-

ಈಗಲಾದರೂ ಅರಿಯಬಲ್ಲವೇ ಶತ್ರುವಿನ ಚಹರೆಯನ್ನು!

-

ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ ಆಯೋಜಿತ ವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಇದು ಜನಮಾನಸದಲ್ಲಿ ಇತರ ಮನುಷ್ಯರನ್ನು ತಮ್ಮ ನೈತಿಕ ಹೊಣೆಗಾರಿಕೆಯ ಲೋಕದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ.


ಸಂಘಪರಿವಾರ ನಡೆಸುವ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಘೋಷಿಸಿರುವ ಹೊಸ ಮೀಸಲಾತಿ ಸೂತ್ರದ ಹಿಂದಿನ ಮುಸ್ಲಿಮ್ ದ್ವೇಷ, ಮುಸ್ಲಿಮ್ ಮೀಸಲಾತಿಯನ್ನು ಒಕ್ಕಲಿಗ-ಲಿಂಗಾಯತರ ನಡುವೆ ಹಂಚಿ ತಮ್ಮ ಪಾಪದಲ್ಲಿ ಆ ಸಮುದಾಯಗಳನ್ನು ಒಳಗೊಳ್ಳುತ್ತಿರುವ ರೀತಿ, ದಲಿತರಿಗೆ ಮಾಡಿರುವ ನಯವಂಚನೆ ಇತ್ಯಾದಿಗಳು ಈ ನಾಡಿನ ದಲಿತ-ದಮನಿತ ಸಮುದಾಯದ ಶತ್ರುವಿನ ಚಹರೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಹಾಗೆಯೇ ಪ್ರಧಾನಿ ಮತ್ತು ಅದಾನಿಯ ನಡುವಿನ ಸಂಬಂಧವನ್ನು ಏಕಾಂಗಿಯಾಗಿ ಮತ್ತು ನಿರಂತರವಾಗಿ ಪ್ರಶ್ನಿಸುತ್ತಿದ್ದ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದಲೇ ನಿವಾರಿಸಿಕೊಳ್ಳಲು ಮೋದಿ ಸರಕಾರ ಮಾಡಿದ ಕುತಂತ್ರವೂ ಕೂಡ.

ಅದಾನಿಯನ್ನು ಉಳಿಸಲು 28 ಕೋಟಿ ಕಾರ್ಮಿಕರ ಪ್ರಾವಿಡೆಂಟ್ ಹಣವನ್ನು ಹೂಡುತ್ತಿರುವುದು, ಅದನ್ನು ಪ್ರಶ್ನಿಸಿದರೆ ದೇಶದ ಪ್ರತಿಷ್ಠೆಗೆ ಧಕ್ಕೆ, ರಾಷ್ಟ್ರದ್ರೋಹ ಎಂದು ಕೇಸುಗಳನ್ನು ಹಾಕುವುದು. ಇಂತಹ ನೀತಿಗಳಿಂದ ಆಗುವ ಅಪಾಯಗಳನ್ನು ಬಯಲಿಗೆ ತರುತ್ತಿದ್ದ ಸಿಪಿಆರ್ (ಸೆಂಟರ್ ಫಾರ್ ಪೊಲಿಟಿಕಲ್ ರಿಸರ್ಚ್) ನಂಥ ಥಿಂಕ್ ಟ್ಯಾಂಕುಗಳ ಮೇಲೂ ಈ.ಡಿ. ದಾಳಿ, ಕಳೆದ 4 ತಿಂಗಳುಗಳಲ್ಲಿ ನಲವತ್ತು ಕಡೆ ಮುಸ್ಲಿಮರನ್ನು ಹೊಡಿ-ಬಡಿ-ಕೊಲು ್ಲಎಂದು ಬಹಿರಂಗ ಭಾಷಣ ಮಾಡಿದವರ ಮೇಲೆ ಒಂದು ಕೇಸೂ ಹಾಕದೆ ಉರಿಗೌಡ- ನಂಜೇಗೌಡ ಸುಳ್ಳು ಎಂದಿದ್ದಕ್ಕೆ ನಟ ಚೇತನ್‌ಅವರನ್ನು ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ಎಂದು ಬಂಧಿಸಿದ್ದು, ಬಿಲ್ಕಿಸ್ ಬಾನು ರೇಪಿಸ್ಟುಗಳಿಗೆ ಬಹಿರಂಗವಾಗಿ ಬಿಜೆಪಿ ಶಾಸಕರು ಸನ್ಮಾನ ಮಾಡುವುದು, ಮುಸ್ಲಿಮರ ನರಹತ್ಯೆ ಮಾಡಿ ಎಂಬ ಕರೆಗಳನ್ನು ಕೊಡುವವರಿಗೆ ಸರಕಾರವೇ ರಕ್ಷಣೆ ಕೊಡುವುದು? ಇತ್ಯಾದಿಗಳು.. ಹೆಚ್ಚು ಕಡಿಮೆ ದಿನಕ್ಕೆ ಇಂಥ ಇಪ್ಪತ್ತು ನಿದರ್ಶನಗಳು ನಮ್ಮ ಶತ್ರುವಿನ ಚಹರೆಯನ್ನು ಸ್ಪಷ್ಟಗೊಳಿಸುತ್ತಿವೆ..

ಆದರೆ ಶತ್ರುವಿನ ಅಸಲಿ ಚಹರೆಯನ್ನು ಈಗಲಾದರೂ ಅರಿಯಬಲ್ಲವೇ ಎಂಬುದಷ್ಟೆ ಎದುರಿಗಿರುವ ಪ್ರಶ್ನೆ. ಇತಿಹಾಸದಲ್ಲಿ ಹಿಟ್ಲರ್- ಮುಸ್ಸೋಲಿನಿಗಳು ತಮ್ಮ ನಾಝಿ-ಫ್ಯಾಶಿಸ್ಟ್ ಯೋಜನೆಗಳ ಸೂಚನೆಗಳನ್ನು ನೀಡಿದ್ದರೂ ಅದನ್ನು ಕಾಣಲು ನಿರಾಕರಿಸಿದ್ದಕ್ಕೆ ಜಗತ್ತು ಅತ್ಯಂತ ದೊಡ್ಡ ಬೆಲೆ ತೆತ್ತಿತು.

ಕಣ್ಣಿಗೆ ಕಂಡದ್ದನ್ನು ಮತ್ತು ಸಾಮಾನ್ಯ ಜನರು ಅನುಭವಿಸುತ್ತಿದ್ದ ದಾರುಣತೆಯನ್ನು ಸತ್ಯವಲ್ಲವೆಂದು ನಿರಾಕರಿಸಿ ಕ್ರೌರ್ಯವನ್ನು ಸಹಜ ಮಾನ್ಯಗೊಳಿಸಿದ್ದರಲ್ಲಿ ಕಂಫರ್ಟ್ ರೆನುಗಳಲ್ಲಿದ್ದ ಮಧ್ಯಮವರ್ಗದ ಬುದ್ಧಿಜೀವಿಗಳ ಪಾತ್ರ ಬಹುದೊಡ್ಡದು. ಎಲ್ಲಕ್ಕಿಂತ ಹೆಚ್ಚಾಗಿ ಸಹಜೀವಿಗಳನ್ನು ಅನ್ಯೀಕರಿಸಿ, ತಮ್ಮ ನೈತಿಕ ವಿಶ್ವದಿಂದ ಹೊರಗು ಮಾಡಿ ಅವರ ನರಮೇಧ ಗಳನ್ನು ‘ನಾಗರಿಕ ಸಮಾಜ’ ಒಪ್ಪುವಂತೆ, ಬೆಂಬಲಿಸುವಂತೆ ಮಾಡಿದ ಪರಿ ಗಾಬರಿ ಹುಟ್ಟಿಸುತ್ತದೆ. ಇಂದು ಭಾರತದಲ್ಲಿ ಇದೇ ನರಮೇಧದ ಮತ್ತು ನರಭಕ್ಷಕ ರಾಜಕಾರಣ ಸಮಾಜದಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿದೆ. ಉದಾಹರಣೆಗೆ, ರುವಂಡಾ ದೇಶದಲ್ಲಿ 1994ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್‌ಕೇನ್ ಅವರು ನಂತರ ಅದರ ಬಗ್ಗೆಯೇ- Season Of Blood- A Rwandan Journey  ಎಂಬ ಪುಸ್ತಕ ಬರೆದರು. ಅದರಲ್ಲಿ ಅವರು ಆ ದೇಶದಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ:

... ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡಜನರನ್ನೂ ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನು ಟುಟ್ಸಿಗಳ ವಿರುದ್ಧ ದ್ವೇಷದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರಿ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು. ಅವರು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡ ಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು.
ಆದರೆ ಇಂತಹ ಅನಾಗರಿಕ, ಅಮಾನುಷ ನರಮೇಧಗಳಿಗೆ ಬಹುಸಂಖ್ಯಾತರ ಜನಸಮ್ಮತಿ ದೊರೆಯುವುದಾದರೂ ಹೇಗೆ?
ಜಗತ್ತಿನಾದ್ಯಂತ ನಡೆಯುತ್ತಿರುವ ಇಂಥ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆ ಫೇನ್ ಅವರು ಇದಕ್ಕೆ ಕಂಡುಕೊಂಡಿರುವ ಉತ್ತರವಿದು:

ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ ಆಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಇದು ಜನಮಾನಸದಲ್ಲಿ ಇತರ ಮನುಷ್ಯರನ್ನು ತಮ್ಮ ನೈತಿಕ ಹೊಣೆಗಾರಿಕೆಯ ಲೋಕದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ. ನಮ್ಮವರ ಬಗ್ಗೆ ನಾವು ಸಹಜವಾಗಿ ಹೊಂದಿರುವ ನೈತಿಕ ಹೊಣೆಗಾರಿಕೆ ಯನ್ನು ಅನ್ಯರಿಗೆ ನಿರಾಕರಿಸಲು ಬೇಕಾದ ಮನಸ್ಥಿತಿ ಹಾಗೂ ಸಮರ್ಥನೆಗಳನ್ನು ಈ ಕಲ್ಪಿತ ದ್ವೇಷ, ಭೀತಿ ಮತ್ತು ಸಾಮಾಜಿಕ ಪೂರ್ವಗ್ರಹಗಳು ಬಿತ್ತುತ್ತವೆ.

ನಾಗರಿಕ ಸಮಾಜ ನರಭಕ್ಷಕ ಸಮಾಜವಾಗುವ ಹತ್ತು ಹಂತಗಳು:
ಸಹವಾಸಿಗಳ ಈ ಅನ್ಯೀಕರಣ ಮತ್ತು ಪರಾಯೀಕರಣವು ಕೂಡಾ ಏಕಾಏಕಿ ಸಂಭವಿಸುವುದಿಲ್ಲ. ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊ. ಗ್ರೆಗೋರೊ ಸ್ಟಾನ್ಟನ್‌ಅವರು ನರಮೇಧದ ಕ್ಲೈಮ್ಯಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:
1.Classification-ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ
2.Symbolisation: ಆ ಗುಂಪಿನ ಚಹರೆಗಳ ಪಟ್ಟೀಕರಣ
3.Discrimination- ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು
4.Dehumanisation- ಆ ಗುಂಪನ್ನು ಅಪಮಾನಿಸುತ್ತಾ ಮಾನ ವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು
  5.Organisation- ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು
6.Polarisation- ಇವುಗಳ ಆಧಾರದ ಮೇಲೆ ನಾವೂ - ಅವರು ಎಂದು ಸಮಾಜವನ್ನು ಧ್ರುವೀಕರಿಸುವುದು
7.Preparation -ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು

8.Parsecution ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.
9.Extermination - ಸಾಮೂಹಿಕ ಕಗ್ಗೊಲೆ

10.Denial - ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ.

ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು.
ಮೋದಿ ನಂತರದ ಭಾರತೀಯ ಸಮಾಜದಲ್ಲಿ ಮೇಲಿನ ಹತ್ತೂ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ. ನಾಗರಿಕ ಸಮಾಜವನ್ನು ಮೃಗೀಯ ಗೊಳಿಸುತ್ತಿದೆ. ಮುಸ್ಲಿಮರನ್ನು ಅನ್ಯೀಕರಣಗೊಳಿಸುತ್ತಾ, ದಲಿತ-ಶೂರ ಸಮುದಾಯವನ್ನು ಅಮಾನ್ಯಗೊಳಿಸುತ್ತಾ ಸಾಂಸ್ಕೃತಿಕ-ರಾಜಕೀಯ ನರಮೇಧಗಳನ್ನು ನಡೆಸುತ್ತಿದೆ.

ಫ್ಯಾಶಿಸಂ ಮತ್ತು ಕಂಫರ್ಟ್ ಝೋನ್ ನ ನಿರುದ್ವಿಘ್ನ ನಿರ್ಲಿಪ್ತತೆ
ಇಂತಹ ರಾಜಕಾರಣ ಮನುಷ್ಯರನ್ನು ಹೇಗೆ ಕೊಲೆಗಡುಕ ಯಂತ್ರಗಳನ್ನಾ ಗಿಸುತ್ತದೆ ಎಂಬುದನ್ನು ಹನ್ನಾ ಆರೆಂಡ್ಟ್ ಎಂಬ ವಿದ್ವಾಂಸೆ ತನ್ನ ಅಧ್ಯಯನದಲ್ಲಿ ಹೀಗೆ ಸ್ಪಷ್ಟಪಡಿಸುತ್ತಾರೆ. ಅದರಲ್ಲೂ ನಾಝಿ ಯೋಧ ಐಶ್‌ಮೆನ್ ಎಂಬ ವ್ಯಕ್ತಿ ಹೇಗೆ ‘ನಿರುದ್ವಿಘ್ನ ನಿರ್ಲಿಪ್ತತೆ’ಯಿಂದ ಸಾವಿರಾರು ಯಹೂದಿಗಳ ಕಗ್ಗೊಲೆ ನಡೆಸಲು ಸಾಧ್ಯವಾಯಿತು ಎಂದು ವಿವರಿಸುತ್ತಾರೆ. ‘‘ಐಶ್ ಮನ್ ನಂತವರು ಕಾಡುವುದೇಕೆಂದರೆ ಅವನಂತವರು ಅಲ್ಲಿ ಸಾವಿರಾರು ಮಂದಿಯಿದ್ದಾರೆ ಮತ್ತು ಅವರಲ್ಲಿ ಬಹಳಷ್ಟು ಜನ ವಿಕೃತ ಮನಸ್ಸುಳ್ಳವರೂ ಅಲ್ಲ. ಅಥವಾ ಹಿಂಸಾನಂದಿಗಳೂ ಅಲ್ಲ. ಅಂಥ ಬಹಳಷ್ಟು ಜನ ಈಗಲೂ- ಆಗಲೂ ಭೀತಿ ಹುಟ್ಟಿಸುವಷ್ಟು ನಾರ್ಮಲ್ ಸ್ಥಿತಿಯಲ್ಲೇ ಇದ್ದಾರೆ. ನಮ್ಮ ಕಾನೂನು ಸಂಸ್ಥೆಗಳ ದೃಷ್ಟಿಕೋನದಲ್ಲಿ ಹಾಗೂ ನಮ್ಮ ನೈತಿಕ ಮಾನದಂಡಗಳ ತೀರ್ಮಾನಗಳಲ್ಲಿ ನೋಡುವುದಾದರೆ ಅವರು ನಡೆಸಿದ ಎಲ್ಲಾ ಅತ್ಯಾಚಾರಗಳ ಒಟ್ಟು ಭೀಕರತೆಗಿಂತಲೂ ಈ ನಾರ್ಮಾಲಿಟಿಯು (ಸಾಮಾನ್ಯ ಸ್ಥಿತಿ ) ಅತ್ಯಂತ ಭಯಾನಕವಾದದ್ದು’’
- ಹನಾ ಆರೆಂಡ್ಟ್
(The trouble with Eichmann was precisely that so many were like him, and that the many were neither perverted nor sadistic, that they were, and still are, terribly and terrifyingly normal. From the viewpoint of our legal institutions and of our moral standards of judgment, this normality was much more terrifying than all the atrocities put together." 
-Hannah Arendt)

ಅಡಾಲ್ಫ್ ಐಶ್‌ಮನ್ ಹಿಟ್ಲರ್‌ನ ಒಬ್ಬ ನಾಝಿ ಕಮಾಂಡರ್. ಲಕ್ಷಾಂತರ ಯಹೂದಿಗಳ ಕೊಲೆಗೆ ಬೇಕಾದ ಸಿದ್ಧತೆಗಳನ್ನು ಮಾಡುವ ಜವಾಬ್ದಾರಿ ನಿರ್ವಹಿಸಿದವ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸೋತ ನಂತರ ಸಾವಿರಾರು ನಾಝಿಗಳ ಜೊತೆ ಈತನೂ ದಕ್ಷಿಣ ಅಮೆರಿಕದ ಅರ್ಜೆಂಟಿನಾಗೆ ಪಲಾಯನ ಮಾಡಿ, ಅಲ್ಲಿ ಸಭ್ಯ ಗೃಹಸ್ಥನಾಗಿ ನೆಮ್ಮದಿಯಿಂದ ವಾಸ ಮಾಡುತ್ತಿದ್ದ. ಆದರೆ 1960 ರಲ್ಲಿ ಇಸ್ರೇಲಿನ ಮೋಸ್ಸಾದ್ ಆತನನ್ನು ಪತ್ತೆಹಚ್ಚಿ ಅಪಹರಿಸಿ ಇಸ್ರೇಲ್‌ಗೆ ಕರೆತರುತ್ತದೆ. ಅಲ್ಲಿ ಎರಡು ವರ್ಷಗಳ ಕಾಲ ಆತನ ವಿಚಾರಣೆ ನಡೆದು 1962 ರಲ್ಲಿ ಮರಣದಂಡನೆ ವಿಧಿಸಲಾಗುತ್ತದೆ. ಈ ವಿಚಾರಣೆಯನ್ನು ವರದಿ ಮಾಡಿದ ಪತ್ರಕರ್ತೆ, ವಿದ್ವಾಂಸೆ ಹನಾ ಆರೆಂಡ್ಟ್ ಅವರು ವಿಚಾರಣೆಯಲ್ಲಿ ಐಶ್‌ಮನ್ ತೋರುವ ‘‘ನಿರುದ್ವಿಗ್ನ ನಿರ್ಲಿಪ್ತತೆ’’ ಹಾಗೂ ತಾನು ಭಾಗವಹಿಸಿದ ನರಮೇಧಗಳ ಬಗ್ಗೆ ಯಾವುದೇ ವ್ಯಥೆ ಇಲ್ಲದ ಪ್ರತಿಕ್ರಿಯೆಗಳನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ಆ ನಂತರ ಹತ್ಯಾಕಾಂಡದಲ್ಲಿ ಭಾಗವಹಿಸಿದ ಕೊಲೆಪಾತಕರ ಈ ಮನಸ್ಥಿತಿಯ ಬಗ್ಗೆ ಅಧ್ಯಯನ ಮಾಡುತ್ತಾರೆ. ‘‘ಲಕ್ಷಾಂತರ ಜನರ ಕಗ್ಗೊಲೆಯ ನಂತರವೂ ಮನುಷ್ಯ ಮಾತ್ರರಿಗೆ ಈ ಯಾಂತ್ರಿಕ ನಿರ್ಲಿಪ್ತತೆ ಹೇಗೆ ಸಾಧ್ಯ?’’

‘‘ಅಮಾನುಷ ಕ್ರೌರ್ಯಗಳನ್ನೂ ನಡೆಸಿಯೂ ಕಿಂಚಿತ್ತೂ ಗಿಲ್ಟ್ ಕೂಡ ಇಲ್ಲದೆ ಸಹಜ ಮನುಷ್ಯರಾಗಿ ಬದುಕಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ Banality Of Evil ಎಂಬ ಪುಸ್ತಕ ಬರೆಯುತ್ತಾರೆ.
ಮೇಲಿನ ಅನುವಾದ ಆ ಪುಸ್ತಕದ ಒಂದು ಪ್ಯಾರಾ ..
ಮೋದಿ ಭಾರತದಲ್ಲಿ ದ್ವೇಷದ ನರಮೇಧಗಳನ್ನು ದೇಶಭಕ್ತಿಯ ಭಾಗವಾಗಿ ನಿರುದ್ವಿಘ್ನವಾಗಿ ಸಮರ್ಥಿಸಿಕೊಳ್ಳುವ ನಮ್ಮ ಮನೆಯೊಳಗಿನ ಅಥವಾ ನೆರೆಹೊರೆಯ ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಸಹಾಯ ಮಾಡಬಹುದು.

ಹಾಗೆಯೇ ಶತ್ರುವಿನ ಚಹರೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಹೋದ ದುರಂತದ ಬಗ್ಗೆ ಜರ್ಮನಿಯ ಪಾದ್ರಿ ನೆಮ್ಯುಲರ್‌ಅನುಭವವೂ ನಮ್ಮ ಸಂದರ್ಭದಲ್ಲಿ ಕಂಫರ್ಟ್‌ರೆನ್‌ಗಳಲ್ಲಿರುವವರಿಗೆ ಎಚ್ಚರಿಕೆ ಕೊಡುತ್ತದೆ.

‘‘ನಾನು ಸುಮ್ಮನಿದ್ದೆ’’
ಪ್ರೊಟೆಸ್ಟಂಟ್ ಪಾದ್ರಿಯಾಗಿದ್ದ ಮಾರ್ಟಿನ್ ನೆಮ್ಯೂಲರ್ 1934 ರಲ್ಲಿ ಹಿಟ್ಲರ್‌ಅಧಿಕಾರ ವಶಪಡಿಸಿಕೊಂಡಿದ್ದನ್ನು ಸಂಭ್ರಮಿಸಿದವರಲ್ಲಿ ಒಬ್ಬನಾಗಿದ್ದ.
ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ಹಿಟ್ಲರ್ ನ ಪಡೆಗಳು ಕಮ್ಯುನಿಸ್ಟರ ಕಗ್ಗೊಲೆಯನ್ನು ನಡೆಸುತ್ತಿದ್ದಾಗ ದೈವದ್ರೋಹಿ ಕಮ್ಯುನಿಸ್ಟರನ್ನು ಕೊಂದು ಹಿಟ್ಲರ್ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ಸಂಭ್ರಮಿಸಿದ್ದವರಲ್ಲಿ ಇವರೂ ಒಬ್ಬರು... ನಂತರ ಅಶಕ್ತರು, ರೋಗಪೀಡಿತರನ್ನು ಹಿಟ್ಲರ್ ಸೆರೆಗೆ ಅಥವಾ ಕೊಲೆಗೆ ಗುರಿಮಾಡುತ್ತಿದ್ದಾಗಲೂ ಇದರಿಂದ ಒಟ್ಟಾರೆಯಾಗಿ ಜರ್ಮನಿಗೆ ಒಳ್ಳೆಯದೇ ಆಗುತ್ತದೆಂದು ಈ ಪಾದ್ರಿ ಭಾವಿಸಿದ್ದರು. 1938 ರಲ್ಲಿ ನಿಧಾನಕ್ಕೆ ಜರ್ಮನಿಯ ಹಲವು ನಗರಗಳ ಹೊರವಲಯ ಗಳಲ್ಲಿ ಪ್ರಾರಂಭಗೊಂಡ ಹಿಟ್ಲರ್‌ನ Concentration Camp ಗಳನ್ನು Workers Campಗಳೆಂದೇ ತಮ್ಮನ್ನು ನಂಬಿಸಿಕೊಂಡಿದ್ದರು.

ಆದರೆ ಜರ್ಮನಿಯ ಜನಾಂಗೀಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಜರ್ಮನರ ರಕ್ತ ಮತ್ತು ಚಿಂತನೆಗಳಿಂದ ಅನಾರ್ಯತೆಯನ್ನು ಶುದ್ಧಗೊಳಿಸಲು ಹಿಟ್ಲರ್, ಯಹೂದಿಗಳನ್ನು, ಕಮ್ಯುನಿಸ್ಟರನ್ನು, ಭಿನ್ನಮತೀಯ ಕೆಥೊಲಿಕ್- ಪ್ರೊಟೆಸ್ಟೆಂಟ್‌ಗಳನ್ನೂ, ಜಿಪ್ಸಿ ಇನ್ನಿತರ ಅಲೆಮಾರಿಗಳನ್ನು ಸಾರಾಸಗಟು ಕೊಂದು ಹಾಕುವುದೊಂದೇ FINAL SOLUTION ಎಂದು ತೀರ್ಮಾನಿಸಿದ ಮೇಲೆ ತಾವು ಮಾತ್ರ ಹಿಟ್ಲರ್‌ನ ಆಳ್ವಿಕೆಯಲ್ಲಿ ಸುರಕ್ಷಿತರು ಎಂದು ಭಾವಿಸಿಕೊಂಡಿದ್ದ ಪಾಸ್ಟರ್ ನೆಮ್ಯೂಲಾರ್ ಒಳಗೊಂಡಂತೆ ಸಾವಿರಾರು ಪಾದ್ರಿಗಳು ಬಂಧನಕ್ಕೊಳಗಾದರು. ಕೊಲ್ಲಲ್ಪಟ್ಟರು. ಅದೃಷ್ಟವಶಾತ್ ಈ ಪಾದ್ರಿ ಬದುಕುಳಿದರು. ಹಿಂದಿರುಗಿ ನೋಡುವುದಾದರೆ, ಹಿಟ್ಲರ್ ನೇತೃತ್ವದ ನಾಝಿಗಳು ಅಧಿಕಾರಕ್ಕೆ ಬಂದ ಕೊಡಲೇ ಮೊದಲು ಕಗ್ಗೊಲೆಗಳನ್ನು ನಡೆಸುವ ಮೂಲಕ ಪ್ರಬಲವಾಗಿದ್ದ ಕಮ್ಯುನಿಸ್ಟ್ ವಿರೋಧವನ್ನು ನಿವಾರಿಸಿಕೊಂಡರು. ನಂತರ ಎಲ್ಲ ವಿರೋಧ ಪಕ್ಷಗಳನ್ನು ನಿಷೇಧಿಸಿ ವಿರೋಧ ಮುಕ್ತ ಜರ್ಮನಿಯನ್ನು ನಿವಾರಿಸಿಕೊಂಡರು..

1934-38ರ ನಡುವೆ ಯಹೂದಿಗಳಿಗೆ ನಾಗರಿಕ ಸ್ವಾತಂತ್ರವನ್ನು, ಉದ್ಯೋಗ ಮತ್ತು ಆಸ್ತಿ ಮಾಡುವ ಹಕ್ಕನ್ನು, ನಂತರ ಮತದಾನದ ಹಕ್ಕನ್ನು ಕಿತ್ತುಕೊಂಡರು... 1940ರಲ್ಲಿ ಅಷ್ಟೂ ಯಹೂದಿಗಳನ್ನು ಮಡಗಾಸ್ಕರ್ ದ್ವೀಪಕ್ಕೆ ಓಡಿಸುವ ಯೋಜನೆಯನ್ನು ಮಾಡಿದ್ದರು... ಅಂತಿಮವಾಗಿ ಜಗತ್ತಿನಲ್ಲಿ ಜರ್ಮನ್ ಜನಾಂಗೀಯ ಶ್ರೇಷ್ಠತೆಗೆ ಮತ್ತು ನಾಝಿ ಚಿಂತನೆಗೆ ಅಡ್ಡಿಯಿದ್ದ ಎಲ್ಲ ಯಹೂದಿಗಳನ್ನು, ಜಿಪ್ಸಿಯಂತಹ ಅಲೆಮಾರಿಗಳನ್ನೂ, ಕಮ್ಯುನಿಷ್ಟರನ್ನೂ, ಭಿನ್ನಮತೀಯ ಕೆಥೊಲಿಕ್, ಪ್ರೊಟೆಸ್ಟೆಂಟುಗಳನ್ನೂ.... ಸಾರಾ ಸಗಟು ಕೊಂದುಹಾಕುವ ಈ FINAL SOLUTION ಜಾರಿ ಮಾಡಿದರು...

1942-45ರ ಮೂರು ವರ್ಷಗಳ ಅವಧಿಯಲ್ಲಿ ನಾಝಿಗಳು 60 ಲಕ್ಷಜನರನ್ನು, ಪ್ರಧಾನವಾಗಿ ಯಹೂದಿಗಳನ್ನು ಕೊಂದುಹಾಕಿದರು... ನಾಝಿಗಳ ಈ ಜನಾಂಗೀಯ ಶ್ರೇಷ್ಠತೆಯ ಫ್ಯಾಸಿಶಂನಿಂದಾಗಿ 43 ಲಕ್ಷ ಜರ್ಮನರೂ ಪ್ರಾಣತೆತ್ತರು... ಆದರೆ, ಎಲ್ಲರನ್ನೂ ಎಲ್ಲವನ್ನೂ ಬಲಿತೆಗೆದುಕೊಳ್ಳುವ ಈ ನಾಝಿ-ಫ್ಯಾಶಿಸ್ಟರ ರಾಜಕಾರಣವನ್ನು ಅರ್ಥಮಾಡಿಕೊಳ್ಳದೇ ಪಾಸ್ಟರ್ ನೆಮ್ಯೂಲರ್‌ಅಂತವರೂ, ಉದಾರವಾದಿ ನಿಲುವಿನವರೂ, ಪಶ್ಚಿಮದ ಪ್ರಜಾತಂತ್ರ ಜಗತ್ತು ಪ್ರಾರಂಭದಲ್ಲಿ ಬೆಂಬಲಿಸುವ ಪ್ರಮಾದ ಮಾಡಿದ್ದರು... ಆದರೆ, ನಂತರ 1945ರಲ್ಲಿ ಬದುಕುಳಿದು ಹೂರಬಂದ ಮಾರ್ಟಿನ್ ನೆಮ್ಯೂಲರ್..ತಮ್ಮ ತಪ್ಪೊಪ್ಪಿಗೆ ಭಾಷಣದಲ್ಲಿ...:
‘‘ಹಿಟ್ಲರ್ ಪ್ರಾರಂಭದ ದಿನಗಳಲ್ಲಿ ಕಮ್ಯುನಿಸ್ಟರನು ್ನಕೊಲ್ಲತ್ತಿದ್ದ ಕಾಲದಲ್ಲೇ ಇಡೀ ಜರ್ಮನ್ ಸಮಾಜ ತಿರುಗಿ ಬಿದ್ದಿದ್ದರೆ, ಜರ್ಮನಿ ಇಂತಹ ದಾರುಣ ಕ್ರೌರ್ಯಗಳನ್ನು ಕಾಣುತ್ತಿರಲಿಲ್ಲವೆಂದು’’
 ಮನದಾಳದಿಂದ ಭಾವಿಸಿ ಮೇಲೆ ಹೇಳಿದ ಭಾಷಣ ಮಾಡಿದರು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top