-

ನೋಟು ನಿಷೇಧ: ವೆಫಲ್ಯವೇ ಸಾಧನೆ

-

500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳಲ್ಲಿ ಕೂಡಿಹಾಕಲಾದ ಕಪ್ಪುಹಣವು ಇನ್ನು ಮುಂದೆ ‘‘ನಿಷ್ಪ್ರಯೋಜಕವಾದ ಕಾಗದದ ಚೂರುಗಳಾಗಲಿವೆ’’ ಎಂದು 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನಮ್ಮ ಮುಂದೆ ಘೋಷಿಸಿದ್ದರು. ಆದರೆ ಇದೀಗ ವಿತ್ತ ಸಚಿವಾಲಯವು, ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಅಮಾನ್ಯಗೊಂಡ ನಗದು ಹಣ ಬರುವುದನ್ನು ಮೊದಲೇ ನಿರೀಕ್ಷಿಸಿದ್ದಾಗಿ ಹೇಳಿಕೊಳ್ಳುತ್ತಿದೆ.

ಕಪ್ಪುಹಣವನ್ನು ಮೂಲೋತ್ಪಾಟನೆ ಮಾಡುವ ತನ್ನ ಮುಖ್ಯ ಉದ್ದೇಶವನ್ನು ಸಾಧಿಸುವಲ್ಲಿ ನಗದು ಅಮಾನ್ಯತೆಯು ವಿಫಲವಾಗಿರುವುದು ಈಗ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಶೇ.98.6ರಷ್ಟು ಅಮಾನ್ಯಗೊಂಡ ಕರೆನ್ಸಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ವಾಪಸಾಗಿವೆಯೆಂಬ ವಾಸ್ತವಾಂಶ ಬಯಲಾಗುವುದರೊಂದಿಗೆ, ನೋಟು ಅಮಾನ್ಯತೆಯ ಮೂಲಕ ಕಪ್ಪುಹಣವನ್ನು ನಿರ್ಮೂಲನೆಗೊಳಿಸುವ ಮೋದಿ ಸರಕಾರದ ಮೂಲ ಉದ್ದೇಶ ತಲೆಕೆಳಗಾಗಿ ಬಿದ್ದಿದೆ.

 ಆರ್ಥಿಕತೆಯಲ್ಲಿ ನಗದಿನ ಪ್ರಭಾವವನ್ನು ಕಡಿಮೆಗೊಳಿಸುವುದು, ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು, ಡಿಜಿಟಲ್ ಕರೆನ್ಸಿ ವಹಿವಾಟಿಗೆ ಉತ್ತೇಜನ ಹಾಗೂ ಆರ್ಥಿಕತೆಯ ಸಂರಚನೆಯನ್ನು ಹೆಚ್ಚಿಸುವುದು ನೋಟು ನಿಷೇಧದ ನೈಜ ಗುರಿಯಾಗಿದ್ದವು ಹಾಗೂ ಈ ಎಲ್ಲಾ ಅಂಶಗಳಲ್ಲೂ ನಗದು ಅಮಾನ್ಯತೆಯು ಸಕಾರಾತ್ಮಕವಾದ ಪರಿಣಾಮವನ್ನು ಬೀರಿದೆಯೆಂದು ಅರುಣ್ ಜೇಟ್ಲಿ ಈ ವಾರ ತಿಳಿಸಿದ್ದರು.

ಆದರೆ ದೇಶದ ಆರ್ಥಿಕತೆಯ ಮೇಲೆ ನಗದು ಅಮಾನ್ಯತೆಯ ತಕ್ಷಣದ ಪರಿಣಾಮವು ವಿನಾಶಕಾರಿಯಾಗಿತ್ತೆಂಬುದು ನಮಗೀಗ ಅರಿವಾಗಿದೆ. ನೋಟು ನಿಷೇಧದ ಆನಂತರದ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಬಾಧಿತವಾಗಿದ್ದವು. ಹಲವರಿಗೆ ನಗದು ಅಮಾನ್ಯತೆಯ ಆಘಾತವನ್ನು ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ನಗರಪ್ರದೇಶಗಳ ಅನೌಪಚಾರಿಕ ವಲಯ,ಗ್ರಾಮೀಣ ಕೃಷಿಯೇತರ ವಲಯ ಹಾಗೂ ಕೃಷಿ ಮಾರುಕಟ್ಟೆಗಳು ಹಿಂಡಿಹಿಪ್ಪೆಯಾಗಿದ್ದವು. ಸಮಾಜದ ಕೆಳಸ್ತರದ ಜನರಿಗೆ ದುಡಿಯಲು ಕೆಲಸ ದೊರೆಯುತ್ತಿರಲಿಲ್ಲ ಹಾಗೂ ಇನ್ನೂ ಅನೇಕ ಮಂದಿಗೆ ಸಕಾಲದಲ್ಲಿ ವೇತನ ಸಿಗುತ್ತಿರಲಿಲ್ಲ. ಇವೆಲ್ಲವೂ 2016-17ನೆ ಸಾಲಿನ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ (ಜಿಡಿಪಿ)ಯ ಕುರಿತ ಅಂಕಿಸಂಖ್ಯೆಗಳಲ್ಲಿ ಪ್ರತಿಬಿಂಬಿತವಾಗಿವೆ. ಭವಿಷ್ಯದಲ್ಲಿ ಇದು ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ. 2016ರ ನವೆಂಬರ್‌ನಿಂದ 2017ರ ಜನವರಿ ತಿಂಗಳ ಅವಧಿಯಲ್ಲಿ ದೇಶದ ಅತ್ಯಂತ ಕಡುಬಡತನದ ರಾಜ್ಯಗಳಲ್ಲಿ ನರೇಗಾ ಉದ್ಯೋಗ ಖಾತರಿ ಯೋಜನೆಯಡಿಯ ಬೇಡಿಕೆಯಲ್ಲಿ ಶೇಕಡ 30ರಷ್ಟು ಜಿಗಿತವುಂಟಾಗಿತ್ತು. ಗ್ರಾಮೀಣ ಭಾರತವು ಸಂಕಷ್ಟದಲ್ಲಿ ಸಿಲುಕಿರುವ ಸ್ಪಷ್ಟಸೂಚನೆ ಇದಾಗಿದೆ.

 ನಗದು ಅಮಾನ್ಯತೆಯ ಮಧ್ಯಮ ಹಾಗೂ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಗಮನವನ್ನು ಹರಿಸಿದಾಗ ಸಕಾರಾತ್ಮಕತೆಗಿಂತ, ನಕಾರಾತ್ಮಕ ಪರಿಣಾಮಗಳೇ ಢಾಳಾಗಿ ಎದ್ದು ಕಾಣುತ್ತಿವೆ.

ಅಕ್ರಮ ಸಂಪಾದನೆ

ಅಮಾನ್ಯಗೊಂಡ ಬಹುತೇಕ ನಗದು ಹಣ ಬ್ಯಾಂಕುಗಳಿಗೆ ಹರಿದು ಬರುತ್ತಿ ರುವುದು ಸಕಾರಾತ್ಮಕ ಬೆಳವಣಿಗೆಯೆಂದು ಹೇಳಲಾಗುತ್ತದೆ. ಯಾಕೆಂದರೆ ಈ ಎಲ್ಲಾ ನಗದು ಹಣವು ಕಾನೂನುಬದ್ಧ ಆರ್ಥಿಕತೆಯ ಒಂದು ಭಾಗವಾಗಿದೆ. ಆದರೆ ನೋಟು ನಿಷೇಧದಿಂದಾಗಿ ತಮ್ಮ ಆಘೋಷಿತ ಆದಾಯವನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸುವ ಮೂಲಕ ಹಲವಾರು ಮಂದಿ ತಮ್ಮ ಕಪ್ಪುಹಣವನ್ನು ಬಿಳುಪುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೆರಿಗೆಗಳ್ಳರಿಗೆ 2016-17ನೆ ಸಾಲಿನಲ್ಲಿ ಕೇಂದ್ರ ಸರಕಾರ ಘೋಷಿಸಿದ್ದ ಎರಡನೆ ಕ್ಷಮಾದಾನ ಕಾರ್ಯಕ್ರಮದಡಿ ಶುದ್ಧಹಸ್ತರಾಗಿ ಹೊರಬರುವ ಬದಲು ಅವರು ಈ ಮಾರ್ಗವನ್ನು ಅನುಸರಿಸಿದ್ದಾರೆ. ಹಿಂದಿನಂತೆಯೂ ಈಗಲೂ ತಾವು ತೊಂದರೆಗೊಳಗಾಗದೆ ಪಾರಾಗಬಹುದು ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ.

ಬ್ಯಾಂಕ್‌ಗಳಲ್ಲಿ ಇರಿಸಲಾದ ದೊಡ್ಡ ಮೊತ್ತದ ಠೇವಣಿಗಳ ಕುರಿತಾದ ಮಾಹಿತಿಗಳನ್ನು ವಿತ್ತ ಸಚಿವಾಲಯವು ಪರಿಶೀಲಿಸಿದೆ. 2016-17ನೆ ಸಾಲಿನಲ್ಲಿ ಬ್ಯಾಂಕ್‌ಗಳಲ್ಲಿನ ಸಂದೇಹಾಸ್ಪದ ವಹಿವಾಟುಗಳ ಸಂಖ್ಯೆಯಲ್ಲಿ ಆರು ಪಟ್ಟು ಹೆಚ್ಚಳವುಂಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ಶಂಕಾಸ್ಪದ ಠೇವಣಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. ‘ಆಪರೇಶನ್ ಕ್ಲೀನ್ ಮನಿ’ ಯಡಿ 17,526 ಕೋಟಿ ರೂ. ಆಘೋಷಿತ ಆದಾಯ ಪತ್ತೆಯಾಗಿದೆ. ಇದು ನವೆಂಬರ್-ಡಿಸೆಂಬರ್‌ನಲ್ಲಿ 1.5 ಲಕ್ಷ ಖಾತೆಗಳಲ್ಲಿ ಇರಿಸಲಾದ ಒಟ್ಟು 4.89 ಲಕ್ಷ ಕೋಟಿ ರೂ.ಮೊತ್ತದ ಠೇವಣಿಯ ಶೇ.4ರಷ್ಟಿದೆ. ಇವೆಲ್ಲವೂ ಲೆಕ್ಕಕೊಡದ (unaccounted) ಆದಾಯವೆಂದು ನಾವು ಭಾವಿಸಬಹುದಾಗಿದೆ.

ನಗದು ಅಮಾನ್ಯತೆಯನ್ನು ಯಶಸ್ವಿಗೊಳಿಸುವ ಹೊಣೆಯನ್ನು ಆದಾಯತೆರಿಗೆ ಇಲಾಖೆ ಮೇಲೆ ಹೊರಿಸುವ ಅಪಾಯವಿದೆ. ಒಂದು ವೇಳೆ ಅದು ಕಪ್ಪುಹಣ ಬಿಳುಪು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಾರ್ಯಾಚರಣೆಯಲ್ಲಿ ಉತ್ತಮ ಫಲಿತಾಂಶಗಳನ್ನು ತಂದುಕೊಡದಿದ್ದಲ್ಲಿ ಇಲಾಖೆಯು ಸರಕಾರದಿಂದ ಕಿರುಕುಳಕ್ಕೊಳಗಾಗುವ ಸಾಧ್ಯತೆಯಿದೆ.

ತೆರಿಗೆ ಆದಾಯದಲ್ಲಿ ಬೆಳವಣಿಗೆ ಹಾಗೂ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಏರಿಕೆ ನಗದು ಅಮಾನ್ಯತೆ ಸಾಧಿಸಿದ ಇನ್ನೊಂದು ಗೆಲುವೆಂದು ಹೇಳಲಾಗುತ್ತಿದೆ. ಈ ಹಿಂದೆ ತಮ್ಮ ಆದಾಯವನ್ನು ಘೋಷಿಸದವರು ತಮ್ಮ ಕಪ್ಪುಹಣವನ್ನು ಬಿಳುಪುಗೊಳಿಸುತ್ತಿದ್ದಾರೆ ಹಾಗೂ ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ಇದರಿಂದಾಗಿ ತೆರಿಗೆ ಆದಾಯ ಸಂಗ್ರಹದಲ್ಲಿ ಏರಿಕೆಯಾಗುವುದು ಖಚಿತ. ಈ ಏರಿಕೆಯು ಖಾಯಂ ಆಗಲಿದೆಯೇ ಹಾಗೂ ಅದು ಎಷ್ಟರ ಮಟ್ಟಿಗೆ ಇರಲಿದೆಯೆಂಬುದು ಆದಾಯ ಸಂಪೂರ್ಣ ಘೋಷಣೆ ಪ್ರಕ್ರಿಯೆಯು ಮುಂದುರಿಯುವುದನ್ನು ಅವಲಂಬಿಸಿರುತ್ತದೆ.

ಗುರಿಗಳ ಬದಲಾವಣೆ

ಮೂರನೆಯದಾಗಿ, ಮರುನಗದೀಕರಣವು ಸಂಪೂರ್ಣವಾಗಿ ನಡೆಯುತ್ತಿರುವುದರಿಂದ 2017ರ ಆಗಸ್ಟ್‌ನಲ್ಲಿ ಚಲಾವಣೆಯಲ್ಲಿದ್ದ ಕರೆನ್ಸಿ ಹಣದ ಪ್ರಮಾಣವು 2016ರ ನವೆಂಬರ್ 8ರಲ್ಲಿದ್ದ ನಗದು ಚಲಾವಣೆಯ ಶೇ.83ರಷ್ಟಿತ್ತು. ದೇಶವು ನಗದು ರಹಿತ ಆರ್ಥಿಕತೆಯೆಡೆಗೆ ಸಾಗುತ್ತಿರುವುದರ ಸೂಚನೆಯಿದೆಯೆಂದು ಕೇಂದ್ರ ಸರಕಾರದ ವಾದವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಪ್ರಮಾಣದ ನಗದನ್ನು ಬಿಡುಗಡೆಗೊಳಿಸದಿರುವುದರಿಂದ ಭಾರತೀಯ ಆರ್ಥಿಕತೆಯು ಕಡಿಮೆ ನಗದು ವ್ಯವಹಾರ ನಡೆಸುತ್ತಿರಬಹುದು. ಇದನ್ನು ಬಿಟ್ಟು, ಸರಕಾರವು ಹೇಳಿಕೊಳ್ಳುತ್ತಿ ರುವಂತೆ, ಜನಸಾಮಾನ್ಯರು ಡಿಜಿಟಲ್ ಕರೆನ್ಸಿ ವಹಿವಾಟಿನತ್ತ ಮುಖ ಮಾಡುತ್ತಿದ್ದಾರೆಂದು ಭಾವಿಸಲಾಗದು.

ನಾಲ್ಕನೆಯದಾಗಿ ಡಿಜಿಟಲ್ ಹಣಕಾಸು ವಹಿವಾಟನ್ನು ಉತ್ತೇಜಿಸುವುದು ಕೂಡಾ ನೋಟು ನಿಷೇಧದ ಉದ್ದೇಶವಾಗಿತ್ತು ಎಂದು ಮೋದಿ ಹೇಳುತ್ತಿದ್ದಾರೆ. ಆದರೆ ಜನಸಾಮಾನ್ಯರಿಗೆ ಒಗ್ಗದ ಹಾಗೂ ಅವರಿಗೆ ಹಿತವಾಗದಂತಹ ವಿನೂತನ ಹಣಕಾಸು ವ್ಯವಹಾರದ ಪದ್ಧತಿಯನ್ನು ಅನುಸರಿಸುವಂತೆ ಅವರನ್ನು ಬಲವಂತ ಪಡಿಸಲು ಸಾಧ್ಯವಿಲ್ಲವೆಂಬುದನ್ನು ಇದು ತೋರಿಸಿಕೊಡುತ್ತದೆ.

 ಡಿಜಿಟಲ್ ಹಣಕಾಸು ವಹಿವಾಟಿನ ಪ್ರಮಾಣ ಹಾಗೂ ವೌಲ್ಯದಲ್ಲಿ ಕಳೆದ ವರ್ಷಕ್ಕಿಂತ ಈಗ ಏರಿಕೆಯಾಗಿದ್ದಿರಬಹುದು. 2016ರ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಪೇಟಿಎಂ ಜನಪ್ರಿಯತೆ ಹೆಚ್ಚಳವಾಗಿತ್ತಾದ್ದರೂ, ಪ್ರಸ್ತುತ ಅದರ ಬೆಳವಣಿಗೆ ಸಾಧಾರಣ ಮಟ್ಟದಲ್ಲಿದೆ. ಹಾಗೆ ನೋಡಿದರೆ, 2000ನೆ ಇಸವಿಯ ಆರಂಭದಲ್ಲಿಯೂ ಡಿಜಿಟಲ್ ಹಣಕಾಸು ವಹಿವಾಟಿಗೆ ಉತ್ತೇಜನ ನೀಡಲಾಗಿತ್ತು. ಆದಾಗ್ಯೂ ಈ ಉದ್ದೇಶಕ್ಕಾಗಿ ನಗದು ಅಮಾನ್ಯತೆಯ ಅಸ್ತ್ರವನ್ನು ಬಳಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತದೆ.

ನೋಟು ನಿಷೇಧ ವೈಫಲ್ಯದ ಮಾರಾಟ

ಕೊನೆಯದಾಗಿ ಕಪ್ಪುಹಣದ ಸಂಗ್ರಹವನ್ನು ನಾಶಪಡಿಸುವ ತನ್ನ ತುರ್ತು ಉದ್ದೇಶವನ್ನು ಈಡೇರಿಸುವಲ್ಲಿ ನಗದು ಅಮಾನ್ಯತೆಯು ಯಾಕೆ ವಿಫಲವಾಯಿತೆಂಬುದಕ್ಕೆ ಸರಳವಾದ ಕಾರಣವಿದೆ. ಕಾಳಧನಿಕರು ತಮ್ಮಲ್ಲಿದ್ದ ಕಪ್ಪುಹಣವನ್ನು ಸುಮ್ಮನೆ ನಗದು ರೂಪದಲ್ಲಿ ಕೂಡಿಹಾಕಿಟ್ಟಿರಲಿಲ್ಲ. ಬದಲಿಗೆ ಅದನ್ನು ಇತರ ಆಸ್ತಿಪಾಸ್ತಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಕಾಳಧನಿಕರ ಶಕ್ತಿಯನ್ನು ನಗದು ಅಮಾನ್ಯತೆಯು ದುರ್ಬಲಗೊಳಿಸಲಿಲ್ಲ. ಬದಲಾಗಿ ಅವರಿಗೆ ತಮ್ಮ ಅಕ್ರಮ ಹಣವನ್ನು ಸಕ್ರಮ ಹಣವಾಗಿ ಬದಲಾಯಿಸಲು ನಗದು ಆರ್ಥಿಕತೆ ನೆರವಾಗಿದೆ. ಅಮಾನ್ಯಗೊಂಡ ಬಹುತೇಕ ಕರೆನ್ಸಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರುವುದನ್ನು ತಾನು ನಿರೀಕ್ಷಿಸಿದ್ದಾಗಿ ಕೇಂದ್ರ ಸರಕಾರ ಈಗ ಒಪ್ಪಿಕೊಳ್ಳುತ್ತಿರುವುದು ತೀರಾ ವಿಚಿತ್ರವಾಗಿದೆ.

ಕಪ್ಪುಹಣದ ವಿರುದ್ಧ ಹೋರಾಡುವ ತನ್ನ 2014ರ ಚುನಾವಣಾ ಆಶ್ವಾಸನೆಗೆ ಅನುಗುಣವಾಗಿ ನಡೆದುಕೊಳ್ಳ್ಳಲು ಮೋದಿ ಸರಕಾರ ಕೆಲವು ಹೆಜ್ಜೆಗಳನ್ನಿಟ್ಟಿತು. ಭಾರತೀಯರು ವಿದೇಶಗಳಲ್ಲಿ ಇರಿಸಿರುವ ಅಕ್ರಮ ಸಂಪತ್ತಿನ ಬಗ್ಗೆ ಮಾಹಿತಿಗಳನ್ನು ನೀಡುವಂತೆ ಅದು ಮಾರಿಷಸ್, ಸಿಂಗಾಪುರ ಹಾಗೂ ಸೈಪ್ರಸ್ ದೇಶಗಳನ್ನು ಕೋರಿತು. ಹಿಂದಿನ ಯಾವುದೇ ಸರಕಾರಗಳು ಪ್ರಯೋಗಿಸಿರದ ಬೇನಾಮಿ ವಹಿವಾಟುಗಳ ಕುರಿತಾದ 1988ರ ಮಸೂದೆಯನ್ನು ಅದು ಕಾರ್ಯಗತಗೊಳಿಸಿತು. ನಗದು ಅಮಾನ್ಯತೆಯ ಬಳಿಕ ಕನಿಷ್ಠ ಪಕ್ಷ ಅದು ಬೇನಾಮಿ ಕಂಪೆನಿಗಳ ವಿರುದ್ಧವೂ ಧ್ವನಿಯೆತ್ತತೊಡಗಿದೆ.

ಆದಾಗ್ಯೂ, ಭ್ರಷ್ಟಾಚಾರದ ಪ್ರಕರಣಗಳ ಸ್ವತಂತ್ರ ತನಿಖೆಗೆ ಅವಕಾಶ ನೀಡುವ ಲೋಕಪಾಲ ವಿಧೇಯಕವನ್ನು ಹಿಂದಿನ ಯುಪಿಎ ಸರಕಾರವು ರೂಪಿಸಿದ್ದರೂ, ಅದಿನ್ನೂ ಜಾರಿಗೆ ಬಂದಿಲ್ಲ. ಕಪ್ಪು ಹಣದ ಪ್ರಧಾನ ಮೂಲಗಳನ್ನು ಕೂಡಾ ನಿಷೇಧಿಸಲಾಗಿಲ್ಲ. ಕಪ್ಪುಹಣದ ಕುರಿತಾಗಿ 2012ರಲ್ಲಿ ಆಗಿನ ಸರಕಾರವು ಜಾರಿಗೊಳಿಸಿದ ಶ್ವೇತಪತ್ರದಲ್ಲಿ ಕಪ್ಪುಹಣವು ಬಹುತೇಕವಾಗಿ ಔಪಚಾರಿಕ ಹಣಕಾಸು ವಲಯದಲ್ಲಿ ಸೃಷ್ಟಿಯಾಗುತ್ತಿದ್ದು, ಅದು ನಗದುರೂಪದಲ್ಲಿ ಚಲಾವಣೆಯಲ್ಲಿರುವುದು ತೀರಾ ಕಡಿಮೆ ಎಂದು ತಿಳಿಸಿತ್ತು. ಅಕ್ರಮ ನಿಧಿಗಳು ವ್ಯಾಪಾರ ಆಧಾರಿತ ಹಣದ ಕಪ್ಪುಬಿಳುಪು, ಶೇರುದರಗಳಲ್ಲಿ ವಂಚನೆ ಇತ್ಯಾದಿ ಚಟುವಟಿಕೆಗಳಲ್ಲಿ ಕಪ್ಪುಹಣ ಅಬಾಧಿತವಾಗಿ ಚಲಾವಣೆಯಾಗುತ್ತಿವೆ. ಕಪ್ಪುಹಣದ ಬಳಕೆಗೆ ಚುನಾವಣೆ ಸೇರಿದಂತೆ ಹಲವಾರು ದಾರಿಗಳಿದ್ದು, ಅವು ಈಗಲೂ ಮುಕ್ತವಾಗಿವೆ. ರಾಜಕೀಯ ಪಕ್ಷಗಳಿಗೆ ಹರಿದುಬರುವ ದೇಣಿಗೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕೆಂಬ ಚುನಾವಣಾ ಆಯೋಗದ ಶಿಫಾರಸುಗಳನ್ನು ಸರಕಾರವು ಕಡೆಗಣಿಸಿದೆ. ಸಾಂಪ್ರದಾಯಿಕವಾಗಿ ಕಪ್ಪುಹಣದ ಪ್ರಮುಖ ಉತ್ಪಾದನಾ ಕ್ಷೇತ್ರಗಳಲ್ಲೊಂದಾದ ರಿಯಲ್ ಎಸ್ಟೇಟ್ ಉದ್ಯಮವೂ 2016ರ ನವೆಂಬರ್ 8ರ ಆನಂತರ ತೀವ್ರವಾಗಿ ಬಾಧಿತವಾಗಿದೆ. ಆದಾಗ್ಯೂ, ಆ ಕ್ಷೇತ್ರವು ಮತ್ತೆ ಸಹಜಸ್ಥಿತಿಗೆ ಮರಳುತ್ತಿರುವ ಸೂಚನೆಗಳು ದೊರೆತಿವೆ.

 ಈ ವರ್ಷ ಆರಂಭದಲ್ಲಿ ನಡೆದ ಉತ್ತರಪ್ರದೇಶದ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ಹತ್ತಿಕ್ಕುವುದು ನೋಟು ನಿಷೇಧದ ಹಿಂದಿನ ರಾಜಕೀಯ ಉದ್ದೇಶಗಳಲ್ಲೊಂದಾಗಿತ್ತೆಂಬ ವಾದಗಳೂ ಕೇಳಿಬಂದಿದ್ದವು. ಆದರೆ ಈ ಬಗ್ಗೆ ನಮಗೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ಆದರೆ ನಗದು ಅಮಾನ್ಯತೆಯಿಂದ ಮೋದಿ ಸರಕಾರಕ್ಕೆ ರಾಜಕೀಯವಾಗಿ ಅಗಾಧವಾದ ಲಾಭಗಳಾಗಿವೆ. 2016ರ ನವೆಂಬರ್ ತಿಂಗಳವರೆಗೆ ‘ಸೂಟ್ ಬೂಟ್ ಕಿ ಸರ್ಕಾರ್’ ಎಂದು ಟೀಕಿಸಲ್ಪಡುತ್ತಿದ್ದ ಮೋದಿ ಆಡಳಿತಕ್ಕೆ ಪ್ರಾಮಾಣಿಕ ನಾಗರಿಕರ ಪರವಾಗಿ ಭ್ರಷ್ಟ ಶ್ರೀಮಂತರ ವಿರುದ್ಧ ನಡೆಯುತ್ತಿರುವ ಸಮರದ ನೇತೃತ್ವ ವಹಿಸಿರುವುದಾಗಿ ಹೇಳಿಕೊಳ್ಳಲು ಶಕ್ತವಾಯಿತು. ಹೀಗೆ ನಗದು ಅಮಾನ್ಯತೆಯ ಕ್ರಮದಿಂದಾಗಿ ಮೋದಿ ಸರಕಾರಕ್ಕೆ ಉನ್ನತ ಮಟ್ಟದ ನೈತಿಕ ನೆಲೆಗಟ್ಟು ದೊರೆತಂತಾಗಿದೆ. ಭ್ರಷ್ಟಾಚಾರದ ವಿರುದ್ಧ ಜನತೆಯಲ್ಲಿ ಗಾಢವಾದ ಆಕ್ರೋಶವಿದೆ. ಹೀಗಾಗಿ ಕಪ್ಪುಹಣ ಮೂಲೋತ್ಪಾಟನೆಯಾಗಲಿದೆಯೆಂಬ ಭರವಸೆಯೊಂದಿಗೆ ನಗದು ಅಮಾನ್ಯತೆಯಿಂದಾದ ಎಲ್ಲಾ ತೊಂದರೆಗಳನ್ನು ಸಹಿಸಿಕೊಂಡಿದ್ದರು. ಇನ್ನೇನು ಹತ್ತಿರಹತ್ತಿರ ಒಂದು ವರ್ಷದ ಬಳಿಕ ನಗದು ಅಮಾನ್ಯತೆಯ ವೈಫಲ್ಯವನ್ನು ಯಶಸ್ಸೆಂಬಂತೆ ಬಿಂಬಿಸಲು ಸರಕಾರ ಹತಾಶ ಪ್ರಯತ್ನ ನಡೆಸುತ್ತಿದೆ.

2016 ನಗದು ಅಮಾನ್ಯತೆ ಈಗ ಮುಗಿದ ಅಧ್ಯಾಯ. ಅತ್ಯಂತ ಕಳಪೆಯಾಗಿ ಜಾರಿಗೊಳಿಸಲಾದ ಈ ಕಾರ್ಯಕ್ರಮದಿಂದ ಒಂದು ವೇಳೆ ಬಿಜೆಪಿಗೆ ರಾಜಕೀಯ ಲಾಭವೇನಾದರೂ ಆಗಿದ್ದಲ್ಲಿ, ಅದು 2019ರ ಲೋಕಸಭಾ ಚುನಾವಣೆಯ ವೇಳೆಗೆ ಇಂತಹ ಇನ್ನೊಂದು ಪ್ರಮಾದಕರವಾದ ಕಾರ್ಯಕ್ರಮವನ್ನು ಹೇರಲೂಬಹುದು

ಕೃಪೆ: scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top