--

ತಾಜಾ ತರಕಾರಿಗಳೊಂದಿಗೆ ಪ್ರೀತಿ ತೋರಿದ ಊರು

ದಿನಾ ಬೆಳಗ್ಗೆ ದೇರೆಬೈಲಿನಿಂದ ಬಜಪೆಗೆ ಪ್ರಯಾಣ ಮಾಡುವ ಸುಖ ಪ್ರಾಪ್ತವಾಯಿತು. ಆಗಷ್ಟೇ ಪ್ರಾರಂಭವಾಗಿತ್ತು ಹಂಪನಕಟ್ಟೆಯಿಂದ ಬಜಪೆಯವರೆಗಿನ ಬಲ್ಲಾಳ್ ಮೋಟಾರ್ಸ್‌ನವರ 47 ನಂಬ್ರದ ಬಸ್ಸು. ಈ ಪ್ರಯಾಣವನ್ನು ಸುಖವೆಂದೇ ತಿಳಿಯುತ್ತೇನೆ. ಯಾಕೆಂದರೆ ಅದುವರೆಗೆ ನೋಡದ ಅದೆಷ್ಟೋ ವಿಚಾರಗಳನ್ನು ನೋಡುವಂತಾಯ್ತು. ಹಾಗೆಯೇ ಇದುವರೆಗೆ ಅನುಭವಿಸಿದ ಎಷ್ಟೋ ವಿಷಯಗಳನ್ನು ಇನ್ನೊಂದು ನೆಲೆಯಿಂದ ಅರ್ಥೈಸಲು ಸಾಧ್ಯವಾಯಿತು.

ಮುಂಜಾನೆಯ ಪ್ರಕೃತಿಯ ಸೌಂದರ್ಯ ನಿತ್ಯವೂ ಹೊಚ್ಚ ಹೊಸದು. ರಸ್ತೆಯ ಅಕ್ಕ ಪಕ್ಕದ ತೋಟಗಳು, ಗುಡ್ಡಗಳು, ಗದ್ದೆಗಳು, ಮರವೂರು ಸೇತುವೆಯ ಮೇಲೆ ಹೋಗುವಾಗ ಕಾಣುವ ಫಲ್ಗುಣೀ ನದಿ, ಬೀಸುವ ತಂಪಾದ ಗಾಳಿ, ಕಾವೂರು ದೇವಸ್ಥಾನದ ಅಪಾಯಕಾರಿ ತಿರುವು, ಅದರ ಪಕ್ಕದಲ್ಲೇ ಇದ್ದ ತಾವರೆಯ ಕೊಳ, ಇವೆಲ್ಲವೂ ಖುಷಿ ಕೊಟ್ಟ ವಿಚಾರಗಳು. ಬಸ್ಸು ಪೇಟೆಯಿಂದ ಹಳ್ಳಿಗೆ ಹೋಗುತ್ತಿದ್ದುದರಿಂದ ಬೆಳಗ್ಗೆ ಹಾಗೂ ಸಂಜೆ ಜನದಟ್ಟಣೆ ಇರುತ್ತಿರಲಿಲ್ಲ. ಬಸ್‌ನಲ್ಲಿ ಪರಿಚಿತರಾದ ಅನೇಕ ಹಿರಿಯರಾದ ಶಿಕ್ಷಕಿಯರು ಸ್ನೇಹಿತರಾದರು. ಪ್ರತೀ ದಿನದ ಸಹಪ್ರಯಾಣಿಕರಾದರು. ಈ ಕಾಲಘಟ್ಟದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಪುರುಷರ ಸಂಖ್ಯೆಯನ್ನು ಸಮಸಮಗೊಳಿಸುವಂತೆ ಹೆಣ್ಣು ಮಕ್ಕಳು ಶಿಕ್ಷಕಿಯರಾಗಿದ್ದರು. ಇವರಲ್ಲಿ ನನ್ನ ತಾಯಿಯ ವಯಸ್ಸಿನವರಿಂದ ಹಿಡಿದು ನನ್ನ ವಯಸ್ಸಿನವರೆಗಿನವರೂ ಇದ್ದರು. ಶಾಲೆಗಳಲ್ಲಿ ಅಧ್ಯಾಪಕರಾಗಿರುವ ಪುರುಷರು ಸ್ಥಳೀಯರಾದರೆ ಹೆಣ್ಣು ಮಕ್ಕಳು ಪೇಟೆಯಿಂದ ಹಳ್ಳಿಗೆ ಹೋಗುತ್ತಿದ್ದುದು ಕೂಡಾ ವಿಶೇಷವೇ. ಮರವೂರು ಸೇತುವೆಯ ಪ್ರಾರಂಭದ ನಿಲ್ದಾಣದಿಂದ ದೊಡ್ಡ ಹುಡುಗರು ಬಜಪೆ ಚರ್ಚ್ ಶಾಲೆಯ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿಗೆ ಬಸ್ಸು ಹತ್ತುತ್ತಿದ್ದರೆ, ಕೆಂಜಾರಿನಿಂದ ನಂತರದ ನಿಲ್ದಾಣಗಳಿಂದ ನನ್ನ ಶಾಲೆಗೆ ಅಂದರೆ ಹೋಲಿ ಫ್ಯಾಮಿಲಿ ಗರ್ಲ್ಸ್ ಹೈಸ್ಕೂಲಿಗೆ ಹುಡುಗಿಯರು ಬಸ್ಸು ಹತ್ತುತ್ತಿದ್ದರು. ಈ ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ಒಬ್ಬರಿಗೊಬ್ಬರು ಸಹಕರಿಸುತ್ತಾ, ಸೀಟು ಕೊಡುವಲ್ಲಿ, ಬ್ಯಾಗುಗಳನ್ನು ಹಿಡಿದುಕೊಳ್ಳುವಲ್ಲಿ ಇದ್ದ ಸ್ನೇಹ, ಸೌಹಾರ್ದವನ್ನು ಕಂಡು ಖುಷಿಯಾಗುತ್ತಿತ್ತು.

ನಾನು ಶಾಲಾ ಕಾಲೇಜಿಗೆ ಹೀಗೆ ದಿನ ನಿತ್ಯ ಪ್ರಯಾಣ ಮಾಡಿರಲಿಲ್ಲವಲ್ಲಾ. ಆದ್ದರಿಂದ ಶಾಲಾ ಕಾಲೇಜಿನ ಮಕ್ಕಳ ಈ ಸ್ನೇಹ ನನ್ನ ಪಾಲಿಗೆ ಕಂಡ ಅಪೂರ್ವ ಕ್ಷಣಗಳಾಗಿತ್ತು. ಈ ಬಸ್ಸು ಹತ್ತುತ್ತಿದ್ದ ಹೆಚ್ಚಿನ ವಿದ್ಯಾರ್ಥಿನಿಯರು ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಾಗಿದ್ದರೆ, ಹುಡುಗರು ಮಾತ್ರ ಹಿಂದುಗಳಾಗಿದ್ದರು. ಅಂದರೆ ಹಿಂದೂ ಹೆಣ್ಣು ಮಕ್ಕಳು ಹತ್ತಿರದ ಶಾಲೆಗಳಲ್ಲಿ 5, 6, 7ನೆಯ ತರಗತಿಗಳಲ್ಲಿ ಶಾಲೆ ಬಿಟ್ಟು ಬೀಡಿ ಕಟ್ಟಲು ಶುರು ಮಾಡಿರಬೇಕು. ಪೇಜಾವರದ ಬಸ್ ನಿಲ್ದಾಣದಿಂದ ಕೆಲವು ಹಿಂದೂ ಹುಡುಗಿಯರು ನಮ್ಮ ಹೈಸ್ಕೂಲಿಗೆ ಬರುತ್ತಿದ್ದರು. 1969ರ ಆ ದಿನಗಳಲ್ಲಿಯೂ ಪ್ರಾಥಮಿಕ ಶಾಲೆಗೇ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿ ಕುಳಿತುಕೊಂಡ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯೇ ಇತ್ತು. ನನ್ನ ಜೊತೆಗೆ ಪ್ರಯಾಣಿಸುತ್ತಿದ್ದ ಶಿಕ್ಷಕಿಯರಲ್ಲಿ ಕ್ರಿಶ್ಚಿಯನ್ ಹಾಗೂ ಹಿಂದೂಗಳಿದ್ದರು ಎನ್ನುವುದರ ಜೊತೆಗೆ ಮುಸ್ಲಿಂ ಮಹಿಳೆಯರು ಇರಲಿಲ್ಲ ಎನ್ನುವುದು ಕೂಡಾ ಸಾಮಾಜಿಕವಾದ ಒಂದು ಅರಿವು ಆಗಿ ಇಂದು ಗೋಚರಿಸುತ್ತದೆ. ಹೀಗೆ ನನ್ನ ಸಹಪ್ರಯಾಣಿಕರಲ್ಲಿ ಎಲ್ಲರ ನೆನಪುಗಳಿದ್ದರೂ ಇಬ್ಬರು ನನ್ನ ಬದುಕಿನ ಮುಂದಿನ ಪ್ರಯಾಣದಲ್ಲಿ ಭೇಟಿಯಾಗುತ್ತಿದ್ದುದರಿಂದ ಹೆಸರು ಉಳಿದಿರುವುದು ಗಂಗಾ ಟೀಚರ್ ಹಾಗೂ ಕಮಲಾ ಟೀಚರ್‌ರವರದ್ದು. ನನ್ನ ಶಾಲೆಯಲ್ಲಿ ಹೆಚ್ಚಿನವರು ಬೆಥೆನಿ ಸಂಸ್ಥೆಯ ಭಗಿನಿಯರೇ ಆಗಿದ್ದು ಒಬ್ಬರು ಕುಂದಾಪುರದವರು, ಹಿಂದಿ ಅಧ್ಯಾಪಕರಾಗಿದ್ದರು. ಉಳಿದವರು ನಾವು ಮೂವರು ಶಿಕ್ಷಕಿಯರು. ಒಬ್ಬರು ಸ್ಥಳೀಯರಾದ ಗ್ರೆಟ್ಟಾ ಟೀಚರಾಗಿದ್ದರೆ, ನನ್ನ ಜೊತೆಯಲ್ಲಿ ಮಂಗಳೂರಿಂದ ಬರುತ್ತಿದ್ದವರು ಜೂಡಿತ್‌ರವರು.

ವಿದ್ಯಾರ್ಥಿನಿಯರ ಪ್ರೀತಿ, ವಿಶ್ವಾಸ, ಸ್ನೇಹಗಳನ್ನು ನೆನಪಿಸಿಕೊಂಡರೆ ಇಲ್ಲಿನ ವಿದ್ಯಾರ್ಥಿನಿಯರು ಮೊದಲ ಸಾಲಲ್ಲಿ ನಿಲ್ಲುತ್ತಾರೆ. ಹಳ್ಳಿಯ ಮಕ್ಕಳ ಸಹಜವಾದ ಮುಗ್ಧತೆ ಇವರಲ್ಲಿ ತುಂಬಿತ್ತು. ಸುದೀರ್ಘವಾದ ಶಿಕ್ಷಕಿಯ ಅನುಭವದ ಹಿನ್ನೆಲೆಯಲ್ಲಿ ಇಂದು ಯೋಚಿಸಿದರೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ವಿಶೇಷ ಪ್ರೀತಿ ಮತ್ತು ಅದನ್ನು ಹೆಚ್ಚು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ತಿಳಿಯುತ್ತೇನೆ. ಪ್ರಾಥಮಿಕ ಶಾಲೆಯ ಸಾಮಾನ್ಯ ಜ್ಞಾನ ಹೆಚ್ಚಿಲ್ಲದ ದಿನಗಳಿಗಿಂತ ಹೈಸ್ಕೂಲಿನ ಜೀವನದಲ್ಲಿ ತಮ್ಮೆದುರಿಗಿರುವ ಶಿಕ್ಷಕ, ಶಿಕ್ಷಕಿಯರನ್ನು ಆದರ್ಶವಾಗಿ ಭಾವಿಸುವ ಮತ್ತು ಪ್ರೀತಿಯನ್ನು, ವಿಶ್ವಾಸವನ್ನು ವ್ಯಕ್ತಪಡಿಸುವ ಮತ್ತು ಸ್ನೇಹ ಬಯಸುವ ಹಂತ ಹೈಸ್ಕೂಲಿನ ಹುಡುಗರಿಗಿಂತ ಹುಡುಗಿಯರದ್ದು ಎಂದು ನನ್ನ ಭಾವನೆ. ಹುಡುಗರು ಇಂತಹ ಪ್ರೀತಿ, ವಿಶ್ವಾಸಗಳನ್ನು ತೋರುವ ಹಾಗೂ ಸ್ನೇಹ ಬಯಸುವ ಕಾಲಘಟ್ಟ ಎಂದರೆ ಶಾಲಾ ಜೀವನದಲ್ಲಿ ಜೂನಿಯರ್ ಕಾಲೇಜಿನ ಹಂತವೆಂದರೆ ಹೆಚ್ಚು ಸರಿಯಾದುದು.
ಬಜಪೆ ಊರು ತರಕಾರಿಗೆ ಪ್ರಸಿದ್ಧ ಎಂದು ಹಿಂದೆಯೇ ಹೇಳಿದ್ದೇನೆ. ಅದನ್ನು ಈಗ ಕಣ್ಣಾರೆ ನೋಡಿ ಆನಂದಿಸುವ ಖುಷಿ ನನ್ನದು. ವಾರದ ಸಂತೆಯ ದಿನ ಸುತ್ತಮುತ್ತಲ ಹಳ್ಳಿಯ ಮಂದಿ ತಾವು ಬೆಳೆದ ತರಕಾರಿಗಳನ್ನು ಬಸ್ ನಿಲ್ದಾಣದ ಪಕ್ಕದ ಮಾರುಕಟ್ಟೆ, ರಸ್ತೆಯ ಬದಿಗಳಲ್ಲಿ ಮಾರಾಟ ಮಾಡುತ್ತಿದ್ದರು. ನಾನೂ ಖರೀದಿಸಿ ಮನೆಗೆ ತರುತ್ತಿದ್ದೆ. ಜೊತೆಗೆ ಉಳಿದ ದಿನಗಳಲ್ಲಿ ನನ್ನನ್ನು ತುಂಬಾ ಹಚ್ಚಿಕೊಂಡ ಕೆಲವು ಕ್ರಿಶ್ಚಿಯನ್ ಹುಡುಗಿಯರು ತಮ್ಮ ಮನೆಯಿಂದ ಬೆಂಡೆ, ಅಲಸಂಡೆಯನ್ನು ಬೇಡ ಬೇಡ ಎಂದು ನಿರಾಕರಿಸಿದರೂ ತಂದು ಕೊಡುತ್ತಿದ್ದುದು ಮುಗ್ಧತೆಯಿಂದ. ತೆಗೆದುಕೊಳ್ಳದಿದ್ದರೆ ಸಿಟ್ಟು ಮಾಡಿಕೊಳ್ಳುತ್ತಿದ್ದ ಅಥವಾ ಕೂಗುತ್ತಿದ್ದ ಮಕ್ಕಳನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದೇನೆ.

ಆಗೆಲ್ಲಾ ಮಂಗಳೂರಲ್ಲಿ ದಿಢೀರ್ ಮುಷ್ಕರಗಳಾಗಿ ಬಸ್ಸುಗಳು ಇಲ್ಲದಾಗುತ್ತಿದ್ದುದು ಬಹಳ ಬಾರಿ. ಇಂತಹ ಕಷ್ಟ ಒದಗಿದಾಗ ನನ್ನ ಸಹೋದ್ಯೋಗಿ ಗ್ರೆಟ್ಟಾ ಟೀಚರ್‌ರವರ ತಂದೆ ಬಜಪೆಯಲ್ಲಿ ಜವಳಿ ವ್ಯಾಪಾರಸ್ಥರಾಗಿದ್ದವರು ಮಂಗಳೂರಿಗೆ ಟ್ಯಾಕ್ಸಿ ಮಾಡಿಕೊಟ್ಟು ನಮ್ಮ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಶಾಲೆಗೆ ಅನಿರೀಕ್ಷಿತವಾಗಿ ರಜೆ ಘೋಷಿಸಲ್ಪಟ್ಟರೆ ಗ್ರೆಟ್ಟಾ ಟೀಚರ್‌ರವರ ಮನೆಯೇ ನನಗೆ ಸಮಯ ಕಳೆಯಲು ಇದ್ದ ಮನೆ. ಅಂತಹ ಸಂದರ್ಭದಲ್ಲಿ ಅವರ ಮನೆಯಲ್ಲಿ ಊಟ ತಿಂಡಿ ಕಡ್ಡಾಯವಾಗಿದ್ದುವು ಬಸ್ಸು ಬರುವವರೆಗೆ. ಅಂದರೆ ಆಗ ಬಸ್ಸುಗಳು ಈಗಿನ ಹಾಗೆ ನಿರಂತರವಾಗಿ ಚಲಿಸುತ್ತಿರಲಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಎನ್ನುವಂತೆ ಕೆಲವೇ ಟ್ರಿಪ್ಪುಗಳು ಇದ್ದುದು. ಅಲ್ಲದೆ ಒಂದೇ ಬಸ್ಸು ಇದ್ದುದು. ಆಗೆಲ್ಲಾ ಫೋನುಗಳು ಇರಲಿಲ್ಲ. ಆಧುನಿಕವಾದ ತಾಂತ್ರಿಕ ಸೌಲಭ್ಯಗಳು ಕಡಿಮೆ ಇದ್ದ ಆ ದಿನಗಳಲ್ಲಿ ಮನುಷ್ಯ ಮನುಷ್ಯರ ನಡುವಿನ ಸ್ನೇಹ ವಿಶ್ವಾಸಗಳು ಆ ಕೊರತೆಯನ್ನು ತುಂಬುತ್ತಿತ್ತು. ಇದಕ್ಕೆ ಇನ್ನೊಂದು ಉದಾಹರಣೆ ನನ್ನ ಮಧ್ಯಾಹ್ನದ ಊಟ. ಪ್ರಾಥಮಿಕ ಶಾಲೆ, ಹೈಸ್ಕೂಲುಗಳ ದಿನಗಳಲ್ಲಿ ನಾನು ಮಧ್ಯಾಹ್ನದಲ್ಲಿಯೂ ಬಿಸಿ ಬಿಸಿ ಊಟವನ್ನೇ ಮಾಡಿದವಳು.

ಕಾಲೇಜಿನ ಒಂದು ವರ್ಷದ ಅವಧಿಯಲ್ಲಿ ಕೊಂಡು ಹೋಗುತ್ತಿದ್ದ ಬುತ್ತಿಯಲ್ಲಿ ಉಂಡದ್ದಕ್ಕಿಂತ ಹೆಚ್ಚು ಬಿಸಾಡಿದ್ದೇ ಆಗಿತ್ತು. ತಣ್ಣಗಿನ ಊಟ ನನಗೆ ಸೇರುತ್ತಿರಲಿಲ್ಲ. ಈಗಲೂ ಅದೇ ಸ್ಥಿತಿಯಾಯಿತು. ಬೆಳಗ್ಗೆ ಅಮ್ಮ ತುಂಬಿಸಿ ಕೊಡುತ್ತಿದ್ದ ಊಟ ಮಧ್ಯಾಹ್ನಕ್ಕೆ ತಣ್ಣಗಾಗಿ ನನ್ನ ಪಾಲಿಗೆ ರುಚಿಯಿಲ್ಲದೆ ನನ್ನ ಶಾಲಾ ಕಾನ್ವೆಂಟಿನ ನಾಯಿಯ ಪಾಲಾಗುತ್ತಿತ್ತು. ಇದರಿಂದ ಪಾಠ ಮಾಡುವ ಶಕ್ತಿ ಇಲ್ಲದೆ ಕಷ್ಟಪಡುವ ಸ್ಥಿತಿಯನ್ನು ಶಾಲೆಯಲ್ಲಿ ಯಾರಲ್ಲೂ ಹೇಳಿಕೊಳ್ಳುವ ಸ್ಥಿತಿ ಇರಲಿಲ್ಲ. ಬಜಪೆಯಲ್ಲಿ ಬಸ್ ನಿಲ್ದಾಣದ ಎದುರಿಗೆ ಬ್ರಾಹ್ಮಣರ ಹೊಟೇಲ್ ಒಂದಿತ್ತು. ಅದರ ಮಾಲಕರು ಅಪ್ಪನಿಗೆ ಪರಿಚಿತರಾದುದರಿಂದ ಬಜಪೆಗೆ ಬಂದ ಮೊದಲ ದಿನವೇ ಅಲ್ಲಿಗೆ ಹೋಗಿ ಅಪ್ಪ ನನ್ನನ್ನು ಅವರಿಗೆ ಪರಿಚಯಿಸಿ ಕೊಟ್ಟಿದ್ದರು. ಆದ್ದರಿಂದ ಕೆಲವೊಮ್ಮೆ ಮಧ್ಯಾಹ್ನ ಅಲ್ಲಿ ಊಟಕ್ಕೆ ಹೋಗುವ ಧೈರ್ಯ ತೆಗೆದುಕೊಂಡರೂ ದಿನಾಲೂ ಹೋಗಲು ಮುಜುಗರ ಆಗುತ್ತಿತ್ತು. ಜೊತೆಗೆ ಇದು ನನ್ನ ಸಂಸ್ಥೆಯ ಭಗಿನಿಯರಿಗೆ ಮೆಚ್ಚುಗೆಯ ವಿಷಯವಾಗಿರಲಿಲ್ಲ. ಅಲ್ಲದೆ ನನ್ನ ಜೊತೆಯಲ್ಲಿದ್ದ ಜೂಡಿತ್ ಕಾನ್ವೆಂಟಲ್ಲಿ ಊಟ ಮಾಡುತ್ತಿದ್ದರು. ಅಲ್ಲಿ ದಿನಾಲೂ ಸಸ್ಯಾಹಾರಿ ಊಟ ಇಲ್ಲದಿರುವುದರಿಂದ ನಾನು ಅಲ್ಲಿ ಊಟ ಮಾಡಲು ಸಾಧ್ಯವಿರಲಿಲ್ಲ. ನಾನು ಸಸ್ಯಾಹಾರಿ ಆಗಿದ್ದೆ. ಕೊನೆಗೆ ನಿರ್ವಾಹವಿಲ್ಲದೆ ಕಾನ್ವೆಂಟಿನ ಮುಖ್ಯ ಭಗಿನಿಯವರನ್ನು ಭೇಟಿ ಮಾಡಿ ನನ್ನ ಸಮಸ್ಯೆ ವಿವರಿಸಿದೆ. ಅವರು ನನಗೆ ಸರಳವಾಗಿ ಉಪ್ಪಿನಕಾಯಿ, ಹಪ್ಪಳ, ಸಾರು, ಅನ್ನ ನೀಡಲು ಒಪ್ಪಿದರು. ಒಂದು ಸಮಸ್ಯೆ ನಿವಾರಣೆಯಾಯಿತು.

ಆಗಲೇ ಹೇಳಿದ ಹಾಗೆ ನಮ್ಮ ಬಸ್ಸು ಸಮಯ ಪಾಲನೆಯಲ್ಲಿಯೂ ತಪ್ಪುತ್ತಿತ್ತು. ಸಂಜೆ 5 ಗಂಟೆಗೆ ಬಜಪೆಗೆ ಬರುವ ಬಸ್ಸು ಒಮ್ಮಿಮ್ಮೆ ತನ್ನ ಟ್ರಿಪ್ಪನ್ನು ಬದಲಿಸಿ 6 ಗಂಟೆಗೋ, 7 ಗಂಟೆಗೋ ಬರುವುದಿತ್ತು. ಇಂತಹ ಸಂದರ್ಭಗಳು ಬಹಳ ಬಾರಿ ಉಂಟಾದಾಗ ಪ್ರತೀ ಬಾರಿಯೂ ಗ್ರೆಟ್ಟಾ ಟೀಚರ್ ಮನೆಗೆ ಹೋಗಿ ಕಾಫಿ ತಿಂಡಿ ಮಾಡಲು ಸಂಕೋಚವಾಗುತ್ತಿತ್ತು. ಆಗ ಅನಿವಾರ್ಯವಾಗಿ ಬಸ್ಸು ಕಾದು ಕಾದು ಸಾಕಾಗಿ ಹೊಟೇಲಲ್ಲಿ ಕಾಫಿ ಕುಡಿಯಲು ಹೋಗಲೇಬೇಕಾಗುತ್ತಿತ್ತು. ಆದರೆ ಅಲ್ಲಿನ ಜನ ಅತ್ಯಂತ ಸಭ್ಯರಾಗಿ ಮಾಲಕರಿಂದ ತೊಡಗಿ, ಸಪ್ಲೈಯರ್‌ವರೆಗೆ ಗೌರವದಿಂದ ನಡಕೊಳ್ಳುತ್ತಿದ್ದುದು ಇಂದು ನೆನಪಾಗುತ್ತಿದೆ. ಇಷ್ಟೇ ಅಲ್ಲ ಇಂದಿಗೂ ಬಜಪೆಯ ಊರಿಗೆ ಹೋದಾಗ ಅಂದಿನ ಕಿರಿಯರು ಇಂದಿನ ಹಿರಿಯರಾಗಿದ್ದು ಗುರುತು ಹಿಡಿದು ಮಾತನಾಡಿಸುವಾಗ ಆ ಊರಿನ ಜನರು ನನ್ನವರೇ ಅನ್ನಿಸುತ್ತದೆಯಲ್ಲವೇ? 69ರ ಜೂನ್‌ನಿಂದ 70ರ ಆಗಸ್ಟ್‌ವರೆಗೆ ಬಜಪೆಯಲ್ಲಿ ಶಿಕ್ಷಕಿಯ ವೃತ್ತಿಯ ನನ್ನ ವಿದ್ಯಾರ್ಥಿನಿಯರು ಈಗಲೂ ಭೇಟಿಯಾದಾಗ ತೋರುವ ಆತ್ಮೀಯತೆ, ಗೌರವಗಳು ಅವರೆಲ್ಲಾ ನನ್ನವರು ಎಂದೇ ಅನ್ನಿಸುತ್ತದೆ. ಹೀಗೆ ದೇರೆಬೈಲಿನಿಂದ ಬಜಪೆಯವರೆಗೆ ನನ್ನ ಮಾನಸಿಕ ಊರು ವಿಸ್ತಾರವಾಯಿತು.

ಈ ನಡುವೆ ಲೇಡಿಹಿಲ್ ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲಿಗೆ ದಿನದಲ್ಲಿ ನಾಲ್ಕು ಬಾರಿ ಓಡಾಡುತ್ತಿದ್ದ ಅಪ್ಪನಿಗೆ ಈಗ ಈ ನಡಿಗೆ ತ್ರಾಸದಾಯಕ ಅನ್ನಿಸುತ್ತಿತ್ತು. ತಮ್ಮನೂ ಕೆನರಾ ಹೈಸ್ಕೂಲ್ ಉರ್ವ ಇಲ್ಲಿಗೆ ಹೋಗುತ್ತಿದ್ದ. ಅವನು ಬಸ್ಸಲ್ಲಿ ಓಡಾಡುವುದಕ್ಕೆ ಸಾಧ್ಯವಿರಲಿಲ್ಲ. ಈ ಕಾರಣದಿಂದ ಅಪ್ಪ ತನಗೆ ಹತ್ತಿರವಾಗುವಂತೆ ಮನೆ ಹುಡುಕುತ್ತಿದ್ದರು. ದೇರೆಬೈಲಿನ ನೀರಿನ ಋಣ ಮುಗಿದಿರಬೇಕು. ಉರ್ವಸ್ಟೋರ್ಸ್‌ ಬಳಿ ಸರಕಾರಿ ನೌಕರರ ವಸತಿ ಗೃಹಗಳ ಬಡಾವಣೆಯೇ ಇತ್ತು. ಅಲ್ಲಿ ಕೊಟ್ಟಾರದ ರಸ್ತೆಗೆ ಸಮೀಪದಲ್ಲಿ ಸರಕಾರಿ ನೌಕರರ ವಸತಿಯ ಹಿಂಬದಿಯಲ್ಲಿ ದಡ್ಡಲ್ ಕಾಡಿಗೆ ತಾಗಿಕೊಂಡಂತೆ ಇದ್ದ ಹಿತ್ತಲಲ್ಲಿ ತಮ್ಮ ಮನೆಯೊಂದಿಗೆ ಎರಡು ಮೂರು ಬಾಡಿಗೆ ಮನೆಗಳು, ಮಲ್ಲಿಗೆ ತೋಟ, ತೆಂಗಿನ ಮರಗಳಿದ್ದ ಕ್ಲೇರಾ ಡಿಸೋಜಾರವರ ಅವಳಿ ಮನೆಗಳಲ್ಲಿ ಒಂದು ನಮಗೆ ಬಿಡಾರವಾಗಿ ದೊರೆಯಿತು. ಅಂತೂ ನಮ್ಮ ಬೆಕ್ಕಿನ ಬಿಡಾರ ಹೀಗೆ ಬಂದು ಉರ್ವಸ್ಟೋರ್ ಬಳಿ ನೆಲೆಯಾಯಿತು. ನಾನು ಶಿಕ್ಷಕಿಯಾಗಿ ಬಜಪೆಗೆ ಹೋಗಲು ಈಗ ಮಿಸ್ಕಿತ್ ಬಸ್ಸು ಉರ್ವಸ್ಟೋರ್ಸ್‌ ದಾರಿಯಾಗಿ ಸುರತ್ಕಲ್, ಕಾಟಿಪಳ್ಳ, ಕಳವಾರು, ಪೇಜಾವರ ಆಗಿ ಬಜಪೆ ತಲುಪುತ್ತಿತ್ತು. ಈ ಪ್ರಯಾಣ ಏರು ತಗ್ಗುಗಳ ಗುಡ್ಡ ಕಣಿವೆಗಳನ್ನು ದಾಟಿಕೊಂಡು ಬಜಪೆ ಎನ್ನುವ ಎತ್ತರದ ಸಮತಟ್ಟಾದ ವಿಮಾನ ನಿಲ್ದಾಣದ ಊರನ್ನು ಸೇರುತ್ತಿತ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top