ಮೃಣಾಲಿನಿ ಸಾರಾಭಾಯಿ ಅವರ ನೆಪದಲ್ಲಿ
-

ಭಾಗ-1
‘‘ಎರಡೂವರೆ ಸಾವಿರ ವರ್ಷಗಳ ಹಿಂದೆ ರಚಿತವಾದ ಮಹಾಭಾರತ ತನ್ನ ತೊಂಬತ್ತು ಸಾವಿರ ಪದ್ಯಗಳ ಮೂಲಕ ಏನನ್ನು ಹೇಳುತ್ತದೆ, ಯಾವ ಜೀವ ಬುಗ್ಗೆಗಳಿಂದ ವಿಜೃಂಭಿಸುತ್ತದೆ ಎಂಬುದನ್ನು ಪೀಟರ್ ಬ್ರೂಕ್ ತೋರಿರುವುದು ಅದ್ಭುತವಾಗಿದೆ. ಮೊದಲು ಈ ಕಾವ್ಯದ ಕಾಲ ನೋಡಿ. ಬದುಕಿನ ನಿಗೂಢ ಶಕ್ತಿಗಳು, ಮಾಂತ್ರಿಕ ಆಚರಣೆಗಳು, ಮನುಷ್ಯನ ಸರ್ವೆ ಸಾಮಾನ್ಯ ತಾಪತ್ರಯಗಳೊಂದಿಗೆ ಕಂಡು ಬರುವ ಕಾಲ, ಮನುಷ್ಯರು ಮತ್ತು ದೇವರು ಸಹಬಾಳ್ವೆ ನಡೆಸುತ್ತಿದ್ದಂತೆ ಇದ್ದ ಕಾಲ; ಮನುಷ್ಯನ ಇಚ್ಛಾಶಕ್ತಿಯ ಎದುರು ವಿಧಿಯ ಆಟ ಕೂಡ ನಡೆಯದ ಕಾಲ, ಮನುಷ್ಯ ನಿರ್ಮಿಸಿಕೊಂಡ ಸಂಸ್ಥೆ, ಸಂಪ್ರದಾಯ ಇನ್ನೂ ನಿರ್ಜೀವ ಕಟ್ಟುಗಳಾಗದೆ ಇದ್ದ ಕಾಲ’’. ಲಂಕೇಶ್ ಅವರು ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಬರೆದ ಸಾಲುಗಳಿವು.ಇದೇ ಸಂದರ್ಭದಲ್ಲಿ ‘‘ಈ ಮಹಾಭಾರತದಲ್ಲಿ ಒಬ್ಬಳೇ ಒಬ್ಬಳು ಭಾರತದ ವ್ಯಕ್ತಿ- ಮಲ್ಲಿಕಾ ಸಾರಾಭಾಯಿ.ಎತ್ತರದ, ನೃತ್ಯದ ಚಲನೆಯ, ಪ್ರಭೆ ಉಕ್ಕಿಸುವ ಕಣ್ಣುಗಳ ಹುಡುಗಿ ಮತ್ತು ಹೆಂಗಸು ಈಕೆ’’ ಎಂದೂ ದಾಖಲಿಸುವರು.ಇತ್ತೀಚೆಗೆ ಇಂಥ ಪ್ರತಿಭಾಶಾಲಿ ಮತ್ತು ರೂಪವತಿ ನಟಿ ತನ್ನ ತಾಯಿಯನ್ನು ಕಳೆದುಕೊಂಡಳು.ಆಕೆ ಮೃಣಾಲಿನಿ ಸಾರಾಭಾಯಿ.ತಮ್ಮ ತೊಂಬತ್ತೆಂಟನೆಯ ವಯಸ್ಸಿನಲ್ಲಿ ಅತ್ಯಂತ ಪ್ರಬುದ್ಧೆಯಾಗಿ ಬದುಕಿ ಮರೆಯಾದವಳು. ಇವರಿಬ್ಬರನ್ನು ನೆನೆಪು ಮಾಡಿಕೊಂಡಾಕ್ಷಣ ಎಷ್ಟೋ ವೈವಿಧ್ಯಮಯವಾದ ನೃತ್ಯದ ಚಿತ್ರಣಗಳು ಮುಂದೆ ಬಂದು ನಿಲ್ಲುವವು. ಒಂದು ದೃಷ್ಟಿಯಿಂದ ಭಾರತದ ಸಾಂಸ್ಕೃತಿಕ ಲೋಕವನ್ನು ಸಮೃದ್ಧವಾಗಿ ಅನುಭವಿಸಿದವರು. ಬಾಲ ಸರಸ್ವತಿ, ಚಂದ್ರಲೇಖ, ರುಕ್ಮಿಣಿದೇವಿ ಮುಂತಾದವರಂತೆ ನೃತ್ಯ ಪರಂಪರೆಗೆ ಆಯಾಮಗಳನ್ನು ತುಂಬಿದವರು.ಈ ಕಲಾ ಪ್ರಕಾರದ ಬಗ್ಗೆ ಮಡಿವಂತಿಕೆಯು ಮೇಲ್ಜಾತಿಯವರಲ್ಲಿ ಮತ್ತು ಮಧ್ಯಮ ವರ್ಗದವರಲ್ಲಿ ತುಂಬಿದ್ದ ಕಾಲದಲ್ಲಿ ಅದಕ್ಕೆ ಘನತೆಯನ್ನು ತಂದುಕೊಡಲು ಪ್ರಯತ್ನಿಸಿದರು.ಇಂಥ ಹಿನ್ನೆಲೆಯ ಮೃಣಾಲಿನಿ ಸಾರಾಭಾಯಿ ಅವರು ತಮ್ಮ ಮಗಳು ಮಲ್ಲಿಕಾ ಸಾರಾಭಾಯಿ ಅವರನ್ನು ತಮ್ಮಂತೆ ಬೆಳೆಸಿದರು. ಕ್ಷುಲ್ಲಕ ಪ್ರಭಾವಕ್ಕೆ ಒಳಗಾಗದೆ ಗೌರವಾನ್ವಿತ ವ್ಯಕ್ತಿತ್ವವನ್ನು ರೂಢಿಸಿಕೊಂಡು ಹೋಗಲು ನೆಲೆಯನ್ನು ನಿರ್ಮಾಣ ಮಾಡಿದರು.
ಮೇಲಿನ ಪ್ರಾರಂಭದ ಸಾಲುಗಳನ್ನು ಲಂಕೇಶ್ ಅವರು ದಾಖಲಿಸಲು ಕಾರಣ: ಪೀಟರ್ ಬ್ರೂಕ್ ಎಂಬ ಬಹುದೊಡ್ಡ ವ್ಯಕ್ತಿತ್ವದ ನಿರ್ದೇಶಕ ‘ಮಹಾಭಾರತ’ವನ್ನು ಅತ್ಯಂತ ಮಾರ್ಮಿಕವಾಗಿ ನಿರ್ದೇಶಿಸಿದರು.ಅದು ದಾಖಲೆಯ ಕಾಲಾವಧಿಯ ನಾಟಕ. ಹದಿನಾಲ್ಕು ಗಂಟೆಗಳಷ್ಟು ದೀರ್ಘ ಸಮಯದಲ್ಲಿ ‘ಎಪಿಕ್ ಥಿಯೇಟರ್’ ಎಂಬ ಪಾರಂಪಾರಿಕ ಸಂಧಿಗೆ ಮತ್ತೆ ಶ್ರೀಮಂತಿಕೆಯನ್ನು ತಂದುಕೊಟ್ಟವರು. ಹಾಗೆ ನೋಡಿದರೆ ಪೀಟರ್ ಬ್ರೂಕ್ ರಾತ್ರೋರಾತ್ರಿ ನಿರ್ದೇಶಕರಾಗಿ ‘ಮಹಭಾರತ’ವನ್ನು ತಮ್ಮ ಕೈಗೆ ತೆಗೆದುಕೊಂಡವರಲ್ಲ.ಅದಕ್ಕಿಂತ ಮೊದಲು ಶೇಕ್ಸ್‌ಪಿಯರ್‌ನ, ಚೆಕಾವ್‌ನ, ಇಬ್ಸೆನ್‌ನ ನಾಟಕಗಳನ್ನು ಸಾರ್ಥಕವೆನ್ನುವಂತೆ ನಿರ್ದೇಶಿಸಿ ಯೂರೋಪಿನ ಸಾಂಸ್ಕೃತಿಕ ಮನಸ್ಸುಗಳ ನಡುವೆ ನೆಲೆಯನ್ನು ಕಂಡುಕೊಂಡವರು. ಈ ಹಿನ್ನೆಲೆಯಲ್ಲಿ ‘ಮಹಾಭಾರತ’ದಂಥ ದಂಡಕಾರಣ್ಯದ ಸ್ವರೂಪವನ್ನು ತುಂಬಿಕೊಂಡಿದ್ದ ಮಹಾಕಾವ್ಯವು ಪೀಟರ್ ಬ್ರೂಕ್ ಅವರ ಗಮನಕ್ಕೆ ಬಂದಾಗ ಪುಳಕಿತರಾದರು. ರಂಗದ ಮಲೆ ತಂದು ಅದರ ದಟ್ಟವಾದ ಜೀವನ ಸಂಬಂಧಿ ಘಟನೆಗಳನ್ನು ಹೇಗೆ ಪರಿಚಯಿಸುವುದು ಎಂದು ಮಹಾನ್ ಋಷಿಯಂತೆ, ವ್ಯಾಸನ ರೀತಿಯಲ್ಲಿ ಯೋಚಿಸಿದವರು, ಅದಕ್ಕೆ ರಂಗಭೂಮಿಯ ವ್ಯಾಕರಣವನ್ನು ತುಂಬಿದವರು.ಆ ವ್ಯಾಕರಣ ಎಷ್ಟು ಅದ್ಭುತವಾಗಿದೆಯೆಂದರೆ, ಹೀಗೂ ನೋಡಲು, ಹೀಗೂ ನಿರ್ದೇಶಿಸಲು ಸಾಧ್ಯವಾ?ಎಂಬ ಪ್ರಶ್ನೆಗಳನ್ನು ರಂಗತಜ್ಞರು ಯೋಚಿಸುವಂತೆ ಮಾಡಿಬಿಟ್ಟರು.1984ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಬರುವ ಮುನ್ನ ಬಹುದೊಡ್ಡ ಸುದ್ದಿಯನ್ನು ಮಾಡುತ್ತಲೇ ಬಂದಿತ್ತು. ಅದರ ಕಾಲದ ವ್ಯಾಪ್ತತೆ ಮತ್ತು ಪ್ರೆಸೆಂಟ್ ಮಾಡಿರುವ ಕ್ರಮದ ಬಗ್ಗೆ ಅರ್ಥಪೂರ್ಣವಾದ ವ್ಯಾಖ್ಯಾನಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ರಂಗ ತಜ್ಞರಿಂದ ಪಡೆದಿತ್ತು.ಅದೂ ಕೂಡ ಭಾಷೆ ಮತ್ತು ಸಾಮಾಜಿಕ ಪರಿಸರದ ಎಲ್ಲೆಗಳನ್ನು ದಾಟಿರುವಂಥದ್ದು .ಇದರ ಬಗ್ಗೆ ಬಂದಿರುವ ವಿಮರ್ಶಾತ್ಮಾಕ ಲೇಖನಗಳೇ ಒಂದು ದೊಡ್ಡ ಕೃತಿಯಾಗಬಹುದು.ಯಾಕೆಂದರೆ ಹಾಗೆ ಯೋಚಿಸುವಂತೆ ವ್ಯಾಪ್ತತೆಯನ್ನು ಪಡೆದಿರುವಂಥದ್ದು.ಇದು ಧುತ್ತನೆ ಮುಖಾಮುಖಿಯಾಗ ತೊಡಗಿದ್ದು; ಒಂದು ಸೂಕ್ಷ್ಮ ನೋಟ ಎದುರಾಗಿದ್ದರಿಂದ.ಅಪ್ರತಿಮ ಕಲಾವಿದೆ ಮತ್ತು ಸಾಮಾಜಿಕ ಕಾರ್ಯಕರ್ತೆ ಮೃಣಾಲಿನಿ ಸಾರಾಭಾಯಿ ಅಂತಿಮ ದರ್ಶನಕ್ಕೆ ನೂರಾರು ಮಂದಿ ಸೇರಿದ್ದಾರೆ.ಅಲ್ಲಿ ಮಲ್ಲಿಕಾ ಸಾರಾಭಾಯಿ ಅವರು ತಮ್ಮ ತಾಯಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವ ಕ್ರಮವೇ ಅಭೂತಪೂರ್ವವಾದದ್ದು.ಆ ಭಂಗಿಯು ನೃತ್ಯ ರೂಪಕದಲ್ಲಿ ವಿಷಾದಮಯತೆಯನ್ನು ದಟ್ಟಗೊಳಿಸುವಂಥದ್ದು.ಹಾಗೆಯೇ ಕೊನೆಯ ಶಾಶ್ವತ ನಿದ್ರೆಯಲ್ಲಿರುವ ಮೃಣಾಲಿನಿ ಸಾರಾಭಾಯಿ ಅವರ ಒಂದು ಭಾವ ಚಿತ್ರವಂತೂ ಎಷ್ಟು ಬಾರಿ ನೋಡಿದರೂ ತೃಪ್ತಿಯೇ ಆಗುವುದಿಲ್ಲ.ಅದು ರವೀಂದ್ರನಾಥ ಟ್ಯಾಗೂರರ ಬಳಿ ಸರಳವಾದ ಸೀರೆಯ ಉಡುಪಿನಲ್ಲಿ ಕೂತಿರುವ ಕ್ರಮ.ಯಾರೋ ಮಹಾನ್ ಛಾಯಾಚಿತ್ರ ಕಲಾವಿದ ಸೃಷ್ಟಿಸಿರುವಂಥದ್ದು. ಆ ಸೃಷ್ಟಿಗೆ ಆತ್ಮೀಯವಾಗಿ ಹತ್ತಿರವಾಗಿರುವಂಥದ್ದು: ಮಲ್ಲಿಕಾ ಸಾರಾಭಾಯಿ ಅವರು ತಮ್ಮ ಅಮ್ಮನಿಗೆ ಅಂತಿಮವಾಗಿ ಸಲ್ಲಿಸಿದ ನಮನದ ಭಂಗಿ.
ಇದನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವ ಎಷ್ಟೋ ಅಪೂರ್ವ ಘಟನೆಗಳು, ಗೆಜ್ಜೆಕಟ್ಟಿ ಕುಣಿಯುವ ರೀತಿಯಲ್ಲಿ ಗೋಚರವಾಗ ತೊಡಗಿದವು. ಅದು ಇಪ್ಪತ್ತೇಳು ವರ್ಷಗಳ ಹಿಂದೆ ಬೆಂಗಳೂರಿಗೆ ಸಮೀಪದ ವಿದ್ಯಾನಗರ ಎಂಬ ಸ್ಮರಣೀಯ ಜಾಗದಲ್ಲಿ, ಮೂರು ದಿನ ಮಲ್ಲಿಕಾ ಸಾರಾಭಾಯಿ ಹಾಗೂ ಆಕೆಯ ಗುರು, ನಿರ್ದೇಶಕ ಎಲ್ಲವೂ ಆಗಿದ್ದ ಪೀಟರ್ ಬ್ರೂಕ್ ಬಿಟ್ಟು ಹೋದ ಶ್ರೀಮಂತ ನೆನಪುಗಳನ್ನು ಹೇಗೆ ಮರೆಯಲು ಸಾಧ್ಯ.ಹಾಗೆ ನೋಡಿದರೆ ಪಿಟೀಲು ಚೌಡಯ್ಯ ಅವರ ಸ್ಮಾರಕ ಭವನದಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನ್ನಬಹುದಾದ ‘ಮಹಾಭಾರತ’ ನಾಟಕದ ಪ್ರದರ್ಶನವಿತ್ತು.ಅದು ಒಂಬತ್ತು ಗಂಟೆಯ ಪ್ರಯೋಗ.ಇದೇ ಯುರೋಪಿನ ಪ್ರೇಕ್ಷಕರಿಗೆ ಕೊಟ್ಟದ್ದು ಹದಿನಾಲ್ಕು ಗಂಟೆಯದ್ದು. ಇದನ್ನು ಲಂಕೇಶ್ ಅವರ ಅತ್ಯಂತ ಧ್ಯಾನಸ್ಥ ಸ್ಥಿತಿಯಿಂದ ನೋಡಿದ್ದರು.ಸಾಮಾನ್ಯವಾಗಿ ಇಷ್ಟು ದೀರ್ಘ ಕಾಲ ಯಾವ ಪ್ರದರ್ಶನದಲ್ಲೂ ಅವರು ಕೂತವರಲ್ಲ. ಯಾಕೆಂದರೆ, ‘ಮೈ ಫೇರ್ ಲೇಡಿ, ಡಾ.ಜಿವಾಗೋ’ ರೀತಿಯಂಥ ಅದ್ಭುತ ಚಿತ್ರಗಳನ್ನು ಅವರೊಡನೆ ಎರಡೆರಡು ಕಂತುಗಳಲ್ಲಿ ನೋಡಿದ್ದೇವೆ. ಅವರಿಗೆ ಮಧ್ಯೆಮಧ್ಯೆ ಸಿಗರೇಟು ಸೇದುವ ಹುಚ್ಚು ಕೂಡ ತೀವ್ರವಾಗಿದ್ದರಿಂದ ಹೀಗೆ ಮಾಡುತ್ತಿದ್ದರು ಅನ್ನಿಸುತ್ತದೆ. ಇರಲಿ, ಪೀಟರ್ ಬ್ರೂಕ್‌ನಂಥ ಮಹಾನುಭಾವ ತಮ್ಮ ಈ ದೀರ್ಘ ನಾಟಕಕ್ಕೆ ಸುಮಾರು ಮೂವತ್ತಾರು ದೇಶಗಳಿಂದ ನಟ ನಟಿಯರನ್ನು ಹುಡುಕಿ ತಂದು ಜಗತ್ತಿನ ಪ್ರೇಕ್ಷಕರ ಮುಂದೆ ನಿಲ್ಲಿಸಿದ್ದರು.ಯಾರಿಗೂ ರಂಗಭೂಮಿಗೆ ಮೀಸಲಾದ ಸಾಂಪ್ರದಾಯಿಕ ಉಡುಪುಗಳಿಲ್ಲ.ಎಲ್ಲರೂ ಆಯಾ ಪಾತ್ರಗಳಿಗೆ ಅರ್ಥವಂತಿಕೆಯನ್ನು ತುಂಬುವಂಥ ಸಾಮಾನ್ಯ ಉಡುಪನ್ನು ಧರಿಸಿದ್ದರು. ಇಷ್ಟೊಂದು ಕಲಾವಿದರನ್ನು ‘ಮಹಾಭಾರತ’ದ ಅಧ್ಯಯನದ ನೆಲೆಯಲ್ಲಿ ಹುಡುಕಿ ತರಬೇಕಾದರೆ, ಎಲ್ಲೆಲ್ಲಿ ಸುತ್ತಾಡಿರಬಹುದು. ಆಯ್ಕೆಯಾಗಿ ಮುಖಾಮುಖಿಯಾದವರು ಲೆಕ್ಕಕ್ಕೆ ಸಿಗದೇ ಇರುವಂಥವರು. ಅದಕ್ಕೆ ಸಂಬಂಧಿಸಿದ ಅವರ ದಿನಚರಿಯ ಪುಟಗಳನ್ನು ಅವಲೋಕಿಸುವಂತಿದ್ದರೆ, ಮಾರ್ಮಿಕತೆಯ ಆಳ ಎಷ್ಟು ಗಾಢವಾಗಿರುತ್ತದೆ. ಪಿಕಾಸೋ ರೀತಿಯ ಬಹುದೊಡ್ಡ ಕಲಾವಿದರ ಒಂದಷ್ಟು ದಿನಚರಿಗಳನ್ನು ಗಮನಿಸಿದ್ದೇನೆ. ಆ ಅಪೂರ್ವ ಕಪ್ಪು ಬಿಳುಪಿನ ಗೆರೆಗಳಿಗೆ ರಕ್ತ ಮಾಂಸವನ್ನು ತುಂಬುವ ಧ್ಯಾನಸ್ಥತೆಯ ಹಿಂದೆ ಕೆಲಸ ಮಾಡಿರಬಹುದಾದ ಚಿಂತನಾ ಕ್ರಮವೂ ವರ್ಣನೆಗೂ ಮೀರಿದ್ದು ಕೂಡ ಆಗಿರುತ್ತದೆ.
ಈ ದೃಷ್ಟಿಯಿಂದ ವ್ಯಾಸನಂಥ ಬಹುದೊಡ್ಡ ಕವಿಯ, ದಾರ್ಶನಿಕ ಕೂಸಾಗಿರುವ ‘ಮಹಾಭಾರತ’ವು ಯಾವ ವಿಧದಲ್ಲಿ ಆಕಾರಗೊಂಡಿತು ಎಂಬುದು ಸೋಜಿಗದ ಸಂಗತಿಯೇ ಆಗಿದೆ. ಅದೇ ರಿತಿಯಲ್ಲಿ ವ್ಯಾಸನ ಪ್ರತಿ ರೂಪದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಪೀಟರ್ ಬ್ರೂಕ್‌ನ ತಪಸ್ಸು ಕೂಡ ಸಾರ್ಥಕವಾದದ್ದೇ ಆಗಿದೆ. ಇಲ್ಲದಿದ್ದರೆ, ದೃಶ್ಯ ಮಾಧ್ಯಮದಲ್ಲಿ ಹೀಗೆ ದಂಡಕಾರಣ್ಯ ಪ್ರಮಾಣದಲ್ಲಿ ರಂಗದ ಮೇಲೆ ‘ಮಹೋನ್ನತ’ ಎನ್ನುವಂತೆ ಜೀವ ತುಂಬಿಸಿ ಓಡಾಡಿಸುವುದು ಅಷ್ಟು ಸುಲಭದ ಕೆಲಸವಲ್ಲ.ಅದನ್ನು ಪ್ರತಿಭೆ ಮತ್ತು ಚಿಂತನೆ ಎರಡನ್ನು ಮೇಳೈಸಿ ನಮಗೆ ಕೊಟ್ಟು ಹೋಗಿದ್ದಾರೆ.ಇಂಥ ಅದ್ಭುತ ಕೊಡುಗೆಯ ಬಗ್ಗೆಯೂ ‘ನೀನಾಸಂ’ ಸ್ಕೂಲಿನ ಚಿಂತನೆಯವರು ಸಾಕಷ್ಟು ಆಕ್ಷೇಪಣೆಗಳನ್ನು ಎತ್ತಿದ್ದರು. ಈಗಲೂ ಅವು ತರ್ಕದ ಮಾತುಗಳೇ ಅನ್ನಿಸಿ ಬಿಟ್ಟಿದೆ. ಯಾಕೆಂದರೆ ಯಾವುದೇ ಮಾಹಾನ್ ಕೃತಿ ವಿಶಾಲವಾದ ಕ್ಯಾನವಸನ್ನು ತನ್ನ ಸುತ್ತಲೂ ಎಳೆದುಕೊಂಡು ನಮ್ಮ ಮುಂದೆ ನಿಂತಾಗ, ವ್ಯಾಖ್ಯಾನಗಳಿಗೆ ಕೊರತೆ ಇರಲು ಹೇಗೆ ಸಾಧ್ಯ? ಇಂಥ ವ್ಯಾಖ್ಯಾನಗಳ ಮಹಾಪೂರವೇ ಒಮ್ಮೆ ಒಂದು ಸಂಜೆ ದಕ್ಷಿಣ ಕನ್ನಡದ ಮಹಾಕಾವ್ಯದಂತಿರುವ ಮಲ್ಪೆಯ ಸಮುದ್ರ ದಂಡೆಯಲ್ಲಿ ರೇಷ್ಮೆ ಬಣ್ಣದ ಮರಳಿನ ಜಮಖಾನ ಮೇಲೆ ಕೂತು ನಡೆಸಿದ ವಾಗ್ವಾದ ಈಗಲೂ ನನ್ನ ಕಣ್ಣಲ್ಲಿ ಮನಸ್ಸಿನಲ್ಲಿ ತುಂಬಿಕೊಂಡಿದೆ. ಅಂದು ಕೆ.ವಿ.ಸುಬಣ್ಣ, ಯಶವಂತ್ ಚಿತ್ತಾಲ, ಶಾಂತಿನಾಥ ದೇಸಾಯಿ, ಹರಿದಾಸ ಭಟ್ಟ, ಡಿ.ಆರ್.ನಾಗರಾಜ್, ಮುರಾರಿ ಬಲ್ಲಾಳ ಮುಂತಾದವರೆಲ್ಲ ಇದ್ದೆವು. ಈ ಎಲ್ಲ ಚರ್ಚೆ, ಸಂವಾದಕ್ಕೆ ಸಮುದ್ರದ ಮನಮೋಹಕ ಅಲೆಗಳ ಧ್ವನಿಯು ಹಿನ್ನೆಲೆ ಗಾಯನದ ರೀತಿಯಲ್ಲಿತ್ತು.ಇದನ್ನು ಎಷ್ಟು ಸಂದರ್ಭಗಳಲ್ಲಿ ಪ್ರಸ್ತಾಪಿಸಿದರೂ, ಹೊಸ ಹೊಸ ಒಳ ನೋಟಗಳು ‘ಅನುಶೀಲನೆ’ಗೊಳ್ಳುತ್ತಲೇ ಇರುತ್ತದೆ. ಎರಡೂವರೆ ಸಾವಿರ ವರ್ಷಗಳಿಂದ ಈ ರಾಮಾಯಣ ಮಹಾಭಾರತಗಳನ್ನು ಚರ್ಚಿಸುತ್ತಿದ್ದರೂ, ನಮಗೆ ತೃಪ್ತಿಯೆಂಬುದೇ ಇಲ್ಲ.ಮಹಭಾರತದ ಪುಟಗಳ ಸಾಲುಗಳಿಗಿಂತಲೂ ಹೆಚ್ಚಾಗಿ, ಜಗತ್ತಿನಾದ್ಯಂತ ಕೃತಿಗಳು ರಚನೆಗೊಂಡಿವೆ, ರಚನೆಗೊಳ್ಳುತ್ತಲೇ ಇವೆ. ಈ ದೃಷ್ಟಿಯಿಂದ ಪೀಟರ್ ಬ್ರೂಕ್ ಮಲ್ಪೆಯ ಸಮುದ್ರ ದಂಡೆಯಲ್ಲಿ ಚರ್ಚೆಗೆ ಒಳಪಟ್ಟಂತೆ, ವಿಶ್ವವ್ಯಾಪಿ ಹೀಗೆಯೇ ವ್ಯಾಖ್ಯಾನಕ್ಕೆ ಒಳಪಟ್ಟಿರುತ್ತದೆ. ಇದಕ್ಕೆ ಪೂರಕವೆಂಬಂತೆ ಲಂಕೇಶ್ ಅವರ ಈ ಸಾಲುಗಳನ್ನು ದಾಖಲಿಸಲು ಭಯಸುವೆ: ‘‘ಇದು ಒಂದು ದೇಶದ ಕತೆಯಲ್ಲ. ದೇಶಗಳ ಸ್ವಪ್ರತಿಷ್ಠೆ ಮೀರಿದ ಕತೆ.ಒಂದಾನೊಂದು ಕಾಲಕ್ಕೆ ಇಂಗ್ಲೆಂಡ್ ಜಗತ್ತಿನ ಪ್ರತೀಕ ಎಂದು ತಿಳಿದಿತ್ತು.ಅದು ಸುಳ್ಳಾಯಿತು.ಆಮೇಲೆ ಅಮೆರಿಕ ತಾನು ಜಗತ್ತಿನ ಪ್ರತೀಕ ಎಂದುಕೊಂಡಿತು.ಅದೂ ಬೊಗಳೆಯಾಯಿತು.ಇವತ್ತು ಮನುಕುಲದ ಮಹಾಸಂಕೇತಕ್ಕಾಗಿ ಮನುಷ್ಯ ಕುಲವನ್ನೇ ನೋಡಬೇಕಾಗಿದೆ. ಮಹಾಭಾರತ ಮನುಕುಲದ ಕತೆ, ಮಹಾವೃತ್ತಾಂತ. ಇದನ್ನು ಮಂಡಿಸಲು ಅಂತಾರಾಷ್ಟ್ರೀಯ ನಟ ವರ್ಗ ಅನಿವಾರ್ಯವೆನ್ನಿಸಿತು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಬ್ರೂಕ್ ಹೇಳಿದ್ದನ್ನು ಅಭಿಮಾನದಿಂದ ಪ್ರಸ್ತಾಪಿಸಿದ್ದಾರೆ. ಅಷ್ಟರಮಟ್ಟಿಗೆ ಬ್ರೂಕ್ ಅವರನ್ನು ಲಂಕೇಶ್ ಅವರು ಒಳಗೆ ಬಿಟ್ಟುಕೊಂಡಿದ್ದರು.ನನ್ನಂಥವರಿಗೂ ಜೀವಂತವಾಗಿ ಕಾಪಾಡಿಕೊಳ್ಳಯ್ಯ ಎಂದು ಬದುಕಿನ ಮಹತ್ತರ ಸಂಗತಿಗಳನ್ನೆಲ್ಲ ಪಕ್ಕದಲ್ಲಿ ಕೂರಿಸಿಕೊಂಡು ಹೇಳಿ ಹೋಗಿದ್ದಾರೆ. ಅದರಲ್ಲಿ ಒಂಬತ್ತು ಗಂಟೆ ಅವರ ಪಕ್ಕದಲ್ಲಿ ಕೂತು ‘ಪೀಟರ್ ಬ್ರೂಕ್ ಅವರ ಆ ಮಹಾರಂಗ ಪ್ರಯೋಗ’ಕ್ಕೆ ಹೇಗೆ ಸ್ಪಂದಿಸುತ್ತಿದ್ದರು ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಯಿತು. ‘‘ಏನೋ ಶೂದ್ರ ಮಹಾಭಾರತವೇ ನಮ್ಮ ಮುಂದೆ ನಡೆದಂತೆ ಹೇಳಿಬಿಟ್ಟಿದ್ದಾನೆ ಬ್ರೂಕ್’’ಎಂಬ ಧ್ವನಿಯು ಈಗಲೂ ಒಂದು ಮಾರ್ಮಿಕ ಧ್ವನಿಯಾಗಿಯೇ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.