ಸಾರ್ವಜನಿಕರಿಗಾಗಿ ಇರುವ ಬಸ್ಸುಗಳು ನೆಮ್ಮದಿ ಕೆಡಿಸುತ್ತವೆಯೇ? | Vartha Bharati- ವಾರ್ತಾ ಭಾರತಿ

--

ಸಾರ್ವಜನಿಕರಿಗಾಗಿ ಇರುವ ಬಸ್ಸುಗಳು ನೆಮ್ಮದಿ ಕೆಡಿಸುತ್ತವೆಯೇ?

ಮಂಗಳೂರಿನಿಂದ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸಿಟಿ ಬಸ್ಸುಗಳಿರುವ ರಸ್ತೆಗಳೆಂದರೆ ಮಂಗಳೂರಿನ ಉತ್ತರ ಹಾಗೂ ದಕ್ಷಿಣ ದಿಕ್ಕಿಗಿರುವ ರಾಷ್ಟ್ರೀಯ ಹೆದ್ದಾರಿ. ಆಗ ಹೆದ್ದಾರಿಯ ಸಂಖ್ಯೆ 17. ಈಗ 66 ಸಂಖ್ಯೆ ಆಗಿದೆ. ತಲಪಾಡಿಗೆ ಹೋಗುವ 42, 43 ನಂಬ್ರದ ಬಸ್ಸುಗಳ ಹಾಗೆಯೇ ಸುರತ್ಕಲ್, ಕಾಟಿಪಳ್ಳಕ್ಕಿರುವ 45 ನಂಬ್ರದ ಬಸ್ಸುಗಳ ಸಂಖ್ಯೆಗಳು ಪೈಪೋಟಿಯಲ್ಲಿ ಹೆಚ್ಚುತ್ತಿರುವಂತೆ ಕಾಣುತ್ತಿತ್ತು. 45 ನಂಬ್ರದ ಬಸ್ಸುಗಳು ಅ, ಆ, ಇ, ಈ, ಉಯಿಂದ ಮೊದಲ್ಗೊಂಡು ಒಂದೇ ದಾರಿಯಲ್ಲಿ ಓಡುವ ಬಸ್ಸುಗಳು ಎಷ್ಟಿದರೂ ಬಸ್ಸಿನಲ್ಲಿ ಕಾಲಿಡಲು ಜಾಗವಿಲ್ಲ ಎಂಬುದು ಸತ್ಯ.

ಕಂಬಳದ ಕೋಣಗಳಂತೆ ಸ್ಪರ್ಧೆಯಲ್ಲಿ ಓಡುವ ಬಸ್ಸುಗಳು. ಇದಕ್ಕೆ ಮೊದಲಿಗೆ ಕಾರಣವಾದುದು ಸುರತ್ಕಲ್‌ನಲ್ಲಿ ಕೊಂಕಣ ರೈಲಿನ ಹಳಿ ನಿರ್ಮಾಣ ಕಾರ್ಯ. ಇದರಿಂದ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಯಿತು. ಮುಂದೆ ಎಂಆರ್‌ಪಿಎಲ್ ಎನ್ನುವ ದೈತ್ಯ ಸಂಸ್ಥೆಯ ನಿರ್ಮಾಣ. ಅಲ್ಲಿ ಉಂಟಾದ ವಿವಿಧ ಕಾಮಗಾರಿಗಳ ಅಷ್ಟು ವರ್ಷಗಳ ವಿವಿಧ ಹಂತದ ಕೆಲಸಗಳಿಗೆ ಭಾರತದ ಹೆಚ್ಚಿನ ರಾಜ್ಯಗಳ ಮಂದಿ ಕಾನ, ಬಾಳ, ಕಾಟಿಪಳ್ಳ, ಹೊನ್ನೆಕಟ್ಟೆಗಳಲ್ಲಿ ಜೋಪಡಿಗಳನ್ನು ಹಾಕಿದಾಗ ಅವರ ಶ್ರಮದ ಜೀವನದ ಪ್ರಾತ್ಯಕ್ಷಿಕೆ ಕಣ್ಣಿಗೆ ಕಟ್ಟುವಂತಹದ್ದಾಯಿತು. ಸುರತ್ಕಲ್ ಮಾರುಕಟ್ಟೆ ಸದಾ ಜನರಿಂದ ತುಂಬಿ ತುಳುಕುತ್ತಿತ್ತು. ಹಿಂದಿ ಭಾಷೆಯ ವಿವಿಧ ಪ್ರಭೇದಗಳು ಕಿವಿಗೆ ಬೀಳುತ್ತಿತ್ತು. ನನಗೆ ಬೆಂಗಳೂರಿನ ಕಲಾಸಿಪಾಳ್ಯದ ಜನ ಜಂಗುಳಿ ನೆನಪಾಗುತ್ತಿತ್ತು. ಅವರಿನ್ನೂ ನಮ್ಮ ಭಾಷೆ ಕಲಿತಿಲ್ಲವಾದ್ದರಿಂದ ಅವರನ್ನು ತಮಾಷೆ ಮಾಡುವ ಕಂಡಕ್ಟರ್, ಡ್ರೈವರ್‌ಗಳು, ಇನ್ನು ಕೆಲವು ಪಡ್ಡೆ ಹುಡುಗರು ನನಗೋ ಹೀಗೆ ಅನ್ಯಭಾಷಿಕರನ್ನು ಕುರಿತು ಹಾಸ್ಯ ಮಾಡುವ ಸ್ವಭಾವ ವೈಯಕ್ತಿಕವಾಗಿ ಇಷ್ಟವಾಗುತ್ತಿರಲಿಲ್ಲ.

ಇಂತಹ ದಿನಗಳ ಪ್ರಾರಂಭದಲ್ಲಿ ಕೂಳೂರು ಸಂಕ ದಾಟಿದ ಬಳಿಕ ರಸ್ತೆಯ ಬದಿಯಲ್ಲಿ ಖಾಲಿ ಜಾಗಗಳಿದ್ದು ಅಲ್ಲಿ ಜೋಪಡಿ ಹಾಕಿಕೊಂಡು ಇದ್ದವರು ನಮ್ಮ ರಾಜ್ಯದ ಉತ್ತರ ಕರ್ನಾಟಕದ ಮಂದಿ. ಅವರ ಊರಿನಲ್ಲಿ ಮಳೆ ಸಕಾಲದಲ್ಲಿ ಬಾರದೆ ಬರಗಾಲದ ಬವಣೆಗೆ ತತ್ತರಿಸಿದ ಮಂದಿ ಗುಳೆ ಎದ್ದು ಬಂದವರು. ಅವರು ಇದ್ದಲ್ಲಿಯೇ ತನ್ನ ಪಾಡಿಗೆ ಬಸ್ ನಿಲ್ದಾಣ ಹುಟ್ಟಿಕೊಂಡಿತು. ಅದಕ್ಕೆ ಕಂಡಕ್ಟರ್‌ಗಳೇ ಇಟ್ಟ ಹೆಸರು ಚಪಾತಿನಗರ ಎಂದು. ನಿಜವಾಗಿಯೂ ಅವರು ಚಪಾತಿ ತಿನ್ನುವವರಲ್ಲ. ಜೋಳದ ರೊಟ್ಟಿ ತಿನ್ನುವವರು. ಎಕರೆಗಟ್ಟಲೆೆ ಹೊಲ ಇರುವ ಅವರು ನಿಜವಾಗಿಯೂ ಜಮೀನ್ದಾರರು. ಆದರೆ ಇಲ್ಲಿ ತಮ್ಮ ಸ್ವಾಭಿಮಾನ ಮರೆತು ಕೂಲಿಯಾಳುಗಳಾಗಿ ದುಡಿಯುತ್ತಿದ್ದರೆ ಮನುಷ್ಯನ ಅದೃಷ್ಟದ ಬಗ್ಗೆ ಯೋಚಿಸುವಂತಾಗುತ್ತಿತ್ತು. ಜೊತೆಗೆ ದುಡಿದು ತಿನ್ನುವ ಅವರ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು.

ಆದರೆ ಅವರ ಮಕ್ಕಳಿಗೆ ವಿದ್ಯೆಗೆ ಅವಕಾಶ ಎಲ್ಲಿ? ಹೊಟ್ಟೆಗೆ ಹಿಟ್ಟೇ ಇಲ್ಲದ ಅವರಿಗೆ ವಿದ್ಯೆ ಎಂದರೆ ನೈವೇದ್ಯವೇ. ಎತ್ತಿನ ಗಾಡಿಗಳಲ್ಲಿ ಹೆಂಗಸರು ಮಕ್ಕಳೊಂದಿಗೆ ಪಾತ್ರೆ ಪಗಡಿ, ಕಾಳುಕಡ್ಡಿಗಳೊಂದಿಗೆ ಬರುತ್ತಿದ್ದ ಅವರನ್ನು ನೋಡಿದಾಗ ಹಳೆಯ ಚಲನಚಿತ್ರಗಳ ದೃಶ್ಯಗಳು ನೆನಪಾಗುತ್ತಿತ್ತು. ಕೂಲಿಯಾಳುಗಳಾದರೂ ರವಿವಾರದ ದಿನ ಅವರು ಕಚ್ಚೆ ಉಟ್ಟುಕೊಂಡು, ತಲೆಗೆ ಮುಂಡಾಸು ಕಟ್ಟಿಕೊಂಡು, ಹಣೆಗೆ ವಿಭೂತಿ ಬಳಿದುಕೊಂಡು ಬಂದರೆ ಅವರ ಗತ್ತುಗಾರಿಕೆ ಎದ್ದು ಕಾಣುತ್ತಿತ್ತು. ಇಂತಹ ಚಪಾತಿನಗರದ ಜನ ಬಸ್ಸು ಹತ್ತಿದರೆ ನಮ್ಮ ಕಂಡಕ್ಟರ್‌ಗೆ, ಪಡ್ಡೆ ಹುಡುಗರಿಗೆ ಅವರು ತಮಾಷೆಯ ವಸ್ತುಗಳಾಗುತ್ತಿದ್ದರು. ಅವರಿಗೋ ತುಳು ಭಾಷೆ ಮೊದಲಿಗೆ ಅರ್ಥವೂ ಆಗುತ್ತಿರಲಿಲ್ಲ. ಅವರ ಕನ್ನಡ ನಮ್ಮ ಮಂದಿಗೆ ತಿಳಿಯುತ್ತಿರಲಿಲ್ಲ. ಹೀಗೆ ಸಂವಹನ ಕಷ್ಟವಾಗುವುದು ನಿಜವಾದರೂ ಅವರನ್ನು ಲೇವಡಿ ಮಾಡುವುದು ಮಾನವೀಯತೆ ಅಲ್ಲ ಎನ್ನುವುದು ನನ್ನ ಅಭಿಪ್ರಾಯ.

ಒಂದು ದಿನ ಸಂಜೆ ನಾನು ಕಾಲೇಜ್‌ನಿಂದ ಹೋಗುತ್ತಿದ್ದ 45ಈ ಬಸ್ಸಿಗೆ ಚಪಾತಿನಗರ ಬಸ್‌ಸ್ಟಾಪಲ್ಲಿ ಒಬ್ಬ ಹಿರಿಯ ವ್ಯಕ್ತಿ ಬಸ್ಸು ಹತ್ತಿದ. ಆತ ಹತ್ತಿದವನು ನನ್ನ ಹತ್ತಿರವೇ ಬಂದು ನಿಂತಿದ್ದ. ಕಂಡಕ್ಟರ್ ಬಂದು ಟಿಕೆಟಿನ ಹಣ ಕೇಳಿದಾಗ ಆತ ಇನ್ನೂ ಕಿಸೆಯಿಂದ ಹಣ ತೆಗೆದಿರಲಿಲ್ಲ. ಕೊಡ್ತೇನೆ ಎಂದವನನ್ನು ಬಿಟ್ಟು ಮುಂದೆ ಹೋಗಿ ಮತ್ತೊಮ್ಮೆ ಬಂದಾಗ ಆತ ಹಣ ಕೊಟ್ಟ. ಕಂಡಕ್ಟರ್ ಟಿಕೆಟ್ ಕೊಡದೆ ಮತ್ತೆ ಹಿಂದೆ ಹೋದ. ಪುನಃ ಬಂದವನು ಟಿಕೆಟಿನ ಹಣ ಕೇಳಿದಾಗ ತಾನು ಹಣ ಕೊಟ್ಟಿದ್ದೇನೆ, ಟಿಕೆಟ್ ಕೊಟ್ಟಿಲ್ಲ ಎಂದು ಅವನು ಹೇಳುತ್ತಿದ್ದರೆ ಕಂಡಕ್ಟರ್ ಆತ ಹಣ ನೀಡಿಲ್ಲ ಎಂದು ಚರ್ಚೆಗೆ ತೊಡಗಿದ. ನಾನು ಹಣ ಕೊಟ್ಟದನ್ನು ನೋಡಿರುವುದರಿಂದ ಕಂಡಕ್ಟರ್ ಅವನಿಗೆ ತುಳುವಿನಲ್ಲಿ ಬೈಯುತ್ತಿರುವುದು ಸರಿ ಬಾರದೆ ನಾನು ಆ ವ್ಯಕ್ತಿಯ ಪರವಾಗಿ ವಾದಿಸಿದೆ.

ಟಿಕೆಟ್ ಕೊಡದೆ ಮೋಸ ಮಾಡಿದವರು ನೀವು. ಅವನನ್ನು ಮೋಸಗಾರನೆಂದು ಯಾಕೆ ಹೇಳುತ್ತಿದ್ದೀರಿ ಎಂದು ನಾನು ಸ್ವಲ್ಪ ಸ್ವರ ಏರಿಸಿಯೇ ಮಾತನಾಡಿದೆ. ಬಸ್ಸಿನಲ್ಲಿ ಸತ್ಯ ಗೊತ್ತಿದ್ದರೂ ಮೌನವಾಗಿರುವ ಸಜ್ಜನರು ಕೆಲವರಾದರೆ ಕಂಡಕ್ಟರ್ ಪರವಾಗಿ ನಿಂತು ಈ ಊರಿಗೆ ಹೀಗೆ ಬಂದವರೆಲ್ಲಾ ಕಳ್ಳರು, ಮೋಸಗಾರರು ಎಂದೇ ಸಮರ್ಥಿಸುವವರು ಉಳಿದವರು. ಇನ್ನು ಕೆಲವರು ತಪ್ಪನ್ನೇ ಸರಿ ಎನ್ನುವ ಅನ್ಯಾಯವನ್ನೇ ನ್ಯಾಯ ಎನ್ನುವ ಯುವಕರಿಗೆ ಇವೆಲ್ಲಾ ತಮಾಷೆಯ ಸಂದರ್ಭಗಳೇ. ಕಂಡಕ್ಟರ್ ನನ್ನನ್ನು ಕುರಿತು, ''ನಿಮಗೆ ಯಾಕೆ ಹೆಂಗಸಿಗೆ. ನೀವು ಸುಮ್ಮನೆ ಇರಿ'' ಎಂದು ಹೇಳಿದಂತೆ, ''ಈ ಪೊಂಜುವ್‌ಗ್ ದಾನೆ. ಪೊಕ್ಕಡೆ ಕುಲ್ಲೆರಾಪುಜಾ'' ಎಂದು ಉಳಿದವರಲ್ಲಿ ಹೇಳಿದಾಗ, ''ಮರ್ಯಾದೆ ಕೊಟ್ಟು ಮಾರ್ಯದೆ ತಗೊಳ್ಳಿ. ಆತ ಹಣ ಕೊಟ್ಟದ್ದನ್ನು ನಾನು ನೋಡಿದ್ದೇನೆ. ನೀವು ಟಿಕೆಟ್ ಕೊಡದಿರುವುದನ್ನೂ ಗಮನಿಸಿದ್ದೇನೆ.

ನಾನು ಹೆಂಗಸಾದರೆ ಏನು? ನಾನು ಹೇಳಬಾರದೆ? ಸತ್ಯ ಎನ್ನುವುದು ಹೆಂಗಸು ಗಂಡಸರಿಗೆ ಬೇರೆ ಬೇರೆ ಇದೆಯೇ?'' ಎಂದು ಪ್ರಶ್ನಿಸಿದೆ. ಇಷ್ಟರಲ್ಲಿ ಬೈಕಂಪಾಡಿ ಬಂತು. ಆ ವ್ಯಕ್ತಿ ಇಳಿದು ಹೋದ. ಎಲ್ಲರ ಮಾತು ನಿಂತಿತು. ಬಸ್ಸು ಗೋವಿಂದದಾಸ ಕಾಲೇಜಿನ ಬಳಿಗೆ ಬಂದಾಗ ಕಾಲೇಜು ವಿದ್ಯಾರ್ಥಿಗಳು ಹತ್ತಿದರು. ಎಲ್ಲರೂ ಮೆಟ್ಟಲಲ್ಲೇ ನಿಂತು ತೂಗುವ ಸಾಹಸಿಗಳು. ಅದರಲ್ಲಿ ಕಾನ ಬಾಳಕ್ಕೆ ಹೋಗುವ ಹುಡುಗರು ಕೃಷ್ಣಾಪುರ ಕ್ರಾಸ್‌ನಲ್ಲಿ ಇಳಿದು ಹೋದಾಗ ಕಂಡಕ್ಟರ್ ಅವರಿಗೆ ಬೈಯ್ಯ ತೊಡಗಿದ. ಯಾಕೆಂದರೆ ಅವರು ಹಣವೇ ಕೊಟ್ಟಿರಲಿಲ್ಲ. ಆಗ ನಾನಂದೆ ''ನೀನು ಮಾಡಿದ ತಪ್ಪಿಗೆ ನಿನಗೆ ಈಗಲೇ ಉತ್ತರ ಸಿಕ್ಕಿತಲ್ಲಾ? ಇದುವೇ ಲೋಕದ ನ್ಯಾಯ'' ಎಂದಾಗ ಕಂಡಕ್ಟರ್ ಸುಮ್ಮನಾದ. ಬಸ್ಸು ಮುಂದೆ ಸಾಗಿತು. ನಾನು ಬಾರಗ ರಸ್ತೆಯ ನಿಲ್ದಾಣ ಬಂದಾಗ ಇಳಿದು ಮನೆಗೆ ಹೋದೆ.

ನಾನು ಮನೆ ತಲುಪಿದ ಅರ್ಥ ಗಂಟೆಯಾಗುವಷ್ಟರಲ್ಲಿ ಸುಮಾರು ಆರೇಳು ಮಂದಿ ಯುವಕರ ತಂಡ ನಮ್ಮ ಮನೆಗೆ ಬಂತು. ಬಂದವರೆಲ್ಲರೂ ಹಿಂದೂಗಳೇ. ಬಂದವರಲ್ಲಿ ಒಬ್ಬ ''ನಿಮಗೆ ಇವತ್ತು 45ಈ ಬಸ್ಸಿನ ಕಂಡಕ್ಟರ್... ಇಂತಹವನು ಬೈದನಂತಲ್ಲಾ? ಏನೆಂದು ಬೈದ? ಅವನನ್ನು ಸುಮ್ಮನೆ ಬಿಡಬಾರದು. ಅವನಿಗೆ ಭಾರೀ ಸೊಕ್ಕು ಉಂಟು'' ಎಂದು ನನಗೆ ಅವನ ಬಗ್ಗೆ ಇನ್ನಷ್ಟು ಸಿಟ್ಟು ಬರುವಂತೆ ಮಾತನಾಡುತ್ತಿದ್ದರು. ಒಬ್ಬೊಬ್ಬರೂ ಒಂದೊಂದು ಮಾತು ಸೇರಿಸುತ್ತಿದ್ದರು. ಆ ತಂಡದಲ್ಲಿದ್ದ ಒಬ್ಬ ಯುವಕನ ಪರಿಚಯ ಇತ್ತು. ಆತ ಇಂತಹವರ ಮಗ, ಇಂತಹವಳ ಅಣ್ಣ, ಕೆಲಸ ಮಾಡದ ಸೋಮಾರಿ ಉಂಡಾಡಿಗುಂಡ ಎಂದು ತಿಳಿದಿತ್ತು. ಈಗ ಇವರೆಲ್ಲ ನನಗೇನೋ ಉಪಕಾರವಾಗುವಂತೆ ಮಾಡಲು ಬಂದಿದ್ದಾರೆೆ ಎನ್ನುವುದೇ ನನಗೆ ಆಶ್ಚರ್ಯ. ಜೊತೆಗೆ ಕಂಡಕ್ಟರ್ ಕ್ರಿಶ್ಚಿಯನ್ ಎಂದು ಅವರಿಂದಲೇ ನನಗೆ ತಿಳಿದದ್ದು. ಕೊನೆಗೆ ನಾನು ಅವರಲ್ಲಿ ಸಂದರ್ಭವನ್ನು ವಿವರಿಸಿ ''ಕಂಡಕ್ಟರ್‌ನಿಗೆ ನಾನೇ ಬೈದುದಲ್ಲದೆ ಅವನು ನನಗೆ ಬೈದುದಲ್ಲ'' ಎಂದು ತಿಳಿಸಿದೆ.

ಹಾಗೆಯೇ ''ನನ್ನ ಕಾರಣಕ್ಕಾಗಿ ನೀವು ಅವನಲ್ಲಿ ಜಗಳಾಡುವ ಆವಶ್ಯಕತೆಯಿಲ್ಲ. ಹೌದು ನೀವ್ಯಾಕೆ ಈ ಬಗ್ಗೆ ತಲೆಕೆಡಿಸಿಕೊಂಡಿದ್ದೀರಿ? ನನ್ನ ರಕ್ಷಣೆಗೆ ನಿಮ್ಮ ಅಗತ್ಯವಂತೂ ನನಗೆ ಬೇಕಿಲ್ಲ. ಅಲ್ಲದೆ ಅವನಿಗೆ ಏನೂ ಮಾಡಬೇಡಿ. ಮಾಡಿದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವವಳಲ್ಲ'' ಎಂದು ಸ್ವಲ್ಪ ಗದರಿಸಿದಂತೆಯೇ ಹೇಳಿದೆ. ಅವರಿಗೆ ತಾವು ಸೋತಂತೆ ಆಯಿತು. ಧರ್ಮದ ಹೆಸರಲ್ಲಿ ಹೊಡೆದಾಟದ ಅವಕಾಶ ತಪ್ಪಿ ಹೋಯ್ತಲ್ಲಾ ಎಂದು ನಿರಾಶೆಯಾಯಿತು. ಮನಸ್ಸಿನಲ್ಲಿ ನನಗೆಷ್ಟು ಬೈದುಕೊಂಡರೋ ಗೊತ್ತಿಲ್ಲ. ಆದರೆ ನನಗೆ ಇಂತಹ ಯುವಕರ ನೇರ ಪರಿಚಯವಾಯ್ತು. ನನಗೀಗ ಒಳಗೊಳಗೆ ಭಯವಾದುದು ನನ್ನ ರಕ್ಷಕರಾಗಿ ಬಂದವರ ಹೊರತು ಕಂಡಕ್ಟರ್‌ನ ಬಗ್ಗೆ ಅಲ್ಲ. ಈ ಘಟನೆಯ ನಂತರ ಆ ಕಂಡಕ್ಟರನೂ ತನ್ನ ಒರಟುತನ ಕಡಿಮೆ ಮಾಡಿದ್ದು ನಿಜವೇ. ಉಳಿದವರೂ ಅವನ ಬಗ್ಗೆ ಹಾಗೆ ಹೇಳುತ್ತಿದ್ದರು. ಆಗ ನನಗೆ ನಾನು ಶಿಕ್ಷಕಿಯಾದುದು ಸಾರ್ಥಕವಾಯ್ತು ಎಂದನ್ನಿಸಿತು. ಬಹಳ ಜನರು ತಪ್ಪು ಮಾಡುತ್ತಾರೆ. ಅದನ್ನು ತಪ್ಪು ಎಂದು ಯಾರೂ ಹೇಳದಿದ್ದರೆ ಅವರು ತಿದ್ದಿಕೊಳ್ಳುವ ಅವಕಾಶ ಎಲ್ಲಿರುತ್ತದೆ. ತಪ್ಪು ಎಂದು ತಿಳಿಸಿ ಹೇಳುವವರಿಲ್ಲದಿರುವುದರಿಂದಲೇ ಸಮಾಜದಲ್ಲಿ ತಪ್ಪು ಮಾಡುವವರ ಸಂಖ್ಯೆ ಹೆಚ್ಚುತ್ತದೆಯಲ್ಲವೇ?

ನನ್ನ ಮಕ್ಕಳು ವಿದ್ಯಾದಾಯಿನಿಗೆ ಸೇರಿದ ಪ್ರಾರಂಭದಲ್ಲಿ ಒಂದು ವರ್ಷ ಬಸ್ಸಿನ ಪ್ರಯಾಣದಿಂದ ಪಟ್ಟ ಕಷ್ಟವನ್ನು ನೋಡಿ ನಾನು ಬೆಳಗ್ಗೆ ರಿಕ್ಷಾ ಮಾಡಿಕೊಂಡು ಮಕ್ಕಳನ್ನು ವಿದ್ಯಾದಾಯಿನಿ ಶಾಲೆಯವರೆಗೆ ಬಿಟ್ಟು, ಅಲ್ಲಿಂದ ಸರ್ವಿಸ್ ಬಸ್ಸು ಹಿಡಿದು ಮಂಗಳೂರಿಗೆ ಬರುತ್ತಿದ್ದೆ. ಈ ವ್ಯವಸ್ಥೆಯಲ್ಲಿ ಮೂಲ್ಕಿಯ ಮೆಡಲಿನ್ ಸ್ಕೂಲ್‌ಗೆ ಹೋಗುವ 7ನೇ ಬ್ಲಾಕಿನ ಟೀಚರ್ ತಾನು ಜೊತೆಯಾಗುವೆ ಎಂದರು. ನಾವಿಬ್ಬರು ಹಾಗೂ ನನ್ನ ಮಕ್ಕಳೊಂದಿಗೆ ಅವರ ಚಿಕ್ಕ ಮಗನೂ ಇದ್ದು ನಾವು ನಮ್ಮಿಬ್ಬರ ಮನೆಗಳ ಮುಖ್ಯ ರಸ್ತೆಯಲ್ಲಿದ್ದ ಇಬ್ಬರು ಮುಸ್ಲಿಂ ಸಹೋದರರ ರಿಕ್ಷಾ ಚಾಲಕರನ್ನು ಈ ಬಗ್ಗೆ ವಿಚಾರಿಸಿದೆವು.

ಅವರು ಒಪ್ಪಿಕೊಂಡು ಪ್ರತಿ ದಿನವೂ ಇಬ್ಬರಲ್ಲಿ ಯಾರಾದರೂ ಒಬ್ಬರು ಸಮಯಕ್ಕೆ ಸರಿಯಾಗಿ ನಮ್ಮನ್ನು ಕರೆದೊಯ್ಯುತ್ತಿದ್ದರು. ಈಗ ನಾನು ಸುರತ್ಕಲ್‌ನಲ್ಲೇ ಇಳಿದು ಎಕ್ಸ್‌ಪ್ರೆಸ್ ಬಸ್ಸಲ್ಲಿ ಹೋಗುವ ರೂಢಿ ಮಾಡಿಕೊಂಡೆ. ಈ ಬಸ್ಸುಗಳಲ್ಲಿ ಕುಂದಾಪುರ, ಉಡುಪಿಗಳಿಂದ ಬ್ಯಾಂಕ್ ಉದ್ಯೋಗಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ಲೈಫ್ ಇನ್ಶೂರೆನ್ಸ್ ಕಚೇರಿಯ ಸಿಬ್ಬಂದಿ ಸುರತ್ಕಲ್‌ನಿಂದ ಹತ್ತುವವರು ಸಾಕಷ್ಟು ಮಹಿಳೆಯರೊಂದಿಗೆ ಮಹನೀಯರೂ ಇರುತ್ತಿದ್ದರು. ಹೀಗೆ ವಿದ್ಯಾವಂತ ವರ್ಗವೇ ಇದ್ದರೂ ಮಹಿಳಾ ಮೀಸಲಾತಿಯ ಸೀಟನ್ನು ಮಾತ್ರ ನಿರೀಕ್ಷಿಸುವಂತಿರಲಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top