ನೋಟು ರದ್ದತಿ ಎಂಬ ಮೃಗಜಲ? | Vartha Bharati- ವಾರ್ತಾ ಭಾರತಿ

--

ನೋಟು ಬವಣೆಗೆ ಒಂದು ವರ್ಷ!

ನೋಟು ರದ್ದತಿ ಎಂಬ ಮೃಗಜಲ?

ದೇಶಾದ್ಯಂತ ಸಾಮಾನ್ಯ ಜನತೆಯನ್ನು ಕರಾಳ ಪರಿಸ್ಥಿತಿಗೆ ನೂಕಿದ ಮೋದಿಯವರ ನೋಟು ಅಮಾನ್ಯದ ಪ್ರಕ್ರಿಯೆಗೆ ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ದೇಶದ ಮೇಲಾದ ಪರಿಣಾಮವನ್ನು ಇಲ್ಲಿ ಸ್ಮರಿಸಿಕೊಳ್ಳಲಾಗಿದೆ.

ನಮ್ಮ ದೇಶದ ಅರ್ಥವ್ಯವಸ್ಥೆಯ ಚರಿತ್ರೆಯಲ್ಲಿಯೇ ಅತ್ಯಂತ ವಿವಾದಾತ್ಮಕವಾದ ನೋಟು ರದ್ದತಿಯಾಗಿ ನವೆಂಬರ 8ಕ್ಕೆ ಒಂದು ವರ್ಷವಾಗುತ್ತಿದೆ. ಹೋದ ವರ್ಷ ಇದೇ ದಿನ ಸರಕಾರ 500 ಮತ್ತು 1,000 ರೂಪಾಯಿ ಮುಖಬೆಲೆ ಹೊಂದಿದ ನೋಟುಗಳನ್ನು ರದ್ದುಗೊಳಿಸಿತು. ಆಗ ಚಲಾವಣೆಯಲ್ಲಿದ್ದ ಒಟ್ಟು 17.50 ಲಕ್ಷ ಕೋಟಿ ಬೆಲೆಯ ನೋಟುಗಳ ಶೇ. 86 ಪಾಲು ಮೌಲ್ಯದ ನೋಟುಗಳು ರದ್ದಿಯಾದವು.

ಅಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ ಪ್ರಕಾರ ರದ್ದತಿಯ ಉದ್ದೇಶಗಳು ಮೂರು: ಕಾಳಧನವನ್ನು ಹೊರತರುವುದು, ಉಗ್ರಗಾಮಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಮತ್ತು ನಕಲಿ ನೋಟುಗಳ ಚಲಾವಣೆಯನ್ನು ನಿಯಂತ್ರಿಸುವುದು. ಇವು ಮೂರೂ ಘನವಾದ ಉದ್ದೇಶಗಳೇ; ಹೀಗಾಗಿ ಸಾರ್ವಜನಿಕರ ದೃಷ್ಟಿಯಿಂದ ಸರಕಾರದ ನಿರ್ಧಾರ ಒಂದು ದಿಟ್ಟ ಹೆಜ್ಜೆಯಾಗಿತ್ತು. ಆದರೆ ಉತ್ತಮ ಉದ್ದೇಶಗಳನ್ನು ಒಳಗೊಂಡ ನಿರ್ಧಾರದಿಂದ ಜನಸಾಮಾನ್ಯರಿಗೆ ಮತ್ತು ನಮ್ಮ ಅರ್ಥವ್ಯವಸ್ಥೆಗೆ ಏನು ಪ್ರಯೋಜನವಾಗಿದೆ? ಘೋಷಿತ ಉದ್ದೇಶಗಳನ್ನು ಸಾಧಿಸುವಲ್ಲಿ ಗಳಿಸಿದ ಯಶಸ್ಸು ಎಷ್ಟು? ದೀರ್ಘಕಾಲೀನ ಸಾಧನೆಗೋಸ್ಕರ ಅಲ್ಪಾವಧಿಯಲ್ಲಿ ತೀವ್ರವಾದ ಸಂಕಷ್ಟಗಳನ್ನು ಜನರು ಅನುಭವಿಸಬೇಕಿತ್ತೇ? ಈ ಪ್ರಶ್ನೆಗಳು ಒಂದು ವರ್ಷದ ಅನುಭವದ ಹಿನ್ನೆಲೆಯಲ್ಲಿ ಪ್ರಸ್ತುತವೆನಿಸುತ್ತವೆ.

ಎಷ್ಟು ಕಾಳಧನ ಹೊರಗೆ ಬಂತು?

 ನೋಟುರದ್ದತಿ ಕಪ್ಪುಹಣವನ್ನು ಹೊರಗೆಳೆಯಬಹುದಾದ ಪ್ರಬಲ ಕ್ರಮ ಎಂದು ಸರಕಾರ ಘೋಷಿಸಿತು. ಕಪ್ಪು ಹಣವನ್ನು ಅಧಿಕಮೌಲ್ಯದ ನೋಟುಗಳ ಕಂತೆಯ ರೂಪದಲ್ಲಿ ಶೇಖರಿಸಿಡಲಾಗುತ್ತದೆ, ಎಂಬ ಪೂರ್ವಕಲ್ಪನೆ ಈ ವಾದದ ಹಿಂದೆ ಅಡಕವಾಗಿತ್ತು.. ಈ ವಾದದಲ್ಲಿ ಹುರುಳಿಲ್ಲ ಎಂದು 1978ರ ನೋಟು ರದ್ದತಿಯ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಐ.ಜಿ. ಪಟೇಲರು ಅಂದೇ ಹೇಳಿದ್ದರು. ಕಪ್ಪು ಹಣವನ್ನು ನೋಟು ರದ್ದತಿಯ ಮೂಲಕ ಬಯಲಿಗೆಳೆಯಲು ಸಾಧ್ಯ ಎಂದಾಗಿದ್ದರೆ 1978ರ ಬಳಿಕ ಕಪ್ಪು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಏಳುತ್ತದೆ. ಕಾಳಧನದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ದಿಲ್ಲಿಯ ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ ಅವರು ‘‘ನೋಟುಗಳ ರೂಪದಲ್ಲಿ ಕಳ್ಳ ಸಂಪತ್ತನ್ನು ಯಾರೂ ಶೇಖರಿಸಿಡುವುದಿಲ್ಲ’’ ಎಂದು ಹೇಳಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಇದೇ ಅರ್ಥದಲ್ಲಿ ಹೀಗೆ ಹೇಳಿದ್ದರು: ‘‘ಎಲ್ಲಾ ನಗದು ಹಣ ಕಾಳಧನವಲ್ಲ ಮತ್ತು ಎಲ್ಲಾ ಕಾಳಧನ ನಗದು ರೂಪದಲ್ಲಿಲ್ಲ’’.

ಡಿಸೆಂಬರ್ 30, 2016ರ ಒಳಗೆ ರದ್ದಾದ ನೋಟುಗಳನ್ನು ಬದಲಾಯಿಸಲು ನಾಗರಿಕರಿಗೆ ಸಮಯಾವಕಾಶ ನೀಡಲಾಗಿತ್ತು. ವಾಪಸಾದ ನೋಟುಗಳ ಕುರಿತಾದ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕು ಇತ್ತೀಚೆಗಷ್ಟೇ ಹೊರಬಂದ ತನ್ನ ಜೂನ್ 2017ರ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ. ಅದರ ಪ್ರಕಾರ ಶೇ. 99ರಷ್ಟು ಅಮಾನ್ಯವಾದ ನೋಟುಗಳು ಬ್ಯಾಂಕುಗಳ ಮೂಲಕ ಮರಳಿಬಂದಿವೆ. ಅಧಿಕ ಮುಖಬೆಲೆಯ ನೋಟುಗಳ ರೂಪದಲ್ಲಿ ಕಳ್ಳಹಣವನ್ನು ಕೂಡಿಹಾಕಿದ್ದರೆ ಶೇ.99ರಷ್ಟು ರದ್ದಾದ ನೋಟುಗಳು ರಿಸರ್ವ್ ಬ್ಯಾಂಕಿಗೆ ಹೇಗೆ ಮರಳಿಬಂದವು?

ಕಳ್ಳಹಣವನ್ನು ಅಧಿಕ ಮೌಲ್ಯದ ನೋಟುಗಳ ರೂಪದಲ್ಲಿ (ಮೋದಿಯವರ ಹೇಳಿಕೆಯಂತೆ) ತಲೆದಿಂಬು, ಹಾಸಿಗೆ ಮತ್ತು ಕಪಾಟುಗಳಲ್ಲಿ ಸಂಗ್ರಹಿಸಿಟ್ಟಿದ್ದರೆ ಅದೆಲ್ಲಾ ಹೊರಬಂತೇ? ಅಮಾನ್ಯಗೊಂಡ ನೋಟುಗಳು ವಾಪಸ್ ಬಂದರೆ ಬಚ್ಚಿಟ್ಟ ಕಳ್ಳ ಹಣ ಎಲ್ಲಿ ಹೋಯಿತು? ಕಳ್ಳಹಣ ಅಧಿಕಮೌಲ್ಯದ ನೋಟುಗಳ ರೂಪದಲ್ಲಿದೆ ಎಂದಾದರೆ 1,000ದ ನೋಟನ್ನು ರದ್ದುಗೊಳಿಸಿ 2,000 ರೂಪಾಯಿ ಮುಖಬೆಲೆಯ ನೋಟನ್ನು ಹೊರತರುವ ಉದ್ದೇಶವೇನಿತ್ತು?

ಕಳ್ಳನೋಟುಗಳ ಚಲಾವಣೆ ಹತೋಟಿಗೆ ಬಂತೇ?

 ನೋಟುಗಳ ರದ್ದತಿಯ ಇನ್ನೊಂದು ಉದ್ದೇಶ ಕಳ್ಳನೋಟುಗಳ ಚಲಾವಣೆಯನ್ನು ನಿಯಂತ್ರಿಸುವದು. ನಕಲಿ ನೋಟುಗಳ ಬಗ್ಗೆ ನಿಖರವಾದ ಅಂಕಿ ಅಂಶ ರಿಸರ್ವ್ ಬ್ಯಾಂಕಿಗಾಗಲೀ, ಕೇಂದ್ರ ಸರಕಾರಕ್ಕಾಗಲೀ ತಿಳಿದಿಲ್ಲ; ತಿಳಿಯಲು ಸಾಧ್ಯವೂ ಇಲ್ಲ.

2012ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ(Indian Statistical Institute), ಸರಕಾರದ ಸಲಹೆಯಂತೆ ಈ ಬಗ್ಗೆ ಅಧ್ಯಯನವನ್ನು ನಡೆಸಿತ್ತು. ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಆಗಸ್ಟ್ 2015ರಲ್ಲಿ ಆಗಿನ ಸರಕಾರವು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಕಲಿನೋಟುಗಳು ಸುಮಾರು 400 ಕೋಟಿ ರೂಪಾಯಿಗಳಷ್ಟಿವೆ ಮತ್ತು ಅವುಗಳ ಮೌಲ್ಯ ಹಿಂದಿನ ನಾಲ್ಕು ವರ್ಷಗಳಿಂದ ಅದೇ ಮಟ್ಟದಲ್ಲಿದೆ ಎಂದೂ ತಿಳಿಸಿತ್ತು. 400 ಕೋಟಿ ನಕಲಿ ಹಣದ ಮೇಲೆ ದಿಗ್ಬಂಧನಕ್ಕೆ 14 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನೇ ಅಮಾನ್ಯ ಮಾಡಬೇಕಿತ್ತೇ ಎಂಬ ಪ್ರಶ್ನೆಗೆ ಸುಲಭದಲ್ಲಿ ಉತ್ತರ ಸಿಗಲಾರದು. ನೋಟು ರದ್ದತಿಯಾದ ಮೇಲೆಯೂ ನಕಲಿ ನೋಟುಗಳ ಚಲಾವಣೆಯ ಬಗ್ಗೆ ವರದಿಗಳು ಆಗಾಗ ಬರುತ್ತಲೇ ಇವೆ. ಮಾತ್ರವಲ್ಲ ಹೊಸ 2,000ದ ನೋಟುಗಳ ನಕಲಿ ನೋಟುಗಳೂ ಪತ್ತೆಯಾಗಿವೆ. ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ನೋಟು ರದ್ದತಿಯ ಬಳಿಕ ನಕಲಿ ನೋಟುಗಳ ಪತ್ತೆಹಚ್ಚುವಿಕೆಯ ಕ್ರಿಯೆ ತೀಕ್ಷ್ಣಗೊಂಡಿದೆ. ಆದರೆ ಸಿಕ್ಕಿದ ನೋಟುಗಳ ಮೌಲ್ಯ ಕೇವಲ 42 ಕೋಟಿ ರೂಪಾಯಿಗಳಷ್ಟು. ಪರ್ವತ ಪ್ರಸವವೆಂಬಂತೆ!

ಉಗ್ರಗಾಮಿಗಳಿಗೆ ಕಡಿವಾಣ ಹಾಕಲಾಯಿತೇ?

Livemint ದೇಶದ ಸಾರ್ವಭೌಮತೆಗೆ ಭಂಗ ತರುವ ಉಗ್ರಗಾಮಿಗಳಿಗೆ ಅಧಿಕಮೌಲ್ಯದ ನೋಟುಗಳ ಸರಬರಾಜು ಮೂಲಕ ಉತ್ತೇಜನ ನೀಡಲಾಗುತ್ತಿದೆ; ಅದನ್ನು ನಿಲ್ಲಿಸಲು ನೋಟುರದ್ದತಿ ಸಹಾಯಮಾಡಬಲ್ಲುದು ಎಂದು ಪ್ರಧಾನಿ ಹೇಳಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಉತ್ತರದ ಕಾಶ್ಮೀರದಲ್ಲಿ ಉಗ್ರಗಾಮಿಗಳೆಂದು ಹೇಳಲಾಗುವವರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ, ಸೈನಿಕ ಮತ್ತು ಅರೆಸೈನಿಕ ಪಡೆಗಳ ಮೇಲೆ ಮಾತ್ರವಲ್ಲ ನಾಗರಿಕರ ಮೇಲೂ ಹಿಂಸೆ ನಡೆಯುತ್ತಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು, ಸೈನಿಕ ಮತ್ತು ಅರೆಸೈನಿಕ ಪಡೆಗಳು ಪ್ರತಿಹಿಂಸೆಯನ್ನು ನಡೆಸುತ್ತಲೇ ಇವೆ. ಕೇಂದ್ರ ಗೃಹ ಸಚಿವಾಲಯದ ಮಾಹಿತಿಯಂತೆ ಈ ವರ್ಷದ ಜುಲೈ ತಿಂಗಳ ತನಕ ಜಮ್ಮು ಮತ್ತು ಕಾಶ್ಮೀರದಲ್ಲಿ 194 ಉಗ್ರಗಾಮಿ ಘಟನೆಗಳು ಸಂಭವಿಸಿವೆ. 39 ಮಂದಿ ಭದ್ರತಾ ಸಿಬ್ಬಂದಿ ಹಾಗೂ 115 ಉಗ್ರಗಾಮಿಗಳು ಹತರಾಗಿದ್ದಾರೆ. (ಸೆಪ್ಟಂಬರ್ 27ರ ವರದಿ )

 ನೋಟು ರದ್ದತಿಯ ಮೂಲಕ ಉಗ್ರಗಾಮಿಗಳ ಚಟುವಟಿಕೆಗಳಿಗೆ ಹತೋಟಿ ಹಾಕಬಹುದೆಂಬುದು ಒಂದು ಆಶಯವಾಗಿಯೇ ಉಳಿದಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ.

ರಿಸರ್ವ್ ಬ್ಯಾಂಕಿಗೆ ನಷ್ಟ?

ಸರಕಾರ ಅಂದಾಜು ಮಾಡಿದ ಪ್ರಕಾರ ರದ್ದಾದ ನೋಟುಗಳು ಬರದಿದ್ದರೆ ರಿಸರ್ವ್ ಬ್ಯಾಂಕಿನ ಬಾಧ್ಯತೆ (Liability) ವಜಾವಾಗಿ ಸುಮಾರು 74,901 ಕೋಟಿ ಲಾಭವಾಗುವ ಸಾಧ್ಯತೆ ಇತ್ತು. ಆದರೆ, ಅಮಾನ್ಯವಾದ ನೋಟುಗಳು ಬಹುತೇಕ ವಾಪಸಾಗಿ ರಿಸರ್ವ್ ಬ್ಯಾಂಕು ಅಷ್ಟೇ ಹಣವನ್ನು ಧಾರಕರಿಗೆ ಕೊಡಬೇಕಾಗಿ ಬಂತು. ಮಾತ್ರವಲ್ಲ, ರಿಸರ್ವ್ ಬ್ಯಾಂಕಿಗೆ ನೋಟುಗಳ ಹಿಂಪಡೆಯುವಿಕೆ, ಅವುಗಳ ಬದಲಾಗಿ ಹೊಸ ನೋಟುಗಳ ಮುದ್ರಣ ಮತ್ತು ಪೂರೈಕೆಯಿಂದ ವಿನಾ ಕಾರಣ ವೆಚ್ಚವಾಗಿತ್ತು. 2016-17ರ ವರ್ಷದಲ್ಲಿ ಸರಕಾರಕ್ಕೆ ಅದು ಕೊಟ್ಟ ಲಾಭಾಂಶ (Dividend) 30,659 ಕೋಟಿ ರೂಪಾಯಿಗಳಷ್ಟು, ಅದರ ಹಿಂದಿನ ವರ್ಷ ಅಂದರೆ 2015-16ರಲ್ಲಿ ಅದು 65,876 ಕೋಟಿ ಲಾಭಾಂಶವನ್ನು ಬೊಕ್ಕಸಕ್ಕೆ ನೀಡಿತ್ತು.

ಮುಟ್ಟದ ಗುರಿ, ಹೊಡೆತ ಬಿದ್ದ ಅರ್ಥವ್ಯವಸ್ಥೆ:

 ನೋಟು ರದ್ದತಿಯ ಉದ್ದೇಶಿತ ಗುರಿಗಳನ್ನು ಸಾಧಿಸುವಲ್ಲಿ ಆದ ವೈಫಲ್ಯ ದ ಜೊತೆಗೇ ದೇಶದ ಆರ್ಥಿಕತೆಗೆ ಬಲವಾದ ಏಟು ಬಿದ್ದ ಬಗ್ಗೆ ಈಗಾಗಲೇ ವರದಿಗಳು ಬಂದಿವೆ. ಈ ವೈಫಲ್ಯದ ಸೂಚನೆ ಬರುತ್ತಿದ್ದಂತೆಯೇ ಸರಕಾರ ಗುರಿಗಳನ್ನು ಬದಲಾಯಿಸುತ್ತಾ ಹೋಯಿತು. ನಗದುರಹಿತ ಅರ್ಥವ್ಯವಸ್ಥೆಗೆ ಇದು ನಾಂದಿಯಾಗಲಿದೆ ಎಂದ ಸರಕಾರ, ದೇಶದ ವಾಸ್ತವಿಕತೆಯ ಅರಿವಾದ ಬಳಿಕ ಕಡಿಮೆ ನಗದು ಬಳಸಲು ನೋಟು ರದ್ದತಿ ಉತ್ತೇಜನ ನೀಡಲಿದೆ ಎಂದು ತನ್ನ ರಾಗವನ್ನು ಬದಲಾಯಿಸಿತು.

 ದೇಶದ ಹಣಕಾಸಿನ ನಿಯಂತ್ರಕನ ಜವಾಬ್ದಾರಿ ಹೊತ್ತಿರುವ ರಿಸರ್ವ್ ಬ್ಯಾಂಕಿನ ನಡವಳಿಕೆಯ ಬಗ್ಗೆಯೂ ಟೀಕೆಗಳು ಬಂದವು. ಅದರ 80 ವರ್ಷಗಳ ಇತಿಹಾಸದಲ್ಲಿ ಮೊದಲಬಾರಿಗೆ ಅದು ಸರಕಾರದ ಕೈಗೊಂಬೆಯಂತೆ ವರ್ತಿಸಿತೆಂಬ ಆರೋಪಕ್ಕೆ ಗುರಿಯಾಯಿತು.

 ಕೇಂದ್ರ ಸರಕಾರದ ಆಯವ್ಯಯ ಪತ್ರದ ಪೂರ್ವಭಾವಿಯಾಗಿ ಕೇಂದ್ರ ಹಣಕಾಸು ಸಚಿವಾಲಯ ಸಂಸತ್ತಿನಲ್ಲಿ 2016-17ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿತ್ತು. ಅದರ ಮೂರನೆ ಅಧ್ಯಾಯದಲ್ಲಿ ಎರಡು ಪ್ರಮುಖ ಹೇಳಿಕೆಗಳಿವೆ. ಒಂದು, ನೋಟು ರದ್ದತಿಯಿಂದ ಉದ್ಯೋಗ ನಷ್ಟ, ಕೃಷಿ ಆದಾಯದಲ್ಲಿ ಕುಸಿತ, ನಗದು ವ್ಯವಹಾರವನ್ನೇ ಅವಲಂಬಿಸಿರುವ ಅಸಂಘಟಿತವಲಯದ ಚಟುವಟಿಕೆಗಳಿಗೆ ಹೊಡೆತ ಮುಂತಾದವುಗಳ ಬಗ್ಗೆ ವರದಿಗಳು ಬಂದಿವೆ. ಎರಡು, ಅಕ್ರಮ ವ್ಯವಹಾರಗಳು, ಕಾಳಧನ, ಮತ್ತು ಹಣರೂಪದ ಉಳಿತಾಯ ಪ್ರವೃತ್ತಿ ಇವುಗಳ ಮೇಲೆ ನೋಟು ರದ್ದತಿಯಿಂದಾದ ಪ್ರಭಾವವನ್ನು ತಿಳಿಯಲು ಕೆಲವು ವರ್ಷಗಳೇ ಬೇಕಾಗಬಹುದು. ಸರಕಾರದ ಈ ಹೇಳಿಕೆಯೇ ನೋಟುರದ್ದತಿಯ ಪರಿಣಾಮಗಳ ಬಗ್ಗೆ ಕನ್ನಡಿ ಹಿಡಿದಂತಿದೆ. ಇತ್ತೀಚೆಗೆ ಬಂದ ವರದಿಗಳ ಪ್ರಕಾರ ದೇಶದ ಆರ್ಥಿಕ ಪ್ರಗತಿ ಶೇ. 7ರಿಂದ 5ಕ್ಕೆ ಇಳಿದಿದೆ. ಆರ್ಥಿಕ ಕುಸಿತದಿಂದ ಉದ್ಯೋಗ ಸೃಷ್ಟಿಗೆ ಮಾರಕ ಹೊಡೆತ ಬಿದ್ದಿದೆ.

ಅಕ್ರಮ ಸಂಪತ್ತನ್ನು ಹೊರ ಹಾಕುವುದು ಮತ್ತು ಕಳ್ಳ ನೋಟು ಚಲಾವಣೆ ಹಾಗೂ ಉಗ್ರಗಾಮಿ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ನೋಟು ರದ್ದತಿಯ ಘೋಷಿತ ಉದ್ದೇಶಗಳು; ಅವುಗಳ ಅಗತ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ಈ ನಿರ್ಧಾರದಿಂದ ಯಾವುದು ಆಗಬೇಕೋ ಅದನ್ನು ಸಾಧಿಸಲಾಗದೆ, ಸಮಾಜದ ಎಲ್ಲಾ ವರ್ಗಗಳ ಮೇಲೆ ಆಗಿರುವ ದುಷ್ಪರಿಣಾಮಗಳು ಮಾತ್ರ ಅನಿರೀಕ್ಷಿತ. ಕೇಂದ್ರ ಸರಕಾರ ಮತ್ತು ಅರ್ಥವ್ಯವಸ್ಥೆಯ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿದ ರಿಸರ್ವ್ ಬ್ಯಾಂಕು ಸಾಕಷ್ಟು ಸಮಾಲೋಚನೆ ನಡೆಸದೆ ಕೈಗೊಂಡ ಕ್ರಮದಿಂದ ಆಘಾತಕ್ಕೆ ಬಲಿಯಾದ ಅರ್ಥವ್ಯವಸ್ಥೆ, ಚೇತರಿಸಿಕೊಳ್ಳಲು ಮತ್ತು ಏಟು ತಿಂದ ದೇಶದ ಜನಸಾಮಾನ್ಯರು ತಮ್ಮ ಕಾಲಿನಲ್ಲಿ ನಿಲ್ಲಲು ಬಹಳ ಸಮಯವೇ ಬೇಕಾಗಬಹುದು.

ವಾಪಸಾದ ನೋಟುಗಳ ಕುರಿತಾದ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಹೊರಬಂದ ತನ್ನ ಜೂನ್ 2017ರ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ. ಅದರ ಪ್ರಕಾರ ಶೇಕಡಾ 99ರಷ್ಟು ಅಮಾನ್ಯವಾದ ನೋಟುಗಳು ಬ್ಯಾಂಕುಗಳ ಮೂಲಕ ಮರಳಿಬಂದಿವೆ. ಅಧಿಕ ಮುಖಬೆಲೆಯ ನೋಟುಗಳ ರೂಪದಲ್ಲಿ ಕಳ್ಳಹಣವನ್ನು ಕೂಡಿಹಾಕಿದ್ದರೆ ಶೇ.99ರಷ್ಟು ರದ್ದಾದ ನೋಟುಗಳು ರಿಸರ್ವ್ ಬ್ಯಾಂಕಿಗೆ ಹೇಗೆ ಮರಳಿಬಂದವು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top