-

ಇಂದು ವಿಶ್ವ ಅಪಸ್ಮಾರ ಜಾಗೃತಿ ದಿನ

ಅಪಸ್ಮಾರಕ್ಕೆ ಕಾರಣಗಳೇನು?

-

ಪ್ರತಿ ವರ್ಷ ವಿಶ್ವದಾದ್ಯಂತ ಮಾರ್ಚ್ 26ರಂದು ‘ಅಂತರ್‌ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ’ ಅಥವಾ ‘ಪರ್ಪಲ್ ಡೇ’ ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತ್ತಿನಾದ್ಯಂತ ಸರಿಸುಮಾರು 65 ಮಿಲಿಯನ್ ಮಂದಿ ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸಿಮೀತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂದರೂ ತಪ್ಪಲ್ಲ. ಸೆರಬ್ರಲ್ ಪಾಲ್ಸಿ ಎಂಬ ಆನುವಂಶಿಕ ಮೆದುಳು ಸಂಬಂಧಿ ರೋಗ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ ಮತ್ತು ಇವರಲ್ಲಿ ಶೇ. 41 ಭಾಗದಷ್ಟು ಮಕ್ಕಳು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಾರೆ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದ ಜನ ಸಂಖ್ಯೆಯ ಪ್ರತಿ ನೂರರಲ್ಲಿ ಒಬ್ಬ ಅಪಸ್ಮಾರ ಬಾಧೆಯಿಂದ ಬಳಲುತ್ತಿದ್ದಾರೆ ಮತ್ತು ವಿಶ್ವದಾದ್ಯಂತ 65 ಮಿಲಿಯನ್ ಮಂದಿ ಬಳಲುತ್ತಿದ್ದು, ಇವರಲ್ಲಿ ಶೇ. 50 ಮಂದಿಗೆ ಯಾವ ಕಾರಣದಿಂದ ಅಪಸ್ಮಾರ ಬಂದಿದೆ ಎನ್ನುವುದು ಗೊತ್ತಿಲ್ಲದಿರುವುದೇ ಸೋಜಿಗದ ಸಂಗತಿ. ಭಾರತದಲ್ಲಿ ಸುಮಾರು 12 ಮಿಲಿಯನ್ ಮಂದಿ ಈ ಅಪಸ್ಮಾರ ರೋಗದಿಂದ ಬಳಲುತ್ತಿದ್ದಾರೆ.

ಅಪಸ್ಮಾರ ರೋಗದ ಬಗೆಗಿನ ಅಪನಂಬಿಕೆಗಳನ್ನು ತೊಡೆದು ಹಾಕಿ, ರೋಗಿಗಳಿಗೆ ಆತ್ಮಸ್ಥೈರ್ಯ ನೀಡಿ, ಪ್ರೀತಿ, ಮಮತೆ, ವಿಶ್ವಾಸ ತೋರಿ, ಅವರಿಗೂ ವಿದ್ಯಾಭ್ಯಾಸಕ್ಕೆ ಅನುವು ನೀಡಿ, ಉದ್ಯೋಗ ಪಡೆಯಲು ಅವಕಾಶ ಮಾಡಿ ಇತರರಂತೆ ಸಮಾಜದಲ್ಲಿ ಅವರು ಕೂಡಾ ವೈವಾಹಿಕ ಕೌಟುಂಬಿಕ ಜೀವನವನ್ನು ಪಡೆಯಲು ಪೂರಕವಾದ ವಾತಾವರಣ ಕಲ್ಪಿಸುವ ಸದುದ್ದೇಶವನ್ನು ಈ ‘ಪರ್ಪಲ್ ಡೇ’ ಆಚರಣೆ ಹೊಂದಿದೆ. ಅಪಸ್ಮಾರ ರೋಗದಿಂದ ಬಳಲುತ್ತಿದ್ದ 9 ವರ್ಷದ ಕಾಸಿಡಿ ಮೆಗಾನ್ ಎಂಬ ಕೆನಡಾ ದೇಶದ ಬಾಲಕಿ ಮತ್ತು ಅಪಸ್ಮಾರ ಸಂಘ, ನೋವಾ ಸ್ಕೊಟಿಯಾ ಇವರ ಜಂಟಿ ಆಶ್ರಯದಲ್ಲಿ ಈ ಆಚರಣೆಯನ್ನು 2008ರಲ್ಲಿ ಆರಂಭಿಸಿದರು. ಅಪಸ್ಮಾರ ಕಾಯಿಲೆಯನ್ನು ಪ್ರತಿನಿಧಿಸುವ ಬಣ್ಣ ಲಾವೆಂಡರ್ ಆಗಿದ್ದು, ಈ ಲಾವೆಂಡರ್ ಹೂ ಅತೀ ಎತ್ತರದ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತದೆ. ಅಪಸ್ಮಾರ ರೋಗಿಗಳು ಕೂಡಾ ತಾವು ಒಬ್ಬಂಟಿ ಮತ್ತು ಏಕಾಂಗಿಯಲ್ಲ ಎಂಬರ್ಥದಲ್ಲಿ ಈ ಲಾವೆಂಡರ್ ಹೂ ಮತ್ತು ಬಣ್ಣವನ್ನು ಅಪಸ್ಮಾರ ಕಾಯಿಲೆಯ ಜೊತೆ ಸೇರಿಸಲಾಗಿದೆ.

ಏನಿದು ಅಪಸ್ಮಾರ ಕಾಯಿಲೆ?

ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮೆದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಾಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸ್ಮತಿ ಸೆಳೆತ. ಇದನ್ನೇ ಮೂರ್ಛೆ ರೋಗ, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ ಎಂದು ಕರೆಯುತ್ತಾರೆ. ಜನಸಾಮಾನ್ಯ ಆಡುಭಾಷೆಯಲ್ಲಿ ‘ಪಿಟ್ಸ್’ ಎನ್ನುತ್ತಾರೆ. ನಮ್ಮ ಮೆದುಳು ಎನ್ನುವುದು ಒಂದು ಸಂಕೀರ್ಣವಾದ ನರಮಂಡಲ. ಅದರಲ್ಲಿ ನರಕೋಶಗಳ ಮಧ್ಯೆ ವಿದ್ಯುತ್ ಪ್ರಸರಣ ನಿಯಮಿತವಾಗಿ ನಡೆಯುತ್ತಿರುತ್ತದೆ. ವಿದ್ಯುತ್ ಆವೇಗಗಳ ಹರಡುವಿಕೆ ಅತೀ ಚಿಕ್ಕ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಆದರೆ ದೊಡ್ಡ ಸೆಳೆತ ಬಂದಾಗ ನರಕೋಶಗಳ ದೊಡ್ಡ ಗುಂಪು ಪದೇ ಪದೇ ಸೆಳತಕೊಳ್ಳಗಾಗಿ ಅವೇಶಗೊಂಡು, ಚುರುಕುಗೊಂಡು ತುಂಬಾ ವ್ಯಾಪಕ ಪ್ರಮಾಣದಲ್ಲಿ ವಿದ್ಯುತ್ ಚೇತನವನ್ನು ಹೊರಹಾಕುತ್ತದೆ. ಅದನ್ನು ತಡೆಯುವ ಶಕ್ತಿ ನರಕೋಶಗಳ ಮಧ್ಯೆ ಕುಗ್ಗಿ ಹೋಗಿರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಸೆಳವಿನ ಕಾರ್ಯವ್ಯಾಪ್ತಿಗೊಂದು ಮಿತಿಯಿರುತ್ತದೆ. ಅಪಸ್ಮಾರ ರೋಗಿಗಳಲ್ಲಿ ಈ ಮಿತಿ ತುಂಬ ತಳಹಂತದಲ್ಲಿದ್ದು, ಅವರು ಬೇರೆ ಬೇರೆ ಕಾರಣದಿಂದಾಗಿ ದೊರೆಯುವ ಅನೇಕ ಬಗೆಯ ಪ್ರಚೋದನೆಗಳಿಗೆ ಸೆಳವನ್ನು ತೋರ್ಪಡಿಸುತ್ತಾರೆ. ಅಸಹಜವಾಗಿರುವ ಅವರ ನರಮಂಡಲದ ನರಕೋಶಗಳು, ಬಹಳ ಬೇಗನೆ ಪ್ರಚೋದನೆಗೊಳಗಾಗುತ್ತದೆ. ಅಪಸ್ಮಾರದ ಸೆಳವಿನ ಕಾರ್ಯಬಾಹುಳ್ಯ ಮೆದುಳಿನ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರಬಹುದು. ಅಥವಾ ಅದು ವ್ಯಾಪಕವಾಗಿ ಹರಡಿ ಮೆದುಳಿನ ಎರಡು ಭಾಗಗಳಿಗೆ ವ್ಯಾಪಿಸಿಗೊಂಡು ಅತಿ ಮಾರಕವಾದ, ವಿಪರೀತ ಸೆಳವನ್ನು ತೋರ್ಪಡಿಸಬಹುದು. ಮೆದುಳಿನ ನರಕೋಶಗಳ ಈ ಚಟುವಟಿಕೆಗಳನ್ನು ಮೆದುಳಿನ ವಿದ್ಯುತ್‌ಮಾಪನ (EEG)ದಲ್ಲಿ ನಿಖರವಾಗಿ ದಾಖಲಿಸಬಹುದಾಗಿದೆ. ಅದೇ ರೀತಿ ನರಮಂಡಲದ ನರಕೋಶಗಳ ತುದಿಯಲ್ಲಿನ ಚಿಕ್ಕ ಚಿಕ್ಕ ಕೋಣೆಗಳಲ್ಲಿ ನರಕೋಶಗಳನ್ನು ಪ್ರಚೋದಿಸುವ ರಸವಾಹಕವಾದ ಅಸೆಟೈಲ್ ಕೋಲಿನ್ ಮತ್ತು ಪ್ರಚೋದನೆಯನ್ನು ಕಡಿಮೆಯಾಗಿಸುವ ಗಾಮಾ ಅಮಿನೋ ಬ್ಯುಟರಿಕ್ ಆಸಿಡ್(EABA)ಎಂಬ ರಸವಾಹಕಗಳಲ್ಲಿ ಸಾಮಾನ್ಯವಾಗಿ ಸಮತೋಲನವಿರುತ್ತದೆ. ಆದರೆ ಅಪಸ್ಮಾರವಿರುವ ರೋಗಿಗಳಲ್ಲಿ ಈ ಸಮತೋಲನ ಕಂಡು ಬರುವುದಿಲ್ಲ ಮತ್ತು ಅದೇ ಕಾರಣಕ್ಕಾಗಿ ವ್ಯಕ್ತಿ, ಪದೇ ಪದೇ ನರಮಂಡಲದ ನರಕೋಶಗಳ ವಿಪರೀತ ಸೆಳೆತಕೊಳ್ಳಗಾಗಿ ಅಪಸ್ಮಾರಕ್ಕೆ ತುತ್ತಾಗುತ್ತಾರೆ. ಕಾರಣಗಳೇನು?

* ಆನುವಂಶಿಕ ಕಾರಣಗಳು.

* ಹೆರಿಗೆಯ ಸಮಯದಲ್ಲಿ ಮೆದುಳಿಗೆ ಆಗುವ ಹಾನಿಯಿಂದಾಗಿ, ಅಪಸ್ಮಾರ ಕಾಯಿಲೆ ಬರಬಹುದು. ಇದು ಹೆರಿಗೆಯ ಸಮಯದಲ್ಲಿ ಮಗುವಿನ ತಲೆಯನ್ನು ಹೊರತೆಗೆಯುವ ಇಕ್ಕುಳದೊತ್ತಡದಿಂದಾಗಿ ಮೆದುಳಿಗೆ ಆಗುವ ಹಾನಿ ಅಥವಾ ಗರ್ಭಾಶಯದಲ್ಲಿರುವಾಗಲೇ ಉಂಟಾಗುವ ಅಮ್ಲಜನಕದ ಕೊರತೆಯಿಂದಾಗಿಯೂ, ಬಾಲ್ಯದಲ್ಲಿ ಅಪಸ್ಮಾರ ಬರುವ ಸಾಧ್ಯತೆ ಇದೆ.

* ಬಾಲ್ಯದಲ್ಲಿ ತಲೆಗೆ ಬಿದ್ದ ಪೆಟ್ಟು ನಂತರದ ದಿನಗಳಲ್ಲಿ ಅಥವಾ ಅನೇಕ ತಿಂಗಳು ಅಥವಾ ವರ್ಷಗಳ ಬಳಿಕ ಸೆಳವಿನ ರೂಪದಲ್ಲಿ ಕಾಣಿಸಿಕೊಳ್ಳಬಹುದು.

* ವಿಪರೀತವಾದ ಜ್ವರದಿಂದಲೂ ಕೆಲವೊಮ್ಮೆ ಅಪಸ್ಮಾರ ಬರುವ ಸಾಧ್ಯತೆ ಇದೆ.

* ಕೆಲವೊಂದು ಮೆದುಳಿನ ಶಸ್ತ್ರ ಚಿಕ್ಸಿತೆಯ ಬಳಿಕ, ಮೆದುಳಿಗೆ ಉಂಟಾದ ಗಾಯದಿಂದಾಗಿ ಅಪಸ್ಮಾರ ಬರಬಹುದು.

* ಮೆದುಳಿಗೆ ರಕ್ತ ಸಂಚಾರ ಅಥವಾ ಆಮ್ಲಜನಕ ಕೊರತೆ ಉಂಟಾದಾಗ ಕೂಡಾ ಅಪಸ್ಮಾರ ಬರಬಹುದು. * ಅತಿಯಾದ ಮದ್ಯಪಾನ, ಅತಿಯಾದ ಔಷಧಿ ಸೇವನೆ, ಖಿನ್ನತೆ ಹೊಗಲಾಡಿಸುವ ಔಷಧಿಗಳ ದುರ್ಬಳಕೆ ಕೂಡಾ ಅಪಸ್ಮಾರಕ್ಕೆ ಕಾರಣವಾಗಬಹುದು. ನಿರಂತರವಾಗಿ, ಮದ್ಯವ್ಯಸನಿಗಳು ಮದ್ಯಪಾನವನ್ನು ಏಕಾಏಕಿ ಬಿಟ್ಟಾಗ ಕೂಡಾ ವ್ಯಕ್ತಿಯಲ್ಲಿ ಅಪಸ್ಮಾರ ಗೋಚರಿಸಬಹುದು. ಅದೇ ರೀತಿ ನಿದ್ರಾಹೀನತೆಗೆ ಉಪಯೋಗಿಸುವ ಗಾರ್ಡಿನಾಲ್ ಸೋಡಿಯಂ ಎಂಬ ಫಿನೋಬಾರ್ಬಿಟೋನ್ ಅಥವಾ ಬೆನ್ಜೊಡಯಜಪಿನ್ ಔಷಧಿ ಸೇವನೆ ನಿಲ್ಲಿಸಿದಾಗಲೂ ಅಪಸ್ಮಾರ ಕಾಣಿಸಿಕೊಳ್ಳಬಹುದು.

* ಮೆದುಳಿನ ಉರಿಯೂತ (Meningitis) ಮೆದುಳಿನ ಪೊರೆ ಉರಿಯೂತ, ಮೆದುಳಿನ ಕೀವುಗಳು, ಮೆದುಳಿನ ಹೊರಮೈಯಲ್ಲಿನ ಪೊರೆಯಲ್ಲಿ ರಕ್ತ ಶೇಖರಣೆ, ಮೆದುಳಿಗೆ ಗಾಯವಾಗಿ ಊದಿಕೊಂಡಾಗ, (ಅಪಘಾತಗಳಲ್ಲಿ) ಮೆದುಳಿನ ಒಳಗಿನ ಒತ್ತಡ ಜಾಸ್ತಿಯಾದಾಗ ಅಪಸ್ಮಾರ ಕಾಣಿಸಿಕೊಳ್ಳಬಹುದು.

* ರಕ್ತದಲ್ಲಿ ಗ್ಲೋಕೋಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದಾಗ, ರಕ್ತದಲ್ಲಿ ಕಲ್ಮಶಗಳು ಜಾಸ್ತಿಯಾದಾಗ ಯೂರಿಯಾ, ಯೂರಿಕ್ ಆಸಿಡ್ ಮುಂತಾದ ಕಲ್ಮಶಗಳು, ಕಿಡ್ನಿ ವೈಫಲ್ಯದಿಂದಾಗಿ ರಕ್ತದಲ್ಲಿ ಏರಿಕೆಯಾಗಿ ಅಪಸ್ಮಾರ ಕಾಣಿಸಬಹುದು.

* ವಿಪರೀತ ಮದ್ಯ ಸೇವನೆಯಿಂದಾಗಿ ಲಿವರ್ (ಯಕೃತ್ತು) ನಾಶಗೊಂಡು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ ರಕ್ತದಲ್ಲಿ ಕಲ್ಮಶಗಳು ಅಥವಾ ಔಷಧಗಳ ಶೇಖರಣೆಗೊಂಡು ಅಪಸ್ಮಾರ ಉಂಟಾಗುವ ಸಾಧ್ಯತೆ ಇರುತ್ತದೆ.

ಅಪಸ್ಮಾರ ಬಂದಾಗ ಏನು ಮಾಡಬೇಕು?
ಅಪಸ್ಮಾರ ಬಂದಾಗ ತಕ್ಷಣ ಮಾಡಬೇಕಾದ ತುರ್ತು ಕೆಲಸವೆಂದರೆ, ರೋಗಿಯ ದೇಹದ ಭಾಗಕ್ಕೆ ಯಾವುದೇ ರೀತಿಯ ಅಪಾಯ ಆಗದಂತೆ ಆತನನ್ನು ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ, ಇತ್ಯಾದಿಗಳಿಂದ ದೂರವಿರಿಸಬೇಕು. ಬಿಗಿಯಾದ ಉಡುಪನ್ನು ಸಡಿಲಿಸಬೇಕು. ಉಸಿರು ಸರಾಗವಾಗಲು ಪೂರಕವಾಗುವಂತೆ ತಲೆಯನ್ನು ಒಂದು ಕಡೆ ವಾಲಿಸಿ ಹಿಡಿಯಬೇಕು. ನಾಲಗೆ ಕಚ್ಚಿಕೊಳ್ಳದಂತೆ ತಡೆಯಲು ಹಲ್ಲುಗಳ ನಡುವೆ ಕರವಸ್ತ್ರ ಅಥವಾ ಬಟ್ಟೆಯನ್ನು ಇಡಬಹುದು. ನಾಲಗೆ ಕಡಿಯದಂತೆ ತಡೆಯಲು ಮರದ ತುಂಡು, ನಾಲಗೆ ಇಕ್ಕುಳ ಮತ್ತು ದೇಹದ ಚಲನೆ ನಿರ್ಬಂಧಿಸುವ ಸಾಧನಗಳಿಂದ, ಉಪಕಾರಕ್ಕಿಂತ ಹೆಚ್ಚು ಅಪಾಯವಾಗುವ ಸಾಧ್ಯತೆ ಇರುತ್ತದೆ. ಸೆಳವು ಕಾಲದಲ್ಲಿ ಸುರಿಯುವ ವಿಪರೀತ ಜೊಲ್ಲುರಸ, ಗಂಟಲಿಗೆ ಹೋಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ನಿಯಮಿತವಾಗಿ ಒರೆಸಿ, ಗಾಳಿಯ ಸರಾಗ ಚಲನೆಗೆ ಅನುವು ಮಾಡಿಕೊಡಬೇಕು. ಎತ್ತರದ ಜಾಗದಲ್ಲಿ ವ್ಯಕ್ತಿ ಬಿದ್ದಿದ್ದರೆ, ವ್ಯಕ್ತಿಯನ್ನು ಸಮತಟ್ಟಾದ ನೆಲದಲ್ಲಿ ಮಲಗಿಸಿ ದೇಹಕ್ಕೆ ಯಾವುದೇ ಏಟಾಗದಂತೆ ತಡೆಯಬೇಕು. ಅಪಸ್ಮಾರದಿಂದ ಹೊರಳಾಡುತ್ತಿರುವ ವ್ಯಕ್ತಿಯ ಕೈಗೆ ಚೂಪಾದ ಕಬ್ಬಿಣದ ಸರಳನ್ನು ನೀಡಿ ಸೆಳತ ನಿಲ್ಲಿಸಲು ಪ್ರಯತ್ನಿಸುವುದು ಮೂರ್ಖತನದ ಪರಮಾವಧಿಯಾಗಿರುತ್ತದೆ. ಅದೇ ರೀತಿ ಮುಖದ ಮೇಲೆ ನೀರು ಸುರಿಯುವುದರಿಂದ ಉಸಿರಾಟಕ್ಕೆ ಮತ್ತಷ್ಟು ತೊಂದರೆಯಾಗಬಹುದು. ಅಪಸ್ಮಾರ ಬಂದು ವ್ಯಕ್ತಿ ಕಂಪಿಸುತ್ತಿರುವಾಗ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಪ್ರಯತ್ನಿಸಬಾರದು. ನೆಲದ ಮೇಲೆ ಮಲಗಿಸಿ ಅಪಸ್ಮಾರ ನಿಲ್ಲುವ ವರೆಗೆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅಪಸ್ಮಾರದ ತೀವ್ರತೆ ಕಡಿಮೆಯಾದ ಬಳಿಕ ಆಸ್ಪತ್ರೆಗೆ ಸೇರಿಸಿ ಕೂಲಂಕಷವಾಗಿ ಅಪಸ್ಮಾರಕ್ಕೆ ಕಾರಣವಾದ ಸ್ಥಿತಿ ಮತ್ತು ಕಾರಣಗಳನ್ನು ತಿಳಿದು ಚಿಕ್ಸಿತೆ ನೀಡಬೇಕಾಗುತ್ತದೆ 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top