--

ಬೇರುಗಳು


 

ಅಲ್ಲಿ ಮುಸ್ಲಿಮ್ ಲೀಗಿನ ಬೆಂಬಲಿಗರಿದ್ದರು. ಹಾಗೆಯೇ ಕಾಂಗ್ರೆಸ್ಸಿನ ಅನುಯಾಯಿಗಳೂ ಇದ್ದರು. ಎರಡೂ ಕುಟುಂಬಗಳಲ್ಲಿ ರಾಜಕೀಯ ಬೆಂಬಲಿಗರಿದ್ದಂತೆ. ಅವರ ಕುಟುಂಬದಲ್ಲಿ ಹಿಂದೂ ಮಹಾಸಭೆಯ ಅಭಿಮಾನಿಗಳೂ ಇದ್ದರು. ಪರಿಣಾಮವಾಗಿ, ಅವರವರ ಕುಟುಂಬಗಳಲ್ಲಿ ಆಗಾಗ ಧರ್ಮ ಮತ್ತು ರಾಜಕಾರಣ ಕುರಿತು ಅತ್ಯಂತ ಉಗ್ರ ವಾದ-ವಿವಾದಗಳು ನಡೆಯುತ್ತಿದ್ದವು. ಆದರೆ ಅವು ಪುಟ್ಬಾಲ್ ಅಥವಾ ಕ್ರಿಕೆಟ್ ಮ್ಯಾಚ್‌ನಲ್ಲಿ ಭಾಗವಹಿಸಿದ್ದಂತೆ ‘ಆಟದ ಸದ್ಭಾವ’ದಿಂದ ಕೂಡಿರುತ್ತಿದ್ದವು. 

ಮ್ಮ ಮುಖಗಳು ಬಣ್ಣ ಕಳೆದುಕೊಂಡು ಬಿಳಿಚಿದ್ದವು. ಅವುಗಳ ಸಹಜ ಬಣ್ಣ ಬಸಿದು ಹೋಗಿ ವಿವರ್ಣವಾಗಿದ್ದವು. ಕಳೆದ ಆರು ದಿನಗಳಿಂದ ಒಲೆ ಹೊತ್ತಿಸಿರಲಿಲ್ಲ. ಅಡುಗೆ ಮಾಡಿರಲಿಲ್ಲ. ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿಉಳಿದುಕೊಂಡು ಸಾಕಷ್ಟು ಕೀಟಲೆ ಮಾಡುತ್ತ ತಮ್ಮದಷ್ಟೇ ಅಲ್ಲ. ಮನೆಯಲ್ಲಿಯೇ ಪ್ರತಿ ಯೊಬ್ಬರ ಬದುಕನ್ನು ಸಂಕಟಮಯಗೊಳಿಸಿ ದ್ದರು. ಪರಸ್ಪರ ಬಡಿದಾಡುತ್ತ, ಸದ್ದುಗದ್ದಲ ಮಾಡುತ್ತ ಇತ್ತಿಂದತ್ತ ಓಡುತ್ತ ಲಾಗಾಹಾಕುತ್ತ ಎಲ್ಲರಿಗೂ ತಬಾ ಮಾಡಿದ್ದರು. ಆಗಸ್ಟ್ 15 ರಂದು ಏನೂ ಸಂಭವಿಸಿಯೇ ಇಲ್ಲವೇನೋ ಎಂಬಂತೆ ತಮ್ಮದೇ ಆದ ಕೀಟಲೆ, ಸದ್ದುಗದ್ದಲದ ನಿರಾಂತಕ ಪ್ರಪಂಚದಲ್ಲಿ ತೇಲಾಡುತ್ತಿದ್ದರು. ಆ ಬಡಪಾಯಿ ಮಕ್ಕಳಿಗೆ ಬ್ರಿಟಿಷರು ಭಾರತ ವನ್ನು ಬಿಟ್ಟು ಹೋಗಿದ್ದಾರೆಂಬ ಖಬರೂ ಇರಲಿಲ್ಲ! ಅಷ್ಟೇ ಯಾಕೆ, ಅವರು ಬಿಟ್ಟು ಹೋಗುವಾಗ ಎಂದೆಂದೂ ಮಾಯದ ಅತ್ಯಂತ ಆಳವಾದ ಗಾಯವನ್ನುಂಟು ಮಾಡಿ ಹೋಗಿದ್ದರೆಂಬು ವುದೂ ಆ ಮಕ್ಕಳಿಗೆ ಗೊತ್ತಿರಲಿಲ್ಲ. ಭಾರತದ ಮೇಲೆ ಶಸಚಿಕಿತ್ಸೆ ಮಾಡಿದ ಕೈಗಳು ಎಷ್ಟು ಅಪರಿಣಿತವಾಗಿದ್ದವೆಂದರೆ, ಆ ನೈಪುಣ್ಯಹೀನ ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಹಲವಾರು ತಲೆ ಮಾರುಗಳೇ ನಾಶವಾಗಿ ಹೋಗಿದ್ದವು. ಎಲ್ಲೆಲ್ಲೂ ರಕ್ತದ ಕಾಲುವೆಗಳು ತುಂಬಿ ಹರಿದವು. ದೇಹದ ತುಂಬಾ ‘ಆ’- ಎಂದು ಬಾಯಿ ತೆರೆದಿದ್ದ ಅನೇಕ ಗಾಯಗಳಿಗೆ ಹೊಲಿಗೆ ಹಾಕುವ ಧೈರ್ಯವನ್ನು ಸಹ ಯಾರೂ ತೋರಲಿಲ್ಲ.

ಅದು ಸಾಮಾನ್ಯ ದಿನವಾಗಿದ್ದರೆ, ಆ ಹಾಳುಕಿಡಿಗೇಡಿ ಮಕ್ಕಳಿಗೆ ಗದರಿಸಿ ಶಾಲೆಗೆ ಕಳಿಸಬಹುದಾಗಿತ್ತು. ‘ಅಲ್ಲಿ ಹೋಗಿ ಬೇಕಾ ದಷ್ಟು ಗದ್ದಲ ಮಾಡಿರಿ. ಕುಣಿಯಿರಿ ಜಿಗಿಯಿರಿ ಮನಬಂದಂತೆ ಹಾರಾಡಿರಿ’ ಎಂದು ಹೇಳಿ ಸ್ಕೂಲಿಗೆ ಅಟ್ಟಬಹುದಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ನಗರದಲ್ಲಿ ವಾತಾವರಣ ತೀರ ಕೆಟ್ಟು ಹೋಗಿತ್ತು. ಪರಿಣಾಮವಾಗಿ,ಎಲ್ಲ ಮುಸ್ಲಿಮರು ಎಲ್ಲೆಲ್ಲಿಯೋ ಅಡಗಿ ಕೂಡುವ ಪರಿಸ್ಥಿತಿ ಬಂದೊದಗಿತ್ತು. ಎಷ್ಟೋ ಮನೆಗಳು ಮುಚ್ಚಿ ಕೀಲಿ ಹಾಕಲಾಗಿದ್ದವು. ಅವುಗಳ ಮುಂದೆ ಪೊಲೀಸರು ಪಹರೆ ನಿಂತಿದ್ದರು. ತಮ್ಮ ಹಳೆಯ ಗಾಯದ ಮೇಲೆ ಯಾರೋ ಉಪ್ಪು ಹಾಕಿ ತಿಕ್ಕುತ್ತಿದ್ದಾರೇನೋ ಎಂಬ ಭಾವನೆ ಮುಸ್ಲಿಮರಲ್ಲಿ ಮೊಳೆಯತೊಡ ಗಿತ್ತು. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಯಥಾಪ್ರಕಾರ ಎಲ್ಲವೂ ಶಾಂತವಾಗಿತ್ತು. ಆದರೆ ಆ ಮಾತು ನಗರದ ಉಳಿದ ಭಾಗಗಳಿಗೆ ಅನ್ವಯಿಸುವಂತಿರಲಿಲ್ಲ.ಸಾಮಾನ್ಯವಾಗಿ ಹೊಲಸು ತುಂಬಿ ತುಳುಕುವುದು ಕೊಳೆಗೇರಿಗಳಲ್ಲಿಯೇ ಅಲ್ಲವೇ? ಅಂತೆಯೇ, ದ್ವೇಷ ತುಂಬಿ ತುಳುಕುವುದು ಕೂಡ ಅಜ್ಞಾನ ಮತ್ತು ಬಡತನ ಮಡುವುಗಟ್ಟಿದ್ದ ಸ್ಥಳದಲ್ಲಿಯೇ! ಇಂಥ ಸ್ಥಳಗಳಲ್ಲಿಯೇ, ಇಂಥ ಜನಗಳ ಮಧ್ಯದಲ್ಲಿಯೇ ಧರ್ಮೋನ್ಮಾದದ ವಿಷವೃಕ್ಷ ಟಿಸಿಲೊಡೆದು ಪಸರಿಸಿ, ದಿಕ್ಕು ದಿಕ್ಕಿಗೂ ಬೆಳೆಯುವುದು ಸಹಜವಾಗಿತ್ತು. ಹಾಗೆಂದೇ ಬಡವರು ಬದುಕುತ್ತಿದ್ದ ಕೊಳೆಗೇರಿಗಳೆಲ್ಲ ಧರ್ಮೋನ್ಮಾದದ ದಳ್ಳುರಿಯಲ್ಲಿ ಧಗ ಧಗಿಸುತ್ತಿದ್ದವು. ಇಡೀ ವಾತಾವರಣ ಮಲಿನಗೊಂಡು ನಾರುತ್ತಿತ್ತು. ಇದಕ್ಕೆ ಕಳಸವಿಟ್ಟಂತೆ ಪ್ರತಿದಿನವೂ ಪಂಜಾಬಿನಿಂದ ಹರಿದು ಬರುತ್ತಿದ್ದ ನಿರಾಶ್ರಿತರ, ಸಂತ್ರಸ್ತರ ಸಂಖ್ಯಾ ಮಾಪೂರ ಅಲ್ಪಸಂಖ್ಯಾತ ಸಮುದಾಯದವರ ಎದೆಯಲ್ಲಿ ಭೀತಿ ಉಲ್ಬಣಗೊಳ್ಳುವಂತೆ ಮಾಡುತ್ತಿತ್ತು.

 ಈಗಾಗಲೇ ಎರಡು ಗಲಭೆಗಳು ಕಾಣಿಸಿಕೊಂಡಿದ್ದವು. ಆದರೆ ಮೇವಾ ಡದಲ್ಲಿ ಹಿಂದೂ ಮುಸ್ಲಿಮ್‌ರ ಸ್ನೇಹದ ಬದುಕು ಎಷ್ಟು ಗಾಢವಾಗಿತ್ತೆಂದರೆ, ಅವರ ಹೆಸರು, ಮುಖ ಲಕ್ಷಣ, ವೇಷ-ಭೂಷಣಗಳಿಂದ ಯಾರು ಯಾರೆಂದು ಗುರುತಿಸುವುದೇ ಕಷ್ಟವಾಗಿತ್ತು. ಸೌಹಾರ್ದತೆಯಿಂದ ಎಲ್ಲರೂ ಕೂಡಿಯೇ ಬಾಳುತ್ತಿದ್ದರು; ಅದೊಂದು ರೀತಿಯ ಸಾಂಸ್ಕೃತಿಕ ಸಮ್ಮಿಶ್ರ ಬದುಕು. ಉಳಿದ ವರಿಂದ ಭಿನ್ನರೆಂದು ಗುರುತಿಸಬಹುದಾಗಿದ್ದ ಜನರು ಈಗಾಗಲೇ ಮೇವಾಡ ಬಿಟ್ಟು ಪಾಕಿಸ್ತಾನಕ್ಕೆ ಹೊರಟು ಹೋಗಿದ್ದರು. ಆಗಸ್ಟ್ 15ರಂದು ಏನೋ ಸಂಭವಿಸಲಿದೆ ಎನ್ನುವುದರ ಸುಳಿವು ಸಿಕ್ಕಿದ್ದೇ ತಡ ಅವರೆಲ್ಲ ಅಲ್ಲಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು. ಇನ್ನೂ ಹಲವಾರು ತಲೆಮಾರುಗಳಿಂದ ಈ ಪ್ರದೇಶದಲ್ಲಿ ಬದುಕು ಸಾಗಿಸುತ್ತಿದ್ದ ಅನೇಕರಿಗೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯ ನೈಜ ಸ್ವರೂಪ, ಸ್ವಭಾವದ ಪ್ರಜ್ಞೆಯಾಗಲಿ, ಅದನ್ನು ತಿಳಿದುಕೊಳ್ಳುವ ತಾಕತ್ತಾಗಲಿ ಎಳಷ್ಟೂ ಇರಲಿಲ್ಲ. ಮೇಲಾಗಿ, ಅಲ್ಲಿ ಅದನ್ನು ಅವರಿಗೆ ವಿವರಿಸಿ ಹೇಳುವ ಜನರೂ ಇರಲಿಲ್ಲ.

ಕೆಲವರು ಅನೇಕ ಕಥೆ ವದಂತಿಗಳಿಗೆ ಕಿವಿಗೊಟ್ಟು ಪಾಕಿಸ್ತಾನಕ್ಕೆ ಪಯಣ ಬೆಳೆಸಿದ್ದರೆ, ಇನ್ನೂ ಕೆಲವರು ಯಾವ್ಯಾವುದೋ ಆಸೆ ಆಮಿಷಗಳಿಗೆ ಬಲಿಬಿದ್ದು ಆ ಕಡೆಗೆ ಹೆಜ್ಜೆ ಹಾಕಿದ್ದರು. ಪಾಕಿಸ್ತಾನದಲ್ಲಿ ರೂಪಾಯಿಗೆ ನಾಲ್ಕು ಸೇರು ಗೋ, ನಾಲ್ಕಾಣೆಗೆ ಒಂದು ಅಂಗೈ ಅಂಗಲದ ನಾನ್ ಇತ್ಯಾದಿ ಇತ್ಯಾದಿ ಅತ್ಯಂತ ಅಗ್ಗದ ಬೆಲೆಗೆ ದೊರೆಯಲಿವೆ ಎಂಬಂತಹ ಮರೀಚಿಕೆಯ ಬೆಂಬತ್ತಿ ಪಾಕಿಸ್ತಾನದ ಕಡೆಗೆ ಪಾದ ಬೆಳೆಸಿದ್ದರು. ಅಂಥವರಲ್ಲಿ ಅನೇಕರು ಈಗ ಮತ್ತೆ ಹಿಂದಿರುಗಿ ಬರತೊಡಗಿದ್ದರು. ಯಾಕೆಂದರೆ, ಒಮ್ಮೆ ಪಾಕಿಸ್ತಾನಕ್ಕೆ ಮುಟ್ಟಿದ ತಕ್ಷಣ ಅವರಿಗೆ ಅರಿವಾದದ್ದು; ರೂಪಾಯಿಗೆ ನಾಲ್ಕು ಸೇರು ಗೋದಿ ದೊರೆಯುತ್ತಿದ್ದದ್ದೇನೋ ಸತ್ಯವೇ. ಅಂತೆಯೇ, ಅತ್ಯಂತ ಅಗ್ಗದ ಬೆಲೆಗೆ ಅಂಗೈ ಅಗಲದ ನಾನ್‌ಗಳು ಕೂಡ ದೊರೆಯುತ್ತಿದ್ದವು. ಆದರೆ ಖರೀದಿಸಲು ಹಣ ಕೊಡಲೇ ಬೇಕಾಗಿತ್ತು. ಹಣ ಎಲ್ಲಿಂದ ತರುವುದು! ಅದು ಹೊಲಗದ್ದೆಗಳಲ್ಲಿ ಬೆಳೆಯುವುದಲ್ಲ. ಅಂಗಡಿಗಳಲ್ಲಿ ಖರೀದಿಸಿದೆ. ದೊರೆಯುವುದಲ್ಲ. ಹಣ ಸಿಗಬೇಕಾದರೆ ದುಡಿಯಬೇಕು. ದುಡಿಯಲು ದುಡಿಮೆಗೆ ಅವಕಾಶವಿರಬೇಕು. ಅವಕಾಶವಿರಲಿಲ್ಲ. ಆದ್ದರಿಂದ ಅವರು ದುಡಿಯಲಿಲ್ಲ. ದುಡಿಮೆಯಿಲ್ಲದೆ ಹಣ ದೊರೆಯಲಿಲ್ಲ. ತಮ್ಮ ಜೀವನಾವಶ್ಯಕ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಹಣ ಬೇಕೇ ಬೇಕಿತ್ತು. ಎಷ್ಟು ಹಿಕ್ಮತ್ತಿನಿಂದ ಹೆಣಗಾಡಿದರೂ ಹಣ ಅವರಿಗೆ ಎಟುಕಲೇ ಇಲ್ಲ. ಪರಿಣಾಮವಾಗಿ, ಹಿಂದಿರುಗಿ ಬರುವವರ ಪ್ರವಾಹ ಬೆಳೆಯುತ್ತಲೇ ಹೋಯ್ತು.

ನಮ್ಮ ಪ್ರದೇಶದಿಂದ ಮುಸ್ಲಿಮರನ್ನು ಹೊರಹಾಕಬೇಕೆಂಬ ಘೋಷಣೆಗಳು ಖುಲ್ಲಂಖಲ್ಲಾ ಮೊಳಗತೊಡಗಿದಾಗ ಇದ್ದಕ್ಕಿದ್ದಂತೆ ಅನೇಕ ಕಷ್ಟಗಳು ಹುಟ್ಟಿಕೊಂಡವು. ಠಾಕೂರರು ಆ ಘೋಷಣೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಯಾಕೆಂದರೆ ಅಲ್ಲಿಯ ಜನಪದರ ಗುರುತಿಸಲು ಅನೇಕ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕಾಗುತ್ತಿತ್ತು. ಠಾಕೂರರ ಪ್ರಕಾರ ಅದೆಲ್ಲ ಸುಮ್ಮನೆ ಹಣದ ಅಪವ್ಯಯ. ಅದರ ಬದಲಾಗಿ ಅದೇ ಹಣವನ್ನು ಬಳಸಿ ನಿರಾಶ್ರಿತರಿಗೆ ಅರಣ್ಯ ಭೂಮಿಯನ್ನು ಖರೀದಿಸಿ ಕೊಡಬಹುದು. ಅದಕ್ಕಾಗಿ ತಾವು ಉದಾರ ಕೈಯಿಂದ ಸಾಕಷ್ಟು ಸಹಾಯ ಮಾಡಲು ಸಿದ್ಧ ಎಂದರು. ಹೇಗಿದ್ದರೂ ಅರಣ್ಯಗಳಲ್ಲಿ ಕೇವಲ ಪ್ರಾಣಿಗಳು ಮಾತ್ರ ವಾಸಿಸುತ್ತಿದ್ದವು. ಅವಶ್ಯವಿರುವಲ್ಲೆಲ್ಲಾ ಅವುಗಳನ್ನು ಬೇರೆಡೆಗೆ ಓಡಿಸಿ ಭೂಮಿ ಕೃಷಿ ಮಾಡಬಹುದೆನ್ನುವುದು ಅವರ ಅನಿಸಿಕೆ.

ಹೋಗಬಯಸಿದ್ದವರೆಲ್ಲ ಹೋದ ಮೇಲೂ ಅಲ್ಲಿ ಕೆಲವು ಸುಸ್ಥಾಪಿತ ಮುಸ್ಲಿಮರ ಕುಟುಂಬಗಳು ಉಳಿದಿದ್ದವು. ಅವರೆಲ್ಲ ಸಮಾಜದ ಉಳ್ಳವರ ಪೈಕಿ-ಕೆಲವರು ಸರಕಾರಿ ನೌಕರರಾಗಿದ್ದರೆ, ಇನ್ನು ಹಲವರು ಮಹಾರಾಜನ ನೆಚ್ಚಿನವರಾಗಿದ್ದರು. ಹಾಗಾಗಿ ಅವರೆಲ್ಲ ಅಲ್ಲಿಂದ ತೊಲಗುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಇವರ ಹೊರತಾಗಿ ಅಲ್ಲಿ ಇನ್ನೂ ಕೆಲವು ಮುಸ್ಲಿಮ್ ಕುಟುಂಬಗಳಿದ್ದವು. ಅವರೆಲ್ಲ ಭಾರತವೋ ಪಾಕಿಸ್ತಾನವೋ, ಒಟ್ಟಿನಲ್ಲಿ ಅಲ್ಲಿಂದ ಕದಲದೆ ಅಲ್ಲಿಯೇ ಇದ್ದುಬಿಡಲು ನಿರ್ಧರಿಸಿದ್ದರು ಮತ್ತು ಅವರ ನಿರ್ಧಾರ ಅಚಲವಾಗಿತ್ತು. ಅಂಥವರ ಪೈಕಿ ನಮ್ಮ ಕುಟುಂಬವೂ ಒಂದು. ಪರಿಣಾಮವಾಗಿ, ನಾವೇನೂ ಹೊರಡುವ ಅವಸರದಲ್ಲಿರಲಿಲ್ಲ.

 
ಆದರೆ ಬರಬರುತ್ತ, ಪರಿಸ್ಥಿತಿ ಬದಲಾಗಹತ್ತಿತ್ತು. ದೊಡ್ಡಣ್ಣ ಅಜ್ಮೀರ್‌ನಿಂದ ಬಂದ ತಕ್ಷಣವೇ ಮನೆಯ ವಾತಾವರಣವೇ ಬದಲಾಯಿತು. ಅವನು ಮನೆಯಲ್ಲಿದ್ದ ಪ್ರತಿಯೊಬ್ಬರನ್ನೂ ಹುರಿದುಂಬಿಸಿದನು. ಭಾವೋದ್ವೇಗದ ಮಾತುಗಳನ್ನಾಡಿ ಮನೆ ಮಂದಿಯ ಕೋಪಾಗ್ನಿಗೆ ಆಜ್ಯ ಹೊಯ್ದನು. ಆವೇಶ ಉನ್ಮಾದಗೊಂಡು ಅವರು ವಿವೇಕವನ್ನೇ ಕಳೆದುಕೊಳ್ಳುವಂತೆ ಮಾಡಿದನು. ಅಷ್ಟಾಗಿಯೂ ಮನೆಯಲ್ಲಿ ಯಾರೊಬ್ಬರೂ ಪಾಕಿಸ್ತಾನಕ್ಕೆ ವಲಸೆ ಹೋಗುವ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಛಬ್ಬಾ ಮಿಂಯಾ-ದೇವರು ಅವನನ್ನು ಕರುಣೆಯಿಂದ ಕಾಪಾಡಲಿ-ದಾಂಧಲೆಯನ್ನು ಬಡಿದೆಬ್ಬಿಸಿರದಿದ್ದರೆ, ಸುಮ್ಮ ಸುಮ್ಮನೆ ಸಮಸ್ಯೆಯೊಂದನ್ನು ಸೃಷ್ಟಿಸಿರದಿದ್ದರೆ, ಯಾರೊಬ್ಬರೂ ದೊಡ್ಡಣ್ಣನ ಮಾತಿಗೆ ಸೊಪ್ಪು ಹಾಕುತ್ತಿರಲಿಲ್ಲ. ಅಂತೂ ಇಂತೂ ದೊಡ್ಡಣ್ಣ ಮಾತ್ರ ಬಿಟ್ಟು ಹೋಗುವ ನಿರ್ಧಾರ ಮಾಡಿದನು. ಅವನು ನಮ್ಮ ಜೊತೆ ವಾದ ಮಾಡುವಷ್ಟು ಮಾಡಿ, ಕೊನೆಗೆ ಸೋಲೊಪ್ಪಿಕೊಂಡು ವಾದಕ್ಕಿಳಿಯುವುದನ್ನೇ ನಿಲ್ಲಿಸಿಬಿಟ್ಟನು. ವಿಷಾದನೀಯ ಸಂಗತಿಯೆಂದರೆ, ಒಂದು ದಿನ ಛಬ್ಬಾ ಮಿಂಯಾ ಶಾಲೆಯ ಗೋಡೆಯ ಮೇಲೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಗೀಚಲು ನಿರ್ಧರಿಸಿದನು.

ರೂಪ್‌ಚಂದ್‌ಜೀಯ ಮಕ್ಕಳು ಅದನ್ನು ವಿರೋಸಿದರು. ವಿರೋಧ ಲೆಕ್ಕಿಸದೆ ಅವನು ಬರೆದೇ ಬಿಟ್ಟನು-‘ಪಾಕಿಸ್ತಾನ್ ಜಿಂದಾಬಾದ್’. ತಕ್ಷಣವೇ ಅವರು ಆ ಘೋಷಣೆಯನ್ನು ಅಳಿಸಿ, ‘ಅಖಂಡ ಹಿಂದೂಸ್ತಾನ್’ ಎಂದು ಬರೆದರು. ಅದರಿಂದ ಜಗಳ ಶುರುವಾಯ್ತು. ಎರಡೂ ಗುಂಪುಗಳು ಪರಸ್ಪರರನ್ನು ನಿರ್ನಾಮ ಮಾಡುವುದಾಗಿ ಪ್ರಮಾಣ ಮಾಡಿದವು. ‘ಈ ಭೂಮಿಯ ಮೇಲೆ ನಿಮ್ಮ ಗುರುತೇ ಇಲ್ಲದಂತೆ ಅಳಿಸಿ ಹಾಕುತ್ತೇವೆ’-ಎಂದು ಇವರು ಉತ್ಕಂಠರಾಗಿ ಅಬ್ಬರಿಸಿದರೆ, ‘ನಿಮ್ಮನ್ನು ನಾಮೋ ನಿಶಾನ್ ನಿರ್ನಾಮ ಮಾಡುತ್ತೇವೆ’- ಎಂದು ಅವರು ಗರ್ಜಿಸಿದರು. ಪರಿಸ್ಥಿತಿ ಕೈಮೀರಿ ಹೋಯಿತು. ಕೂಡಲೇ ಪೊಲೀಸರನ್ನು ಕರೆಯಬೇಕಾ ಯಿತು. ಅವರು ಗಲಭೆ ಆರಂಭಿಸಿದ್ದ ಕೆಲವು ಮುಸ್ಲಿಮ್ ಹುಡುಗರನ್ನು ತದಕಿ ತಹಬಂದಿಗೆ ತಂದು ಮನೆಗೆ ಅಟ್ಟಿದರು.

ಮಕ್ಕಳು ಮನೆಗೆ ಬಂದೊಡನೆಯೇ ಹೈಜಾ ಟೌನಿನ ತಾಯಂದಿರು ದಡಬಡಿಸಿ ಹೊರಬಂದು ತಮ್ಮ ತಮ್ಮ ಅಕ್ಕರೆಯ ಮಕ್ಕಳನ್ನು ಅಪ್ಪಿಕೊಂಡರು. ಆದರೆ ಈ ಹಿಂದೆ ಛಬ್ಬಾ, ರೂಪ್‌ಚಂದ್‌ಜೀಯ ಮಕ್ಕಳೊಡನೆ ಜಗಳವಾಡಿ ಮನೆಗೆ ತಿರುಗಿ ಬಂದಾಗಲೆಲ್ಲ ಅವನ ತಾಯಿ ಅವನಿಗೆ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಚೆನ್ನಾಗಿ ಬೈದು, ರೂಪ್‌ಚಂದ್‌ಜೀಯ ಮನೆಗೆ ಹೋಗಿ ಒಂದಿಷ್ಟು ಹರಳೆಣ್ಣೆ ಮತ್ತು ಕ್ವಿನಾಯಿನ್ ಇಸಿದುಕೊಂಡು ಬರಲು ತಿರುಗಿ ಕಳುಹಿಸುತ್ತಿದ್ದಳು. ರೂಪ್‌ಚಂದ್‌ಜೀ ಕೇವಲ ನಮ್ಮ ್ಯಾಮಿಲಿ ಡಾಕ್ಟರ್ ಅಷ್ಟೇ ಅಲ್ಲದೆ ಅವರು ನನ್ನ ತಂದೆಯ ಆತ್ಮೀಯ ಗೆಳೆಯರೂ ಆಗಿದ್ದರು. ಅವರ ಗಂಡುಮಕ್ಕಳು ಮತ್ತು ನಮ್ಮ ಕುಟುಂಬದ ಹುಡುಗರ ಮಧ್ಯೆ ಅನನ್ಯ ಗೆಳೆತನವಿತ್ತು. ಅವರ ಮನೆಯ ಮಹಿಳೆಯರು ನಮ್ಮ ಕುಟುಂಬದ ಮಹಿಳೆಯರೊಂದಿಗೆ ಚಿಕ್ಕ ಮಕ್ಕಳೂ ಕೂಡ ಪರಸ್ಪರ ಸ್ನೇಹ ಸಲುಗೆ ಬೆಳೆಸಿಕೊಂಡಿದ್ದವು. ಹೀಗಾಗಿ ಬಹುದೀರ್ಘಕಾಲದಿಂದ ಎರಡೂ ಕುಟುಂಬಗಳ ಬದುಕು ಅವಿಭಾಜ್ಯವಾಗಿ ಹೆಣೆದುಕೊಂಡಿತ್ತು. ಈ ಎರಡೂ ಕುಟುಂಬಗಳ ಮೂರೂ ತಲೆಮಾರುಗಳು ಎಷ್ಟು ಅನ್ಯೋನ್ಯವಾಗಿ, ಆತ್ಮೀಯವಾಗಿ ಬದುಕುತ್ತಿದ್ದವೆಂದರೆ, ವಿಭಜನೆಯ ನಂತರ ಅವರ ಮಧ್ಯೆ ಇಂತಹ ಕಾದಾಟ ಕಾಣಿಸಿಕೊಂಡು ಬೆಸೆಯಲಸಾಧ್ಯವಾದ ಒಂದು ಬಿರುಕು ಬೆಳೆಯ ಬಹುದೆಂದು ಯಾರೂ ಭಾವಿಸಿರಲಿಲ್ಲ.

 ಅಲ್ಲಿ ಮುಸ್ಲಿಮ್ ಲೀಗಿನ ಬೆಂಬಗಲಿಗರಿದ್ದರು. ಹಾಗೆಯೇ ಕಾಂಗ್ರೆಸ್ಸಿನ ಅನುಯಾಯಿಗಳೂ ಇದ್ದರು. ಎರಡೂ ಕುಟುಂಬಗಳಲ್ಲಿ ರಾಜಕೀಯ ಬೆಂಬಲಿಗರಿದ್ದಂತೆ. ಅವರ ಕುಟುಂಬದಲ್ಲಿ ಹಿಂದೂ ಮಹಾಸಭೆಯ ಅಭಿಮಾನಿಗಳೂ ಇದ್ದರು. ಪರಿಣಾಮವಾಗಿ, ಅವರವರ ಕುಟುಂಬಗಳಲ್ಲಿ ಆಗಾಗ ಧರ್ಮ ಮತ್ತು ರಾಜಕಾರಣ ಕುರಿತು ಅತ್ಯಂತ ಉಗ್ರವಾದ ವಾದ-ವಿವಾದಗಳು ನಡೆಯುತ್ತಿದ್ದವು. ಆದರೆ ಅವು ಪುಟ್ಬಾಲ್ ಅಥವಾ ಕ್ರಿಕೆಟ್ ಮ್ಯಾಚ್‌ನಲ್ಲಿ ಭಾಗವಹಿಸಿದ್ದಂತೆ ‘ಆಟದ ಸದ್ಭಾವ’ದಿಂದ ಕೂಡಿರುತ್ತಿದ್ದವು. ಉದಾಹರಣೆಗೆ: ನನ್ನ ತಂದೆ ಕಾಂಗ್ರೆಸಿಗರಾಗಿದ್ದರೆ, ಡಾಕ್ಟರ್ ಸಾಹೇಬರು ಮತ್ತು ನನ್ನ ಜ್ಯೇಷ್ಠ ಸಹೋದರ ಮುಸ್ಲಿಮ್ ಲೀಗಿನ ಕಟ್ಟಾ ಬೆಂಬಲಿಗರಾಗಿದ್ದರು.

ಜ್ಞಾನ್‌ಚಂದ್ ಮಹಾಸಭೆಯ ಅಭಿಮಾನಿ ಯಾಗಿದ್ದರೆ, ನನ್ನ ಕಿರಿಯ ಸಹೋದರ ಒಬ್ಬ ಕಮ್ಯೂನಿಸ್ಟ್‌ನಾಗಿದ್ದ. ಅದಕ್ಕೆ ಪ್ರತಿಯಾಗಿ, ಗುಲಾಬ್‌ಚಂದ್ ಸಮಾಜವಾದಿ ಯಾಗಿದ್ದ. ಇನ್ನು ಮಕ್ಕಳು ಮತ್ತು ಮಹಿಳೆಯರು ತಮ್ಮ ತಮ್ಮ ತಂದೆ ತಾಯಂದಿರ ಅಥವಾ ತಮ್ಮ ತಮ್ಮ ಗಂಡಂದಿರ ಪಕ್ಷಗಳ ಬೆಂಬಲಿಗರಾಗಿರುತ್ತಿದ್ದರು. ಸಾಮಾನ್ಯವಾಗಿ ವಾದ-ವಿವಾದ ತಾರಕಕ್ಕೇರಿ ದಾಗ, ಬಹುಸಂಖ್ಯಾತರು ಕಾಂಗ್ರೆಸಿನ ಬೆಂಬಲಕ್ಕೆ ನಿಲ್ಲುತ್ತಿದ್ದರು. ಕಮ್ಯೂ ನಿಸ್ಟರು ಮತ್ತು ಸೋಷಲಿಸ್ಟ್‌ರು ಎಲ್ಲರನ್ನು ಜೋರಾಗಿ ಬೈಯುತ್ತಿದ್ದರಾದರೂ, ಕೊನೆಗೆ ಕಾಂಗ್ರೆಸ್ಸಿನ ಬೆಂಬಲಕ್ಕೆ ನಿಂತು ವಿವಾದಕ್ಕೆ ಕೊನೆ ಹೇಳುತ್ತಿದ್ದರು. ಆಗ ಲೀಗ್ ಮತ್ತು ಮಹಾಸಭೆಯ ಉತ್ಸಾಹಿ ಬೆಂಬಲಿಗರು ಅದರ ವಿರುದ್ಧ ಸೆಣಸಲು ಟೊಂಕಕಟ್ಟಿ ನಿಲ್ಲುತ್ತಿದ್ದರು. ನಿಜವೆಂದರೆ, ಅವರಿಬ್ಬರೂ ಪರಸ್ಪರ ಕಟ್ಟಾ ವೈರಿಗಳಾಗಿದ್ದರು. ಆದರೆ ಕಾಂಗ್ರೆಸನ್ನು ವಿರೋಸುವ ಪ್ರಶ್ನೆ ಬಂದಾಗ ತಮ್ಮ ವೈರವನ್ನು ಮರೆತು ಪಟ್ಟನೆ ಕೈ ಕುಲುಕುತ್ತಿದ್ದರು!

ವಿಶೇಷವೆಂದರೆ ಕಳೆದ ಕೆಲವು ವರ್ಷಗಳ ಅವಯಲ್ಲಿ ಲೀಗ್ ಮತ್ತು ಮಹಾಸಭೆಯ ಬೆಂಬಲಿಗರ ಸಂಖ್ಯೆ ಹೆಚ್ಚಾಗಿತ್ತು. ಕಾಂಗ್ರೆಸ್ ಸಂಪೂರ್ಣವಾಗಿ ಸ್ಥಾನಾಂತರ ಗೊಂಡಿತ್ತು. ಮನೆಯಲ್ಲಿಯ ಸಂಖ್ಯೆ ಹೆಚ್ಚಾಗಿತ್ತು. ಕಾಂಗ್ರೆಸ್ ಸಂಪೂರ್ಣ ವಾಗಿ ಸ್ಥಾನಾಂತರ ಗೊಂಡಿತ್ತು. ಮನೆಯಲ್ಲಿಯ ಕೆಲವೇ ಕೆಲವು ಕಾಂಗ್ರೆಸ್ ಬೆಂಬಲಿಗರನ್ನು ಹೊರತುಪಡಿಸಿ ಇಡೀ ಕುಟುಂಬದ ಸದಸ್ಯರು ನಮ್ಮ ದೊಡ್ಡಣ್ಣನ ನೇತೃತ್ವದಲ್ಲಿ ನ್ಯಾಶನಲ್ ಗಾರ್ಡ್‌ನ ಒಂದು ಶಾಖೆಯನ್ನೇ ರಚಿಸಿದ್ದರು.

ಇನ್ನುಳಿದ ಆ ಇನ್ನೊಂದು ಕುಟುಂಬದಲ್ಲಿ ಜ್ಞಾನ್‌ಚಂದ್‌ನ ಮಾರ್ಗದರ್ಶನದಲ್ಲಿ ಒಂದು ಸಣ್ಣ ಗುಂಪು ಸೇವಕ ಸಂಘವನ್ನು ಕಟ್ಟಿಕೊಂಡಿತ್ತು. ಹೀಗಿದ್ದೂ ಎರಡು ಕುಟುಂಬಗಳ ನಡುವಿನ ಪ್ರೀತಿ, ಸ್ನೇಹಕ್ಕೇನೂ ಧಕ್ಕೆ ಬಂದಿರಲಿಲ್ಲ ಒಂದಿನಿತೂ ಅದು ಕಡಿಮೆಯಾಗಿರಲಿಲ್ಲ.
‘ನನ್ನ ಮಗಾ ಲಾಲೂ, ಕೇವಲ ಮುನ್ನಿಯನ್ನು ಮಾತ್ರ ಮದುವೆಯಾಗುತ್ತಾನೆ’- ಎಂದು ಮಹಾಸಭೆಯ ಬೆಂಬಲಿಗನಾಗಿದ್ದ ಜ್ಞಾನ್‌ಚಂದ್ ಅಭಿಮಾನದಿಂದ ಲೀಗ್‌ನ ಬೆಂಬಲಿಗನಾಗಿದ್ದ ಅವಳ ತಂದೆಗೆ ಹೇಳುತ್ತಿದ್ದನು. ‘ನಾನು ಅವಳಿಗೆ ಬಂಗಾರದ ಕಾಲ್ಕಡಗ ಉಡುಗೊರೆ ಕೊಡು ತ್ತೇನೆ.’ ಎಂದು ಸಲುಗೆಯಿಂದ ಉಬ್ಬಿ ಮಾತಾಡುತ್ತಿದ್ದರು.
‘ಅರೆ ಯಾರ್, ಆ ಕಾಲ್ಕಡಗಗಳು ಕೇವಲ ಬಂಗಾರ ಲೇಪಿತವಾಗಿರದಿದ್ದರೆ ಸಾಕು’ ಎಂದು ದೊಡ್ಡಣ್ಣ ಚೇಷ್ಟೆ ಮಾಡುತ್ತ, ಪ್ರತಿಕ್ರಿಯಿಸುತ್ತಿದ್ದರು.

ನಗರದ ಗೋಡೆಗಳ ಮೇಲೆ, ನ್ಯಾಶನಲ್ ಗಾರ್ಡ್‌ನ ಸದಸ್ಯರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಬರೆದರೆ, ಸೇವಕ ಸಂಘದ ಅನುಯಾಯಿಗಳು ಅದನ್ನು ಅಳಿಸಿ, ಅದರ ಜಾಗದಲ್ಲಿ ಅಖಂಡ ಹಿಂದೂಸ್ತಾನ್ ಎಂದು ಬರೆಯುತ್ತಿದ್ದರು. ಇದೆಲ್ಲ ನಡೆಯುತ್ತಿದ್ದದ್ದು ಪಾಕಿಸ್ತಾನ ರಚನೆಯ ಪ್ರಶ್ನೆ ಇನ್ನೂ ಇತ್ಯರ್ಥವಾಗದೇ ಇದ್ದಾಗ. ಆಗ ಆ ವಿಷಯ ಪ್ರಸ್ತಾಪವಾದೊಡನೆಯೇ, ಎಲ್ಲರೂ ತಮಾಷೆ ಮಾಡಿ ನಗೆಯಾಡುತ್ತಿದ್ದರು.

ನನ್ನ ಅಪ್ಪ ಮತ್ತು ರೂಪ್‌ಚಂದ್ ಇಬ್ಬರೂ ಸುಮ್ಮನೆ ಇದೆಲ್ಲವನ್ನೂ ಕೇಳುತ್ತ ಕುಳಿತು ಅಖಂಡ ಏಷ್ಯಾದ ಬಗ್ಗೆ ಕನಸು ಕಾಣುತ್ತಿದ್ದರು.

ಅವ್ವ ಮತ್ತು ಚಾಚಿ ರಾಜಕಾರಣದಿಂದ ಯಾವಾಗಲೂ ಬಹುದೂರ. ಅವರು ಸದಾ ಮಾತನಾಡುತ್ತಿದ್ದದ್ದು ಅರಿಶಿಣ, ಅಜಿವಾನ, ಹವೇಜಿನ ಬಗ್ಗೆ ಇನ್ನೂ ಹೆಚ್ಚೆಂದರೆ ತಮ್ಮ ಹೆಣ್ಣುಮಕ್ಕಳ ಮದುವೆಯ ಬಗ್ಗೆ, ವರದಕ್ಷಿಣೆಯ ಬಗ್ಗೆ, ಇನ್ನು ಕುಟುಂಬದೊಳಗಿನ ಹೆಣ್ಣು ಮಕ್ಕಳು ಯಾವಾಗಲೂ ನಿರತರಾಗಿರುತ್ತಿದ್ದ ಕೆಲಸಗಳೇ ಬೇರೆ-ತಾವಾಯಿತು. ತಮ್ಮ ಬಟ್ಟೆ ಬರೆಗಳಾದವು. ಅತಿ ಹೆಚ್ಚೆಂದರೆ, ಒಡವೆ ವಸ್ತುಗಳ ಬಗ್ಗೆ ಹರಟೆ ಕೊಚ್ಚುತ್ತ ಕಾಲಾಯಾಪನೆ ಮಾಡುತ್ತಿದ್ದರು. ನಮ್ಮ ಮನೆಗೆ ಅವಶ್ಯವಿದ್ದ ಉಪ್ಪು, ಮಸಾಲೆಗಳಷ್ಟೇ ಅಲ್ಲ. ಔಷ ಸಹ ಡಾಕ್ಟರ್ ಸಾಹೇಬರ ಮನೆಯಿಂದಲೇ ಬರುತ್ತಿದ್ದವು. ನಮ್ಮ ಮನೆಯಲ್ಲಿ ಯಾರಾದರೂ ಜಡ್ಡು ಬಿದ್ದರೆ ಅವ್ವ ಕೂಡಲೇ ದಾಲ್‌ರೋಟಿ ದಹಿವಡಾ ಮುಂತಾದ ತಿನಿಸುಗಳನ್ನು ತಯಾರಿಸಿ ಡಾಕ್ಟರ್ ಸಾಹೇಬರನ್ನು ಊಟಕ್ಕೆ ಆಮಂತ್ರಿಸುತ್ತಿದ್ದಳು. ಡಾಕ್ಟರ್ ಸಾಹೇಬರು ತಮ್ಮ ಮೊಮ್ಮಗನ ಕೈಹಿಡಿದುಕೊಂಡು ಬಂದು ಅವತರಿಸಿಯೇ ಬಿಡುತ್ತಿದ್ದರು. ಅವರು ನಮ್ಮ ಮನೆಗೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಅವರ ಹೆಂಡತಿ ತಪ್ಪದೆ ತಾಕೀತು ಮಾಡುತ್ತಿದ್ದಳು. ‘ಅಲ್ಲಿ, ಅವರ ಮನೆಯಲ್ಲಿ ಊಟ ಮಾಡಬ್ಯಾಡ್ರಿ, ನಾ ಹೇಳೋದು ಕೇಳಸ್ತಾ?’
‘ನೀನು ಹೇಳೋದೇನೋ ಸರಿ; ಆದರೆ ನಾನು ನನ್ನ ಫೀಸು ಪಡೆದುಕೊಳ್ಳುವ ಬೇರೆ ದಾರಿ ಯಾದರೂ ಉಂಟೆ? ಕೇಳಿಲ್ಲಿ. ಆ ಲಾಲೂ ಮತ್ತು ಚುನ್ನಿಯನ್ನು ಕೂಡ ನನ್ನ ಜೊತೆಗೆ ಕಳುಹಿಸು’.

ಅವ್ವ ಜಡ್ಡು ಬಿದ್ದಾಗಲೆಲ್ಲ ಎಲ್ಲರಿಗೂ ತಮಾಷೆಯೇ ತಮಾಷೆ. ಅವ್ವ ಡಾಕ್ಟರ್ ಅಂದರೆ ಭೀತಿಯಿಂದ ನಡುಗುತ್ತಿದ್ದಳು. ಹೆದರಿಕೆ ತುಂಬಿದ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತ, ‘ಒಲ್ಲೆ, ನನಗೆ ಅವರಿಂದ ಚಿಕಿತ್ಸೆಯೇ ಬೇಡ. ಅವರು ಸುಮ್ಮ ಸುಮ್ಮನೆ ಚುಡಾಯಿಸಿ ಚೇಷ್ಟೆ ಮಾಡುತ್ತಾರೆ’ ಎಂದು ತನ್ನ ಪ್ರತಿಭಟನೆಯನ್ನು ದಾಖಲಿಸುತ್ತಿದ್ದಳು. ಆದರೆ ಅವಳಿಗಾಗಿ ಬೇರೆ ಡಾಕ್ಟರರನ್ನು ಕರೆತರಲು ಪಟ್ಟಣಕ್ಕೆ ಹೋಗಲು ಯಾರೂ ಸಿದ್ಧರಾಗುತ್ತಿರಲಿಲ್ಲ. ಅವ್ವನಿಗೆ ಆರಾಮವಿಲ್ಲವೆಂಬ ಸುದ್ದಿ ತಿಳಿದೊಡನೆಯೇ ಡಾಕ್ಟರ್ ಸಾಹೇಬರು ಕೂಡಲೇ ಧಾವಿಸಿ ಬಂದು ಅವಳ ರೋಗ ತಪಾಸಣೆ ಮಾಡುತ್ತಿದ್ದರು.
‘ಮನೆಯೊಳಗೆ ಮಾಡಿದ ಪಲಾವ್‌ನ್ನೆಲ್ಲ ನೀವೇ ತಿಂದುಬಿಟ್ಟರೆ ಹೀಗೆ ಜಡ್ಡು ಬೀಳೋದು ಖಂಡಿತ’ ಎಂದು ಚುಡಾಯಿಸಿ ನಗೆಯಾಡುತ್ತಿದ್ದರು.
‘ಎಲ್ಲರೂ ನಿಮ್ಮಂತೆಯೇ ಇರೋಲ್ಲ’ ಅವ್ವ ಪರದೆ ಹಿಂದಿನಿಂದಲೇ ಪ್ರತಿಕ್ರಿಯಿಸುತ್ತಿದ್ದಳು.

‘ನಿಮಗೆ ಯಾವುದೇ ಜಡ್ಡಿಲ್ಲ, ಜಾಪತ್ರೆಯಿಲ್ಲ. ಸುಮ್ಮನೆ ಬಾ ಅಂತ ಹೇಳಿ ಕಳುಹಿಸಿದ್ದರೆ ನಾನು ಬಂದು ಬಿಡುತ್ತಿದ್ದೆ. ಅದಕ್ಕೆ ಇಷ್ಟೆಲ್ಲ ನಾಟಕ ಯಾಕೆ ಮಾಡಬೇಕಿತ್ತು?’ ಎಂದು ಅನ್ನುತ್ತ ತಮ್ಮ ಕುಚೇಷ್ಟೆಯ ಕಣ್ಣುಗಳಲ್ಲಿ ವಿಚಿತ್ರ ಹೊಳಪನ್ನು ಹೊಮ್ಮಿಸಿ, ತುಟಿಗಳ ಮೇಲೆ ಒಂದು ಮುಗುಳ್ನಗೆಯನ್ನು ಮೂಡಿಸುತ್ತಿದ್ದರು. ಅವ್ವ ತಟ್ಟನೇ ತನ್ನ ಮುಂಗೈ ಎಳೆದುಕೊಳ್ಳುತ್ತಿದ್ದಳು. ಅಪ್ಪ ಇದನ್ನೆಲ್ಲ ನೋಡುತ್ತ ಮಂದಹಾಸ ಬೀರುತ್ತಿದ್ದರು.
ಒಬ್ಬ ರೋಗಿಯನ್ನು ಕಾಣಲು ಡಾಕ್ಟರ್ ಸಾಹೇಬರು ಮನೆಗೆ ಬಂದರೆ ಸಾಕು. ಮನೆಯಲ್ಲಿಯ ಪ್ರತಿಯೊಬ್ಬರೂ ಅವರ ಮುಂದೆ ಸಾಲುಗಟ್ಟಿ ನಿಂತು ತಮ್ಮನ್ನೂ ಕೂಡ ತಪಾಸಿಸಬೇಕೆಂದು ಹಟ ಮಾಡುತ್ತಿದ್ದರು. ಯಾರೋ ಒಬ್ಬರಿಗೆ ಮುಖದ ಮೊಡವೆ ಕಾಡಿದರೆ, ಇನ್ನೊಬ್ಬರಿಗೆ ಕಿವಿ ಬೇನೆ ಕಾಣಿಸಿಕೊಳ್ಳುತ್ತಿತ್ತು. ಮತ್ತೊಬ್ಬರು ತಮ್ಮ ಮೂಗಿನ ತೊಂದರೆ ಹೇಳಿಕೊಳ್ಳುತ್ತಿದ್ದರು.

‘ಡೆಪ್ಪಿ ಸಾಹೇಬರೆ, ನೋಡಿದಿರಾ? ಇವರೆಲ್ಲ ನನಗೆ ಹ್ಯಾಗೆ ಚಿತ್ರಹಿಂಸೆ ಕೊಡ್ತಾರೆ! ಒಬ್ಬಿಬ್ರಿಗೆ ಒಂದಿಷ್ಟು ವಿಷ ಹಾಕಿ ಬಿಟ್ಟೆ ಅಂದ್ರೆ ಆವಾಗ್ ಗೊತ್ತಾಗ್ತದೆ. ಅಲ್ರಪ್ಪಾ ನನ್ನನ್ನೇನು ಪಶುವೈದ್ಯ ಅಂತ ತಿಳುಕೊಂಡಿರಾ? ಯಾಕೆ ಪ್ರಾಣಿಗಳ ಹಾಗೆ ನನ್ನ ಮೇಲೆ ಹಾರಿ ಬೀಳ್ತೀರಿ?’ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಂಡು ಅವರು ಸಿಡುಕಿನಿಂದ ಅನ್ನುತ್ತಿದ್ದರು.
ಮನೆಯಲ್ಲಿ ಯಾರೊಬ್ಬರು ಗರ್ಭ ಧರಿಸಿದರೂ ಸಾಕು, ಹೊಸ ಮಗುವಿನ ನಿರೀಕ್ಷಣೆ ಆರಂಭವಾಗುತ್ತಿದ್ದಂತೆಯೇ ಅವರು ಇಡೀ ಮಾನವ ಕುಲಕೋಟಿಗೇ ಹಿಡಿ ಶಾಪ ಹಾಕುತ್ತಿದ್ದರು.
‘ಹ್ಯಾಗೂ ಔಷಧ ಅಂತು ಫ್ರೀ ಇದೆಯಲ್ಲ, ಹಡೆಯಿರಿ, ಹಡೆಯಿರಿ, ಹೀಂಗೇ ಹಡಿತಾನೆ ಹೋಗ್ರಿ, ಹಾಗೆ ಹಡೆದ ಎಲ್ಲ ಮಕ್ಕಳನ್ನೂ ತಂದು ನನ್ನ ಮೇಲೆಯೇ ಬಣವೆ ಒಟ್ರಿ’
ಆದರೆ ಮನೆಯಲ್ಲಿ ಗರ್ಭಿಣಿಗೆ ಪ್ರಸವ ವೇದನೆ ಕಾಣಿಸಿಕೊಂಡದ್ದನ್ನು ಕೇಳುವುದೇ ತಡ, ಅವರು ಅವಸರದಿಂದ ಧಾವಿಸಿ ಬಂದು ಅಂಗಳದಲ್ಲಿ ಅತ್ಯಂತ ಕಾತರ, ಕಳವಳದಿಂದ ಶತಪಥ ಹಾಕುತ್ತಿದ್ದರು. ಪ್ರತಿಯೊಬ್ಬರೆಡೆಗೂ ಚೀರುತ್ತ, ಒದರುತ್ತ ಎಲ್ಲರನ್ನೂ ಕಟುವಾಗಿ ಬೈಯುತ್ತಿದ್ದರು. ಅವರ ಧ್ವನಿ ಕೇಳಿ ನೆರೆಹೊರೆಯವರೆಲ್ಲ ಬಂದು ಗುಂಪುಗೂಡುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಮಗುವಿನ ತಂದೆಗೆ ವಾಚಾಮಗೋಚರ ಬೈದು ಶಪಿಸುತ್ತಿದ್ದರು. ಅಷ್ಟೇ ಯಾಕೆ, ಒಮ್ಮಿಮ್ಮೆ ಕಪಾಳಕ್ಕೆ ಏಟೂ ಕೊಡುತ್ತಿದ್ದರು!

ಅಷ್ಟೊತ್ತಿನವರೆಗೆ ಅತ್ಯಂತ ಸಿಡುಕಿನಿಂದ ತಾಳ್ಮೆಗೆಟ್ಟವರಂತೆ ವರ್ತಿಸುತ್ತಿದ್ದರೂ ನವಜಾತ ಶಿಶುವಿನ ಪ್ರಥಮ ಅಳುವು ಕೇಳಿದೊಡನೆಯೇ ಅವರು ಅಪ್ಪನ ಕೈಹಿಡಿದು ಒಳಗೆ ಎಳೆದುಕೊಂಡು ವರಂಡಾದೆಡೆಗೆ ಧಾವಿಸುತ್ತಿದ್ದರು. ಆಮೇಲೆ ಒಮ್ಮೆಲೆ ಬಾಗಿಲು ತೆರೆದು ಒಳಗೆ ನುಸುಳುತ್ತಿದ್ದರು. ಅಪ್ಪನು ಕೂಡಾ ತುಂಬಾ ಕಾತರ ತಳಮಳದಿಂದ ಕರ್ಷಣಗೊಂಡಿರುತ್ತಿದ್ದ. ಅವರು ಒಳಗೆ ಬಂದೊಡ ನೆಯೇ ಅವರ ಅನಿರೀಕ್ಷಿತ ನುಗ್ಗುವಿಕೆಯಿಂದ ದಿಗಿಲುಗೊಂಡ ಮಹಿಳೆಯರು ಅವರನ್ನು ಶಪಿಸುತ್ತ ಪಟ್ಟನೆ ಪರದೆಯ ಹಿಂದೆ ತಮ್ಮನ್ನು ತಾವು ಮರೆಮಾಡಿಕೊಳ್ಳುತ್ತಿದ್ದರು. ಡಾಕ್ಟರ್ ಸಾಹೇಬರು ಅದ್ಯಾವುದನ್ನೂ ಗಮನಿಸದೆ ನೇರವಾಗಿ ಮಗುವಿನ ನಾಡಿಯನ್ನು ಪರೀಕ್ಷಿಸಿ, ಬೆನ್ನಿನ ಮೇಲೆ ಲಗುವಾಗಿ ಗುದ್ದಿ, ವಾಹಾರೆ ನನ್ನ ಸಿಂಹ ಎಂದು ಉದ್ಗರಿಸುತ್ತಿದ್ದರು. ಆಮೇಲೆ ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸಿ ಅದರ ಮೈತೊಳೆದು ಚೊಕ್ಕಗೊಳಿಸುತ್ತಿದ್ದರು. ಅಪ್ಪ ಸಂಕೋಚದಿಂದ ಹಿಂಜರಿಯುತ್ತ, ದಾಯಿಯ ಕೆಲಸ ಪೂರೈಸುತ್ತಿದ್ದರೆ, ಅವ್ವ ಜೋರಾಗಿ ಚೀರಿ, ‘ಅಯ್ಯೋ ದೇವರೆ ದೇವರೇ, ಅದೇನು ಮನುಷ್ಯರ ಮಗನಾ ಅಥವಾ ನಾಯಿ ಪಿಲ್ಲಿನಾ!’ ಎಂದು ಕೇಳುತ್ತಿದ್ದಳು. ಆಗ ಮಾತ್ರವೆ ಅವರಿಬ್ಬರೂ ತುಂಟ ಹುಡುಗರಂತೆ ಬಾಣಂತಿಯ ಕೋಣೆಯಿಂದ ಹೊರಗೆ ಓಡುತ್ತಿದ್ದರು.

ಅಪ್ಪನಿಗೆ ಪಾರ್ಶ್ವವಾಯು ಬಡಿದುಕೊಂಡಿದ್ದ ಹೊತ್ತಿಗಾಗಲೇ ರೂಪ್‌ಚಂದ್‌ಜೀ ಆಸ್ಪತ್ರೆ ಯಿಂದ ನಿವೃತ್ತರಾಗಿದ್ದರು. ಆಮೇಲೆ ಅವರ ಇಡೀ ಸೇವೆ ನಮ್ಮ ಮತ್ತು ಅವರ ಕುಟುಂಬಕ್ಕೆ ಮಾತ್ರ ಮೀಸಲಾಗಿತ್ತು. ಬೇರೆ ಅನೇಕ ವೈದ್ಯರು ಅಪ್ಪನಿಗೆ ಚಿಕಿತ್ಸೆ ನೀಡುತ್ತಿದ್ದರಾದರೂ ಡಾಕ್ಟರ್ ಸಾಹೇಬರು ಯಾವಾಗಲೂ ಅವ್ವನ ಜೊತೆಗೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಅಪ್ಪನ ಮರಣಾ ನಂತರ ಡಾಕ್ಟರ್ ಸಾಹೇಬರು ನಮ್ಮ ಕುಟುಂಬದ ಮೇಲೆ ಯಥಾಪ್ರಕಾರ ತಮ್ಮ ಅಕ್ಕರೆಯ ಹೊಳೆ ಹರಿಸುವುದನ್ನು ಮುಂದುವರಿಸಿದರಷ್ಟೇ ಅಲ್ಲ. ನಮ್ಮ ಮನೆಯ ಬಗ್ಗೆ ತಮಗಿದ್ದ ಜವಾಬ್ದಾರಿಯ ಕುರಿತು ಮೊದಲಿಗಿಂತಲೂ ಹೆಚ್ಚು ಜಾಗೃತರಾದರು. ನಮ್ಮ ಹುಡುಗರ ಶಾಲೆಯ ಫೀಸನ್ನು ವಿನಾಯಿತಿ ಗೊಳಿಸುವುದರ ಜೊತೆಗೆ ಜ್ಞಾನ್‌ಚಂದ್ ತನ್ನ ಹೆಣ್ಣು ಮಕ್ಕಳಿಗೆ ತೆರಬೇಕಾದ ವರದಕ್ಷಿಣೆಯನ್ನು ತಪ್ಪಿಸುವಲ್ಲಿಯೂ ತುಂಬಾ ಮಹತ್ವದ ಪಾತ್ರ ವಹಿಸಿದ್ದರು.ಅವರನ್ನು ಕೇಳದೆ, ಅವರ ಸಲಹೆ-ಸೂಚನೆಗಳನ್ನು ಪಡೆಯದೆ, ನಮ್ಮ ಕುಟುಂಬದಲ್ಲಿ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮನೆಯ ಪಶ್ಚಿಮ ಭಾಗಕ್ಕೆ ಒಂದೆರಡು ಹೊಸ ಕೋಣೆಗಳನ್ನು ಕಟ್ಟಿಸುವ ನಿರ್ಣಯ ತೆಗೆದುಕೊಳ್ಳುವಾಗಲೂ ಡಾಕ್ಟರ್ ಸಾಹೇಬರ ಸಲಹೆ ಪಡೆಯಲಾಯಿತು.

‘ಹಾಗೆ ಮಾಡುವುದಕ್ಕೆ ಬದಲಾಗಿ, ನೀವು ಎರಡನೇ ಅಂತಸ್ತಿನಲ್ಲಿ ಎರಡು ಕೋಣೆಗಳನ್ನೇಕೆ ಕಟ್ಟಬಾರದು?’ ಎಂಬ ಸಲಹೆ ಬಂದಿತು ಅವರಿಂದ. ಅದನ್ನು ಕುರಿತು ಬಹುದೀರ್ಘವಾದ ಚರ್ಚೆ, ಜಿಜ್ಞಾಸೆಯೂ ನಡೆಯಿತು. ಮಜ್ಜನ್ ತನ್ನ ಎ್ಎ ಪರೀಕ್ಷೆಗೆ ವಿಜ್ಞಾನ ಓದಬಾರದೆಂದು ತೀರ್ಮಾನ ತೆಗೆದುಕೊಂಡಾಗ, ಡಾಕ್ಟರ್ ಸಾಹೇಬರು ಅವನನ್ನು ಚಪ್ಪಲಿಯಿಂದ ಥಳಿಸಿದ್ದರು. ಮಜ್ಜನ್ ತನ್ನ ನಿರ್ಧಾರವನ್ನು ಬದಲಿಸಿದನು. ರೀದಾ ತನ್ನ ಗಂಡನೊಡನೆ ಜಗಳವಾಡಿ ತವರಿಗೆ ಹಿಂದಿರುಗಿದ್ದಳು. ಅವಳ ಗಂಡ ಡಾಕ್ಟರ್ ಸಾಹೇಬರ ಸಹಾಯಕ್ಕಾಗಿ ಅವರ ಬಳಿಗೆ ಹೋಗಿದ್ದಾಗ, ಅವರ ಎರಡನೇ ಹೆಂಡತಿ ಅವನ ಹಿಂದೆಯೇ ಹೋಗಿದ್ದಳು. ಶೀಲಾ ಡಾಕ್ಟರ್ ಸಾಹೇಬರ ಮನೆಯ ಸೊಸೆಯಾಗಿ ಬಂದ ಮೇಲೆ ನಮ್ಮ ಮನೆಯ ಸೂಲ್‌ಗಿತ್ತಿಯ ಕೆಲಸದ ಸಮಸ್ಯೆಯೇ ಇಲ್ಲದಂತಾಗಿತ್ತು. ಪಾಪ, ಅವಳು ತನ್ನ ಆಸ್ಪತ್ರೆಯ ಕೆಲಸವನ್ನು ಬಿಟ್ಟು ನಮ್ಮ ಮನೆಯ ಸೂಲ್‌ಗಿತ್ತಿಯ ಸಹಾಯಕ್ಕೆ ಬಂದು ನಿಲ್ಲುತ್ತಿದ್ದಳು. ತನ್ನ ವೈದ್ಯಕೀಯ ಸೇವೆಯನ್ನು ಪುಕ್ಕಟೆಯಾಗಿ ಸಲ್ಲಿಸುವುದಲ್ಲದೆ, ಬಾಣಂತನದ ಆರನೇ ದಿನ ಮಗುವಿಗೆ ಒಂದು ಅಂಗಿ, ಕುಲಾಯಿಯ ಕಾಣಿಕೆ ನೀಡುವುದನ್ನು ಎಂದೂ ಮರೆಯುತ್ತಿರಲಿಲ್ಲ.

 ಆದರೆ ಈಗ ಛಬ್ಬಾ ಬೀದಿಯಲ್ಲಿ ಜಗಳವಾಡಿ ಮನೆಗೆ ಬಂದಾಗ, ಸ್ವತಃ ಮುಹಮ್ಮದ್ ಘಜನಿಯೇ ಯಶಸ್ವಿ ದಿಗ್ವಿಜಯ ಪೂರೈಯಿಸಿ ಹಿಂದಿರುಗಿದವನಂತೆ ಸಂಭ್ರಮದಿಂದ ಅವನನ್ನು ಅಭಿನಂದಿ ಸಿದರು. ಪ್ರತಿಯೊಬ್ಬರೂ ಅವನ ಶೂರತನವನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಅವನ ಶೌರ್ಯ, ಸಾಹಸವನ್ನು ಕೇಳಿ ಮೆಚ್ಚುಗೆಯಿಂದ ಬೆನ್ನು ಚಪ್ಪರಿಸದ್ದೇ ಚಪ್ಪರಿಸಿದ್ದು. ಆ ಸದ್ದು- ಗದ್ದಲದ ಅಬ್ಬರದಲ್ಲಿ ಅವ್ವ ಮಾತ್ರ ವೌನವಾಗಿದ್ದಳು. ಅಷ್ಟೇ ಯಾಕೆ, ಡಾಕ್ಟರ್ ಸಾಹೇಬರ ಮನೆಯ ಮೇಲೆ ತಿರುಗಿ ಧ್ವಜ ಹಾರಿದಾಗಿನಿಂದ, ನಮ್ಮ ಮನೆಯ ಮೇಲೆ ಲೀಗ್‌ನ ಧ್ವಜ ಪಟಪಟಿಸುತ್ತಿರುವುದನ್ನು ಕಂಡಾಗಿನಿಂದ ಅವಳು ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಳು. ನಮ್ಮಿಬ್ಬರ ಮನೆಯ ನಡುವೆ ಗಾವುದ ಗಾವುದ ದೂರದ, ಅಷ್ಟೇ ಆಳದ ಒಂದು ಮಹಾಕಂದರ ಬಾಯಿ ತೆರೆದು ನಿಂತಂತೆ ಕಾಣುತ್ತಿತ್ತು. ಅವಳು ಅತಳ ಆಳದ ಆ ಬಿರುಕನ್ನು ಕಂಬನಿದುಂಬಿದ ಕಣ್ಣುಗಳಿಂದ ನೋಡಿ ನಾಚಿಕೆಯಿಂದ ತಲೆತಗ್ಗಿಸಿದಳು. ಆಮೇಲೆ ನಿರಾಶ್ರಿತರ ಸಮಸ್ಯೆ ಕಾಣಿಸಿಕೊಂಡಿತು. ನಿರ್ಮಲಾಳ ಅತ್ತೆ ಮಾವಂದಿರು ರಾವಲ್‌ಪಿಂಡಿಯಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿ ಬಂದಿದ್ದರು. ಇಬ್ಬರ ಮನೆಯ ನಡುವಿನ ಕಂದರದಲ್ಲಿ ವಿಷಸರ್ಪಗಳು ಹರಿದಾಡಲಾರಂಭಿಸಿದವು!

ನಮ್ಮ ಅತ್ತಿಗೆ ತನ್ನ ಮಗನಿಗೆ ಹೊಟ್ಟೆನೋವೆಂದು ಹೇಳಿ ಕಳುಹಿಸಿದಾಗ, ಶೀಲಾ ಭಾಬಿ ನಮ್ಮ ಆಳನ್ನು ಹಿಂದಿರುಗಿ ಕಳುಹಿಸಿದಳು. ಆ ಘಟನೆಯ ಕುರಿತು ಯಾರೊಬ್ಬರೂ ಚಕಾರ ಎತ್ತಲಿಲ್ಲ. ವಾದ-ವಿವಾದಕ್ಕೂ ಇಳಿಯಲಿಲ್ಲ. ಆದರೆ ಮನೆಯಲ್ಲಿಯ ಪ್ರತಿಯೊಬ್ಬರೂ ತಮ್ಮ ತಮ್ಮ ರೋಗರುಜಿನಗಳಿಗೆ ಗಮನ ಕೊಡುವುದನ್ನೇ ನಿಲ್ಲಿಸಿದರು. ದೊಡ್ಡ ಅತ್ತಿಗೆ ತನ್ನ ಮೂರ್ಛೆರೋಗವನ್ನೂ ಮರೆತು ಸಾಮಾನು ಸರಂಜಾಮುಗಳನ್ನು ಗಂಟು ಕಟ್ಟಲಾರಂಭಿಸಿದಳು.
‘ಖಬರ್‌ದಾರ್! ಯಾರೇ ನನ್ನ ಟ್ರಂಕಿಗೆ ಕೈ ಹಚ್ಚಿದ್ರಿ ಅಂದ್ರೆ ನೋಡ್ರಿ!’ ಎಂದು ಅವ್ವ ಕೊನೆಗೂ ತನ್ನ ವೌನ ಮುರಿದು ಗರ್ಜಿಸಿದಾಗ, ಪ್ರತಿಯೊಬ್ಬರೂ ಆಘಾತದಿಂದ ಕಲ್ಲಿನಂತಾಗಿ ನಿಂತರು.
‘ಯಾಕೆ? ನೀವು ನಮ್ಮಂದಿಗೆ ಬರೋದಿಲ್ವೆ’ ದೊಡ್ಡಣ್ಣ ತೀರ ಮೊನಚಾಗಿ ಕೇಳಿದ.
‘ಇಲ್ಲ, ನಾನು ಸಿಂೀಗಳ ಮಧ್ಯೆ ಸಾಯಬೇಕೇ? ಕುರ್ತಾ ಪೈಜಾಮಾ ಉಟ್ಟುಕೊಂಡು ನಾಚಿಕೆಯಿಲ್ಲದೆ ಅಡ್ಡಾಡುವವರ ಮಧ್ಯೆ ನಾನು ಸಾಯುತ್ತೇನೆಂದು ತಿಳಿದಿದ್ದೀರಾ?’
‘ಹಾಗಾದರೆ ನೀನು ನಿನ್ನ ಚಿಕ್ಕ ಮಗನ ಮನೆಗಾದರೂ ಯಾಕೆ ಹೋಗಬಾರದು?’
‘ಯಾಕೆ? ಅವಳೇಕೆ ಢಾಕಾಕ್ಕೆ ಹೋಗಬೇಕು? ಆ ಬಂಗಾಲಿಗಳಿಗೇನಾದರೂ ರೀತಿ ನೀತಿ ಅನ್ನೋದು ಗೊತ್ತಿದೆಯಾ? ಅವರು ಅನ್ನ ಸುರಿದುಕೊಂಡು ‘ಸೊರ್ ಸೊರ್’ ಮಾಡಿ ಉಣ್ಣುವುದನ್ನು ನೋಡಲೂ ಸಾಧ್ಯವಿಲ್ಲ!’ ಚಿಕ್ಕಣ್ಣನ ಅತ್ತೆ ಮುಮಾನಿ ಬೀ ಮೂದಲಿಸಿ ಮಾತಾಡಿದಳು.


‘ಹಾಗಿದ್ದರೆ ರಾವಲ್‌ಪಿಂಡಿಯಲ್ಲಿರುವ ರೀದಾಳ ಮನೆಗೆ ಹೋಗುವುದೇ ಒಳಿತು’, ಚಿಕ್ಕಮ್ಮ ಸೂಚಿಸಿದರು.
‘ತೋಬಾ, ತೋಬಾ! ದೇವರೇ ನನ್ನನ್ನು ಉಳಿಸಬೇಕು. ನಾನು ಆ ಪಂಜಾಬಿಗಳ ಕೈಯಲ್ಲಿ ಹೋಗಿ ಬೀಳಲೇ? ಅವರು ಏನು ಮಾತಾಡುತ್ತಾರೆಯೋ ಒಂದೂ ಅರ್ಥ ಆಗೋದಿಲ್ಲ. ನರಕದ ಪಿಶಾಚಿಗಳಂತೆ ಗಳಪುವ ಅವರದ್ದೂ ಒಂದು ಭಾಷೆಯೇ?’ ಅಂದು ನನ್ನ ಅವ್ವ, ಎಂದೂ ಯಾರ ಬಗ್ಗೆಯೂ ಹೀಯಾಳಿಸಿ ಮಾತನಾಡದ ಮಿತಭಾಷಿ, ಸೌಮ್ಯ ಸ್ವಭಾವದ ನನ್ನ ಅವ್ವ, ತಾನು ಉದ್ದೇಶಿಸಿ ಮಾತಾಡುತ್ತಿದ್ದವರೆಲ್ಲರನ್ನೂ ಅವಮಾನಿಸಿ ಮಾತಾಡಿದಳು!

‘ಅಯ್ಯೋ ಅತ್ತೆ, ನೀನು ತೋಳದ ಹಿಡಿತದಲ್ಲಿ ಸಿಕ್ಕಿಬಿದ್ದಿರುವ ಹೆಣ್ಣಿನಂತಿದ್ದೂ, ಮಗಳ ಮನೆಗೆ ಹೋಗಲು ತಿರಸ್ಕರಿಸುತ್ತಿರುವಿ. ಅಯ್ಯೋ ಅವಳ ಮುಖವನ್ನಾದರೂ ನೋಡ್ರಿ. ಯಾರೋ ಚಕ್ರವರ್ತಿ ತನ್ನನ್ನು ಆಮಂತ್ರಿಸುತ್ತಿರುವಂತೆ ಹಮ್ಮಿನಿಂದ ಬೀಗುತ್ತಿದ್ದಾಳೆ. ಯಾವುದೂ ಅವಳಿಗೆ ಒಪ್ಪಿಗೆಯಾಗುತ್ತಿಲ್ಲ. ಯಾರ ಮನೆಯೂ ತನ್ನ ಯೋಗ್ಯತೆಗೆ ತಕ್ಕದ್ದಲ್ಲವೆಂಬಂತೆ ವರ್ತಿಸುತ್ತಿದ್ದಾಳೆ. ತನ್ನ ಘನತೆ, ಗೌರವಕ್ಕೆ ಯಾರೊಬ್ಬರೂ ಅರ್ಹರಲ್ಲವೆಂಬ ಹಮ್ಮು ಅವಳದು. ಅವಳೊಂದು...’ ಎಂದು ಮತ್ತೆ ಮೂದಲಿಸಿದಳು. ಚಿಕ್ಕಣ್ಣನ ಅತ್ತೆ ಮುಮಾನಿಬೀ.
 ಮನೆಯ ವಾತಾವರಣ ತುಂಬಾ ಬಿಗುವಿನಿಂದ ಕೂಡಿತ್ತು. ಆದರೆ ಈ ಮೇಲಿನ ಮಾತು ಒಂದು ನಗೆಯ ಹೊನಲನ್ನೇ ಹರಿಸಿ ಒಮ್ಮೆಲೇ, ತಾರಕಕ್ಕೇರಿದ್ದ ಕರ್ಷಣವನ್ನು ಸಡಿಲಗೊಳಿಸಿತು. ಅವರ ಕೋಪಾಗ್ನಿ ಮತ್ತಿಷ್ಟು ಭುಗಿಲೆದ್ದಿತು.
‘ನೀವೆಲ್ಲ ಹೀಗೇಕೆ ಮಕ್ಕಳ ಹಾಗೆ ಮಾತಾಡುತ್ತಿದ್ದೀರಿ?’ ನ್ಯಾಶನಲ್ ಗಾರ್ಡ್‌ನ ನೇತಾರ ಪ್ರಶ್ನಿಸಿದ. ‘ಹೀಗೆ ಹುಚ್ಚುಚ್ಚಾಗಿ ಮಾತಾಡಬೇಡಿ. ಅವ್ವಾ, ನಾವೆಲ್ಲ ಇಲ್ಲಿಯೇ ಉಳಿದು ಕೊಲೆಯಾಗಬೇಕೆಂದು ಬಯಸುತ್ತೀಯಾ?’
‘ನೀವು ಹೋಗಬಹುದು. ಆದರೆ ನಾನು ಈ ನನ್ನ ಬಾಳ ಮುಸ್ಸಂಜೆಯ ಹೊತ್ತಿನಲ್ಲಿ ಎಲ್ಲಿಗೆ ಹೋಗಲಿ?’
‘ಹಾಗಾದರೆ, ಆ ಕಾಫೀರ್‌ರಿಂದ ಕೊಲೆಯಾಗಬೇಕೆನ್ನುತ್ತೀಯಾ?’
 ಚಿಕ್ಕಮ್ಮ ತನ್ನ ಸಾಮಾನುಗಳ ಸಣ್ಣ ದೊಡ್ಡ ಗಂಟುಗಳನ್ನು ಒಂದೊಂದಾಗಿ ಎಣಿಸಿದಳು. ಬಂಗಾರ ಬೆಳ್ಳಿಯ ಒಡವೆಗಳನ್ನು ಚಿಕ್ಕ ಚಿಕ್ಕ ಗಂಟುಗಳನ್ನು ಪ್ಯಾಕ್ ಮಾಡುವುದರ ಜೊತೆಗೆ ಒಣಗಿದ ಮೆಂತಿ ಮತ್ತು ಮೂಳೆಯ ಪುಡಿ, ಮುಲ್ತಾನಿ ಮಿಟ್ಟಿ-ಮುಂತಾದ ಬಳಕೆಯ ವಸ್ತುಗಳನ್ನು ಕಟ್ಟಿ ಸಿದ್ಧಗೊಳಿಸಿದಳು. ಅವಳು ತನ್ನ ಸಾಮಾನುಗಳ ಬಗ್ಗೆ ಎಷ್ಟು ಚಿಂತಿತಳಾಗಿದ್ದಳೆಂದರೆ, ಒಂದೇ ಒಂದು ಸಾಮಾನು ಕಳೆದರೂ ಪಾಕಿಸ್ತಾನದ ಬ್ಯಾಂಕು ಮುಳುಗಿ ಹೋದಂತಹ ಕೊರಗು ಕಾಣಿಸಿಕೊಳ್ಳುವ ಸಂಭವವಿತ್ತು! ತನ್ನ ಮಕ್ಕಳ ಉಚ್ಚೆಯಿಂದ ತೊಯ್ದು ನೆನೆದು ಹೋಗಿದ್ದ ಗಾದಿಯ ಹತ್ತಿಯನ್ನು ಕೂಡ ಅವಳು ತನ್ನ ಸಾಮಾನುಗಳನ್ನು ಪ್ಯಾಕ್ ಮಾಡಲು ಬಳಸಿದಳು. ಒಂದು ಗೋಣಿಚೀಲದಲ್ಲಿ ಪಾತ್ರೆ-ಪಡಗಗಳನ್ನು ತುಂಬಿದಳು. ಮಂಚಗಳನ್ನು ಬಿಚ್ಚಿ ಅವುಗಳ ತೋಳು ಕಾಲುಗಳನ್ನು ಸಮಾಂತರ ಜೋಡಿಸಿ ಹಗ್ಗದಿಂದ ಬಿಗಿದು ಕಟ್ಟಿದಳು. ಶತಮಾನದಿಂದ ಸುಸ್ಥಾಪಿತವಾಗಿದ್ದ ಮನೆತನ ನೋಡನೋಡುವುದರಲ್ಲಿಯೇ ತನ್ನ ರೂಪ ಸೌಷ್ಠವ ಕಳೆದುಕೊಂಡು ವಿಕೃತಗೊಂಡು ಸಾಮಾನು ಗಂಟು ಮೂಟೆಗಳ ಗುಂಪೆಯಾಗಿ ಪರಿಣಮಿಸಿತು!

ನಿಜವೆಂದರೆ, ಪ್ರತಿಯೊಂದು ಗಂಟುಮೂಟೆಗೂ ಕೈಕಾಲು ಮೂಡಿ ಮನೆಯ ತುಂಬಾ ಜಿಗಿದಾಡುವಂತೆ, ಕರಾಳವಾಗಿ ನರ್ತಿಸುವಂತೆ ಕಂಡವು. ಒಂದು ಘಳಿಗೆ ಎಲ್ಲಿಯೋ ಮೂಲೆ ಯಲ್ಲಿ ಸುಮ್ಮನೆ ಕುಳಿತು ಮತ್ತೊಂದು ಘಳಿಗೆ ಎದ್ದೆದ್ದು ಕುಣಿಯುತ್ತಿರುವಂತೆ ತೋರಿದವು. ಇತ್ತಿಂದತ್ತ, ಅತ್ತಿಂದಿತ್ತ ಮನೆಯ ಉದ್ದಗಲಕ್ಕೂ ಸರಸರ ಸರಿದಾಡಿದವು.
ಆದರೆ ಅವ್ವನ ಟ್ರಂಕು ಮಾತ್ರ ಪರಮ ನಿಶ್ಚಲತೆಯಿಂದ ಇದ್ದಲ್ಲಿಯೇ ಇತ್ತು.
 ‘ನೀನು ಇಲ್ಲಿಯೇ ಸಾಯಬೇಕೆಂತ ನಿರ್ಧರಿಸಿದ್ದರೆ, ನಾವ್ಯಾರೂ ಅದನ್ನು ತಡೆಯುವಂತಿಲ್ಲ’ ದೊಡ್ಡಣ್ಣ ಕೊನೆಗೂ ಕಡ್ಡಿ ಮುರಿದು ಕೈಯಲ್ಲಿ ಕೊಟ್ಟಂತೆ ಅಂದು ಬಿಟ್ಟ.

ನನ್ನ, ಸರಳ ಸ್ವಭಾವದ ಅಮಾಯಕ ಅವ್ವ ತನ್ನ ತಳಮಳ ತುಂಬಿದ ಕಣ್ಣುಗಳಿಂದ ಧೂಳು ತುಂಬಿದ ಆಕಾಶದೆಡೆಗೆ ದಿಟ್ಟಿಸಿ ನೋಡತೊಡಗಿದಳು. ತನ್ನನ್ನು ಯಾರು ಕೊಲ್ಲುವರು? ಯಾವಾಗ ಕೊಲ್ಲುವರು? ಎಂದು ವಿಸ್ಮಯ ಪಡುತ್ತಿದ್ದಳೇನೋ ಎಂಬಂತಿತ್ತು ಅವಳ ಆ ದೃಷ್ಟಿಯ ಭಾವಭಂಗಿ.
‘ಅವ್ವನಿಗೆ ವಯಸ್ಸಾಗಿರುವುದರಿಂದ ಅರಳುಮರಳು ಹಿಡಿದಿದೆ’ ಎಂದು ಪಿಸುಗುಟ್ಟಿದ ಚಿಕ್ಕಣ್ಣ .
‘ಆ ಕಾಫೀರ್‌ರು ಮುಗ್ಧ ಜನತೆಗೆ ಎಂಥ ಚಿತ್ರಹಿಂಸೆ ಕೊಟ್ಟಿದ್ದಾರೆ ಎನ್ನುವುದು ಅವಳಿಗೆ ಗೊತ್ತಿಲ್ಲ. ನಮ್ಮದೇ ಆದಂಥ ಒಂದು ಪ್ರತ್ಯೇಕ ದೇಶ ನಿರ್ಮಾಣವಾದರೆ, ಕೊನೆಯ ಪಕ್ಷ ಅಲ್ಲಿ ನಮ್ಮ ಜೀವ ಆಸ್ತಿಪಾಸ್ತಿಗಳಾದರೂ ಸುರಕ್ಷಿತವಾಗಿರುತ್ತವೆ’.

ಮರಣ ಯಾತನೆಯನ್ನನುಭವಿಸುತ್ತಿದ್ದ, ಅನಿರ್ವಚನೀಯ ಸಂಕಟಕ್ಕೆ ಗುರಿಯಾಗಿದ್ದ ನನ್ನ ಅವ್ವನಿಗೆ ತೀಕ್ಷ್ಣವಾದ ನಾಲಿಗೆಯಿದ್ದಿದ್ದರೆ ಅವಳು, ‘ನಮ್ಮ ದೇಶ ಅಂದರೆ, ಅದು ಯಾವ ವಿಚಿತ್ರ ಪಕ್ಷಿ?’ ಎಂದು ಪ್ರಶ್ನಿಸಬಹುದಾಗಿತ್ತು. ‘ಆ ದೇಶ ಎಲ್ಲಿದೆ? ನೀವು ಹುಟ್ಟಿರುವುದು ಈ ನೆಲದ ಮೇಲೆ, ಈ ನೆಲದ ಮೇಲೆಯೇ ನೀವು ಬೆಳೆದು ದೊಡ್ಡವರಾಗಿರುವುದು, ಈ ದೇಶ ನಿಮ್ಮದಲ್ಲದಿದ್ದರೆ ನೀವು ವಲಸೆ ಹೋಗಿ ನೆಲೆಯೂರಬಹುದಾದ ಯಾವುದೋ ದೂರದ ದೇಶ ಕೆಲವೇ ದಿನಗಳಲ್ಲಿ ‘ನಿಮ್ಮ’ ದೇಶ ಹೇಗೆ ಆಗಬಲ್ಲದು? ಮೇಲಾಗಿ, ನಿಮ್ಮನ್ನು ಅಲ್ಲಿಂದಲೂ ಹೊರದಬ್ಬಲಾರರು-ಎನ್ನುವುದಕ್ಕೆ ಏನು ಗ್ಯಾರಂಟಿ? ಅಲ್ಲಿಂದಲೂ ತೊಲಗಿ ಬೇರೆಲ್ಲಿಯೋ ನೆಲ ಕಂಡುಕೊಳ್ಳುವಂತೆ ಆದೇಶ ಹೊರಡಿಸಲಾರರು-ಎನ್ನುವುದಕ್ಕೆ ಏನು ಖಾತ್ರಿ? ನಾನಿಲ್ಲಿ ಹೊಯ್ಡಿಡುತ್ತಿರುವ ದೀಪದಂತೆ ಕುಳಿತಿರುವೆ. ಯಾವುದೋ ಒಂದು ಸುಳಿಗಾಳಿಯೂ ನನ್ನನ್ನು ನಂದಿಸಿ, ದೇಶವನ್ನು ಆಯ್ಕೆ ಮಾಡಿಕೊಳ್ಳುವ, ನನ್ನ ತಳಮಳಕ್ಕೆ ಕೊನೆ ಹಾಡುತ್ತದೆ. ಹಳೆಯ ದೇಶವನ್ನು ನಿರ್ನಾಮಿಸಿ, ಹೊಸದೊಂದನ್ನು ಸಂಸ್ಥಾಪಿಸುವ ಈ ಆಟ ಅಷ್ಟು ಆಸಕ್ತಿದಾಯಕವಾದದ್ದೇನೂ ಅಲ್ಲ. ಹಿಂದೊಮ್ಮೆ ಒಂದು ಕಾಲವಿತ್ತು. ಮೊಗಲರು ತಮ್ಮ ದೇಶವನ್ನು ಬಿಟ್ಟು ಬಂದು ಇಲ್ಲಿ ಹೊಸ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದರು. ಆದರೆ ಈಗೋ ನಾವು ಈ ದೇಶವನ್ನು ಬಿಟ್ಟು ಬೇರ್ಯಾವುದೋ ನೆಲದಲ್ಲಿ ನಮ್ಮ ನೆಲೆ ಕಾಣಲು ಹೋಗುವ ಯೋಚನೆಯಲ್ಲಿದ್ದೇವೆ. ಆಶ್ಚರ್ಯವೆಂದರೆ, ನಿನ್ನೆಯವರೆಗೆ ಪ್ರಾಣಕ್ಕಿಂತಲೂ ಪ್ರಿಯವಾಗಿದ್ದ ರಾಷ್ಟ್ರ. ಈಗ ಏಕಾಏಕೀ ಒಂದು ಕಡಕು ಚಪ್ಪಲಿಗೂ ಕಡೆಯಾಗಿದೆ! ಕಾಲಿಗೆ ಒತ್ತುತ್ತಿದೆಯೇ, ತುಸು ಬಿಗಿಯಾಗಿ ನೋವುಂಟು ಮಾಡುತ್ತಿದೆಯೇ, ಹಾಗಾದರೆ ಅದನ್ನು ಒಗೆದು ಮತ್ತೊಂದು ತೆಗೆದುಕೋ ಎಂಬಂತಿದೆ ನಿಮ್ಮ ನಿಲುವು!’

ಆದರೆ ಅವಳು ಬಹಳ ಹೊತ್ತಿನವರೆಗೆ ಮಾತಾಡದೆ ಸುಮ್ಮನೆ ಕುಳಿತಳು. ಮೊದಲಿಗಿಂತಲೂ ಹೆಚ್ಚು ದಣಿದವಳಂತೆ ಕಾಣುತ್ತಿದ್ದಳು. ತನ್ನ ದೇಶಕ್ಕಾಗಿ ಹುಡುಕಿ ಹುಡುಕಿ ಬಸವಳಿದಿದ್ದಳೇನೋ ಎಂಬ ಭಾವ ಮುಖದಲ್ಲಿ ಹೊಮ್ಮುತ್ತಿತ್ತು. ಶತಶತಮಾನಗಳಿಂದ ಹುಡುಕಿದರೂ ತನ್ನ ದೇಶದ ಪತ್ತೆ ಹತ್ತದೆ ತನ್ನ ಆತ್ಮವನ್ನೇ ಕಳೆದುಕೊಂಡಿದ್ದವಳಂತೆ ಕಾಣುತ್ತಿದ್ದಳು. ತುಂಬಾ ಆಯಾಸಗೊಂಡು ಒಂದು ಹೆಜ್ಜೆಯೂ ಮುಂದಿಡಲು ಸಾಧ್ಯವಾಗದಂತಹ ನಿತ್ರಾಣ ಸ್ಥಿತಿಗೆ ತಲುಪಿದ್ದಳು.
ಮನೆಯಲ್ಲಿ ಅನೇಕ ಜನ ಬಂದರು; ಹೋದರು. ಆದರೆ ಅವ್ವ ಮಾತ್ರ ಅಚಲ ಆಲದ ಮರದಂತೆ ತನ್ನ ಸ್ಥಳದಿಂದ ಒಂದು ಅಂಗುಲವೂ ಕದಲಲಿಲ್ಲ. ಪ್ರಚಂಡ ಬಿರುಗಾಳಿಗೂ ಬಗ್ಗದೆ ನಿಂತಲ್ಲಿಯೇ ನಿರಂತರವಾಗಿ ಬೇರು ಬಿಡುತ್ತ, ಅನಂತ ಕಾಲದವರೆಗೆ ಅಳಿಯದೇ ಉಳಿಯುವ ಆಲದಂತೆ ಅವ್ವ ಸ್ಥಾನಬದ್ಧಳಾಗಿ ಕುಳಿತಳು.

ಆದರೆ ತನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಗ ಮೊಮ್ಮಗಳು ಮುಂತಾದವರ ದೊಡ್ಡ ಗುಂಪು ಸಾಲುಗಟ್ಟಿ ಒಬ್ಬೊಬ್ಬರಾಗಿ ಹೆಬ್ಬಾಗಿಲು ದಾಟಿ ಪೊಲೀಸರ ರಕ್ಷಣೆಯಲ್ಲಿ ಮುನ್ನಡೆದು, ಅವರಿಗಾಗಿ ಕಾಯುತ್ತಿದ್ದ ಟ್ರಕ್ಕಿನಲ್ಲಿ ಹತ್ತಿದೊಡನೆಯೇ, ಅವಳು ಎದೆಯೊಡೆದು ನೀರಾದಳು. ಕಾತರ, ದುಗುಡ ತುಂಬಿದ ಕಣ್ಣುಗಳಿಂದ ನಮ್ಮ ಮತ್ತು ರೂಪ್‌ಚಂದ್‌ಜೀಯ ಮನೆಯನ್ನು ಪ್ರತ್ಯೇಕಗೊಳಿಸಿದ್ದ ಅತಲ ಕಂದರದ ಆಚೆಗೆ ತದೇಕ ದೃಷ್ಟಿಯಿಂದ ಏನನ್ನೋ ನಿರೀಕ್ಷಿಸುತ್ತ ನೋಡತೊಡಗಿದ್ದಳು. ಆಚೆ ಬದಿಗಿದ್ದ ಮನೆಯು ಮೋಡದಂತೆ ದೂರದಲ್ಲೆಲ್ಲಿಯೋ ಇರುವಂತೆ ಭಾಸವಾಯಿತು. ರೂಪ್‌ಚಂದ್‌ಜೀಯ ವರಾಂಡಾ ನಿರ್ಜನವಾಗಿತ್ತು. ಮಕ್ಕಳು ಒಂದೆರಡು ಸಲ ಇಣುಕಿ ನೋಡಿದವು. ಆದರೆ ಕೂಡಲೇ ಒಳಗಿನ ಯಾವುದೋ ಒಂದು ಕೈ ಅವುಗಳನ್ನು ತಟ್ಟನೆ ಹಿಂದಕ್ಕೆ ಎಳೆದುಕೊಂಡಿತು.
ಎದುರಿನ ಮನೆಯಲ್ಲಿದ್ದವರು ಕಿಟಕಿಗಳ ಬಿರುಕಿನ ಮೂಲಕ, ಪರದೆಗಳ ಹಿಂದಿನಿಂದ ಹಣಿಕಿಕ್ಕಿ ನೋಡುತ್ತಿರುವುದು ಅವ್ವನ ಕಂಬನಿದುಂಬಿದ ಕಣ್ಣಿಗೆ ಬೀಳದೇ ಇರಲಿಲ್ಲ.

ಟ್ರಕ್‌ಗಳು ಧೂಳೆಬ್ಬಿಸುತ್ತ ಹೊರಟು ಹೋದ ಮೇಲೆ ಆಚೆಯ ಮನೆಯ ಬಾಗಿಲುಗಳು ಸಾವಕಾಶವಾಗಿ ತೆಗೆದುಕೊಂಡವು. ರೂಪ್‌ಚಂದ್‌ಜೀ ಒಬ್ಬ ಕಳ್ಳನಂತೆ ಕಳ್ಳ ಹೆಜ್ಜೆಯಿಡುತ್ತ, ಅಳುಕುತ್ತ ಹೊರಬಂದು ರಸ್ತೆಯಲ್ಲಿ ಎದ್ದಿದ್ದ ಧೂಳಿನ ಮೂಲಕ ಆಚೆ ಬದಿಗಿದ್ದ ಖಾಲಿ ಮನೆಯ ಕಡೆಗೆ ನೋಡಿದರು. ಪರಿಚಿತವಾದ ಒಂದು ಮುಖದ ನೋಟಕ್ಕಾಗಿ ಶೋಧಗಣ್ಣಿನಿಂದ ತಡಕಾಡಿದರು. ಪರಿತ್ಯಕ್ತ ನಿರ್ಜನವಾದ ಮನೆಯಲ್ಲಿ ಯಾರೊಬ್ಬರೂ ಕಾಣಬರಲಿಲ್ಲ. ಒಂದೇ ಒಂದು ಮುಖವನ್ನೂ ಸಹ ಕಾಣಲಾಗದೆ, ಅವರು ಅಪರಾ ಭಾವದಿಂದ ತಮ್ಮ ದೃಷ್ಟಿಯನ್ನು ತಗ್ಗಿಸಿದರು.

  ಅವ್ವ ತನ್ನ ಬದುಕಿನುದ್ದಕ್ಕೂ ಸಂಚಯಿಸಿಕೊಂಡಿದ್ದ ಸಂಪತ್ತು, ಸದ್ಭಾವ-ಎಲ್ಲವನ್ನೂ ಈಗ ದೇವರ ಉಡಿಯಲ್ಲಿ ಹಾಕಿ ತನ್ನ ಮನೆಯ ವರಾಂಡದ ಹೊರಗೆ ಹೆಜ್ಜೆಯಿಟ್ಟಳು. ಅವಳ ವಯಸ್ಸಾದ ಹೃದಯ ಮುದುಡಿ ಮುದ್ದೆಯಾಗಿತ್ತು. ಪ್ರತಿ ಹೆಜ್ಜೆಯಲ್ಲಿಯೂ ಪುಟ್ಟ ಮಗುವಿನ ಭೀತಿ ಆತಂಕ ಹಿಂಜರಿತ ತುಂಬಿ ತುಳುಕುತ್ತಿದ್ದವು. ದಿಕ್ಕು ದಿಕ್ಕಿನಿಂದಲೂ ಒಮ್ಮೆಲೇ ಅಗಣಿತ ಭೂತಗಳು ತನ್ನ ಮೇಲೆ ನೆಗೆದು ಎಲ್ಲಿ ಹಿಸುಕಿ ಹಾಕುವವೋ -ಎಂಬ ಅನಿಸಿಕೆಯಿಂದ ಥರಗುಟ್ಟುತ್ತಿದ್ದಳು. ಒಮ್ಮೆಲೇ ತಲೆ ಸುತ್ತಿ ಬಂದಂತಾಗಿ ಕಂಬಕ್ಕೆ ಆತುಕೊಂಡು ನಿಂತಳು. ಮೆಲ್ಲನೆ ಮುಖ ಮೇಲೆತ್ತಿ ಕಣ್ಣು ತೆರೆಯುತ್ತಿದ್ದಂತೆಯೇ ಅವಳ ಹೃದಯ ಬಾಯಿಗೆ ಬಂದಿತು. ತನ್ನ ಪತಿ ತನ್ನನ್ನು ಮೊದಲ ಬಾರಿಗೆ ಅಪ್ಪಿಕೊಂಡಿದ್ದ-ನವವಧುವಾಗಿ ಆ ಮನೆಗೆ ಕಾಲಿಟ್ಟ ದಿನ, ಅವಳ ಗಂಡ ಮೆಲ್ಲನೆ ಮುಖದ ಪರದೆಯನ್ನು ಮೊದಲ ಬಾರಿಗೆ ಮೇಲೆತ್ತಿ, ಮುಗ್ಧತೆಯಿಂದ ಕೂಡಿದ್ದ ಥರಥರ ನಡುಗುತ್ತಿದ್ದ ತನ್ನನ್ನು ಬಿಗಿದಪ್ಪಿಕೊಂಡಿದ್ದ-ಆ ಕೋಣೆಯ ಕಡೆಗೆ ನೋಡಿದಳು. 

ಮೊದಲ ಮದುವಣಗಿತ್ತಿಯಾಗಿ, ಆ ಅಪ್ಪುಗೆಯಿಂದ ಆರಂಭಿಸಿ ತನ್ನ ಬದುಕಿನ ಬಹುಭಾಗವನ್ನು ಕಳೆದ ಮನೆಯ ಮಹತ್ವದ ಕೋಣೆಯ ಕಡೆಗೆ ಮತ್ತೊಮ್ಮೆ ದೃಷ್ಟಿ ಬೀರಿದಳು. ಹೌದು, ಅದೇ ಕೋಣೆಯ ಆಚೆಯ ಭಾಗದಲ್ಲಿ ಅವಳು ತನ್ನ ಜ್ಯೇಷ್ಠ ಪುತ್ರಿಗೆ ಜನ್ಮ ನೀಡಿದ್ದಳು. ಅವಳ ಮೊದಲ ಮಗಳ ನೆನಪು ಸ್ಮತಿಪಟಲದ ಮೇಲೆ ಸಳ್ಳನೆ ಮಿಂಚಿನಂತೆ ಹೊಳೆದು ಮಾಯವಾಯ್ತು. ಆ ಕೋಣೆಯ ಒಂದು ಮೂಲೆಯಲ್ಲಿಯೇ ತನ್ನ ಮಗಳ ಹೊಕ್ಕಳು ಬಳ್ಳಿಯನ್ನು ಹೂಳಿದ್ದಳು. ಅದಕ್ಕೆ ಪ್ರತಿಯಾಗಿ, ಹತ್ತು ಆತ್ಮಗಳು ಆ ಕೋಣೆಯ ಮೂಲಕವೇ ಈ ಭೂಮಿಗೆ ಬಂದಿದ್ದವು. ಹತ್ತು ಸಜೀವ ಉಸಿರಾಡುವ ಜೀವಿಗಳು, ತನ್ನ ಉದರದಿಂದಲೇ ಉದ್ಭವಿಸಿ ಬಂದಿದ್ದ ಹತ್ತು ಮಾನವ ಜೀವಿಗಳೂ! ಆದರೆ ಆ ಎಲ್ಲ ಜೀವಿಗಳಿಂದು ಅವಳನ್ನು ತ್ಯಜಿಸಿ, ತೊರೆದು ಹೋಗಿದ್ದ ಅವಳನ್ನು ಹರಿದು ಚಿಂದಿಚಿಂದಿ ಮಾಡಿ ರಸ್ತೆ ಬದಿಯ ಮುಳ್ಳು ಬೇಲಿಯ ಮೇಲೆ ಜಿಗಿದು ಓಡಿಹೋಗಿದ್ದರೇನೋ ಎಂದೆನಿಸುತ್ತಿತ್ತು. ತನ್ನ ಉದರದಿಂದಲೇ ಉದಿಸಿದ್ದ ಆ ಜೀವಿಗಳೆಲ್ಲ ತನ್ನನ್ನು ನಡುಬೀದಿಯಲ್ಲಿಯೇ ಬಿಟ್ಟು ಅನಾಥಳನ್ನಾಗಿ ಮಾಡಿ, ಸುಖ ಶಾಂತಿಯ ಅನ್ವೇಷಣೆಗಾಗಿ ಹೊರಟು ಹೋಗಿದ್ದರು. ಘನತೆ ಗೌರವವನ್ನು ಅರಸುತ್ತ ರೂಪಾಯಿಗೆ ನಾಲ್ಕು ಸೇರು ಗೋ ಸಿಗಬಹುದಾದ ಸಮೃದ್ಧ ನಾಡಿನ ಶೋಧನೆಗಾಗಿ ಹೊರಟುಹೋಗಿದ್ದರು-ಎಂಬ ಇತ್ಯಾದಿ ಭಾವಸಮುಚ್ಚಯ ಅವಳಲ್ಲಿ ಉಮ್ಮಳಿಸಿ ಬಂದಿತ್ತು. ಆ ಕೋಣೆಯಲ್ಲಿ ಅವರೆಲ್ಲರ ಮುಗ್ಧ ಕಣ್ಣುಗಳು ಇನ್ನೂ ಳಳ ಹೊಳೆಯುತ್ತಿದ್ದವು. ಅವಳು ತನ್ನ ಎರಡೂ ತೋಳುಗಳನ್ನು ಮುಂಚಾಚಿಕೊಂಡು ಆ ಕೋಣೆಯ ಒಳಗೆ ಓಡಿದಳು. ಆದರೆ ಅವಳ ಅಕ್ಕರೆ ಅಪ್ಪುಗೆಗೆ ಸಿಗಲು ಅಲ್ಲಿ ಯಾರೂ ಇರಲಿಲ್ಲ. ಅಂದು ಅವಳ ಮಡಿಲು-ನವವಧುಗಳು ತಮ್ಮ ಬಸಿರ ಬಯಕೆ ಬೆಂಗಾಡಾಗದಂತೆ ಬಯಸಿ, ತಮ್ಮ ತಲೆಯಿಟ್ಟು ಮಲಗುತ್ತಿದ್ದ ಮಡಿಲು ಖಾಲಿಯಾಗಿತ್ತು. ದಿಗ್ಭಾ†ಂತಳಾಗಿ, ಭಯ ವಿಹ್ವಲತೆಯಿಂದ ಚಿತ್ತಕ್ಷೋಭೆಗೊಂಡು ನೆಲಕ್ಕೆ ಕುಸಿದಳು. ತನ್ನ ಗತವನ್ನು ಕೂಗಿ ಕರೆಯುವುದಾಗಲಿ, ತನ್ನನ್ನು ಬಿಟ್ಟು ತೊಲಗುತ್ತಿರುವವರನ್ನು ಹಿಂದಕ್ಕೆ ಕರೆಯುವುದಾಗಲಿ ಯಾವುದೂ ಅವಳಿಗೆ ಸಾಧ್ಯವಾಗಲಿಲ್ಲ.

 ಅವಳು ತತ್ತರಿಸುತ್ತ ಮಗ್ಗಲು ಕೋಣೆಗೆ ಕಾಲಿಟ್ಟಳು. ತಾನು ಐವತ್ತು ವರ್ಷಗಳವರೆಗೆ ಯಾವ ಪುರುಷನ ಜೊತೆಗೆ ಸಂಸಾರ ನಡೆಸಿದ್ದಳೋ ಅವನು ಕಟ್ಟಕಡೆಗೆ ಗೋಡೆಯೆಡೆಗೆ ಮುಖಮಾಡಿ ಕೊನೆ ಉಸಿರೆಳೆದ ಕೋಣೆ ಅದು. ಆ ಕೋಣೆಯ ಬಾಗಿಲು ಮುಂದೆಯೇ ಅವನ ಪಾರ್ಥಿವ ಶರೀರವನ್ನು ಶವಪೆಟ್ಟಿಗೆಗೆ ಇಳಿಸಲಾಗಿತ್ತು. ಕುಟುಂಬದ ಸಮಸ್ತರು ಅದರ ಸುತ್ತಲೂ ನಿಂತಿದ್ದರು. ಅವನೊಬ್ಬ ಮಹಾ ಸುದೈವಿ. ಯಾಕೆಂದರೆ, ತನ್ನೆಲ್ಲ ಮಕ್ಕಳ ಪ್ರೀತಿಯ ಕಡಲಲ್ಲಿ ತೇಲುತ್ತಲೇ ಅವನು ತನ್ನ ಇಹದ ಯಾತ್ರೆಯನ್ನು ಮುಗಿಸಿದ್ದನು. ಆದರೆ ಅವನು ತನ್ನ ಬಾಳಸಂಗಾತಿಯನ್ನು ಹಿಂದೆ ಬಿಟ್ಟು ಹೋಗಿದ್ದ. ತಾನೊಂದು ಶವಪೆಟ್ಟಿಗೆಯಿಲ್ಲದೆ ಹೆಣ ಎಂಬ ಭಾವ ಅವಳಲ್ಲಿ ಮೆಲ್ಲನೆ ಒಸರಿತು. ಅವಳ ಕಾಲು ಮುಂದಡಿ ಇಡದಂತೆ ಪ್ರತಿಭಟಿಸಿದವು. ತನ್ನ ಹತ್ತು ಮಕ್ಕಳ ಹೆರಿಗೆಯಾದಾಗಲೆಲ್ಲ ದೀಪ ಹೊತ್ತಿಸಿಡುತ್ತಿದ್ದ ಆ ಜಾಗದಲ್ಲಿ ಅವಳು ಕುಸಿದು ಕುಳಿತಳು. ಕೈ ಗಡಗಡ ನಡುಗುತ್ತಿದ್ದವು. ದೀಪ ಹೊತ್ತಿಸಲು ಆ ದಿನ ದೀಪದಲ್ಲಿ ಎಣ್ಣೆಯಿರಲಿಲ್ಲ. ಮೇಲಾಗಿ, ಬತ್ತಿಯೂ ಸುಟ್ಟು ಕರಕಲಾಗಿತ್ತು.

    ರೂಪ್‌ಚಂದ್‌ಜೀ ತಮ್ಮ ವರಾಂಡದಲ್ಲಿ ಒಂದೇ ಸಮನೆ ಶತಪಥ ಹಾಕುತ್ತಿದ್ದರು. ಎದುರು ಕಂಡವರನ್ನೆಲ್ಲ ಬೈಯ್ಯುತ್ತ, ಸಿಕ್ಕ ಸಿಕ್ಕವರೆಡೆಗೆ ಮನಬಂದಂತೆ ಅರಚುತ್ತಿದ್ದರು. ಅವರ ಹೆಂಡತಿ, ಮಕ್ಕಳು, ಆಳು-ಹೋಳುಗಳು, ಸರಕಾರ ಅಷ್ಟೇ ಯಾಕೆ, ಅವರ ಮುಂದೆ ವೌನವಾಗಿ ಬಾಚಿಕೊಂಡಿದ್ದ ಓಣಿ, ಅದರ ಗೋಡೆಗಳ ಇಟ್ಟಿಗೆ, ಕಲ್ಲುಗಳು, ಕತ್ತಿ, ಚಾಕು ಎಲ್ಲ ಎಲ್ಲವೂ ಅವರ ಶಾಪಕ್ಕೆ ಗುರಿಯಾದವು. ಬಾಯಿಗೆ ಬಂದಂತೆ ಬೈಯತೊಡಗಿದ್ದರು. ನಿಜವೆಂದರೆ, ಇಡೀ ವಿಶ್ವವೇ ಅವರ ಬೈಗುಳಿಗೆ ಬಾಗಿ ಹಲ್ಲುಗಿಂಜಿ, ಕೈಕೈ ಹೊಸೆಯುತ್ತಿತ್ತು. ವಿಶೇಷವಾಗಿ, ತಮ್ಮ ಮನೆ ಎದುರಿಗಿದ್ದ ಆ ಖಾಲಿ ಮನೆಯೆಡೆಗೆ ನೋಡಿದೊಡನೆಯೇ ಕೆಂಡಾಮಂಡಲವಾಗುತ್ತಿದ್ದರು. ಆ ಮನೆ ಅವರನ್ನು ನೋಡಿ ಅಣಕಿಸುತ್ತಿರುವಂತೆ ಭಾಸವಾಗುತ್ತಿತ್ತು. ಸ್ವತಃ ಅವರು ತಮ್ಮ ಕೈಯಿಂದಲೇ ಆ ಮನೆಯ ಪ್ರತಿಯೊಂದು ಇಟ್ಟಿಗೆಯನ್ನು ಕಿತ್ತಿ ಕಿತ್ತಿ ಇಡೀ ಮನೆಯನ್ನು ಧ್ವಂಸ ಮಾಡಿದ್ದರೇನೋ - ಎಂಬ ಅನಿಸಿಕೆ ದಶದಿಕ್ಕುಗಳಿಂದಲೂ ದಾಳಿಯಿಡುತ್ತಿತ್ತು. ತಮ್ಮ ಮನದೊಳಗೆ ಕೊರೆಯುತ್ತಿದ್ದ ಯಾವುದೋ ಒಂದು ಸಂಗತಿಯನ್ನು ಅವರು ಉಡುಗಿ ಹಾಕಬಯಸಿದ್ದರು. ತಮ್ಮ ಶಕ್ತಿ ಸಾಮರ್ಥ್ಯವನ್ನು ಬಳಸಿ ಅದನ್ನು ಹೆಕ್ಕಿ ತೆಗೆಯಬಯಸಿದ್ದರು. ಆದರೆ ಹಾಗೆ ಮಾಡಲು ಸಾಧ್ಯವಾಗದೆ, ಆ ಕಾಡುವ ಸಂಗತಿಯಿಂದ ಪಾರಾಗುವ ದಾರಿ ಕಾಣದೆ ತಮ್ಮ ಅಸಮರ್ಥತೆಗಾಗಿ ಉದ್ವಿಗ್ನಗೊಂಡಿದ್ದರು. ಯಾವುದೋ ಪ್ರಾಚೀನ ಮರದ ಬೇರುಗಳಂತೆ ತಮ್ಮ ಆತ್ಮದ ಮೂಲೆ ಮೂಲೆಗೂ ಇಳಿದು, ಟಿಸಿಲೊಡೆದು ಪಸರಿಸಿದ್ದ ಅದನ್ನು ಬುಡಸಹಿತ ಕಿತ್ತೊಗೆಯಲು ಎಷ್ಟೇ ಹೆಣಗಿದರೂ ಯಶ ಕೈಗೆಟುಕಲಿಲ್ಲ. ಯಾರೋ ತಮ್ಮನ್ನು ಜೀವಂತವಾಗಿಯೇ ಚರ್ಮ ಸುಲಿಯುತ್ತಿರುವ ಅನಿಸಿಕೆ ಒತ್ತರಿಸಿ ಬಂದಿತು. ಜೋರಾಗಿ ನರಳಿ ಒಮ್ಮೆಲೇ ವೌನವಾದರು. ಬೈಯುವುದನ್ನು, ಅಲೆದಾಡುವುದನ್ನು ತಟ್ಟನೆ ನಿಲ್ಲಿಸಿದರು. ಸ್ವಲ್ಪ ಸಮಯದ ನಂತರ ತಮ್ಮ ಕಾರಿನಲ್ಲಿ ಕುಳಿತು ಹೊರಟು ಹೋದರು.

ಓಣಿಯಲ್ಲಿ ಎಲ್ಲವೂ ಪ್ರಶಾಂತವಾಗಿದ್ದಾಗ, ಆ ದಿನ ರಾತ್ರಿ ರೂಪ್‌ಚಂದ್‌ಜೀಯ ಸೊಸೆ ಕಳ್ಳನಂತೆ ನಮ್ಮ ಮನೆಯ ಹಿತ್ತಲ ಬಾಗಿಲು ಮೂಲಕ ಒಳಗೆ ಬಂದಳು. ಜೊತೆಗೆ ಎರಡು ತಟ್ಟೆಯ ತುಂಬಾ ಉಣ್ಣಲು ಆಹಾರ ತಂದಿದ್ದಳು. ಅವಳು ಮತ್ತು ನನ್ನ ಅವ್ವ ಎದುರು ಬದಿರು ಕುಳಿತು, ಮಾತಾಡದೆ ವೌನವಾಗಿ ಪರಸ್ಪರ ದಿಟ್ಟಿಸುತ್ತ, ಕಾಲ ನೂಕತೊಡಗಿದರು. ಯಾರ ಬಾಯಿಂದಲೂ ಮಾತು ಹೊರಬರಲಿಲ್ಲವಾದರೂ ಸಹಾನುಭೂತಿ, ಸಂತಾಪ ವಿನಿಮಯವಾಗುತ್ತಿದ್ದವು. ಹೆಂಗಸರು ದ್ವೇಷ, ಅಸೂಯೆಯಿಂದ ಹರಟೆ ಕೊಚ್ಚತೊಡಗಿದರೆ, ಅವರ ನಾಲಿಗೆಗಳು ಕತ್ತರಿಗಳಂತೆ ಹರಿತವಾಗುತ್ತವೆ. ಆದರೆ ಅವರ ಭಾವನಾತ್ಮಕ ಬದುಕಿನ ಮೇಲೆ ದುರ್ದಾಳಿ ನಡೆದ ಕ್ಷಣವೇ ಅವರ ಮಾತು ಮಾಯವಾಗುತ್ತದೆ; ವಾಚಾಳಿತನ ಇದ್ದಕ್ಕಿದ್ದಂತೆ ಎಲ್ಲಿಯೋ ಕಾಣೆಯಾಗಿ ಅರ್ಥಪೂರ್ಣವಾದ ವೌನ ವಿರಾಜಿಸತೊಡಗುತ್ತದೆ.

 ಅಷ್ಟು ದೊಡ್ಡ ಮನೆಯಲ್ಲಿ ಏಕಾಂಗಿಯಾಗಿ ಉಳಿದ ನನ್ನ ಅವ್ವನ ತಲೆಯಲ್ಲಿ ಅಂದಿನ ಇಡೀ ರಾತ್ರಿ ಸಂಶಯ, ತಳಮಳ, ಯಾವುದೋ ಅರ್ಥಕಾಣದ ಭೀತಿ ಒಂದಾದ ಮೇಲೊಂದರಂತೆ ಅವಳ ಮನದ ಮೇಲೆ ಮುತ್ತಿಗೆ ಹಾಕಿದವು. ‘ದಾರಿಯಲ್ಲಿ ಯಾರೂ ಅವರ ಮೇಲೆ ಹಲ್ಲೆ ಮಾಡಿ, ಅವರನ್ನು ಕೊಲೆಗೈದಿಲ್ಲವೆಂದು ಭಾವಿಸುತ್ತೇನೆ. ಇತ್ತೀಚೆಗೆ ದಿನಮಾನಗಳು ಬಹಳ ಕೆಟ್ಟಿವೆ. ದಾರಿಯಲ್ಲಿ ಟ್ರೇನುಗಳನ್ನು ನಿಲ್ಲಿಸಿ, ಒಳಗಿನ ಪ್ರಯಾಣಿಕರನ್ನು ಹೊರಗೆಳೆದು ನಿರ್ದಯವಾಗಿ ಕೊಚ್ಚಿ ಹಾಕಲಾಗುತ್ತಿದೆ. ಕಳೆದ ಐವತ್ತು ವರ್ಷಗಳಿಂದಲೂ ಈ ನೆಲಕ್ಕಾಗಿ ನಾವು ಹೋರಾಟ ಮಾಡಿದ್ದೇವೆ. ಜೀವದ ಹಂಗು ತೊರೆದು ಸೆಣಸುತ್ತ, ರಕ್ತ ಹರಿಸಿದ್ದೇವೆ. ಆದರೆ ಇಂದು ನಾವಿದನ್ನು ಬಿಟ್ಟು ಹೋಗಬೇಕೆಂದು, ನಮ್ಮ ಸರ್ವಸ್ವವನ್ನೂ ತ್ಯಜಿಸಿ ತೊಲಗಬೇಕೆಂದು ಹೇಳುತ್ತಿದ್ದಾರೆ! ನಮ್ಮ ಜನ್ಮಭೂಮಿಯನ್ನು ಬಿಟ್ಟು ಎಲ್ಲಿಯೋ ಹೊಸ ನಾಡೊಂದನ್ನು ಹುಡುಕಿಕೊಂಡು ಹೋಗಲು ಒತ್ತಾಯಿಸುತ್ತಿದ್ದಾರೆ. ಹೊಸದಾಗಿ ಸಂಸ್ಥಾಪಿತವಾಗಿರುವ ಈ ನಾಡಿನಲ್ಲಿ ನಮ್ಮ ಶ್ರೇಯೋಭಿವೃದ್ಧಿ ಸಾತವಾಗುವುದೇ... ಬಲ್ಲವರ್ಯಾರು? ಆ ಹೊಸ ಭೂಮಿಯಲ್ಲಿ ನಮ್ಮ ಬೆಳೆ ಕಳೆಗೊಂಡು ಕಂಗೊಳಿಸುವುದೇ? ಒಂದು ನೆಲದಿಂದ ಕಿತ್ತಿ, ಇನ್ನೊಂದರಲ್ಲಿ ನೆಟ್ಟ ಸಸಿಗಳು ಬೇರುಬಿಟ್ಟು ಬೆಳೆಯಬಲ್ಲವೇ? ಸಣ್ಣ ಸೊಸೆಯನ್ನು ದೇವರೇ ರಕ್ಷಿಸಬೇಕು! ಅವಳೀಗ ತುಂಬು ಗರ್ಭಿಣಿ. ಯಾವ ಕಾಡುಮೇಡಿನಲ್ಲಿ ಹೆರಿಗೆಯಾಗುವುದೋ ಯಾರಿಗೆ ಗೊತ್ತು? ಅವರು ಮನೆ ಕೆಲಸ, ಉದ್ಯೋಗ, ಸುಖ-ಸಂಪತ್ತು ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಿದ್ದಾರೆ. ಅವರು ಹೊಸದಾಗಿ ನೆಲೆ ಊರಲಿರುವ ಆ ನಾಡಿನಲ್ಲಿ ಇದೆಲ್ಲವನ್ನೂ ಮತ್ತೆ ಪಡೆಯಬಲ್ಲರೇ? ಅಥವಾ ಯಾವುದಕ್ಕೂ ದಿಕ್ಕುಗಾಣದೆ ನಿರ್ಗತಿಕರಾಗಿ ಅವಮಾನದಿಂದ ಹಿಂದಿರುಗುವ ಒತ್ತಾಯಕ್ಕೆ ಒಳಗಾಗುವರೇ? ಒಂದು ವೇಳೆ ಅವರು ಹಿಂದಿರುಗಿ ಬಂದರೆ, ಈ ನೆಲದ ಮೇಲೆ ಮತ್ತೊಮ್ಮೆ ನೆಲೆಗೊಳ್ಳುವ ಅವಕಾಶ ದೊರೆಯುವುದೇ? ಋತುಗಳು ಬದಲಾಗಿ, ಕಾಲ ಉರುಳಿದ ಮೇಲೂ ಈ ನನ್ನ ಹಳೆಯ ಮೂಳೆಯ ಗೂಡು ಇನ್ನೂ ಜೀವದಿಂದಿರುವುದೇ... ಬಲ್ಲವರ್ಯಾರು?’

  ಗಂಟೆ ಗಂಟೆಗಳಗಟ್ಟಲೇ ಆ ವಯೋವೃದ್ಧ ಮಹಿಳೆ ತನ್ನೊಳಗೆ ಏನೇನೋ ಗುನುಗುತ್ತ ಗೊಣಗುಡುತ್ತ ಆ ಮನೆಯ ಗೋಡೆಗಳಿಗೆ ಆತು ನಿಂತಳು; ಎಲ್ಲ ಕೋಣೆಗಳ ಬಾಗಿಲುಗಳನ್ನು ಒಂದೊಂದಾಗಿ ತಟ್ಟಿ, ಮುಟ್ಟಿ ನೋಡುತ್ತ ಅಪ್ಪಿಕೊಂಡಳು. ಅಂತಹ ಸಂದರ್ಭದಲ್ಲಿ ಅವಳ ಮನದೊಳಗಿನ ತುಮುಲದ ಸ್ವರೂಪವನ್ನು ತಿಳಿದವರ್ಯಾರು? ಆಮೇಲೆ ಅವಳು ಒಮ್ಮೆಲೆ ಇದ್ದಕ್ಕಿದ್ದಂತೆ ಶಾಂತಳಾದಳು. ಮಲಗಿ ನಿದ್ರೆ ಹೋದಳೇ? ಇಲ್ಲ. ಇಡೀ ರಾತ್ರಿ ಭಯಾನಕವಾದ ಕನಸು, ಕಲ್ಪನೆಗಳು ಅವಳ ಮನಗಣ್ಣಿನ ಮುಂದೆ ತಾಂಡವವಾಡಿದವು. ಅವಳ ಸುಂದರವಾದ ಎಳೆಯ ಹೆಣ್ಣುಮಕ್ಕಳನ್ನು ಭರ್ತಿ ಬಜಾರಿನಲ್ಲಿ ಬರೆಬತ್ತಲೆಗೊಳಿಸಿ ಅಲೆದಾಡಿಸಿದಂತೆ. ಅವರ ನಾಜೂಕಿನ ದೇಹಗಳನ್ನು ಕತ್ತರಿಸಿ ಚೂರು ಚೂರು ಮಾಡಿದಂತೆ, ಅವಳ ಮಕ್ಕಳ ಮೊಮ್ಮಕ್ಕಳ ಚರ್ಮ ಜೀವಂತವಾಗಿಯೇ ಸುಲಿದಂತೆ... ಭೀತಿಯೇ ಮೈವೆತ್ತು ಅವಳ ಮನೆಯ ಮೇಲೆ ದುರ್ದಾಳಿ ಇಟ್ಟಂತೆ. ಯಾವುದೋ ಒಂದು ಭಯಂಕರ ಪ್ರಳಯ ಎಲ್ಲವನ್ನೂ ನುಂಗಿ ಹಾಕುತ್ತ, ಅವಳನ್ನೂ ಆಪೋಷಣ ತೆಗೆದುಕೊಂಡಂತೆ ಮುಂತಾದ ಭಾವಗಳು, ಭಯಂಕರ ಹಳವಂಡದಂತಹ ಕಲ್ಪನೆಗಳು ಹೇಗೆ ಯಾವ ದಿಕ್ಕಿನಲ್ಲಿ ಅವಳ ಮೇಲೆ ಬಂದೆರಗಿದವೋ ಗೊತ್ತಿಲ್ಲ. ಬದುಕಿನ ಬಗ್ಗೆ ಒಬ್ಬರಿಗೆ ಪ್ರೀತಿ ಇರಲಿಕ್ಕಿಲ್ಲ. ಆದರೆ ಸಾವಿನ ಬಗ್ಗೆ ಭಯವಿರುವುದಂತೂ ಖಚಿತ. ಒಂದು ದೀಪವೂ ಕೊನೆಗೆ ಆರಿಹೋಗುವ ಮುಂಚೆ ತತ್ತರಿಸುತ್ತದೆ. ನಿಸರ್ಗ ಸಹಜವಾಗಿ ಬರುವ ಸಾವೇ ಅಪಾರ ಭಯಂಕರವಾಗಿರುತ್ತದೆ. ಆದರೆ ರಾಕ್ಷಸಿ ಪ್ರವೃತ್ತಿಯ ಮನುಷ್ಯರ ರೂಪದಲ್ಲಿ ಬಂದೆರಗುವ ಮರಣ ಅದಕ್ಕಿಂತಲೂ ದಶಗುಣ ಬೀಭತ್ಸವಾಗಿರುತ್ತದೆ. ಮುದುಕಿ ತದುಕಿಯರನ್ನು ನಗರಗಳ ಬೀದಿ ಬೀದಿಗಳಲ್ಲಿ ಕೂದಲಿಡಿದು ಎಳೆತಂದು, ಮೈಯ ಮೇಲಿನ ಚರ್ಮ ಹರಿದು ಹೋಗುವವರೆಗೆ, ಒಳಗಿನ ಬಿಳಿ ಮೂಳೆಗಳು ಹೊರಕಾಣುವವರೆಗೆ ಬರ್ಬರವಾಗಿ ಬಡಿಯಲಾಗುತ್ತಿದೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿದೆ. ಇಷ್ಟಾಗಿಯೂ ಮಾನವ ಜೀವಿಗಳು ಈ ಪ್ರಪಂಚವನ್ನು ಬಿಟ್ಟು ತೊಲಗಲು ಇನ್ನೂ ಹಿಂದೆ ಮುಂದೆ ನೋಡುತ್ತಿವೆ.

ಹೊರಗೆ ಯಾರೋ ಕದ ತಟ್ಟುತ್ತಿದ್ದ ಶಬ್ದ ಬರಬರುತ್ತ ಜೋರಾಯಿತು. ಸ್ವತಃ ಸಾವೇ ಅವಸರದಲ್ಲಿ ದಡಬಡಿಸಿ ಬಂದಂತಾಯಿತು. ದಿಢೀರನೆ ಬಾಗಿಲು ತೆರೆಯಿತು. ದೀಪಗಳು ಹೊತ್ತಿಕೊಂಡವು. ಯಾರೋ ತಳವಿಲ್ಲದ ಬಾವಿಯ ಆಳದಿಂದ ಕೂಗಿ ಕರೆದಂತೆ ಭಾಸವಾಯಿತು. ಅದು ತನ್ನ ಜೇಷ್ಠ ಪುತ್ರನ ಧ್ವನಿಯೇ..? ಇಲ್ಲ. ಬಹುಶಃ ಅದು ಅವಳ ಇನ್ನೊಬ್ಬ ಮಗನದು! ಅದು ಎಲ್ಲಿಯೋ ದೂರದಿಂದ, ನದಿಯ ಆಚೆಯ ದಡದಿಂದ ಮೆಲ್ಲನೆ ತೇಲಿಬಂದಂತೆ ಕೇಳಿಸಿತು.
 ಅಂದರೆ, ಪ್ರತಿಯೊಬ್ಬರೂ ಅಂತೂ ಕೊನೆಗೆ ಆ ಹೊಸ ದೇಶವನ್ನು ತಲುಪಿದ್ದರು. ಆದರೆ ಇಷ್ಟು ಬೇಗನೆ ತಲುಪಿದ್ದರೆ? ಎರಡನೇ ಮಗ! ಅವನ ಹಿಂದೆಯೇ ಕೊನೆಯ ಮಗ! ಅವಳು ನೋಡಿದಳು-ಸ್ಪಷ್ಟವಾಗಿ ನೋಡಿದಳು. ತುಂಬಾ ನಿಚ್ಚಳವಾಗಿ ನೋಡಿದಳು. ಅವರ ಹಿಂದೆಯೇ ಅವರ ಹೆಂಡಿರು ಮಕ್ಕಳು! ಇದ್ದಕ್ಕಿದ್ದಂತೆಯೇ ಇಡೀ ಕುಟುಂಬ ಅವಳ ಮುಂದೆ ಧುತ್ತನೆ ಅವತರಿಸಿತು. ಮನೆಯ ನರನಾಡಿಗಳಲ್ಲೆಲ್ಲ ಒಮ್ಮಿಂದೊಮ್ಮೆಲೇ ಜೀವ ಹರಿದಾಡಲಾರಂಭಿಸಿತು. ಆ ಮನೆಯ ಸಮಸ್ತ ಭೂತಗಳೆಲ್ಲ ಆ ದುಃಖಾರ್ತ ಮಹಿಳೆಯ ಸುತ್ತಲೂ ಅಣಿನೆರೆಯಲು ನಿರ್ಧರಿಸಿದಂತೆ ಕಂಡಿತು. ಚಿಕ್ಕವರು, ದೊಡ್ಡವರೆನ್ನದೆ, ಎಲ್ಲರೂ ಒಟ್ಟಾಗಿ ಏಕಕಾಲಕ್ಕೆ ಅಕ್ಕರೆ ತುಂಬಿ ಅವಳನ್ನು ಸ್ಪರ್ಶಿಸಿದರು. ಅವಳ ತುಟಿಗಳ ಮೇಲೆ ಒಂದು ಅನನ್ಯ ಮುಗುಳು ನಗೆ ಲಾಸ್ಯಮಾಡಿತು. ಅವಳ ಹರ್ಷದ ಹಕ್ಕಿಗೆ ರೆಕ್ಕೆ ಮೂಡಿದವು. ಆನಂದತುಂದಿಲಳಾಗಿ ತೊನೆಯತೊಡಗಿದಳು. ಅವಳ ದುಃಖ ದುಮ್ಮಾನಗಳೆಲ್ಲ ಕ್ಷಣಮಾತ್ರದಲ್ಲಿಯೇ ಆವಿಯಾಗಿ ಹಾರಿಹೋಗಿದ್ದವು. ಅವಳ ಕಾತರ, ತಳಮಳಗಳೆಲ್ಲ ಸುಖದ ಸುಳಿಗಾಳಿಗೆ ಸಿಕ್ಕು ಸುತ್ತಲೂ ಚದುರುತ್ತ, ಕತ್ತಲಲ್ಲಿ ಎತ್ತಲೋ ಮಾಯವಾದವು.

ಅವಳು ಕಣ್ತೆರೆದು ನೋಡಿದಾಗ ಕೂಡಲೇ ತನ್ನ ಕೈಯನ್ನು ಸ್ಪರ್ಶಿಸಿ ನಾಡಿ ಪರೀಕ್ಷಿಸುತ್ತಿದ್ದ ಬೆರಳುಗಳನ್ನು ಕ್ಷಣ ಮಾತ್ರದಲ್ಲಿಯೇ ಗುರುತಿಸಿದಳು. ಪರದೆಯ ಹಿಂದೆ ನಿಂತಿದ್ದ ರೂಪ್‌ಚಂದ್‌ಜೀ, ‘ಅರೆ ಬಾಬೀ ಸುಮ್ಮನೆ ಬಾ ಎಂದು ಹೇಳಿ ಕಳುಹಿಸಿದರೆ, ನಾನು ಬಂದೇಬಿಡುತ್ತಿದ್ದೆ. ಅದಕ್ಕೇಕೆ ಇಷ್ಟು ವಿವರವಾದ, ದೀರ್ಘವಾದ ನಾಟಕ?’
‘ಆದರೆ ಭಾಬೀ, ಇಂದು ನೀನು ನನಗೆ ನನ್ನ ಫೀಸು ಕೊಡಲೇಬೇಕು. ಯಾತಕ್ಕಾಗಿ ಗೊತ್ತಾ? ಈ ನಿನ್ನ ಕೆಲಸಕ್ಕೆ ಬಾರದ ಮಕ್ಕಳನ್ನು ಲೋಣಿ ಜಂಕ್ಷನ್‌ನಿಂದ ಹಿಂದಿರುಗಿ ಕರೆತಂದುದ್ದಕ್ಕೆ. ಈ ಬದ್ಮಾಷರೆಲ್ಲ ಎಲ್ಲಿಯೋ ಓಡಿ ಹೋಗುತ್ತಿದ್ದರು. ಎಂಥ ಅಳ್ಳಕ ಎದೆಯವರು. ಪೊಲೀಸ್ ಸುಪರಿಂಟೆಂಡೆಂಟ್‌ರ ಮೇಲೆಯೂ ನಂಬಿಗೆಯಿಲ್ಲದ ಪರಮ ಭೂಪರು!’
ಆ ವಯೋವೃದ್ಧ ತಾಯಿಯ ಮುಖ ಮುಗುಳ್ನಗೆಯೊಂದಿಗೆ ಮಿಂಚಿತು. ದಿಗ್ಗನೆ ಎದ್ದು ಕುಳಿತವಳೇ ಬಹಳ ಹೊತ್ತಿನವರೆಗೆ ಮಾತನಾಡಲೇ ಇಲ್ಲ. ಆಮೇಲೆ ಸಾವಕಾಶವಾಗಿ ಎರಡು ಕಂಬನಿಗಳು ಉರುಳುತ್ತ ಅವಳ ಮುಖದಿಂದ ಕೆಳಗೆ ಇಳಿದು ರೂಪ್‌ಚಂದ್‌ಜೀಯ ಸುಕ್ಕುಗಟ್ಟಿದ ಕೈಗಳ ಮೇಲೆ ಬಿದ್ದವು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top