ಆತ್ಮಹತ್ಯೆಯ ಲೋಕವೃಕ್ಷಗಳ ವಿಷಾದಗೀತೆ

-

ಮದುವೆಯಾದ ಏಳು ವರ್ಷಗಳೊಳಗಿನ ಎಳೆಯ ಹೆಣ್ಣು ಮಕ್ಕಳ ಶವಗಳನ್ನು,ಹತ್ತಾರು ಸಂಖ್ಯೆಯಲ್ಲಿ ಮಹಜರು ಮಾಡಿರುವ ನನಗೆ ಅಲ್ಲಿನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಇಂದಿಗೂ ತಡೆಯಲಾಗದ ತಳ ಮಳ ಶುರುವಾಗುತ್ತದೆ. ಅಂತಹ ಒಂದೊಂದು ದೇಹವೂ ವಿವಿಧ ಜಾತಿಗಳ, ಧರ್ಮಗಳ, ವೃತ್ತಿಗಳ ಹೆಣ್ಣು ಮಕ್ಕಳ ಬದುಕು ಕಂತುಹೋದ ದುರಂತ ಕಥನಗಳವು. ಬೆಂಕಿ ಬಿದ್ದ ಒಡಲುಗಳು ಅರಳುವ ಮೊದಲೇ ಸಿಡಿಲು ಬಡಿದು ಸೀದು ಹೋದಂತೆ ಕಾಣುತ್ತಿದ್ದವು. ಗೋಣು ಮುರಿದು ನೇತಾಡುತ್ತಿದ್ದರೂ, ಹೊಟ್ಟೆಯೊಳಗಿನ ಭ್ರೂಣವನ್ನು ನೇವರಿಸಿ ಕ್ಷಮೆ ಕೇಳುತ್ತಿರುವಂತೆ, ಸಮಾಧಾನ ಮಾಡುತ್ತಿರುವಂತೆ ಹೊಟ್ಟೆಯ ಮೇಲೆ ಕೈಯಿಟ್ಟು ತಲೆ ಬಾಗಿಸಿದ ದೇಹ, ಬೆಳಗಾಗೆದ್ದು ಸಿನೆಮಾಕ್ಕೋ, ಮದುವೆಗೋ ಹೋಗಲೆಂದು ರಾತ್ರಿ ಮೆಹಂದಿ ಹಚ್ಚಿ ಬೆಳಕು ಮೂಡುವ ಮೊದಲೇ ಫ್ಯಾನಿಗೆ ನೇತಾಡುವ ದೇಹ, ತನ್ನ ಪಾಲಿಗೆ ಯಾರೂ ಇರದ ಭೂಮಿಗೆ ಮುಖ ಮಾಡುವುದಿಲ್ಲವೆಂದು ದೇಹಕ್ಕೆ ಗುಂಡು ಕಟ್ಟಿ ಮುಖ ಕೆಳಗೆ ಮಾಡಿ ಬಾವಿಯ ತಳಕಚ್ಚಿ ಕೆಸರು ತಬ್ಬಿ ಮಲಗಿದ ತರಳೆ, ಕಾರ್ಕೋಟಕ ಕಾಟಗಳಿಂದ ತಪ್ಪಿಸಿಕೊಳ್ಳಲು ವಿಷಕುಡಿದು ಕೊಳೆತು ಕಾಡಿನ ಹುಳುಗಳಿಗೆ ಆಹಾರವಾಗಿ ಮನುಷ್ಯ ಮಾತ್ರದವರು ಸಹಿಸಲಾಗದಂತೆ ವಾಸನೆ ಬೀರುತ್ತಾ ಕರಗುತ್ತಿರುವ ದಿಕ್ಕೆಟ್ಟ ದೇಹ, ಒಂದೊಂದರದೂ ಒಂದೊಂದು ಕಥೆ.

 ವೈದ್ಯರು ಎಂಥದೋ ಕೆಮಿಕಲ್ಲು ಸುರಿದು, ಯಾರೋ ಬಡವನಿಗೆ ಹೆಂಡ ಕುಡಿಸಿ ದೇಹ ಕೊಯ್ಯಿಸುವಾಗಿನ ಸಂದರ್ಭಗಳಲ್ಲಿ ಥೂ.. ನರದೇಹವೇ ಅನ್ನಿಸಿದ್ದಿದೆ.. ದೊಡ್ಡ ಆಸ್ಪತ್ರೆಗಳಿರುವ ಊರಿನಲ್ಲಿದ್ದರಿಂದ ಹೆಣವೊಂದರ ವಾಸನೆ ಆರುವ ಮೊದಲೆ ಇನ್ನೊಂದು ದೇಹದ ಕುರಿತು ಪರಿಶೀಲಿಸ ಬೇಕೆಂದು ಪೊಲೀಸರು ಕೋರಿಕೆ ಹೊತ್ತು ಬರುತ್ತಿದ್ದರು.ಕೆಲವೊಮ್ಮೆ ಇಂಥ ಊರುಗಳಲ್ಲಿ ಕೆಲಸವೇ ಮಾಡಬಾರದೆನ್ನಿಸುತ್ತಿತ್ತು.ಎಷ್ಟೆಲ್ಲ ಎಚ್ಚರಿಕೆಯಿಂದ ಪರಿಶೀಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕೆಂದು ಪ್ರಯತ್ನಿಸಿದ್ದರೂ ಬಹುಪಾಲು ಪ್ರಕರಣಗಳಲ್ಲಿ ಜಾತಿ, ಧರ್ಮಗಳ ಜನರ ಮನಸ್ಥಿತಿ ಹೆಣ್ಣಿನ ವಿಚಾರದಲ್ಲಿ ಒಂದೇ ಎಂಬಂತೆ ರಾಜಿ ಮಾಡಿಕೊಳ್ಳುತ್ತಿದ್ದರು.

 ನೆನಪಾದರೆ ಈಗಲೂ ಹೆಣದ ವಾಸನೆಯೊಂದು ಆವರಿಸಿಕೊಂಡಂತಾಗುತ್ತದೆ. ಸತ್ತ ತಾಯಿಯ ಮುಂದೆ ಆಡುವ ಹಸುಗೂಸು, ತುಸು ಬುದ್ಧಿ ಬಲಿತಿದ್ದರೆ ಅವುಗಳ ಆಕ್ರಂದನ, ತವರು ಮನೆಯವರ ಸಂಕಟ, ದೇವರಲ್ಲಿ ನಂಬಿಕೆ ಇಟ್ಟ ಯಾವ ಮಗನಿಗೂ ಸಿಟ್ಟು ಬಾರದೇ ಇರದು. ಸೃಷ್ಟಿಲೀಲೆ, ಭಗವಂತನ ನಿಯಮ, ಕರ್ಮಫಲ ಇತ್ಯಾದಿಯಾಗಿ ಮಾತನಾಡುವವರ ಕಂಡರೆ ಅಸಹ್ಯ, ವಿಷಾದ, ಸಿಟ್ಟು ಆವರಿಸಿಕೊಳ್ಳುತ್ತದೆ.
ಇಂಥದೇ ಒಂದು ಭಿತ್ತನೆ ಕಾಲದ ಸಂಜೆ ನನ್ನ ಅಣ್ಣ ಮಾತ್ರೆ ತಿಂದು ಬಿಟ್ಟಿರುವುದಾಗಿ ಫೋನು ಬಂತು. ಬೆಳೆದ ಕಾಳು ಕಡಿಗೆ ಹುಳಾ ಬೀಳದಿರಲೆಂದು ಸೈನೈಡ್ ಸ್ವರೂಪಿ ನಿಷೇಧಿತ ಔಷಧಿಯೊಂದನ್ನು ರೈತರು ಬಳಸುತ್ತಾರೆ. ಅಂಗಡಿಗಳಲ್ಲಿ ರಾಜಾರೋಷವಾಗಿ ಅದನ್ನು ಮಾರುತ್ತಿದ್ದಾರೆ. ಅದನ್ನು ತಿಂದ ಕ್ಷಣಮಾತ್ರದಲ್ಲಿ ಉಸಿರು ವಿಷವಾಗಿ ಪ್ರಜ್ಞೆ ತಪ್ಪುತ್ತಾರೆ. ಈ ಮಾತ್ರೆಗಳನ್ನು ತಿಂದು ನನ್ನ ಊರ ಕಡೆ ಅನೇಕರು ಹೆಣವಾಗಿದ್ದಾರೆ. ತಡ ರಾತ್ರಿಯೋ ಅಥವಾ ಬೆಳ್ಳಂಬೆಳಗ್ಗೆಯೋ ಊರ ಕಡೆಯ ನಂಬರುಗಳಿಂದ ಫೋನು ರಿಂಗಾದರೆ ಅದನ್ನು ಮುಟ್ಟುವುದಕ್ಕೆ ಕೈ ನಡುಕ ಬರುತ್ತದೆ. ಅನೇಕ ಶವಗಳನ್ನು ನೋಡಿದ್ದ ನನಗೆ, ಅಣ್ಣ ಮಲಗಿದ್ದ ಆಸ್ಪತ್ರೆಯ ಬೆಡ್ಡಿನ ಮುಂದೆ ಕಂಡ ಕಂಡ ಡಾಕ್ಟರುಗಳನ್ನು ಬದುಕುಳಿಸುವಂತೆ ಕೈ ಮುಗಿದು ಬೇಡಿಕೊಂಡದ್ದಿದೆ.ಅವನ ಸಾವು ನನ್ನನ್ನು ಅನೂಹ್ಯ ಪಾಪಪ್ರಜ್ಞೆಯಲ್ಲಿ ಅದ್ದಿ ಹೋಗಿದೆ. ಹೊಲ, ಮನೆ, ಕೆಟ್ಟವರಲ್ಲದ ಮಕ್ಕಳು, ಮಡದಿ ಎಲ್ಲವೂ ಇದ್ದವು.ಊರವರ ದುಡಿಮೆಗಳಲ್ಲಿ ಭಾಗಿಯಾಗುತ್ತಾ ಎಲ್ಲರ ಪ್ರೀತಿ ಗಳಿಸಿದ್ದ ಅಣ್ಣ ಮನೆಯೊಳಗಿನ ಸಣ್ಣ ಕಿರಿಕಿರಿಗಳನ್ನು ಅವಮಾನವೆಂದು ಭಾವಿಸಿ ಹಾರಿಹೋದ. ತುಸು ಮಟ್ಟಿಗಾದರೂ ತಿಳುವಳಿಕೆಯುಳ್ಳ ನಾನು ಅದನ್ನು ಬಗೆಹರಿಸಬಹುದಿತ್ತು ಎಂಬುದು ಪಾಪ ಪ್ರಜ್ಞೆಯಾಗಿ ಕಾಡುತ್ತಿದೆ.

 
ಹಿಂದುಳಿದ ವರ್ಗಗಳ ಜನರೇ ಬದುಕುತ್ತಿರುವ ನನ್ನ ಊರೊಂದರಲ್ಲಿಯೇ (ಸುಮಾರು 680 ಜನಸಂಖ್ಯೆಯ) ಹೀಗೆ ಅಕಾಲಿಕವಾಗಿ ಬದುಕು ತೊರೆದು ಹೋದವರ ಸಂಖ್ಯೆ ಎರಡು ವರ್ಷಗಳಲ್ಲಿ ಎಣಿಸಿದರೆ ಇಪ್ಪತ್ತಾಗುತ್ತದೆ. ಎಲ್ಲರೂ ಮರ್ಯಾದಸ್ಥರೇ, ಘನತೆಯಿಂದ ಬದುಕಿದ ಕುಟುಂಬಗಳೇ, ಸರಕಾರಕ್ಕೆ ದೂರು ನೀಡಿ, ಮಾಧ್ಯಮಗಳಿಗೆ ಮಾಹಿತಿ ತಲುಪಿಸಿ ಶವ ಇಟ್ಟು ಪ್ರತಿಭಟಿಸಿ ಪರಿಹಾರ ಪಡೆಯಲು ಸಣ್ಣ ಪ್ರಯತ್ನವನ್ನೂ ಮಾಡದ ರೈತ ಜನ ಇವರು. ಉಳಿದವರಾದರೂ ಸಾವನ್ನು ಸುದ್ದಿಯಾಗಿಸದೆ ಅನಾಥವಾಗಿ ಅತ್ತು ನೆಲದಲ್ಲಿ ಮರೆಯಾಗಿಸಿ ಎದ್ದು ಹೋದ ಅಮಾಯಕ ಮರ್ಯಾದಸ್ಥರು! ಇಂಥವರ ಸಂಖ್ಯೆ ಇನ್ನೂ ಹೆಚ್ಚಿಗಿರುವುದರಿಂದಲೇ ಹೆಚ್ಚು ಸಂಘರ್ಷಗಳಿಲ್ಲದೆ ಎಲ್ಲವೂ ನಡೆಯುತ್ತಿವೆ!. ಸರಕಾರದ ದಾಖಲೆಗಳಲ್ಲಿ ಇವರ ಕುರಿತು ಮಾಹಿತಿಗಳಿಲ್ಲ. ಪಡಿತರ ಚೀಟಿ, ಮತದಾರರ ಪಟ್ಟಿಯಿಂದ ನಿಧಾನಕ್ಕೆ ಹೆಸರು ತೆಗೆದು ಹಾಕಲಾಗುತ್ತದೆ. ಉಳಿದವರ ಪಾಲಿಗೆ ಅವರೊಂದು ನೆನಪು, ಮಾಗದ ಗಾಯ, ಕೇವಲ ‘ಲೇಟ್’ ಪದವಿ ಮಾತ್ರ ಬಯಸದೇ ಬರುತ್ತದೆ. ವ್ಯಕ್ತಿಗತವಾಗಿ ಆಳವಾಗಿ ಕಲಕಿರುವ ಈ ಅನುಭವಗಳೇ ಆತ್ಮಹತ್ಯೆ ಎಂದರೇನು? ಮನುಷ್ಯ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಇಷ್ಟಕ್ಕೂ ಅದನ್ನು ಆತ್ಮಹತ್ಯೆ ಎನ್ನಬೇಕೆ? ಹಾಗಿದ್ದರೆ ಆತ್ಮ ಎಂಬುದೊಂದು ಇದೆಯೇ? ಅದನ್ನು ಅಹಂ ಹತ್ಯೆ ಎನ್ನಬಾರದೇಕೆ? ಅದು ಪ್ರತಿಭಟನೆಯ ಮಾದರಿಯೇ? ಎಂಬಿತ್ಯಾದಿ ತಾತ್ವಿಕವಾದ ಸಂಗತಿಗಳ ಕಡೆಗೆ ಯೋಚಿಸುವಂತೆ ಮಾಡಿವೆ.

ಅಜ್ಞಾತ ಆತ್ಮಹತ್ಯೆಗಳು ಹೀಗೆ ಅಸಂಖ್ಯಾತವಾಗಿ ನಡೆದು ದಾಖಲಾಗದೆ ಹೋಗುತ್ತಿರುವುದರ ನಡುವೆಯೇ ಕಳೆದ ವರ್ಷ ಸಾವಿರಕ್ಕೂ ಮೀರಿ ರೈತರು ಆತ್ಮಹತ್ಯೆ ಮಾಡಿಕೊಂಡರೆಂದು ದಾಖಲೆಗಳು ಹೇಳುತ್ತಿವೆ. ದಿಕ್ಕೆಡಿಸುವ ಮಾಹಿತಿಯೆಂದರೆ ಹತ್ತಿರತ್ತಿರ ನೂರು ಜನ ದಲಿತ ರೈತರು ಆತ್ಮಹತ್ಯೆ ಮಾಡಿಕೊಂಡರು. ದೇಶದಲ್ಲಿ ಕಳೆದೆರಡು ದಶಕಗಳಿಂದ ಸುಮಾರು 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೊಂಬತ್ತರ ದಶಕದಿಂದ ಆರಂಭಗೊಂಡ ಈ ಬಿಕ್ಕಟ್ಟಿನಲ್ಲಿ ದಲಿತ ರೈತರ ಸಾವುಗಳು ಸಮಾಜದ ದುರ್ದೆಸೆಯ ಪಥವನ್ನು ತೋರಿಸುತ್ತಿವೆ. ಶತಮಾನಗಳ ಕಾಲ ಹಸಿವು, ಅವಮಾನಗಳನ್ನು ಉಂಡು, ಹೊದ್ದು ತರತಮ್ಯದ ನಿಯಮಗಳನ್ನು ಪ್ರಶ್ನಿಸದೆ ಬದುಕಿದ್ದ ಸಮುದಾಯಗಳು ಆಧುನಿಕ ಸಂವಿಧಾನದ ಕಾರಣಕ್ಕೆ ಒಂದಿಷ್ಟು ಭೂಮಿ ಪಡೆದು ರೈತರಾದ ಈ ವರ್ಗಗಳನ್ನೂ ಕೃಷಿ ಬಲಿ ಪಡೆಯುತ್ತಿದೆಯೆಂದರೆ, ದಡ್ಡರಿಗೂ ಅರ್ಥವಾಗುವ ಕಠೋರ ಸತ್ಯ ಕೃಷಿ ಬಿಕ್ಕಟ್ಟಿನಲ್ಲಿದೆ ಎಂಬುದು ಮಾತ್ರ.ಹಾಗಾಗಿಯೇ ರೈತರು ನರಕ ಶೂಲಕ್ಕೆ ಸಿಕ್ಕಿದವರಂತೆ ಉಪ್ಪಾಗಿ ಉದುರಿ ಹೋಗುತ್ತಿದ್ದಾರೆ.
 ಇದು ಸಾಲದೆಂಬಂತೆ ಕಳೆದೆರಡು ವರ್ಷಗಳಿಂದ ಅಧಿಕಾರಿಗಳು, ಸರಕಾರಿ ನೌಕರರು ಹಾಗೂ ಬದುಕಿನ ಕುರಿತು ಸಣ್ಣ ಭದ್ರತೆ ಇರುವ ಜನರು ಮಾಡಿಕೊಳ್ಳುತ್ತಿರುವ ಹತ್ಯೆಗಳನ್ನು ಗಮನಿಸಿದರೆ,ಆಧುನಿಕ ನಾಗರಿಕತೆಗಳು ಎಂಥದೋ ಸಂಕಟದಲ್ಲಿರುವಂತೆ ಕಾಣುತ್ತವೆ.

 ಬದುಕಿನ ಕುರಿತು ತೀವ್ರ ಅಕ್ಕರಾಸ್ಥೆಯುಳ್ಳ ಯಯಾತಿಯ ಬಹುಕಾಲ ಬದುಕಬೇಕೆಂಬ ಮನಸ್ಥಿತಿಯೊಂದು ಉತ್ಕಟವಾಗಿರುತ್ತದೆಂದು ಅಂದುಕೊಳ್ಳುವಾಗಲೆ ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂಬಂತೆ ಕ್ಷಣಾರ್ಧದಲ್ಲಿ ಪ್ರಯಾಣ ಮುಗಿಸಿ ಎದ್ದು ಬಿಡುವರಲ್ಲ! ಇದಕ್ಕೆ ಕಾರಣಗಳೇನು? ಎಂಬುದಕ್ಕೆ ಹಲವು ಚಿಂತಕರು, ಧಾರ್ಮಿಕ ಪಂಡಿತರು ತಲೆ ಕೆಡಿಸಿಕೊಂಡಿದ್ದಾರೆ. ಪೂರ್ಣ ಉತ್ತರ ಸಿಕ್ಕಿದೆಯೆನ್ನಿಸುವುದಿಲ್ಲ. ರೈತರ ಆತ್ಮಹತ್ಯೆಗಳ ಕುರಿತು ಗಂಭೀರವಾಗಿ ಅಧ್ಯಯನ ಮಾಡುತ್ತಿರುವ ಗೆಳೆಯರನ್ನು ಕೇಳಿದರೆ, ಅವರು ಶೇ.50-60 ರಷ್ಟು ಜನ ಸಾಲ ಮುಂತಾದ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಬಹುದು, ಉಳಿದಂತೆ ಮನುಷ್ಯನ ಸಾಮಾಜೀಕರಣ, ಆರೋಗ್ಯ, ವಿದ್ಯಾಭ್ಯಾಸ, ಹಬ್ಬ-ಹರಿದಿನ, ಬೀಗರ ಊಟ, ಕೋರ್ಟು-ಕಚೇರಿಗಳ ಕಾರಣ, ಸಾಮಾಜಿಕ ಅವಮಾನ ಹೀಗೆ ಪಟ್ಟಿ ಮಾಡುತ್ತಾ ಹೋಗುತ್ತಾರೆ. ಆಧುನಿಕ ಸವಲತ್ತುಗಳನ್ನು ನಿರಾಕರಿಸಿ ಬದುಕಿದರೆ ಏನು ಸಮಸ್ಯೆ? ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಓದಿಸಲು ಏನು ಧಾಡಿ? ಮದುವೆಯನ್ನು ಅಷ್ಟೊಂದು ಸಾಲ ಮಾಡಿ ಯಾಕೆ ಮಾಡಬೇಕಿತ್ತು ಎಂದು ವಿದ್ಯಾವಂತರೆನ್ನಿಸಿಕೊಂಡವರೂ ಸುಲಭವಾಗಿ ಆಡಿಬಿಡುತ್ತಾರೆ.ಅವರಿಗೆ ತಮ್ಮ ಮಾತಿನ ಹಿಂದಿರುವುದು ಕ್ರೌರ್ಯವೆಂದು ಅನ್ನಿಸುವುದೇ ಇಲ್ಲ.

 ಸರಕಾರಿ ನೌಕರರದೂ ಇದಕ್ಕಿಂತ ಭಿನ್ನ ಕಥೆಯೆನ್ನಿಸುವುದಿಲ್ಲ. ಇಲಾಖೆಯಲ್ಲಿ ಅಸ್ಮಿತೆಯ ಸಮಸ್ಯೆ, ತನ್ನ ಕುಟುಂಬ ನಿರೀಕ್ಷಿಸಿದಂತೆ ಜೀವಿಸಲಾಗದ ಅಥವಾ ವರ್ತಿಸಲಾಗದ ಸಂಕಟ. ಇಲಾಖೆಯ ಶಿಸ್ತುಕ್ರಮ ಮುಂತಾದವು ತಕ್ಷಣ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿ ದ್ದಂತೆ ಮನಸ್ಸಿಗಾದ ಕಹಿಯನ್ನು ಅರಗಿಸಿಕೊಳ್ಳುವ, ಸಮಾಜವನ್ನು ಎದುರಿಸುವ ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಮೊದಲೆ ವಿಚಾರ ಜಗಜ್ಜಾಹೀರಾ ಗುತ್ತದೆ. ಹೀಗೆ ವ್ಯಕ್ತಿಗತ ಅವಮಾನವೊಂದು ಸಾರ್ವಜನಿಕಗೊಳ್ಳುತ್ತಿದ್ದಂತೆ ಬದುಕಿನ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಕಾಣುತ್ತಿದೆ.

ದಾರಿ ಹೋಕರನ್ನು ದೋಚಿ,ತಲೆ ಒಡೆದು ಬದು ಕುತ್ತಿದ್ದ ವಾಲ್ಮೀಕಿಯಂಥವರ ಪಾಪಗಳನ್ನು ಹೆಂಡತಿ ಮಕ್ಕಳು ಹಂಚಿಕೊಳ್ಳಲು ನಿರಾಕರಿಸುತ್ತಿ ದ್ದಂತೆ ಮನಸ್ಸು ತಳಮಳಿಸಿ ಹುತ್ತಗಟ್ಟಿ ಅರಿವಿಗೆ ಮತ್ತು ಕರುಣೆಗೆ ಹಾತೊರೆದು ಬದುಕು ಅರ್ಥಪೂರ್ಣವಾಗುತ್ತಾ ಹೋಗುತ್ತದೆ. ಇಂಥದೊಂದು ಏಕಾಂತ, ಮಾಗುವಿಕೆಗೆ ಬೇಕಾದ ಸಾವಧಾನವೊಂದನ್ನು ವಿದ್ಯನ್ಮಾನ ಮಾಧ್ಯಮಗಳು ಕೊಂದು ಹಾಕಿ ಬಿಟ್ಟಿವೆಯೆನ್ನಿಸುತ್ತದೆ. ಕೊಲೆಗಡುಕನೊಬ್ಬ, ದರೋಡೆಕೋರನೊಬ್ಬ ಮಹಾಕವಿಯಾಗಲು ಅವಕಾಶ ಕಲ್ಪಿಸಿಕೊಟ್ಟ ಪರಂಪರೆಗಳಿಗಿದ್ದ ವಿವೇಕಗಳು ಎಲ್ಲಿ ಹೋದವು?
ಭಾರತದ ಜನಮಾನಸದ ಮಟ್ಟಿಗೆ ಮೊದಲ ಆತ್ಮಹತ್ಯೆಯ ಪೌರಾಣಿಕ ಮಾತು ಬಹುಶಃ ದಾಕ್ಷಾಯಿಣಿಯದು. ನಂತರ, ಸೀತೆ ಮತ್ತು ಅಂಬೆಯರವು. ಮೂವರೂ ಹೆಣ್ಣುಗಳೇ. ತಾನು ಮೆಚ್ಚಿರುವವನನ್ನು ಅವಮಾನಿಸಿದ ತಂದೆ ದಕ್ಷನ ಉರಿವ ಯಜ್ಞದ ಕುಂಡಕ್ಕೆ ಹಾರಿ ದಾಕ್ಷಾಯಿಣಿ ಜೀವ ತೆಗೆದುಕೊಳ್ಳುತ್ತಾಳೆ. ತನ್ನ ನಡತೆಯನ್ನು ಅವಮಾನಿಸುವ ಗಂಡನ ಎದುರು ಸೀತೆ ಜೀವ ಕಳೆದುಕೊಳ್ಳುತ್ತಾಳೆ.ಮೋಹಿತಳಾದ ಅಂಬೆಯನ್ನು ಭೀಷ್ಮ ನಿರಾಕರಿಸಿ ದಾಗ ಆಕೆಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಮೂರೂ ಉದಾಹರಣೆಗಳೂ ಸಹ ಸಾಮಾಜಿಕ- ರಾಜಕೀಯ-ಅಸ್ತಿತ್ವಗಳ ಬಿಕ್ಕಟ್ಟಿನ ಕಥನಗಳಾಗಿ ಅಪಾರ ಒಳಗುಟ್ಟುಗಳನ್ನು ಒಡಲೊಳಗಿಟ್ಟಕೊಂಡು ಪುನಾರಾವರ್ತನೆಯಾಗುತ್ತಿವೆ.

ಅಂಬೆ ಮತ್ತು ದಾಕ್ಷಾಯಿಣಿಯರು ಬಹುಶಃ ತಮ್ಮ ಕುದಿವ ಯೌವ್ವನದ ದಿನಗಳಲ್ಲಿ ಹೀಗೆ ವರ್ತಿಸಿ ರಬಹುದು. ಸೀತೆಯದು ಹಾಗಲ್ಲ. ಆಕೆ ಎರಡು ಮಕ್ಕಳ ತಾಯಿ.ಮಕ್ಕಳು ತಂದೆಯೊಡನೆ ಯುದ್ಧ ಮಾಡುವಷ್ಟು ಶಕ್ತರಾದರು ಎಂದ ಕೂಡಲೇ ತನ್ನ ಕರ್ತವ್ಯ ಮುಗಿಯಿತೆಂದು ಬಾಯ್ತೆರೆದ ಭೂಮಿಯೊಳಗೆ ಹುಗಿದು ಹೋಗುತ್ತಾಳೆ.ಕುತೂಹಲದ ವಿಚಾರವೆಂದರೆ ಸೂರ್ಯ ವಂಶದ ಸೊಸೆಯಾದ ಈಕೆ ಮೊದಲಿಗೆ ಅಗ್ನಿಪ್ರವೇಶ ಮಾಡುತ್ತಾಳೆ. ಎರಡನೇ ಬಾರಿ ಭೂಮಿ ಪಾಲಾಗುತ್ತಾಳೆ. ಬೆಂಕಿಯಲ್ಲಿ ದಹಿಸುವುದು ಮತ್ತು ಹೂಳುವುದು ಎರಡು ವಿಭಿನ್ನ ಸಂಸ್ಕೃತಿಗಳನ್ನು ಪ್ರತಿನಿಧಿಸುವಂತೆ ಕಾಣುತ್ತವೆ.ಈ ಕುರಿತು ಇನ್ನಷ್ಟು ಅಧ್ಯಯನದ ಅಗತ್ಯವಿದೆ.

ಅಂಬೆ ದಾಕ್ಷಾಯಿಣಿಯ ವಿಚಾರವನ್ನು ಪ್ರಾಯ್ಡಾಗೆ ನೀಡಿದರೆ ಆತ ಇದನ್ನು ಮನುಷ್ಯನೊಳಗಿನ ವಾಂಛೆ ತೃಪ್ತಗೊಳ್ಳದ ಸ್ಥಿತಿ ಎನ್ನಬಹುದು.ಶೇಕ್ಸ್‌ಪಿಯರ್‌ನಿಗೆ ನೀಡಿದರೆ ಆತ ದಾಕ್ಷಾಯಿಣಿಯ ಕಥೆಯನ್ನು ಆರ್ಯ-ದ್ರಾವಿಡ ಸಂಘರ್ಷದ ಕಥೆಯನ್ನು ಮುಖ್ಯ ಭೂಮಿಕೆಗೆ ತರಬಹುದು. ತಂದೆ ಮಗಳ ಆಸಕ್ತಿಗಳ ಸಂಘರ್ಷ ಎಂದೆಲ್ಲ ಚರ್ಚಿಸಲು ಸಾಧ್ಯವಿದೆ. ಅಂಬೆಯ ಕಥೆಯೂ ಹಾಗೆಯೇ. ತೌಲನಿಕವಾಗಿ ತುಸು ಮಟ್ಟಿಗಾದರೂ ರಾಮಾಯಣದ ಕಥೆಗೆ ಸಾಮ್ಯವಿರುವ ಗ್ರೀಕಿನ ‘ಹೆಲನ್’ ಅವಮಾನಿತಳಾದಾಗ ಆಕೆ ಆತ್ಮಹತ್ಯೆಯನ್ನೇನೂ ಮಾಡಿಕೊಳ್ಳುವುದಿಲ್ಲ.ಇವುಗಳನ್ನು ಸಂಸ್ಕೃತಿಗಳ ರಾಜಕಾರಣದ ಸಂಘರ್ಷ ಎನ್ನಬಹುದು.

 ಚರಿತ್ರೆಯತ್ತ ನೋಡಿದರೆ, ಊಳಿಗಮಾನ್ಯ ಕಾಲಾವಧಿಯಲ್ಲಿ ಸಂಭವಿಸುವ ಸ್ವ ಹತ್ಯೆಗಳು ಆತ್ಮಹತ್ಯೆಗಳೋ, ಆತ್ಮಾಹುತಿಗಳೋ, ರಾಜಕೀಯ- ಸಾಂಸ್ಕೃತಿಕ ಕೊಲೆಗಳೋ ಎಂಬ ಗೊಂದಲಗಳಿವೆ. ಚರಿತ್ರಕಾರ ಇರ್ಫಾನ್ ಹಬೀಬ್ ಪ್ರಕಾರ ಸತಿ ಹೋಗುವ ದಾಖಲೆ ಸಿಗುವುದು ಕ್ರಿ.ಶ.6ನೆ ಶತಮಾನದ ಆಸುಪಾಸಿಗೆ ಎನ್ನುತ್ತಾರೆ.ಆದರೆ ಮಹಾಭಾರತದ ಮಾದ್ರಿ ಪಾಂಡುವಿನ ಜೊತೆ ಸಹಗಮನ ಮಾಡುವ ಕಥೆಗಳೂ ದಾಖಲಾಗಿವೆ. (ಚಿತೆಗೆ ಬೆಂಕಿ ಹಚ್ಚುವ ಸಮುದಾಯಗಳಲ್ಲಿ ಮಾತ್ರ ಸತಿಹೋಗುವ ಪದ್ಧತಿ ಇದೆಯೇ? ಎಂಬ ಕುತೂಹಲವಿದೆ) ಸತಿಪದ್ಧತಿಯನ್ನು ಆತ್ಮಹತ್ಯೆಯೆಂದು ಹೇಗಾದರೂ ಕರೆಯುವುವುದು? ದಾಖಲೆಗಳಲ್ಲಿ ಬರುವ ಗರುಡರ ಸ್ವಹತ್ಯೆಗಳು, (ಯುದ್ಧಗಳಲ್ಲಿ ಯುದ್ಧಗಳಲ್ಲದ ಸಂದರ್ಭಗಳಲ್ಲಿಯೂ) ಮಡಿದ ಒಡೆಯನ ಜೊತೆ ಜೀವ ತೆಗೆದುಕೊಳ್ಳುವ ಸ್ವಾಮಿ ನಿಷ್ಠರ ಸ್ವಹತ್ಯೆಗಳು ಕೇವಲ ಆತ್ಮಹತ್ಯೆಗಳೇ? ಇಹ-ಪರ, ಸ್ವರ್ಗ-ನರಕಗಳ ಕುರಿತು, ಸಿದ್ಧಾಂತ ಕಟ್ಟಿ ಸಾಯುವ ಮನಸ್ಥಿತಿ ನಿರ್ಮಿಸುವುದು ಕೊಲೆಯಲ್ಲವೇ?

ಆಧುನಿಕ ಸಂದರ್ಭದಲ್ಲಿ ಶತ್ರುವಿಗೆ ಸಿಗಬಾರದೆಂದು ಸೈನೈಡ್ ತಿಂದವರು, ಆತ್ಮಾಹುತಿ ಬಾಂಬರುಗಳಾದವರ ಸಾವುಗಳೂ ಆತ್ಮಹತ್ಯೆಗಳೇ? ರಾಷ್ಟ್ರ-ರಾಷ್ಟ್ರೀಯತೆಗಳ ರಾಜಕೀಯ ಸಿದ್ಧಾಂತಗಳ ಸಂಘರ್ಷದ ಯಜ್ಞಕ್ಕಾಗಿ ನಡೆದ ಕೊಲೆಗಳಲ್ಲವೇ ಇವು? ಅತ್ಯಂತ ಸಂಕೀರ್ಣ ವಾದ ಪ್ರಶ್ನೆಗಳಿವು.ಆದರೆ ಜಗತ್ತಿನ ಎಲ್ಲ ನಾಗರಿಕತೆಗಳೂ ಆತ್ಮಹತ್ಯೆಯನ್ನು ಮಹಾಪಾಪದ ಕೃತ್ಯವೆಂದು ಭಾವಿಸುತ್ತವೆ ಮತ್ತು ಬೋಧಿಸುತ್ತವೆ.ಆದರೆ ಆತ್ಮಹತ್ಯೆಗಳು ಮಾತ್ರ ನಿರಾತಂಕವಾಗಿ ನಡೆಯುತ್ತಿವೆ. ಮೇಲಿನೆಲ್ಲ ಉದಾಹರಣೆಗಳನ್ನು ಗಮನಿಸಿದರೆ ಅವು ಇಬ್ಬಂದಿತನದಲ್ಲಿ ವರ್ತಿಸುತ್ತವೆ ಎನ್ನಿಸುತ್ತದೆ.

 ಅಂಕಿ ಸಂಖ್ಯೆಗಳನ್ನು ನೋಡಿದರೆ ಆತ್ಮ ಹತ್ಯೆಗಳ ಕುರಿತಂತೆ ಕೆಲವು ಕುತೂಹಲಕಾರಿ ಅಂಶಗಳು ಸಿಗುತ್ತವೆ. 15-29 ವಯೋಮಾನದವರಲ್ಲಿ ಒಂದು ಲಕ್ಷ ಜನಸಂಖ್ಯೆಗೆ 35 ಜನ ಗಂಡು ಹೆಣ್ಣುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವಯೋಮಾನದವರಲ್ಲಿ ಲಿಂಗ ವ್ಯತ್ಯಾಸವೇನೂ ಇಲ್ಲ. 30-49 ರ ವಯೋಮಾನದವರಲ್ಲಿ 38 (ಗಂಡು), 18 (ಹೆಣ್ಣು), 50-69ರ ವಯೋಮಾನದಲ್ಲಿ 29 ಗಂಡು 11 ಹೆಣ್ಣು, 70 ರ ನಂತರ 11ಹೆಣ್ಣು, 33 ಗಂಡುರಷ್ಟು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. (2013 ರ ಸ್ಕ್ರಾಲ್.ಇನ್ ಪತ್ರಿಕೆಯ ಅಂತರ್ಜಾಲದ ಮಾಹಿತಿ) ಇದನ್ನು ತುಸು ವಿಸ್ತರಿಸಿದರೆ ಕುಟುಂಬದ ಜವಾಬ್ದಾರಿಯು ಆರಂಭವಾಗುತ್ತಿದ್ದಂತೆ ಹೆಣ್ಣು ಬದುಕಿನ ಕುರಿತು ಹೆಚ್ಚು ಜಾಗೃತಳಾಗುತ್ತಾಳೆ. ಇಲ್ಲಿ ಅವಳ ಆದಿಮವಾದ ರಕ್ಷಕ ಪ್ರವೃತ್ತಿ ಕ್ರಿಯಾಶೀಲವಾಗುತ್ತದೆ. ಗಂಡು ಉಂಡು ಎದ್ದು ಹೋಗುವ ಕಾವ್ಯಗಳ ಪಾತ್ರದಂತೆಯೇ ಎಂಬುದನ್ನು ಈ ಅಂಕಿ ಅಂಶಗಳು ಸಮರ್ಥಿಸುವಂತಿವೆ.

ಭಾರತದ ರಾಜ್ಯವಾರು ಅಂಕಿ ಅಂಶಗಳನ್ನು ನೋಡಿದರೆ ಅಭಿವೃದ್ಧಿಗೂ ಆತ್ಮಹತ್ಯೆಗಳಿಗೂ ಸಣ್ಣ ಪ್ರಮಾಣದ ಸಂಬಂಧವಿರುವುದು ಕಾಣುತ್ತದೆ. ಕೈಗಾರಿಕೀಕರಣದಲ್ಲಿ ಮುಂದೆ ಇರುವ, ಜಗತ್ತಿನ ಸಂಸ್ಕೃತಿಗಳ ಜೊತೆ ಹೆಚ್ಚು ಸಂವಾದ ಮಾಡುವ ರಾಜ್ಯಗಳಲ್ಲಿ ತುಸು ಹೆಚ್ಚು ಎಂದು ಕಾಣುತ್ತದೆ. ಕುತೂಹಲಕ್ಕೆ ಗಮನಿಸಿದರೆ, ಮಹಾರಾಷ್ಟ್ರ ಶೇ.43.2, ತಮಿಳುನಾಡು ಶೇ.24.9, ಕೇರಳ ಶೇ.24.3, ತ್ರಿಪುರಾ ಶೇ.23, ಛತ್ತೀಸ್‌ಗಡ ಶೇ.22.9, ಕರ್ನಾಟಕ ಶೇ.21.2, ಗುಜರಾತ್ ಶೇ.11.8, ಬಿಹಾರ ಶೇ.0.8 ಪಂಜಾಬ್ ಶೇ.3.7, ಪಾಂಡಿಚೆರಿ ಶೇ.36.8, ಗೋವಾ ಶೇ.15.8, ಚಂಡಿಗಡ ಶೇ.7.4 ಮಾಹಿತಿಗಾಗಿ ನೋಡಿ ದಿನಾಂಕ ಎನ್ಸಿಆರ್ಬಿ ದಾಖಲೆ 21.4.2014 ಈ ಮಾಹಿತಿಯಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚು. ಬಿಮಾರು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿವೆ.

ಆತ್ಮಹತ್ಯೆ; ಕೆಲವು ಸೈದ್ಧಾಂತಿಕ ವಿಚಾರಗಳು

ಆತ್ಮಹತ್ಯೆಗಳ ಕುರಿತು ಮುಖ್ಯವಾಗಿ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಮಾಧ್ಯಮವಾದಗಳನ್ನು ಆಧರಿಸಿ ಈ ವಿಷಯವನ್ನು ಚರ್ಚಿಸಬಹುದು.ಮೊದಲಿಗೆ ಸಮಾಜಶಾಸ್ತ್ರೀಯವಾದ ತತ್ವಗಳ ಬೆಳಕಿನಲ್ಲಿ ಈ ಕುರಿತು ಸಂಶೋಧನೆಗಳು ನಡೆದಿರುವುದರಿಂದ ಅದರ ಆಧಾರದ ಮೇಲೆ ಚರ್ಚಿಸಲಾಗುವುದು.

ಆತ್ಮಹತ್ಯೆಗಳ ಕುರಿತು ಇದುವರೆವಿಗೂ ಲಭ್ಯವಿರುವ ಅತ್ಯಂತ ಮುಖ್ಯವಾದ ಪಠ್ಯ ಫ್ರೆಂಚ್ ಸಮಾಜಶಾಸ್ತ್ರಜ್ಞ ಎಮಿಲಿ ಡರ್ಖೀಮ್‌ನ suicide, [a study in sociology] ಶ್ರಿಕೃತಿ. 1897ರಷ್ಟು ಹಿಂದೆಯೇ ಯುರೋಪ್ ಮತ್ತು ಆಸ್ಟ್ರೇಲಿಯಾ ಖಂಡಗಳ ಕುರಿತ ಮಾಹಿತಿಯನ್ನು ಆಧರಿಸಿ ಮಾಡಿರುವ ಸಮಾಜ ಶಾಸ್ತ್ರೀಯ ಅಧ್ಯಯನವಿದು. ಇದು ನಮ್ಮ ಹೊಸ ಪೀಳಿಗೆಯ ಸಂಶೋಧಕರಿಗೆ ಇವತ್ತಿನ ಸಂದರ್ಭದಲ್ಲಿ ಮೇಲ್ಪಂಕ್ತಿಯಾಗುವಂತಿದೆ. ಪಶ್ಚಿಮದ ವಿದ್ವಾಂಸರ ಥಿಯರಿಗಳನ್ನು ಹೇಳುವ ಅಕಾಡಮಿಕ್ ಸಮಾಜ ವಿಜ್ಞಾನಿಗಳ ಟ್ರ್ಯಾಪಿನಿಂದ ಹೊರ ಬರಬೇಕಾದ ಅನಿವಾರ್ಯತೆಯೂ ಇದೆ. ದೇಶದುದ್ದಗಲಕ್ಕೂ ರೈತರ, ಕಾರ್ಮಿಕರ, ಯುವಕರ, ನೌಕರರ ಆತ್ಮಹತ್ಯೆಗಳು ತೀವ್ರಗೊಂಡಿದ್ದರೂ ಈ ಕುರಿತಂತೆ ಗಂಭೀರವಾದ ಅಧ್ಯಯನಗಳು ನಡೆಯದಿರುವುದಕ್ಕೆ ಏನು ಹೇಳುವುದು? ಡರ್ಖೀಮ್ ಆರ್ಥಿಕ, ಧಾರ್ಮಿಕ, ವೈವಾಹಿಕ, ಸೈನಿಕ,ಮಾನಸಿಕ ಹಾಗೂ ಪ್ರಾಕೃತಿಕ ಕಾರಣಗಳು ಹೇಗೆ ಮನುಷ್ಯನ ನಡೆಯನ್ನು ನಿಯಂತ್ರಿಸುತ್ತವೆ ಎಂದು ವಿವರಿಸುತ್ತಾನೆ. ವಸಾಹತುವಾದ ಮತ್ತು ಯುರೋಪಿನ ಬಂಡವಾಳಶಾಹಿ ಗುಣ ತೀವ್ರ ಸ್ವರೂಪದಲ್ಲಿದ್ದ ದಿನಗಳ ಮಾಹಿತಿಯನ್ನು ಆಧರಿಸಿ ನಡೆದಿರುವ ವಿಶ್ಲೇಷಣೆಯಾದ್ದರಿಂದ ಅವನ ಪ್ರಮೇಯಗಳಿಗೆ ಕೆಲವು ಮಿತಿಗಳಿವೆ. ಆಧುನಿಕ ಪ್ರಭುತ್ವಗಳ ರಾಜಕಾರಣವಿನ್ನೂ ಶೈಶವಾವಸ್ಥೆಯಲ್ಲಿರುವಾಗಲೇ ರೂಪುಗೊಂಡ ಸಿದ್ಧಾಂತವಿದು. ಡರ್ಖೀಮ್ ತನ್ನ ಅಧ್ಯಯನದಲ್ಲಿ ಮುಖ್ಯವಾಗಿ ನಾಲ್ಕು ಪ್ರಮೇಯಗಳನ್ನು ಮಂಡಿಸುತ್ತಾನೆ.
1.ಅಹಂವಾದಿ ಆತ್ಮಹತ್ಯೆಗಳು
2.ಪರಹಿತವಾದಿ ಆತ್ಮಹತ್ಯೆಗಳು
3.ಅಸಾಮಾಜಿಕರ ಆತ್ಮಹತ್ಯೆಗಳು
4.ವಿಧಿವಾದಿ ಆತ್ಮಹತ್ಯೆಗಳೆಂದು ವಿಬಾಗಿಸುತ್ತಾನೆ.
ಇವುಗಳ ಅನುಕರಣವಾದವೂ ಕ್ರಿಯಾಶೀಲ ವಾಗಿರುವುದನ್ನೂ ಪ್ರಸ್ತಾಪಿಸುತ್ತಾನೆ. ಫ್ರಾನ್ಸಿನ ಯಹೂದಿ ಕುಟುಂಬದಲ್ಲಿ ಹುಟ್ಟಿದ ಈತ ಆಧುನಿಕತೆ ಮತ್ತು ಕೈಗಾರಿಕೀಕರಣಗಳು ಸಮಾಜದ ನೈತಿಕ ಸ್ವಾಸ್ಥ್ಯವನ್ನು ಕೊಂದು ಹಾಕುತ್ತವೆ ಎಂದು ಭಾವಿಸಿಯೇ ತನ್ನ ಪ್ರಮೇಯಗಳನ್ನು ರೂಪಿಸಿದ.
 ಡರ್ಖೀಮನ ವಿಶ್ಲೇಷಣೆಗಳ ಪ್ರಕಾರ ಮನುಷ್ಯನ ಆತ್ಮಹತ್ಯೆಗಳ ಹಿಂದೆ ಅನುಕರಣಾವಾದದ ಪ್ರಭಾವವನ್ನು ವಿವರಿಸುತ್ತಾನೆ. ಪೆರುವಿಯನ್ನರು ಮತ್ತು ಮೆಕ್ಸಿಕನ್ನರು ತಮ್ಮ ಪವಿತ್ರ ಪೂಜಾಸ್ಥಳ ನಾಶವಾದ್ದರಿಂದ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ದಾಖಲಿಸುತ್ತಾನೆ.ಈ ಜನಾಂಗೀಯ ಸ್ವ-ನಾಶವು ಯಾವುದೇ ಕ್ರೂರ ದಾಳಿ ಕೋರರ ಕತ್ತಿ ಗುರಾಣಿಗಳಿಂದ ಸಂಭವಿಸಿದ ಸಾವುಗಳಿಗಿಂತ ಭೀಕರ (ಪು.141, suicide, [a study in sociology ಎನ್ನುತ್ತಾನೆ.
ನಿಸರ್ಗದ cosmic ಪ್ರಭಾವವು ಸಹ ಗಮನಾರ್ಹ ಕಾರಣ ಎಂಬುದನ್ನು ಕಂಡುಕೊಳ್ಳುತ್ತಾನೆ. ಪ್ರಕೃತಿ ತೀವ್ರ ಸ್ವರೂಪದ ಬಿಗುತನದಿಂದ ಕೂಡಿರುವ ದಿನಗಳಲ್ಲಿ ಈ ಪ್ರಮಾಣ ಹೆಚ್ಚು ಎಂದು ಸಾಧಿಸುತ್ತಾನೆ. ಅಂದರೆ ತೀವ್ರ ಚಳಿಗಾಲ ಮತ್ತು ತೀವ್ರ ಬೇಸಿಗೆಯ ದಿನಗಳಲ್ಲಿ ಈ ಸಾವುಗಳು ಹೆಚ್ಚು. ಬದಲಾಗಿ ವಸಂತ ಮಾಸದಲ್ಲಿ ಆಶ್ಚರ್ಯವೆನ್ನಿಸುವಷ್ಟು ಕಡಿಮೆ. ರವಿವಾರಗಳಂದು ಹೆಂಗಸರ ಆತ್ಮಹತ್ಯೆಗಳು ಹೆಚ್ಚು ಎಂದು ವಿವರಿಸುತ್ತಾನೆ. ಇಷ್ಟಾದ ಮೇಲೂ ಆತ್ಮಹತ್ಯೆ ಎಂದರೇನು? ಎಂಬ ಪ್ರಶ್ನೆ ಹುಟ್ಟುತ್ತದೆ. ಇದಕ್ಕೆ ಡರ್ಖೀಮನ ಉತ್ತರ ಹೀಗಿದೆ. ಆತ್ಮಹತ್ಯೆಯೆಂಬುದು ಒಂದು ರೀತಿಯ ಸಾವು, ಅದು ತತ್‌ಕ್ಷಣದ ಘಟನೆಯ ಫಲಿತಾಂಶವಾಗಿರುತ್ತದೆ.ಅದನ್ನು ಇತ್ಯಾತ್ಮಕ ಗುಂಡಿಟ್ಟು ಕೊಂದುಕೊಳ್ಳು ವುದು ಅಥವಾ ನೇತ್ಯಾತ್ಮಕ ಆಹಾರ ಸೇವಿಸಲು ನಿರಾಕರಿಸುವುದು ಎಂದು ಕರೆಯಬಹುದು. ಹೀಗೆ ವ್ಯಕ್ತಿಯೊಬ್ಬ ಸ್ವತಃ ವ್ಯಕ್ತಿಯೇ ತಂದುಕೊಳ್ಳುವ ಯಾವುದೇ ರೀತಿಯ ಸಾವುಗಳನ್ನು ಆತ್ಮಹತ್ಯೆಗಳೆಂದು ಕರೆಯಬಹುದು. ಆದರೆ ತುಂಬಾ ಸಂಕೀರ್ಣ ವಾದ ಈ ವಿಷಯವನ್ನು ಹೀಗೆ ಸರಳೀಕರಿಸಲಾಗದೆಂಬ ಎಚ್ಚರದಲ್ಲಿ ಸಮಸ್ಯಾತ್ಮಕಗೊಳಿಸುತ್ತಾ ಹೋಗುತ್ತಾನೆ.

ಆತ್ಮಹತ್ಯೆ ಎಂಬ ವಿಷಯದ ಕುರಿತೇ ಭಾರತದಲ್ಲಿ ಜಿಜ್ಞಾಸೆಗಳಿವೆ.ಆತ್ಮವಾದವನ್ನು ನಿರಾಕರಿಸುವ ಭೌತವಾದಿ ಚಿಂತಕರು ಈ ಪದವನ್ನು ಹೇಗೆ ಒಪ್ಪಿಯಾರು? ಆತ್ಮವಾದಿ ಚಿಂತನೆಗಳು ಭೌತವಾದದ ಮೇಲೆ ಯಾಜ್ಞವಲ್ಕನ ಕಾಲದಿಂದಲೇ ಯಜಮಾನಿಕೆ ಆರಂಭಿಸಿದ ಕಾರಣಕ್ಕೆ ಇದು ಸಹಜ ಪದವಾಗಿ ಉಳಿದುಕೊಂಡಿದೆ.ಅನುಕೂಲಕ್ಕಾಗಿ ಈ ಪದವನ್ನು ಆಧರಿಸಿಯೇ ವಿವರಿಸಬಹುದು.

ಡರ್ಖೀಮನ ಪ್ರಮೇಯವನ್ನು ಈ ಕೆಳಗಿನಂತೆ ವಿವರಿಸ ಬಹುದಾಗಿದೆ.

ಎಮಿಲಿ ಡರ್ಖೀಮ್

1. ಅಹಮಿಕೆಯ ಆತ್ಮಹತ್ಯೆಗಳು:

ಈ ನಮೂನೆಯ ಆತ್ಮಹತ್ಯೆಗಳಲ್ಲಿ ಸಮಾಜದ ಸಂರಚನೆ ದುರ್ಬಲವಾಗಿರುತ್ತದೆ.ವ್ಯಕ್ತಿಗೆ ಸಮಾಜದಿಂದ ನೈತಿಕ, ಭಾವನಾತ್ಮಕ ಬೆಂಬಲ ಅಲಭ್ಯವಾಗಿರುತ್ತದೆಯೆಂದು ಭಾವಿಸಲಾ ಗುತ್ತದೆ. ಆತನಿಗೆ ಪರಕೀಯ, ಒಬ್ಬಂಟಿಯೆಂಬ ಭಾವನೆಯು ಕಾಡುತ್ತಿರುತ್ತದೆ. ತಾನು ಅನಾಥನೆಂಬೊಂದು ಭಾವನೆ ಸುಳಿಯತೊಡಗಿದೊಡನೆ ಯಾಕೆ ಬದುಕಿರಬೇಕು?ಎಂಬ ಸಮಸ್ಯೆ ಶುರುವಾಗುತ್ತದೆ. ಈ ಪ್ರಮೇಯವನ್ನು ಸಮರ್ಥಿಸಲು ಡರ್ಖೀಮ್, ಯಹೂದಿ, ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಸಮಾಜವನ್ನಾಧರಿಸಿದ ಮಾಹಿತಿಗಳನ್ನು ವಿಶ್ಲೇಷಿಸುತ್ತಾನೆ. ಅದರ ಪ್ರಕಾರ,ಅತ್ಯಂತ ಗಟ್ಟಿಯಾದ ಸಾಮಾಜಿಕ ಸಂರಚನೆಯುಳ್ಳ ಯಹೂದಿಗಳಲ್ಲಿ ಆತ್ಮಹತ್ಯೆಗಳು ವಿರಳವೆನ್ನಿಸುವಷ್ಟು ಕಡಿಮೆಯೆಂದು ತೋರಿಸುತ್ತಾನೆ. ನಂತರದ ಸ್ಥಾನ ಕ್ಯಾಥೋಲಿಕ್ಕರದು. ಆದರೆ ಸಾಂಪ್ರದಾಯಿಕತೆಯ ವಿರುದ್ಧ ಬಂಡೆದ್ದು ಹೊಸಪಂಥವನ್ನು ಕಟ್ಟಿಕೊಂಡ ಪ್ರೊಟೆಸ್ಟೆಂಟರಲ್ಲಿ ಸಮಾಜ ಮತ್ತು ವ್ಯಕ್ತಿಗಳ ನಡುವಿನ ಸಂಘರ್ಷ ತೀವ್ರ ಸ್ವರೂಪದ್ದು. ಬಹುಪಾಲು ನಗರೀಕರಣಗೊಂಡ ಈ ಸಮುದಾಯಗಳಲ್ಲಿ ಆತ್ಮಹತ್ಯೆಗಳು ಹೆಚ್ಚು ಎಂದು ಸಮಸ್ಯಾತ್ಮಕಗೊಳಿಸಿ ನೋಡುತ್ತಾನೆ. ಬ್ರಿಟನ್‌ನ ಬಹುಸಂಖ್ಯಾತ ಸಮಾಜದ ಪ್ರೊಟೆಸ್ಟೆಂಟರಲ್ಲಿ ಆತ್ಮಹತ್ಯೆಗಳು ಕಡಿಮೆ ಎನ್ನುತ್ತಾನೆ. ಡರ್ಖೀಮ್ ದೊಡ್ಡ ಇಂಟಲೆಕ್ಚುವಲ್ ಆಗುವುದೇ ಇಲ್ಲಿ ತನ್ನ ಪ್ರಮೇಯಗಳಿಗೆ ಢಿಕ್ಕಿ ಹೊಡೆಯುವ ಸಂಗತಿಗಳನ್ನು ಬೈಪಾಸು ಮಾಡದೇ ವಿವರಿಸುತ್ತಾನೆ.

 ಅತ್ಯಂತ ಧಾರ್ಮಿಕವೆನ್ನಿಸುವ ಈ ಪ್ರಮೇಯವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಫ್ರಾನ್ಸಿನ ‘ಅಸ್ತಿತ್ವವಾದಿ’ ಚಿಂತನೆಗಳನ್ನು ಪರಿಶೀಲಿಸಬೇಕೆನ್ನಿಸುತ್ತದೆ. ಸಾರ್ತ್ರನ ‘ಗಾಜಿನ ಕೋಣೆ’ಯ ಉದಾಹರಣೆ, ಕಮೂನ ‘ಔಟ್ಸೈಡರ್’, ಕಾಪ್ಕ್ಕಾನ ‘ಮೆಟಮಾರ್ಪಸಿಸ್’ ಕಾದಂಬರಿಗಳು ತುಸು ಸಹಾಯಕವೆನ್ನಿಸುತ್ತವೆ. ಇದೆಲ್ಲಕ್ಕಿಂತ ಮಿಗಿಲಾಗಿ ಡರ್ಖೀಮನ ಥಿಯರಿಗೆ ಪೂರಕವೆಂಬಂತಿರುವ ಜರ್ಮನಿಯ ಮತ್ತೊಬ್ಬ ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೆಬರ್‌ನ ಆಧುನಿಕ ಸಮಾಜಶಾಸ್ತ್ರದ ಪಿತಾಮಹರಲ್ಲಿ ಒಬ್ಬ. 1905 ರಲ್ಲಿ protestant ethics and spirit of capitalism ಎಂಬ ಸಮಾಜಶಾಸ್ತ್ರೀಯ ಕೃತಿ ನೆರವಾದೀತು. ಬಂಡವಾಳವು ಸಾವಿರಾರು ವರ್ಷ ಗಳಿಂದ ರೂಢಿಯಲ್ಲಿದ್ದ ಸಾಟಿ ವಿನಿಮಯದಂತಹ ಕ್ರಮಗಳ ಬದಲಾಗಿ, ಅದು ರಾಜಕೀಯ ಬಂಡವಾಳ ಮತ್ತು ಸಾಹಸೀ ಬಂಡವಾಳವಾಗಿ ಮಾರ್ಪಡುವ ಸಂದಿಗ್ಧದಲ್ಲಿ ಕ್ರಿಶ್ಚಿಯಾನಿಟಿಯು ಆಧುನಿಕ ಕೈಗಾರಿಕಾ ರಾಜಕೀಯಕ್ಕೆ ಸಜ್ಜಾಗಲು ಪ್ರೊಟೆಸ್ಟೆಂಟಾಗಿ ಮಾರ್ಪಡುವ ಕ್ರಿಯೆಯನ್ನು ವಿವರಿಸುತ್ತಾನೆ. ನೀಷೆಯ ‘ದೇವರು ಸತ್ತ’ ಎಂಬ ನಿಲುವುಗಳನ್ನು ಸಹ ಈ ಪ್ರಮೇಯಕ್ಕೆ ಪೂರಕವಾಗಿ ನೋಡಬಹುದು. 19 ಮತ್ತು 20ನೆ ಶತಮಾನಗಳ ಅಬ್ಬರದ ನಗರೀಕರಣದೊಂದಿಗೆ ಆರಂಭದೊಂದಿಗೆ ಡರ್ಖೀಮನ ಈ ಆತ್ಮಹತ್ಯಾ ಪ್ರಮೇಯವನ್ನು ಅರ್ಥೈಸಿಕೊಳ್ಳಬಹುದೆನ್ನಿಸುತ್ತದೆ.

2. ಪರಹಿತವಾದಿ ಆತ್ಮಹತ್ಯೆಗಳು:
ಈ ಕೆಟಗರಿಗೆ ಸೇರಿದ ಮನುಷ್ಯರು ಕಠೋರ ಸಂರಚನೆಯುಳ್ಳ ಸಮಾಜಗಳಿಗೆ ಸೇರಿದವರು.ವ್ಯಕ್ತಿಯ ಯಾವುದೇ ಸ್ವಹಿತಾಸಕ್ತಿ ಇಲ್ಲಿ ನಗಣ್ಯವಾಗಿರುತ್ತದೆ. ಇಲ್ಲಿ ಚರ್ಚ್ ಮುಂತಾದ ಧಾರ್ಮಿಕ ಸಂಸ್ಥೆಗಳು, ಕುಟುಂಬ ಮುಂತಾದ ಪ್ರಾಥಮಿಕ ಸಂಸ್ಥೆಗಳು ಯಜಮಾನಿಕೆಯ ಸ್ಥಾನದಲ್ಲಿರುತ್ತವೆ. ಈ ಸಮಾಜಗಳಲ್ಲಿ ಒಡೆಯನಿಗಾಗಿ ಜೀವ ತೆಗೆದುಕೊಳ್ಳುವ ಸೇವಕರು, ವಯಸ್ಸಾಯಿತೆಂದು ಜೀವ ಕಳೆದುಕೊಳ್ಳುವ ವೃದ್ಧರು (ಸಲ್ಲೇಖನ ವ್ರತ ನೆನಪಾಗುತ್ತದೆ), ಗಂಡ ಸತ್ತನೆಂದು ಉಸಿರು ಕೊನೆಗೊಳ್ಳಿಸಿಕೊಳ್ಳುವ (ಸತಿ)-ಹೆಂಡತಿ ಮುಂತಾದವರು ಈ ಗುಂಪಿಗೆ ಸೇರುತ್ತಾರೆ. ಮಧ್ಯಕಾಲೀನ ಊಳಿಗಮಾನ್ಯ ಸಮಾಜಗಳಲ್ಲಿ ಈ ರೀತಿಯ ಮನಸ್ಥಿತಿಯನ್ನು ಕಾಣಬಹುದು. ‘ಸ್ವ’ದ ನಿರಾಕರಣೆ ಅಥವಾ ತ್ಯಾಗ ಇಲ್ಲಿನ ಪ್ರಮುಖ ಅಂಶ.
ಆಧುನಿಕ ಸಂದರ್ಭದಲ್ಲಿ ರಾಷ್ಟ್ರೀಯತೆಗಾಗಿ (ರಾಜಕೀಯ ರಾಷ್ಟ್ರೀಯತೆ-ಶ್ರೀಲಂಕಾದ ತಮಿಳು, ಫೆಲೆಸ್ತೀನ್ ಇತ್ಯಾದಿ. ಧಾರ್ಮಿಕ ರಾಷ್ಟ್ರೀಯತೆಗಾಗಿ ಇಸ್ಲಾಮಿಕ್ ಸ್ಟೇಟ್)ಆತ್ಮಾಹುತಿ ಬಾಂಬರುಗಳಾಗುತ್ತಿರುವವರನ್ನು ಇಲ್ಲಿ ಉದಾಹರಿಸಬಹುದೆನ್ನಿಸುತ್ತದೆ. ವಿಪರ್ಯಾಸವೆಂದರೆ ಆ ವ್ಯಕ್ತಿ ಹುಟ್ಟಿದ ಸಮಾಜಗಳು ಆಧುನಿಕ ಸಂದರ್ಭದಲ್ಲಿ ಆತನಿಗೆ ಹುತಾತ್ಮನ(?) ಪಟ್ಟ ಕಟ್ಟುತ್ತವೆ. ದಾಳಿಗೊಳಗಾದ ಸಮಾಜಗಳು ಭಯೋತ್ಪಾದಕನ ಪಟ್ಟ ನೀಡುತ್ತವೆ.ಕೆಲವೊಮ್ಮೆ ಇದು ಸಂಕೀರ್ಣಗೊಂಡು ಅಭಿವ್ಯಕ್ತವಾಗುತ್ತದೆ. (ಈ ಮಾದರಿಯ ಸಾವುಗಳನ್ನು ಆತ್ಮಹತ್ಯೆ ಎನ್ನಬಹುದೇ? ಅವು ರಾಜಕೀಯ ಕೊಲೆಗಳಲ್ಲವೇ? ಎಂಬ ಪ್ರಶ್ನೆಗಳೂ ಇವೆ.)

3. ಅಸಾಮಾಜಿಕರ ಆತ್ಮಹತ್ಯೆಗಳು:
ಡರ್ಖೀಮ್ ಇದನ್ನು anomismಎನ್ನುತ್ತಾನೆ. ಈ ಪರಿಕಲ್ಪನೆ ಬಹುಶಃ ಅವನದೇ. ಇಲ್ಲಿ ಅಹಂವಾದಿ ಆತ್ಮಹತ್ಯೆಗಳಂತೆ ಸಾಮಾಜಿಕ ವಿಧಿ ನಿಯಮಗಳು ತೀರಾ ತೆಳುರೂಪದಲ್ಲಿರುತ್ತವೆ. ವ್ಯಕ್ತಿ ಅತಿ ಒತ್ತಡದಲ್ಲಿರುತ್ತಾನೆ, ಆರ್ಥಿಕ ಬಿಕ್ಕಟ್ಟು ಮುಂತಾದ ಅವಮಾನಗಳಿಗೆ ವ್ಯಕ್ತಿ ಸಿಲುಕಿರುತ್ತಾನೆ. ಅಂದುಕೊಂಡ ಗುರಿಯನ್ನು ಸಾಧಿಸಲಾಗದ ವಿಫಲಗೊಂಡ ಮನಸ್ಥಿತಿ ಇಲ್ಲಿರುತ್ತದೆ.ಕೈಗಾರಿಕೀಕರಣದ ಸಂಕಟಗಳು ಮತ್ತು ಮಾರುಕಟ್ಟೆಯ ಬಿಕ್ಕಟ್ಟುಗಳು ಸೇರಿ ಹೊಸ ಕಾಲದಲ್ಲಿ ಆತ್ಮಹತ್ಯೆಗಳನ್ನು ಉತ್ಪಾದಿಸುತ್ತವೆ. ಈ ಸಮಾಜಗಳ ಸದಸ್ಯರಿಗೆ ತೃಪ್ತಿಯೆಂಬುದು ತಲ್ಲಣಗೊಂಡ ಮನಸ್ಥಿತಿಯಲ್ಲಿ ಸಾವು ಸರಳ ಪರಿಹಾರವೆಂಬಂತಾಗುತ್ತದೆ. ಸಮಾಧಾನ ಪಡಿಸಲು ಸಂತೈಸಲು ಸಮಾಜ ಸಶಕ್ತವಾಗಿರುವುದಿಲ್ಲ. ವ್ಯಕ್ತಿಗಳು ದ್ವೀಪಗಳಂತಾಗಿರುತ್ತಾರೆ.

4. ವಿಧಿವಾದಿ ನಿಲುವುಗಳು:

ಡರ್ಖೀಮ್ ತನ್ನ ಕೃತಿಯಲ್ಲಿ ಇದನ್ನು ವಿಶೇಷವಾಗಿ ವರ್ಗೀಕರಿಸಿಲ್ಲ. ಆದರೆ ಅನೇಕ ಕಡೆ ಪ್ರಸ್ತಾಪಿಸುತ್ತಾನೆ.ಮನುಷ್ಯನ ಅಸ್ತಿತ್ವಕ್ಕಿಂತ ಅವನನ್ನು ನಿಯಂತ್ರಿಸುವ,ಅವನ ನಡೆಗಳನ್ನು ನಿರ್ಧರಿಸುವ ಅನೂಹ್ಯ ಶಕ್ತಿಯೊಂದು ಕ್ರಿಯಾಶೀಲವಾಗಿದೆ ಎಂಬ ಪ್ರಾಚೀನ ಗ್ರೀಕ್ ಸಮಾಜಗಳ ನಿಲುವು ಇವು ಮನುಷ್ಯನ ಕಷ್ಟಗಳಿಗೆ ಸಮಾಧಾನ ನೀಡುವಂತೆಯೇ, ಕಂಗೆಡುವಂತೆ ಸಹ ಮಾಡುತ್ತವೆ.ತನ್ನ ಅಸ್ತಿತ್ವ ಅರ್ಥವಿಲ್ಲದ್ದು ಎನ್ನಿಸುವ ಸಂದರ್ಭಗಳಲ್ಲಿ ಸಾವಿನ ಯೋಚನೆ ಅವನನ್ನು ಆವರಿಸುತ್ತದೆ. ಭಾರತದಲ್ಲಿಯೂ ಕರ್ಮವಾದ ಮತ್ತು ಪುನರ್ಜನ್ಮವಾದಗಳು ಈ ರೀತಿಯ ಮನಸ್ಥಿತಿಯವು ಎನ್ನಿಸುತ್ತದೆ.ಒಟ್ಟಾರೆಯಾಗಿ ಆತ್ಮಹತ್ಯೆಗಳ ಕುರಿತು ಡರ್ಖೀಮನ ಪ್ರಮೇಯ ಗಳ ಮುಖ್ಯ ಅಂಶವೆಂದರೆ ಸಮಾಜದ ರಚನೆ ತೀರಾ ಕಠಿಣ ನಿಯಮಗಳಿದ್ದಾಗ ಆತ್ಮಹತ್ಯೆಗಳು ಹೆಚ್ಚಾಗಿ ರುತ್ತವೆ. ತೀರಾ ದುರ್ಬಲವಾಗಿದ್ದಾಗಲೂ ಸಂಭವಿಸು ತ್ತವೆ. ಅಪ್ಪಿ ಸಂತೈಸಬೇಕಾದ ಸಮಾಜದ ಕೈಗಳು ದೃತ ರಾಷ್ಟ್ರ ಬಾಹುಗಳಾದಾಗಲೂ ಮನುಷ್ಯ ಜೀವ ತೆಗೆದು ಕೊಳ್ಳುತ್ತಾನೆ. ಹಾಗಿಲ್ಲದೆ ಕೇಳುವವರಿಲ್ಲದಿದ್ದರೂ ಜೀವ ತೆಗೆದುಕೊಳ್ಳುತ್ತಾನೆ.

ಎಡ,ಬಲ ಮತ್ತು ಮಾಧ್ಯಮಿಕ ದೃಷ್ಟಿಕೋನಗಳು;

ಎಡ ಪಂಥೀಯರ ಗುರು ಕಾರ್ಲ್‌ಮಾರ್ಕ್ಸ್ ‘ಬೂರ್ಜ್ವಾ’ ಸಮಾಜಗಳಲ್ಲಿ ಮನುಷ್ಯರ ಅನ್ಯಗೊಂಡ ಭಾವನೆಗಳು ಆತ್ಮಹತ್ಯೆಗಳಿಗೆ ಕಾರಣ ಎನ್ನುತ್ತಾನೆ. ಪ್ರಾಯ್ಡನ ಮನಶ್ಯಾಸ್ತ್ರೀಯ ಸಿದ್ಧಾಂತದಲ್ಲಿನ ವಿಶ್ಲೇಷಣೆಯನ್ನು ಹುಸಿಯೆಂದು ತೋರಿಸುತ್ತಲೇ ಆತ ಶೇಕ್ಸ್‌ಪಿಯರ್ ಮತ್ತು ಬಾಲ್ಜಾಕರು ತಮ್ಮ ಕಲಾಕೃತಿಗಳಲ್ಲಿ ನಿರ್ಮಿಸುವ ಪಾತ್ರ ಮನೋ ಸಾಮಾಜಿಕ ವಿಶ್ಲೇಷಣೆ ಹೆಚ್ಚು ನಿಜ ಎನ್ನುತ್ತಾನೆ. ಊಳಿಗ ಮಾನ್ಯ ಮತ್ತು ಬಂಡವಾಳಿಗ ಸಮಾಜಗಳೆರಡೂ ದುರ್ಬಲನನ್ನು, ದುಡಿಯುವವನನ್ನು ತುಳಿದು ಸಾಮಾಜಿಕ, ರಾಜಕೀಯ ಸಮಾನತೆಗೆ ಅವಕಾಶವಿಲ್ಲದೆ ಮನುಷ್ಯ ದುಃಖಿತನಾಗುತ್ತಾನೆ. ಆಗ ಮನುಷ್ಯ ಕೆರಳುತ್ತಾನೆ, ಇಲ್ಲ ಸಾಯುತ್ತಾನೆ ಎಂಬುದು ಆತನ ನಿಲುವಿನ ಸಾರಾಂಶ.

ಸಂಶೋಧನೆಗಳು ಹಳೆಯ ಮತು ಸೋತ ನಾಗರಿಕತೆಗಳಲ್ಲಿ ಆತ್ಮಹತ್ಯೆಗಳು ಹೆಚ್ಚು ಎನ್ನುತ್ತವೆ. ಪುರೋಹಿತರ ನಿಯಮಗಳಿಗೆ ಅನುಸಾರವಾಗಿ ರೂಪುಗೊಳ್ಳುವ ಈ ಸಮಾಜಗಳಲ್ಲಿ ಮನುಷ್ಯನ ಅಸ್ತಿತ್ವವು ತೃಣಸಮಾನ, ಭಗವದ್ಗೀತೆಯಂತೆ ಮನುಷ್ಯ ನಿಮಿತ್ತ ಮಾತ್ರ.ಲ್ಯಾಟಿನ್ ಅಮೆರಿಕದ, ಭಾರತದ ಹಾಗೂ ಪೂರ್ವದ ಕೆಲವು ನಾಗರಿಕತೆಗಳಿಗೆ ಹೋಲಿಸಿ ನೋಡಬಹುದು. ಭಾರತದಲ್ಲಿ ಸನಾತನವಾದಿ ಹಾಗೂ ತರತಮವಾದಿ ಸಮಾಜದ ಸಂರಚನೆಯನ್ನು ಶ್ರೇಷ್ಠವೆಂದು ಪ್ರತಿಪಾದಿಸುವವನು ಸುಲಭವಾಗಿ ಬಲಪಂಥೀಯ ದೃಷ್ಟಿಕೋನಕ್ಕೆ ಸಮೀಪದವನಾಗುತ್ತಾನೆ. ಊಳಿಗಮಾನ್ಯ ಭಾರತದಲ್ಲಿ ನಿರ್ಮಾಣಗೊಂಡ ಜಾತಿಪದ್ಧತಿ, ಕರ್ಮಸಿದ್ಧಾಂತ, ಹಣೆಬರಹ, ವಿಧಿವಾದ, ಪುನರ್ಜನ್ಮವಾದಗಳು ಸಮಾಜವನ್ನು ಎಂದೆಂದಿಗೂ ತಲೆ ಮೇಲೆತ್ತದಂತೆ ತುಳಿದು ಹಾಕಿವೆ.

ಜಗತ್ತಿನ ಬೇರೆ ದೇಶಗಳಲ್ಲಿ ಧಾರ್ಮಿಕ ತತ್ವಗಳು ಮನುಷ್ಯನ ಪ್ರಗತಿಗೆ ಪೂರಕವಾಗಿ ಬದಲಾಗಿವೆ ಅಥವಾ ಸಮಾಜಗಳೇ ಕಾಲದ ಅಗತ್ಯವನ್ನು ಮನಗಂಡು ಸಂರಚನೆಗಳನ್ನು ನಿರ್ಮಿಸಿಕೊಂಡಿವೆ. ಭಾರತದಲ್ಲಿ ಮಾತ್ರ ಹಾಗಾಗಲಿಲ್ಲ. ಬುದ್ಧ ಬಂದರೂ ಆತನ ಸಿದ್ಧಾಂತವನ್ನೇ ದೇಶಾಂತರ ಗೊಳಿಸಲಾಯಿತು. ಅಸಂಖ್ಯಾತ ಸಮಾಜ ಸುಧಾರಕರು ಬಂದರು, ವಚನ ಚಳುವಳಿಯಂತಹ ಪ್ರಯತ್ನಗಳು ನಡೆದವು, ಆದರೆ ಬಹುಪಾಲು ಸಂದರ್ಭಗಳಲ್ಲಿ ಅವುಗಳನ್ನು ಜೀರ್ಣಿಸಿಕೊಂಡಂತೆ ಸನಾತನವಾದ ವರ್ತಿಸುತ್ತಿದೆ. ಬುಡಕಟ್ಟು ಸಮಾಜಗಳಲ್ಲಿ ಹುಟ್ಟುವ ಬದಲಾಗಬೇಕೆಂಬ ಹಂಬಲ ಜಾತಿ ಸಮಾಜಗಳಲ್ಲಿ ಕಾಣುವುದಿಲ್ಲ. ಈ ಕುರಿತು ವ್ಯಾಸರಾಯ ಬಲ್ಲಾಳರು ‘ತಮ್ಮ ಬಂಡಾಯ’ ಕಾದಂಬರಿಯಲ್ಲಿ ‘ಚರ್ಮ ಸುಲಿದರೂ ಚಿಂತೆಯಿಲ್ಲ ಮುಂದೆ ತಿನ್ನಲು ಮೇವಿದ್ದರೆ ಸಾಕು’ ಎಂಬುದು ಭಾರತದ ಜಾತಿ ಸಮಾಜಗಳ ವರ್ತನೆ.

ಅತ್ಯಾಚಾರಕ್ಕೊಳಗಾದ ಮಹಿಳೆ, ಅವಮಾನಕ್ಕೊಳಗಾದ ಪುರುಷ ಥಟ್ಟನೆ ಜೀವ ತೆಗೆದುಕೊಳ್ಳಲು ಯೋಚಿಸುತ್ತಾರೆ. ತಮ್ಮನ್ನು ದುರ್ದೆಸೆಗೆ ತಳ್ಳಿದವರ ವಿರುದ್ಧದ ಪ್ರತಿಭಟನೆ ಯೆಂದರೆ ಸಾಯುವುದು ಮಾತ್ರವೇ? ಸಾಮಾನ್ಯವಾಗಿ ಸತ್ತ ವ್ಯಕ್ತಿಯ ಕುರಿತಂತೆ ಜನ ಆಡುವ ಕುರಿತಂತೆ ಮಾತುಗಳಿವು ,ಅವನ ಹಣೆಬರಹದಲ್ಲಿ ಇದ್ದಿದ್ದೇ ಅಷ್ಟು. ಯಾವ ಜನ್ಮದಲ್ಲಿ ಮಾಡಿದ ಪಾಪಾನೋ ಎಂಬಂತೆ ಇರುತ್ತವೆ. ಇಂಥ ಮನಸ್ಥಿತಿಯಲ್ಲಿ ಯಾವ ಬದಲಾವಣೆ, ಯಾವ ಕ್ರಾಂತಿ ನಡೆಯಲು ಸಾಧ್ಯ. ಇವುಗಳನ್ನು ಗಮನಿಸಿದರೆ ಭಾರತೀಯ ಸಮಾಜವನ್ನು ಆಳುತ್ತಿರುವ ಸಿದ್ಧಾಂತಗಳನ್ನು ಹೇಗೆ ರೂಪಿಸಲಾಗಿದೆ ಎಂದು ಅರ್ಥೈಸಿಕೊಳ್ಳಬಹುದು.ಹುಟ್ಟಿನಿಂದ ಹಿಡಿದು ಸಾಯುವವರೆಗೆ ಈ ತರ್ಕಗಳು ಬೆನ್ನೇರಿ ಮನುಷ್ಯನನ್ನು ನಪುಂಸಕನನ್ನಾಗಿಸಿವೆ.

 ಕರ್ಮ ಮುಂತಾದ ಪ್ರಮೇಯಗಳನ್ನು ಬೌದ್ಧೀಯರು ವಿರೋಧಿಸುತ್ತಾರಾದರೂ, ಆಸೆಯನ್ನು ಸಾಮಾನ್ಯೀಕರಿಸುತ್ತಾರೆ. ಮಾರ್ಕ್ಸ್‌ವಾದಿಗಳು ಇದನ್ನು ವಿರೋಧಿಸುತ್ತಾರೆ. ಹಸಿದವನ ಆಸೆಗೂ ಬಂಡವಾಳಿಗನ ಆಸೆಯನ್ನೂ ಒಂದೇ ತಕ್ಕಡಿಯಲ್ಲಿಡುವುದು ನ್ಯಾಯವೇ ಎಂಬುದೇ ವಿರೋಧಕ್ಕೆ ಕಾರಣ. ಬಂಡವಾಳಿಗನ ದುರಾಸೆಯಿಂದಲೇ ಸಮಾಜದಲ್ಲಿ ತರತಮ್ಯಗಳು ಹುಟ್ಟುವುದಕ್ಕೆ ಕಾರಣ. ಆದ್ದರಿಂದ ಬಡವನ ಸಮಾನತೆಯ ಕನಸನ್ನು ಬೆಂಬಲಿಸಬೇಕು ಎಂಬುದು ಇವರ ಪ್ರಮೇಯ. ತಕ್ಕಡಿ ಬಡವರ ಪರ ತುಸು ಹೆಚ್ಚು ವಾಲಬೇಕು ಎಂಬುದು ಸಮಾಜವಾದಿಗಳ ಆಶಯ.
ಬುದ್ಧನ ಆಸೆಯ ಸಿದ್ಧಾಂತ ಬಡವನ ಅನ್ನದ, ಬಟ್ಟೆಯ, ವಸತಿಯ, ವಿದ್ಯೆಯ ಹಕ್ಕುಗಳನ್ನು ನಿರಾಕರಿಸಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದು ಯಥಾಸ್ಥಿತಿವಾದಿ ನಿಲುವು ಎಂದು ಮಾರ್ಕ್ಸಿಸ್ಟರು ಪ್ರತಿಪಾದಿಸುತ್ತಾರೆ. ಆದರೆ ಅಂಬೇಡ್ಕರರು ಮಾತ್ರ ಮಾರ್ಕ್ಸಿಸ್ಟರ ನಿಲುವನ್ನು ವಿರೋಧಿಸುತ್ತಾರೆ. ಬುದ್ಧ ಮತ್ತು ಮಾರ್ಕ್ಸ್ ರ ಪ್ರಮೇಯಗಳಲ್ಲಿ ಅಂಥಾ ವ್ಯತ್ಯಾಸವೇನಿಲ್ಲ ಎಂದು ಸಾಧಿಸುತ್ತಾರೆ.ವ್ಯತ್ಯಾಸವಿರುವುದು ಸಾಧಿಸುವ ದಾರಿಗಳ ಬಗ್ಗೆ ಮಾತ್ರ.ಅದು ಹಿಂಸೆಯ ದಾರಿಯೋ ಅಥವಾ ಅಹಿಂಸೆಯ ದಾರಿಯೋ ಎಂಬುದೇ ನಿರ್ಣಾಯಕ ಎನ್ನುತ್ತಾರೆ.

ಇಷ್ಟೆಲ್ಲದರ ನಡುವೆ ಆತ್ಮಹತ್ಯೆಗಳು ಮಾತ್ರ ನಿರಾತಂಕವಾಗಿ ನಡೆಯುತ್ತಿವೆ. ಸಮಸ್ಯೆಗೆ ಪೂರ್ಣ ಉತ್ತರಗಳು ಮಾತ್ರ ಇನ್ನೂ ಸಿಕ್ಕಿಲ್ಲ.
ನವಮಾಧ್ಯಮ; ಹೊಸ ಬಂಡವಾಳವಾದ ಮತ್ತು ಜಾಹೀರಾತು ಸಂಸ್ಕೃತಿ ಕಳೆದ ಶತಮಾನದ ತೊಂಬತ್ತರ ದಶಕವೆಂಬುದು ಭಾರತದ ಇತಿಹಾಸದ ಗಾಲಿಗೆ ಅಪರಿಮಿತ ವೇಗವನ್ನು ಒದಗಿಸಿತು.ಈ ವೇಗಕ್ಕೆ ಇಂಧನವಾಗಿದ್ದು ಮಾತ್ರ ಮಾಧ್ಯಮಗಳು.ಉಪಗ್ರಹಗಳು ಜನಸಾಮಾನ್ಯರ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಹೊತ್ತ ನಂತರ ಈ ವೇಗ ಇನ್ನಷ್ಟು ತೀವ್ರಗೊಂಡಿತು. ಟಿ.ವಿ, ಮೊಬೈಲು, ಇಂಟರ್ನೆಟ್ ಇತ್ಯಾದಿಗಳು ಕುಗ್ರಾಮಗಳಿಗೂ ತಲುಪಲಾರಂಭಿಸಿದವು. ಕನ್ನಡದ ಪ್ರಜ್ಞೆಯಂತಿದ್ದ ತೇಜಸ್ವಿಯವರು ಬ್ಯೂರಾಕ್ರಸಿಯ ಕಿರುಕುಳ ತಪ್ಪಿಸಲು ಇದನ್ನು ವರದಾನವೆಂದು ಭಾವಿಸುತ್ತಲೆ ಜಾಗತೀಕರಣವನ್ನು ಸ್ವಾಗತಿಸಿದರು. ಮೊಗಳ್ಳಿಯವರು ದಲಿತರು ಮತ್ತು ಜಾಗತೀಕರಣವೆಂಬ ಕೃತಿಯೊಂದನ್ನು ರಚಿಸಿ ಜಾಗತೀಕರಣವು ದಲಿತರ ಪಾಲಿಗೆ ವರದಾನವೆಂದು ಮುನ್ನುಡಿ ಬರೆದರು. (ಈಗ ರೈತರ ಆತ್ಮಹತ್ಯೆಗಳು, ದೇಶದಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೂ ಆಧುನಿಕ ಬಂಡವಾಳವಾದಕ್ಕೂ ಇರುವ ಸಂಬಂಧಗಳ ಕುರಿತು ಮೊಗಳ್ಳಿ ಏನನ್ನುತ್ತಾರೆ ಎಂಬ ಕುತೂಹಲವಿದೆ.)

 ಆತ್ಮಹತ್ಯೆಗಳಿಗೂ ಈ ಪ್ರಕ್ರಿಯೆಗೂ ಏನು ಸಂಬಂಧ? ಎಂಬ ಪ್ರಶ್ನೆ ಹುಟ್ಟುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇದರ ಭೀಕರತೆ ಅರ್ಥವಾಗುತ್ತಾ ಹೋಗುತ್ತದೆ. ಎಷ್ಟೆಲ್ಲ ತರತಮ್ಯವಾದಿ ಸಮಸ್ಯೆಗಳಿದ್ದರೂ ಭಾರತೀಯ ಸಮಾಜಗಳು ಸಮುದಾಯ ಪ್ರಜ್ಞೆಯನ್ನು ಕಳೆದುಕೊಂಡಿರಲಿಲ್ಲ.ಹರಿಕಥೆ, ನಾಟಕ,ಬಯಲಾಟ ಮುಂತಾದ ಜನರ ಕಲೆಗಳ ಮೂಲಕ ಪುರೋಹಿತಶಾಹಿ ತನಗೆ ಬೇಕಾದ ಶೋಷಣೆಯ ಸಿದ್ಧಾಂತವನ್ನು ಭಿತ್ತಿ ಬೇರುಗಳನ್ನು ಆಳಗೊಳಿಸಿತ್ತು.ಆಧುನಿಕತೆ ಮತ್ತು ನಗರೀಕರಣಗಳು ಈ ಬೇರುಗಳನ್ನು ತುಸುಮಟ್ಟಿಗೆ ಅಲುಗಾಡಿಸಿದ್ದವು. ಆತ್ಮಹತ್ಯೆ ಎಂಬುದು ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ ಅದು ನಗರೀಕರಣದ ಸಾಂಕ್ರಾಮಿಕ ಪಿಡುಗು ಎನ್ನುತ್ತಾನೆ ಡರ್ಖೀಮ್. ಕಳೆದೆರಡು ದಶಕಗಳಲ್ಲಿ ಬಹುಶಃ ಈ ಪ್ರಕ್ರಿಯೆ ಇನ್ನಷ್ಟು ತೀವ್ರಗೊಂಡಿತು.ಇದಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದು ಮಾತ್ರ ನವಮಾಧ್ಯಮಗಳು.ಇವು ಮನುಷ್ಯನನ್ನು ಸಮಾಜದ ಸಾಮೂಹಿಕ ಪ್ರಜ್ಞೆಯಿಂದ ವಿಮುಖಗೊಳ್ಳಲು ಪ್ರಮುಖವಾಗಿ ಕಾರಣವಾಗಿವೆಯೆನ್ನಿಸುತ್ತದೆ.ನವ ಬಂಡವಾಳವಾದದ ಪ್ರಬಲ ತುತ್ತೂರಿಗಳಾದ ಇವು ಹೊಸದೊಂದು ಜಾಹೀರಾತು ಸಂಸ್ಕೃತಿಯನ್ನು ಬಿತ್ತಿದವು.ಈ ಸಂಸ್ಕೃತಿಯು ಮನುಷ್ಯನನ್ನು ಏಕಾಂಗಿಯಾಗಿಸಿ,ದ್ವೀಪವಾಗಿಸಿ ಸುಖವನ್ನು, ನೆಮ್ಮದಿಯನ್ನು, ಸಂತೋಷವನ್ನು ಕೊಳ್ಳಬಹುದು ಎಂಬ ಭ್ರಮೆ ಹುಟ್ಟಿಸಿದವು.ಅವನನ್ನು ಸಾಮಾಜೀಕರಣಗೊಳಿಸುವ ಬದಲು ವ್ಯಕ್ತಿವಾದದ ಕಡೆಗೆ ಹೊರಳಿಸಿದವು.

ಆಧುನಿಕ ಮನುಷ್ಯರು ತಮ್ಮ ಎಲ್ಲ ಸಮಸ್ಯೆಗಳಿಗೂ ಟಿ.ವಿ ಉತ್ತರ ಕೊಡಬಲ್ಲುದು ಎಂದು ನೋಡತೊಡಗಿದರು. ಆದರೆ ಅವುಗಳು ಮಾತ್ರ ಕವಿ ಬ್ರೆಕ್ಟ್ ಹೇಳುವಂತೆ ‘‘ಹೊಸ ಆಂಟೆನಾಗಳು ಭಿತ್ತರಿಸಿದ್ದು ಹಳೆಯ ಮೂರ್ಖತನಗಳನ್ನೆ’’ ಎಂಬುದಕ್ಕೆ ಪೂರಕವಾಗಿ ವರ್ತಿಸತೊಡಗಿವೆ. ಜ್ಯೋತಿಷ್ಯ, ಭವಿಷ್ಯ ಹೇಳುವ ಪುರೋಹಿತ ಶಾಹಿ ಮನುಷ್ಯ ವಿರೋಧಿ ನಿಲುವು ಬೆಳೆಸಲು ಕಾರಣವಾದವು. ಇದರ ಬಿಕ್ಕಟ್ಟಿನ ಲಾಭ ಪಡೆದುಕೊಂಡ ವ್ಯವಸ್ಥೆಯಿಂದಾಗಿ ಹಳ್ಳಿಗಳಲ್ಲಿ ಸಾಲು ಸಾಲು ಹೆಣಗಳು ಉರುಳುತ್ತಿದ್ದರೂ ದೇವಾಲಯ, ಮಸೀದಿ, ಚರ್ಚ್‌ಗಳು ವೈಭವೋಪೇತವಾಗುತ್ತಿವೆ.ಬಹುಶಃ ಸಮಾಜಗಳಿಗೆ ಕಷ್ಟ ಬಂದಾಗಲೆಲ್ಲ ಈ ಪುರೋಹಿತಶಾಹಿ ಮನಸ್ಥಿತಿ ಸುಖವಾಗಿರುತ್ತದೆಯೆನ್ನಿಸುತ್ತದೆ.

ಈ ಹೊಸ ಸಾಧನಗಳಿಂದ ಮನುಷ್ಯ ಕೊಳ್ಳುವ ಕೇಂದ್ರವಾಗಿ ಮಾತ್ರವಾಗಿ ಮಾರ್ಪಾಡಾದ. ಭೌತಿಕವಾದ ಸಲಕರಣೆಗಳು ಮಾತ್ರ ಸುಖದ ಸಾಧನಗಳು ಎಂಬ ಸುಳ್ಳನ್ನು ಇವು ಬೋಧಿಸುತ್ತಿವೆ. ಇದರ ಪ್ರತಿಫಲ ಜನರ ದುಡಿಮೆಯು ಪರದೇಶಗಳ, ದೊಡ್ಡ ಬಂಡವಾಳಿಗರ ಪಾಲಾಗುತ್ತಿದೆ. ಬಡವನ ಸಂಪತ್ತು ಕರಗುತ್ತಲೇ ಹೋಗುತ್ತಿದೆ. (ಇವತ್ತಿನ ಪತ್ರಿಕೆಗಳಲ್ಲಿ ಭಾರತ ಜಗತ್ತಿನ ಶ್ರೀಮಂತರ ದೇಶಗಳಲ್ಲಿ ಏಳನೆಯದು.ಅದೇ ಸಂದರ್ಭದಲ್ಲಿ ತರುಣ ದಂಪತಿಗಳಿಬ್ಬರೂ ಉತ್ತರ ಕರ್ನಾಟಕದ ರೈಲ್ವೆ ನಿಲ್ದಾಣದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರೆ ಅವರ ಅನಾಥ ಮಗುವನ್ನು ಸಾಕಲು ಕುಟುಂಬದವರು ಬಡತನದ ಕಾರಣಕ್ಕೆ ಸಾಕಲಾಗದು ಎಂದು ನಿರಾಕರಿಸುವ ಧಾರುಣ ಸ್ಥಿತಿ ವರದಿಯಾಗಿದೆ.) ಕುಟುಂಬ ಮತ್ತು ವ್ಯಕ್ತಿಗಳನ್ನು ದ್ವೀಪವಾಗಿಸಿದ ನವಮಾಧ್ಯಮಗಳು ನಿಧಾನಕ್ಕೆ ಹತಾಶೆಯ ಕಡೆಗೆ ತಳ್ಳಲಾರಂಭಿಸಿದವು. ಕಾರ್ನಾಡರ ‘ಯಯಾತಿ’ ನಾಟಕದಲ್ಲಿ ಶರ್ಮಿಷ್ಟೆ, ಎಲ್ರೂ ಭಾವಿ ಮೇಲೆ ನಿಂತಿದ್ದಾರೆ ತಾನೊಬ್ಬಳೇ ಒಳಗೆ ಬಿದ್ದಿದ್ದೇನೆ ಎಂಬ ಭಾವನೆಯೆ ಸಾಕು ಸಾವಿನ ಕುರಿತು ಯೋಚಿಸಲು ಎನ್ನುತ್ತಾಳೆ. ಹೊಸ ಮಾಧ್ಯಮಗಳು ಸೃಷ್ಟಿಸುತ್ತಿರುವ ಮನಸ್ಥಿತಿಯು ಹತಾಶೆಗೊಂಡ ಮನುಷ್ಯನನ್ನು ಹೀಗೆ ಕೊಂದುಕೊಳ್ಳುವ ಸ್ಥಿತಿಗೆ ದೂಡಿವೆ ಎನ್ನಿಸುತ್ತದೆ.

ಮನುಷ್ಯ ಸಮಾಜಗಳ ಪಾಲಿಗೆ ಹತಾಶೆಯೆಂಬುದು ದೊಡ್ಡ ಶಾಪ. ಮಾರ್ಕ್ಸ್‌ವಾದಿಗಳ ಪ್ರಕಾರ ಮನುಷ್ಯರ ಪ್ರಗತಿ ಏರುಮುಖದಲ್ಲಿದ್ದಾಗ ಪ್ರತಿಭಟನೆಗಳು ಹುಟ್ಟುತ್ತವೆ, ಉಲ್ಟಾ ದಿಕ್ಕಿನ ಕಡೆಗೆ ಕುಸಿಯತೊಡಗಿದರೆ ಹತಾಶ ಸ್ಥಿತಿಗೆ ಸಿಲುಕಿಕೊಳ್ಳುತ್ತದೆ. ಆಗ ಸಾಯುವುದನ್ನು ಕುರಿತು ಚಿಂತಿಸುತ್ತಾನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top