​ಭಾಷೆಯೂ ಊರಿನ ಪ್ರತಿಬಿಂಬವಾಗುವುದು | Vartha Bharati- ವಾರ್ತಾ ಭಾರತಿ

--

​ಭಾಷೆಯೂ ಊರಿನ ಪ್ರತಿಬಿಂಬವಾಗುವುದು

ನಾವು ಕೃಷ್ಣಾಪುರದ ದೃಶ್ಯದಲ್ಲಿದ್ದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಪಣಂಬೂರು ವೆಂಕಟ್ರಮಣ ಐತಾಳ ಎನ್ನುವವರು ನಮ್ಮ ಮನೆಗೆ ಬಂದರು. ಅವರನ್ನು ಈ ಮೊದಲೇ ಕೇಳಿ, ನೋಡಿ ಗೊತ್ತಿತ್ತು. ಅವರು ಇನ್‌ಕಮ್‌ಟ್ಯಾಕ್ಸ್ ಆದಾಯ ತೆರಿಗೆಯ ಮಂಗಳೂರಿನ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ಗಮಕಿಯೂ, ಭಾಗವತರೂ ಆಗಿದ್ದಂತೆಯೇ ಸಂಗೀತವನ್ನು ಶಾಸ್ತ್ರೀಯವಾಗಿಯೂ ಅಭ್ಯಾಸ ಮಾಡಿದ್ದರು. ನನ್ನ ಸಂಗೀತ ಗುರುಗಳಾದ ಎನ್. ಸುಂದರಾಚಾರ್ಯರ ಶಿಷ್ಯರೇ ಆಗಿದ್ದರು.

ಪಣಂಬೂರು ಐತಾಳರ ಮನೆಯೆನ್ನುವುದು ಬಹುದೊಡ್ಡ ಹಾಗೂ ಈಗಾಗಲೇ ಹಲವು ಕವಲುಗಳುಳ್ಳ ಕುಟುಂಬ. ನನಗೆ ಕಾಟಿಪಳ್ಳದಲ್ಲಿ ಸ್ಥಳ ಖರೀದಿಸಲು ಒತ್ತಾಸೆ ನೀಡಿ ಸಹಕರಿಸಿದ ನನ್ನ ಮಿತ್ರರು ಕೂಡ ಇದೇ ಕೂಡು ಕುಟುಂಬಕ್ಕೆ ಸೇರಿದ ಐತಾಳರೇ. ಈ ಕವಲಲ್ಲಿ ನನ್ನ ಸಹೋದ್ಯೋಗಿ ಹಾಗೂ ಅವರ ಅಣ್ಣ ಸುರತ್ಕಲಲ್ಲಿ ಶಿಕ್ಷಕರಾಗಿದ್ದುದರಿಂದ ಅವರ ಕುಟುಂಬ ಎರಡು ಸೈಟುಗಳನ್ನು ಇಲ್ಲಿ ಪಡೆದಿದ್ದು, ಉಳಿದಂತೆ ಪಡೆದ ಪರಿಹಾರ ಮೊತ್ತದಿಂದ ಬಂಟ್ವಾಳದ ನರಿಕೊಂಬುವಿನಲ್ಲಿ ಸ್ಥಳ ಖರೀದಿಸಿ ಉಳಿದ ಮಕ್ಕಳೊಂದಿಗೆ ಪುರೋಹಿತರಾದ ಅವರ ತಂದೆ ನರಸಿಂಹ ಐತಾಳರು ಕೃಷಿ ಹಾಗೂ ಪೌರೋಹಿತ್ಯದೊಂದಿಗೆ ನೆಲೆಸಿದ್ದರು.

ಹಾಗೆಯೇ ಇನ್ನೊಬ್ಬರು ವಕೀಲರೂ ಮಾಜಿ ಶಾಸಕರೂ, ಯಕ್ಷಗಾನ ಅರ್ಥಧಾರಿಗಳೂ ಆಗಿದ್ದ ಪಿ.ವಿ. ಐತಾಳರು ಕುಳಾಯಿ ಚಿತ್ರಾಪುರದ ಬಳಿ ನೆಲೆಸಿದ್ದರು. ಹಾಗೆಯೇ ಇವರ ಕುಟುಂಬದ ಇನ್ನು ಕೆಲವು ಸದಸ್ಯರು ಕೊಡಿಯಾಲಬೈಲಿನ ಸಾಧುಬೀಡಿಯ ಸಮೀಪದ ‘ಸುಖಸಾಗರ’ ಎಂಬಲ್ಲಿ ವಾಸಿಸುತ್ತಿದ್ದರು. ಇವರಲ್ಲೊಬ್ಬರು ಮಂಗಳೂರಿನ ಕರ್ನಾಟಕ ಪೊಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಯಕ್ಷಗಾನ ವೇಷಧಾರಿಗಳಾಗಿಯೂ ಇದ್ದುದು, ಹೀಗೆ ಐತಾಳ ಕುಟುಂಬದ ಸದಸ್ಯರ ಪರಿಚಯ ಇತ್ತು.

ಈ ಎಲ್ಲ ಪರಿಚಯದ ಹಿನ್ನೆಲೆಯ ನಾವು ಈಗ ನೆಲೆಸಿದ ಊರಿನ ಗಣ್ಯರಲ್ಲಿ ಒಬ್ಬರಾದ ವೆಂಕಟ್ರಮಣ ಐತಾಳರು ನಮ್ಮ ಮನೆಗೆ ಬಂದುದು ನಮ್ಮ ಮನೆಯ ಆಸುಪಾಸಿನ ಮನೆಗಳವರಿಗೆ ಸಾಮಾನ್ಯ ಸುದ್ದಿಯಲ್ಲ ವಿಶೇಷವಾದುದೇ. ಮನೆಗೆ ಬಂದ ಐತಾಳರು ಉಭಯ ಕುಶಲೋಪರಿ, ಲೋಕಾಭಿರಾಮ ಮಾತುಗಳೊಂದಿಗೆ ತಮ್ಮ ಮನೆ ಎಲ್ಲಿದೆ ಎನ್ನುವುದನ್ನು ತಿಳಿಸಿ, ಅವರ ಜತೆಯಲ್ಲಿ ತಂದೆ ತಾಯಿ, ತನ್ನ ಮಡದಿ, ಮಕ್ಕಳು ಹಾಗೆಯೇ ತಮ್ಮ ಸೀತಾರಾಮ ಐತಾಳರ ಸಂಸಾರ ಅಲ್ಲದೆ ಇಬ್ಬರು ತಂಗಿಯಂದಿರು ಶಾರದಾ, ನಾರಾಯಣಿ ಎನ್ನುವವರ ಬಗ್ಗೆ ತಿಳಿಸಿ ಶಾರದಾ ಬಾಲವಾಡಿ ಶಾಲೆಯಲ್ಲಿ ಟೀಚರ್ ಆಗಿರುವ ವಿಷಯವನ್ನೂ ತಿಳಿಸಿದರು. ನಾವೂ ನಮ್ಮ ಮಗಳನ್ನು ಬಾಲವಾಡಿಗೆ ಹಾಕಬೇಕೆನ್ನುವ ವಿಚಾರದಲ್ಲಿದ್ದುದು ಈ ಬಗ್ಗೆ ಈ ಮಾಹಿತಿ ದೊರಕಿದ್ದು ಎಲ್ಲವು ಒಳ್ಳೆಯದಾಯಿತು ಎಂದು ಮಾತುಕತೆಯಾಡಿದೆವು.

ಬಹಳ ಆತ್ಮೀಯರಾದವರು ಪರಿಚಿತರು ಈ ಊರಲ್ಲಿಯೂ ಇದ್ದಾರೆ ಎನ್ನುವುದು ತಿಳಿದು ಸಂತೋಷವಾಯಿತು. ಬಂದವರಿಗೆ ಬಾಯಾರಿಕೆ ನೀಡುವುದು ಧರ್ಮವಲ್ಲವೇ? ನಾನು ಚಹಾ ತಯಾರಿಸಿ ತಂದುಕೊಟ್ಟೆ. ಅವರು ಸ್ವೀಕರಿಸಿದರು. ನಮ್ಮ ಎದುರು ಮನೆಯ ಅಜ್ಜಿ ಅವರ ಮನೆಯ ಕಿಟಕಿಯಿಂದ ಇದೆಲ್ಲವನ್ನೂ ನೋಡುತ್ತಿದ್ದುದನ್ನು ನಾನೂ ಗಮನಿಸುತ್ತಿದ್ದೆ. ನಾವು ಅಬ್ರಾಹ್ಮಣರಾಗಿದ್ದು, ಇದೀಗ ಅಜ್ಜಿಯ ಗೌರವಕ್ಕೆ ಯೋಗ್ಯರಾದ ಐತಾಳರು ನಮ್ಮ ಮನೆಯಲ್ಲಿ ಚಹಾ ಸ್ವೀಕರಿಸಿದ್ದು ಅವರಿಗೆ ಆಶ್ಚರ್ಯದಲ್ಲಿ ಆಶ್ಚರ್ಯವಾಗಿ ನಮ್ಮ ಬಗ್ಗೆ ಕುತೂಹಲ ತಡೆಯಲಾಗದ ಸಂಶಯ ಉಂಟಾಯಿತು ಎನ್ನುವುದು ಮುಂದೆ ಎಷ್ಟೋ ಸಮಯದ ಬಳಿಕ ನನಗೆ ಗೊತ್ತಾದ ವಿಷಯ. ಇದಕ್ಕೆ ಕಾರಣವಾದ ಒಂದು ಸಂಗತಿ ಏನೆಂದರೆ ನಾವು ಮನೆಯಲ್ಲಿ ‘ಮಧುಮಾಂಸ’ ಉಪಯೋಗಿಸದವರು. ದಿನಾ ಸಂಜೆ ಮನೆಯಲ್ಲಿ ಭಜನೆ ಮಾಡುತ್ತಿದ್ದೆವು. ಹೊಸ್ತಿಲಿಗೆ ರಂಗೋಲಿ ಬರೆಯುತ್ತಿದ್ದೆವು. ಇವೆಲ್ಲಾ ಅಬ್ರಾಹ್ಮಣರ ಮನೆಯಲ್ಲಿ ಅಂದು ಇಲ್ಲದ ವಿಷಯವಾಗಿತ್ತು.

ಆ ಅಜ್ಜಿಯ ಮನೆಯಲ್ಲಿ ಅಜ್ಜಿಯ ಹಿರಿಯ ಮಗಳು ಮತ್ತು ಅವರ ಮೂವರು ಮಕ್ಕಳು ಇದ್ದು, ಮೊಮ್ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಮಗಳು ಬೀಡಿ ಕಟ್ಟುತ್ತಿದ್ದರು. ಅವರ ಮನೆಯ ಬಲಬದಿಯಲ್ಲೇ ಇದ್ದ ಎತ್ತರದ ಸೈಟಲ್ಲಿ ಅಜ್ಜಿಯ ಹಿರಿಯ ಮಗ ಮತ್ತು ಅವರ ಸಂಸಾರ ಇತ್ತು. ಅಜ್ಜಿಯ ಇನ್ನೊಬ್ಬ ಮಗ ಮುಂಬೈಯಲ್ಲಿದ್ದು ಅವಿವಾಹಿತರಾಗಿದ್ದು ಅಜ್ಜಿಗೆ ದುಡ್ಡು ಕಳುಹಿಸಿಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಜ್ಜಿಗೆ ಒಂದು ಹಂತದಲ್ಲಿ ತಾನು ಶ್ರೀಮಂತೆ ಎಂಬ ಭಾವ ಇದ್ದುದರಲ್ಲಿ ಅಸಹಜವಾದುದು ಏನೂ ಇಲ್ಲ. ಆದರೆ ತನ್ನ ಪಕ್ಕದ ಮನೆಯಲ್ಲೇ ಇದ್ದ ಮಗನಲ್ಲಿ ಮಾತ್ರ ಅಸಮಾಧಾನವಿತ್ತು. ಕಾರಣ ಇಷ್ಟೇ. ಮನೆಯಲ್ಲಿದ್ದ ಮಗಳು ದಾಂಪತ್ಯದ ವಿರಸದಿಂದ ಗಂಡನ ಮನೆ ಬಿಟ್ಟು ತವರಿಗೆ ಬಂದಿದ್ದರು.

ಈ ಕಾರಣದಿಂದ ಅವರ ಸೊಸೆಯೂ ತವರಿಗೇ ಹೋಗಬೇಕೆನ್ನುವುದು ಅಜ್ಜಿಯ ವಾದ. ಈ ಅಕ್ಕ, ತಮ್ಮನಿಗೆ ಆ ಮನೆಯ ಅಣ್ಣ, ತಂಗಿಯೊಂದಿಗೆ ವಿವಾಹವಾಗಿತ್ತು. ಆದರೆ ಅಜ್ಜಿಯ ಮಗ ತನ್ನ ಸೋದರಿ ತವರಿಗೆ ಬಂದುದಕ್ಕೆ ಮುಯ್ಯಿಯಾಗಿ ತನ್ನ ಮಡದಿಯನ್ನು, ಮಕ್ಕಳನ್ನು ತವರಿಗೆ ಕಳುಹಿಸುವ ಅನ್ಯಾಯವನ್ನಂತೂ ಮಾಡಲಿಲ್ಲ. ಇದು ಅಜ್ಜಿಯ ಅತ್ತೆತನಕ್ಕೆ ಸವಾಲು ಆಗಿತ್ತು. ಅಂತೂ ನೆರೆಕರೆಯ ಇಂತಹ ಕತೆಕೇಳಿ ನಮಗೇನು ಮಾಡಲಿದೆ. ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡಬೇಕು. ಈ ಎರಡು ಮನೆಗಳ ಸಿಟ್ಟನ್ನು ಹೆಚ್ಚಿಸುವ ಕೆಲಸ ನಮ್ಮಿಂದ ಆಗದಂತೆ ಎಷ್ಟು ಬೇಕೋ ಅಷ್ಟೇ ನಮ್ಮ ವ್ಯವಹಾರವಿದ್ದರೆ ಸಾಕು ಎಂದು ತಿಳಿದೆ.

ಹಾಗೆಯೇ ನನ್ನ ಅತ್ತೆ ಮಾವನಿಗೂ ಹೆಚ್ಚು ಆತ್ಮೀಯತೆ ಬೆಳೆಸಿಕೊಳ್ಳುವುದು ಅಗತ್ಯವಿಲ್ಲ ಎಂದೂ ತಿಳಿಸಿದೆ. ಅತ್ತೆಗೆ ಹೀಗೆ ಹೇಳಬೇಕಾದ ಅಗತ್ಯವೇ ಇರಲಿಲ್ಲ. ಯಾಕೆಂದರೆ ಯಾರಲ್ಲೂ ತಾನಾಗಿಯೇ ಮಾತನಾಡುವ ಸ್ವಭಾವ ಅವರಲ್ಲಿ ಇರಲಿಲ್ಲ. ಅಂತೂ ಅಜ್ಜಿಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದವರ ಬಗೆಗೆ ತಿಳಿದುಕೊಳ್ಳುವ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆದರೆ ಬಂದವರು ಯಾರು, ಏನು, ಎತ್ತ ಎಂಬುದು ನನ್ನ ಅತ್ತೆ ಮಾವನವರಿಗೂ ತಿಳಿಯದೆ ಇರುವುದರಿಂದ ವಿಷಯಗಳು ಪೂರ್ಣವಾಗಿ ತಿಳಿಯದೆ ಅರ್ಧಂಬರ್ಧ ತಿಳಿದುದಕ್ಕೆ ಈ ಅಜ್ಜಿಯಿಂದಲೇ ಸ್ವಲ್ಪ ಮಸಾಲೆ ಸೇರಿಸಲ್ಪಡುತ್ತಿತ್ತು ಎನ್ನುವುದೂ ಸರಿಯೇ. ಅಜ್ಜಿಯಲ್ಲಿ ಮಾತನಾಡಲು ಅವರ ಸ್ನೇಹಿತೆಯರು ಆಗಾಗ ಬಂದು ಹೋಗುತ್ತಿದ್ದ ನಮ್ಮ ಆಸುಪಾಸಿನ ಮನೆಗಳ ಇತರ ಅಜ್ಜಿಯಂದಿರೂ ಇದ್ದರು.

ನಮ್ಮ ಮನೆಯ ಬಲಬದಿಯ ಎತ್ತರದಲ್ಲಿದ್ದ ಮನೆಯ ಒಬ್ಬಂಟಿ ಮಹಿಳೆ ಹಾಗೂ ನಮ್ಮ ಮನೆಯ ಹಿಂದಿನ ಮನೆಯವರು ಈ ಅಜ್ಜಿಯ ಜಾತಿಯವರಾಗಿರದೆ ಬೇರೆ ಜಾತಿಯವರಾಗಿದ್ದರು ಎಂದು ನಿಧಾನಕ್ಕೆ ತಿಳಿಯಿತು. ಹೇಗೆಂದರೆ ಇಲ್ಲಿಯ ಮಹಿಳೆಯರಾಗಲೀ, ಗಂಡಸರಾಗಲೀ ತುಳುಭಾಷೆಯಲ್ಲಿ ವ್ಯವಹರಿಸುವವರು ಹೆಸರಿನೊಂದಿಗೆ ಜಾತಿ ಸೇರಿಸಿ ಮಾತನಾಡುತ್ತಿದ್ದರು. ಈ ರೀತಿಯ ಭಾಷಾ ಸ್ವರೂಪ ನಾನು ಹಿಂದೆ ಎಲ್ಲೂ ಕೇಳಿರಲಿಲ್ಲ, ನನ್ನ ಕೊಂಡಾಣದ ಹಳ್ಳಿಮನೆಯಲ್ಲೂ ಇರಲಿಲ್ಲ, ಕೋಟೆಕಾರಿನಲ್ಲೂ ಇರಲಿಲ್ಲ. ಬಿಜೈಕಾಪಿಕಾಡಿನಲ್ಲಂತೂ ಇರಲಿಲ್ಲ. ಅವರವರ ಹೆಸರಿನ ಜತೆಗೆ ವಯಸ್ಸಿಗೆ ಸರಿಯಾಗಿ ರಂಗಕ್ಕ, ಗಿರಿಜಕ್ಕ, ರಾಮಣ್ಣ, ಸೋಂಪಣ್ಣ ಎನ್ನುತ್ತಿದ್ದರೇ ಹೊರತು ಜಾತಿಯನ್ನು ಯಾರೂ ಹೇಳುತ್ತಿರಲಿಲ್ಲ.

ಶಾಲೆಯಲ್ಲಿ ದಾಖಲೆಯ ಹೆಸರಿನಲ್ಲೂ ಯಾರಿಗೂ ಜಾತಿಯ ಉಪನಾಮ ನನ್ನ ಬಾಲ್ಯದಲ್ಲಿ ಇರಲಿಲ್ಲ. ಮಾತ್ರವಲ್ಲ ನನ್ನ ಅಧ್ಯಾಪನದ ಪ್ರಾರಂಭದ ಹದಿನೈದು ವರ್ಷಗಳವರೆಗೂ ಇರಲಿಲ್ಲ. ಸುಮಾರು 1982ರ ಆಸುಪಾಸಿನಲ್ಲಿ ವಿದ್ಯಾರ್ಥಿಗಳ ಅದರಲ್ಲೂ ಹುಡುಗರ ಹೆಸರಲ್ಲಿ ಶೆಟ್ಟಿ, ಪೂಜಾರಿ, ಸುವರ್ಣ, ಜೈನ್ ಎಂದು ಸೇರಿಸಲು ಪ್ರಾರಂಭವಾಯಿತು. ಇವುಗಳನ್ನು ಹೇಳುವ ಉದ್ದೇಶವೇ ಒಂದೊಂದು ಸಮುದಾಯವು ತನ್ನ ಅಸ್ಮಿತೆಯನ್ನು ಕಂಡುಕೊಳ್ಳಬೇಕು ಎನ್ನುವುದು ಹೌದಾದರೂ ಆ ಅಸ್ಮಿತೆಯೇ ಕೀಳರಿಮೆಯ ಸಾಮಾಜಿಕತೆಗೆ ಅಥವಾ ಮೇಲರಿಮೆಯ ಯಾಜಮಾನ್ಯಕ್ಕೆ ಮುಂದುವರಿಯುತ್ತಾ ಸಾಗಿದೆ ಎನ್ನುವುದು ನನ್ನ ಗ್ರಹಿಕೆ.

ಇದು ಪೇಟೆಯ, ಶಿಕ್ಷಣ ಸಂಸ್ಥೆಯ ಮೂಲಕದ ನನ್ನ ಅನುಭವಗಳ ಗ್ರಹಿಕೆಯಾದರೆ, ಅವಿದ್ಯಾವಂತರೇ, ಅನಕ್ಷರಸ್ಥರೇ ಹೆಚ್ಚಾಗಿದ್ದ ಈ ಊರಲ್ಲಿ ಜನ ಸಾಮಾನ್ಯರು ತಮ್ಮನ್ನು ಜಾತಿವಾಚಕಗಳಲ್ಲಿ ಕರೆಯಿಸಿಕೊಳ್ಳುವುದರ ಮೂಲಕದ ಕೀಳರಿಮೆಯನ್ನು ಗ್ರಹಿಸಲಾರದೆ ಇದ್ದ ಮುಗ್ಧ ಜನರು ಎನ್ನುವಂತೆಯೇ ಈ ಮುಗ್ಧತೆಯೊಳಗೆ ಇದ್ದು ತಮ್ಮ ತಮ್ಮಲ್ಲೇ ಅಂದರೆ ಅವೈದಿಕರಲ್ಲೇ ಅಥವಾ ಶೂದ್ರರಲ್ಲೇ ಶ್ರೇಣೀಕೃತ ವ್ಯವಸ್ಥೆಯೊಂದನ್ನು ರೂಪಿಸಿಕೊಂಡಿದ್ದಾರೆ ಎನ್ನುವುದು ಅಸಮಾನತೆಯ ಅರಿವಿನ ಕೊರತೆ ಎಂದು ತಿಳಿಯುತ್ತೇನೆ. ಹಾಗೆಯೇ ಈ ಭಾಷಾ ಪ್ರಯೋಗ ಎಲ್ಲಿಂದ ಯಾರಿಂದ ಪ್ರಾರಂಭವಾಗುತ್ತದೆ ಎನ್ನುವುದು ಕೂಡ ಕುತೂಹಲದಾಯಕವಾದುದು. ಇಂತಹ ಪರಿಸರದಲ್ಲಿ ನಾವು ಯಾರ ಜತೆಗೂ ಹೆಚ್ಚು ಆತ್ಮೀಯರಾಗಬೇಕಿಲ್ಲ ಎನ್ನುವಂತಿದ್ದರೂ ನೆರೆಯನ್ನು ಹೊರೆಯನ್ನಾಗಿಸದೆ ಕರೆ ಕರೆ ಇಲ್ಲದೆ ಹೊಂದಿಕೊಳ್ಳಬೇಕಾಗಿದೆ ಎಂಬ ಎಚ್ಚರದ ಬುದ್ಧಿ ನಮ್ಮಲ್ಲಿ ಇರುವುದು ಅನಿವಾರ್ಯವಾಯಿತು.

ಸುತ್ತಲಿನ ಎಲ್ಲ ಮನೆಗಳಲ್ಲೂ ಬೀಡಿಕಟ್ಟುವ ತಾಯಂದಿರು. ಕೆಲಸವಿಲ್ಲದೆ ಇರುವ ಅಜ್ಜಿಯಂದಿರು ಅಂದರೆ ಕೃಷಿ ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಅದಕ್ಕೆ ಅವಕಾಶವಿಲ್ಲದೆ, ಬೀಡಿಕಟ್ಟಲು ತಿಳಿಯದೆ ಮನೆಯಲ್ಲಿರುವವರು ಇದ್ದರು ಎನ್ನುವುದು ಬಹುಮುಖ್ಯವಾದ ವಿಷಯ. ಈ ವಯಸ್ಸಿನ ಗಂಡಸರಾದರೋ ಕೂಲಿ ಕೆಲಸ ಹುಡುಕಿಕೊಂಡು ಸೂರಿಂಜೆ, ಶಿಬರೂರು, ಸುರತ್ಕಲ್, ತಡಂಬೈಲುಗಳಿಗೆ ಹೋಗಿ ಬರುತ್ತಿದ್ದುದು ಉಂಟು. ಮನೆಯಲ್ಲಿರುವ ಮಕ್ಕಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವವರನ್ನು ಬಿಟ್ಟರೆ ಹೈಸ್ಕೂಲಿಗೆ ಹೋಗಬೇಕೆಂದು ತಿಳಿದವರೇ ಇಲ್ಲ ಎನ್ನುವಂತಿತ್ತು. ಏಳನೇ ಕ್ಲಾಸಿಗೇ ಹುಡುಗಿಯರ ವಿದ್ಯಾಭ್ಯಾಸ ಮುಗಿಯುತ್ತಿತ್ತು.

ಮತ್ತೆ ಮದುವೆಯಾಗುವವರೆಗೆ ಬೀಡಿ ಕಟ್ಟಿ ಒಂದಿಷ್ಟು ಒಡವೆ ವಸ್ತ್ರಕ್ಕಾಗಿ ಹಣ ಕೂಡಿಡುವುದು ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯವಾಗಿತ್ತೇ ಹೊರತು ನಿಜವಾದುದಾಗಿರಲಿಲ್ಲ. ಯಾಕೆಂದರೆ ದಿನದ ಖರ್ಚಿಗೆ ತಂದೆಯೋ, ಅಣ್ಣನೋ ದುಡಿದುದರಲ್ಲಿ ಸಿಗುತ್ತಿದ್ದ ಮೊತ್ತ ಬಹಳ ಕಡಿಮೆ. ಅವರ ದುಡಿಮೆಯ ಹೆಚ್ಚಿನ ಮೊತ್ತ ‘ಗಡಂಗು’ಗಳಿಗೆ ಹೋಗುತ್ತಿತ್ತು. ಇನ್ನೊಂದು ನಾನು ಗ್ರಹಿಸಿದ ವಿಷಯ ಅಂದರೆ ಹೆಚ್ಚಿನ ಮನೆಗಳಲ್ಲಿ ವಿಧವೆ ಅಜ್ಜಿಯಂದಿರು ಮಾತ್ರವಲ್ಲ, ವಿಧವೆ ತಾಯಂದಿರೇ ಇದ್ದುದು. ಇದ್ದ ಅಣ್ಣ ತಮ್ಮಂದಿರು ಕೂಡ ಹೆಚ್ಚಿನ ವಿದ್ಯಾವಂತರಲ್ಲದ ಕಾರಣ ಅವರ ದುಡಿಮೆ ಅದು ಶಿಸ್ತುಬದ್ಧವಾಗಿರುತ್ತಿರಲಿಲ್ಲ. ಮನಸ್ಸಿದ್ದರೇ ಹೋದ. ಇಲ್ಲವಾದರೆ ಮನೆಯಲ್ಲಿ ಮುಸುಕೆಳೆದು ಮಲಗಿಕೊಂಡ. ಮನೆಯಲ್ಲಿದ್ದವರು ಅವನನ್ನು ಹೇಳುವುದು ಕೇಳುವುದು ಮಾಡುವಂತಿರಲಿಲ್ಲ.

ಯಾಕೆಂದರೆ ಅವನು ಈಗ ಮೀಸೆ ಬಂದ ಯುವಕ. ಗಂಡಸು. ಅವನನ್ನು ಕೇಳುವ, ವಿಚಾರಿಸುವ ಹಕ್ಕು, ತಾಯಿಗಾಗಲೇ, ಅಕ್ಕತಂಗಿಯರಿಗಾಗಲೀ ಇಲ್ಲ ಎನ್ನುವುದೇ ಎಲ್ಲರೂ ಒಪ್ಪಿಕೊಂಡ ನಂಬಿಕೆಗಳಲ್ಲವೇ? ಈ ಕಾರಣದಿಂದಲೇ ಹೆಚ್ಚಿನ ಮನೆಗಳಲ್ಲಿ 30 ವರ್ಷ ಮೀರಿದ ಯುವತಿಯರು ಅವಿವಾಹಿತರೇ ಆಗಿದ್ದರು. ಈ ಯುವತಿಯರ ಕಾರಣದಿಂದ ಈ ವಯಸ್ಸಿಗಿಂತ ಹಿರಿಯರಾದ ಅಣ್ಣಂದಿರೂ ವಿವಾಹವಾಗುವುದು ಅಸಾಧ್ಯವಾಗುತ್ತಿತ್ತು. ಇಂತಹ ಒಂದು ಸಮಾಜದ ವಾಸ್ತವ ಚಿತ್ರಣವನ್ನು ಕಂಡ ನನಗೆ ಇಷ್ಟೊಂದು ಹಿಂದೆ ಉಳಿಯುವುದಕ್ಕೆ ಏನು ಕಾರಣ? ಹಾಗೆಯೇ ಹಿಂದುಗಳೆಂದೇ ಹೇಳಿಕೊಳ್ಳುತ್ತಾ ತಮ್ಮ ತಮ್ಮಾಳಗೇ ಮೇಲು ಕೀಳು ಎಂದು ಭಾವಿಸುವುದಕ್ಕಿರುವ ಕಾರಣಗಳೇನು? ಎನ್ನುವ ಪ್ರಶ್ನೆಗಳು ಕಾಡುತ್ತಿದ್ದಂತೆಯೇ ಕಾಲೇಜಿಗೆ ದಿನಾ ಬಸ್ಸಿನಲ್ಲಿ ಬರುವಾಗ ಹೋಗುವಾಗಿನ ಜನಸಂದಣಿಯು ಹಿಂದುಳಿದ ಈ ಸಮಾಜ ತೆವಳುತ್ತಾ ಮುಂದುವರಿಯುವ ಲಕ್ಷಣಗಳನ್ನು ಹೊಂದಿತ್ತು ಎಂದರೆ ತಪ್ಪಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top