ಕಾವೇರಿ ವಿವಾದ

ಬಿಡಿಸಲಾಗದ ಬ್ರಹ್ಮಗಂಟೇ?

-

ನೈಋತ್ಯ ಮಾರುತದ ಮೂಲಕ ಪ್ರಾರಂಭವಾಗುವ ಕರ್ನಾಟಕದ ಮುಂಗಾರು ಮಳೆಗಾಲದ ಅವ ಜೂನ್‌ನಿಂದ ಸೆಪ್ಟಂಬರ್‌ವರೆಗೆ, ಅದೃಷ್ಟವಿದ್ದರೆ ಅದು ಅಕ್ಟೋಬರ್‌ವರೆಗೂ ಮುಂದುವರಿಯಬಹುದು. ತಮಿಳುನಾಡಿಗೂ ಇದೇ ಅವಯಲ್ಲಿ ಸುರಿಯುವ ಮುಂಗಾರು ಮಳೆಯ ಜತೆಗೆ ಅಕ್ಟೋಬರ್‌ನಿಂದ ಜನವರಿವರೆಗೆ ವಾಯವ್ಯ ಮಾರುತದಿಂದಲೂ ಮಳೆ ಸುರಿಯುತ್ತದೆ. ನಾವು ನೈಋತ್ಯ ಮಾರುತವನ್ನಷ್ಟೇ ನಂಬಿಕೊಂಡಿದ್ದರೆ ಅವರಿಗೆ ನೈಋತ್ಯ ಮತ್ತು ವಾಯವ್ಯ ಮಳೆ ಕೂಡಾ ಲಭ್ಯ. ಒಂದು ಅಂದಾಜಿನ ಪ್ರಕಾರ ಈಶಾನ್ಯ ಮಾರುತದಿಂದ ತಮಿಳುನಾಡಿಗೆ 200 ಟಿಎಂಸಿಗೂ ಹೆಚ್ಚು ನೀರು ಹರಿದು ಬರುತ್ತಿದೆ. ಈ ರೀತಿ ಹವಾಮಾನದ ಆಟದಿಂದಲೂ ಅನ್ಯಾಯಕ್ಕೀಡಾಗಿರುವುದು ಕರ್ನಾಟಕ.

ಕಾವೇರಿ ನದಿನೀರು ಹಂಚಿಕೆಯಲ್ಲಿ ಪ್ರತೀ ಬಾರಿಯೂ, ಕರ್ನಾಟಕ ರಾಜ್ಯಕ್ಕೆ ಯಾಕೆ ಅನ್ಯಾಯವಾಗುತ್ತಿದೆ? ಎನ್ನುವುದು ಒಂದೇ ವಾಕ್ಯದ ಸರಳ ಪ್ರಶ್ನೆಯಾದರೂ ಉತ್ತರ ಮಾತ್ರ ಅಷ್ಟು ಸರಳವೂ ಅಲ್ಲ, ಸಣ್ಣದೂ ಅಲ್ಲ. ಅದೇ ರೀತಿ ಈ ವಿವಾದದ ಕಗ್ಗಂಟು ಬಿಡಿಸಲು ಪರಿಹಾರ ಗಳೇನು ಎನ್ನುವ ಪ್ರಶ್ನೆಗೆ ಕೂಡಾ ಸರಳವಾದ, ಸಣ್ಣದಾದ ಉತ್ತರ ಇಲ್ಲ.
ಮೊದಲನೆಯದಾಗಿ ಯಾಕೆ ಅನ್ಯಾಯವಾಗುತ್ತಿದೆ? ಇತಿಹಾಸದಲ್ಲಿ ನಡೆಯುವ ಒಂದು ಸಣ್ಣ ಅವಘಡವೂ ಅದರ ದಾರಿಯ ದಿಕ್ಕನ್ನೇ ಬದಲಿಸಿ ಬಿಡುತ್ತದೆ. 1799ರಲ್ಲಿ ಟಿಪ್ಪು ಸುಲ್ತಾನ ಬ್ರಿಟಿಷರ ಕೈಯಲ್ಲಿ ಸೋಲುಣ್ಣದೆ ಇದ್ದಿದ್ದರೆ ಬಹುಷ: ಕಾವೇರಿ ನದಿನೀರು ಹಂಚಿಕೆ ಬೇರೆಯೇ ಸ್ವರೂಪ ಪಡೆಯುತ್ತಿತ್ತೋ ಏನೋ? ಟಿಪ್ಪುಸೋತು ಬ್ರಿಟಿಷರ ಮರ್ಜಿಯಡಿ ಮೈಸೂರು ಸಂಸ್ಥಾನ ಸ್ಥಾಪನೆಯಾಯಿತೋ ಅಂದಿನಿಂದ ಈಗಿನ ತಮಿಳುನಾಡು ಅಂದರೆ ಆಗಿನ ಮದ್ರಾಸ್ ಸಂಸ್ಥಾನದ ಕಡೆಯಿಂದ ಕಾವೇರಿ ನದಿ ನೀರಿನ ಬಗ್ಗೆ ಕ್ಯಾತೆ ಶುರುವಾಯಿತು.

ಮೊದಲು ಕೆರೆಗಳ ದುರಸ್ತಿ ವಿರೋಸಿ ಮದ್ರಾಸ್‌ನಲ್ಲಿ ಪ್ರತಿಭಟನೆ, ನಂತರ, ಕಾವೇರಿ ನದಿಗೆ ಬಾಂದಾರ ಕಟ್ಟಲು ವಿರೋಧ. ಅದರ ಪರಿಣಾಮವೇ 1892ರ ಒಪ್ಪಂದ. ಮೈಸೂರು ಸಂಸ್ಥಾನ ಕಾವೇರಿ ಕಣಿವೆಯಲ್ಲಿ ಹೊಸ ಯೋಜನೆಗಳ ಪ್ರಾರಂಭ ಬಿಡಿ, ಹಳೆಕೆರೆಗಳ ದುರಸ್ತಿ ಮಾಡಬೇಕಾದರೂ ಮದ್ರಾಸ್ ಸಂಸ್ಥಾನದ ಅನುಮತಿ ಪಡೆಯಬೇಕೆಂಬ ನಿರ್ಬಂಧ ಹೇರಿದ್ದ ಈ ಏಕಪಕ್ಷೀಯ ಒಪ್ಪಂದ 32 ವರ್ಷಗಳ ಕಾಲ ಜಾರಿಯಲ್ಲಿತ್ತೆನ್ನುವುದು ಗಮನಾರ್ಹ. ಕೊನೆಗೂ ಮೈಸೂರು ಜನತೆಯ ಪ್ರತಿಭಟನೆ ಕಂಡು ಹಿಂದಿನ ಒಪ್ಪಂದವನ್ನು ರದ್ದುಗೊಳಿಸಿ 1924ರಲ್ಲಿ 50 ವರ್ಷಗಳ ಅವಯ ಇನ್ನೊಂದು ಒಪ್ಪಂದ ಮಾಡಿಕೊಳ್ಳಲಾಯಿತು. ಇದು ಕೂಡಾ 1892ರ ಒಪ್ಪಂದದಿಂದ ಭಿನ್ನವಾಗಿ ಇರಲಿಲ್ಲ. ಮೈಸೂರು ಪ್ರಾಂತ್ಯದಲ್ಲಿ ಕೈಗೆತ್ತಿಕೊಳ್ಳಲಾಗುವ ನೀರಾವರಿ ಯೋಜನೆಗಳಿಗೆ ಮದ್ರಾಸ್‌ನ ಪೂರ್ವಾನುಮತಿಬೇಕೆಂಬ ನಿರ್ಬಂಧ ಹೊಸ ಒಪ್ಪಂದದಲ್ಲಿಯೂ ಮುಂದುವರಿದಿತ್ತು. ಇದರ ಜತೆಗೆ ಈ ಒಪ್ಪಂದದಿಂದಾಗಿ ಕಾವೇರಿ ನದಿಯ ಒಟ್ಟು ನೀರಿನ ಪ್ರಮಾಣದಲ್ಲಿ ಮೈಸೂರು ಪ್ರಾಂತ್ಯದ ಕೊಡುಗೆ ಶೇ.75 ಆಗಿದ್ದರೂ ಒಪ್ಪಂದದಿಂದ ಮೈಸೂರಿಗೆ ಸಿಕ್ಕಿದ್ದು 2.75 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ. ಮದರಾಸಿಗೆ ದೊರೆತದ್ದು 15 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಮುಕ್ತ ಅವಕಾಶ.

1992ರಲ್ಲಿ ಕಾವೇರಿ ನ್ಯಾಯಮಂಡಳಿ ಮಧ್ಯಾಂತರ ತೀರ್ಪಿನ ವರೆಗೆ ಅಂದರೆ 68 ವರ್ಷಗಳ ಕಾಲ ಈ ಎರಡೂವರೆ ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ನಿರ್ಬಂಧ ಮುಂದುವರಿದಿತ್ತು. ಹೆಚ್ಚು ಕಡಿಮೆ ಒಂದು ಶತಮಾನ ನಿರಂತರವಾಗಿ ಕರ್ನಾಟಕಕ್ಕೆ ಕಾವೇರಿ ನದಿ ನೀರಿನಲ್ಲಿ ನ್ಯಾಯದ ಪಾಲಿನ ಅವಕಾಶದಿಂದ ವಂಚನೆಯಾಯಿತು. 1924ರ ಒಪ್ಪಂದ 50 ವರ್ಷಗಳ ನಂತರ ಕೊನೆ ಗೊಳ್ಳಬೇಕಾಗಿದ್ದರೂ ಅದು ಮುಂದುವರಿದುಕೊಂಡು ಹೋಗುವಂತೆ ಮಾಡಿದ್ದು ಇನ್ನೊಂದು ಹುನ್ನಾರ.

ಇದು ಕರ್ನಾಟಕಕ್ಕೆ ಕಾವೇರಿ ನದಿನೀರು ಹಂಚಿಕೆಯಲ್ಲಿ ಅನ್ಯಾಯವಾಗಲು ಕಾರಣವಾದ ಇತಿಹಾಸ. ಅಚ್ಚರಿ ಎಂದರೆ ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಹೊರತಾಗಿಯೂ ಈ ಒಪ್ಪಂದದ ತೂಗುಕತ್ತಿ ಕರ್ನಾಟಕದ ತಲೆಮೇಲೆ ಇನ್ನೂ ತೂಗುತ್ತಿದೆ. ಅದರಿಂದ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಸಿಕ್ಕಿಲ್ಲ. ಅಂತಿಮ ಐತೀರ್ಪಿನಲ್ಲಿಯೂ ಕಂಡು ಕಾಣದಂತೆ 1924ರ ಒಪ್ಪಂದದ ಭೂತದ ನೆರಳೂ ಇದೆ. ತಮಿಳುನಾಡು ರೈತ ವಿರೋಯಾಗಿರುವ, ಪ್ರಜಾಪ್ರಭುತ್ವ ವಿರೋಯಾಗಿರುವ 1924ರ ಒಪ್ಪಂದವನ್ನು ಈಗಲೂ ತನ್ನ ‘ಬೈಬಲ್’ ಎನ್ನುತ್ತಿದೆ.

ವಿವಾದಕ್ಕೆ ಇನ್ನೊಂದು ಕಾರಣ ಭೌಗೋಳಿಕವಾದುದು. ಕರ್ನಾಟಕ ಕಾವೇರಿಯ ತವರೂರು, ನಮ್ಮ ಜೀವನದಿ, ನಮ್ಮಲ್ಲಿಯೇ ಅದು ಹೆಚ್ಚು ಹರಿಯುತ್ತಿರುವುದು, ನಮ್ಮಲ್ಲಿನ ನೀರಿನ ಉತ್ಪನ್ನವೇ ಹೆಚ್ಚು... ಎಲ್ಲವೂ ಸರಿ. ನೀರಿನ ವಿವಾದದಲ್ಲಿ ನಮ್ಮ ಹೆಮ್ಮೆ ಎಂದು ತಿಳಿದುಕೊಂಡಿರುವ ಈ ಎಲ್ಲ ಅಂಶಗಳು ನಮ್ಮ ಪಾಲಿನ ದುರದೃಷ್ಟಕರ ಅಂಶಗಳು. ಇದು ಕರ್ನಾಟಕ ರಾಜ್ಯವೊಂದರ ಸಮಸ್ಯೆ ಅಲ್ಲ, ನದಿಮೇಲ್ಭಾಗದಲ್ಲಿರುವ ಎಲ್ಲ ರಾಜ್ಯ ದೇಶಗಳ ಸಮಸ್ಯೆ. ಜಲವಿವಾದಗಳನ್ನು ಬಗೆಹರಿಸಲು ಬಳಸಲಾಗುವ ನದಿ ಮೇಲ್ಭಾಗದಲ್ಲಿರುವ ಪ್ರದೇಶದ ಬಗ್ಗೆ ಪರವಾಗಿರುವ ಹೆಲ್ಸಂಕಿ ಸೂತ್ರವೂ ಕರ್ನಾಟಕ ನಿರಂತರವಾಗಿ ಅನ್ಯಾಯಕ್ಕೀಡಾಗಲು ಕಾರಣ. 1924ರ ಒಪ್ಪಂದ ಕೂಡಾ ಇದೇ ಸೂತ್ರದಿಂದ ಪ್ರೇರಿತವಾದುದು. 2007ರ ಕಾವೇರಿ ನ್ಯಾಯಮಂಡಳಿಯ ಐತೀರ್ಪಿನಲ್ಲಿ 1924ರ ಒಪ್ಪಂದವನ್ನು ತಳ್ಳಿಹಾಕಿದ್ದರೂ ಗುಪ್ತಗಾಮಿನಿಯಾಗಿ ಈ ಸೂತ್ರ ಹರಿದಿದೆ. ದಿಲ್ಲಿಯ ವಕೀಲ ಮೋಹನ ಕಾತರಕಿ ಅವರು ಹೇಳಿರುವಂತೆ ಜಲವಿವಾದದಲ್ಲಿ ನದಿಮೇಲ್ಬಾಗದಲ್ಲಿರುವವರನ್ನು ಗುಮಾನಿಯಿಂದಲೂ, ಕೆಳಭಾಗದಲ್ಲಿರುವವರನ್ನು ಅನುಕಂಪದಿಂದ ನೋಡಲಾಗುತ್ತದೆ.

ಮೂರನೆಯ ಕಾರಣ ಕೂಡಾ ಪ್ರಾಕೃತಿಕವಾದುದು. ನೈಋತ್ಯ ಮಾರುತದ ಮೂಲಕ ಪ್ರಾರಂಭವಾಗುವ ಕರ್ನಾಟಕದ ಮುಂಗಾರು ಮಳೆಗಾಲದ ಅವ ಜೂನ್‌ನಿಂದ ಸೆಪ್ಟಂಬರ್‌ವರೆಗೆ, ಅದೃಷ್ಟವಿದ್ದರೆ ಅದು ಅಕ್ಟೋಬರ್‌ವರೆಗೂ ಮುಂದುವರಿಯಬಹುದು. ತಮಿಳುನಾಡಿಗೂ ಇದೇ ಅವಯಲ್ಲಿ ಸುರಿಯುವ ಮುಂಗಾರು ಮಳೆಯ ಜತೆಗೆ ಅಕ್ಟೋಬರ್‌ನಿಂದ ಜನವರಿ ವರೆಗೆ ವಾಯವ್ಯ ಮಾರುತದಿಂದಲೂ ಮಳೆ ಸುರಿಯುತ್ತದೆ. ನಾವು ನೈಋತ್ಯ ಮಾರುತವನ್ನಷ್ಟೇ ನಂಬಿಕೊಂಡಿದ್ದರೆ ಅವರಿಗೆ ನೈಋತ್ಯ ಮತ್ತು ವಾಯವ್ಯ ಮಳೆ ಕೂಡಾ ಲಭ್ಯ. ಒಂದು ಅಂದಾಜಿನ ಪ್ರಕಾರ ಈಶಾನ್ಯ ಮಾರುತದಿಂದ ತಮಿಳುನಾಡಿಗೆ 200 ಟಿಎಂಸಿಗೂ ಹೆಚ್ಚು ನೀರು ಹರಿದು ಬರುತ್ತಿದೆ. ಈ ರೀತಿ ಹವಾಮಾನದ ಆಟದಿಂದಲೂ ಅನ್ಯಾಯಕ್ಕೀಡಾಗಿರುವುದು ಕರ್ನಾಟಕ.

ಈ ಕಾರಣದಿಂದಾಗಿ ಕರ್ನಾಟಕದ ರೈತರು ಮುಂಗಾರು ಬೆಳೆಯನ್ನು ಮಾತ್ರ ಬೆಳೆದರೆ, ತಮಿಳುನಾಡು ಕುರುವೈ ಮತ್ತು ಸಾಂಬಾ ಜತೆಗೆ ತಾಳಂಡಿ ಎನ್ನುವ ಮೂರನೆ ಬೆಳೆಯನ್ನೂ ಬೆಳೆಯುತ್ತಾರೆ. ಮುಂಗಾರು ಬೆಳೆಗೆ ಮೆಟ್ಟೂರು ಜಲಾಶಯದ ನೀರು ಸಂಗ್ರಹವನ್ನು ಬಳಸಿಕೊಳ್ಳದೆ ಕುರುವೈ ಬೆಳೆಗೆ ಸಂಪೂರ್ಣವಾಗಿ ಕರ್ನಾಟಕದಿಂದ ಹರಿದು ಬರುವ ನೀರನ್ನೇ ಬಳಸಿಕೊಳ್ಳಬೇಕೆಂಬ ಯೋಜನೆ ತಮಿಳುನಾಡು ರಾಜ್ಯದ್ದು. ಇದಕ್ಕೆ ಅನುಗುಣವಾಗಿ ಪ್ರತಿವರ್ಷ ಜುಲೈನಿಂದ ಸೆಪ್ಟಂಬರ್‌ವರೆಗಿನ ಅವಯಲ್ಲಿ ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದವನ್ನು ಕೆದಕಲು ಶುರುಮಾಡುತ್ತದೆ. ಈ ರೀತಿ ವಿವಾದವನ್ನು ಕೆದಕುತ್ತಾ ಕೇಂದ್ರ ಸರಕಾರ, ನ್ಯಾಯಮಂಡಳಿ ಮತ್ತು ನ್ಯಾಯಾಲಯದ ಗಮನಸೆಳೆದು ನೀರುಬಿಡುವಂತೆ ಕರ್ನಾಟಕದ ಮೇಲೆ ಒತ್ತಡ ಬೀಳುವಂತೆ ಮಾಡುತ್ತದೆ.

ಬಹಳಷ್ಟು ಬಾರಿ ಈ ರೀತಿಯ ಬ್ಲಾಕ್ ಮೇಲ್‌ನಿಂದ ಆ ರಾಜ್ಯಕ್ಕೆ ಲಾಭವಾಗಿದೆ, ಕರ್ನಾಟಕಕ್ಕೆ ನಷ್ಟವಾಗಿದೆ. ನಾಲ್ಕನೆಯ ಕಾರಣ ಎರಡು ಭಾಷೆಗಳದ್ದು. ನಮ್ಮ ನೀರಿನ ಜಗಳ ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜತೆಯಲ್ಲಿದ್ದರೂ ಕಾವೇರಿ ಜಲವಿವಾದದಂತೆ ಅದು ಎರಡು ಭಾಷಿಕರ ನಡುವಿನ ಜಗಳವಾಗಿಲ್ಲ. ಕೃಷ್ಣಾ ಜಲವಿವಾದಕ್ಕೆ ಸಂಬಂಸಿದಂತೆ ಕನ್ನಡಿಗರು ಮತ್ತು ತೆಲುಗರು ಬಡಿದಾಡಿಕೊಂಡಿಲ್ಲ. ಆದರೆ ತಮಿಳು ಎಂದಾಕ್ಷಣ ಕನ್ನಡಿಗರಲ್ಲಿಯೂ, ಕನ್ನಡ ಎಂದಾಕ್ಷಣ ತಮಿಳರಲ್ಲಿಯೂ ಭಾಷಾಭಿಮಾನ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳಾಗಲಿ, ಸಾಹಿತಿ-ಕಲಾವಿದರಾಗಲಿ ಕೂತು ವಿವಾದದ ಪರಿಹಾರವನ್ನು ಕಂಡುಕೊಳ್ಳಲಾಗದ ಪರಿಸ್ಥಿತಿ ಇದೆ.

ಐದನೆ ಕಾರಣ ರಾಜಕೀಯದ್ದು. ತಮಿಳುನಾಡಿನಲ್ಲಿ ಉದ್ದಕ್ಕೂ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಪ್ರತಿಬಾರಿ ಅಲ್ಲಿನ ಆಳುವ ಪಕ್ಷ ಕೇಂದ್ರದ ಆಳುವ ಪಕ್ಷದ ಜತೆ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾದ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುತ್ತದೆ. ಇದರಿಂದಾಗಿ ತಮಿಳುನಾಡು ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು ಕೂಡಾ ಬ್ಲಾಕ್ ಮೇಲ್ ಮಾಡುತ್ತಿರುತ್ತಾರೆ. ಇದು ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಸೇರಿದಂತೆ ಸಾರ್ವಕಾಲಿಕ ಸತ್ಯ. ಆದರೆ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳೇ ಸಾಮಾನ್ಯವಾಗಿ ಅಕಾರದಲ್ಲಿರುತ್ತವೆ. ಇವುಗಳು ತಮಿಳುನಾಡು ಮುಖ್ಯಮಂತ್ರಿಗಳಂತೆ ಸ್ವಂತ ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತದೆ.

ಆರನೆ ಕಾರಣ ಜನಾಭಿಪ್ರಾಯದ್ದು. ಕರ್ನಾಟಕದಿಂದ ಹೊರಗೆ ಅದರಲ್ಲೂ ಸುಪ್ರೀಂಕೋರ್ಟ್ ಮತ್ತು ನ್ಯಾಯಮಂಡಳಿಗಳ ಕೇಂದ್ರ ಸ್ಥಾನ ಇರುವ ಹೊಸದಿಲ್ಲಿಯಲ್ಲಿ ಕನ್ನಡಿಗರ ಪ್ರಭಾವ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕನ್ನಡಿಗರನ್ನು ದುರ್ಬೀನು ಹಿಡಿದು ಹುಡುಕಬೇಕು. ಅಲ್ಲಿಲ್ಲಿ ಇದ್ದವರೂ ತಪ್ಪಿಯೂ ತಾವು ಕನ್ನಡಿಗರೆಂದು ಗುರುತಿಸಿಕೊಳ್ಳುವುದಿಲ್ಲ. ಕನ್ನಡದಲ್ಲಿ ಮಾತನಾಡಿದರೂ ಹಿಂದಿಯಲ್ಲಿ ಉತ್ತರಿಸುತ್ತಾರೆ. (ಇದು ನನ್ನ ಅನುಭವದ ಮಾತು). ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರದ ಯಾವುದೇ ಇಲಾಖೆಗೆ ಹೋದರೂ ಅಲ್ಲೊಂದಿಬ್ಬರು ತಮಿಳು ಅಕಾರಿಗಳಿರುತ್ತಾರೆ. ಕೇಂದ್ರ ಜಲ ಸಂಪನ್ಮೂಲ ಖಾತೆಯ ಈಗಿನ ಕಾರ್ಯದರ್ಶಿ ಕೂಡಾ ತಮಿಳು ನಾಡಿಗೆ ಸೇರಿದವರು. ಇದಲ್ಲದೆ ಯಾವುದಾ ದರೂ ಮಾಧ್ಯಮ ಕಚೇರಿಗೆ ಹೋದರೂ ಅಲ್ಲಿಯೂ ತಮಿಳು ಪತ್ರ ಕರ್ತರಿರುತ್ತಾರೆ.

ನ್ಯಾಯಾ ಲಯದಲ್ಲಿಯೂ ತಮಿಳು ವಕೀಲರ ಸಂಖ್ಯೆ ಸಾಕಷ್ಟಿದೆ. ಇವರೆಲ್ಲರೂ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಶಕ್ತಿ ಇದ್ದವರು. ನ್ಯಾಯಾಲಯದ ವಿವೇಚನಾ ಶಕ್ತಿಯ ಮೇಲೆ ಕೂಡಾ ಸಾರ್ವಜನಿಕ ಅಭಿಪ್ರಾಯದ ಸಣ್ಣ ಪ್ರಭಾವ ಇರುತ್ತದೆ ಎನ್ನುವುದನ್ನು ನಿರಾಕರಿಸಲಾದೀತೇ? ಏಳನೆ ಕಾರಣ ತಪ್ಪು ಜನಾಭಿಪ್ರಾಯದ್ದು. ನಮಗೆ ಮಹಾ ರಾಷ್ಟ್ರ ಜತೆ ಬೆಳಗಾವಿ ಗಡಿ ತಂಟೆಯಿದೆ, ಆಂಧ್ರಪ್ರದೇಶದ ಜತೆ ಕೃಷ್ಣಾ ನೀರಿನ ಸಮಸ್ಯೆ ಇದೆ. ಮಹಾರಾಷ್ಟ್ರ, ಗೋವಾ ಜತೆ ಮಹದಾಯಿ ನೀರಿನ ಸಮಸ್ಯೆ ಇದೆ. ಈ ಎಲ್ಲ ವಿವಾದಗಳ ಇತ್ಯರ್ಥದಲ್ಲಿ ನಾವು ಒಂದಷ್ಟು ಎಡವಟ್ಟುಗಳನ್ನು ಮಾಡಿಬಿಟ್ಟಿದ್ದೇವೆ. ದಿಲ್ಲಿಯ ಒಂದು ವಲಯದಲ್ಲಿ ಈಗಲೂ ಕರ್ನಾಟಕದವರೆಂದರೆ ನ್ಯಾಯಾಂಗ ವಿರೋಗಳು, ಭಾಷಾಂಧರು ಮತ್ತು ಜಗಳಗಂಟರು ಎಂಬ ಅಭಿಪ್ರಾಯವಿದೆ.

ಇದರ ಜತೆಗೆ ಕೆಲವು ಸ್ವಯಂಕೃತ ಅಪರಾಧಗಳಿವೆ. ಕಾವೇರಿ ನ್ಯಾಯಮಂಡಳಿಯ ಸ್ಥಾಪನೆಯನ್ನೇ ವಿರೋಸಿದ್ದ ಕರ್ನಾಟಕದ ಜನತೆಯಲ್ಲಿ ಅದರ ಬಗೆಗಿನ ಅಸಹನೆ ಹೊಸದೇನಲ್ಲ. ಕರ್ನಾಟಕದ ಪಾಲಿಗೆ ಅದು ಎಂದೆಂದೂ ಬೇಡದ ಕೂಸು. 1924ರ ಒಪ್ಪಂದ ಕೊನೆಗೊಂಡ ನಂತರ ತಮಿಳುನಾಡು ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಕರ್ನಾಟಕಕ್ಕೆ 240 ಟಿಎಂಸಿ ನೀರಿನ ಪಾಲು ನಿಗದಿಪಡಿಸಿದ್ದ ಹೊಸ ಒಪ್ಪಂದವನ್ನು 1976ರಲ್ಲಿ ಸಿದ್ದಪಡಿಸಿತ್ತು. ಅದಕ್ಕೆ ಆಗಿನ ಕರ್ನಾಟಕ ಸರಕಾರ ಅನೌಪಚಾರಿಕ ಒಪ್ಪಿಗೆಯನ್ನೂ ನೀಡಿತ್ತು.

ಆಗ ಆಡಳಿತ ಮತ್ತು ವಿರೋಧ ಪಕ್ಷದಲ್ಲಿದ್ದವರು ಈಗಲೂ ರಾಜ್ಯದಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ತಮಿಳುನಾಡಿನಲ್ಲಿ ಆಗ ರಾಷ್ಟ್ರಪತಿ ಆಳ್ವಿಕೆ ಇಲ್ಲದೆ ಹೋಗಿದ್ದರೆ ಆ ಒಪ್ಪಂದ ಜಾರಿಗೆ ಬಂದೇ ಬಿಡುತ್ತಿತ್ತೋ ಏನೋ? ಚುನಾಯಿತ ಸರಕಾರಗಳು ಸಹಿ ಹಾಕಲಿ ತಮಿಳು ನಾಡು ರಾಜ್ಯ ಪಾಲ ಕೆ.ಕೆ.ಶಹಾ ಬಯಸಿದ್ದ ಕಾರಣ ಒಪ್ಪಂದ ಜಾರಿಗೆ ಬರಲಿಲ್ಲ. ಕೊನೆಗೂ ತಮಿಳುನಾಡಿನ ಒತ್ತಡ ಲಕೊಟ್ಟಿದ್ದು ವಿ.ಪಿ.ಸಿಂಗ್ ಪ್ರಧಾನಿ ಯಾಗಿದ್ದಾಗ. ಆಗಲೂ ಕರ್ನಾಟಕ ನ್ಯಾಯ ಮಂಡಳಿ ರಚನೆಯನ್ನು ವಿರೋಸಿತ್ತು. ಇದರ ಪರಿಣಾಮದ ಅರಿವಿದ್ದ ಕರ್ನಾಟಕದ ನಿಲುವು ಸರಿಯಾಗಿಯೇ ಇತ್ತು. ಆದರೆ ನ್ಯಾಯಮಂಡಳಿ ರಚನೆಯಾದ ನಂತರ ಕರ್ನಾಟಕ ಮುಂದುವರೆಸಿ ಕೊಂಡು ಹೋದ ಅಸಹನೆ ಮಾತ್ರ ರಾಜ್ಯದ ಪಾಲಿಗೆ ದುಬಾರಿಯಾಗಿದ್ದು ನಿಜ.

ನ್ಯಾಯಮಂಡಳಿ ರಚನೆಯೆಂದರೆ ಯುದ್ಧ ಅರ್ಧ ಗೆದ್ದ ಹಾಗೆ ಎಂದು ತಮಿಳುನಾಡಿಗೆ ತಿಳಿದಿತ್ತು. ಆದ್ದರಿಂದ ಅದು ಮುಕ್ತ ಕಂಠದಿಂದ ನ್ಯಾಯಮಂಡಳಿ ರಚನೆಯನ್ನು ಸ್ವಾಗತಿಸಿತು. ನ್ಯಾಯಮಂಡಳಿ ಆ ರಾಜ್ಯಕ್ಕೆ ಭೇಟಿ ನೀಡಿದಾಗ ನ್ಯಾಯಮೂರ್ತಿಗಳು ಸಾಗುವ ಹಾದಿಯಲ್ಲೆಲ್ಲ ಅವರನ್ನು ಸ್ವಾಗತಿಸುವ ಭಿತ್ತಿಪತ್ರಗಳು ಕಮಾನುಗಳು ರಾರಾಜಿಸುತ್ತಿದ್ದವು. ಸಾರ್ವಜನಿಕ ಸಭೆ ನಡೆದಾಗ ವೇದಿಕೆಯಲ್ಲಿ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಕೂರುತ್ತಿರಲಿಲ್ಲ. ತಂಜಾವೂರಿನ ಜಿಲ್ಲಾಕಾರಿಯೊಬ್ಬರು ನ್ಯಾಯಮೂರ್ತಿಗಳ ಕಾಲಿಗೆ ಬಿದ್ದುಬಿಟ್ಟಿದ್ದರು. ಆಗ ಅಕಾರದಲ್ಲಿ ಇಲ್ಲದೆ ಇದ್ದರೂ ಜೆ. ಜಯಲಲಿತಾ ಅವರು ಸಭೆಗೆ ಬಂದು ನ್ಯಾಯಮೂರ್ತಿಗಳನ್ನು ಖುದ್ದಾಗಿ ಸ್ವಾಗತಿಸಿದ್ದರು. ತಮಿಳುನಾಡು ಅಕಾರಿಗಳು, ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬದವರಿಗೆ ವಿಶೇಷ ಉಡುಗೊರೆಗಳನ್ನು ಕೊಟ್ಟಿದ್ದು ಕೂಡಾ ಆ ಕಾಲದಲ್ಲಿ ವಿವಾದವಾಗಿತ್ತು. ಅದಾದ ಕೆಲವು ವರ್ಷಗಳ ನಂತರ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯಲ್ಲಿ ಪ್ರವಾಸ ಮಾಡಲು ಬಯಸಿದಾಗ ತಮಿಳುನಾಡು ಸರಕಾರ ಅನಕೃತವಾಗಿ ವ್ಯವಸ್ಥೆ ಕಲ್ಪಿಸಿತ್ತು. ಇದು ತಮಿಳುನಾಡು ಶೈಲಿ. ಅದೆಂದೂ ನ್ಯಾಯಮಂಡಳಿಯನ್ನು ಕೆಣಕಲು ಹೋಗಿಲ್ಲ.

 ಆದರೆ ಕರ್ನಾಟಕದ ಪ್ರತಿಕ್ರಿಯೆ ತದ್ವಿರುದ್ಧವಾದುದು. ನ್ಯಾಯ ಮಂಡಳಿಯನ್ನು ಕರ್ನಾಟಕದ ಜನತೆ ಎದುರುಗೊಂಡದ್ದು ‘ಕಪ್ಪುಬಾವುಟ’ ಮತ್ತು ‘ಗೋಬ್ಯಾಕ್ ‘ಘೋಷಣೆಯ ಮೂಲಕ. ಸಾರ್ವಜನಿಕ ಅಹವಾಲು ಸ್ವೀಕರಿಸಲು ನಡೆದ ನ್ಯಾಯಮಂಡಳಿ ಸಭೆಗಳಲ್ಲಿ ಸ್ಥಳೀಯ ರಾಜಕಾರಣಿಗಳು ಮೆರೆಯಲು ಹೋಗಿ ಅವುಗಳು ರಾಜಕೀಯ ಸಭೆಗಳಾಗಿ ಹೋಗಿದ್ದವು. ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಔತಣಕೂಟಕ್ಕೆ ನ್ಯಾಯಮೂರ್ತಿಗಳೊಬ್ಬರು ಬೆಂಗಳೂರಿನಲ್ಲಿಯೇ ಇರುವ ಸಂಬಂಕರನ್ನು ಆಹ್ವಾನಿಸಲು ಬಯಸಿದಾಗ ರಾಜ್ಯದ ಅಕಾರಿಗಳು ನಿರಾಕರಿಸಿ ಮುಜುಗುರ ಉಂಟುಮಾಡಿದ್ದರು. ಆ ನ್ಯಾಯಮೂರ್ತಿಗಳು ಅಂತಿಮ ಐತೀರ್ಪು ನೀಡಿದ ನ್ಯಾಯಮಂಡಳಿಯಲ್ಲಿಯೂ ಇದ್ದರು. ನ್ಯಾಯಮಂಡಳಿಯ ಸದಸ್ಯ ನ್ಯಾಯಮೂರ್ತಿಗಳೊಬ್ಬರು ದಿಲ್ಲಿಯ ಕರ್ನಾಟಕ ಭವನದಲ್ಲಿ ತಂಗಿದ್ದಾಗ ಅವರ ಸಹಾಯಕರ ಜತೆ ಊಟ-ವಸತಿಯ ಬಿಲ್ ಪಾವತಿ ಬಗ್ಗೆ ಭವನದ ಅಕಾರಿಗಳು ಜಗಳಕ್ಕೆ ಇಳಿದಿದ್ದರು. ಇಷ್ಟು ಮಾತ್ರವಲ್ಲ ನ್ಯಾಯಮಂಡಳಿಯ ಸದಸ್ಯ ನ್ಯಾಯಮೂರ್ತಿಗಳಿಗೆ ತಮಿಳುನಾಡಿನಲ್ಲಿ ನೀಡಿರುವ ವಿಶೇಷ ಉಡುಗೊರೆಗಳ ವೀಡಿಯೊ ತುಣುಕುಗಳನ್ನು ಕರ್ನಾಟಕದ ಹಿರಿಯ ರಾಜಕಾರಣಿಯೊಬ್ಬರು ಬಹಿರಂಗಗೊಳಿಸಿ ವಿವಾದ ಸೃಷ್ಟಿಸಿದ್ದರು. ನ್ಯಾಯಮಂಡಳಿಯ ಪ್ರಥಮ ಅಧ್ಯಕ್ಷರು ರಾಜೀನಾಮೆ ನೀಡಲು ಇಂತಹ ಆಪಾದನೆಗಳೂ ಕಾರಣವೆನ್ನಲಾಗಿದೆ.

ಇಂತಹ ಸ್ವಯಂಕೃತ ಅಪರಾಧಗಳು ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. 2004ರಲ್ಲಿ ಒಂದು ದಿನ ನ್ಯಾಯಮಂಡಳಿಯ ಇಬ್ಬರು ಸದಸ್ಯ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯ ಪ್ರತ್ಯಕ್ಷ ದರ್ಶನಕ್ಕಾಗಿ ಪ್ರವಾಸ ಮಾಡಲು ಬಯಸಿದ್ದರು. ಇದನ್ನು ನ್ಯಾಯಮಂಡಳಿಯ ಅಧ್ಯಕ್ಷರು ವಿರೋಸಿದ್ದರು. ಇದು ನ್ಯಾಯಮಂಡಳಿಯೊಳಗೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಇಂತಹ ಸಂದರ್ಭ ದಲ್ಲಿ ನದಿಕಣಿವೆಯ ರಾಜ್ಯಗಳು ತಟಸ್ಥ ನಿಲುವು ತೆಗೆದುಕೊ ಳ್ಳಬೇಕಾಗುತ್ತದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಗಳು ತಟಸ್ಥವಾಗಿತ್ತು ಕೂಡಾ.

ಆದರೆ ಕರ್ನಾಟಕದ ಗಾಂ ಸಾಹಿತ್ಯ ಸಂಘ ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿ ಯೊಂದನ್ನು ಸಲ್ಲಿಸಿ ನ್ಯಾಯ ಮಂಡಳಿಯ ಇಬ್ಬರು ಸದಸ್ಯರ ಕಾವೇರಿ ಕಣಿವೆ ಪ್ರವಾಸವನ್ನು ರದ್ದುಗೊಳಿಸಬೇಕೆಂದು ಕೋರಿತು. ಅದು ಅಷ್ಟಕ್ಕೆ ನಿಲ್ಲಲಿಲ್ಲ. ರಾಜ್ಯ ಸರಕಾರ ವಿಶೇಷ ಅರ್ಜಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಾತ್ರವಲ್ಲ ಕಾವೇರಿ ನ್ಯಾಯಮಂಡಳಿಯನ್ನು ಪುನರ್ರಚಿಸಬೇಕೆಂದು ಕೋರಿ ಪ್ರಮಾಣಪತ್ರವನ್ನು ಕೂಡಾ ಸಲ್ಲಿಸಿತು. ಇದು ಕೇವಲ ಗಾಂ ಸಾಹಿತ್ಯ ಸಂಘದ ಕಿತಾಪತಿಯಲ್ಲ, ಇದರ ಹಿಂದೆ ರಾಜ್ಯದ ಹಿರಿಯ ಪ್ರಭಾವಿ ರಾಜಕಾರಣಿ ಇರುವುದು ನ್ಯಾಯಮಂಡಳಿಗೂ ಗೊತ್ತಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇದ್ದ ಕಾರಣದಿಂದಾಗಿ ಅದೇ ಪ್ರಭಾವಿ ರಾಜಕಾರಣಿ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಅವರ ಮೇಲೆ ಒತ್ತಡ ಹೇರಿ ರಾಜ್ಯ ಸರಕಾರ ಪ್ರಮಾಣಪತ್ರ ಸಲ್ಲಿಸುವಂತೆ ಮಾಡಿದ್ದರು.

 ಕಾವೇರಿ ಐತೀರ್ಪಿನ ಅಸೂಚನೆಗೆ ಕೇಂದ್ರ ಸರಕಾರ ಪ್ರಕಟನೆ ಹೊರಡಿಸಿದಾಗಲೂ ಇದೇ ರೀತಿಯ ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಯಿತು. ಐರ್ಪಿನ ಅಸೂಚನೆಯ ಪ್ರಕಟನೆ ಎಂದರೆ ‘ಶವದ ಪೆಟ್ಟಿಗೆಗೆ ಕೊನೆಯ ಮೊಳೆ’ ಎಂದು ಪ್ರಚಾರ ಮಾಡಲಾಯಿತು.‘ಅಸೂಚನೆ ಹೊರಡಿಸಿದರೂ ಅದು ಐತೀರ್ಪನ್ನು ಪ್ರಶ್ನಿಸುವ ಸಂಬಂತ ರಾಜ್ಯಗಳ ಹಕ್ಕು ಮತ್ತು ಈಗ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅಡ್ಡಿಯಾಗುವುದಿಲ್ಲ’ ಎಂದು ಸಾಕ್ಷಾತ್ ಸುಪ್ರೀಂಕೋರ್ಟ್ ಹೇಳಿದ ನಂತರ ‘ಶವದ ಪೆಟ್ಟಿಗೆಗೆ ಕೊನೆಯ ಮೊಳೆ’ ಆಗುವುದಾದರೂ ಹೇಗೆ? ಇಂತಹ ಅಪಾಯ ಇರುವುದೇ ನಿಜವಾಗಿದ್ದರೆ, 2007ರಲ್ಲಿ ಅಂತಿಮ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂಕೋಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಐತೀರ್ಪಿನ ಅಸೂಚನೆ ಪ್ರಕಟನೆಯನ್ನು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಯಾಕೆ ವಿರೋಸಿರಲಿಲ್ಲ ಎಂದು ಕಾವೇರಿ ವಿವಾದದ ನೆರೆಯಲ್ಲಿ ಮೀನು ಹಿಡಿಯಲು ಹೋದವರ್ಯಾರೂ ಪ್ರಶ್ನಿಸಲಿಲ್ಲ.

ಅಸೂಚನೆ ಹೊರಡಿಸುವುದರಿಂದ ಕರ್ನಾಟಕಕ್ಕೆ ಆಗಲಿರುವ ಬಹುದೊಡ್ಡ ಲಾಭ ಎಂದರೆ ಕಳೆದ 23 ವರ್ಷಗಳಿಂದ ನಮ್ಮ ಕೊರಳಿಗೆ ನೇಣಿನಂತೆ ಸುತ್ತಿಕೊಂಡಿರುವ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಐತೀರ್ಪಿನಿಂದ ಮುಕ್ತಿ. ಯಾವ ಕೋನದಿಂದ ಅಧ್ಯಯನ ನಡೆಸಿದರೂ ಮಧ್ಯಂತರ ಐತೀರ್ಪಿಗಿಂತ ಅಂತಿಮ ತೀರ್ಪು ಕರ್ನಾಟಕದ ರೈತರಿಗೆ ಹೆಚ್ಚು ಲಾಭವನ್ನುಂಟು ಮಾಡಲಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳದೆ ಇರಲಾಗದು.
ಹೌದು, ಅಂತಿಮ ಐತೀರ್ಪಿನಲ್ಲಿ ಎಲ್ಲವೂ ನಮ್ಮ ಪರವಾಗಿ ಇಲ್ಲ, ಸಾಕಷ್ಟು ಅನ್ಯಾಯವಾಗಿದೆ. ಸಂಕಷ್ಟದ ಕಾಲವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಯಲ್ಲಿ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ತಗ್ಗಿಲ್ಲ, ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಜನತೆಗೆ ಅವಶ್ಯ ಇರುವಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಪಾಲು ಒದಗಿಸಿಲ್ಲ, ಅಂತರ್ಜಲದ ನೆಪದಲ್ಲಿ ಕರ್ನಾಟಕದ ಚರಂಡಿ ನೀರನ್ನೂ ಲೆಕ್ಕ ಹಾಕಿರುವ ನ್ಯಾಯಮಂಡಳಿ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದಲ್ಲಿನ ಸುಮಾರು 50 ಟಿಎಂಸಿ ಅಂತರ್ಜಲದ ಬಗ್ಗೆ ಚಕಾರ ಎತ್ತಿಲ್ಲ.
 
1924ರ ಒಪ್ಪಂದದಿಂದ ಕರ್ನಾಟಕವನ್ನು ಮುಕ್ತಗೊಳಿಸಿದರೂ ಅದೇ ಒಪ್ಪಂದದ ಬಲದಿಂದ ತಮಿಳುನಾಡು ಯದ್ವಾ ತದ್ವಾ ಹೆಚ್ಚು ಮಾಡಿಕೊಂಡಿರುವ 24.71 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ರಕ್ಷಣೆಗೆ 419 ಟಿಎಂಸಿ ನೀರು ಒದಗಿಸಿರುವ ನ್ಯಾಯಮಂಡಳಿ, ಕರ್ನಾಟಕ ಕೇಳಿಕೊಂಡಿರುವ 25.27 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಪ್ಪಿಕೊಂಡಿಲ್ಲ, 381 ಟಿಎಂಸಿ ನೀರಿನ ಪಾಲನ್ನೂ ನೀಡಿಲ್ಲ. ಕೇರಳ ರಾಜ್ಯಕ್ಕೆ ಈಗ ಕೇವಲ 9 ಟಿಎಂಸಿಯಷ್ಟೇ ಬಳಸಲು ಸಾಧ್ಯ ಇದ್ದರೂ ಅಲ್ಲಿಗೆ 21 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಹೇಳಿ ಆ ನೀರನ್ನು ಬಳಸಲು ತಮಿಳುನಾಡಿಗೆ ಅವಕಾಶ ಮಾಡಿಕೊಟ್ಟಿರುವ ನ್ಯಾಯಮಂಡಳಿ ಅಂತಹ ಔದಾರ್ಯವನ್ನು ಕರ್ನಾಟಕಕ್ಕೆ ತೋರಿಸಿಲ್ಲ. ಇದರ ಜತೆಗೆ ಪರಿಸರ ರಕ್ಷಣೆಗಾಗಿಯೇ ತಮಿಳುನಾಡಿಗೆ ಹತ್ತು ಟಿಎಂಸಿ ನೀರಿನ ಉಡುಗೊರೆ ನೀಡಿದೆ.... ಹೀಗೆ ಆಗಿರುವ ಅನ್ಯಾಯದ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. (ಕಾವೇರಿ ನ್ಯಾಯ ಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಸಲ್ಲಿಸಿರುವ ವಿಶೇಷ ಅರ್ಜಿಯಲ್ಲಿ ಈ ಎಲ್ಲ ಅಂಶಗಳ ಉಲ್ಲೇಖ ಇದೆ. ಈ ಕಾರಣ ಗಳಿಂದಾಗಿ ತಮಿಳುನಾಡಿಗೆ ನಾವು ಹರಿಸಬೇಕಾಗಿರುವ ನೀರಿನ ಪ್ರಮಾಣ ಕನಿಷ್ಠ 30 ಟಿಎಂಸಿಯಷ್ಟು ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯನ್ನು ನಮ್ಮ ವಕೀಲರ ತಂಡ ಇಟ್ಟುಕೊಂಡಿದೆ.)

ಅಂತಿಮ ಐತೀರ್ಪಿನಿಂದ ಕರ್ನಾಟಕಕ್ಕೆ ಒಂದಷ್ಟು ಅನುಕೂಲ ಗಳೂ ಆಗಿವೆ. ಮುಖ್ಯವಾಗಿ ಕಳೆದ ಕೆಲವು ದಶಕಗಳಿಂದ ತಲೆ ಮೇಲೆ ಇದ್ದ 1924ರ ಒಪ್ಪಂದದ ತೂಗುಕತ್ತಿಯಿಂದ ಮುಕ್ತಿ ಸಿಕ್ಕಿದೆ. ಮಧ್ಯಾಂತರ ಐತೀರ್ಪಿನಲ್ಲಿದ್ದ 11.24 ಲಕ್ಷ ಎಕರೆ ಮೇಲಿನ ನಿರ್ಬಂಧ ರದ್ದಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ನಿಗದಿಪಡಿಸಿರುವ ನೀರಿನ ಪಾಲನ್ನು ನೀಡಿದ ನಂತರ ಉಳಿಯುವ ಹೆಚ್ಚುವರಿ ನೀರಿನ ಬಳಕೆಯ ಹಕ್ಕನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ನೀಡಲಾಗಿದೆ. ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದ ನೀರಿನ ಲೆಕ್ಕವೇ ಅಕೃತ ಎಂದು ಹೇಳುವ ಮೂಲಕ ತಮಿಳುನಾಡಿನ ಮೋಸದ ಲೆಕ್ಕಕ್ಕೆ ಕಡಿವಾಣ ಹಾಕಿದೆ.

ಕರ್ನಾಟಕಕ್ಕೆ ಆಗಿರುವ ‘ಅನ್ಯಾಯ’ದ ವಿರುದ್ಧ ಹೋರಾಟ ನಡೆಯಲೇಬೇಕು. ನ್ಯಾಯಾಲಯದಲ್ಲಿ ಕಾನೂನಿನ ಹೋರಾಟ, ಕೇಂದ್ರ ಸರಕಾರದ ಜತೆ ರಾಜಕೀಯ ಹೋರಾಟ, ಸರ್ವಪಕ್ಷಗಳ ನಿಯೋಗ, ತಜ್ಞರ ಜತೆ ಸಮಾಲೋಚನೆ, ಪ್ರತಿಭಟನೆ, ಪಾದಯಾತ್ರೆ...ಎಲ್ಲವೂ ನಡೆಯಬೇಕು. ಇದರ ಜತೆಯಲ್ಲಿ ಐತೀರ್ಪಿನಲ್ಲಿ ನಮಗೆ ಸಿಕ್ಕಿರುವ ‘ನ್ಯಾಯ’ದ ಅನುಕೂಲಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸುವುದು ಬೇಡವೇ? 1924ರ ಒಪ್ಪಂದದ ಪ್ರಕಾರ ಕರ್ನಾಟಕದ ಅಚ್ಚುಕಟ್ಟು ಪ್ರದೇಶ 2,35,000 ಎಕರೆ, ಬಳಸಬಹುದಾದ ನೀರಿನ ಪಾಲು ಕೇವಲ 89.82 ಟಿಎಂಸಿ ಆಗಿತ್ತು. ಮಧ್ಯಾಂತರ ಐತೀರ್ಪಿನಲ್ಲಿ ಈ ಅಚ್ಚುಕಟ್ಟು ಪ್ರದೇಶವನ್ನು 11.24 ಲಕ್ಷ ಎಕರೆವರೆಗೆ ವಿಸ್ತರಿಸ ಲಾಯಿತು. ಕಾವೇರಿ ನ್ಯಾಯ ಮಂಡಳಿಯ ಮುಂದೆ ರಾಜ್ಯ ಸರಕಾರ ಆ ಕಾಲದಲ್ಲಿ ಹೇಳಿಕೊಂಡಿರುವ ಪ್ರಕಾರ ನಮ್ಮ ಅಚ್ಚುಕಟ್ಟು ಅಭಿವೃದ್ಧಿಯ ಗುರಿ 27 ಲಕ್ಷ ಎಕರೆ. ಇದರಲ್ಲಿ 24 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಯೋಜನೆ ಸಿದ್ಧ ಇದೆ ಎಂದು ರಾಜ್ಯ ಸರಕಾರ ತಿಳಿಸಿತ್ತು.

ನ್ಯಾಯಮಂಡಳಿ ಕೇವಲ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಪಡಿಸಬೇಕೆಂದು ಆದೇಶಿಸಿ ಅದಕ್ಕೆ 250 ಟಿಎಂಸಿ ನೀರಿನ ಪಾಲನ್ನಷ್ಟೆ ನೀಡಿ ಅನ್ಯಾಯ ಮಾಡಿರುವುದು ನಿಜ. ಆದರೆ ಹೆಚ್ಚುವರಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಸಿಕ್ಕಿರುವ ಅವಕಾಶವನ್ನಾದರೂ ಬಳಸಿಕೊಳ್ಳುವುದು ಬೇಡವೇ? 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದಾಗಿ 2010ರಲ್ಲಿಯೇ ರಾಜ್ಯಸರಕಾರ ಸುಪ್ರೀಂಕೋರ್ಟ್ ಮತ್ತು ತಮಿಳುನಾಡು ಸರಕಾರಕ್ಕೆ ತಿಳಿಸಿತ್ತು.

ಅಂತಿಮ ಐತೀರ್ಪಿನಿಂದ ನಮ್ಮ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಮಾತ್ರ ಅಲ್ಲ, ಹೆಚ್ಚುವರಿ ನೀರಿನ ಬಳಕೆಗೂ ಅವಕಾಶ ಸಿಗಲಿದೆ. ನ್ಯಾಯಮಂಡಳಿ ರಾಜ್ಯಕ್ಕೆ ಅಕೃತವಾಗಿ ನೀಡಿರುವ ಪಾಲು 270 ಟಿಎಂಸಿಯಾದರೂ ರಾಜ್ಯ ಬಳಸಲು ಅವಕಾಶ ನೀಡಿ ರುವ ಹೆಚ್ಚುವರಿ ನೀರಿನ ಪಾಲನ್ನು ಸೇರಿಸಿದರೆ ಇದು ಸುಮಾರು 310 ಟಿಎಂಸಿ ಆಗಲಿದೆ ಎಂದು ಹೇಳುತ್ತಿದೆ ಒಳಲೆಕ್ಕ.
 1972-73ರಿಂದ 2004-05ರಿಂದ ಇಲ್ಲಿಯವರೆಗೆ ಬಿಳಿ ಗುಂಡ್ಲು ಜಲಮಾಪನದವರೆಗಿನ ನೀರಿನ ಸರಾಸರಿ ಉತ್ಪನ್ನ 538 ಟಿಎಂಸಿ. ಅಂತಿಮ ಐತೀರ್ಪಿನ ಪ್ರಕಾರ ತಮಿಳುನಾಡಿಗೆ 192 ಟಿಎಂಸಿ ಮತ್ತು ಕೇರಳಕ್ಕೆ 21 ಟಿಎಂಸಿ ನೀರು ಹರಿಸಿದರೆ ನಮಗೆ ಉಳಿಯುವ ನೀರಿನ ಪ್ರಮಾಣ ಸುಮಾರು 325 ಟಿಎಂಸಿ. ಅಂತಿಮ ಐತೀರ್ಪಿನಲ್ಲಿ ನಮಗೆ ಅಕೃತವಾಗಿ 270 ಟಿಎಂಸಿ ನೀರನ್ನಷ್ಟೇ ನಿಗದಿಪಡಿಸಲಾಗಿದ್ದರೂ ಸಾಮಾನ್ಯ ಮಳೆಗಾಲದಲ್ಲಿ ನಮಗೆ ಹೆಚ್ಚುವರಿಯಾಗಿ ಸುಮಾರು 55 ಟಿಎಂಸಿ ನೀರು ಸಿಗಲಿದೆ. ಈ ನೀರಿನ ಬಳಕೆಗೆ ಸಂಬಂಸಿದಂತೆ ಅಂತಿಮ ಐತೀರ್ಪಿನಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿಲ್ಲ. ಆದರೆ ಈ ನೀರು ಬಳಸಿಕೊಳ್ಳುವ ನೀರಾವರಿ ಯೋಜನೆಗಳಿಗೆ ನಾವು ಚಾಲನೆ ನೀಡಬೇಕಾಗಿದೆ.


 
 ಕಾವೇರಿ ವಿವಾದ ಇತ್ಯರ್ಥಕ್ಕೆ ಪರಿಹಾರ ಏನು? ಕಾವೇರಿ ನೀರು ಹಂಚಿಕೆಯ ವಿಷಯ ರಾಷ್ಟ್ರದ ಗಮನ ಸೆಳೆಯುವುದು ವಿವಾದ ಉಲ್ಬಣಗೊಂಡಾಗ ಮಾತ್ರ. ಈ ಸಂದರ್ಭದಲ್ಲಿ ದಿಢೀರ್ ‘ಕಾವೇರಿ ತಜ್ಞರಾಗಿಬಿಡುವ ರಾಜಕಾರಣಿಗಳು, ಕನ್ನಡ ಹೋರಾಟಗಾರರು ಮತ್ತು ಚಲನಚಿತ್ರ ನಟ-ನಟಿಯರ ಅರೆಬೆಂದ ತಿಳಿವಳಿಕೆ ಮಾತುಗಳ ಮೂಲಕವೇ ಈ ವಿವಾದವನ್ನು ಇತರರು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ‘ಪ್ರಾಣ ಕೊಡುವ-‘ರಕ್ತ ಹರಿಸುವ, ಗಂಡಸ್ತನ ತೋರಿಸುವ... ವೀರಾವೇಶದ ಮಾತುಗಳ ಅಬ್ಬರದ ನಡುವೆ ಸಮಚಿತ್ತದ ಮತ್ತು ಪ್ರಜ್ಞಾವಂತಿಕೆಯ ಮಾತುಗಳು ನಮ್ಮವರಿಗೂ ರುಚಿಸುವುದಿಲ್ಲ. ಬೆಂಕಿ ಕಾರುವ ಮಾತುಗಳನ್ನೆಲ್ಲ ಕೇಳುವಾಗ ಸಂಘರ್ಷದ ಹಾದಿಯಲ್ಲದೆ ವಿವಾದ ಇತ್ಯರ್ಥಕ್ಕೆ ಬೇರೆ ದಾರಿಯೇ ಇಲ್ಲವೇನೋ ಎಂದು ಅನಿಸುವ ಅಪಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಪ್ರಮುಖ ಅಭಿವ್ಯಕ್ತಿಯಾದ ಬಂದ್, ಧರಣಿ, ಮುಷ್ಕರ- ಒಂದು ಹಂತದವರೆಗೆ ಆವಶ್ಯಕವಾದರೂ ಅದರಿಂದಲೇ ವಿವಾದ ಇತ್ಯರ್ಥ ಸಾಧ್ಯ ಇಲ್ಲ. ಅದಕ್ಕೆ ಬೇರೆ ಮಾರ್ಗಗಳೂ ಇವೆ.. ಅಂತಹ ಏಳು ಮಾರ್ಗಗಳು ಇಲ್ಲಿವೆ:

1. ನೀರನ್ನು ಮಂತ್ರದ ಮೂಲಕ ಸೃಷ್ಟಿಸಲಾಗುವುದಿಲ್ಲ, ಯಂತ್ರದ ಮೂಲಕ ಉತ್ಪಾದಿಸಲೂ ಆಗುವುದಿಲ್ಲ. ನೀರಿಗೆ ಇರುವ ಏಕೈಕ ಮೂಲ ಮಳೆ ಮಾತ್ರ. ಇದರಿಂದಾಗಿ ನಮ್ಮ ಬಳಕೆಗೆ ಅಗತ್ಯ ಇರುವಷ್ಟು ನೀರನ್ನು ಪಡೆಯಲು ಇರುವುದು ಎರಡೇ ಮಾರ್ಗ - ಒಂದು ಮಳೆ, ಇನ್ನೊಂದು ಮಳೆಯಿಂದ ಪಡೆದ ನೀರಿನ ವೈಜ್ಞಾನಿಕ ಬಳಕೆ. ಕಾವೇರಿ ಉಳಿದ ನದಿಗಳಂತಲ್ಲ, ಇದರಲ್ಲಿ ಲಭ್ಯ ಇರುವ ನೀರು ಕೇವಲ 740 ಟಿಎಂಸಿ. ಎಷ್ಟೇ ಮಳೆ ಬಂದರೂ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳು ಕೇಳುತ್ತಿರುವ ಸುಮಾರು 1200 ಟಿಎಂಸಿಗಳಷ್ಟು ನೀರನ್ನು ಒದಗಿಸುವುದು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ನೀರಿನ ವೈಜ್ಞಾನಿಕ ಬಳಕೆಯ ಬಗ್ಗೆ ಯೋಚಿಸಲೇಬೇಕಾಗಿದೆ. ಇದಕ್ಕೆ ಇರುವ ಒಂದು ದಾರಿ ಬೆಳೆ ಪರಿವರ್ತನೆ. ಕಾವೇರಿ ಕಣಿವೆಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಹುಪಾಲು ರೈತರು ಬೆಳೆಯುತ್ತಿರುವುದು ಹೆಚ್ಚು ನೀರಿನ ಅಗತ್ಯ ಇರುವ ಭತ್ತ ಮತ್ತು ಕಬ್ಬು. ಒಂದು ಅಂದಾಜಿನ ಪ್ರಕಾರ ಎರಡೂ ರಾಜ್ಯಗಳ ಕನಿಷ್ಠ ಶೇ.30ರಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯ ಬದಲಿಗೆ ಕಡಿಮೆ ನೀರನ್ನು ಬಳಸಿ ಹತ್ತಿ, ಸೂರ್ಯಕಾಂತಿ ಮತ್ತು ನೆಲಗಡಲೆ ಬೆಳೆಸಲು ಸಾಧ್ಯ.
2. ಬೆಳೆ ಪರಿವರ್ತನೆ ಸಾಧ್ಯವೇ ಇಲ್ಲದ ಕಾವೇರಿ ಕೊಳ್ಳದ ಶೇ. 70ರಷ್ಟು ಪ್ರದೇಶದಲ್ಲಿ ನೀರು ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಕೃಷಿನೀರು ಬಳಕೆಯ ಬಗ್ಗೆ ‘ಸಾಮಾಜಿಕ ಲೆಕ್ಕಪರಿಶೋಧನೆ (ಸೋಷಿಯಲ್ ಅಡಿಟ್) ನಡೆದೇ ಇಲ್ಲ.

 
ಹೆಚ್ಚಿನ ನೀರಾವರಿ ಯೋಜನೆಗಳಲ್ಲಿ ರೈತರ ಗದ್ದೆಗಳಿಗೆ ಹರಿಯುವುದಕ್ಕಿಂತ ಹೆಚ್ಚು ನೀರು ಕಾಲುವೆಗಳಲ್ಲಿ ಪೋಲಾ ಗುತ್ತದೆ. ಶೇ.40ರಷ್ಟು ನೀರು ಇಂಗಿ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಕಾಲುವೆಗಳ ಸಿಮೆಂಟ್ ಲೈನಿಂಗ್, ಸ್ಲ್ಯೂಸ್‌ಗಳ ದುರಸ್ತಿ, ಬೇಕಾಬಿಟ್ಟಿ ಕೆರೆಗಳಿಗೆ ಹರಿಸುವ ಬದಲಿಗೆ ಗದ್ದೆಕಾಲುವೆಗಳ (ಫೀಲ್ಡ್ ಚಾನೆಲ್) ನಿರ್ಮಾಣ ಇತ್ಯಾದಿ ಕ್ರಮಗಳ ಮೂಲಕ ನೀರು ಉಳಿಸಲು ಸಾಧ್ಯ. ಸಹಜವಾಗಿಯೇ ಇದಕ್ಕೆ ಹಣ ಎಲ್ಲಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೂ ದಾರಿಗಳಿವೆ. ಅಂತಹದ್ದೊಂದು ದಾರಿ ಅಂದಾಜು 5,100 ಕೋಟಿ ರೂಪಾಯಿ ವೆಚ್ಚದ ವಿಶ್ವಸಂಸ್ಥೆ ನೆರವಿನ ‘ಕಾವೇರಿ ಆಧುನೀಕರಣ ಯೋಜನೆ’. ಇದು ಮೂರು ದಶಕಗಳಿಂದ ದೂಳು ತಿನ್ನುತ್ತಾ ಬಿದ್ದಿದೆ. ನ್ಯಾಯಮಂಡಳಿ ಮತ್ತು ನ್ಯಾಯಾಲಯದಲ್ಲಿ ಕಾವೇರಿ ವಿವಾದ ಇರುವವರೆಗೆ ಈ ಯೋಜನೆಯನ್ನು ಜಾರಿಗೆ ತರುವುದು ಸಾಧ್ಯ ಇಲ್ಲ.

3. ಕಾವೇರಿ ನ್ಯಾಯಮಂಡಳಿಯಿಂದ ರಾಜ್ಯದ ಕುಡಿಯುವ ನೀರಿನ ಪಾಲಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂಕೋರ್ಟ್‌ಗೆ ಮೊರೆಹೋಗಲು ಅವಕಾಶ ಇದೆ. ರಾಷ್ಟ್ರೀಯ ಜಲನೀತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ನ್ಯಾಯಮಂಡಳಿ ಇದಕ್ಕೆ ಕೊನೆಯ ಆದ್ಯತೆ ನೀಡಿರುವುದು ಮಾತ್ರವಲ್ಲ ನೀರಿನ ಲೆಕ್ಕಾಚಾರದಲ್ಲಿಯೂ ಎಡವಿದೆ. ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಹಳ್ಳಿ-ಪಟ್ಟಣಗಳ ಕುಡಿಯುವ ನೀರಿಗಾಗಿ ಕರ್ನಾಟಕ ಕೇಳಿದ್ದು 50 ಟಿಎಂಸಿ. ನ್ಯಾಯಮಂಡಳಿ ಗುರುತಿಸಿರುವುದು 17.22 ಟಿಎಂಸಿ. ಇದರಲ್ಲಿ ಬೆಂಗಳೂರಿಗೆ 8.70 ಮತ್ತು ಇತರ ಪ್ರದೇಶಕ್ಕೆ 8.52 ಟಿಎಂಸಿ. ಈ 17.22 ಟಿಎಂಸಿಯಲ್ಲಿ ಅರ್ಧದಷ್ಟು ನೀರು ಅಂತ ರ್ಜಲದಿಂದ ಲಭ್ಯ ಎಂದು ನ್ಯಾಯಮಂಡಳಿ ಹೇಳಿದೆ. ಅಷ್ಟಕ್ಕೆ ಸುಮ್ಮನಾಗದೆ ನೀರು ಬಳಕೆಯಾದ ನಂತರ ಶೇ.80 ಭಾಗ ಭೂಮಿ ಸೇರಿ ಅಂತರ್ಜಲವಾಗುವುದರಿಂದ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಕುಡಿಯುವ ನೀರಿನ ಆವಶ್ಯಕತೆ 1.75 ಟಿಎಂಸಿ ಮಾತ್ರ ಎಂದು ಹೇಳಿ ಗಾಯದ ಮೇಲೆ ಬರೆ ಹಾಕಿದೆ. ಈ ಅನ್ಯಾಯಕ್ಕೆ ಅವೈಜ್ಞಾನಿಕವಾದ ಲೆಕ್ಕಾಚಾರ ಮಾತ್ರ ಕಾರಣ ಅಲ್ಲ, ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಯಲ್ಲಿದೆ ಎಂಬ ಅಭಿಪ್ರಾಯವೂ ಕಾರಣ. ಇಷ್ಟು ಮಾತ್ರವಲ್ಲ ಕುಡಿಯುವ ನೀರನ್ನು ಲೆಕ್ಕಹಾಕುವಾಗ ಬೆಂಗಳೂರು ಮಹಾನಗರದ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಯಾವ ಕೋನದಿಂದ ಈ ನೀರು ವಿತರಣೆಯ ಕ್ರಮವನ್ನು ನೋಡಿದರೂ ಇದರಿಂದ ಅನ್ಯಾಯವಾಗಿರುವುದು ಸ್ಪಷ್ಟ.

ಕುಡಿಯುವ ನೀರಿನ ವಿಚಾರದಲ್ಲಿ ನದಿ ಕಣಿವೆಯ ಗಡಿಗಳನ್ನು ಎಂದೋ ಉಲ್ಲಂಸಿಯಾಗಿದೆ. ಕಾವೇರಿ ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದ್ದ ದಿಲ್ಲಿ ಮಹಾನಗರ ಯಮುನಾ ನದಿ ಕಣಿವೆಗೆ ಸೇರಿದ್ದು, ಅಲ್ಲಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ರಾವಿ-ಬಿಯಾಸ್‌ನಿಂದ ಎಂಬುದನ್ನು ನ್ಯಾಯಮೂರ್ತಿಗಳು ಹೇಗೆ ಮರೆತರೋ ಗೊತ್ತಿಲ್ಲ. ಆಂಧ್ರಪ್ರದೇಶ ಮತ್ತು ಕರ್ನಾಟಕ ತಮ್ಮ ಪಾಲನ್ನೂ ಮದ್ರಾಸ್ ನಗರದ ಕುಡಿಯುವ ನೀರಿಗಾಗಿ ನೀಡಿಲ್ಲವೇ? ಕಾವೇರಿ ಕಣಿವೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸಲು ಕಣಿವೆಯ ಗಡಿ ಅಡ್ಡಿ ಆಗಲೇಬಾರದು.ಇದರ ಜತೆಗೆ ನ್ಯಾಯಮಂಡಳಿಯೇ ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಗೆ ಸೇರಿದೆ ಎಂದು ಹೇಳಿರುವ ಕಾರಣ ಪೆನ್ನಾರ್-ಕಾವೇರಿ ನದಿಗಳ ಜೋಡಣೆಯ ಯೋಜನೆಗೆ ಚಾಲನೆ ನೀಡಬಹುದು.

4. ಈಗಿನ ವ್ಯವಸ್ಥೆಯಲ್ಲಿ ಕೃಷ್ಣರಾಜ ಸಾಗರದಿಂದ ಬಿಟ್ಟನೀರು ಬಿಳಿಗುಂಡ್ಲು ಮೂಲಕ ನೇರವಾಗಿ ಮೆಟ್ಟೂರು ಜಲಾಶಯಕ್ಕೆ ಹೋಗುತ್ತದೆ, ಅಲ್ಲಿಂದ ಸಮುದ್ರಕ್ಕೆ. ಕೆ.ಆರ್.ಸಾಗರದಿಂದ ಬಿಳಿಗುಂಡ್ಲು ವರೆಗಿನ ನಡುಹಾದಿಯಲ್ಲಿ ಯಾವ ಬ್ಯಾರೇಜ್ ಇಲ್ಲವೆ ಅಣೆಕಟ್ಟು ಇಲ್ಲ. ಈ ನಡುಮಾರ್ಗದಲ್ಲಿ ಬರುವ ಮೇಕೆದಾಟು, ಶಿವನಸಮುದ್ರ, ಹೊಗೆನಕಲ್ ಮತ್ತು ರಾಸಿಮಲೆಯಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮ ತಯಾ ರಿಸಿತ್ತು. ಮೇಕೆದಾಟು ಮತ್ತು ಶಿವನಸಮುದ್ರ ಕರ್ನಾಟಕದ ಗಡಿಯೊಳಗೆ ಬರುವುದರಿಂದ ಇವುಗಳನ್ನು ನಾವೇ ಅನುಷ್ಠಾನಗೊಳಿಸುತ್ತೇವೆ ಎಂದು ಕರ್ನಾಟಕ ಸರಕಾರ ಬಹಳ ಹಿಂದೆಯೇ ಹೇಳಿತ್ತು. ಆದರೆ ಈ ಯೋಜನೆಗಳಿಗೆ ನಮ್ಮಿಂದ ಅನುಮತಿ ಪಡೆಯಬೇಕೆಂದು ತಮಿಳುನಾಡು ಹಟ ಹಿಡಿದು ಕೂತಿದೆ. ಮೇಕೆದಾಟುವಿನಲ್ಲಿ 60ರಿಂದ 80 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಿದರೆ ಅವಶ್ಯಕತೆ ಇದ್ದಾಗ ಮೆಟ್ಟೂರಿಗೆ ಅಲ್ಲಿಂದ ನೀರು ಹರಿಸಬಹುದು ಇಲ್ಲದಿದ್ದರೆ ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ತಮಿಳು ನಾಡಿನ ವಿರೋಧದ ಹೊರತಾಗಿಯೂ ಕರ್ನಾಟಕ ಸರಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ.

5. ಮೆಟ್ಟೂರು ಆಣೆಕಟ್ಟು ಮತ್ತು ಅದರ ಮೂಲಕ ನಿರ್ಮಿಸಲಾಗಿರುವ ಸ್ಟಾನ್ಲಿ ಜಲಾಶಯ ಸುಮಾರು 78 ವರ್ಷಗಳಷ್ಟು ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಹೂಳು ತುಂಬಿ ಜಲಾಶಯದ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು ದುರಸ್ತಿ ಮಾಡುವ ಪ್ರಯತ್ನ ನಡೆದಿಲ್ಲ. ಇದರಿಂದಾಗಿ ತನ್ನ ಮೂಲ ಸಾಮರ್ಥ್ಯದಷ್ಟನ್ನು ಸಂಗ್ರಹಿಸಿಟ್ಟುಕೊಳ್ಳಲಾಗದೆ ಜಲಾಶಯದಿಂದ ಬಿಟ್ಟ ನೀರು ಸಮುದ್ರದ ಪಾಲಾಗುತ್ತಿದೆ. ಜಲಾಶಯದ ಹೂಳು ತೆಗೆದು ದುರಸ್ತಿ ಮಾಡುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದು.

  6. ‘ಕಾವೇರಿ ಕುಟುಂಬವನ್ನು ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡಬೇಕಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ರೈತರ ಮುಖಂಡರನ್ನೊಳಗೊಂಡ ಈ ಸಂಘಟನೆಯನ್ನು ಹುಟ್ಟುಹಾಕಿದ್ದು ‘ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆ’. 2003-04ರಲ್ಲಿ ಎರಡೂ ರಾಜ್ಯಗಳ ನಡುವಿನ ನೀರಿನ ವ್ಯಾಜ್ಯ ತಾರಕಕ್ಕೇರಿದಾಗ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಸಂಘಟನೆ ಶ್ರಮಿಸಿತ್ತು. ತಮಿಳುನಾಡಿನ ರೈತ ನಾಯಕ ರಂಗನಾಥನ್ ನೇತೃತ್ವದ ತಂಡ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶಕ್ಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ಸಾಹಿತಿ ಎಚ್.ಎಲ್. ಕೇಶವಮೂರ್ತಿ, ಬೋರಯ್ಯ ಮತ್ತಿತರನ್ನೊಳಗೊಂಡ ತಂಡ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಎರಡೂ ರಾಜ್ಯಗಳ ರೈತನಾಯಕರು ಸೇರಿ ಹಿಂದೆ ಹಲವಾರು ಸಭೆಗಳನ್ನು ನಡೆಸಿದ್ದರು.

7. ಕಾವೇರಿ ನದಿ ನೀರಿನ ವಿವಾದವೂ ಸೇರಿದಂತೆ ರಾಜ್ಯದ ನೆಲ-ಜಲ-ಭಾಷೆಗಳ ರಕ್ಷಣೆಯ ಜವಾಬ್ದಾರಿ ಆಯಾ ಕ್ಷೇತ್ರಗಳ ಹೋರಾಟಗಾರರಿಗೆ ಒಪ್ಪಿಸಿಬಿಟ್ಟು ಉಳಿದವರು ಮುಖ್ಯವಾಗಿ ಬೆಂಗಳೂರಿನ ಗಣ್ಯರೆನಿಸಿಕೊಂಡವರು ಇಲ್ಲಿನ ಹವಾನಿಯಂತ್ರಿತ ಹವಾಮಾನವನ್ನು ಆನಂದಿಸುತ್ತಾ ಆರಾಮವಾಗಿರುವುದೂ ಕಾರಣ. ಬೆಂಗಳೂರಿನಲ್ಲಿ ರಸ್ತೆ ಕೆಟ್ಟುಹೋಗಿದೆ, ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಇನೊಓಂೀಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹತ್ತು ವರ್ಷಗಳ ಹಿಂದೆ ಭೂಮಿ-ಆಕಾಶ ಒಂದು ಮಾಡಿಬಿಟ್ಟಿದ್ದರು. ದಿಲ್ಲಿಯ ಪತ್ರಿಕೆಗಳಲ್ಲಿಯೂ ಇದು ದೊಡ್ಡ ಸುದ್ದಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಎದ್ದೆನೋ, ಬಿದ್ದೆನೋ ಎಂದು ದಿಲ್ಲಿಗೆ ಓಡಿಹೋಗಿ ಪ್ರಧಾನಿಯಿಂದ ಹಿಡಿದು ಅವರ ಪಕ್ಷದ ನಾಯಕ-ನಾಯಕಿಯರವರೆಗೆ ಎಲ್ಲರಿಗೂ ಸ್ಪಷ್ಟೀಕರಣ ಕೊಟ್ಟಿದ್ದರು.

ಪತ್ರಿಕಾ ಸಂಪಾದಕರನ್ನು ಭೇಟಿ ಮಾಡಿ ಕೈಜೋಡಿಸಿ ಬೇಡಿಕೊಂಡಿದ್ದರು. ಅದರ ಪರಿಣಾಮ ಏನೂ ಆಗಲಿಲ್ಲ, ನಾರಾಯಣ ಮೂರ್ತಿಗಳು ಮಾತ್ರ ನಂತರ ಯಾಕೋ ಮೌನವಾಗಿಬಿಟ್ಟರು. ಈ ರೀತಿಯ ಪ್ರಭಾವಶಾಲಿ ಗಣ್ಯರ ದೊಡ್ಡ ದಂಡು ನಮ್ಮಲ್ಲಿದೆ. (ತಮಿಳುನಾಡಿನಲ್ಲಿ ಇಲ್ಲ). ರಾಜಕಾರಣಿಗಳು ಎಂದರೆ ಸ್ವಾರ್ಥಿಗಳು, ಅಪ್ರಮಾಣಿಕರು, ಜನದ್ರೋಹಿಗಳು....ಎಲ್ಲ ಸರಿ, ಕರ್ನಾಟಕ ಎಂದರೆ ಕೇವಲ ರಾಜಕಾರಣಿಗಳೇ? ಎಲ್ಲವನ್ನೂ ರಾಜಕಾರಣಿಗಳ ತಲೆಮೇಲೆ ಹೊರಿಸಿ ತಾವು ಮಾತ್ರ ವಿವಾದದಿಂದ ದೂರ ಇದ್ದು ಸಜ್ಜನನೆಂಬ ಬಿರುದನ್ನು ಪಡೆಯಬೇಕೆಂದು ಸ್ವಾರ್ಥಪೂರಿತ ಚಿಂತನೆಯಲ್ಲದೆ ಮತ್ತಿನ್ನೇನು? ನಾರಾಯಣಮೂರ್ತಿ, ಅಜೀಂ ಪ್ರೇಮ್ಜಿ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, , ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಕಿರಣ್ ಮಜುಮ್ದಾರ್ ಶಹಾ, ಡಾ.ದೇವಿಪ್ರಸಾದ್ ಶೆಟ್ಟಿ ಮೊದಲಾದವರು ನಿಯೋಗದಲ್ಲಿ ಹೋಗಿ ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಬಾರದೇಕೆ? ಕಾವೇರಿ ಕಣಿವೆಯ ಕುಡಿಯುವ ನೀರಿಗೆ 1.75 ಟಿಎಂಸಿ, ಕೈಗಾರಿಕಾ ಬಳಕೆಗಾಗಿ 0.10 ಟಿಎಂಸಿ ನೀಡಿರುವುದು ನ್ಯಾಯವೇ ಎಂದಾದರೂ ಕೇಳಬಹುದಲ್ಲವೇ?
ಕಾವೇರಿ ವಿವಾದ ಯಾರೂ ಬಿಡಿಸಲಾಗದ ಬ್ರಹ್ಮಗಂಟು ಏನಲ್ಲ. ಇತ್ಯರ್ಥಕ್ಕೆ ಮಾರ್ಗಗಳಿವೆ, ಎಲ್ಲರೂ ಕೂಡಿ ಮನಸ್ಸು ಮಾಡಬೇಕು ಅಷ್ಟೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top