ಹೌದು, ಗೌರಿ-ಲಂಕೇಶರಂತಾಗಲಿಲ್ಲ...!! | Vartha Bharati- ವಾರ್ತಾ ಭಾರತಿ

--

ಹೌದು, ಗೌರಿ-ಲಂಕೇಶರಂತಾಗಲಿಲ್ಲ...!!

ಪಿ.ಲಂಕೇಶ್

ಅದು ಪಿ. ಲಂಕೇಶರು ‘ಲಂಕೇಶ್ ಪತ್ರಿಕೆ’ಯನ್ನು ನಡೆಸುತ್ತಿದ್ದ ಕಾಲ. ಲಂಕೇಶ್ ಪತ್ರಿಕೆಯ ಆತ್ಮೀಯರುಯಾರಾದರೂ ಭೇಟಿಯಾದರೆ ನಾನು ಮೊದಲು ಕೇಳುತ್ತಿದ್ದ ಪ್ರಶ್ನೆ ‘‘ಲಂಕೇಶ್‌ರ ಆನಂತರ ಲಂಕೇಶ್ ಪತ್ರಿಕೆ ಯನ್ನು ನಡೆಸುವವರು ಯಾರು?’’ ಆಗಾಗ ಲಂಕೇಶ ರನ್ನು ಕಾಡುತ್ತಿದ್ದ ತೀವ್ರ ಅನಾರೋಗ್ಯ ನಮ್ಮನ್ನೆಲ್ಲ ಇಂತಹ ಪ್ರಶ್ನೆ ಕೇಳುವಂತೆ ಮಾಡುತ್ತಿತ್ತು. ನಮಗೆಲ್ಲ ಲಂಕೇಶ್ ಪತ್ರಿಕೆ ಓದೋದು ಬದುಕಿನ ಅವಿಭಾಜ್ಯವಾಗಿ ಹೋಗಿದ್ದುದರಿಂದ ಇಂತಹ ಪ್ರಶ್ನೆ ನಮ್ಮನ್ನು ಪದೇ ಪದೇ ಕಾಡುತ್ತಿತ್ತು. ಅದು ನಾನು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಕಾಲ. ಮುಂಬೈ ಯ ನ್ಯಾಯಾಲಯದಲ್ಲಿ ಲಂಕೇಶರ ವಿರುದ್ಧ ಒಂದು ವರದಿಗೆ ಸಂಬಂಧಿಸಿ ದೂರು ದಾಖಲಾಗಿತ್ತು. ಈ ಸಂಬಂಧ ದ್ವಾರಕಾನಾಥ್, ತ್ಯಾಗರಾಜ್ ಆಗಾಗ ಮುಂಬೈಗೆ ಬರುತ್ತಿದ್ದರು. ತ್ಯಾಗರಾಜ್ ಒಂದೆರಡು ಬಾರಿ ನನ್ನ ಜೊತೆ ಉಳಿದುಕೊಂಡಿದ್ದರು. ಆಗ ಅವರ ಜೊತೆಗೂ ಇಂತಹದೇ ಪ್ರಶ್ನೆಯನ್ನು ನಾನು ಇಟ್ಟಿದ್ದೆ. ಆಗ ಅವರು ತಡವರಿಸದೇ ಖಂಡತುಂಡವಾಗಿ ಹೇಳಿದ್ದರು ‘‘ಲಂಕೇಶ್ ಬಳಿಕ ಪತ್ರಿಕೆ ಮುಚ್ಚುತ್ತೆ ಬಶೀರ್’’. ಆಳದಲ್ಲಿ ಇದು ನಮ್ಮ ಅರಿವಿನಲ್ಲೂ ಇತ್ತು. ಯಾಕೆಂದರೆ ಲಂಕೇಶರ ಹೆಸರಿನ ಮೂಲಕವೇ ನಡೆಯುತ್ತಿರುವ ಪತ್ರಿಕೆಯನ್ನು ಇನ್ನಾರೂ ಮುನ್ನಡೆಸುವುದು ಕಷ್ಟ. ಯಾರೇ ಮುನ್ನಡೆಸಿದರೂ ಅದು ಲಂಕೇಶ್ ಪತ್ರಿಕೆ ಯಾಗಿ ಉಳಿಯುವುದು ಸಾಧ್ಯವಾಗುವ ಮಾತೇ ಅಲ್ಲ. ಮುಂಬೈಯ ನ್ಯಾಯಾಲಯವೊಂದು ಪಿ. ಲಂಕೇಶರಿಗೆ ಬಂಧನ ವಾರಂಟ್‌ನ್ನು ಹೊರಡಿಸಿದಾಗ, ಬೆಂಗಳೂರಿನಿಂದ ನನಗೆ ಒಂದು ಕರೆ ಬಂದಿತ್ತು. ‘‘ನಾನು ಗೌರಿ ಲಂಕೇಶ್ ಮಾತನಾಡ್ತ ಇದ್ದೇನೆ. ನ್ಯಾಯಾಲಯದಲ್ಲಿ ಏನು ಬೆಳವಣಿ ಗೆಯಾಗಿದೆ?’’ ಎಂದು ಕೇಳಿದ್ದರು. ನಾನೂ ಸಂಕ್ಷಿಪ್ತವಾಗಿ ಮಾತನಾಡಿ ಮುಗಿಸಿದ್ದೆ. ಆ ಧ್ವನಿಯ ಹಿಂದಿರುವ ಮುಖ ವನ್ನು ಕಂಡದ್ದು ಅದಾದ ಹತ್ತು ವರ್ಷಗಳ ಬಳಿಕ.

 ಲಂಕೇಶ್ ನಿಧನರಾದಾಗ ಗೌರಿ ಮುನ್ನೆಲೆಗೆ ಬಂದರು. ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಗೌರಿ ಹೊಣೆ ಹೊತ್ತು ಕೊಳ್ಳುತ್ತಾರೆ ಎನ್ನುವಾಗ ಬಹಳಷ್ಟು ಅನುಮಾನಗಳಿದ್ದವು. ಮೊತ್ತ ಮೊದಲಾಗಿ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಗೌರಿ ಕೆಲಸ ಮಾಡುತ್ತಿದ್ದರು. ಆ ಕೆಲಸವನ್ನು ತೊರೆದು, ಈ ಪತ್ರಿಕೆಯನ್ನು ಬೆನ್ನಿಗೆ ಕಟ್ಟಿಕೊಳ್ಳುವುದೆಂದರೆ ಅಪಾಯಗಳನ್ನು ತಾನಾಗಿಯೇ ಬೆನ್ನಿಗೆ ಕಟ್ಟಿಕೊಂಡಂತೆ. ಜೊತೆಗೆ ಗೌರಿಗೆ ಅತೀ ದೊಡ್ಡ ಸವಾಲು ಸ್ವತಃ ಲಂಕೇಶ್ ಆಗಿದ್ದರು. ಲಂಕೇಶ್ ಬರೇ ಪತ್ರಕರ್ತರಲ್ಲ. ಅವರಲ್ಲೊಬ್ಬ ಕವಿ, ಸಾಹಿತಿ, ಲೇಖಕನಿದ್ದ. ಪತ್ರಿಕಾ ಬರಹಗಳಿಗೆ ಪದ್ಯದ ಲಾಲಿತ್ಯವನ್ನು ನೀಡಿದವರು ಲಂಕೇಶ್. ತಮ್ಮ ವಿಶಿಷ್ಟ ಬರಹಗಳ ಮೂಲಕ ಅವರು ಅದಾಗಲೇ ಒಂದು ಪ್ರಭಾವಳಿಯನ್ನು ತನ್ನ ಸುತ್ತ ಸೃಷ್ಟಿಸಿಕೊಂಡಿದ್ದರು. ಲಂಕೇಶರಿಗಾಗಿಯೇ ‘ಲಂಕೇಶ್ ಪತ್ರಿಕೆ’ಯನ್ನು ಕೊಂಡುಕೊಳ್ಳುತ್ತಿದ್ದವರು ಅಧಿಕ. ಅಷ್ಟೇ ಅಲ್ಲ, ಲಂಕೇಶರ ಜೊತೆಗಿದ್ದ ಬಸವರಾಜು, ನಟರಾಜ್, ತ್ಯಾಗರಾಜ್, ದ್ವಾರಕಾನಾಥ್, ರೇಷ್ಮೆ, ಗಂಗಾ ಧರ ಕುಷ್ಠಗಿಯಂತಹ ಪ್ರತಿಭೆಗಳನ್ನು ನಿಭಾಯಿಸುವುದು ಗೌರಿ ಲಂಕೇಶರಿಗೆ ಅಷ್ಟು ಸುಲಭವಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೇ ಹೊಸಬರಾಗಿದ್ದ ಗೌರಿ ಲಂಕೇಶ್‌ರ ನಿರ್ಧಾರಗಳನ್ನು, ಲಂಕೇಶರ ನಿರ್ಧಾರಗಳಂತೆ ಸ್ವೀಕರಿಸು ವುದು ಈ ಹಿರಿಯರಿಗೆ ಕಷ್ಟವೇ ಸರಿ. ಇದರ ಜೊತೆ ಜೊತೆಗೇ ಅವರ ಸೋದರ ಇಂದ್ರಜಿತ್ ಇನ್ನೊಂದು ಸವಾಲಾಗಿದ್ದರು. ಗೌರಿ ಲಂಕೇಶ್ ಒಂದು ರೀತಿ ಲಂಕೇಶ್ ಪತ್ರಿಕೆಯ ಹಲವು ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರೇ ಹೊರತು, ಅವರೇ ಅದರ ಮಾಲಕರಾಗಿರಲಿಲ್ಲ. ಇಂದ್ರಜಿತ್ ಮತ್ತು ಗೌರಿ ಇವರಿಬ್ಬರ ನಡುವಿನ ಅಭಿರುಚಿಗಳೇ ಬೇರೆ. ಬದು ಕನ್ನು ಶೋಕಿಯಾಗಿ ಸ್ವೀಕರಿಸಿರುವ ಇಂದ್ರಜಿತ್, ಅದನ್ನು ಸಂಘರ್ಷವಾಗಿ ಸ್ವೀಕರಿಸಿರುವ ಗೌರಿ ಜೊತೆಗೂಡಿ ಪತ್ರಿಕೆಯನ್ನು ಮುನ್ನಡೆಸುವುದು ಅಸಾಧ್ಯವಾಗಿತ್ತು.

 ಒಂದು ರೀತಿಯಲ್ಲಿ ಪತ್ರಿಕೆ ಮುನ್ನಡೆಯಬೇಕಾದರೆ ಎಲ್ಲವನ್ನೂ ಹೊಸದಾಗಿಯೇ ಕಟ್ಟಬೇಕಾದಂತಹ ಸವಾಲು ಗೌರಿ ಅವರ ಮುಂದಿತ್ತು. ಬರೇ ಸಹೋದ್ಯೋಗಿಗಳಿಗಷ್ಟೇ ಇದು ಸೀಮಿತವಾದ ವಿಚಾರವಲ್ಲ. ಇಡೀ ಓದುಗಬಳಗ ವನ್ನೂ ಹೊಸದಾಗಿಯೇ ಕಟ್ಟಬೇಕಾಗಿತ್ತು. ಯಾಕೆಂದರೆ, ಲಂಕೇಶರಿಗಾಗಿ ಲಂಕೇಶನ್ನು ಓದುತ್ತಿದ್ದ ಕರ್ನಾಟಕದ ವಿದ್ವತ್ ಮಂದಿಗಳು ಲಂಕೇಶರು ತೀರಿದ ದಿನವೇ ಲಂಕೇಶ್ ಪತ್ರಿಕೆಯ ಕೈ ಬಿಟ್ಟಿದ್ದರು. ಈ ಎಲ್ಲ ಕಾರಣದಿಂದ ಲಂಕೇಶರಿಲ್ಲದ ಮೊದಲ ಸಂಚಿಕೆಗಾಗಿ ನಾನು ಚಾತಕ ಪಕ್ಷಿಯಂತೆ ಕಾದಿದ್ದೆ ಮತ್ತು ಅನಿರೀಕ್ಷಿತ ರೀತಿಯಲ್ಲಿ, ಅವರ ಸಂಪಾದಕೀಯದ ಸರಳ ಭಾಷೆ, ಸರಳ ಕನ್ನಡ ಇಷ್ಟವಾಯಿತು. ಬಳಿಕ ಅಪ್ಪ ಎನ್ನುವ ಕಾಲಂ ಕೆಲವು ವಾರಗಳ ಕಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ಬಹಳಷ್ಟು ಆತ್ಮೀಯ ಬರಹ ಅದಾಗಿದ್ದರೂ, ಆ ಕಥಾನಕವನ್ನು ಅರ್ಧದಲ್ಲೇ ಅವರು ನಿಲ್ಲಿಸಿದರು. ಆದರೆ ಲಂಕೇಶ್ ಪತ್ರಿಕೆ ನಿರಂತರವಾಗಿ ಮುಂದುವರಿಯಿತು. ಲಂಕೇಶರ ಪ್ರಭಾವಳಿಯಿಂದ ಪತ್ರಿಕೆಯನ್ನು ಹೊರಗೆ ತರುವಲ್ಲೂ ಅವರು ಹಂತಹಂತವಾಗಿ ಯಶಸ್ವಿಯಾದರು. ಭಾರೀ ಆರ್ಥಿಕ ಅಡಚಣೆಗಳ ನಡುವೆಯೂ ಅದನ್ನು ತನ್ನ ಕೊನೆಯ ಉಸಿರಿರುವವರೆಗೆ ಮುನ್ನಡೆಸಿದರು. ಲಂಕೇಶ್ ಎನ್ನುತ್ತಿದ್ದ ನಾಡಿನ ಜನರು, ಗೌರಿ ಲಂಕೇಶ್ ಎನ್ನುವ ಹೊಸ ಹೆಸರನ್ನು ರೂಢಿ ಮಾಡಿಕೊಳ್ಳತೊ ಡಗಿದರು. ಲಂಕೇಶರು ಮತ್ತು ಗೌರಿ ನಡುವೆ ವ್ಯಕ್ತಿತ್ವದಲ್ಲಿ ಭಾರೀ ಅಂತರವಿದೆ. ಲಂಕೇಶ್ ತನ್ನ ಗುಹೆಯಲ್ಲಿದ್ದುಕೊಂಡೇ ಕೆಲಸ ಮಾಡಿದವರು. ಪತ್ರಿಕೆಗಳಲ್ಲಿ ಅವರಿಂದ ಎಡವಟ್ಟುಗಳಾದರೂ, ಅವರಿಗೆ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಹಿತ್ಯ, ನಾಟಕ, ಸಿನೆಮಾ, ಕಾವ್ಯ ಹೀಗೆ ಹಲವು ಜಾಗಗಳಿವೆ ಮತ್ತು ಇವುಗಳನ್ನು ಅವರು ಕವಚವಾಗಿಟ್ಟುಕೊಂಡೇ ಪತ್ರಿಕೆಯ ವಾರದ ಯುದ್ಧದಲ್ಲಿ ಭಾಗಿಯಾಗುತ್ತಿದ್ದರು. ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿಪತ್ರಿಕೆಯನ್ನು ಇಷ್ಟಪಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಹಾರ ದಲ್ಲಿ ಅವರು ಚತುರರಾಗಿದ್ದರು. ಯಾವುದೇ ವಿಷಯಗಳಲ್ಲೂ ಒಂದು ಸಣ್ಣ ಅಂತರವನ್ನು ಅವರು ಕಾಯ್ದುಕೊಳ್ಳುತ್ತಿದ್ದರು. ಸಂಪೂರ್ಣವಾಗಿ ಯಾವುದಕ್ಕೂ ಅವರು ತನ್ನನ್ನು ತೆತ್ತುಕೊಂಡಿರಲಿಲ್ಲ. ರಾಜಕಾರಣಿಗಳ ವಿರುದ್ಧ ಹಿಗ್ಗಾಮುಗ್ಗ ಬೀಳುತ್ತಿದ್ದರೂ, ಪಾರಾಗುವ ಸಣ್ಣ ದೊಂದು ‘ಜಾಗ’ವನ್ನು ಅವರು ಉಳಿಸಿ ಕೊಳ್ಳುತ್ತಿದ್ದರು. ಈ ಕಾರಣದಿಂದಲೇ, ಅವರ ವಿಪತ್ತಿನ ಸಂದರ್ಭದಲ್ಲಿ ಅವರಿಗೆ ಹಲವು ರಾಜಕಾರಣಿಗಳು ನೆರವಾದ ಉದಾಹರಣೆಗಳೂ ಇವೆ. ಆದರೆ ಗೌರಿ ಅವರು ರಕ್ತದಲ್ಲೇ ಹೋರಾಟದ ಗುಣವನ್ನು ಬೆಳೆಸಿಕೊಂಡು ಬಂದವರು. ಲಂಕೇಶ್ ಅವರ ಹತ್ತಿರದಲ್ಲಿದ್ದವರು ಹೇಳುವಂತೆ ಅವರು ಆಳದಲ್ಲಿ ತುಸು ಪುಕ್ಕರಾಗಿದ್ದರು. ಆದರೆ ಲಂಕೇಶರಿಗೆ ಹೋಲಿಸಿದರೆ ಗೌರಿ ಅಪಾರ ಧೈರ್ಯವನ್ನು ಮೈಗೂಡಿಸಿಕೊಂಡವರು. ಲಂಕೇಶರು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಬೀದಿಗಿಳಿದರಾದರೂ, ಅದು ಅಸಾಧ್ಯ ಎಂದು ಕಂಡಾಗ ತಕ್ಷಣವೇ ಸಾಹಸದಿಂದ ಹಿಂಜರಿದರು. ಆದರೆ ಗೌರಿ ಬೀದಿಯಲ್ಲಿ ನಿಂತೇ ತನ್ನ ಪತ್ರಿಕೆ ಕಟ್ಟ ತೊಡಗಿದರು. ಗೌರಿಯನ್ನು ಹಳಿಯುವುದಕ್ಕೋಸ್ಕರವೇ ಹಲವರು ‘ಲಂಕೇಶ್ ತೀರಿ ಹೋದ ಮೇಲೆ ಆ ಪತ್ರಿಕೆ ಸತ್ತು ಹೋಯಿತು’ ಎಂದದ್ದಿದೆ. ನಾನಾಗ ಅದನ್ನು ಒಪ್ಪುತ್ತಲೇ ಹೇಳುತ್ತಿದ್ದೆ ‘‘ಲಂಕೇಶ್ ಬೇರೆ, ಗೌರಿ ಬೇರೆ. ಲಂಕೇಶರನ್ನು ಗೌರಿಯಲ್ಲಿ ಹುಡುಕೋದನ್ನು ಬಿಡೋಣ. ಗೌರಿಯಲ್ಲಿ ರುವ ಸ್ವಂತಿಕೆಯನ್ನು ಗುರುತಿಸಿ ಸಾಧ್ಯವಾದರೆ ಇಷ್ಟಪಡೋಣ. ಇದು ಲಂಕೇಶ್ ಪತ್ರಿಕೆ ಅಲ್ಲ. ಇದು ಗೌರಿ ಲಂಕೇಶ್ ಪತ್ರಿಕೆ’’. ಇದಾದ ಎಷ್ಟೋ ದಿನಗಳ ಬಳಿಕ, ಇಂದ್ರಜಿತ್ ಜೊತೆ ಭಿನ್ನಾಭಿಪ್ರಾಯ ಹೊಂದಿ, ಗೌರಿಯವರು ತಮ್ಮದೇ ಹೆಸರಲ್ಲಿ ಪತ್ರಿಕೆ ನಡೆಸಿದರು ಮತ್ತು ತನ್ನದೇ ವ್ಯಕ್ತಿತ್ವದ ಮೂಲಕ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಲಂಕೇಶರ ಕಾಲಕ್ಕೂ ಗೌರಿಯ ಕಾಲಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಲಂಕೇಶರ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಓದುಗರ ಸಂಖ್ಯೆ ದೊಡ್ಡ ಮಟ್ಟದಲ್ಲಿತ್ತು ಮತ್ತು ಅದನ್ನು ಗಂಭೀರವಾಗಿಯೂ ಸ್ವೀಕರಿಸುತ್ತಿದ್ದರು. ಆದರೆ ಗೌರಿಯ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಪತ್ರಿಕೆಗಳನ್ನು ಓದುವ ಓದುಗರ ಸಂಖ್ಯೆಯೇ ಇಳಿಮುಖವಾಗಿತ್ತು. ಲಂಕೇಶರ ಕಾಲದಲ್ಲಿ ಸಂಘಪರಿವಾರ ಗಳು ಈ ಮಟ್ಟಿಗೆ ನಾಡಲ್ಲಿ ಮುಕ್ತವಾಗಿ ಬೇರಿಳಿಸಿಕೊಂಡಿರಲಿಲ್ಲ. ಗೌರಿಯ ಕಾಲದಲ್ಲಿ, ಸಂಘಪರಿವಾರದ ಜನರು ಕೂಗು ಮಾರಿಗಳಾಗಿ ರಾಜ್ಯಾದ್ಯಂತ ಹರಡಿ ಕೊಳ್ಳತೊಡಗಿದ್ದರು. ಇಂತಹ ಸಂದರ್ಭದಲ್ಲಿ ಪತ್ರಿಕೆಯನ್ನು ತನ್ನ ಹೋರಾಟದ ಅಸ್ತ್ರವಾಗಿಸಿಕೊಂಡವರು ಗೌರಿ ಲಂಕೇಶ್. ಅನೇಕ ಬಾರಿ, ಹಿಂದಿನ ಲಂಕೇಶ್‌ನ ಲೇಖಕರು ‘‘ಲಂಕೇಶರಿದ್ದಿದ್ದರೆ ಈ ರೀತಿ ಬರೆಯು ತ್ತಿರಲಿಲ್ಲ’’ ‘‘ಲಂಕೇಶರು ಈ ಕುರಿತಂತೆ ಬೇರೆಯೇ ನಿಲುವು ತಳೆಯುತ್ತಿದ್ದರು’’ ಎನ್ನುತ್ತಾ ಗೌರಿಯ ಬರಹಗಳಿಗೆ, ಹೋರಾಟ ಗಳಿಗೆ ಅಡ್ಡಗಾಲು ಹಾಕಿರುವುದನ್ನೂ ನಾನು ಗಮನಿಸಿದ್ದೇನೆ. ಲಂಕೇಶರ ವ್ಯಕ್ತಿತ್ವವನ್ನೇ ಗೌರಿಯ ವಿರುದ್ಧ ಎತ್ತಿಕಟ್ಟುವ ಹುನ್ನಾರಗಳೂ ನಡೆದಿದ್ದವು. ಆದರೆ ಈ ಎಲ್ಲ ಹುನ್ನಾರಗಳನ್ನೂ ಮೀರಿ, ಕರ್ನಾಟಕದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಗೌರಿಯ ವರು ತೊಡಗಿಸಿಕೊಂಡರು. ಬಾಬಾಬುಡಾನ್‌ಗಿರಿಯ ಹೋರಾಟದಲ್ಲಿ ಗೌರಿ ಲಂಕೇಶ್‌ನ ಪಾತ್ರ ದೊಡ್ಡ ಮಟ್ಟದ್ದು. ಬಾಬಾಬುಡಾನ್‌ಗಿರಿ ಚಳವಳಿಗಾರರನ್ನು ಪೊಲೀಸರು ಅಲ್ಲಲ್ಲಿ ಬಂಧಿಸತೊಡಗಿದಾಗ ಲಾರಿಯಲ್ಲಿ ಹತ್ತಿ ಬಾಬಾಬುಡಾನ್‌ಗಿರಿಗೆ ಹೋಗಿ, ಅಲ್ಲಿಯ ಸಭೆಯಲ್ಲಿ ಭಾಗವಹಿಸಿದವರು ಮತ್ತು ಜೈಲು ಸೇರಿ, ಅಲ್ಲಿಂದಲೇ ಪತ್ರಿಕೆಯ ಸಂಪಾದಕೀಯ ಬರೆದವರು.

 ಕಳೆದ ಒಂದು ದಶಕದ ಈಚೆಗಿನ ಬಹುತೇಕ ಚಳವಳಿ ಹೋರಾಟಗಳಲ್ಲಿ ಗೌರಿ ಲಂಕೇಶ್ ಸಕ್ರಿಯರಾಗಿದ್ದರು. ಮುಖ್ಯವಾಗಿ, ನಕ್ಸಲೀಯರನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಕೆಲಸವನ್ನು ಅವರು ಮಾಡಿದರು. ಎನ್‌ಕೌಂಟರ್‌ಗಳ ರಾಜ್ಯದಲ್ಲಿ ಸಾಲುಸಾಲಾಗಿ ನಕ್ಸಲರ (ಪಶ್ಚಿಮಘಟ್ಟದ ಆದಿವಾಸಿ ಹುಡುಗರು ಇವರು) ಹೆಣಗಳು ಬೀಳುತ್ತಿರು ವಾಗ, ಹಿಂಸೆಯ ವಿರುದ್ಧ ಮಾತನಾಡುತ್ತಲೇ, ಹೋರಾ ಟದ ಹೊಸ ದಾರಿಯನ್ನು ಅವರಿಗೆ ತೆರೆದುಕೊಡಲು ಶ್ರಮಿಸಿದವರು ಗೌರಿ. ಹೀಗೆ ಇವರು ಮತ್ತು ಸಹವರ್ತಿ ಗಳ ಅಪಾರ ಶ್ರಮದಿಂದ ಕಾಡಿನಿಂದ ನಾಡಿಗೆ ಬಂದ ತರುಣರು ಇಂದು ಪ್ರಜಾಸತ್ತಾತ್ಮಕವಾಗಿ ಸಾಮಾಜಿಕ ಹೋರಾಟಗಳನ್ನು ನಡೆಸುತ್ತಾ, ನಾಡಿಗೆ ಹೊಸ ಸ್ಫೂರ್ತಿ ಯನ್ನು ಬಿತ್ತಿದ್ದಾರೆ. ಹೊಸ ಸಾಮಾಜಿಕ ಹೋರಾಟಗಳ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ವೌಢ್ಯಗಳ ವಿರುದ್ಧ ಕಾನೂನು ಜಾರಿಗಾಗಿ ಹೋರಾಟ, ಜನನುಡಿ, ಉಡುಪಿ ಚಲೋ, ಕಲಬುರ್ಗಿ ಪರ ಹೋರಾಟ, ಆದಿವಾಸಿಗಳ ಭೂ ಹೋರಾಟ, ಕೋಮುವಾದಿಗಳ ವಿರುದ್ಧ ಹೋರಾಟ... ಹೀಗೆ ನಾಡಿನ ಎಲ್ಲ ಪ್ರಗತಿಪರ ಹೋರಾಟಗಳಲ್ಲಿ ಪಕ್ಷಭೇದ ನೋಡದೆ ಕೈಜೋಡಿಸುತ್ತಾ ಬಂದವರು ಗೌರಿ. ಒಬ್ಬ ಹೆಣ್ಣು ಮಗಳು ಒಂದು ಪ್ರಖರ ವಿಚಾರಗಳ ಪತ್ರಿಕೆಯೊಂದರ ಸಂಪಾದಕಿಯಾಗಿ ಕೋರ್ಟು, ಕಚೇರಿಗಳನ್ನು ಎದುರಿಸು ತ್ತಾ, ಸಾಮಾಜಿಕ ಹೋರಾಟಗಳಲ್ಲಿ ದಿಟ್ಟವಾಗಿ ಭಾಗವ ಹಿಸಿದ ರೀತಿ ವಿಸ್ಮಯ ಹುಟ್ಟಿಸುವಂತಹದು. ಎರಡು ತಿಂಗಳ ಹಿಂದೆ ವಾರ್ತಾಭಾರತಿ ಪತ್ರಿಕೆ ಕಚೇರಿಗೆ ಗೌರಿಯವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತನ್ನ ಪತ್ರಿಕೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಹಂಚಿಕೊಂಡಿದ್ದರು. ಲಂಕೇಶರು, ಹೆಣ್ಣು ಮಕ್ಕಳಿಗಾಗಿ ವಿಶೇಷವಾದ ಆಸ್ತಿಯನ್ನೂ ಬಿಟ್ಟು ಹೋಗಿರಲಿಲ್ಲ. ಅಷ್ಟೇ ಏಕೆ, ಗೌರಿಗೆ ನಡುಬೀದಿಯಲ್ಲಿ ನಿಂತು ಬಡಿದಾಡುವುದಷ್ಟೇ ಗೊತ್ತಿತ್ತು. ಇವುಗಳ ನಡುವೆ ವ್ಯವಸ್ಥೆಯೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುವ ಕೆಲವು ‘ಜಾಣ’ ಸಂಗತಿಗಳ ಅರಿವು ಅವರಿಗಿರಲಿಲ್ಲ. ಇದ್ದಿದ್ದರೆ ಗೌರಿ ಲಂಕೇಶ್ ಪತ್ರಿಕೆಯನ್ನು ಇಟ್ಟುಕೊಂಡೇ ಸಾಕಷ್ಟು ಹಣ, ಹೆಸರು ಮಾಡಬಹುದಿತ್ತೇನೋ. ಪತ್ರಿಕೆಯೂ ಉಳಿಯುತ್ತಿತ್ತು, ಅವರ ಪ್ರಾಣವೂ ಉಳಿಯುತ್ತಿತ್ತು ಜೊತೆಗೆ ಈ ನಾಡಿನ ಬಹುಸಂಖ್ಯೆಯ ‘ಸಜ್ಜನ’ ‘ಸೃಜನಶೀಲ’ ‘ಸಂವೇದನಾಶೀಲ’ ಕವಿಗಳು, ಕಥೆಗಾರರು, ಸಾಹಿತಿಗಳ ಮೆಚ್ಚುಗೆ ಮಾನ್ಯತೆಯೂ ಸಿಗುತ್ತಿತ್ತು.

ಗೌರಿ ಇನ್ನೊಂದು ಲಂಕೇಶ್ ಆಗದೇ ಪತ್ರಿಕೆಯನ್ನೂ, ತನ್ನನ್ನೂ ಸಮಾಜಕ್ಕೆ ಸಂಪೂರ್ಣ ಅರ್ಪಿಸಿದ ಕಾರಣಕ್ಕೆ ಇಂದು ದೇಶದ ಲಕ್ಷಾಂತರ ಮನಸ್ಸುಗಳು ಆ ತಾಯಿ ಮನಸ್ಸಿಗಾಗಿ ಕಣ್ಣೀರಿಡುತ್ತಿವೆ. ಗೌರಿಯವರು ಲಂಕೇಶ್ ಆಗದೇ ಇದ್ದುದು ಅವರ ಹೆಗ್ಗಳಿಕೆಯೇ ಹೊರತು ದೌರ್ಬಲ್ಯವಲ್ಲ. ಗೌರಿಯವರ ಬಲಿದಾನ ಖಂಡಿತ ವಾಗಿಯೂ ವ್ಯರ್ಥವಾಗುವುದಿಲ್ಲ. ಅದು ನಾಡಿನಲ್ಲಿ ಇನ್ನಷ್ಟು ಗೌರಿಯರನ್ನು ಹುಟ್ಟಿಸುತ್ತದೆ. ಹೊಸ ಕನ್ನಡ ನಾಡೊಂದನ್ನು ಕಟ್ಟಲು ತರುಣರ ತಂಡ ಗೌರಿಯವರ ನೆನಪಿನ ಬೆಳಕಿನಲ್ಲಿ ಮುನ್ನಡೆಯುತ್ತದೆ.

ಮೂರು ವರ್ಷಗಳ ಹಿಂದೆ, ಗೌರಿ ಲಂಕೇಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾನೊಂದು ಶುಭಾಶಯ ಪದ್ಯವನ್ನು ಬರೆದಿದ್ದೆ. ಅದನ್ನು ಇದೀಗ ಶ್ರದ್ಧಾಂಜಲಿ ರೂಪದಲ್ಲಿ ಮತ್ತೆ ನೆನಪಿಸಿಕೊಂಡಿದ್ದೇನೆ.

ದಾರಿ ಹೋಕರು ಎಸೆದ ನೂರು
ಕಲ್ಲುಗಳ ತಾಳಿಕೊಂಡು
ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ ಹಣ್ಣು
ಲಂಕೇಶರ ಕನಸುಗಳ
ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ
ಕಾವು ಕೊಡುತ್ತಾ
ಎರಗುವ ಹದ್ದುಗಳ ಜೊತೆಗೆ
ಬೀದಿಗಿಳಿದು ಬಡಿದಾಡುತ್ತಾ
ಕೋರ್ಟು ಕಚೇರಿ ಎಂದು ಅಲೆದಾಡುತ್ತ
ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ
ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ
ಕೆಲವರ ಪಾಲಿಗೆ ಅಕ್ಕ
ಹಲವರ ಪಾಲಿಗೆ ಅವ್ವ
ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ
ನೀಲು, ನಿಮ್ಮಿ... ಎಲ್ಲರೊಳಗೂ
ಚೂರು ಚೂರಾಗಿ ನೀವು...
ನಿಮ್ಮಳಗೆ ಲಂಕೇಶರು
ಹೊಸದಾಗಿ ಹುಟ್ಟಿದರು
ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ
ಸೇದುತ್ತಿದೆ...
ಪ್ರತಿವಾರ ಸುಡು ಕೆಂಡ
ವಿಷ ಹೀರಿದ ನಂಜುಂಡ
ಮಾತಿಲ್ಲದವರ ಪಾಲಿಗೆ
ಪತ್ರಿಕೆಯೇ ನಾಲಗೆ
ನಿರೀಕ್ಷೆ, ಸಮತೆಯ ನಾಳೆಗೆ
ಇಂದು ನಿಮಗೆ ಹುಟ್ಟಿದ ದಿನ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top