ವ್ಯಾಪಾರೀ ಕ್ಷೇತ್ರವೊಂದು ಧಾರ್ಮಿಕ ಕ್ಷೇತ್ರವೂ ಆಯಿತು | Vartha Bharati- ವಾರ್ತಾ ಭಾರತಿ

--

ವ್ಯಾಪಾರೀ ಕ್ಷೇತ್ರವೊಂದು ಧಾರ್ಮಿಕ ಕ್ಷೇತ್ರವೂ ಆಯಿತು

ಉರ್ವಸ್ಟೋರ್‌ನಲ್ಲಿ ನನ್ನ ಮದುವೆಯಾಗುವವರೆಗಿನ (1970ರಿಂದ 1977ರ ವರೆಗಿನ) ದಿನಗಳಲ್ಲಿ ನಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಹಕರಿಸಿದ ಅಂಗಡಿಗಳಲ್ಲಿ ಮುಖ್ಯವಾದುದು ದಡ್ಡಲ್‌ಕಾಡ್‌ನಿಂದ ಕೊಟ್ಟಾರಕ್ಕೆ ಹೋಗುವ ರಸ್ತೆಯಲ್ಲಿದ್ದ ಜನಾರ್ದನರ ದಿನಸಿ ಅಂಗಡಿ. ಈಗ ಅವರ ಮಕ್ಕಳು ನಡೆಸುತ್ತಿದ್ದಾರೆ. ತಿಂಗಳಿಗೆ ಬೇಕಾಗುವುದನ್ನು ಖರೀದಿಸಿ ಮುಂದಿನ ತಿಂಗಳಲ್ಲಿ ಕೊಡುವ ವ್ಯವಸ್ಥೆ. ಈಗಲೂ ಆ ಕಡೆಯಿಂದ ಹೋಗುತ್ತಿದ್ದರೆ ಏನಾದರೂ ಕೊಂಡು ವ್ಯಾಪಾರ ಮಾಡಬೇಕು ಅನ್ನಿಸುವ ಕುಟುಂಬ. ಹಿಂದೆ ಬಾಡಿಗೆಯ ಕಟ್ಟಡವಾಗಿದ್ದುದು ಈಗ ಸ್ವಂತ ಕಟ್ಟಡವಾಗಿರುವುದು ಸಂತೋಷದ ವಿಷಯ. ಕಷ್ಟಪಟ್ಟದಕ್ಕೆ ಇಷ್ಟ ಸಿಕ್ಕಿದಂತಾಗಿದೆ. ದುಡಿಮೆಯೇ ದೇವರು ಎಂಬಂತೆ ಮನೆ ಮಂದಿ ದುಡಿಯುವುದನ್ನು ನೋಡಿದರೆ ಖುಷಿಯಾಗುತ್ತದೆ. ಹೀಗೆಯೇ ಉರ್ವ ಮಾರ್ಕೆಟ್‌ನಲ್ಲಿ ಬಾಯಮ್ಮ ಅಪ್ಪನಿಗೆ ಪರಿಚಿತರು. ಶಾಲೆಯ ಕಾರಣದಿಂದ ಅವರಿಂದ ತರಕಾರಿಗಳನ್ನೂ ಹೀಗೆಯೇ ತಿಂಗಳ ಲೆಕ್ಕಕ್ಕೆ ಬರೆಸಿ ತರುವುದೇ ಕ್ರಮವಾಗಿತ್ತು. ಇನ್ನಿತರ ಬ್ರೆಡ್ಡು, ತಿಂಡಿ ತಿನಿಸುಗಳಿಗೆ ಈಗಲೂ ಉರ್ವಸ್ಟೋರ್‌ನಲ್ಲಿರುವ ಮಹಡಿ ಕಟ್ಟಡದಲ್ಲಿರುವ ಅಂಗಡಿ ಶ್ರೀನಿವಾಸರದ್ದು. ಇವರೂ ಅಪ್ಪನ ಶಿಷ್ಯನೇ ಆಗಿದ್ದರು. ಹಿಂದೆ ಈ ಅಂಗಡಿಯ ಮುಂದೆ ಕೋಸ್ಟ ಬೇಕರಿ ಎಂದು ಇತ್ತು ಎಂಬ ನೆನಪು. ಚಿಲಿಂಬಿಯಲ್ಲಿ ಕೋಸ್ಟ ಅವರ ಬೇಕರಿ ಇತ್ತು. ಅವರ ಬೇಕರಿಯ ಬ್ರೆಡ್ಡು ಪ್ರಸಿದ್ಧವಾಗಿತ್ತು. ಶ್ರೀನಿವಾಸ ಹಾಗೂ ಕೋಸ್ಟರು ಸಹಪಾಠಿಗಳೋ, ಸ್ನೇಹಿತರೋ ಆಗಿದ್ದರು. ಕೋಸ್ಟ ಸಹೋದರರೂ ಕೂಡಾ ಅಪ್ಪನ ಶಿಷ್ಯರೇ ಆಗಿದ್ದರು. ಈ ಕಾರಣದಿಂದ ಅಲ್ಲಿಯೂ ತಿಂಗಳ ಲೆಕ್ಕದಲ್ಲಿ ವಸ್ತುಗಳು ಮನೆಗೆ ಬರುತ್ತಿದ್ದುವು. ಈ ಅಂಗಡಿಗಳಿಗೆ ನಾನೇ ಹೆಚ್ಚು ಹೋಗುತ್ತಿದ್ದವಳು. ಚಿಕ್ಕಂದಿನಿಂದಲೇ ಅಂಗಡಿಗೆ ಹೋಗಿ ಬಂದು ಅಭ್ಯಾಸವಾಗಿದ್ದುದರಿಂದ ಈ ಕೆಲಸಗಳನ್ನು ಮಾಡಲು ನಾಚಿಕೆ ಅನ್ನಿಸುತ್ತಿರಲಿಲ್ಲ. ಈ ಕೆಲಸದಿಂದ ಮನೆಯ ಜವಾಬ್ದಾರಿ ಇಲ್ಲದಿದ್ದರೂ ಮನೆಗೆ ತಿಂಗಳಿಗೆ ಯಾವ ಯಾವ ವಸ್ತುಗಳು ಬೇಕು, ಅವುಗಳ ಖರ್ಚುವೆಚ್ಚಗಳನ್ನು ಹೇಗೆ ಸರಿದೂಗಿಸುವುದು ಎನ್ನುವ ಪಾಠ ಜೊತೆಗೆ ಆಗಿದ್ದುದರಿಂದ ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಈ ಜವಾಬ್ದಾರಿ ನಿಭಾಯಿಸಲು ಸುಲಭವಾಯ್ತು.

ಮನೆಯ ಹಬ್ಬ ಹರಿದಿನಗಳಲ್ಲಿ ಈ ಮನೆಯಲ್ಲಿಯೂ ನೆರೆಯ ಕ್ರಿಶ್ಚಿಯನ್ ಬಂಧುಗಳಿಗೆ ಹಬ್ಬದ ಕಡುಬು, ಸಿಹಿ ತಿಂಡಿಗಳ ವಿತರಣೆ ಕಾಪಿಕಾಡಿನಲ್ಲಿ ಇದ್ದಷ್ಟು ಇಲ್ಲದಿದ್ದರೂ ಎರಡು ಮೂರು ಮನೆಗಳಿಗೆ ಮಾಡುತ್ತಿದ್ದೆವು. ಧಣಿಮಾಯಿ ಮನೆಗೆ ಬಂದು ಕಡುಬು, ಪಾಯಸ ತಿಂದು ನಮಗೆ ಹಬ್ಬದ ಸಂತೋಷ ಹೆಚ್ಚಿಸುತ್ತಿದ್ದರು. ಕಾಪಿಕಾಡು, ದೇರೆಬೈಲುಗಳಲ್ಲಿ ಹಬ್ಬಗಳ ಸಾರ್ವಜನಿಕ ಆಚರಣೆ ಇರಲಿಲ್ಲ. ಆದರೆ ಉರ್ವಸ್ಟೋರ್‌ನಲ್ಲಿ ಮೊಸರು ಕುಡಿಕೆ ಸಂಭ್ರಮದಿಂದ ಆಚರಿಸಲ್ಪಡುತ್ತಿತ್ತು. ಕೊಟ್ಟಾರದಲ್ಲಿರುವ ಶ್ರೀ ಕೃಷ್ಣಾ ಭಜನಾ ಮಂದಿರದಲ್ಲಿ ಕೃಷ್ಣಾಷ್ಟಮಿಯ ಸೂರ್ಯೋದಯದಿಂದ ರಾತ್ರಿ ಚಂದ್ರೋದಯದವರೆಗೆ ನಿರಂತರ ಭಜನೆ ನೆಡೆಯುತ್ತಿತ್ತು. ಮರುದಿನ ಅಲ್ಲಿಂದ ಮೆರವಣಿಗೆ ಹೊರಟರೆ ಗುಡ್ಡೆಶಾಲೆ ಅಂದರೆ ಅಶೋಕನಗರ ಶಾಲೆಯಲ್ಲಿ ಕೊನೆಯಾಗಿ ಅಲ್ಲಿ ಸಾರ್ವಜನಿಕ ಸಭೆ ನಡೆಯುತ್ತಿತ್ತು. ಧಾರ್ಮಿಕ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತಿತ್ತು. ಮೆರವಣಿಗೆಯ ಸಂದರ್ಭದಲ್ಲಿ ದಾರಿಯಲ್ಲಿ ಎತ್ತರಕ್ಕೆ ಕಟ್ಟಿರುವ ಮೊಸರಿನ ಕುಡಿಕೆಗಳನ್ನು ಒಡೆದು ಅದರಲ್ಲಿದ್ದ ನಾಣ್ಯಗಳನ್ನು ಮಡಕೆ ಒಡೆದ ತಂಡಗಳು ಹಂಚಿಕೊಳ್ಳುತ್ತಿದ್ದವು. ಜೊತೆಗೆ ಹುಲಿವೇಷಗಳೂ ಇರುತ್ತಿತ್ತು. ಹೀಗೆ ಕೃಷ್ಣಾಷ್ಟಮಿ ಒಂದೇ ಸಾರ್ವಜನಿಕ ಹಬ್ಬವಾಗಿದ್ದ ಸಂದರ್ಭ, ಜೊತೆಗೆ ಅದರಲ್ಲಿ ಪಾಲ್ಗೊಳ್ಳುವವರು ಕೊಟ್ಟಾರ ಹಾಗೂ ಅಶೋಕನಗರದವರೇ ಹೆಚ್ಚಾಗಿದ್ದುದರಿಂದ ನಮ್ಮ ಸರಕಾರಿ ವಸತಿಗೃಹಗಳಲ್ಲಿದ್ದ ಹುಡುಗರು ಇತರ ಹಿಂದೂ ಮನೆಗಳ ಹುಡುಗರ ನೆರವಿನೊಂದಿಗೆ ಉರ್ವಸ್ಟೋರ್‌ನಲ್ಲಿ 7, 13 ನಂಬ್ರದ ಬಸ್ಸುಗಳು ತಿರುಗುವ ಜಾಗದಲ್ಲಿ ಇದ್ದ ಖಾಲಿಸ್ಥಳದಲ್ಲಿ ಚೌತಿ ಹಬ್ಬಕ್ಕೆ ಗಣಪತಿ ಕೂರಿಸಿ, ಸಂಜೆಯ ವೇಳೆಗೆ ವಿಸರ್ಜಿಸುವ ಕಾರ್ಯಕ್ರಮ ಪ್ರಾರಂಭಿಸಿದರು. ಇದು ಹೀಗೆ ಪ್ರಾರಂಭವಾದುದು ಮುಂದಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ವಿಜೃಂಭಣೆಯಿಂದ ನಡೆದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡರು. ಇಂತಹ ಕಾರ್ಯಕ್ರಮಕ್ಕೆ ಹಿಂದೂಗಳು ಮಾತ್ರವಲ್ಲ ಕ್ರಿಶ್ಚಿಯನ್ನರೂ ದೇಣಿಗೆ ನೀಡುತ್ತಿದ್ದರು. ಮುಂದೆ ಆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿ ಅಂಗನವಾಡಿ ಶಾಲೆ ಪ್ರಾರಂಭವಾಯ್ತು. ಆ ಬಳಿಕ ಗಣಪತಿ ಪ್ರತಿಷ್ಠೆ ಕಟ್ಟಡದ ಒಳಗೆ ನಡೆಯುತ್ತಿತ್ತು. ಬಹುಶಃ ಬಾಲಕರಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮದೊಳಗೆ ಹುಡುಗರು ಯುವಕರಾದಂತೆ, ಊರಿನ ಹತ್ತು ಸಮಸ್ತರು, ಇತರ ಗಣ್ಯರು ಸೇರಿ ಸರಕಾರಿ ವಸತಿಗೃಹಗಳ ನಡುವೆ ಇದ್ದ ಖಾಲಿ ಜಾಗದಲ್ಲಿ ಗಣಪತಿ ದೇವಸ್ಥಾನವನ್ನೇ ಕಟ್ಟುವಲ್ಲಿ ಸಮರ್ಥರಾದರು. ಜಂಗಮ ಸ್ವರೂಪಿಯಾಗಿದ್ದ ಗಣಪತಿ ಒಂದೇ ಕಡೆ ನೆಲೆಯೂರಿದ್ದರಿಂದ ಹಿಂದಿನ ಮಕ್ಕಳು ನಡೆಸುತ್ತಿದ್ದ ಚೌತಿಯ ಸಂಭ್ರಮ ಇಲ್ಲವಾಯಿತು. ಇದೀಗ ಧಾರ್ಮಿಕ ಚೌಕಟ್ಟಿನೊಳಗೆ ಸೇರಿಕೊಂಡು ಉರ್ವ ಸ್ಟೋರ್‌ನ ಉಳಿದ ಜನರಿಗೆ ಹಬ್ಬದ ಸಂಭ್ರಮ ಕಾಣಲು ಸಿಗದಂತಾಯಿತು.

ಹೀಗೆ ಗಣಪತಿ ಸ್ಥಿರವಾದ ಮೇಲೆ ಬಾಲಕರಿಗೆ ಅಲ್ಲಿ ಹೆಚ್ಚು ಸ್ಥಾನಮಾನಗಳಿಲ್ಲದಾಗ ಮತ್ತೆ ಕೆಲವು ಬಾಲಕರು ದಸರಾ ವೇಳೆ ಶಾರದೆಯನ್ನು ಪ್ರತಿಷ್ಠಾಪಿಸಲು ಪ್ರಾರಂಭಿಸಿದರು. ಈಗ ಮತ್ತೆ ಶಾರದೆಯ ಪೂಜೆ, ಮೆರವಣಿಗೆ, ವಿಸರ್ಜನೆ ಇವುಗಳೆಲ್ಲಾ ಧಾರ್ಮಿಕ ಸಂಚಲನದ ಕುರುಹುಗಳಾಯ್ತು. ಹೀಗೆ ಈಗ ಉರ್ವಸ್ಟೋರ್, ಕೊಟ್ಟಾರಗಳಲ್ಲಿ ಕೃಷ್ಣ, ಗಣಪತಿ, ಶಾರದೆ ಎಲ್ಲರೂ ಸೇರಿ ಭಕ್ತ ಜನರನ್ನು ಹರಸುವವರೇ. ಅವರ ಹೆಸರಲ್ಲಿ ಈಗ ಚಂದಾ ಎತ್ತಲು ಬರುವ ತಂಡಗಳೂ ಹೆಚ್ಚಾಯಿತು. ಕೊಡುವವರಿಗೆ ಒಂದಿದ್ದುದು ಮೂರಾಯ್ತು. ಕೊಡುವವರೇ ಕೊಡುವುದಲ್ಲದೆ ಕೊಡದಿರುವವರೂ ಇದ್ದೇ ಇರುತ್ತಾರೆ. ಯಾಕೆಂದರೆ ಭಕ್ತಿ ಎನ್ನುವುದರ ಸ್ವರೂಪ ಅವರವರ ಭಾವಕ್ಕೆ ಅನುಗುಣವಾದುದೇ ಹೊರತು ಇನ್ನೊಬ್ಬರ ಒತ್ತಾಯಕ್ಕಲ್ಲ ಎನ್ನುವುದನ್ನು ಎಲ್ಲಾ ಕಾಲದಲ್ಲೂ ಜನ ತಿಳಿದವರೇ ಅಲ್ಲವೇ? ಉರ್ವಸ್ಟೋರ್‌ನ ಮೈದಾನದಲ್ಲಿ ಸಾರ್ವಜನಿಕವಾದ ಸಭೆಗಳು, ಚುನಾವಣಾ ಸಭೆಗಳು ನಡೆಯುತ್ತಿದ್ದಂತೆಯೇ ಆಗಾಗ ಸೈಕಲ್ ಸರ್ಕಸ್, ಡೊಂಬರಾಟ, ತಿರುಗುವ ಕುರ್ಚಿಗಳು ಬಂದು ಊರವರನ್ನು, ಮಕ್ಕಳನ್ನು ರಂಜಿಸುತ್ತಿತ್ತು. ಸೈಕಲ್ ಮೇಲೆ ಕೆಲವು ದಿನಗಳವರೆಗೆ ಇರುವ ಸಾಹಸದ ಜೊತೆಗೆ ಟ್ಯೂಬ್‌ಲೈಟ್ ಒಡೆದು ತಿನ್ನುವುದು, ಹಲ್ಲಿನಲ್ಲಿ ಬೈಕ್ ಎಳೆಯುವುದು ಇಂತಹ ಆಟಗಳು ಬರುತ್ತಿದ್ದುವು. ಇಂತಹವುಗಳನ್ನು ನಿಂತು ನೋಡುವುದು ನನಗೆ ನಿಷೇಧವಾಗಿತ್ತು. ಇಂತಹ ಸಾಮಾನ್ಯ ಮನರಂಜನೆಗಳು ಶಿಷ್ಟ ಜನರಿಗೆ ಅಲ್ಲ ಎನ್ನುವ ಸಾಮಾಜಿಕ ಧೋರಣೆ. ಹಾಗೆಯೇ ಅಲ್ಲಿ ನಿಂತು ನೋಡುವ ಜನರು ಸಾಮಾನ್ಯರು ಎನ್ನುವ ಕೀಳುಭಾವನೆ ಇಲ್ಲದಿದ್ದರೂ ಕಾರ್ಮಿಕರು ಸಂಜೆಯ ಹೊತ್ತು ಕುಡುಕರಾಗಿರುತ್ತಾರೆ ಎನ್ನುವ ಕಾರಣವೂ ಇತ್ತು.

ಆದ್ದರಿಂದ ಏನಿದ್ದರೂ ದೂರದಿಂದಲೇ ದಾರಿ ನಡೆವಾಗ ಎಷ್ಟು ನೋಡಲು ಸಾಧ್ಯವೋ ಅಷ್ಟೇ ನನ್ನ ಪಾಲಿನ ಸಂತೋಷ. ಅದೇ ಮೈದಾನದಲ್ಲಿ ಯಕ್ಷಗಾನ ಬಯಲಾಟ ಇದ್ದರೆ ಅಪ್ಪ ನಮ್ಮನ್ನೆಲ್ಲಾ ಕರೆದೊಯ್ಯುತ್ತಿದ್ದರು. ಹರಕೆಯ ಆಟ ಅಂದರೆ ಸೇವೆಯ ಆಟ ಇದ್ದರೆ ಉಚಿತವಾಗಿರುತ್ತಿತ್ತು. ಇಲ್ಲವಾದರೆ ಈ ಅವಧಿಯಲ್ಲಿ ಯಕ್ಷಗಾನವನ್ನು ಸಂಘ ಸಂಸ್ಥೆಗಳು ತಮ್ಮ ಆರ್ಥಿಕ ಲಾಭಕ್ಕಾಗಿ ಟಿಕೆಟ್ ಮೂಲಕ ಪ್ರದರ್ಶನ ಮಾಡಿಸುತ್ತಿತ್ತು. ಇಂತಹ ಸಂದರ್ಭಗಳಲ್ಲೂ ಟಿಕೆಟ್ ಕೊಳ್ಳುವುದು ಅನಿವಾರ್ಯವಾಗಿರುತ್ತಿತ್ತು. ಆ ಕಾರಣದಿಂದಲೂ ಯಕ್ಷಗಾನ ಬಯಲಾಟಗಳಿಗೆ ನಾವು ತಪ್ಪುತ್ತಿರಲಿಲ್ಲ. ಹರಕೆಯ ಆಟ ಆಡಿಸುತ್ತಿದ್ದವರು ಶ್ರೀಕೃಷ್ಣ ವಿಲಾಸ ಹೊಟೇಲಿನ ಮಾಲಕರು. ಶ್ರೀಕೃಷ್ಣ ವಿಲಾಸದ ಪಕ್ಕದಲ್ಲೇ ಒಂದು ಚಿಕ್ಕ ಅಂಗಡಿಯಿತ್ತು. ಆ ಕಡೆಗೆ ಹೆಚ್ಚು ಹೋಗದೆ ಇದ್ದುದರಿಂದ ಯಾವ ಅಂಗಡಿ ಎಂದು ಈಗ ನೆನಪಿಲ್ಲ. ಕೃಷ್ಣಪ್ಪ ಎನ್ನುವವರು ಅಂಗಡಿಯ ಮಾಲಕರಾಗಿದ್ದರು ಎಂಬ ನೆನಪು. ಅವರಿಗೆ ಯಕ್ಷಗಾನದಲ್ಲಿ ಆಸಕ್ತಿ. ಹೆಚ್ಚಾಗಿ ತಾಳಮದ್ದಳೆ. ಅವರು ಭಾಗವತಿಕೆ ಮಾಡುತ್ತಿದ್ದರು. ಪ್ರತಿ ಬುಧವಾರ ಸಂಜೆ 6 ಗಂಟೆಯಿಂದ ಅವರು ಅವರ ಸ್ನೇಹಿತರು ಸೇರಿ ತಾಳಮದ್ದಳೆ ನಡೆಸುತ್ತಿದ್ದರೆ ಆಸಕ್ತ ಜನ ಅಂಗಡಿಯ ಹೊರಗೆ ನಿಂತುಕೊಂಡೇ ಕೇಳುತ್ತಿದ್ದುದು ಬಹಳ ವಿಶೇಷ. ಈ ಕೂಟದಲ್ಲಿ ಒಮ್ಮಿಮ್ಮೆ ನನ್ನ ಅಪ್ಪನೂ ಅರ್ಥಗಾರಿಕೆ ಮಾಡುತ್ತಿದ್ದರು. ಅಲ್ಲಿ ಮುಖ್ಯವಾಗಿ ಸಂಘಟಕರಾಗಿ ಮತ್ತು ಅರ್ಥಧಾರಿಯಾಗಿ ಕೆಲಸ ಮಾಡಿದವರು ಕೃಷ್ಣ ಚೇವಾರು ಎನ್ನುವವರು. ಈ ಕೂಟಕ್ಕೆ ವಿಶೇಷವಾಗಿ ಸೇರಿಕೊಳ್ಳುತ್ತಿದ್ದ ಇನ್ನು ಕೆಲವರಲ್ಲಿ ಬೋಳೂರು ಮುಂಡಪ್ಪ ಮಾಸ್ಟ್ರು. ಹಾಗೆಯೇ ‘ದೇವಕಿ ಸುತ’ ಕಾವ್ಯನಾಮದ ಆಗ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಶೆಟ್ಟರು. ಅವರು ಈಗ ವಕೀಲ ವೃತ್ತಿಯೊಂದಿಗೆ ಹರಿಕಥೆಯನ್ನೂ ಮಾಡುತ್ತಾ ಪ್ರಸಿದ್ಧರಾಗಿದ್ದಾರೆ. ಅವರು ನಮ್ಮ ಮನೆಯ ಪಕ್ಕದಲ್ಲೇ ಇದ್ದ ಸರಕಾರಿ ವಸತಿ ಗೃಹದಲ್ಲಿದ್ದರು. ಅವರ ಮಡದಿ ಸರಕಾರಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಅವರ ಅಕ್ಕ, ಅಮ್ಮ, ಸೋದರ ಮಾವ ಇವರೆಲ್ಲರೂ ನನ್ನ ಅಮ್ಮ ಹಾಗೂ ಅಪ್ಪನಿಗೆ ಬೇರೆ ಬೇರೆ ಕಾರಣಗಳಿಂದ ಪರಿಚಿತರಾಗಿದ್ದು, ನಾವು ಮತ್ತು ಅವರ ಮಕ್ಕಳೂ ಆತ್ಮೀಯರಾಗಿದ್ದೆವು.

ಹಾಗೆಯೇ ಅದೇ ಸಾಲಲ್ಲಿ ಇದ್ದ ಇನ್ನೊಂದು ಮನೆಯಲ್ಲಿದ್ದ ಮಕ್ಕಳಲ್ಲಿ ವೀಣಾ ಎನ್ನುವವಳು ನನ್ನ ಹಿಂದಿ ತರಗತಿಯ ಸಹಪಾಠಿಯಾಗಿದ್ದಳು. ಅವಳ ತಮ್ಮ ವಿಜಯೇಂದ್ರ ನನ್ನ ಶಿಷ್ಯನೂ ಆಗಿದ್ದ. ಹೀಗೆ ಅಪ್ಪನ ಶಿಷ್ಯೆಯರು, ನನ್ನ ಶಿಷ್ಯರು ಎನ್ನುವ ಕಾರಣಗಳಿಂದ ಉರ್ವಸ್ಟೋರ್‌ನ ಊರಿನ ಸಂಪರ್ಕ ಬಹುಕಾಲ 1970ರಿಂದ 1989ರವರೆಗೆ ನಾವು ಅದೇ ಬಿಡಾರದಲ್ಲಿದ್ದು ನಮ್ಮ ಕುಟುಂಬದ ಬಹುತೇಕ ಒಳಿತು ಕೆಡಕುಗಳು ನಡೆದು ಕಾಪಿಕಾಡಿನ ನಂತರ ಇಂದಿಗೂ ಉರ್ವಸ್ಟೋರ್ ನನ್ನೂರು. ಹಾಗೆಯೇ ಅಲ್ಲಿ ಇರುವ ಹಿರಿಯರು ಅದೇ ಆತ್ಮೀಯತೆಯಿಂದ ಮಾತನಾಡಿಸುವವರು. ನನಗಿಂತ ಚಿಕ್ಕವರು ತೋರುವ ಪ್ರೀತಿ ಗೌರವಗಳು ಮನುಷ್ಯತ್ವದ ಅಭಿವ್ಯಕ್ತಿಯೇ ಸರಿ. ಅನೇಕ ಬಾರಿ ಮನುಷ್ಯತ್ವವೇ ಇಲ್ಲವೇನೋ ಅನ್ನಿಸುವ ಹೊತ್ತಿಗೆ ಇಂತಹ ಆತ್ಮೀಯತೆಯ ಭೇಟಿಗಳು ಮತ್ತೆ ಮನಸ್ಸನ್ನು ಮುದಗೊಳಿಸುತ್ತದೆ.

ಅಪ್ಪನಿಗೆ ನಿವೃತ್ತಿಯ ವಯಸ್ಸು ಆಯಿತು. ಸರಕಾರಿ ನಿಯಮದಂತೆ 58 ವರ್ಷಕ್ಕೆ ಇದ್ದ ನಿವೃತ್ತಿ 55ನೆ ವರ್ಷಕ್ಕೆ ದಿಢೀರಾಗಿ ಬದಲಾದಾಗ ಸರಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ಉದ್ಯೋಗಿಗಳ ಕುಟುಂಬಕ್ಕೆ ಆಘಾತವೇ ಆಗಿತ್ತು. ಇಷ್ಟರಲ್ಲಿ ನನ್ನ ತಂಗಿ ಕಿನ್ನಿಗೋಳಿ ಶಾಲೆಯ ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಸೇರಿದುದರಿಂದ ಒಂದಿಷ್ಟು ಸಮಾಧಾನ. 1977ನೆ ಇಸವಿಯ ಮಾರ್ಚ್ 31ನೆ ತಾರೀಕಿಗೆ ಅಪ್ಪನ ನಿವೃತ್ತಿ. ಎಪ್ರಿಲ್‌ನಲ್ಲಿ ನನ್ನ ವಿವಾಹ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಲೇಡಿಹಿಲ್ ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲಿನ ಆಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳ ಹೆತ್ತವರು, ಹಳೆ ವಿದ್ಯಾರ್ಥಿಗಳು ಎಲ್ಲರೂ ಒಟ್ಟು ಸೇರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಹಾಗೆಯೇ ನನ್ನನ್ನು ಅಭಿನಂದಿಸಿದ್ದರು. ಪ್ರೊ.ಎಂ.ರಾಮಚಂದ್ರರಾಯರು ಸರಕಾರಿ ಕಾಲೇಜಿನ ಪ್ರಾಂಶುಪಾಲರು, ಶ್ರೀಮತಿ ಭಾರತೀ ಶೇಣವ ಹಾಗೂ ಅವರ ಪತಿ ವಕೀಲರಾದ ಶೇಣವರು ಇವರೆಲ್ಲ ಕಾರ್ಯಕ್ರಮದ ಬಗ್ಗೆ ಆಸ್ಥೆ ವಹಿಸಿ ನಡೆಸಿಕೊಟ್ಟರು.

ನನ್ನ ವಿವಾಹ ಒಂದರ್ಥದಲ್ಲಿ ಸರಳವಾದುದೇ. ಉರ್ವ ಕೆನರಾ ಹೈಸ್ಕೂಲಿನ ಸಭಾಂಗಣದಲ್ಲಿ ನಡೆಯಿತು. ಈ ವಿವಾಹಕ್ಕೆ ಅಪ್ಪನಿಗೆ ಆರ್ಥಿಕ ನೆರವು ನೀಡಿದವರು ಕೋಸ್ಟ ಬೇಕರಿಯ ಸಹೋದರರಲ್ಲಿ ಕಿರಿಯವರು. ಅಪ್ಪನ ಪಿಂಚಣಿಯ ಹಣ ಬಂದ ಬಳಿಕ ಅದನ್ನು ಮರಳಿ ನೀಡಿದ್ದರೂ ಅದು ಅವರು ನೀಡಿದ ಗುರುದಕ್ಷಿಣೆಯ ಗೌರವ ಎಂದೇ ತಿಳಿಯುತ್ತೇನೆ. ಆಗೆಲ್ಲಾ ಈಗಿನಂತೆ ಕೇಟರರ್ಸ್‌ ಎಂಬ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಅಪ್ಪನ ಇನ್ನೊಬ್ಬ ಶಿಷ್ಯ ಹಂಪನಕಟ್ಟೆಯ ಮಾರ್ಕೆಟ್ ರಸ್ತೆಯಲ್ಲಿದ್ದ ‘ಸೋಜಾ ಬೇಕರಿ’ಯವರು ಉಪಾಹಾರದ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದರು. ಇದು ಕೂಡಾ ಗುರುವಿನ ಮೇಲಿನ ಪ್ರೀತಿಯಿಂದಲೇ ಮಾಡಿದ ಕೆಲಸ. ಮದುವೆಗೆ ಸೇರಿದ ಬಂಧು ಮಿತ್ರರ ಸಂಖ್ಯೆ ಮಾತ್ರ ಹೆಚ್ಚಿನದು. ಯಾಕೆಂದರೆ ಅಪ್ಪನ ಬಳಗ ಅಷ್ಟು ವಿಸ್ತಾರವಾಗಿತ್ತು. ಹೀಗೆ ನನ್ನ ವಿವಾಹ ಅದ್ದೂರಿಯೆಂದು ಅಲ್ಲದಿದ್ದರೂ ಸಂಭ್ರಮದಿಂದ ನಡೆಯುವುದರಲ್ಲಿ ಲೇಡಿಹಿಲ್, ಉರ್ವಸ್ಟೋರ್, ಚಿಲಿಂಬಿ, ಕಾಪಿಕಾಡು, ದೇರೆಬೈಲಿನ ಆತ್ಮೀಯರೆಲ್ಲರೂ ಜಾತಿ, ಧರ್ಮಗಳ ಭೇದವಿಲ್ಲದೆ ಬಂದು ಹರಸಿರುವುದು ನನ್ನ ಯೋಗಾಯೋಗ ಎನ್ನುವುದಕ್ಕಿಂತ ಅಪ್ಪ ಅಮ್ಮನ ಮನುಷ್ಯತ್ವದ ಗುಣಗಳು ಎಂದೇ ತಿಳಿಯುತ್ತೇನೆ. ಹೀಗೆ ಮದುವೆಯಾಗಿ ಕೋಟೆಕಾರಿಗೆ ಹೋದರೂ ತವರು ಮನೆ ಉರ್ವಸ್ಟೋರ್‌ನಲ್ಲೇ ಇದ್ದುದರಿಂದ ಅದರ ಸಂಬಂಧ ಕಳಚಲಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top