ಜಾತಿ ಆಧಾರಿತ ರ‍್ಯಾಲಿಗಳ ನಿಷೇಧ: ಆದಿತ್ಯನಾಥ್ ಸರಕಾರದ ಕುತಂತ್ರ ಯಾರ ವಿರುದ್ಧ?

ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ್ದಕ್ಕೆ ತನಗೆ ಹೆಮ್ಮೆ ಇದೆ ಎಂದು ಹೇಳುವ ಒಬ್ಬ ಮುಖ್ಯಮಂತ್ರಿ ತಮ್ಮ ರಾಜ್ಯದಲ್ಲಿ ಜಾತಿ ಆಧಾರಿತ ರಾಜಕೀಯ ರ್ಯಾಲಿಗಳನ್ನು ನಿಷೇಧಿಸಿದ್ದಾರೆ.
ಅವರು ವಾಹನಗಳ ಮೇಲೆ ಜಾತಿ ಹೆಸರುಗಳ ಬಳಕೆಯನ್ನು ಕೂಡ ನಿಷೇಧಿಸಿದ್ದಾರೆ. ಆದರೆ ಅದರಿಂದ ಏನು ಸಾಧಿಸಬಹುದು?
ತಾನು ಉನ್ನತ ಜಾತಿಯಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಆದಿತ್ಯನಾಥ್, ತಾನು ಜಾತಿವಾದವನ್ನು ಉತ್ತೇಜಿಸುವುದಿಲ್ಲ ಎಂದು ಹೇಗೆ ಹೇಳುತ್ತಾರೆ? ಹಾಗಾದರೆ, ಅವರು ತಮ್ಮ ರಾಜ್ಯದಲ್ಲಿ ಜಾತಿ ಆಧಾರಿತ ರಾಜಕೀಯ ರ್ಯಾಲಿಗಳನ್ನು ನಿಷೇಧಿಸುತ್ತಿರುವುದು ಏಕೆ?
ಬಹುತೇಕ ಪ್ರತಿಯೊಂದು ಪೊಲೀಸ್ ಠಾಣೆಯ ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಇವರೆಲ್ಲ ಸಿಂಗ್ ಎಂಬ ನಿರ್ದಿಷ್ಟ ಉಪನಾಮ ಇರುವವರಾಗಿದ್ದರೆ, ಅಂಥ ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಜಾತಿ ಆಧಾರಿತ ರ್ಯಾಲಿಗಳನ್ನು ನಿಷೇಧಿಸುತ್ತಿರುವುದು ಎಷ್ಟು ಹಾಸ್ಯಾಸ್ಪದ?
ಬಿಜೆಪಿ ಕಾರ್ಯಕರ್ತರು, ನಾಯಕರು, ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಗಲಿರುಳು ಮನುಸ್ಮತಿಯನ್ನು ಹಾಡಿ ಹೊಗಳುತ್ತಾರೆ. ಅವರು ಹಿಂದೂ ರಾಷ್ಟ್ರವನ್ನು ಕಲ್ಪಿಸಿಕೊಳ್ಳುತ್ತಾರೆ. ಎಲ್ಲಾ ಅಧಿಕಾರ ಹಿಂದೂಗಳದ್ದು, ಅಂದರೆ ಮೇಲ್ಜಾತಿಗಳದ್ದು ಎನ್ನುತ್ತಾರೆ. ಹೀಗಿರುವಾಗ, ಏಕೆ ಜಾತಿ ರ್ಯಾಲಿಗಳ ಮೇಲೆ ನಿಷೇಧ ಹೇರಲಾಗುತ್ತಿದೆ ಎಂಬ ಪ್ರಶ್ನೆ ಏಳುತ್ತದೆ.
ಈ ತೋರಿಕೆಯ ಆಟ ಉತ್ತರ ಪ್ರದೇಶದಲ್ಲಿ ಏಕೆ ನಡೆದಿದೆ? ಅಖಿಲೇಶ್ ಯಾದವ್ ಅವರ ಪಿಡಿಎ ಸೂತ್ರದೊಂದಿಗೆ ನೇರವಾಗಿ ಮುಖಾಮುಖಿಯಾಗದೆ, ಹಿಂಬಾಗಿಲಿಂದ ಹೂಡಲಾಗುತ್ತಿರುವ ತಂತ್ರ ಇದಾಗಿದೆಯೆ?
ಅಖಿಲೇಶ್ ಅವರ ಪಿಡಿಎ ಅಂದರೆ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ಎಂದು. ಕರ್ನಾಟಕದ ಅಹಿಂದದ ಹಿಂದಿ ರೂಪ ಈ ಪಿಡಿಎ.
ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ 43 ಸ್ಥಾನಗಳನ್ನು ಗೆದ್ದವು. ಮೋದಿ, ಶಾ ಅಥವಾ ಆದಿತ್ಯನಾಥ್ ಈ ಸೋಲನ್ನು ಮರೆತಿಲ್ಲ.
2027ರ ಯುಪಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿವೆ ಮತ್ತು ಈಗ ರಾಜಕೀಯ ಉದ್ದೇಶಗಳಿಗಾಗಿ ನಡೆಸುವ ಜಾತಿ ಆಧಾರಿತ ರ್ಯಾಲಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅವರು ದ್ವೇಷವನ್ನು ಪ್ರಚೋದಿಸುತ್ತಾರೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಏಕತೆಗೆ ಅಪಾಯವನ್ನುಂಟುಮಾಡುತ್ತಾರೆ ಎಂಬ ಕಾರಣ ನೀಡಲಾಗಿದೆ. ಪ್ರಶ್ನೆ ಏನೆಂದರೆ, ಸರಕಾರ ನಿಜವಾಗಿಯೂ ಜಾತಿ ತಾರತಮ್ಯವನ್ನು ಕೊನೆಗೊಳಿಸಲು ಬಯಸುತ್ತದೆಯೇ ಅಥವಾ ಅಖಿಲೇಶ್ ಯಾದವ್ ಅವರ ಪಿಡಿಎ ರಾಜಕೀಯವನ್ನು ನಿಲ್ಲಿಸಲು ಬಯಸುತ್ತದೆಯೇ ಎಂಬುದು.
‘ಬಟೋಗೆ ತೊ ಕಟೋಗೆ’ ಎಂಬ ಘೋಷಣೆಗಳನ್ನು ಕೂಗುವವರು, ತಮ್ಮ ರಜಪೂತ ಗುರುತಿನ ಬಗ್ಗೆ ಹೆಮ್ಮೆಪಡುವವರು ಹೇಗೆ ಇದ್ದಕ್ಕಿದ್ದಂತೆ ಜಾತಿ ತಾರತಮ್ಯದ ವಿರುದ್ಧ ಮಾತನಾಡುತ್ತಾರೆ?
ಉತ್ತರ ಪ್ರದೇಶದಲ್ಲಿ ಜಾತಿ ತಾರತಮ್ಯವನ್ನು ನಿರ್ಮೂಲ ಮಾಡಲು ಬಯಸುವುದಾಗಿ ಆದಿತ್ಯನಾಥ್ ಸರಕಾರ ಹೇಳುತ್ತಿದೆ. ಆದರೆ, ನೀವು ರಜಪೂತ ರಾಜಕೀಯವನ್ನು ಮಾಡುತ್ತಿದ್ದೀರಲ್ಲವೇ ಎಂದು ಕೇಳಿದರೆ, ಕ್ಷತ್ರಿಯ ಜಾತಿಯಲ್ಲಿ ಹುಟ್ಟುವುದು ಅಪರಾಧವಲ್ಲ ಎನ್ನುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಜಾತಿಯ ಬಗ್ಗೆ ಸ್ವಾಭಿಮಾನ ಹೊಂದಿರಬೇಕು. ಕ್ಷತ್ರಿಯ ಎಂಬುದು ದೇವರು ಕೂಡ ಹುಟ್ಟಿದ ಜಾತಿ ಎಂದು ಆದಿತ್ಯನಾಥ್ ಹೇಳಿಕೊಳ್ಳುತ್ತಾರೆ.
ಅಂದರೆ, ಅವರ ಜಾತಿ ಎಷ್ಟು ಶ್ರೇಷ್ಠವೆಂದರೆ, ದೇವರು ಕೂಡ ಹುಟ್ಟುವಾಗ ಕ್ಷತ್ರಿಯ ಜಾತಿಯಲ್ಲಿ ಹುಟ್ಟದಿದ್ದರೆ, ಅವನು ಕ್ಷತ್ರಿಯ ಗುಣಗಳಿಂದ ವಂಚಿತನಾಗುತ್ತಾನೆ ಎನ್ನುವ ಹಾಗಿದೆ.
ಆಗ್ರಾದ ಎಸ್ಪಿ ಸಂಸದ ರಾಮ್ಜಿ ಲಾಲ್ ಸುಮನ್ ಅವರ ಮನೆಯ ಮೇಲೆ ಕರ್ಣಿ ಸೇನೆ ದಾಳಿ ನಡೆಯಿತು. ಕರ್ಣಿ ಸೇನಾ ಸದಸ್ಯರು ರಾಮ್ಜಿ ಲಾಲ್ ಅವರ ಮನೆಗೆ ಹರಿತವಾದ ಆಯುಧಗಳು ಮತ್ತು ಬಂದೂಕುಗಳೊಂದಿಗೆ ಬಂದರು. ಧ್ವಂಸ ನಡೆಸಲಾಯಿತು. ದಲಿತ ಸಂಸದರ ಮನೆಯ ಮೇಲೆ ದಾಳಿ ಮಾಡಲಾಯಿತು. ಈ ದಾಳಿಯ ಹಿಂದೆ ಸರಕಾರ ಇದ್ದಿರಲೇಬೇಕು ಎಂಬ ಅನುಮಾನಗಳಿವೆ.
ಸುಮಾರು 1 ಲಕ್ಷ ಕ್ಷತ್ರಿಯರು ಮತ್ತು ರಜಪೂತರು ಸೇರಿದ್ದರು. ಕತ್ತಿಗಳು ಮತ್ತು ಬಂದೂಕುಗಳ ಅಬ್ಬರವಿತ್ತು.
ರಾಮ್ಜಿ ಲಾಲ್ ಸುಮನ್ ಮತ್ತು ಅಖಿಲೇಶ್ ಯಾದವ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಅಖಿಲೇಶ್ ಯಾದವ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಯಿತು. ಇದೆಲ್ಲವೂ ನಡೆಯುವಾಗ, ಪೊಲೀಸರು ಪಕ್ಕದಲ್ಲಿ ನಿಂತು ನೋಡುತ್ತಿದ್ದರು.
ಒಬ್ಬ ಸಂಸದನ ವಿಷಯದಲ್ಲೇ ಹೀಗಾದರೆ, ಒಬ್ಬ ಬಡ ದಲಿತ, ಹಿಂದುಳಿದವರಿಗೆ ಏನಾಗಬಹುದು ಎಂಬುದನ್ನು ಊಹಿಸಬಹುದು.
ದಿನೇಶ್ ಖಾಟಿಕ್ ಉತ್ತರ ಪ್ರದೇಶದ ದಲಿತ ಸಚಿವ. ಜುಲೈನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಖಾಟಿಕ್ ಬರೆದ ರಾಜೀನಾಮೆ ಪತ್ರ ವೈರಲ್ ಆಗಿದೆ.
ವೈರಲ್ ಆಗಿರುವ ಪತ್ರದಲ್ಲಿ ದಿನೇಶ್ ಖಾಟಿಕ್, ತಮಗೆ ನೋವಾಗಿದೆ ಹಾಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
‘ನಮಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಏಕೆಂದರೆ ನಾನು ದಲಿತ. ಸಚಿವನಾಗಿದ್ದರೂ ನನಗೆ ಯಾವುದೇ ಅಧಿಕಾರವಿಲ್ಲ. ನನ್ನ ಪಾತ್ರ ದಲಿತ ಸಮುದಾಯಕ್ಕೆ ನಿಷ್ಪ್ರಯೋಜಕವಾಗಿದೆ. ನನ್ನನ್ನು ಸಭೆಗಳಿಗೆ ಆಹ್ವಾನಿಸಲಾಗಿಲ್ಲ ಮತ್ತು ಇಲಾಖೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ’ ಎಂದು ಅವರು ಬರೆದಿದ್ದಾರೆ. ಅವರ ಆರೋಪದ ಪ್ರಕಾರ, ಅವರು ದಲಿತರಾಗಿರುವುದರಿಂದ ತಾರತಮ್ಯ ಎದುರಿಸುತ್ತಿದ್ದಾರೆ.
ಇಟಾವಾ ಜಿಲ್ಲೆಯ ದಾದರ್ಪುರ್ ಗ್ರಾಮದಲ್ಲಿ, ಯಾದವ ಸಮುದಾಯದ ಧಾರ್ಮಿಕ ಕಥೆಗಾರನೊಬ್ಬನನ್ನು ಬ್ರಾಹ್ಮಣನಲ್ಲ ಎಂಬ ಕಾರಣಕ್ಕಾಗಿ ಕ್ರೂರವಾಗಿ ಮತ್ತು ಅಮಾನವೀಯವಾಗಿ ಅವಮಾನಿಸಲಾಯಿತು. ಯಾದವ ಕಥೆಗಾರ ಮತ್ತು ಅವರ ಸಹಚರರ ತಲೆ ಬೋಳಿಸಲಾಯಿತು. ಅವರ ಮೂಗಿನ ಮೇಲೆ ಕಾಲುಗಳನ್ನು ಉಜ್ಜಲಾಯಿತು. ಅವರ ಮೇಲೆ ಮೂತ್ರವನ್ನು ಚೆಲ್ಲಲಾಯಿತು. 21ನೇ ಶತಮಾನದಲ್ಲಿ ಊಹಿಸಲೂ ಸಾಧ್ಯವಿಲ್ಲದ ಇಂಥ ಘಟನೆಗಳು ನಡೆದೇಬಿಟ್ಟವು.
ಅದೆಲ್ಲವೂ ಆದಿತ್ಯನಾಥ್ ಸರಕಾರದ ಅಡಿಯಲ್ಲಿ ಬ್ರಾಹ್ಮಣ ಮನಸ್ಥಿತಿ ಮತ್ತು ಜಾತಿ ಭಯೋತ್ಪಾದನೆಯ ಕೊಳಕು ಮುಖವೇ ಆಗಿದೆಯಲ್ಲವೇ?
ಅಖಿಲೇಶ್ ಯಾದವ್ ಅವರ ಹೇಳಿಕೆ ವೈರಲ್ ಆಗಿದೆ. ಹೇಳಿಕೆಯಲ್ಲಿ, ಆಗ್ರಾದಲ್ಲಿ ಎಸ್ಎಚ್ಒಗಳು ಮತ್ತು ಎಸ್ಒಗಳಿಗೆ ಒಟ್ಟು 48 ಹುದ್ದೆಗಳಿವೆ ಎಂದು ಅಖಿಲೇಶ್ ಹೇಳಿದ್ದಾರೆ. ಅದರಲ್ಲಿ ಕೇವಲ 15 ಪಿಡಿಎ ಹುದ್ದೆಗಳಿವೆ.ಉಳಿದೆಲ್ಲ ಹುದ್ದೆಗಳಲ್ಲೂ ಸಿಂಗ್ ಉಪನಾಮದವರೇ ಇದ್ದಾರೆ.
ಮೈನ್ಪುರಿಯಲ್ಲಿ 15 ಹುದ್ದೆಗಳಿವೆ, ಅದರಲ್ಲಿ ಕೇವಲ ಮೂರು ಹುದ್ದೆಗಳು ಪಿಡಿಎಗಳಿಗಾಗಿ ಇದ್ದರೆ, ಉಳಿದವರೆಲ್ಲರೂ ಸಿಂಗ್ಗಳೇ ಆಗಿದ್ದಾರೆ.
ಅಖಿಲೇಶ್ ಯಾದವ್ ಇತರ ಜಿಲ್ಲೆಗಳಲ್ಲಿನ ಪೋಸ್ಟಿಂಗ್ಗಳನ್ನು ಕೂಡ ಉಲ್ಲೇಖಿಸಿದರು. ಸಿಂಗ್ ಎಂಬ ಉಪನಾಮ ಹೊಂದಿರುವ ಅಧಿಕಾರಿಗಳಿಗೆ ಮಾತ್ರ ಎಲ್ಲೆಡೆ ಹೊಣೆಗಾರಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಆದಿತ್ಯನಾಥ್ ವಿರುದ್ಧದ ಈ ಆರೋಪ ಹೊಸದಲ್ಲ.
ಜಿಲ್ಲಾಧಿಕಾರಿ, ಎಸ್ಪಿ ಮತ್ತು ಕಾರ್ಯದರ್ಶಿಯಂತಹ ಹುದ್ದೆಗಳಿಗೆ ನಿರ್ದಿಷ್ಟ ಜಾತಿಯ ಅಧಿಕಾರಿಗಳನ್ನು ನೇಮಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಆಗಾಗ ಆರೋಪಿಸಿದ್ದಾರೆ.
ಆದರೂ, ಚುನಾವಣೆಗಳ ದೃಷ್ಟಿಯಿಂದ, ಯಾವುದೇ ಜಾತಿಯನ್ನು ವೈಭವೀಕರಿಸುವ ಅಥವಾ ಮಾನಹಾನಿ ಮಾಡುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಅಥವಾ ಸಂದೇಶಗಳನ್ನು ತಡೆಯಲು ಸರಕಾರ ಈಗ ಆದೇಶ ನೀಡಿದೆ.
ಪೊಲೀಸ್ ದಾಖಲಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಸಹ ಆದೇಶಿಸಲಾಗಿದೆ. ಹೆಚ್ಚಿನ ಪೊಲೀಸ್ ದಾಖಲೆಗಳಲ್ಲಿ ಇನ್ನು ಮುಂದೆ ಜಾತಿಯನ್ನು ಉಲ್ಲೇಖಿಸಲಾಗುವುದಿಲ್ಲ. ಆರೋಪಿಗಳ ಜಾತಿಯನ್ನು ಎಫ್ಐಆರ್ಗಳು, ಚೇತರಿಕೆ ಮೆಮೊಗಳು ಮತ್ತು ಬಂಧನ ಮೆಮೊಗಳಲ್ಲಿ ಉಲ್ಲೇಖಿಸಲಾಗುವುದಿಲ್ಲ. ಎನ್ಸಿಆರ್ಬಿ ಮತ್ತು ಸಿಸಿಟಿಎನ್ಎಸ್ನಲ್ಲಿ ಜಾತಿ ಕಾಲಂ ಅನ್ನು ಖಾಲಿ ಬಿಡಲಾಗುತ್ತದೆ. ಜಾತಿ ಕಾಲಂ ಅನ್ನು ಶಾಶ್ವತವಾಗಿ ತೆಗೆದುಹಾಕಲು ಎನ್ಸಿಆರ್ಬಿಗೆ ಪತ್ರ ಬರೆಯಲಾಗುತ್ತದೆ ಎನ್ನಲಾಗಿದೆ.
ಅಂದರೆ, ಇಲ್ಲಿಯವರೆಗೆ ಎಷ್ಟು ದಲಿತರನ್ನು ಹಿಂಸಿಸಲಾಯಿತು ಮತ್ತು ಎಷ್ಟು ಬುಡಕಟ್ಟು ಜನಾಂಗದವರನ್ನು ಹಿಂಸಿಸಲಾಯಿತು ಎಂದು ತಿಳಿಸುತ್ತಿದ್ದ ಎನ್ಸಿಆರ್ಬಿ ಇನ್ನು ಮುಂದೆ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ.
ಜಾತಿಯನ್ನು ಎಸ್ಸಿ, ಎಸ್ಟಿ ಕಾಯ್ದೆಯಂತಹ ಪ್ರಕರಣಗಳಲ್ಲಿ ಮಾತ್ರ ಪಟ್ಟಿ ಮಾಡಲಾಗುತ್ತದೆ.
ಡೇಟಾವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ.
ಯುಪಿ ಸರಕಾರ ಈ ಆದೇಶಕ್ಕೆ ಸೆಪ್ಟಂಬರ್ 16ರ ಅಲಹಾಬಾದ್ ಹೈಕೋರ್ಟ್ನ ತೀರ್ಪನ್ನು ಆಧಾರವಾಗಿ ಉಲ್ಲೇಖಿಸಿದೆ. ಅಚ್ಚರಿಯೆಂದರೆ, ನ್ಯಾಯಮೂರ್ತಿ ದಿವಾಕರ್ ಈ ಆದೇಶ ನೀಡಿರುವುದು ಜಾತಿ ತಾರತಮ್ಯಕ್ಕೆ ಸಂಬಂಧವಿಲ್ಲದ ಪ್ರಕರಣದಲ್ಲಿ. ಮದ್ಯ ಕಳ್ಳಸಾಗಣೆ ಪ್ರಕರಣವನ್ನು ವಜಾಗೊಳಿಸುವ ಮೇಲ್ಮನವಿಗೆ ಸಂಬಂಧಿಸಿದ ಪ್ರಕರಣ ಅದು.
ಅವರು ಜಾತಿ ಆಧಾರಿತ ರ್ಯಾಲಿಗಳನ್ನು ನಿಷೇಧಿಸಲು ಆದೇಶಿಸಲಿಲ್ಲ.
ಈಗ ಆದಿತ್ಯನಾಥ್ ಸರಕಾರದ, ಜಾತಿ ಆಧಾರಿತ ರ್ಯಾಲಿಗಳಿಗೆ ಸಂಬಂಧಿಸಿದ ಆದೇಶದ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಎದ್ದಿವೆ. ಯಾವುದೇ ರ್ಯಾಲಿಯನ್ನು ಈಗ ಜಾತಿ ಆಧಾರಿತ ಎಂದು ಲೇಬಲ್ ಮಾಡುವ ಮೂಲಕ ನಿಷೇಧಿಸಬಹುದು ಅಥವಾ ಅನುಮತಿ ನಿರಾಕರಿಸಬಹುದು ಎಂಬ ಭಯವಿದೆ.
ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಮತ್ತು ಚಂದ್ರಶೇಖರ್ ಆಝಾದ್ರಂತಹ ನಾಯಕರಿಗೆ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳು ಅತ್ಯಂತ ಮುಖ್ಯ ಮತ್ತು ಅವರು ನಿರ್ದಿಷ್ಟವಾಗಿ ಈ ವಿಷಯಗಳಿಗಾಗಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಈಗ, ರ್ಯಾಲಿಗಳಿಗೆ ಅನುಮತಿ ನೀಡಲಾಗುತ್ತದೆಯೇ ಎಂಬುದು ಸರಕಾರಕ್ಕೆ ಬಿಟ್ಟದ್ದು.
ಎರಡನೆಯ ಪ್ರಶ್ನೆ, ಸಾಮಾಜಿಕ ಮಾಧ್ಯಮದಲ್ಲಿ ಜಾತಿ ಸಂಬಂಧಿತ ಪೋಸ್ಗಳ ಮೇಲ್ವಿಚಾರಣೆ ಮತ್ತು ಕ್ರಮ ತೆಗೆದುಕೊಳ್ಳುವ ಆದೇಶಕ್ಕೆ ಸಂಬಂಧಿಸಿದೆ. ಈ ಆದೇಶದ ದುರುಪಯೋಗದ ಸಾಧ್ಯತೆ ಹೆಚ್ಚು.
ನಿರ್ದಿಷ್ಟ ಜಾತಿಯನ್ನು ಹೊಗಳಿದ ಅಥವಾ ಟೀಕಿಸಿದ ಆಧಾರದ ಮೇಲೆ ಯಾರನ್ನಾದರೂ ಜೈಲಿಗೆ ಹಾಕಬಹುದು. ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಹ ಸ್ಥಗಿತಗೊಳಿಸಬಹುದು. ವಿರೋಧ ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸ್ಥಗಿತಗೊಳಿಸಲು ಇದರ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಸಮಾಜವಾದಿ ಪಕ್ಷ ಮತ್ತು ಯುಪಿ ಕಾಂಗ್ರೆಸ್ಗೆ ಸಂಬಂಧಿಸಿದ ಅನೇಕ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಿವೆ. ಅವರು ಆದಿತ್ಯನಾಥ್ ಸರಕಾರವನ್ನು ‘ಠಾಕೂರ್ ಸರಕಾರ’ ಎಂದು ಕರೆಯುತ್ತಾರೆ. ಆದ್ದರಿಂದ ಈಗ ಅವರು ನೇರವಾಗಿ ಜಾತಿಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ. ಅವರು ಇನ್ನು ಮುಂದೆ ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುವುದಿಲ್ಲ.
ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಸ್ವತಃ ಅಂತಹ ಪೋಸ್ಟ್ಗಳನ್ನು ಮಾಡುತ್ತಾರೆ. ಅವರ ಖಾತೆಗಳನ್ನು ಕೂಡ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಸರಕಾರವು ಅಂತಹ ಖಾತೆಗಳನ್ನು ನಿಷೇಧಿಸುವಂತೆ ಐಟಿ ಸಚಿವಾಲಯವನ್ನು ಕೇಳಬಹುದು.
ದೊಡ್ಡ ಸಮಸ್ಯೆ ಏನೆಂದರೆ, ಸರಕಾರ ಮೀಸಲಾತಿಯ ಮೇಲೆ ದಾಳಿ ಮಾಡಿದರೆ, ನಿರ್ದಿಷ್ಟ ಜಾತಿಯನ್ನು ಹೇಗೆ ಹೆಸರಿಸಬಹುದು ಮತ್ತು ಯಾರಿಗೆ ಅನ್ಯಾಯವಾಗಿದೆ ಎಂದು ಹೇಗೆ ಹೇಳಬಹುದು?
ಒಂದೆಡೆ, ಸರಕಾರ ಜಾತಿವಾದವನ್ನು ಕೊನೆಗೊಳಿಸಲು ಆದೇಶಗಳನ್ನು ಹೊರಡಿಸುತ್ತದೆ. ಮತ್ತೊಂದೆಡೆ, ಸರಕಾರವೇ ಜಾತಿವಾದದಲ್ಲಿ ತೊಡಗಿರುವುದು ಕಾಣಿಸುತ್ತದೆ. ಹಾಗಾಗಿಯೇ ಸಹಜವಾಗಿ ಇದರ ಬಗ್ಗೆ ಪ್ರಶ್ನೆಗಳು ಏಳುತ್ತವೆ.
ಜಾತಿ ರ್ಯಾಲಿಗಳನ್ನು ತಡೆದು, ಜಾತೀಯತೆಯನ್ನು ನಿರ್ಮೂಲ ಮಾಡಲಾಗು ವುದಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಮತ್ತು ಸಮಾನ ಹಕ್ಕುಗಳು ದೊರೆತಾಗ ಜಾತಿವಾದ ಕೊನೆಗೊಳ್ಳುತ್ತದೆ. ಸರಕಾರ ಮತ್ತು ಸಮಾಜ ಜಾತಿ ಆಧಾರಿತ ತಾರತಮ್ಯವನ್ನು ನಿಲ್ಲಿಸಿದಾಗ ಅದು ಕೊನೆಯಾಗುತ್ತದೆ. ಅದರ ಬದಲು ಆದಿತ್ಯನಾಥ್ ಸರಕಾರ ಈ ಹೊಸ ನಾಟಕವನ್ನೇಕೆ ಶುರು ಮಾಡಿದೆ?







