-

ಭಾಗ - 2

ಸಂಘಿಗಳ ಉರಿನಂಜುಗಳು ಮತ್ತು ‘ಸಿಟಿಜನ್’ ಟಿಪ್ಪುಸುಲ್ತಾನರು!

-

ಇತರ ಊಳಿಗಮಾನ್ಯ ರಾಜರಂತೆ ಟಿಪ್ಪುಮತ್ತು ಹೈದರಲಿ ಕೂಡಾ ತಮ್ಮ ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದರೂ, ಅಷ್ಟೇ ನಿಜವಲ್ಲ. ಅವರು ಊಳಿಗಮಾನ್ಯ ವಿರೋಧಿ ಧೋರಣೆ ಮತ್ತು ಆಧುನಿಕ ದೃಷ್ಟಿ ಇದ್ದ ರಾಜರುಗಳು. ಆದ್ದರಿಂದಲೇ ಟಿಪ್ಪುಬೇರೆ ಯಾವ ರಾಜರು ಜಾರಿ ಮಾಡದಂತಹ ಊಳಿಗಮಾನ್ಯ ಸುಧಾರಣೆಗಳನ್ನು ಮೈಸೂರು ಸಂಸ್ಥಾನದಲ್ಲಿ ಜಾರಿಗೆ ತಂದು ದಲಿತ-ಶೂದ್ರ-ರೈತಾಪಿಗಳಿಗೆ ಬಿಡುಗಡೆ ತಂದುಕೊಟ್ಟ. ಆತ ಫ್ರೆಂಚ್ ಕ್ರಾಂತಿಯ ಆಶಯಗಳನ್ನು ಮೆಚ್ಚಿಕೊಂಡಿದ್ದ. ತನ್ನನ್ನು ತಾನು ‘ಸಿಟಿಜನ್ ಟಿಪ್ಪು’ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದ.

(ನಿನ್ನೆಯ ಸಂಚಿಕೆಯಿಂದ)

ಟಿಪ್ಪುಸುಧಾರಣೆ- ಪಾಳೇಗಾರರಿಂದ

- ಬ್ರಾಹ್ಮಣಶಾಹಿಯಿಂದ ರೈತಾಪಿಯ ಬಿಡುಗಡೆ

ಟಿಪ್ಪುವಿನ ಸಾವಿನಿಂದ ತಾವು ಗಳಿಸಿದ್ದೇನೆಂದು ಬ್ರಿಟಿಷ್ ವಸಾಹತುಶಾಹಿಗಳು ಸ್ಪಷ್ಟವಾಗಿ ಅರಿತುಕೊಂಡಿದ್ದರು.. ಹಾಗೆಯೇ ಟಿಪ್ಪುವನ್ನು ವಿಲನೀಕರಿಸಿದರೆ ಆಗುವ ಲಾಭವನ್ನು ಸಂಘಪರಿವಾರಿಗರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ ಟಿಪ್ಪುವಿನ ಸಾವಿನಿಂದ ಅಂದು ತಾವು ಕಳೆದುಕೊಂಡಿದ್ದೇನು ಹಾಗೂ ಇಂದು ಸಂಘಪರಿವಾರಿಗರು ಟಿಪ್ಪುವನ್ನು ದುರುಳೀಕರಿಸುತ್ತಿರುವುದರಿಂದ ನಾಡಿಗಿರುವ ಅಪಾಯವೇನು ಎಂಬ ಸಂಪೂರ್ಣ ತಿಳುವಳಿಕೆಯು ಇದುವರೆಗೂ ಕರ್ನಾಟಕ ಮತ್ತು ಭಾರತೀಯ ಜನತೆಯ ಅರಿವಿಗೆ ಬಂದಂತಿಲ್ಲ.

ಈ ವಿಷಯದ ಬಗ್ಗೆ, ಟಿಪ್ಪುವಿನ ಬಗ್ಗೆ ಅನನ್ಯ ಅಧ್ಯಯನ ಮಾಡಿರುವ ಇತಿಹಾಸಕಾರ ಶೇಕ್ ಅಲಿ ಮತ್ತು ಕ್ರಾಂತಿಕಾರಿ ವಿದ್ವಾಂಸ ಸಾಕೇತ್ ರಾಜನ್ ಹಾಗೂ ಇನ್ನೂ ಹಲವಾರು ಇತಿಹಾಸಕಾರರು ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಅದನ್ನು ಆಧರಿಸಿ ಹಲವಾರು ಕಿರು ಹೊತ್ತಿಗೆಗಳು ಕನ್ನಡದಲ್ಲಿ ಪ್ರಕಟವಾಗಿವೆ.

ಅವುಗಳೆಲ್ಲಾ ಹೇಳುವ ಸಾರಂಶವಿಷ್ಟು:

ಇತರ ಊಳಿಗಮಾನ್ಯ ರಾಜರಂತೆ ಟಿಪ್ಪುಮತ್ತು ಹೈದರಲಿ ಕೂಡಾ ತಮ್ಮ ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದರೂ, ಅಷ್ಟೇ ನಿಜವಲ್ಲ. ಅವರು ಊಳಿಗಮಾನ್ಯ ವಿರೋಧಿ ಧೋರಣೆ ಮತ್ತು ಆಧುನಿಕ ದೃಷ್ಟಿ ಇದ್ದ ರಾಜರುಗಳು. ಆದ್ದರಿಂದಲೇ ಟಿಪ್ಪುಬೇರೆ ಯಾವ ರಾಜರು ಜಾರಿ ಮಾಡದಂತಹ ಊಳಿಗಮಾನ್ಯ ಸುಧಾರಣೆಗಳನ್ನು ಮೈಸೂರು ಸಂಸ್ಥಾನದಲ್ಲಿ ಜಾರಿಗೆ ತಂದು ದಲಿತ-ಶೂದ್ರ-ರೈತಾಪಿಗಳಿಗೆ ಬಿಡುಗಡೆ ತಂದುಕೊಟ್ಟ. ಆತ ಫ್ರೆಂಚ್ ಕ್ರಾಂತಿಯ ಆಶಯಗಳನ್ನು ಮೆಚ್ಚಿಕೊಂಡಿದ್ದ. ತನ್ನನ್ನು ತಾನು ‘ಸಿಟಿಜನ್ ಟಿಪ್ಪು’ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದ.

ಆದ್ದರಿಂದಲೇ ಸಂಘಪರಿವಾರಿಗರಿಗೆ ಟಿಪ್ಪುವಿನ ವಿರುದ್ಧ ಇರುವ ಸಿಟ್ಟಿಗೆ ಆತ ಮುಸ್ಲಿಮ್ ರಾಜನಾಗಿದ್ದದ್ದು ಮಾತ್ರ ಕಾರಣವಲ್ಲ. ಬದಲಿಗೆ ಆತನ ಬ್ರಾಹ್ಮಣಶಾಹಿ ಊಳಿಗಮಾನ್ಯ ವಿರೋಧಿ ಆಡಳಿತವೂ ಕಾರಣವಾಗಿದೆ.

ಉದಾಹರಣೆಗೆ ಹೈದರ್-ಟಿಪ್ಪುಆಳ್ವಿಕೆಗೆ ಮುನ್ನ ಮೈಸೂರು ಸಂಸ್ಥಾನದಲ್ಲಿನ ಜೀವಿತವೂ ಇತರೆಡೆಗಳಿಗಿಂತ ಅಷ್ಟೇನೂ ಭಿನ್ನವಾಗಿರಲಿಲ್ಲ. ವಿಜಯನಗರದ ಪತನಾನಂತರ ಅದರಡಿ ಇದ್ದ ನಾಯಕರು ಸ್ವಾತಂತ್ರ್ಯ ಘೋಷಿಸಿಕೊಂಡರು. ನಂತರದ ದಿನಗಳಲ್ಲಿ ಈ ಹಲವಾರು ಸಣ್ಣ-ಪುಟ್ಟ ನಾಯಕರಿಗೂ ಹಳ್ಳಿಯ ಗೌಡರಿಗೂ ನಡುವೆ ರೈತರನ್ನು ಸುಲಿಯುವ ‘ಪಾಳೆಗಾರ’ರೆಂಬ ಮತ್ತೊಂದು ಪದರ ಹುಟ್ಟಿಕೊಂಡಿತು. ಸಾಧಾರಣವಾಗಿ ದಕ್ಷಿಣ ಕರ್ನಾಟಕದ ಈ ಪಾಳೆಗಾರರು 10ರಿಂದ 50ಹಳ್ಳಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಿದ್ದರು. ರೈತರ ಸುಲಿಗೆಯನ್ನು ಸಲೀಸಾಗಿ ನಡೆಸಲು ಅವರು ಅಶ್ವದಳಗಳನ್ನು, ಕಾಲಾಳುಗಳನ್ನು ತಮ್ಮೊಡನೆ ಇಟ್ಟುಕೊಂಡಿರುತ್ತಿದ್ದರು. ಇತರ ಪಾಳೆಗಾರರಿಂದ ಹಾಗೂ ಕೆಲವೊಮ್ಮೆ ತಮ್ಮ ಜನರಿಂದಲೇ ತಮ್ಮನ್ನು ರಕ್ಷಿಸಿಕೊಳ್ಳಲು ಬೆಟ್ಟದ ಮೇಲೆ ದುರ್ಗಗಳನ್ನು ಕಟ್ಟಿಕೊಂಡಿರುತ್ತಿದ್ದರು. ತಮ್ಮ ಈ ಸೇನಾ ಬಲದಿಂದ ಈ ಜನಕಂಟಕ ಪಾಳೆಗಾರರು ರೈತರ ಮೇಲೆ, ಕುಶಲಕರ್ಮಿಗಳ ಮೇಲೆ, ವ್ಯಾಪಾರಿಗಳ ಮೇಲೆ ಅಪಾರ ತೆರಿಗೆ ವಿಧಿಸಿ ಅವರ ರಕ್ತ ಹೀರುತ್ತಿದ್ದರು. ಈ ಶೋಷಕ ಪಾಳೆಗಾರರ ಕೋಟೆಗಳು ನಾಡಿನಾದ್ಯಂತ ಎಷ್ಟೊಂದು ವಿಸ್ತೃತವಾಗಿ ಹರಡಿ ಹೋಗಿದ್ದವೆಂದರೆ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಅಂಥ 120ಕೋಟೆಗಳು ಇದ್ದುದನ್ನು ದಾಖಲಿಸಲಾಗಿದೆ.

ಪಾಳೆಗಾರಿ ವರ್ಗದ ನಿರ್ಮೂಲನ

ತಾವು ರಾಜ್ಯಾಧಿಕಾರ ಪಡೆದುಕೊಂಡ ನಂತರ ಹೈದರ್-ಟಿಪ್ಪುಮಾಡಿದ ಮೊದಲ ಕೆಲಸವೆಂದರೆ ರೈತರ ರಕ್ತ ಹೀರುತ್ತಿದ್ದ ಪರಾವಲಂಬಿ ಪಾಳೆಗಾರ ವರ್ಗವನ್ನು ನಾಮಾವಶೇಷಗೊಳಿಸಿದ್ದು. ಹೈದರಲಿ ಹಾಗೂ ಟಿಪ್ಪುಸುಲ್ತಾನರು ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂರು ಹಾಗೂ ಕೋಲಾರಗಳಲ್ಲಿ ಇಂತಹ ಸುಮಾರು 200 ಪಾಳೆಗಾರರನ್ನು ಸದೆಬಡಿದರು. ಇಲ್ಲವೇ ನಾಮಾವಶೇಷ ಗೊಳಿಸಿದರು. ಕೇರಳದ ಉತ್ತರ ಮಲಬಾರಿನಲ್ಲಿ ಸುಲಿಗೆ ಮಾಡುತ್ತಿದ್ದ ಎಲ್ಲಾ 42 ಪಾಳೆಗಾರರನ್ನು ಹೈದರಲಿ ನಾಶಮಾಡಿದ. ಹೀಗಾಗಿ 1799ರ ಟಿಪ್ಪುವಿನ ಪತನದ ನಂತರ ಮೈಸೂರು ಪ್ರಾಂತ್ಯದ ಸಂಪೂರ್ಣ ಅಧ್ಯಯನ ಮಾಡಿದ ಬ್ರಿಟಿಷ್ ತಜ್ಞ ಫ್ರಾನ್ಸಿಸ್ ಬುಖಾನನ್ ಗುರುತಿಸಿದಂತೆ ‘‘ಮೈಸೂರು ಅರಸರಾದ ಹೈದರ್-ಟಿಪ್ಪು ಅವರ ಪಾಳೆಗಾರ-ವಿರೋಧಿ ಸೈನಿಕ ಕಾರ್ಯಚರಣೆಗಳಿಂದಾಗಿ ಮೈಸೂರು ಪ್ರಾಂತದಲ್ಲಿ ಊಳಿಗಮಾನ್ಯ ವ್ಯವಸ್ಥೆ ಕುಸಿದು ಬಿದ್ದಿತು.’’

ಹೈದರಲಿಯೂ ಕೆಲವು ಶರಣಾದ ಪಾಳೆಗಾರರಿಂದ ಮೈಸೂರಿಗೆ ನಿಷ್ಠೆ ಉಳಿಸಿಕೊಳ್ಳುವ ಹಾಗೂ ಕಪ್ಪಕಟ್ಟುವ ಪ್ರಮಾಣಪಡೆದು ಉಳಿಯಗೊಡುತ್ತಿದ್ದರೆ, ಟಿಪ್ಪುಸುಲ್ತಾನನ ಆಳ್ವಿಕೆಯಲ್ಲಿ ಪಾಳೆಗಾರರ ವರ್ಗದ ದಮನ ಮತ್ತೊಂದು ಹೆಜ್ಜೆ ಮುಂದೆ ಹೋಯಿತು. ಪಾಳೆಗಾರರ ಹಿಡಿತವನ್ನು ಸಂಪೂರ್ಣವಾಗಿ ಮುರಿಯಲಾಯಿತಲ್ಲದೆ, ಆ ಭೂಮಿಯನ್ನು ರೈತಾಪಿಗೆ ಹಂಚಲಾಗುತ್ತಿತ್ತು ಅಥವಾ ರಾಜಪ್ರಭುತ್ವವೇ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿತ್ತು. ಈ ಹೊಸ ಪದ್ಧತಿಯಲ್ಲಿ ಪ್ರಭುತ್ವಕ್ಕೂ-ರೈತಾಪಿಗೂ ನಡುವೆ ಇದ್ದ ಪರಾವಲಂಬಿ ವರ್ಗವು ಸಂಪೂರ್ಣವಾಗಿ ಕಣ್ಮರೆಯಾಗಿ ಮೊತ್ತಮೊದಲ ಬಾರಿಗೆ ಪ್ರಭುತ್ವವೇ ನೇರವಾಗಿ ತನ್ನ ರೈತಾಪಿಯೊಡನೆ ಸಂಬಂಧವಿರಿಸಿಕೊಂಡಿತು. ಇದರಿಂದ ಪಾಳೆಗಾರರ ಪ್ರಭಾವ ಹಾಗೂ ಹಿಡಿತದಿಂದ ರೈತಾಪಿ ಸಂಪೂರ್ಣವಾಗಿ ಮುಕ್ತವಾಯಿತು.

ಈ ಹಿಂದಿನ ಊಳಿಗಮಾನ್ಯ ರಾಜಪ್ರಭುತ್ವಗಳ ಆಕ್ರಮಣ, ಗೆಲುವು-ಸೋಲುಗಳ ರೈತಾಪಿಯ ಬದುಕಿನಲ್ಲಿ, ಸಾಮಾಜಿಕ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ. ಆದರೆ, ಹೈದರಲಿ ಹಾಗೂ ಟಿಪ್ಪುನಡೆಸಿದ ಸಾಮ್ರಾಜ್ಯದ ವಿಸ್ತರಣೆಯಲ್ಲಿ, ಅವರ ಆಳ್ವಿಕೆಯಡಿ ಬಂದ ಜನತೆಯ ಬದುಕಿನಲ್ಲಿ ಪ್ರಗತಿಪರ ಬದಲಾವಣೆಯೇ ಬಂದುಬಿಟ್ಟಿತು.

ಏಕೆಂದರೆ ಅವರ ಪ್ರಭುತ್ವ ಯಾವಾಗಲೂ ಪರಾವಲಂಬಿ ಪಾಳೆಗಾರಿ ವರ್ಗವನ್ನು ನಾಶಗೊಳಿಸಿ ರೈತಾಪಿ, ಕುಶಲಕರ್ಮಿ ಹಾಗೂ ವ್ಯಾಪಾರಿ ವರ್ಗಗಳ ಮೇಲಿನ ಭಾರವನ್ನು ಹಗುರಗೊಳಿಸುತ್ತಿತ್ತು. ಈ ಪಾಳೆಗಾರರು ಎಷ್ಟು ಜನಕಂಟಕರಾಗಿದ್ದರೆಂದರೆ ಹಲವಾರು ಕಡೆ ಸೆರೆಯಾಳುಗಳು ಹಾಗೂ ಗ್ರಾಮದ ಜನತೆಯೇ ಅತ್ಯಂತ ಉತ್ಸಾಹದಿಂದ ಮೈಸೂರಿನ ಸೈನ್ಯವನ್ನು ಸ್ವಾಗತಿಸುತ್ತಿದ್ದರು.

ಉಳುವವನಿಗೇ ಭೂಮಿ

1792ರಲ್ಲಿ ಬ್ರಿಟಿಷರ ವಿರುದ್ಧ ಮೂರನೇ ಯುದ್ಧದಲ್ಲಿ ಸೋತು ಮಕ್ಕಳನ್ನು ಅಡವಿಟ್ಟರೂ ಎದೆಗುಂದದ ಟಿಪ್ಪು ಅದೇ ವರ್ಷ ‘ಭೂ ಕಂದಾಯ ಕಾಯ್ದೆ’ಯನ್ನು ಜಾರಿಗೆ ತಂದ. ಎಂತಹ ಅಡೆತಡೆಗಳೂ ಟಿಪ್ಪುವಿನ ಐತಿಹಾಸಿಕ ಊಳಿಗಮಾನ್ಯ-ವಿರೋಧಿ ಉಪಕ್ರಮಗಳನ್ನು ನಿಲ್ಲಿಸುವಂತಿರಲಿಲ್ಲ. ಕಬೀರ್ ಕೌಸರ್ ಎಂಬವರು ಗುರುತಿಸಿರುವಂತೆ ‘‘ರೈತನ ಜಾತಿ, ಧರ್ಮ, ಪಂಥವೇನೆ ಇದ್ದರೂ ಉಳುವವನಿಗೇ ಭೂಮಿ ಸಿಗಬೇಕು’’ ಎನ್ನುವುದು ಟಿಪ್ಪುವಿನ ಕೃಷಿ ನೀತಿಯಾಗಿತ್ತು. ಇದರೊಡನೆ, ಹಿಂದಿನ ಪ್ರಭುತ್ವಗಳು ಜಹಗೀರುಗಳನ್ನು ನೀಡುವಮೂಲಕ ಪರಾವಲಂಬಿ ವರ್ಗವನ್ನು ಸೃಷ್ಟಿ ಮಾಡುತ್ತಿದ್ದುದನ್ನು ಹೈದರನು ಕಡಿತಗೊಳಿಸಿದರೆ ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟ. ತನ್ನ ಇಡೀ ಜೀವಿತಾವಧಿಯಲ್ಲಿ ಟಿಪ್ಪುಕೇವಲ ಎರಡು ಹಳ್ಳಿಗಳನ್ನು ಮಾತ್ರ ಜಹಗೀರಾಗಿ ನೀಡಿದ್ದ. ಪ್ರಾಕ್ಸಿ ಫೆರ್ನಾಂಡಿಸ್ ಎಂಬವರು ಬರೆಯುವಂತೆ ‘‘ದಕ್ಷಿಣ ಮರಾಠಾ ಪ್ರಾಂತದ ಧಾರವಾಡ-ಬಿಜಾಪುರಗಳಲ್ಲಿ ದೇಶಮುಖರ ಪರಿಸ್ಥಿತಿ ದಯನೀಯವಾಗಿತ್ತು. ಹಲವಾರು ಕಡೆಗಳಲ್ಲಿ ಟಿಪ್ಪು ಭೂಮಿಯ ಮೇಲಿನ ಅವರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು ರೈತರಿಗೆ ಹಂಚಿದ್ದ.’’ ಅದೇ ರೀತಿ ಎಚ್.ಜೆ. ಸ್ಟೋಕ್ಸ್ ಎಂಬವರು ಬರೆದಂತೆ ‘‘ದೇಸಾಯರುಗಳಿಗೆ ನೀಡಿದ್ದ ಎಲ್ಲಾ ಜಾಗೀರನ್ನು ಟಿಪ್ಪುವಿನ ಕಾಲಾವಧಿಯಲ್ಲಿ ಟಿಪ್ಪುವಿನ ಸೇನಾಧಿಕಾರಿ ಜಮಾಲ್ ಖಾನ್ ವಾಪಸ್ ಪಡೆದಿದ್ದಲ್ಲದೇ ಕೇವಲ ಅವರ ಬಾಳ್ವಿಕೆಗೆ ಬೇಕಾದಷ್ಟು ಭೂಮಿಯನ್ನು ಮಾತ್ರ ಬಿಟ್ಟುಕೊಡಲಾಗಿತ್ತು.’’

ಮಠ-ಮಾನ್ಯಗಳ ರೆಕ್ಕೆಗಳಿಗೆ ಕತ್ತರಿ

ಕರ್ನಾಟಕದಲ್ಲಿ ಆಗ ಅಸ್ತಿತ್ವದಲ್ಲಿದ್ದ ಊಳಿಗಮಾನ್ಯ ಪದ್ಧತಿಯ ಮತ್ತೊಂದು ಮಾದರಿ, ಬ್ರಾಹ್ಮಣ-ಮಠ ಮಾನ್ಯಗಳಿಗೆ ನೀಡುತ್ತಿದ್ದ ದತ್ತಿಗಳು. ವಾಸ್ತವವಾಗಿ ಆಗ ಬ್ರಾಹ್ಮಣ ಮಠಗಳೇ ಅತಿದೊಡ್ಡ ಜಾಗೀರದಾರಿ ಊಳಿಗಮಾನ್ಯ ಶಕ್ತಿಗಳಾಗಿದ್ದವು. ಅತಿದೊಡ್ಡ ಸಂಖ್ಯೆಯ ಶೂದ್ರ ರೈತಾಪಿಯನ್ನು ಈ ಮಠ ಮಾನ್ಯಗಳು ದೈವದ ಹೆಸರಿನಲ್ಲಿ ಶೋಷಿಸುತ್ತಿದ್ದವು. ಟಿಪ್ಪು ಸುಲ್ತಾನನ ರಾಜಖಡ್ಗ ಮಠ ಮಾನ್ಯಗಳ ಈ ಹಕ್ಕನ್ನು ಕತ್ತರಿಸಿತು. ಅಷ್ಟು ಮಾತ್ರವಲ್ಲ, ಹಲವಾರು ಕಡೆ ಟಿಪ್ಪುದೇವಸ್ಥಾನದ ಭೂಮಿಯನ್ನು ಶೂದ್ರ ರೈತಾಪಿಗೆ ಹಂಚಿ ಕ್ರಾಂತಿಕಾರಿ ಬದಲಾವಣೆಗೆ ಕಾರಣನಾದ. ಉದಾಹರಣೆಗೆ ಬ್ರಿಟಿಷ್ ಇತಿಹಾಸಕಾರ ಬುಖಾನನ್ ದಾಖಲಿಸಿರುವಂತೆ ‘‘ನಂಜನಗೂಡಿನಲ್ಲಿ 500ಬ್ರಾಹ್ಮಣ ಮನೆಗಳಿದ್ದರೂ ವಾರ್ಷಿಕ 14,000 ಪಗೋಡಾಗಳಷ್ಟು ಆದಾಯ ತರುತ್ತಿದ್ದ ಜಮೀನನ್ನು ಹೊಂದಿದ್ದವು. ಅದೇ ಊರಿನಲ್ಲಿ 700 ಶೂದ್ರ ಮನೆಗಳಿದ್ದೂ ಅವರು ಈ ಭೂಮಿಯಲ್ಲಿ ಚಾಕರಿ ಮಾಡಿದರೂ ಊರ ಹೊರಗೆ ಬದುಕಬೇಕಾಗಿತ್ತು. ಟಿಪ್ಪುಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದ್ದಲ್ಲದೆ ಅವರಿಗೆ ಕೇವಲ 100 ಪಗೋಡಾಗಳಷ್ಟು ಮಾಸಿಕ ನಿವೃತ್ತಿ ವೇತನ ನೀಡಿದ.’’

ಇದನ್ನೇ ದೊಡ್ಡ ಬ್ರಾಹ್ಮಣ-ವಿರೋಧಿ ಮತಾಂಧ ಕ್ರಮವೆಂದು ಈಗಿನ ಬ್ರಾಹ್ಮಣಶಾಹಿಗಳು ಬಣ್ಣಿಸುತ್ತಿದ್ದಾರೆ. ಆದರೆ ಟಿಪ್ಪುಬ್ರಾಹ್ಮಣರಲ್ಲೂ ಸಹ ವೈದಿಕ ಹಾಗೂ ಲೌಕಿಕ ಬ್ರಾಹ್ಮಣರೆಂಬ ವಿಧಗಳನ್ನು ಗುರುತಿಸಿದ. ಶ್ರಮದ ಕೊಡುಗೆ ನೀಡಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದ ಲೌಕಿಕ ಬ್ರಾಹ್ಮಣರಿಗೆ ಟಿಪ್ಪುವಿನಿಂದ ತೊಂದರೆಯಿರಲಿಲ್ಲ. ಕಿಂಚಿತ್ತೂ ಶ್ರಮವಹಿಸದೆ ರೈತರ ಶೋಷಣೆ ಹಾಗೂ ಶ್ರಮದ ಮೇಲೆ ಬಾಳ್ವೆ ಮಾಡುತ್ತಿದ್ದ ವೈದಿಕ ಬ್ರಾಹ್ಮಣರು ಮಾತ್ರ ಟಿಪ್ಪುವಿನ ಸುಧಾರಣಾ ಕ್ರಮಗಳಿಗೆ ನೇರವಾಗಿ ಗುರಿಯಾದರು. ಅದೆ ರೀತಿ ಮೂಡುಬಿದಿರೆಯಲ್ಲಿ ಜೈನ ಮಠದಡಿ 360 ಪಗೋಡಾಗಳಷ್ಟು ವಾರ್ಷಿಕ ಆದಾಯ ತರುತ್ತಿದ್ದ ಬಸದಿ ಭೂಮಿಯನ್ನು ಟಿಪ್ಪುಸಂಪೂರ್ಣ ವಶಪಡಿಸಿಕೊಂಡು ಅವರನ್ನು ವಾರ್ಷಿಕ 90 ಪಗೋಡಾಗಳ ವೇತನದ ಮೇಲೆ ಜೀವಿಸುವಂತೆ ಮಾಡಿದ.

ಪಟೇಲ ಊರ ಗೌಡನಲ್ಲ- ಸಾಮಾನ್ಯ ರೈತ!

ಅದೆ ರೀತಿ ಹಳ್ಳಿಗಳಲ್ಲಿ ರಾಜಪ್ರಭುತ್ವದ ಪರವಾಗಿ ರೈತರನ್ನು ಸುಲಿಯುತ್ತಿದ್ದ ಕೊನೆಯ ಕೊಂಡಿ ಊರ ಪಟೇಲನಾಗಿದ್ದ. ಇದೊಂದು ವಂಶಪಾರಂಪರ್ಯ ಸ್ಥಾನವಾಗಿದ್ದು ಈ ಪ್ರಭುತ್ವದ ಪ್ರತಿನಿಧಿಯ ಸ್ಥಾನವು ಉಳ್ಳವರಿಗೆ ಹಾಗೂ ಮೇಲ್ಜಾತಿಗಳಿಗೆ ದೊರೆಯುತ್ತಿತ್ತು. ಆದರೆ ಟಿಪ್ಪುಇದನ್ನು ಆಮೂಲಾಗ್ರವಾಗಿ ಬುಡಮೇಲು ಮಾಡಿದ. ಟಿಪ್ಪುಜಾರಿಗೆ ತಂದ ಭೂ ಕಂದಾಯ ಕಾಯ್ದೆಯ 11ನೇ ಕಲಮು ಹೀಗೆ ಹೇಳುತ್ತದೆ;

‘‘ತುಂಬಾ ವರ್ಷಗಳಿಂದ ಪ್ರತಿಯೊಂದು ಹಳ್ಳಿಗೂ ಪಟೇಲನೊಬ್ಬನನ್ನು ನೇಮಿಸಲಾಗುತ್ತಿದೆ. ಇನ್ನು ಮುಂದೆ ಎಲ್ಲೆಲ್ಲಿ ಆ ಸ್ಥಾನಕ್ಕೆ ಈಗಿರುವ ಪಟೇಲರು ಅರ್ಹರಾಗಿಲ್ಲವೋ ಅವರನ್ನು ತೆಗೆದು ಹಾಕಿ ಆ ಸ್ಥಾನಕ್ಕೆ ರೈತನಿಂದಲೇ ಸಮರ್ಥರಾದವರನ್ನು ನೇಮಕ ಮಾಡಬೇಕು ಮತ್ತು ಹಳೆಯ ಪಟೇಲ, ರೈತನ ಸ್ಥಾನಕ್ಕಿಳಿದು ನೇಗಿಲು ಹಿಡಿದು ನೆಲ ಉಳಬೇಕು.’’ ಇದೇ ಕಾಯ್ದೆಯ 12ನೆಯ ಕಲಮು ಹೇಳುವುದು ಹೀಗೆ: ‘‘ಹಳ್ಳಿಯ ವ್ಯವಹಾರಗಳಲ್ಲಿ ಇನ್ನು ಮುಂದೆ ಶಾನುಭೋಗರು ಮೂಗು ತೂರಿಸುವ ಅಗತ್ಯವಿಲ್ಲ. ಅವರಿಗೆ ಭೂಮಿಕೊಡಲಾಗುವುದಿಲ್ಲ. ಆದರೆ ಅವರನ್ನು ಕರಣಿಕರಂತೆ ಮಾತ್ರ ವೇತನದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.’’

ಅದೇ ರೀತಿ ಭೂ ಕಂದಾಯ ಕಾಯ್ದೆಯ 5ನೇ ಕಲಮಿನಂತೆ: ‘‘ಬಹಳ ಸಮಯದಿಂದ ಈ ಪಟೇಲರು ಸರಕಾರಿ ಭೂಮಿಗೆ ಸಂಪೂರ್ಣವಾಗಿ ಕಂದಾಯವನ್ನು ಸಂದಾಯ ಮಾಡುತ್ತಿಲ್ಲ. ಇದನ್ನು ಕೂಡಲೇ ತನಿಖೆ ಮಾಡಿ ಇತರ ರೈತರ ಜಮೀನಿನಂತೆ ಅದನ್ನು ಅಂದಾಜು ಮಾಡಿ ತೆರಿಗೆ ನಿಗದಿಮಾಡಬೇಕು. ರೈತರು ಪಟೇಲರ ಜಮೀನನ್ನು ಉಳಬೇಕಿಲ್ಲ. ಪಟೇಲರೇ ತಮ್ಮ ಜಮೀನನ್ನು ಖುದ್ದು ಉಳಬೇಕು. ಒಂದುವೇಳೆ ಅವರೇನಾದರೂ ರೈತರನ್ನು ಉಳುವಂತೆ ಮಾಡಿದರೆ ಸಂಪೂರ್ಣ ಉತ್ಪನ್ನವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವುದು. ಒಂದು ವೇಳೆ ಶಾನಭೋಗರು ತಮ್ಮ ಕೂಲಿಯ ಬದಲಿಗೆ ಸರಿಸಮನಾದ ಭೂಮಿಕೇಳಿದರೆ ಅವರಿಗೆ ಉಳುಮೆ ಮಾಡಿರದ ಬೆದ್ದಲು ಭೂಮಿ ನೀಡಲಾಗುವುದು.’’

ಸೈನಿಕರಿಗೆ ಭೂಮಿ

ಟಿಪ್ಪುವಿನ ಆಳ್ವಿಕೆ ಪರಿಚಯಿಸಿದ ಮತ್ತೊಂದು ಮುಖ್ಯ ಸುಧಾರಣೆಯೆಂದರೆ ಸೈನಿಕರಿಗೆ ಭೂಮಿ ನೀಡಿದ್ದು. ಸುಮಾರು 3ಲಕ್ಷ ಸೈನಿಕರಿಗೆ ಈ ರೀತಿ ಭೂಮಿ ನೀಡಲಾಯಿತು. ಇದೊಂದು ಬೃಹತ್ ಸುಧಾರಣೆಯಾಗಿದ್ದು ಆ ಕಾಲದ ಕೃಷಿ ವ್ಯವಸ್ಥೆಯ ಪ್ರಧಾನ ಭಾಗವಾಗಿತ್ತು. ಇದರಿಂದಾಗಿ ಒಂದೆಡೆ ಬೃಹತ್ ಸಂಖ್ಯೆಯಲ್ಲಿ ಸಣ್ಣ ರೈತರು ಉಗಮವಾಗಿ ಊಳಿಗಮಾನ್ಯ ಹಿಡಿತದಿಂದ ಮುಕ್ತವಾದರೆ ಮತ್ತೊಂದೆಡೆ ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದ ಶೋಷಿತ ಜಾತಿಗಳಾದ ಬೇಡ, ಕುರುಬ, ಈಡಿಗ, ಒಕ್ಕಲಿಗ ಮತ್ತು ಲಿಂಗಾಯತ ರೈತ ಮಕ್ಕಳು ಜಾತಿ ಶೋಷಣೆಯಿಂದಲೂ ಸ್ವಲ್ಪಮಟ್ಟಿಗೆ ಬಿಡುಗಡೆ ಹೊಂದಿದರು.

ರೈತರಿಗೆ ಟಿಪ್ಪುವಿನ ಬಗ್ಗೆ ಅಭಿಮಾನ, ವಿಶ್ವಾಸ ಮತ್ತು ನಿಷ್ಠೆ ಇತ್ತೇ ವಿನಾ ನಂಜಾಗಲಿ, ಉರಿಯಾಗಲಿ ಇರಲಿಲ್ಲ.

ಹೀಗಾಗಿಯೇ ಟಿಪ್ಪುವಿನ ಸೈನ್ಯದಲ್ಲಿ ರೈತ ಮಕ್ಕಳು ಭರ್ತಿಯಾಗುತ್ತಿದ್ದದ್ದು ಬಾಡಿಗೆ ಕೂಲಿಗಳಾಗಿಯಲ್ಲ. ಬದಲಿಗೆ ಟಿಪ್ಪುವಿನ ಈ ರೈತ ಪರ ಸಾಮ್ರಾಜ್ಯದ ಉಳಿವಿನಲ್ಲೇ ತಮ್ಮ ಏಳಿಗೆಯೆಂದು ಸೈನಿಕರಾಗುತ್ತಿದ್ದರು ಹಾಗೂ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ತಮ್ಮ ಸಮಸ್ತವನ್ನು ಪಣವಾಗಿಟ್ಟು ಹೋರಾಡುತ್ತಿದ್ದರು.

ಕೃಷಿ ವಿಸ್ತರಣೆ

ಅದೇ ರೀತಿ ಬೀಳು ಬಿದ್ದಿದ್ದ ಸಾವಿರಾರು ಎಕರೆ ಭೂಮಿಯನ್ನು ಟಿಪ್ಪುಕೃಷಿ ಯೋಗ್ಯ ಮಾಡಲು ಶ್ರಮಿಸಿದ. ನಿಕಿಲಸ್ ಗುಹಾ ಎಂಬವರು ಬರೆಯುವಂತೆ ‘‘ಟಿಪ್ಪುತನ್ನ ಸಾಮ್ರಾಜ್ಯದಲ್ಲಿ ಕೃಷಿ ವಿಸ್ತರಣೆಯ ಬಗ್ಗೆಯೂ ಹಲವಾರು ಕ್ರಮಗಳನ್ನು ಕೈಗೊಂಡ. ಹತ್ತು ಹಲವು ವರ್ಷಗಳಿಂದ ಬೀಳು ಬಿದ್ದಿದ್ದ ಭೂಮಿಯನ್ನು ರೈತರಿಗೆ ಕೂಲಿಯ ಆಧಾರದಲ್ಲಿ ಉಳಲು ನೀಡಲಾಗುತ್ತಿತ್ತು. ಮೊದಲ ವರ್ಷದಲ್ಲಿ ಅದರ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುತ್ತಿರಲಿಲ್ಲ. ಅದೇ ರೀತಿ ಬೆದ್ದಲು ಹಾಗೂ ಬೆಟ್ಟ-ಗುಡ್ಡಗಳ ಜಮೀನನ್ನು ರೈತರಿಗೆ ಹಂಚಿ ತೆರಿಗೆ ರಹಿತವಾಗಿ ಉಳುಮೆಗೆ ಅವಕಾಶ ನೀಡಿ ಉತ್ತೇಜಿಸಲಾಗುತ್ತಿತ್ತು. ಒಂದು ಅಂದಾಜಿನಂತೆ ಹೈದರಲಿಯೊಬ್ಬನೇ ಯುದ್ಧದ ನಂತರ ಮದ್ರಾಸಿನ ಪ್ರಾಂತಗಳಿಂದ 60,000 ಕುಟುಂಬಗಳನ್ನು ಈ ಹೊಸ ವಿಸ್ತರಣಾ ಭೂಮಿಯಲ್ಲಿ ನೆಲೆಗೊಳಿಸಿ ಕೃಷಿ ವಿಸ್ತರಣೆಗೆ ಕಾರಣನಾಗಿದ್ದ. ಹೀಗೆ ಪಾಳೆಗಾರಿ ದಮನ, ಜಾಗೀರು ರದ್ದತಿ, ಮಠ-ಮಾನ್ಯಗಳ ಭೂಮಿಯ ವಂಶ ಪಾರಂಪರ್ಯ ಪಟೇಲಗಿರಿ-ಶಾನುಭೋಗಗಿರಿಯ ಬದಲಾವಣೆ, ಸೈನಿಕರಿಗೆ ಜಮೀನು, ಶೋಷಿತ-ದಮನಿತ ರೈತರು ವಲಸೆ ಬಂದು ಸ್ವತಂತ್ರವಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಉತ್ತೇಜನ-ಇವುಗಳು ಕರ್ನಾಟಕದ ಬದುಕಿನಲ್ಲಿ ಬೃಹತ್ ಪ್ರಗತಿಪರ ಬದಲಾವಣೆ ತಂದು ಕರ್ನಾಟಕವನ್ನು ಐತಿಹಾಸಿಕ ಪ್ರಗತಿಯೆಡೆ ಮುನ್ನಡೆಸಿದವು ಹಾಗೂ ನೇರವಾಗಿ ರೈತಾಪಿಯನ್ನು ಊಳಿಗಮಾನ್ಯ ಶೋಷಣೆಯಿಂದ ಪಾರುಮಾಡಿ ಸ್ವತಂತ್ರಗೊಳಿಸಿದವು. ಕರ್ನಾಟಕದ ಇತಿಹಾಸದಲ್ಲೇಕೆ ಇಡೀ ಭಾರತದ ಇತಿಹಾಸದಲ್ಲಿ ಪ್ರಭುತ್ವವೊಂದು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಾಗೂ ಆಮೂಲಾಗ್ರವಾಗಿ ರೈತಾಪಿಯ ಬದುಕನ್ನೇ ಬದಲಾಯಿಸಿದ ಮತ್ತೊಂದು ಉದಾಹರಣೆಯಿಲ್ಲ.’’

ಈ ರೀತಿಯಲ್ಲಿ ಕೃಷಿ ಸುಧಾರಣೆ, ನೀರಾವರಿ, ಹೊಸ ತಳಿಗಳ ಪ್ರಚಾರ, ವಾಣಿಜ್ಯ ಕೃಷಿ ವಿಸ್ತರಣೆ ಹಾಗೂ ರೈತರಿಗೆ ತಕಾವಿ ಕೃಷಿ ಸಾಲ ಇವುಗಳ ಭೂ-ಆಸ್ತಿ ಸಂಬಂಧಗಳಲ್ಲೂ ವಿಶೇಷ ಪರಿಣಾಮ ಹಾಗೂ ಪ್ರಭಾವವನ್ನು ಉಂಟುಮಾಡಿದವು. ಕರ್ನಾಟಕದ ಜನತೆಯ ಹೋರಾಟಗಳ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಟ್ಟಿರುವ ‘ಮೇಕಿಂಗ್ ಹಿಸ್ಟರಿ’ ಎಂಬ ಪುಸ್ತಕದಲ್ಲಿ ಕ್ರಾಂತಿಕಾರಿ ವಿದ್ವಾಂಸ ಸಾಕೇತ್ ರಾಜನ್ ವಿವರಿಸುವಂತೆ:

‘‘ಟಿಪ್ಪುವಿನ ಈ ಎಲ್ಲಾ ಕ್ರಮಗಳಿಂದ ಕರ್ನಾಟಕದಲ್ಲಿ ಊಳಿಗಮಾನ್ಯತೆಯ ಆಧಾರವಾಗಿದ್ದ ಭೂಮಿಯ ಒಡೆತನದ ಮೇಲೆ ಊಳಿಗಮಾನ್ಯ ವರ್ಗಗಳ ಸಂಪೂರ್ಣ ಏಕಸ್ವಾಮ್ಯವನ್ನು ಮುರಿಯಿತು. ಅದರ ಜಾಗದಲ್ಲಿ 3ರಿಂದ 4ಲಕ್ಷ ರೈತರೇ ಭೂ ಒಡೆಯರಾಗಿ ಸಣ್ಣ ರೈತ ಹಿಡುವಳಿಗಳು ಹುಟ್ಟಿಕೊಂಡವು ಟಿಪ್ಪುವಿನ ಕಾನೂನಿನಂತೆ ಆ ಭೂಮಿಯಿಂದ ಯಾರೂ ರೈತರನ್ನು ಸ್ಥಳಾಂತರಿಸುವಂತಿರಲಿಲ್ಲ. ಈ ಬಗೆಯ, ರೈತ ಖಾಸಗಿ ಆಸ್ತಿ ಹಿಡುವಳಿಯು ಭೂ-ಮಾಲಕ ವರ್ಗಗಳ ರಾಜಕೀಯ-ಆರ್ಥಿಕ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ಕೊಟ್ಟಿತು.’’

ಮೇಲಿನ ವಿವರಗಳು ಸ್ಪಷ್ಟಪಡಿಸುವಂತೆ, ಈ ಎಲ್ಲಾ ಸಾಮಾಜಿಕ-ಆರ್ಥಿಕ ಬದಲಾವಣೆಗಳ ಪ್ರಧಾನ ಫಲಾನುಭವಿಗಳು ದಲಿತರು ಮತ್ತು ಶೂದ್ರ ರೈತಾಪಿಗಳು.

ಟಿಪ್ಪು ಎಂದರೆ ರೈತರಿಗೆ ಪಂಜು- ಸಂಘಿಗಳಿಗೆ ಮಾತ್ರ ಉರಿನಂಜು

ಅವರಿಗೆ ಟಿಪ್ಪುವಿನ ಬಗ್ಗೆ ಅಭಿಮಾನ, ವಿಶ್ವಾಸ ಮತ್ತು ನಿಷ್ಠೆ ಇತ್ತೇ ವಿನಾ ನಂಜಾಗಲಿ, ಉರಿಯಾಗಲಿ ಇರಲಿಲ್ಲ.

ಹೀಗಾಗಿಯೇ ಟಿಪ್ಪುವಿನ ಸೈನ್ಯದಲ್ಲಿ ರೈತ ಮಕ್ಕಳು ಭರ್ತಿಯಾಗುತ್ತಿದ್ದದ್ದು ಬಾಡಿಗೆ ಕೂಲಿಗಳಾಗಿಯಲ್ಲ. ಬದಲಿಗೆ ಟಿಪ್ಪುವಿನ ಈ ರೈತ ಪರ ಸಾಮ್ರಾಜ್ಯದ ಉಳಿವಿನಲ್ಲೇ ತಮ್ಮ ಏಳಿಗೆಯೆಂದು ಸೈನಿಕರಾಗುತ್ತಿದ್ದರು ಹಾಗೂ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ತಮ್ಮ ಸಮಸ್ತವನ್ನು ಪಣವಾಗಿಟ್ಟು ಹೋರಾಡುತ್ತಿದ್ದರು. ಉಳಿದೆಲ್ಲಾ ರಾಜ ಸಂಸ್ಥಾನಗಳನ್ನು ಸೋಲಿಸಿದ ನಂತರ ಬ್ರಿಟಿಷರು ಆ ಸಂಸ್ಥಾನದ ಸೈನ್ಯವನ್ನು ತಮ್ಮ ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳುತ್ತಿದ್ದರು.

ಆದರೆ ಟಿಪ್ಪುವಿನ ಸೈನ್ಯವನ್ನು ಮಾತ್ರ ಬ್ರಿಟಿಷರು ಬರ್ಖಾಸ್ತ್ ಮಾಡಿದರು. ಅದಕ್ಕೆ ಕಾರಣ ಟಿಪ್ಪುವಿನ ಸೈನ್ಯ ಪಕ್ಕಾ ನಾಡಪ್ರೇಮಿ, ರೈತ ಪ್ರೇಮಿ ರೈತ ಸೈನ್ಯವಾಗಿತ್ತು. ಆದ್ದರಿಂದಲೇ ಟಿಪ್ಪುವಿನ ಪತನಾನಂತರವೂ ಹಲವಾರು ಟಿಪ್ಪು ಸೈನಿಕರು ಒಕ್ಕಲುತನದಲ್ಲಿದ ಹಲವಾರು ಸಮುದಾಯಗಳ ಬೆಂಬಲದೊಂದಿಗೆ ನಾಡಿನಾದ್ಯಂತ ಬ್ರಿಟಿಷರ ವಿರುದ್ಧ ಸಮರ ಮುಂದುವರಿಸುತ್ತಾರೆ.

ಇದು ಒಕ್ಕಲು ಸಮುದಾಯಗಳಿಗೂ, ಟಿಪ್ಪುವಿಗೂ ಇದ್ದ ಅವಿನಾಭವ ಸಂಬಂಧ. ಈ ಸಂಬಂಧದಲ್ಲಿ ಜನಿಸಿದ್ದು ನಾಡಪ್ರೇಮ, ಸಂಗ್ರಾಮವೇ ಹೊರತು ಉರಿನಂಜುಗಳಲ್ಲ.

ಈ ಸಾಮಾಜಿಕ ಹಿನ್ನೆಲೆಯ ಮುಂದುವರಿಕೆಯಾಗಿಯೇ 20 ನೇ ಶತಮಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣಶಾಹಿ ಮೇಲಾಧಿಪತ್ಯದ ವಿರುದ್ಧ ಅಬ್ರಾಹ್ಮಣ ರಾಜಕೀಯಕ್ಕೆ ಪೋಷಣೆ ನೀಡುತ್ತಾರೆ. ಆ ಮೈತ್ರಿಯಲ್ಲೂ ಒಕ್ಕಲಿಗ-ಮುಸ್ಲಿಮ್ ಮೈತ್ರಿ ಪ್ರಧಾನವಾದ ಪಾತ್ರ ವಹಿಸಿದೆ. ಸ್ವಾತಂತ್ರ್ಯಾನಂತರದ ಕರ್ನಾಟಕ ರಚನೆಯಾದ ನಂತರವೂ ಜನ ಚಳವಳಿಗಳಲ್ಲಿ, ಹೊಸ ರಾಜಕಾರಣದ ಸಮೀಕರಣಗಳಲ್ಲಿ ಈ ಸೌಹಾರ್ದ ಮುಂದುವರಿದಿದೆ. ಆದ್ದರಿಂದಲೇ ಸಂಘಿಗಳ ಕೋಮು ಧ್ರುವೀಕರಣ ರಾಜಕಾರಣ ಟಿಪ್ಪುವಿನ ಮೈಸೂರಿನಲ್ಲಿ ಸಫಲವಾಗುತ್ತಿಲ್ಲ.

ಈ ಕಾರಣಕ್ಕಾಗಿಯೇ ಸಂಘಿಗಳಿಗೆ ಟಿಪ್ಪುಎಂದರೆ ಉರಿನಂಜು. ಆದ್ದರಿಂದಲೇ ಅವರು ಟಿಪ್ಪುವನ್ನು ನಿರಂತರವಾಗಿ ದುರುಳೀಕರಿಸುವ ಪ್ರಯತ್ನಗಳನ್ನು ನಡೆಸಿದ್ದಾರೆ.

ಹೀಗೆ ಟಿಪ್ಪುವನ್ನು ಕಂಡರೆ ಅಗಲೂ- ಈಗಲೂ ಉರಿನಂಜುಗಳು ಇರುವುದು ಬ್ರಾಹ್ಮಣಶಾಹಿಗಳಿಗೇ.

ಅದರ ರಾವು ಬಡಿದಿರುವ ಶೂದ್ರ ಸಮುದಾಯದ ಅಸ್ವಸ್ಥ ನವಬ್ರಾಹ್ಮಣಶಾಹಿಗಳಿಗೆ.

ಟಿಪ್ಪುವನ್ನು ವಿಲನ್ ಆಗಿಸುವ ಮೂಲಕ ಸಂಘ ಪರಿವಾರ ದಾಳಿ ಮಾಡುತ್ತಿರುವುದು ರೈತಾಪಿ ಬದುಕಿನ ಮೇಲೆ. ಬ್ರಾಹ್ಮಣಶಾಹಿಗೆ ಸೆಡ್ಡು ಹೊಡೆದು ನಿಂತಿದ್ದ ಒಕ್ಕಲಿಗರ ಸ್ವಾಭಿಮಾನದ ಮೇಲೆ. ಈ ನಾಡನ್ನು ಕಟ್ಟಿದ್ದ ಸೌಹಾರ್ದ ನಾಗರಿಕತೆಯ ಮೇಲೆ.

ಸಂಘಿಗಳ ಈ ಉರಿನಂಜುಗಳಿಂದ ನಾಡನ್ನು ಉಳಿಸಿಕೊಳ್ಳೋಣ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top