ಸಾಮಾಜಿಕ ಮಾಧ್ಯಮಗಳೆಂಬ ಅಂತರ್ಜಾಲದ ಆಕಾಶ

-

ಅಂತರ್ಜಾಲದ ಮಾಧ್ಯಮಗಳು ಯಾವ ಉದ್ದೇಶದಿಂದ ಸೃಷ್ಟಿಯಾ ಗಿವೆಯೋ ಗೊತ್ತಿಲ್ಲ. ಪ್ರಾಯಃ ಸುಲಭವಾಗಿ ಸಂಪರ್ಕಿಸುವುದು ಇವುಗಳ ಆರಂಭಿಕ ಉದ್ದೇಶವಿರಬಹುದು. ಆದರೆ ಭಾರತದಂತಹ ದೇಶದಲ್ಲಿ ಇವು ಅಂತರ್ಜಾಲ ಮತ್ತು ಸ್ಮಾರ್ಟ್ ಮೊಬೈಲ್ ಮೋಹಿಗಳನ್ನು ತಲುಪಬಹುದು; ಇನ್ನುಳಿದ ಜನರನ್ನು ತಲುಪಲು ಸಾಧ್ಯವಿಲ್ಲ. ಆದರೂ ಜನರು ಈ ಮಾಧ್ಯಮಗಳ ಮೂಲಕ ವಿಶ್ವಪ್ರಸಿದ್ಧರಾದೆವೆಂದು ಬಿನ್ನಾಣ ಮಾಡುವುದು ದೊಡ್ಡ ದುರಂತ. ಇದು ಭ್ರಮೆಯೇ ಅಥವಾ ಅಜ್ಞಾನವೇ?

ನಾನು ಈ ಮಾಧ್ಯಮಗಳನ್ನು ಬಳಸುತ್ತೇನೆ; ಗಮನಿಸುತ್ತೇನೆ. ನನಗನ್ನಿಸಿದಂತೆ ಇಂದಿನ ತಲೆಮಾರಿನ ಅಭಿವ್ಯಕ್ತಿಗಳಲ್ಲಿ ಒಂದಂತೂ ಸ್ಪಷ್ಟ: ಸಂಪರ್ಕ, ಮಾಹಿತಿ, ಮನರಂಜನೆ ಮತ್ತು ಶಿಕ್ಷಣ ಎಂಬ ತಲೆಬರಹವನ್ನು ಹೊಂದಿಯೂ ಸಂಪರ್ಕ ಮತ್ತು ಮನರಂಜನೆಯೇ ಮುಖ್ಯ ಅಂಶಗಳಾದಂತೆ ಕಾಣಿಸುತ್ತದೆ. ಇದನ್ನು ಹೊರತುಪಡಿಸಿದರೆ ಇನ್ನೆಲ್ಲವೂ ಸ್ವಕೇಂದ್ರಿತ ಮತ್ತು ವಿಶೇಷಣಪೂರಕ. ಜನಪ್ರಿಯ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್‌ಆ್ಯಪ್ ಮುಂತಾದ (ಏಕೆಂದರೆ ಇನ್ನೂ ಏನೇನು ಇದೆಯೋ ನನ್ನ ಮಿತ ಅರಿವಿಗೆ ಗೊತ್ತಿಲ್ಲ!) ಅಂತರ್ಜಾಲ ಸಂಪರ್ಕದಲ್ಲಿ ನಿತ್ಯ ಹರಿದಾಡುವ ಸಂದೇಶಗಳು, ಭಾವಚಿತ್ರಗಳು, ಅಭಿಮತಗಳು ಇಂದಿನ ಸಮಾಜದ ಗತಿಸ್ಥಿತಿಯನ್ನು ಯಥೇಚ್ಛವಾಗಿ ಪ್ರತಿಬಿಂಬಿಸುತ್ತವೆ. ಅಂತರ್ಜಾಲ ಭಾರೀ ಕ್ರಾಂತಿಯನ್ನೇ ಸೃಷ್ಟಿಸಿದೆ. ಜೊತೆಗೆ ಹಳ್ಳಿ-ಪಟ್ಟಣ- ನಗರಗಳ ವ್ಯತ್ಯಾಸಗಳನ್ನು ಇಲ್ಲವಾಗಿಸುವುದರೊಂದಿಗೇ ತಲೆಮಾರುಗಳ ಅಂತರವನ್ನು ಮತ್ತು ಮೇಲ್ಪದರದ ಪಾಂಡಿತ್ಯವನ್ನು ಇನ್ನಷ್ಟು ಹಿಗ್ಗಿಸಿದೆ. ಇವನ್ನು ವಿಸ್ತರಿಸಿ ಹೇಳಬಹುದಾದರೆ, ಅಂತರ್ಜಾಲವನ್ನು ಹೊಂದಿದ ವ್ಯಕ್ತಿಗೆ ತಾನೆಲ್ಲೇ ಇದ್ದರೂ ವಿಶ್ವದ ಕೇಂದ್ರದಲ್ಲಿದ್ದೇನೆಂದು ಭಾಸವಾಗಬಹುದು. ತನಗೆ ಬೇಕಾದ ಮಾಹಿತಿಯನ್ನು ಗೂಗಲ್, ಯಾಹೂ ಮೂಲಕ ತಕ್ಷಣ ಪಡೆಯಬಹುದಾದ್ದರಿಂದ ಯಾವ ಪಾಮರನೂ ಪವಾಡಸದೃಶವಾಗಿ ಒಂದು ದಿನದ, ಇಲ್ಲವೇ ಒಂದು ಕ್ಷಣದ ಪಂಡಿತನಾಗಬಹುದು. ಹಿಂದೆಲ್ಲ ಒಂದು ಭಾಷಣ, ಒಂದು ಲೇಖನಕ್ಕಾಗಿ ಸಾಕಷ್ಟು ಅಲೆಯ ಬೇಕಾಗಿತ್ತು; ಕನಿಷ್ಠ ಅನೇಕ ಗ್ರಂಥಗಳ ಕೆಲವು ಪುಟಗಳನ್ನಾದರೂ ಮಗುಚಬೇಕಾಗಿತ್ತು. ವಿಶ್ವವಿದ್ಯಾನಿಲಯಗಳ, ಅಧ್ಯಾಪನದ ಮಂದಿ ಈ ದೃಷ್ಟಿಯಿಂದ ಅದೃಷ್ಟವಂತರಾಗಿದ್ದರು; ಯಾವ ಆಹ್ವಾನ ಬಂದರೂ ಅನಂತರ ಗ್ರಂಥಾಲಯಕ್ಕೆ ಹೋಗಿ ಅಗತ್ಯ ದ್ರವ್ಯ ಸಂಚಯನದ ಅವಕಾಶ ಹೊಂದಿದ್ದರು. ಉಳಿದವರು, ಅಂದರೆ ಈ ಅಕಾಡಮಿಕ್ ವರ್ತುಲದ ಹೊರಗಿನವರು ತಮ್ಮ ಮೂಲದ್ರವ್ಯವನ್ನಷ್ಟೇ ಹಂಚಬೇಕಾದ ಪರಿಸ್ಥಿತಿಯನ್ನು ಹೊಂದಿದ್ದರು. ಆದರೆ ಇಂದು ಕ್ಷಣಾರ್ಧದಲ್ಲಿ ಎಲ್ಲರಿಗೂ ಅಗತ್ಯ ಮಾಹಿತಿ ಲಭ್ಯವಾಗುತ್ತದೆ; ‘ಬೆರಳ ತುದಿಯಲ್ಲಿ ಮಾಹಿತಿ’ ಎಂಬ ಉಕ್ತಿ ವಾಸ್ತವವಾಗಿದೆ. ಇದರಿಂದಾಗಿ ಯಾರು ಬೇಕಾದರೂ ಯಾವ ವಿಚಾರವಾಗಿಯೂ ಮಾತನಾಡುವ ಅರ್ಹತೆಯನ್ನು ಸಂಪಾದಿಸಿದ್ದಾನೆ (ಳೆ) ಮತ್ತು ಇದರ ಮುಂದುವರಿದ ಭಾಗವಾಗಿ ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ನಿರರ್ಗಳವಾಗಿ ಟೀಕಾ ಪ್ರವಾಹವನ್ನು ಹರಿಸಬಹುದಾಗಿದೆ. ಪರಿಣಾಮವಾಗಿ ಇಂದು ಈ ಮಾಧ್ಯಮಗಳಲ್ಲಿ ಸರ್ವ ಸ್ವತಂತ್ರರಾಗಿ ಮಾತನಾಡಬಹುದಾಗಿದೆ.

ಇಂದು ಪೂರಕ ಮತ್ತು ಮಾರಕ ಫಲಿತಾಂಶಗಳನ್ನು ನೀಡಿದ ಉದಾಹರಣೆಗಳು, ನಿದರ್ಶನಗಳು ಹೇರಳವಾಗಿವೆ. ಪರಿಣತಿಯಿದ್ದರಂತೂ (ಅ)ವಾಸ್ತವ ಚಿತ್ರಗಳ ಮೂಲಕ ಹಳಿಯಬಹುದು; ಕೆರಳಿಸಬಹುದು; ಅವಮಾನಿಸಬಹುದು. ಚಾರಿತ್ರ ಹನನಕ್ಕೆ ಈ ಮಾಧ್ಯಮಗಳು ವ್ಯವಸ್ಥಿತ ಇಂಬನ್ನು ನೀಡುತ್ತವೆ. ಹೈದರಾಬಾದಿನ ಹೊಟೇಲೊಂದರ ಮೇಲೆ ಕೋಪಗೊಂಡ ಕಂಪ್ಯೂಟರ್ ವಿದ್ಯಾರ್ಥಿಯೊಬ್ಬ ಅಲ್ಲಿನ ಆಹಾರಕ್ಕೆ ನಾಯಿ ಮಾಂಸ ಹಾಕುತ್ತಾರೆಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ ರಾದ್ಧಾಂತ ಎಬ್ಬಿಸಿ ಆ ಹೊಟೇಲ್‌ಗೆ ಭಾರೀ ವ್ಯಾವಹಾರಿಕ ಹಾನಿ ಮಾಡಿ ಈಗ ಕಂಬಿ ಎಣಿ ಸುತ್ತಿದ್ದಾನೆ. ಕರ್ನಾಟಕದ ರಾಜಕಾರಣಿ ಉಗ್ರಪ್ಪನವರ ವಿರುದ್ಧ ಇಬ್ಬರು ಬೆದ ರಿಕೆ ಹಾಕಿ ಈಗ ದಸ್ತಗಿರಿಯಾಗಿದ್ದಾರೆ. ಇಂತಹ ನಿದರ್ಶನಗಳು ಅಸಂಖ್ಯ.

ಹೊಗಳಬೇಕಾದರೂ ಈ ಮಾಧ್ಯಮಗಳು ಸಾಕಷ್ಟು ನೆರವಾಗುತ್ತವೆ. ಹೊಗಳಿಕೆ ಇರಬೇಕಾದದ್ದೇ. ಆದರೆ ಈ ಹೊಗಳಿಕೆಯಲ್ಲಿ ವ್ಯವಸ್ಥಿತ ಹುನ್ನಾರಗಳೆಷ್ಟು, ನೈಜ ಮೆಚ್ಚುಗೆಯೆಷ್ಟು ಎಂದು ಗೊತ್ತಾಗದ ವಾತಾವರಣ ನಿರ್ಮಾಣಗೊಂಡಿದೆ. ಏನೇ ಇರಲಿ, ಏನೇ ಬರಲಿ, ಕೆಲವು ಜನಪ್ರಿಯ ಭಾರತೀಯ ಆಂಗ್ಲ ನುಡಿಗಟ್ಟುಗಳಾದ amazing! Awesome! Fantastic! Super (Sooooper!) ಇವೆಲ್ಲ ಈ ಮಾಧ್ಯಮಗಳ ಮತ್ತು ಯುವಜನಾಂಗದ (ವಿದ್ಯಾವಂತ-ಅವಿದ್ಯಾವಂತರೆಂಬ ವ್ಯತ್ಯಾಸವಿಲ್ಲದೆ!) ಸಾಮಾನ್ಯ ಅಭಿವ್ಯಕ್ತಿಗಳಾಗಿವೆ. ಇವಕ್ಕೂ ವ್ಯವಧಾನವಿಲ್ಲದ ಮಂದಿ ಕೆಲವು ಚಿತ್ರಸಂಜ್ಞೆಗಳ ಮೂಲಕ ಉತ್ತರಿಸಿ ಸುಮ್ಮನಿಲ್ಲದೆ ಸುಮ್ಮನಾಗುತ್ತಾರೆ. ಇಲ್ಲೊಂದು ಸಂಪರ್ಕ ಸೇತುವೆ ನಿರ್ಮಾಣವಾದರೂ ಅದು ತಾತ್ಕಾಲಿಕದಂತೆ- ಮತ್ತು ಶುದ್ಧ ತೋರಿಕೆಯಂತೆ- ಭಾಸವಾಗುವುದೂ ಉಂಟು. ಹುಟ್ಟುಹಬ್ಬದ ದಿನವಂತೂ ಈ ಮಾಧ್ಯಮಗಳೇ ನೆನಪಿಸುವ ಕೆಲಸ ಮಾಡುವುದರಿಂದಾಗಿ ಶುಭಾಶಯಗಳನ್ನು ಹೇಳುವ ಸುಲಭ ಕಾಯಕ ಲಭ್ಯವಾಗುತ್ತದೆ. ಇದಕ್ಕೆ ನಿಜಕ್ಕೂ ಸಂತಸವಾಗಿಯೋ ಅಥವಾ ತೋರಿಕೆಗೆ ತೋರಿಕೆಯಾಗಿಯೋ (ಉರಿಗೆ ಉರಿಯಂ ತೋರ್ಪಂತೆ!) ಪ್ರತಿ ಕೃತಜ್ಞತೆ ಪ್ರಾಪ್ತವಾಗುತ್ತದೆ. ಈ ಪರಸ್ಪರ ನಟನೆಯಲ್ಲಿ ಅಂತರಂಗದ ಆಪ್ತತೆಯು ಎಲ್ಲೋ ಕಳೆದುಹೋದ ಅನುಭವವಾಗುತ್ತದೆ.

ಇನ್ನು ಕೆಲವರು ಇದ್ದಾರೆ: ಎಲ್ಲದಕ್ಕೂ ಎಲ್ಲರಿಗೂ ಉತ್ತರಿಸುವವರು. ತಮಗೆ ಅಗತ್ಯವಿರಲಿ-ಇಲ್ಲದಿರಲಿ, ಸಂಬಂಧವಿರಲಿ- ಇಲ್ಲದಿರಲಿ, ಅವರು ಎಲ್ಲದಕ್ಕೂ ಒಂದು ಸಾಲು ಮಾತು-ಸಂಜ್ಞೆಯ ಮೂಲಕವಾದರೂ ಅಭಿವ್ಯಕ್ತಿಸದೇ ಇರಲಾರರು. ಇದನ್ನು ಗುಮಾಸ್ತಗಿರಿಯೆಂದು ಕರೆಯುತ್ತಾರೆ- ಅಂದರೆ ಕಚೇರಿಗೆ ಏನೇ ಪತ್ರ ಬಂದರೂ ಅದಕ್ಕೊಂದು ಸ್ವೀಕೃತಿ ನೀಡಬೇಕಲ್ಲವೇ? ಹಾಗೆ. ಈ ಜನರಿಗೆ ಇಷ್ಟೊಂದು ಬಿಡುವಾದರೂ ಎಲ್ಲಿದೆಯೆಂಬ ಅಚ್ಚರಿ, ಸಂಶಯ ನಮಗೆ ಬಾರದಿರಲಾರದು. It’s only a busy man who finds time! ಎಂಬ ಮಾತನ್ನು ನೆನಪಿಸಬಹುದಾದರೆ ಇವರೆಲ್ಲ ಅತ್ಯಂತ ಬಿಡುವಿಲ್ಲದ ಮಂದಿಯೇ ಸರಿ.

ಕೆಲವೊಮ್ಮೆ ಮಾತಿಗೆ ಮಾತು ಬೆಳೆದು ಇವುಗಳ ನಡುವೆ ಹಲವು ಮಾತುಗಳು ಬೆರೆತು ಯಾವ ಪ್ರತಿಕ್ರಿಯೆ ಯಾವುದಕ್ಕೆ ಎಂಬ ಸಂಬಂಧ ಗೊತ್ತಾಗದೆ ಎಲ್ಲ ಗೋಜಲುಗೋಜಲಾಗುವುದೂ ಪರಸ್ಪರ ಸೌಹಾರ್ದ ಬೆಳೆಸಬೇಕಾದ ಸಾಮಾಜಿಕ ಮಾಧ್ಯಮಗಳು ಅರ್ಥ-ಅಪಾರ್ಥದ ರಣರಂಗವಾಗುವುದೂ ಉಂಟು. ಕೊನೆಗೆ ಯಾರಾದರೊಬ್ಬರು ಬೌಂಡರಿ ಲೈನಿನಿಂದ ಹೊರಹೋದರೆ ಮಾತ್ರ ಕ್ಷೇಮ.

ಹಿಂದೆಲ್ಲ ಮಹತ್ಸಾಧನೆ ಮಾಡಿದವರನ್ನು ಜನರು ಗೌರವಿಸುತ್ತಿದ್ದರು; ಕೊನೇ ಪಕ್ಷ ಅವರನ್ನು ಟೀಕಿಸಲು ಹಿಂಜರಿಯುತ್ತಿದ್ದರು. ಅಂತರ್ಜಾಲ ಮಾಧ್ಯಮವು ಬಂದ ತರುವಾಯ ಈ ಅಳುಕನ್ನು ಮತ್ತು ಸಾಮಾಜಿಕವಾಗಿ ಇರಬೇಕಾದ ಕನಿಷ್ಠ ಸೌಜನ್ಯವನ್ನು ಕಳೆದುಕೊಂಡಂತೆ ಮನುಷ್ಯ ವರ್ತಿಸಲಾರಂಭಿಸಿದ್ದಾನೆ. ಯಾರಾದರೂ ಗಂಭೀರವಾದದ್ದನ್ನೇನಾದರೂ ಹೇಳಹೊರಟರೆ ಅವರಿಗೆ ಅಷ್ಟದಿಕ್ಕುಗಳಿಂದಲೂ ಹರಿತವಾದ ಶರಪ್ರಯೋಗವಾಗುತ್ತದೆ ಇಲ್ಲವೇ ಹೊಗಳಿಕೆಯ ಹೊನ್ನಶೂಲ ಪ್ರಾಪ್ತವಾಗುತ್ತದೆ. ಮತಾಂಧತೆಗೆ, ಮೂಲಭೂತವಾದಕ್ಕೆ, ಸುಳ್ಳು ವದಂತಿಯ ಹಬ್ಬುವಿಕೆಗೆ ಈ ಮಾಧ್ಯಮಗಳು ಸುಲಭ ತುತ್ತಾಗಿವೆ. ಆದ್ದರಿಂದ ಬೈಯ್ಯುವ ವ್ಯಕ್ತಿಗೆ ತನ್ನ ಟೀಕೆಗೆ ಬಲಿಯಾಗುವ ವ್ಯಕ್ತಿಯ ಯೋಗ್ಯತೆಯನ್ನು ತನ್ನ ಯೋಗ್ಯತೆಯೊಂದಿಗೆ ಹೋಲಿಸಿ ಪರೀಕ್ಷಿಸುವ ವ್ಯವಧಾನವಿರುವುದಿಲ್ಲ. ಇಂತಹ ಸಂದರ್ಭಗಳನ್ನು ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಆಮಿರ್ ಖಾನ್ ಮುಂತಾದವರ ಕುರಿತು ಬಂದ ಟೀಕೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಕಾರಂತ, ಕುವೆಂಪು, ಬೇಂದ್ರೆ ಮುಂತಾದ ಘನತರರು ಇಂದು ಬದುಕಿದ್ದರೆ ಪ್ರಾಯಃ ಇಂತಹ ಕಲ್ಲೆಸೆತಕ್ಕೆ ಗುರಿಯಾಗುತ್ತಿದ್ದರೇನೋ?

ಅಂತರ್ಜಾಲದ ಸಾಮಾಜಿಕ ಮಾಧ್ಯಮಗಳು ಎಲ್ಲ ಬಗೆಯ ಮಾಹಿತಿಯನ್ನು ಹೊರಹಾಕುವುದರಿಂದ ಮಾಹಿತಿ ತನ್ನ ಬೆಲೆ ಕಳೆದುಕೊಳ್ಳು ವಂತಾಗಿದೆ. ಚಿನ್ನವು (ವಾಹನವೂ!) ಎಲ್ಲರಲ್ಲೂ ಇದ್ದರೆ ಅದಕ್ಕೆ ಬೆಲೆಯೆನಿದೆ? ಹಾಗೆಯೇ ಈ ಮಾಧ್ಯಮಗಳು ಎಲ್ಲವನ್ನೂ=ಎಲ್ಲವನ್ನೂ ನೀಡುವುದರಿಂದಾಗಿ ಕುತೂಹಲವೂ ತಣ್ಣಗಾಗುತ್ತಿದೆ. ಪತ್ರಿಕೆಗಳಿಗೆ ಇಂದು ಫೋಟೊಗಳು ಸುಲಭ ಲಭ್ಯ. ಪಾರಂಪರಿಕ ಕ್ಯಾಮರಾಗಳಿಗೂ ಕೆಲಸ ಕಡಿಮೆ. ಮೊಬೈಲ್ ಕ್ಯಾಮರಾಗಳು ವಿದ್ಯುತ್ ವೇಗದಲ್ಲಿ ಎಂತಹ ಫೋಟೊಗಳನ್ನೂ ವೀಡಿಯೊಗಳನ್ನೂ ತಲುಪಿಸಬಲ್ಲವು. ಇಷ್ಟಾದರೂ ನೀವು ಏನೇ ಹೇಳಿ ಅದು ಇಲ್ಲಿದೆ ಎಂದು ಯಾರೋ ಒಬ್ಬ ಅದರ ಚಿತ್ರ ಸಹಿತ ವಿವರಗಳನ್ನು ನೀಡಲು ಸಿದ್ಧನಿರುತ್ತಾನೆ. ಅಲ್ಲಿಗೆ ಸರ್ವರಿಗೆ ಸಮಪಾಲು; ಸರ್ವರಿಗೆ ಸಮಬಾಳು!

ಅಂತರ್ಜಾಲದ ಸಾಮಾಜಿಕ ಮಾಧ್ಯಮಗಳ ವ್ಯಾಪ್ತಿಯನ್ನು ಹೇಳಿ ದಂತೆಯೇ ಅವುಗಳ ಮಿತಿಯನ್ನೂ ಹೇಳಬೇಕಾಗಿದೆ. ಕಂಪ್ಯೂಟರಿಗೆ ಹೋಲಿಸಿದರೆ ಇಂದು ಮೊಬೈಲ್ ಹೆಚ್ಚು ಅಂತರ್ಜಾಲ ವಾಹಕ. ಯುವಜನಾಂಗದಲ್ಲಿ ಮೊಬೈಲ್ ಹಸ್ತಭೂಷಣ. ಅದರಿಂದ ಬಹಳಷ್ಟು ಜ್ಞಾನಾರ್ಜನೆಯಗುತ್ತದೆಂದು ತಿಳಿದರೂ ಅದಕ್ಕಿಂತಲೂ ಹೆಚ್ಚು ಹಾನಿಯಾ ಗುತ್ತದೆಂದು ಯಾರೂ ಹೇಳುತ್ತಿಲ್ಲ. ಅಂತರ್ಜಾಲದ ಸೈಟುಗಳಲ್ಲಿ ಸುಮಾರು ಮೂವತ್ತೇಳು ಶೇಕಡಾದಷ್ಟು ಲೈಂಗಿಕ ಮನರಂಜನೆಗೇ ಮೀಸಲಾದ ಸೈಟುಗಳೆಂದು ವರದಿಯಾಗಿದೆ. ಮೊಬೈಲುಗಳನ್ನು ಯುವಕ- ಯುವತಿಯರು ಅರಿವಿಗಾಗಿ ಎಷ್ಟು ಬಳಸುತ್ತಾರೋ ಅದರ ಎರಡರಷ್ಟು ಚಾಟಿಂಗ್ ಮತ್ತು ಇಂತಹ ಸೈಟುಗಳನ್ನು ನೋಡಲು ಬಳಸುತ್ತಾರೆ. ಅಷ್ಟೇ ಅಲ್ಲ, ಅರಿವಿಲ್ಲದೇ ಇಂತಹ ಸೈಟುಗಳನ್ನು ಸಂದರ್ಶಿಸಿ ಬಲಿಯಾದವರ ಸಂಖ್ಯೆ ಸಾಕಷ್ಟಿದೆ.

ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಮಾಧ್ಯಮಗಳಲ್ಲಿ ಖಾತೆ ತೆರೆದವರು ತಮಗಿರುವ ಹಿಂಬಾಲಕರ ಸಂಖ್ಯೆಯ ಮೇಲೆ ತಮ್ಮ ಜನಪ್ರಿಯತೆಯನ್ನು ಅಳೆಯುತ್ತಾರೆ. ಇದರಿಂದಾಗಿ ಅಮಿತಾಭ್ ಬಚ್ಚನ್ ಹೆಚ್ಚೋ ಮೋದಿ ಹೆಚ್ಚೋ ಸನ್ನಿ ಲಿಯೋನ್ ಹೆಚ್ಚೋ ಎಂದು ದಿನವಹಿ ಲೆಕ್ಕ ನಡೆಯುತ್ತದೆ. ಮನರಂಜನೆಗಾಗಿ ಮಾಧ್ಯಮಗಳನ್ನು ಅರಸುವವರಿಗೆ ಈ ಲೆಕ್ಕ ಭಾರೀ ಮನರಂಜನೆಯನ್ನು ನೀಡುವುದರಲ್ಲಿ ಸಂಶಯವಿಲ್ಲ. ಆದರೆ ಇನ್ನೂ ವಿಷಾದದ ಸಂಗತಿಯೆಂದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ದೇಶ ಸಂಬಂಧೀ ನೀತಿ ನಿಯಮಗಳನ್ನು, ರಾಜಕೀಯ-ಸಾಮಾಜಿಕ-ಧಾರ್ಮಿಕ ವಿಚಾರಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ ಇಡೀ ದೇಶಕ್ಕೆ ಸಾರಿದ್ದೇವೆಂದು ತಿಳಿಯುವುದು. ತಮಾಷೆಯ ಸಂಗತಿಯೆಂದರೆ ಯಾವ ಪತ್ರಿಕಾ ರಂಗವನ್ನು ಮೀರಿ ಮತ್ತು ಅದನ್ನು ಅಳಿಸಿಹಾಕುವ ತಾಕತ್ತಿರುವ ಶಕ್ತಿಯೆಂದು ಪ್ರತಿಬಿಂಬಿಸಲಾಗುತ್ತಿದೆಯೋ ಅಂತಹ ಟಿವಿ-ಅಂತರ್ಜಾಲ ಮಾಧ್ಯಮಗಳು ತಮ್ಮ ಪ್ರಚಾರಕ್ಕಾಗಿ ಪತ್ರಿಕೆಗಳನ್ನು ಅವಲಂಬಿಸಿರುವುದು. ಪತ್ರಿಕೆಗಳೂ ಅಷ್ಟೇ: ಅಂತರ್ಜಾಲದಲ್ಲಿ ಬಂದ ಇಂತಹ ಟೀಕೆ-ಟಿಪ್ಪಣಿಗಳನ್ನು ಅವುಗಳ ವಿವರರಹಿತ ಅಸ್ತಿತ್ವವನ್ನು ಅಲಕ್ಷಿಸಿ ಅಭಿಪ್ರಾಯಗಳಂತೆ ಪ್ರಕಟಿಸುತ್ತವೆ. ಹೀಗೆ ಒಂದು ಅಘೋಷಿತ ಮತ್ತು ಅಲಿಖಿತ ಕೊಡುಕೊಳ್ಳುವಿಕೆಯನ್ನು ಪತ್ರಿಕಾ ರಂಗ ಮತ್ತು ಅಂತರ್ಜಾಲ ಮಾಧ್ಯಮಗಳು ನಡೆಸುತ್ತಿವೆ. ಜಯಲಲಿತಾ ಅವರ ಸಾವಿನ ಸಂಬಂಧ ಅನೇಕ ರಾಷ್ಟ್ರ ನಾಯಕರ ಸಂದೇಶಗಳು ಅವರವರ ಟ್ವಿಟ್ಟರ್ ಖಾತೆಗಳಲ್ಲಿ ಪ್ರಕಟವಾದವು. ಇವನ್ನು ಓದಲು ಈ ದೇಶದ ಬಹುಸಂಖ್ಯಾತ ಹಳ್ಳಿಗರಿಗೆ, ಅನಕ್ಷರಸ್ಥರಿಗೆ, ಅಂತರ್ಜಾಲ ವಂಚಿತರಿಗೆ ಸಾಧ್ಯವಾಗುವುದಿಲ್ಲ ಮತ್ತು ಆದ್ದರಿಂದ ನೀವು ಹೇಳಿದ್ದು, ಬರೆದದ್ದು ಕಾಡ ಬೆಳದಿಂಗಳಿನಂತೆ ಅಥವಾ ಅರಣ್ಯರೋದನದಂತೆ ವ್ಯರ್ಥವೆಂದು ಯಾರು ಯಾರಿಗೆ ಹೇಳಬೇಕು?

ಕೊನೆಗೂ ಈ ಎಲ್ಲ ಸಾಮಾಜಿಕ ಮಾಧ್ಯಮಗಳು ನೀಡುವ ಆಪ್ತ ಅವಕಾಶದ ಉತ್ಸಾಹದಲ್ಲಿ ವಿವೇಚನೆ, ಪ್ರಬುದ್ಧತೆ ತನ್ನ ಹೊಣೆಯನ್ನು ನಿರ್ವಹಿಸದಿದ್ದರೆ ನಾವು ಗಳಿಸಿದ್ದಕ್ಕಿಂತ ಹೆಚ್ಚನ್ನು ಕಳೆದುಕೊಳ್ಳುವುದು ಖಂಡಿತ. ಆ ಎಚ್ಚರವನ್ನು ಸಾಮಾಜಿಕ ಅಂತರ್ಜಾಲ ಮಾಧ್ಯಮಗಳು ನೀಡಲು ಸಾಧ್ಯವಾದರೆ ಒಳ್ಳೆಯದು.
 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top