಿಗಳು ಕುಹಕಿಗಳು
ಕತ್ತುಕೊಯ್ದರು ಒಳಗೆ ಕ್ರೂರವಾಯಿತು ಘಳಿಗೆ
ರಾಜೋಜಿಯವರು ಸಂಗ್ರಹಿಸಿರುವ ಲಾವಣಿಗಳಲ್ಲಿ 1799ರ ಮೇ 4 ಹೀಗೆ ದಾಖಲಾಗಿದೆ:
ನೇತ್ರವ ಬಿಟ್ಟು ರೌದ್ರಾಕಾರದಿ ಕತ್ತರಿಸಿದ
ಸೊಳ್ಜರ್ ಕೈದೆ ಕಡಿತ ತಕ್ಷಣ ಕರವೂ ಬಿದ್ದಿತು
ಕುಣಿಯುತ್ತಿತ್ತು ಕೀಲು ಬೊಂಬೆಯಂಗೆ
ಆಗ ಸಿಪಾಯಿ ಕಡುಕೋಪದಿಂದ ಹೊಡೆದನು
ಗೋಲಿಯನು ದೊರೆಯ ಮೈಗೆ
ಹೀಗೆ ಜನಮಾನಸದಲ್ಲಿ ಟಿಪ್ಪುವಿನ ಅಂತ್ಯಕ್ಕೆ ಕಾರಣರಾದ ದ್ರೋಹಿಗಳ ಬಗ್ಗೆ ಆಕ್ರೋಶವಿದೆ. ಮತ್ತು ಬ್ರಿಟಿಷ್ ಸೈನಿಕರಿಗೆ ಬಲಿಯಾದ ಟಿಪ್ಪುವಿನ ಅಂತ್ಯದ ವಿವರಗಳಿವೆ.
ಇಲ್ಲಿಯೂ ಉರಿನಂಜುಗಳ ಪ್ರಸ್ತಾಪವೇ ಇಲ್ಲ.
ಒಂದು ವೇಳೆ ಈ ಉರಿನಂಜುಗಳು ಇದ್ದದ್ದೇ ಆದರೆ ಮತ್ತು ಅವರು ಜನಸಾಮಾನ್ಯರಲ್ಲಿ ಟಿಪ್ಪುವಿನ ಬಗ್ಗೆ ಇದ್ದ ಆಕ್ರೋಶದ ಭಾಗವಾಗಿ ಟಿಪ್ಪುವನ್ನು ಬಲಿ ತೆಗೆದುಕೊಂಡಿದ್ದರೆ ಲಾವಣಿಯಾಗುತ್ತಿದ್ದದ್ದು ಉರಿನಂಜರೇ ಹೊರತು ಟಿಪ್ಪುವಲ್ಲ.
ಹೀಗಾಗಿ ಈ ಉರಿನಂಜರು ಈ ಚುನಾವಣೆಗಾಗಿ ಮತ್ತು ಇತಿಹಾಸವನ್ನು ಬದಲು ಮಾಡುವ ದುಷ್ಟ ಸಂಚಿನ ಭಾಗವಾಗಿ ಕೇಶವಕೃಪದಲ್ಲಿ ಸೃಷ್ಟಿಯಾದ ಹುಸಿ ಸೈನಿಕರೇ ಹೊರತು ನಿಜವಲ್ಲ.
ಆದರೆ ಇದಕ್ಕಿಂತ ಮುಖ್ಯವಾದ ಸಂಗತಿ ಸಂಘಪರಿವಾರಿಗರು ಹೇಳು ವಂತೆ ಈ ನಾಡಿನ ರೈತಾಪಿಗೆ ಟಿಪ್ಪುವಿನ ವಿರುದ್ಧ ಆಕ್ರೋಶವಿತ್ತೇ ಅಥವಾ ಅಭಿಮಾನವಿತ್ತೇ ಎಂಬುದು.
ಇದಕ್ಕೆ ಉತ್ತರವನ್ನು ಪಡೆದುಕೊಳ್ಳುವುದು ಕೇವಲ ಇತಿಹಾಸದ ದೃಷ್ಟಿ ಯಿಂದಲ್ಲ. ಭವಿಷ್ಯದ ದೃಷ್ಟಿಯಿಂದಲೂ ಮುಖ್ಯವಾದುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.