-

ಸಂಘಿಗಳ ಸುಳ್ಳುಗಳು ಮತ್ತು ಬಾಬಾಬುಡಾನ್ ದರ್ಗಾ ಪ್ರಕರಣದ ಪಾಠಗಳು

-

ಆರ್ಥಿಕ ಮತ್ತು ರಾಜಕೀಯ ಪರಿಧಿಯಲ್ಲಿ ಮಾತ್ರ ಸಂಘೀ ದ್ರೋಹಗಳನ್ನು ವಿರೋಧಿಸುತ್ತಾ, ಸಾಮಾಜಿಕ-ಸಾಂಸ್ಕೃತಿಕ- ಸೈದ್ಧಾಂತಿಕ-ಐತಿಹಾಸಿಕ ಕ್ಷೇತ್ರಗಳಲ್ಲಿ ಅವರ ಸುಳ್ಳುಗಳಿಗೆ ವಾಕ್ ಓವರ್ ಕೊಡುವುದು ಸಾರದಲ್ಲಿ ಅವರನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಈ ದೇಶದ ಬಹುತ್ವದ ಸ್ಮಾರಕ ಮತ್ತು ಸ್ಮತಿಗಳ ನಿರ್ನಾಮಕ್ಕೆ ಹೆದ್ದಾರಿಯನ್ನು ಒದಗಿಸಿ ರಾಜಕೀಯವಾಗಿಯೂ ಅವರನ್ನು ಗಟ್ಟಿಗೊಳಿಸುತ್ತದೆ. ಕರ್ನಾಟಕದಲ್ಲೇ ಅವರ ಈ ಯೋಜನೆಗೆ ಬಲಿಯಾದ ಜೀವಂತ ಸ್ಮಾರಕವಾಗಿರುವುದು ಬಾಬಾಬುಡಾನ್ ದರ್ಗಾ. ಸಂಘಿಗಳು ಹೇಗೆ ಹಂತಹಂತವಾಗಿ ಸುಳ್ಳುಗಳನ್ನು ಅಧಿಕೃತ ಇತಿಹಾಸವಾಗಿಸುತ್ತಾರೆ ಎಂಬ ಅಧ್ಯಯನಕ್ಕೆ ಬಾಬಾಬುಡಾನ್ ದರ್ಗಾ ಒಂದು ಕ್ಲಾಸಿಕ್ ಕೇಸ್. ಸಂಘಿಗಳ ಉರಿ-ನಂಜುಗಳ ವಿರುದ್ಧದ ಹೋರಾಟಕ್ಕೂ ಇದರಲ್ಲಿ ಸಾಕಷ್ಟು ಪಾಠಗಳಿವೆ.


  
ಮೈಸೂರು ಪ್ರಾಂತದಲ್ಲಿ ಕೋಮುದಳ್ಳುರಿಯನ್ನು ಹಚ್ಚುವ ಮೂಲಕ ಒಕ್ಕಲಿಗ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವ ದುರುದ್ದೇಶದಿಂದ ಸಂಘಿಗಳು ಸೃಷ್ಟಿಸಿದ ಉರಿಗೌಡ -ನಂಜೇಗೌಡರು, ಸದ್ಯಕ್ಕೆ ಚುನಾವಣಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಒಕ್ಕಲಿಗ ಮಠವನ್ನೂ ಒಳಗೊಂಡಂತೆ ಒಕ್ಕಲಿಗ ಸಮುದಾಯದ ಬಹಳಷ್ಟು ಪ್ರಭಾವಿಗಳು ಸಂಘಿಗಳ ಈ ಹುಸಿ ಇತಿಹಾಸವನ್ನು ಬಹಿರಂಗವಾಗಿ ನಿರಾಕರಿಸಿದ್ದಾರೆ. ಅದಕ್ಕೆ ಒಂದು ಪ್ರಧಾನ ಕಾರಣ:

ಸಂಘಿಗಳ ಈ ಉರಿನಂಜುಗಳು ಒಕ್ಕಲಿಗ-ಮುಸ್ಲಿಮ್ ಬಾಂಧವ್ಯವನ್ನು ಕೆಡವಿದರೆ ಅದರ ಚುನಾವಣಾ ಪ್ರಯೋಜನವು ಪ್ರಧಾನವಾಗಿ ಬಿಜೆಪಿಗೇ ಆಗುತ್ತದೆ ಹೊರತು ಈ ಭಾಗದಲ್ಲಿ ಒಕ್ಕಲಿಗ-ಮುಸ್ಲಿಮ್ ಮೈತ್ರಿಕೂಟವನ್ನು ಆಧರಿಸಿಯೇ ರಾಜಕಾರಣ ಮಾಡುತ್ತಾ ಬಂದಿರುವ ಜನತಾದಳ ಮತ್ತು ಕಾಂಗ್ರೆಸಿಗರಿಗಲ್ಲ. ಪ್ರಾಯಶಃ ಈ ಅಂಶವೇ ಸಂಘದ ಉರಿ-ನಂಜುಗಳ ತಾತ್ಕಾಲಿಕ ಹಿನ್ನಡೆಗೆ ಕಾರಣವಿದ್ದರೂ ಇರಬಹುದು. ಪಠ್ಯ ಪುಸ್ತಕ ಪರಿಷ್ಕರಣೆ, ಹಿಂದೂ ವಿರಾಟ್ ಸಮಾವೇಶಗಳ ಸಂದರ್ಭದಲ್ಲಿ, ಕಳೆದೆರಡು ಸಂಸತ್ ಚುನಾವಣೆಗಳ ಸಂದರ್ಭಗಳಲ್ಲಿ ಒಕ್ಕಲಿಗ ಸಮುದಾಯದ ಮೇಲ್‌ಸ್ತರದ ರಾಜಕೀಯ-ಸಾಮಾಜಿಕ ಪ್ರಭಾವಿಗಳು ಹಿಂದುತ್ವ ಸಿದ್ಧಾಂತಕ್ಕೆ ಪೂರಕವಾಗಿಯೇ ವರ್ತಿಸಿದ್ದರು. ಹೀಗೆ ಒಕ್ಕಲಿಗ ರಾಜಕಾರಣವು ನಿಧಾನವಾಗಿ ಸೈದ್ಧಾಂತಿಕವಾಗಿ ಹಿಂದೂ ರಾಷ್ಟ್ರ ಸಿದ್ಧಾಂತದ ಕಡೆಗೆ ಹೊರಳಿಕೊಳ್ಳುತ್ತಿದೆ ಎಂಬುದನ್ನು ನಿರಾಕರಿಸಲಾಗುವುದಿಲ್ಲ. ಅದು ಪೂರ್ಣ ಪ್ರಮಾಣದ ರಾಜಕೀಯ ರೂಪಾಂತರ ಆಗುವುದಕ್ಕೆ ಸಂಘಪರಿವಾರ ಇನ್ನೂ ಕೆಲವು ರಾಜಕೀಯ -ಸಾಮಾಜಿಕ ಅಡೆತಡೆಗಳನ್ನು ದಾಟಬೇಕಿದೆ. ಆ ಮಧ್ಯಂತರ ಅವಧಿಯಲ್ಲೇ ಉರಿಗೌಡ-ನಂಜೇಗೌಡರನ್ನು ದೊಡ್ಡ ಮಟ್ಟದಲ್ಲಿ ಕಣಕ್ಕಿಳಿಸಿದ್ದು ತಾತ್ಕಾಲಿಕವಾಗಿ ಉಲ್ಟಾ ಹೊಡೆದಿರುವಂತೆ ಕಾಣುತ್ತಿದೆ. ಅದೇನೇ ಇರಲಿ. ಚುನಾವಣಾ ರಾಜಕಾರಣದ ಲೆಕ್ಕಾಚಾರದಿಂದಲೇ ಆದರೂ ಸಂಘದ ಉರಿ-ನಂಜುಗಳು ಹಿಮ್ಮೆಟ್ಟಿದ್ದು ಒಳಿತೇ ಆಯಿತು. ಆದರೆ ಈ ಹಿನ್ನ್ನಡೆ ತಾತ್ಕಾಲಿಕವೆನ್ನುವುದನ್ನು ಪ್ರಜ್ಞಾವಂತರು ಮರೆಯುವಂತಿಲ್ಲ.

ಸಾಂಸ್ಕೃತಿಕ ರಾಜಕಾರಣ ಮತ್ತು ಹಿಂದೂ ರಾಷ್ಟ್ರಕಾರಣ

ಹಿಂದುತ್ವದ ವಿಜಯವು ಸುಳ್ಳುಗಳನ್ನು ಆಧರಿಸಿದ ಸಾಂಸ್ಕೃತಿಕ ರಾಜಕಾರಣದಲ್ಲಿದೆ. ಇತಿಹಾಸದ ಪುನರ್ ಪರಿಷ್ಕರಣೆ, ಬ್ರಾಹ್ಮಣೇತರ ಇತಿಹಾಸದ ಅಪಮೌಲ್ಯ ಅಥವಾ ನಿರಾಕರಣೆ, ಕೂಡುಬಾಳ್ವೆಯ ಸ್ಮತಿ ಮತ್ತು ಸ್ಮಾರಕಗಳ ನಾಶಗಳ ಮೂಲಕ ತಮ್ಮ ಹಿಂದೂರಾಷ್ಟ್ರ ಕಟ್ಟುವುದು ಸಂಘಪರಿವಾರದ ದೀರ್ಘಕಾಲೀನ ಯೋಜನೆಯಾಗಿದೆ. ಆ ಮೂಲಕ ಬ್ರಾಹ್ಮಣ ಭಾರತದ ಪುನರ್ ನಿರ್ಮಾಣ ಅದರ ಯೋಜನೆ. ಅದಕ್ಕಾಗಿಯೇ ಹೊಸಶಿಕ್ಷಣ ನೀತಿ, ಭಾರತವು ಲೋಕತಂತ್ರದ ಜನನಿ, ಇತಿಹಾಸದ ಪುನರ್ ರಚನೆ ಎಂಬ ಯೋಜನೆಗಳನ್ನು ಸಂಘಪರಿವಾರದ ಮಾರ್ಗದರ್ಶನದಲ್ಲಿ ಮೋದಿ ಸರಕಾರ ಜಾರಿ ಮಾಡುತ್ತಿದೆ. ಈ ಸಾಂಸ್ಕೃತಿಕ ಯೋಜನೆಯ ಪ್ರಧಾನ ಧಾತು ಬ್ರಾಹ್ಮಣೀಯ ದಾಳಿಯನ್ನು ಭಾರತೀಯ ಸಹಬಾಳ್ವೆಯ ಸ್ವರೂಪವೆಂದು ಬಣ್ಣಿಸುವುದು ಮತ್ತು ಹಿಂದೂ-ಮುಸ್ಲಿಮ್ ಕೂಡುಬಾಳ್ವೆಯ ಎಲ್ಲಾ ಸ್ಮತಿ ಮತ್ತು ಸ್ಮಾರಕಗಳನ್ನು ಪರಕೀಯ ದಾಳಿಯ ಮತ್ತು ಗುಲಾಮಿತನದ ಕುರುಹುಗಳೆಂದು ಬಣ್ಣಿಸುವುದು. ಅಂತಹ ಇತಿಹಾಸವಿಲ್ಲದ ಕಡೆ ಸುಳ್ಳು ಇತಿಹಾಸವನ್ನು ಕಟ್ಟುವುದು. ಅದಕ್ಕಾಗಿ ಅವರು ದೇಶದೆಲ್ಲೆಡೆ ಉರಿಗೌಡ-ನಂಜೇಗೌಡರಂಥ ಅಸ್ತಿತ್ವದಲ್ಲೇ ಇಲ್ಲದ ಹಿಂದುತ್ವದ ಸಿಪಾಯಿಗಳನ್ನು ಹುಟ್ಟುಹಾಕುತ್ತಿದ್ದಾರೆ ಅಥವಾ ಇತಿಹಾಸದಲ್ಲಿ ಸ್ಥಳೀಯರಿಗೂ ಮತ್ತು ದಿಲ್ಲಿಯ ದೊರೆಗಳಿಗೂ ನಡೆದ ಸಂಘರ್ಷಗಳನ್ನೆಲ್ಲಾ ಹಿಂದೂ-ಮುಸ್ಲಿಮ್ ಸಂಘರ್ಷವೆಂದು ಸುಳ್ಳು ಇತಿಹಾಸ ಕಟ್ಟುತ್ತಿದ್ದಾರೆ.

ಉದಾಹರಣೆಗೆ ಅಸ್ಸಾಮಿನಲ್ಲಿ ಮೊಗಲರ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಲಚಿತ್ ಬೊರ್ಫುಕಾನ್‌ರನ್ನು ಹಿಂದೂ ವೀರನೆಂದು ಬಣ್ಣಿಸಿ, ಆತನಿಗೆ ಹೆಗಲಿಗೆ ಹೆಗಲಾಗಿ ಹೋರಾಡಿದ ಇಸ್ಮಾಯೀಲ್ ಸಿದ್ಧೀಕಿ ಎಂಬ ಮುಸ್ಲಿಮ್ ವೀರನ ನೆನಪನ್ನು ಸಂಪೂರ್ಣ ಅಳಿಸಿ ಹಾಕುತ್ತಿದ್ದಾರೆ. ಮತ್ತೊಂದೆಡೆ ತೈಮೂರಿನ ಸೈನ್ಯದ ವಿರುದ್ಧ ಹೋರಾಡಿದ ಹರ್ಯಾಣದ ರಾಮ್ ಪ್ಯಾರಿ ಗುರ್ಜರಿಯನ್ನು (ನಮ್ಮ ಒನಕೆ ಓಬವ್ವಳ ರೀತಿ) ಅಥವಾ ಔರಂಗಜೇಬನ ವಿರುದ್ಧ ಹೋರಾಡಿದನೆಂಬ ಕಥನವಿರುವ ಉತ್ತರಪ್ರದೇಶದ ಪಾಸಿ ದಲಿತರು ಮತ್ತು ರಾಜಭರ್ ಸಮುದಾಯದವರು ತಮ್ಮ ನಾಯಕನೆಂದು ಭಾವಿಸುವ ಸುಹಲ್‌ದೇವರನ್ನು ಹಿಂದುತ್ವದ ರಾಯಭಾರಿಯೆಂದು ಬಣ್ಣಿಸುವುದು..ಇತ್ಯಾದಿಗಳನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡಿದ್ದಾರೆ ಮತ್ತು ಅದನ್ನು ಅಧಿಕೃತ ಇತಿಹಾಸಗೊಳಿಸುವ ಪ್ರಯತ್ನದಲ್ಲಿದ್ದಾರೆ. ಈ ಉರಿಗೌಡ -ನಂಜೇಗೌಡ ಕಥನವು ಕೂಡ ಅವರ ಕೂಡುಬಾಳ್ವೆಯ ಸೌಹಾರ್ದ ಸ್ಮತಿಗಳನ್ನು ಮತ್ತು ಸ್ಮಾರಕಗಳನ್ನು ನಿರ್ನಾಮ ಮಾಡುವ ಬೃಹತ್ ಯೋಜನೆಯ ಭಾಗ. ಅದರ ಸುಳ್ಳನ್ನು ಮತ್ತು ಅದರ ಹಿಂದಿರುವ ದುಷ್ಟ ರಾಜಕಾರಣವನ್ನು ಪ್ರತಿಹೆಜ್ಜೆಯಲ್ಲೂ ಹಿಮ್ಮೆಟ್ಟಿಸದಿದ್ದರೆ ಬಹಳ ಬೇಗ ಸತ್ಯವನ್ನು ಸುಳ್ಳಾಗಿಸಿ, ಸುಳ್ಳನ್ನು ಅಧಿಕೃತ ಸತ್ಯವಾಗಿಸಿಬಿಡುತ್ತಾರೆ. ಆ ಸುಳ್ಳಿನ ಬಲದಲ್ಲಿ ತಮ್ಮ ಸಮಕಾಲೀನ ಆರ್ಥಿಕ-ಸಾಮಾಜಿಕ ಶೋಷಣೆ ಮತ್ತು ದಮನಗಳನ್ನು ಮರೆಸಿಬಿಡುತ್ತಾರೆ.

ಸೈದ್ಧಾಂತಿಕ ಸಂಘರ್ಷವಿರದ ಚುನಾವಣಾ ವಿರೋಧದ ಮಿತಿ

ವಾಸ್ತವದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೂ ಮತ್ತು ಬಿಜೆಪಿ-ಸಂಘಪರಿವಾರಕ್ಕೂ ಇರುವ ಮೂಲಭೂತ ವ್ಯತ್ಯಾಸವಿದು. ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳಿಗೆ ಜನರನ್ನು ಸೈದ್ಧಾಂತಿಕವಾಗಿ ಗೆದ್ದುಕೊಳ್ಳುವ ಯೋಜನೆಯೂ ಇಲ್ಲ. ಇರಾದೆಯೂ ಇಲ್ಲ. ಹೀಗಾಗಿ ಅವು ಹೆಚ್ಚೆಂದರೆ ಕೆಲವು ಆರ್ಥಿಕ ಪ್ರಯೋಜನಕಾರಿ ಯೋಜನೆಗಳ ಮೂಲಕ ಜನರನ್ನು ಗೆಲ್ಲುವ ರಾಜಕಾರಣ ಮಾಡುತ್ತವೆ. ಆದರೆ ಬಿಜೆಪಿ-ಆರೆಸ್ಸೆಸ್ ಜನರನ್ನು ಸೈದ್ಧಾಂತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮ್ಮೆಡೆ ಸೆಳೆದುಕೊಳ್ಳುವ ಯೋಜನೆಯ ಜೊತೆಗೆ ಹುಸಿ ಹಿಂದೂ ರಾಷ್ಟ್ರಕ್ಕಾಗಿನ ಸಂಗ್ರಾಮವಾಗಿ ತಮ್ಮ ರಾಜಕಾರಣವನ್ನು ಬಿತ್ತುವುದರಿಂದ ಅದನ್ನು ಕೇವಲ ಅವರ ಆರ್ಥಿಕ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಮಾತ್ರ ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅಪಾರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ವರ್ಗಗಳು ಮತ್ತು ಸಮುದಾಯಗಳು ಕೂಡ ಬಿಜೆಪಿ ಸರಕಾರಗಳ ಬಗ್ಗೆ ಆ ವಿಷಯದಲ್ಲಿ ಅಸಮಾಧಾನ ಹೊಂದಿದ್ದರೂ ರಾಷ್ಟ್ರದ ಹಿತಾಸಕ್ತಿಗೆ ಅರ್ಥಾತ್ ಹಿಂದೂ 'ರಾಷ್ಟ್ರದ ಹಿತಾಸಕ್ತಿ'ಗೆ ಮೋದಿಗೇ ವೋಟು ಎನ್ನುತ್ತಾರೆ. ಆದ್ದರಿಂದ ಸಂಘಿಗಳ ಸುಳ್ಳನ್ನು ಪ್ರತಿಹೆಜ್ಜೆಯಲ್ಲೂ ಅದರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಿವೇಶದಲ್ಲೂ ವಿಫಲಗೊಳಿಸಬೇಕು. ಆರ್ಥಿಕ ಮತ್ತು ರಾಜಕೀಯ ಪರಿಧಿಯಲ್ಲಿ ಮಾತ್ರ ಸಂಘೀ ದ್ರೋಹಗಳನ್ನು ವಿರೋಧಿಸುತ್ತಾ, ಸಾಮಾಜಿಕ-ಸಾಂಸ್ಕೃತಿಕ-ಸೈದ್ಧಾಂತಿಕ-ಐತಿಹಾಸಿಕ ಕ್ಷೇತ್ರಗಳಲ್ಲಿ ಅವರ ಸುಳ್ಳುಗಳಿಗೆ ವಾಕ್ ಓವರ್ ಕೊಡುವುದು ಸಾರದಲ್ಲಿ ಅವರನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಈ ದೇಶದ ಬಹುತ್ವದ ಸ್ಮಾರಕ ಮತ್ತು ಸ್ಮತಿಗಳ ನಿರ್ನಾಮಕ್ಕೆ ಹೆದ್ದಾರಿಯನ್ನು ಒದಗಿಸಿ ರಾಜಕೀಯವಾಗಿಯೂ ಅವರನ್ನು ಗಟ್ಟಿಗೊಳಿಸುತ್ತದೆ. ಕರ್ನಾಟಕದಲ್ಲೇ ಅವರ ಈ ಯೋಜನೆಗೆ ಬಲಿಯಾದ ಜೀವಂತ ಸ್ಮಾರಕವಾಗಿರುವುದು ಬಾಬಾಬುಡಾನ್ ದರ್ಗಾ. ಸಂಘಿಗಳು ಹೇಗೆ ಹಂತಹಂತವಾಗಿ ಸುಳ್ಳುಗಳನ್ನು ಅಧಿಕೃತ ಇತಿಹಾಸವಾಗಿಸುತ್ತಾರೆ ಎಂಬ ಅಧ್ಯಯನಕ್ಕೆ ಬಾಬಾಬುಡಾನ್ ದರ್ಗಾ ಒಂದು ಕ್ಲಾಸಿಕ್ ಕೇಸ್. ಸಂಘಿಗಳ ಉರಿ-ನಂಜುಗಳ ವಿರುದ್ಧದ ಹೋರಾಟಕ್ಕೂ ಇದರಲ್ಲಿ ಸಾಕಷ್ಟು ಪಾಠಗಳಿವೆ.

ಬಾಬಾಬುಡಾನ್ ದರ್ಗಾ-ದತ್ತಪೀಠ -ಬೀದಿಸುಳ್ಳುಗಳು

ಅಧಿಕೃತ ಸತ್ಯವಾದ ಬಗೆ ಚಿಕ್ಕಮಗಳೂರಿನ ಬಾಬಾಬುಡಾನ್ ದರ್ಗಾದಲ್ಲಿ 1975ರ ತನಕವೂ ಯಾವುದೇ ವಿವಾದವಿರಲಿಲ್ಲ. ಮೈಸೂರು ಸಂಸ್ಥಾನದ ಒಂದು ದಾಖಲೆಯೇ ತಿಳಿಸುವಂತೆ 1904-05ರ ಸಾಲಿನಲ್ಲೂ ದರ್ಗಾಗೆ ಬಂದ 9,788 ತೀರ್ಥಯಾತ್ರಿಗಳಲ್ಲಿ 8,200 ಜನ ಮುಸ್ಲಿಮರು ಕೇವಲ 638 ಜನ ಹಿಂದೂಗಳು ಹಾಗೂ ಕೇವಲ 83 ಜನ ಬ್ರಾಹ್ಮಣರು. ಹೀಗೆ ಇದು ಮೊದಲಿಂದಲೂ ಮುಸ್ಲಿಮ್ ಮತ್ತು ಹಿಂದೂ ಸಮುದಾಯದ ತಳಜಾತಿಗಳು ನಡೆದುಕೊಳ್ಳುವ ಸೌಹಾರ್ದ ಕೇಂದ್ರವಾಗಿತ್ತು. ದಾದಾ ಹಯಾತ್ ಮೀರ್ ಖಲಂದರ್ ಎಂಬ ಸೂಫಿ ಗುರುವಿನ ಗೋರಿ ಮತ್ತವರ ಶಿಷ್ಯರುಗಳ ಗೋರಿಗಳಿಗೆ ಚಿರಾಗ್, ಚಾದರ್ ಮೂಲಕ ಹಿಂದೂ-ಮುಸ್ಲಿಮರಿಬ್ಬರೂ ಗೌರವ ಸಲ್ಲಿಸುತ್ತಾ ಬಂದಿದ್ದರು. ಇಲ್ಲಿ ಮುಸ್ಲಿಮ್ ಶಾಖಾದ್ರಿಯು ಪಾರುಪತ್ತೆಗಾರನಾಗಿದ್ದು, ಶಾಖಾದ್ರಿಯಿಂದ ನೇಮಿಸಲ್ಪಟ್ಟ ಮುಸ್ಲಿಮ್ ಮುಜಾವರನೇ ಹಿಂದೂ-ಮುಸ್ಲಿಮ್ ಇಬ್ಬರಿಗೂ ತೀರ್ಥ-ಪಡಿ- ಇತ್ಯಾದಿಗಳನ್ನು ನೀಡುವ ಸಂಪ್ರದಾಯವಿದೆ. ಇಲ್ಲಿ ಮಾತ್ರವಲ್ಲ ದಕ್ಷಿಣ ಏಶ್ಯದ ಎಲ್ಲಾ ದೇಶಗಳ ದರ್ಗಾದಲ್ಲೂ ಇರುವ ಧಾರ್ಮಿಕ ಪದ್ಧತಿ ಇದೇ ಆಗಿದೆ. ಆದರೆ 1975ರಲ್ಲಿ ಈ ಅನನ್ಯ ಸೌಹಾರ್ದ ಕೇಂದ್ರವನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ವಕ್ಫ್ ಬೋರ್ಡಿಗೆ ಸೇರಿಸುವ ಆದೇಶವನ್ನು ಆಗಿನ ಸರಕಾರ ನೀಡಿದಾಗ ಇಲ್ಲಿ ಮೊದಲ ವಿವಾದ ಉಂಟಾಯಿತು. ಈ ಆದೇಶದ ವಿರುದ್ಧ ಹಿಂದೂ ಭಕ್ತಾದಿಗಳ ಪರವಾಗಿ ಇಬ್ಬರು ಕೋರ್ಟಿನ ಮೆಟ್ಟಿಲೇರಿದರು.

ಆಗಲೂ ಆ ಭಕ್ತಾದಿಗಳ ಅಹವಾಲಿದ್ದದ್ದು ದರ್ಗಾವು ವಕ್ಫ್ ಬೋರ್ಡಿಗೆ ಸೇರಿದರೆ ಹಿಂದೂ ಭಕ್ತಾದಿಗಳು ದರ್ಗಾಗೆ ಬರಲಾಗುವುದಿಲ್ಲ ಎನ್ನುವುದೇ ಹೊರತು ಅಲ್ಲಿ ಮುಜಾವರನ ಬದಲಿಗೆ ಅರ್ಚಕನನ್ನು ನೇಮಕ ಮಾಡಬೇಕೆಂಬುದಾಗಲೀ, ಬ್ರಾಹ್ಮಣೀಯ ಆಗಮ ಪದ್ಧತಿಯ ಪೂಜೆ ನಡೆಯಬೇಕೆಂಬುದಾಗಲೀ ಅಥವಾ ಅದು ದರ್ಗಾ ಅಲ್ಲ ದೇವಸ್ಥಾನ ಎಂಬುದಾಗಲೀ ಆಗಿರಲಿಲ್ಲ. ಅರ್ಥಾತ್ ವಿವಾದ ಇದ್ದದ್ದು ಕೇವಲ ಹಿಂದೂ ಭಕ್ತಾದಿಗಳ ಪ್ರವೇಶದ ಹಕ್ಕಿನ ಕುರಿತು ಮಾತ್ರ. ಆದರೆ 1975-2023ರ ನಡುವೆ ಸಂಘಿಗಳು ಹಂತಹಂತವಾಗಿ ಇಲ್ಲದ ಸುಳ್ಳುಗಳನ್ನು ಹರಿಬಿಡುತ್ತಾ, ಅದರ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಾ, ಧರ್ಮದ ಮುಸುಕಿನ ಹೊಸ ಪದ್ಧತಿಗಳನ್ನು ಬಲವಂತವಾಗಿ ಬೀದಿಗಳಲ್ಲಿ ನಡೆಸುತ್ತಾ, ಕ್ರಮೇಣ ಅದೇ ಅಧಿಕೃತ ಪದ್ಧತಿಯಾಗಿ ಸರಕಾರ ಒಪ್ಪುವಂತೆ ಮಾಡುತ್ತಾ ಬಂದರು. ಈಗ ಅಂತಿಮವಾಗಿ ಅವರು ಬಿತ್ತಿದ್ದ ಸುಳ್ಳುಗಳನ್ನೇ ಸತ್ಯವೆಂದು ಕೋರ್ಟು ಕೂಡ ಪುರಸ್ಕರಿಸುವ ಹಂತಕ್ಕೆ ಬಂದಿದೆ. ಅಷ್ಟು ಮಾತ್ರವಲ್ಲ ಈ ಸುದೀರ್ಘ ಧಾರ್ಮಿಕ ಮುಸುಕಿನ ಕೋಮುವಾದಿ ರಾಜಕೀಯ ಪ್ರಕ್ರಿಯೆಯಲ್ಲಿ ಇಡೀ ಮಲೆನಾಡು ಮತ್ತು ಕರಾವಳಿ ಪ್ರಾಂತದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಬಲವಾದ ಹಿಂದುತ್ವವಾದಿ ನೆಲೆಯನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಹಿಂದೊಮ್ಮೆ ಕಾಂಗ್ರೆಸ್ ಪಕ್ಷದ ಮತ್ತು ಕಮ್ಯುನಿಸ್ಟ್ ಚಳವಳಿಯ ಭದ್ರಕೋಟೆಯಾಗಿದ್ದ ಈ ಪ್ರದೇಶದಲ್ಲಿ ಈಗ ಹಳ್ಳಿಹಳ್ಳಿಗಳಲ್ಲಿ ಕೋಮುವಾದದ ಕೆಸರಿನಲ್ಲಿ ಕಮಲವು ಅರಳಿಕೊಂಡಿದೆ. ಈ ಇಡೀ ಪ್ರಕ್ರಿಯೆಯಲ್ಲಿ ದೇಶದಲ್ಲಿ ಹೆಚ್ಚಾಗುತ್ತಾ ಬಂದ ಸಂಘಿಗಳ ರಾಜಕೀಯ ಶಕ್ತಿಯೂ, ನ್ಯಾಯಾಂಗ ಮತ್ತು ಕಾರ್ಯಾಂಗದ ಮೇಲೆ ಹೆಚ್ಚುತ್ತಾ ಹೋದ ಸಂಘದ ಪ್ರಭಾವವೂ ಒಂದು ಪ್ರಧಾನ ಕಾರಣವಾಗಿದ್ದರೆ ಸಂಘಿಗಳ ಸುಳ್ಳುಗಳನ್ನು ಇನ್ನಷ್ಟು ಬಲಿಷ್ಠವಾಗಿ ಬಯಲುಗೊಳಿಸದೆ, ವಿರೋಧಿಸದೆ ಚುನಾವಣಾ ಕಾರಣಗಳಿಗಾಗಿ ಅವರೊಂದಿಗೆ ರಾಜಿಯಾದ ವಿರೋಧ ಪಕ್ಷಗಳ ರಾಜಿಕೋರ ರಾಜಕಾರಣವೂ ಅಷ್ಟೇ ಪ್ರಮುಖವಾದ ಮತ್ತೊಂದು ಕಾರಣವಾಗಿದೆ.

ಅಮಾನ್ಯವಾಗಿದ್ದ ದತ್ತಪೀಠವೆಂಬ ಸುಳ್ಳುಗಳು 

 ಈಗ ಹೇಗೆ ಮಂಡ್ಯ ಪ್ರಾಂತದಲ್ಲಿ ಉರಿಗೌಡ ಮತ್ತು ನಂಜೇಗೌಡ ರ ಸುಳ್ಳುಗಳನ್ನು ಜನಸಾಮಾನ್ಯರು ಒಪ್ಪುತ್ತಿಲ್ಲವೋ, ವಿರೋಧ ಪಕ್ಷಗಳೂ ವಿರೋಧಿಸುತ್ತಿವೆಯೋ ಹಾಗೆಯೇ ಪ್ರಾರಂಭದಲ್ಲಿ 1980-90ರ ದಶಕದಲ್ಲಿ ಮಲೆನಾಡು ಪ್ರಾಂತದಲ್ಲೂ ಸಾಮಾನ್ಯರು ಹಾಗೂ ವಿರೋಧ ಪಕ್ಷಗಳು ''ಬಾಬಾಬುಡಾನ್ ದರ್ಗಾ ಅಲ್ಲ ದತ್ತಪೀಠ'' ಎಂಬ ವಿಶ್ವ ಹಿಂದೂ ಪರಿಷತ್ತಿನ ವಾದವನ್ನು ಒಪ್ಪುತ್ತಿರಲಿಲ್ಲ. ಬಿಜೆಪಿಗೆ ರಾಜಕೀಯವಾಗಿ ಇನ್ನು ಅಷ್ಟು ಶಕ್ತಿಯೂ ಬಂದಿರಲಿಲ್ಲ. 1980ರಲಿ ಚಿಕ್ಕಮಗಳೂರಿನ ಜಿಲ್ಲಾ ಸಿವಿಲ್ ನ್ಯಾಯಾಲಯವೂ ಸಹ ವಕ್ಫ್ ಬೋರ್ಡಿಗೆ ದರ್ಗಾದ ವರ್ಗಾವಣೆಯನ್ನು ರದ್ದುಗೊಳಿಸಿ ಹಿಂದೂ-ಮುಸ್ಲಿಮರಿಬ್ಬರೂ ಆದರಿಸುವ ದರ್ಗಾವಾಗಿ ಸಂಸ್ಥೆಯನ್ನು ಮಾನ್ಯ ಮಾಡಿತು. ಅರ್ಥಾತ್ ಇದು ಒಂದು ದರ್ಗಾ ಎಂದೂ, ಅದರ ಆಡಳಿತಾಧಿಕಾರಿ ಶಾಖಾದ್ರಿಯೆಂದೂ, ಗರ್ಭಗುಡಿಗೆ ಹಿಂದೂ-ಮುಸ್ಲಿಮರಿಬ್ಬರೂ ಪ್ರವೇಶಿಸಿ ಶಾಖಾದ್ರಿ ನೇಮಿಸಿದ ಮುಜಾವರ್‌ರಿಂದ ಪಡಿ ಪಡೆಯುವ ಪದ್ಧತಿಯನ್ನು ಎತ್ತಿಹಿಡಿಯಿತು. ಇದನ್ನು 1991ರಲ್ಲಿ ಹೈಕೋರ್ಟ್ ಮತ್ತು ಅದೇ ವರ್ಷ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿಯಿತು.

ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕೊಟ್ಟ ಆದೇಶದಂತೆ ಜಿಲ್ಲಾ ಮುಜರಾಯಿ ಅಧಿಕಾರಿಯೂ ಆಗಿರುವ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಯವರು ಒಂದು ಸಾರ್ವಜನಿಕ ವಿಚಾರಣೆ ನಡೆಸಿ ಕೊಟ್ಟ ವರದಿಯ ಮೇರೆಗೆ ಮುಜರಾಯಿ ಆಯುಕ್ತರು 1989ರ ಫೆಬ್ರವರಿಯಲ್ಲಿ ಇದೊಂದು ದರ್ಗಾ ಎಂದೂ, ಹಿಂದೂ-ಮುಸ್ಲಿಮರಿಬ್ಬರೂ ನಡೆದುಕೊಳ್ಳುತ್ತಾರೆಂದೂ, ಶಾಖಾದ್ರಿ ಆಡಳಿತಾಧಿಕಾರಿಯೆಂದೂ ಆದೇಶ ಹೊರಡಿಸಿದರು. ಹೀಗೆ ಕಾರ್ಯಾಂಗ ಮತ್ತು ನ್ಯಾಯಾಂಗದ ಉನ್ನತ ಹಂತದಲ್ಲಿ ಬಾಬಾಬುಡಾನ್ ದರ್ಗಾದ ಧಾರ್ಮಿಕ ಸ್ವರೂಪ ಮತ್ತು ಅಲ್ಲಿನ ಪೂಜಾ ವಿಧಾನಗಳು ಖಚಿತಗೊಂಡ ಮೇಲೆ ಯಾವುದೇ ವಿವಾದಕ್ಕೆ ಆಸ್ಪದ ಇರಬಾರದಿತ್ತು. ಆದರೆ 1990ರಲ್ಲಿ ರಾಮರಥಯಾತ್ರೆಯ ಭಾಗವಾಗಿ ಚಿಕ್ಕಮಗಳೂರಿನಲ್ಲಿ ಶಾರದಾ ಯಾತ್ರೆಯು ನಡೆಯಿತು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವಂತೆ ಬಾಬಾಬುಡಾನ್ ದರ್ಗಾವನ್ನು ಉರುಳಿಸಿ ದತ್ತಪೀಠ ಕಟ್ಟುವುದಾಗಿ ಮತ್ತೊಮ್ಮೆ ಘೋಷಣೆ ಮಾಡಿದರು. ಆದರೂ ಅದಕ್ಕೆ ಅಷ್ಟೊಂದು ಜನಮಾನ್ಯತೆ ಸಿಗಲಿಲ್ಲ.

ರಾಜಿಕೋರ ರಾಜಕಾರಣವು ಮಾನ್ಯ ಮಾಡಿದ ಸುಳ್ಳುಗಳು 

ಆದರೆ 1992ರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ವರ್ಷವೇ, ಚಿಕ್ಕಮಗಳೂರಿನ ವಿಶ್ವ ಹಿಂದೂಪರಿಷತ್ ಬಾಬಾಬುಡಾನ್ ದರ್ಗಾ ಎಂಬುದು ವಾಸ್ತವದಲ್ಲಿ ದತ್ತ ಪೀಠವೂ ಆಗಿದ್ದು ಅಲ್ಲಿ ಅನಸೂಯ ಜಯಂತಿ, ದತ್ತ ಜಯಂತಿ ಮಾಡಲು ಅವಕಾಶ ಕೊಡಲು ಆಗ್ರಹಿಸಿದವು. ಆದರೆ ಆ ವೇಳೆಗಾಗಲೇ ಹೈಕೋರ್ಟ್, ಸುಪ್ರೀಂ ಕೋರ್ಟ್, ಮುಜರಾಯಿ ಕಮಿಷನರ್ ಎಲ್ಲವೂ ಈ ಸಂಸ್ಥೆಯು ಒಂದು ದರ್ಗಾವೇ ಹೊರತು ಬೇರೇನೂ ಅಲ್ಲ ಎಂದು ಖಚಿತವಾಗಿ ಆದೇಶಕೊಟ್ಟಿದ್ದವು. ಮುಜರಾಯಿ ಕಮಿಷನರ್ ಅಂತೂ ಅಲ್ಲಿ ನಡೆಯುವ ಪೂಜಾ ವಿಧಾನಗಳ ಬಗ್ಗೆಯೂ ಖಚಿತವಾದ ಆದೇಶ ಕೊಟಿದ್ದರು. ಆದರೂ 1992ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರಕಾರವು ಅಲ್ಲಿ ದತ್ತ ಜಯಂತಿ ನಡೆಸಲು ಅವಕಾಶ ಮಾಡಿಕೊಟ್ಟಿತು. ಹೀಗೆ ಕಾಂಗ್ರೆಸ್ ಸರಕಾರವೇ ಸಂಘಿಗಳ ಸುಳ್ಳುಗಳಿಗೆ ಒಂದು ಅಧಿಕೃತ ಮಾನ್ಯತೆಯನ್ನು ಕೊಟ್ಟುಬಿಟ್ಟಿತು. ಇದು ಸಂಘಿಗಳಿಗೆ ಸಾಕಷ್ಟು ಬಲವನ್ನು ಮತ್ತು ಉತ್ಸಾಹವನ್ನು ತಂದುಕೊಟ್ಟಿತು. ಅಲ್ಲಿಂದಾಚೆಗೆ ಸಂಘಪರಿವಾರಿಗರು ಪ್ರತೀವರ್ಷ ಅಲ್ಲಿ ದತ್ತ ಜಯತಿ ಆಚರಣೆಯನ್ನು ಶುರು ಮಾಡಿದರು. 1997ರಿಂದ ಅಯ್ಯಪ್ಪಮಾಲೆಯ ರೀತಿ ವಾರಗಟ್ಟಲೆ ನಡೆಯುವ ದತ್ತ ಮಾಲೆ ಕಾರ್ಯಕ್ರಮವನ್ನೂ ಹೊಸದಾಗಿ ಪ್ರಾರಂಭಿಸಿದರು. 1999ರಿಂದ ಬಿಜೆಪಿ-ವಿಶ್ವಹಿಂದೂ ಪರಿಷತ್ ನಡೆಸುತ್ತಿದ್ದ ಈ ಖಾಸಗಿ ಕಾನೂನು ಬಾಹಿರ ಜಯಂತಿಗಳನ್ನು ಸರಕಾರವೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲು ಅಧಿಕೃತ ಸಮಿತಿಯನ್ನು ಕಾಂಗ್ರೆಸ್ ಸರಕಾರ ನೇಮಕ ಮಾಡಿತು. ಹೀಗೆ ಹಿಂದೂ ವೋಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಆಗಿನ ಕಾಂಗ್ರೆಸ್-ಜೆಡಿ ಸರಕಾರಗಳು ಈ ಸಂಘಿಗಳ ಸುಳ್ಳುಗಳನ್ನು ಅಧಿಕೃತ ಸತ್ಯವನ್ನಾಗಿಸಿಬಿಟ್ಟವು. ನಾಡಿನ ಪ್ರಗತಿಪರರು ಕೂಡ ಪ್ರಾರಂಭದಲ್ಲಿ ಸಂಘಿಗಳ ದೂರಗಾಮಿ ಹುನ್ನಾರಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು.

2002ರಲ್ಲಿ ಗುಜರಾತ್ ಹತ್ಯಾಕಾಂಡ ಮತ್ತು ಅದರ ನಂತರದ ಚುನಾವಣೆಯಲ್ಲಿ ಸಿಕ್ಕ ಜನಬೆಂಬಲಗಳು ಭಾರತದಲ್ಲಿ ಉಗ್ರ ಮೋದಿತ್ವಕ್ಕೆ ದಾರಿ ಮಾಡಿಕೊಟ್ಟವು. ಆವರೆಗೆ ಇದ್ದ ಅಲ್ಪಸ್ವಲ್ಪಅಳುಕೂ ಮರೆಯಾಗಿ ಕರ್ನಾಟಕದಲ್ಲೂ ಆಗಿನ ಬಿಜೆಪಿ ಅಧ್ಯಕ್ಷರಾಗಿದ್ದ ಅನಂತ್ ಕುಮಾರ್ ಅವರು ''ದತ್ತಪೀಠವನ್ನು ಮತ್ತೊಂದು ಅಯೋಧ್ಯೆಯಾಗಿಸುವುದಾಗಿಯೂ, ಕರ್ನಾಟಕವನ್ನು ಮತ್ತೊಂದು ಗುಜರಾತ್ ಆಗಿಸುವುದಾಗಿಯೂ'' ಘೋಷಿಸಿದರು. ಆವರೆಗೆ ವರ್ಷಕ್ಕೊಮ್ಮೆ ದತ್ತಜಯಂತಿಗೆ, ದತ್ತಮಾಲೆಗೆ ಅವಕಾಶ ಕೊಡಬೇಕೆಂಬ ಬೇಡಿಕೆಯು ನಂತರ ದತ್ತಪೀಠವನ್ನು ವಿಮೋಚನೆ ಮಾಡುವ 'ಚಳವಳಿ'ಯಾಗಿ ಬದಲಾಯಿತು. ಇದ್ದಕ್ಕಿದ್ದ ಹಾಗೆ ಹೊಸ ಇತಿಹಾಸಗಳನ್ನು ಹುಟ್ಟುಹಾಕಿತು.

ಸುಳ್ಳುಗಳಿಗೆ ಸಾಥ್ ಸದರಿ ಸಂಸ್ಥೆಯು ಕಾಲಾನುಕಾಲದಿಂದಲೂ ದತ್ತಾತ್ರೇಯ ದೇವಸ್ಥಾನವಾಗಿ ತ್ತೆಂದೂ, ಟಿಪ್ಪುಸುಲ್ತಾನ್ ಕಾಲದಲ್ಲಿ ಅದನ್ನು ದರ್ಗಾ ಆಗಿ ಬಲವಂತವಾಗಿ ಬದಲಾಯಿಸಲಾಯಿತೆಂದೂ ಸುಳ್ಳು ಇತಿಹಾಸದ ಪ್ರಚಾರ ಪ್ರಾರಂಭವಾಯಿತು. ಅದರ ಭಾಗವಾಗಿಯೇ 2003ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ದತ್ತಪೀಠದಲ್ಲಿ ಹಿಂದೂ ಅರ್ಚಕನನ್ನು ನೇಮಕ ಮಾಡಬೇಕೆಂಬ ದಾವೆಯನ್ನು ಸಲ್ಲಿಸಲಾಯಿತು. ಆದರೆ ಈವರೆಗೆ ಈ ಸುಳ್ಳುಗಳನ್ನು ಸಮರ್ಥಿಸಿಕೊಳ್ಳುವ ಒಂದೇ ಒಂದು ಪುರಾವೆಯನ್ನು ಸಂಘಿಗಳು ಸಾರ್ವಜನಿಕ ವಿಚಾರಣೆಯಲ್ಲಾಗಲೀ, ಹೈಕೋರ್ಟಿನಲ್ಲಾಗಲೀ ಅಥವಾ ಸುಪ್ರೀಂ ಕೋರ್ಟಿನಲ್ಲಾಗಲೀ ಸಲ್ಲಿಸಿಲ್ಲ. ಈ ಹೊಸ ಇತಿಹಾಸಕ್ಕೆ ಅವರು ಆಶ್ರಯಿಸಿದ್ದು 1988ರಲ್ಲಿ ಚಿಕ್ಕಮಗಳೂರಿನ ಆಗಿನ ಉಪ ಆಯುಕ್ತರು ವಿಶ್ವ ಹಿಂದೂ ಪರಿಷತ್ತಿನ ವಕೀಲರೂಬ್ಬರು ಕೊಟ್ಟ ಮೌಖಿಕ ಹೇಳಿಕೆಯನ್ನು ಯಥಾವತ್ ಅಧಿಕೃತ ಇತಿಹಾಸ ಎಂದು ದಾಖಲಿಸಿ ಕೊಟ್ಟ ಆಡಳಿತಾತ್ಮಕ ವರದಿಯನ್ನು! 2007ರಲ್ಲಿ ಹೈಕೋರ್ಟ್ ಕೂಡ ಯಾವುದೇ ದೀರ್ಘ ವಿಚಾರಣೆ ಇಲ್ಲದೆ ಟಿಪ್ಪುಸುಲ್ತಾನ್ ಕಾಲದಲ್ಲಿ ಸಂಸ್ಥೆಯ ಆಡಳಿತ ಸ್ವರೂಪ ಬದಲಾಗಿದೆಯೇ ಎಂದು ಪರಿಶೀಲಿಸಿ, ಅರ್ಚಕನನ್ನು ನೇಮಕ ಮಾಡಲು ಆದೇಶಿಸಿತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತಾದರೂ ಆ ವೇಳೆಗಾಗಲೇ ಬಲಗೊಳ್ಳುತ್ತಿದ್ದ ಹಿಂದುತ್ವ ರಾಜಕೀಯ ಸನ್ನಿವೇಶದಲ್ಲಿ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳದೆ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದ ನ್ಯಾಯಾಧೀಶರಾಗಿದ್ದ ನ್ಯಾ. ರಂಜನ್ ಗೊಗೊಯಿ ಮತ್ತು ನ್ಯಾ. ರಮಣ ಅವರು 2015ರಲ್ಲಿ ಆ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳುವಂತೆ ಕರ್ನಾಟಕ ಸರಕಾರಕ್ಕೆ ಆದೇಶಿಸಿದರು.

ಆಗಿನ ಕಾಂಗ್ರೆಸ್ ಸರಕಾರ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿದರೂ, ಅದು ದರ್ಗಾ ಸ್ವರೂಪವನ್ನು ಉಳಿಸಿಕೊಳ್ಳಲು 2017ರಲ್ಲಿ ಶಿಫಾರಸು ಮಾಡಿದರೂ, ಕಾಂಗ್ರೆಸ್ ಸರಕಾರ ಅದರಂತೆ 2018ರಲ್ಲಿ ಆದೇಶ ನೀಡಿದರೂ, ಅದನ್ನು ಸಂಘಿಗಳು ಹೈಕೋರ್ಟಿನಲ್ಲಿ 2018ರಲ್ಲಿ ಪ್ರಶ್ನಿಸಿದರು. 2019ರಲ್ಲಿ ಆಪರೇಶನ್ ಕಮಲದ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೋರ್ಟಿನಲ್ಲಿ ಸರಕಾರಿ ವಕೀಲರೂ ಹಿಂದಿನ ಸರಕಾರದ ಆದೇಶವನ್ನು ಸಮರ್ಥಿಸಿಕೊಳ್ಳಲಿಲ್ಲ. ಆ ವೇಳೆಗಾಗಲೇ ಅತ್ಯಂತ ನ್ಯಾಯಘಾತುಕವಾದ 'ಅಯೋಧ್ಯೆ ತೀರ್ಪು' ಕೂಡ ಹೊರಬಂದು ಬಹುಸಂಖ್ಯಾತರ ಶ್ರದ್ಧಾ ನಂಬಿಕೆಗಳಿಗೆ ಪುರಾವೆ ತೋರುವ ಅಗತ್ಯವಿಲ್ಲ ಎಂದು ಐವರು ಸದಸ್ಯರ ಸಾಂವಿಧಾನಿಕ ಪೀಠ ತೀರ್ಪು ಕೊಟ್ಟಿತ್ತು. ಹೀಗಾಗಿ 2021ರಲ್ಲಿ ಕರ್ನಾಟಕ ಹೈಕೋರ್ಟಿನ ಏಕಸದಸ್ಯ ಪೀಠ ಮತ್ತು 2023ರಲ್ಲಿ ವಿಭಾಗೀಯ ಪೀಠ ಬಹುಸಂಖ್ಯಾತರ ಧರ್ಮದವರು ಆ ಸಂಸ್ಥೆಯು ದತ್ತಾತ್ರೇಯ ದೇವಸ್ಥಾನ ಎಂದು ಭಾವಿಸುವುದರಿಂದ ಬಾಬಾಬುಡಾನ್ ದರ್ಗಾದಲ್ಲಿ ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆ ನಡೆಸಲು ಅರ್ಚಕನ ನೇಮಕಾತಿಯನ್ನು ಆದೇಶಿಸಿದೆ. ಹೀಗೆ ಬೀದಿಯಲ್ಲಿದ್ದ ಸುಳ್ಳು ಈಗ ಅಧಿಕೃತ ದೇವಸ್ಥಾನವಾಗಿದೆ. ದರ್ಗಾವನ್ನು ನಾಶ ಮಾಡಿದೆ. ಉರಿನಂಜುಗಳನ್ನು ಪ್ರಾರಂಭದಲ್ಲೇ ಸಮಗ್ರವಾಗಿ ಹಿಮ್ಮೆಟ್ಟಿಸೋಣ 
 
ಬಾಬಾಬುಡಾನ್ ದರ್ಗಾ ಎಂಬ ನಿಜವನ್ನು ಸುಳ್ಳಾಗಿಸಿ ದತ್ತಾತ್ರೇಯ ದೇವಸ್ಥಾನ ಎಂಬ ಸುಳ್ಳನ್ನು ಅಧಿಕೃತ ಸತ್ಯವಾಗಿಸಿದ ಪ್ರಕ್ರಿಯೆಯೇ ಉರಿಗೌಡ - ನಂಜೇಗೌಡರ ಕಥನದಲ್ಲೂ ಪ್ರಾರಂಭವಾಗಿದೆ.

ಸುಳ್ಳು ಸತ್ಯವಾದ ಈ ಪ್ರಕ್ರಿಯೆಯಲ್ಲಿ:
ಚುನಾವಣಾ ಪ್ರಯೋಜನಕ್ಕಾಗಿ ಬಿಜೆಪಿ ವಿರೋಧವಿದ್ದರೂ, ಸೈದ್ಧಾಂತಿಕವಾಗಿ- ರಾಜಕೀಯವಾಗಿ ಹಿಂದುತ್ವದಿಂದ ಹೆಚ್ಚೇನೂ ದೂರವಿರದ ವಿರೋಧ ಪಕ್ಷಗಳ ಪಾಲಿದೆ.

ಹಾಗೆಯೇ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಮೇಲಿರುವ ಸುಪ್ತ, ಗುಪ್ತ ಮತ್ತು ಈಗ ಬಹಿರಂಗವಾಗಿ ಇರುವ ಹಿಂದುತ್ವದ ಪ್ರಭಾವದ ಪಾತ್ರವೂ ಇದೆ. ಹಾಗೆಯೇ ಈ ವಿಷಯದಲ್ಲಿ ಸಂಘ ಪರಿವಾರದ ದೂರಗಾಮಿ ಹುನ್ನಾರಗಳನ್ನು ಅರ್ಥಮಾಡಿಕೊಂಡು ಅವರ ಸುಳ್ಳನ್ನು ಸಮಗ್ರವಾಗಿ ಬಯಲು ಮಾಡಲು ಯಶಸ್ವಿಯಾಗದ ಪ್ರಗತಿಪರರ ಪಾತ್ರವೂ ಇದೆ. ಒಟ್ಟಾರೆಯಾಗಿ ಜನರ ನಡುವೆ ಬೇರಿಲ್ಲದ ಪ್ರಗತಿಪರ ಚಳವಳಿಗಳ ದೌರ್ಬಲ್ಯವೂ ಇದೆ. ಈಗ ಅದೇ ಪ್ರಕ್ರಿಯೆಯು ಉರಿಗೌಡ-ನಂಜೇಗೌಡರ ವಿಷಯದಲ್ಲೂ ಪ್ರಾರಂಭವಾಗಿದೆ. ಸಂಘಿಗಳ ಹುನಾರಗಳನ್ನು ಉದಾಸೀನ ಮಾಡದೆ ಅಥವಾ ಮೈಮರೆಯದೆ ಎಚ್ಚರದಿಂದಿರೋಣ. ಸಂಘಿಗಳ ಸುಳ್ಳುಗಳನ್ನು ಸಮಗ್ರವಾಗಿ ಹಿಮ್ಮೆಟ್ಟಿಸುವ ಅಗತ್ಯವನ್ನು ಮನಗಾನೋಣ. ಬಾಬಾಬುಡಾನ್ ದರ್ಗಾದಿಂದ ಪಾಠಗಳನ್ನು ಕಲಿಯೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top