ದಲಿತರಿಗೆ ಮುಳುವಾಗುತ್ತಿರುವ ಸಂವೇದನೆ ಮತ್ತು ಸ್ಪಂದನೆಯ ಕೊರತೆ | Vartha Bharati- ವಾರ್ತಾ ಭಾರತಿ

--

ದಲಿತರಿಗೆ ಮುಳುವಾಗುತ್ತಿರುವ ಸಂವೇದನೆ ಮತ್ತು ಸ್ಪಂದನೆಯ ಕೊರತೆ

ಜಗತ್ತಿನ ಮಾಹಿತಿ ತಂತ್ರಜ್ಞಾನದಲ್ಲಾದ ಮಹತ್ತರ ಬೆಳವಣಿಗೆಯಿಂದ ದೇಶದ ಯಾವುದೋ ಮೂಲೆಯಲ್ಲಿ ಜರುಗುವ ಪ್ರಕರಣಗಳ ಮಾಹಿತಿ ಹಲವು ಮಾಧ್ಯಮಗಳ ಮುಖೇನ ಕ್ಷಣಾರ್ಧದಲ್ಲೇ ಲಭ್ಯವಾಗುತ್ತಿವೆ ಹಾಗೆಯೇ ಲಭ್ಯವಾಗುವ ಮಾಹಿತಿಗಳನ್ನು ತನ್ನ ವೈಯಕ್ತಿಕ ಬುದ್ದಿಶಕ್ತಿಯಿಂದ ಅರ್ಥೈಸಿಕೊಳ್ಳುವ ಪ್ರಕ್ರಿಯೆಯನ್ನು ಸಂವೇದನೆ ಅಥವಾ ಅರಿವು ಎನ್ನಬಹುದು. ಪ್ರತಿಯೊಂದು ವಿದ್ಯಮಾನವು ಸಮಾಜದ ಒಂದಲ್ಲ ಒಂದು ವರ್ಗದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ತನ್ನ ವೈಯಕ್ತಿಕ ಜ್ಞಾನದಿಂದ ವಿಶ್ಲೇಷಿಸಿ ಅವುಗಳಿಗೆ ಪ್ರತಿಕ್ರಿಯಿಸುವ ಪ್ರಕ್ರಿಯೆಯನ್ನು ಸ್ಪಂದನೆ ಎಂದು ಕರೆಯಬಹುದು. ಶತಮಾನಗಳಿಂದ ಅನ್ಯರ ದರ್ಪ-ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿರುವ ಏಕೈಕ ಸಮುದಾಯ ದಲಿತ ಸಮುದಾಯ. ಭಾರತಕ್ಕೆ ಸ್ವ್ವಾತಂತ್ರ ಬಂದು 70 ವರ್ಷವಾದರೂ ಒಂದು ವರ್ಗದ ಜನ ಮತ್ತೊಂದು ವರ್ಗದ ಮೇಲೆ ದಬ್ಬಾಳಿಕೆ ನಡೆಸುವುದಕ್ಕೆ ಆಳುವ ಸರಕಾರಗಳ ವೈಫಲ್ಯ, ಸಂವಿಧಾನ ಜಾರಿಯಾಗದಿರುವುದು, ಅಥವಾ ರಾಜ್ಯಾಧಿಕಾರ ಕೆಲವೇ ವರ್ಗದ ಸ್ವತ್ತಾಗಿದೆ.

ಪ್ರಸ್ತುತ ಭಾರತದಲ್ಲಿ ಜನರು ಧರ್ಮ, ಜಾತಿಗಳ ಆಧಾರದ ಮೇಲೆ ಒಡೆದು ಅಂಚಿಹೋಗಿದ್ದಾರೆ ಹಾಗೂ ಒಂದು ಕೋಮಿನ ಜನ ಮತ್ತೊಂದು ಕೋಮಿನ ಮೇಲೆ ದಬ್ಬಾಳಿಕೆ, ದೌರ್ಜನ್ಯವೆಸಗುವುದು ದಿನನಿತ್ಯದ ಕಾಯಕವಾಗಿಹೋಗಿದೆ. ಆದರೆ ಸಾವಿರಾರು ವರ್ಷಗಳಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸುತ್ತಿದ್ದ ದಲಿತ ಸಮುದಾಯಕ್ಕೆ ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್‌ರ ಹೋರಾಟದ ಫಲ ಹಾಗೂ ಸಂವಿಧಾನದಿಂದ ಸಾಮಾಜಿಕ ನ್ಯಾಯ ದೊರಕಿತು ಎನ್ನಬಹುದು. ಅವರೇ ಹೇಳುವಂತೆ ಒಂದು ವರ್ಗವು ಮತ್ತೊಂದು ವರ್ಗದಿಂದ ದೌರ್ಜನ್ಯ, ದಬ್ಬಾಳಿಕೆಯನ್ನು ಎದುರಿಸಲು ಮುಖ್ಯ ಕಾರಣ ಅಧಿಕಾರಹೀನತೆ. ಕ್ರಿ.ಪೂ. 180ರಲ್ಲಿ ಮೌರ್ಯರ ಕೊನೆಯ ದೊರೆಯಾದ ಬೃಹದೃಥ ಮೌರ್ಯನನ್ನು ಕೊಂದ ಪುಷ್ಯಮಿತ್ರ ಶುಂಗನು ಸುಮತಿ ಭಾರ್ಗವನೆಂಬ ಸಾಮವೇದಿ ಬ್ರಾಹ್ಮಣನಿಂದ ಮನುಸ್ಮತಿ ಕೃತಿಯನ್ನು ರಚಿಸಿ ವರ್ಣಸಂಕರದ ಆಧಾರದ ಮೇಲೆ ಜನರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವಿಭಾಗಿಸುವುದರ ಮೂಲಕ ದಲಿತ ಸಮುದಾಯವನ್ನು ಅಧಿಕಾರಹೀನರನ್ನಾಗಿ ಮಾಡಿದನು.

ಭಾರತದ ಇತಿಹಾಸವನ್ನು ಅವಲೋಕಿಸುವುದಾದರೆ ಈ ಸಮುದಾಯ ಗಳನ್ನು ಎಲ್ಲಿಯೂ ಉಲ್ಲೇಖಿಸದೆ ಇತಿಹಾಸದ ಪುಟಗಳಿಂದ ಮರೆಮಾಚಿರುವುದು ಇಲ್ಲಿನ ಮನುವಾದಿ ಧೋರಣೆಯನ್ನು ತಿಳಿಸುತ್ತದೆ. ಹಾಗಾದರೆ ಈ ಸಮುದಾಯ ಅಸ್ತಿತ್ವದಲ್ಲಿ ಇರಲಿಲ್ಲವೇನೊ ಎಂದೆನಿಸುವುದು ಸಹಜ. ಆದರೆ ಈ ಸಮುದಾಯವು ಸಾಮಾಜಿಕ ಕ್ರಾಂತಿ ಸೃಷ್ಟಿಸಿದ ಕೆಲವೇ ಕೆಲವು ರಾಜರುಗಳಾದ ಸಾಮ್ರಾಟ್ ಅಶೋಕ, ಛತ್ರಪತಿ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಭಾಗವಹಿಸಿದ್ದನ್ನು ಕಾಣಬಹುದು. ಅಂದರೆ ಸತ್ತ ಪ್ರಾಣಿಯನ್ನಾದರೂ ತಿಂದು ಬದುಕುತ್ತೇವೆ ಆದರೆ ವರ್ಣ ಸಂಕರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ವರ್ಣ ಸಮಾಜದ ಹೊರಗುಳಿದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಸ್ವಾಭಿಮಾನಿ ಸಮುದಾಯವಾಗಿದೆ.

ಭಾರತದ ಜನಸಂಖ್ಯೆಯ ಶೇ. 25ರಷ್ಟಿರುವ ದಲಿತರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವೆಂದು ವಿಭಾಗಿಸಲಾಗಿದ್ದು ಪರಿಶಿಷ್ಟ ಜಾತಿಯು ಶೇ. 16.2 ಹಾಗೂ ಪರಿಶಿಷ್ಟ ಪಂಗಡದವರು ಶೇ.8.2 ಇವೆ. ಹಾಗೆಯೇ ಇವರ ಸಾಕ್ಷರತಾ ಪ್ರಮಾಣವನ್ನು ಗಮನಿಸುವುದಾದರೆ ಪರಿಶಿಷ್ಟ ಜಾತಿಯು ಶೇ.66.07ರಷ್ಟು ಸಾಕ್ಷರತೆ ಹೊಂದಿದ್ದರೆ ಪರಿಶಿಷ್ಟ ಪಂಗಡದವರು ಶೇ.58.96ರಷ್ಟು ಸಾಕ್ಷರತೆಯನ್ನು ಹೊಂದಿದ್ದಾರೆ. ಹಾಗೆಯೇ ಉದ್ಯೋಗದಲ್ಲಿ ಇವರ ಪಾಲುಗಾರಿಕೆಯನ್ನು ಗಮನಿಸುವುದಾದರೆ ಪರಿಶಿಷ್ಟ ಜಾತಿಯು ಶೇ.4.37ರಷ್ಟು ಪರಿಶಿಷ್ಟ ಪಂಗಡವು ಶೇ.3.96ನ್ನು ಹೊಂದಿದೆ, ಒಟ್ಟಾರೆ ಎರಡು ಸಮುದಾಯದಿಂದ ಶೇ.8ರಷ್ಟು ಜನ ನೌಕರರಾಗಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್‌ರವರು ಜುಲೈ 31, 1956ರಲ್ಲಿ ತಮ್ಮ ಆಪ್ತಕಾರ್ಯದರ್ಶಿಯಾದ ನಾನಕ್‌ಚಂದ್ ರತ್ತು ರವರಿಗೆ ‘‘ನನ್ನ ಹೋರಾಟದ ಫಲವಾದ ವಿದ್ಯೆಯಲ್ಲಿನ ಮೀಸಲಾತಿಯನ್ನು ವಿದ್ಯಾವಂತರು ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೆಲವರು ಮಾತ್ರ ಪಡೆದುಕೊಂಡಿದ್ದಾರೆ ಆದರೆ ವಿದ್ಯಾವಂತರೂ ಅಲ್ಲದ, ನೌಕರರೂ ಅಲ್ಲದ ಅಮಾಯಕ ವರ್ಗಕ್ಕೆ ನಾನು ಏನನ್ನೂ ಮಾಡಲಾಗಲಿಲ್ಲ. ನನ್ನ ಹೋರಾಟದ ಫಲದಿಂದ ವಿದ್ಯಾವಂತರಾದ ವಿದ್ಯಾರ್ಥಿಗಳು ಸೋಮಾರಿಗಳಾಗಿದ್ದಾರೆ, ನೌಕರರು ಸ್ವಾರ್ಥಿಗಳಾಗಿದ್ದಾರೆ’’ ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅಂದರೆ ಬಾಬಾಸಾಹೇಬರ ಹೋರಾಟದ ಫಲವನ್ನು ಪಡೆದ ವಿದ್ಯಾವಂತರು ಹಾಗೂ ನೌಕರರು ಕಂಫರ್ಟಬಲ್ ಜೋನ್ ಆಗಿ ಪರಿವರ್ತಿತವಾಗುವ ಮೂಲಕ ತಮ್ಮ ಸಮುದಾಯದ ಮೇಲೆ ಆಗುತ್ತಿರುವ ದರ್ಪ, ದೌರ್ಜನ್ಯ, ದಬ್ಬಾಳಿಕೆ, ಮಾರಣಾಂತಿಕ ಹಲ್ಲೆ ಮೊದಲಾದ ದುಷ್ಕತ್ಯಗಳ ಅರಿವಿಲ್ಲದಂತೆ, ಅರಿವಿದ್ದರೂ ಸ್ಪಂದಿಸುವ ಮನಸ್ಥಿತಿಯನ್ನು ತೋರದೆ ತನ್ನ ಜನಾಂಗದ ಅವನತಿಗೆ ಕಾರಣವಾಗುತ್ತಿರುವುದು ಶೋಚನೀಯ.

ದೌರ್ಜನ್ಯ ಪ್ರಕರಣಗಳು

ಇತಿಹಾಸದುದ್ದಕ್ಕೂ ದರ್ಪ, ದೌರ್ಜನ್ಯವನ್ನು ಎದುರಿಸುತ್ತಿರುವ ದಲಿತ ಸಮುದಾಯಕ್ಕೆ ನ್ಯಾಯವೆಂಬುದು ಮರೀಚಿಕೆಯಾಗಿದೆ. ಅಂದರೆ ಇತಿಹಾಸದ ದಾಖಲೆಗಳನ್ನು ಗಮನಿಸುವುದಾದರೆ ಕಿಲ್ವೆನ್ಮಣಿ ಹತ್ಯಾಕಾಂಡ(1968) -ತಮಿಳುನಾಡಿನಲ್ಲಿ 44 ದಲಿತರನ್ನು ಬಲಿತೆಗೆದುಕೊಂಡ ಕೃತ್ಯ, ಕರಮಚೆಡು ಪ್ರಕರಣ(1985)-ಅಂಧ್ರದಲ್ಲಿ 6 ಜನ ದಲಿತರ ಹತ್ಯೆ, ರಣವೀರ ಸೇನಾ ಪ್ರಕರಣ(1990)-ಬಿಹಾರದಲ್ಲಿ ಜಮೀನ್ದಾರ ದೌರ್ಜನ್ಯದಿಂದ 10 ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು, ತ್ಸುಂದೂರ್ ಪ್ರಕರಣ(1991) -ಆಂಧ್ರಪ್ರದೇಶದಲ್ಲಿ 8 ಜನರನ್ನು ಹತ್ಯೆ ಮಾಡಲಾಗಿತ್ತು, ಬಥನಿ ಟೋಲಾ ಪ್ರಕರಣ(1996)-ಬಿಹಾರದಲ್ಲಿ ರಣವೀರ ಸೇನಾ ಕಾರ್ಯಕರ್ತರಿಂದ 21 ಮಂದಿ ದಲಿತ ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆಮಾಡಿದರು, ಮೆಲವಲವು ಪ್ರಕರಣ(1996)-ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ 6 ಮಂದಿ ದಲಿತರನ್ನು ಸವರ್ಣೀಯರು ಹತ್ಯೆಮಾಡಿದ್ದರು, ಲಕ್ಷ್ಮಣಪುರ ಬಥೆ ಪ್ರಕರಣ(1997)-ಬಿಹಾರದ ಗಯಾದಲ್ಲಿ ರಣವೀರ್ ಸೇನೆ ಕಾರ್ಯಕರ್ತರಿಂದ 58 ಮಂದಿ ದಲಿತರ ಮಾರಣಹೋಮವಾಯಿತು, ಬಂತ್ ಸಿಂಗ್ ಪ್ರಕರಣ(1999)- ಪಂಜಾಬ್‌ನ ಭುಂಗರ್ ಖೇರ್ ಎಂಬ ಹಳ್ಳಿಯಲ್ಲಿ ನಾಲ್ಕು ಮಂದಿ ಸವರ್ಣೀಯರು ರಾಮ್‌ವತಿ ಎಂಬ ದಲಿತ ಅಂಗವಿಕಲ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಪಮಾನಮಾಡಿದ್ದರು, ಕಂಬಾಲಪಲ್ಲಿ ಪ್ರಕರಣ(2000)-ಕರ್ನಾಟಕದ ಕೋಲಾರ ಜಿಲ್ಲೆಯ ಹಳ್ಳಿಯಲ್ಲಿ 7 ಮಂದಿ ದಲಿತರನ್ನು ಸವರ್ಣೀಯರು ಸಜೀವ ದಹನ ಮಾಡಿದರು, ಮುಥಂಗ ಪ್ರಕರಣ(2003)-ಕೇರಳ ರಾಜ್ಯದ ವಯನಾಡಿನ ಹಳ್ಳಿಯಲ್ಲಿ ಚಳವಳಿದಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಆದಿವಾಸಿಗಳು ಮರಣ ಹೊಂದಿದರು, ಖೈರ್ಲಾಂಜಿ ಪ್ರಕರಣ(2006)-ಮಹಾರಾಷ್ಟ್ರದ ಭಾಂದ್ರಾ ಜಿಲ್ಲೆಯ ಹಳ್ಳಿಯಲ್ಲಿ 4 ಮಂದಿ ದಲಿತ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರವೆಸಗಿ ಕೊಲೆಮಾಡಲಾಯಿತು, ಗುರ್ಜಾರ್ ಪ್ರಕರಣ(2008)-ರಾಜಸ್ಥಾನ್‌ನಲ್ಲಿ ಗುರ್ಜಾರ್ ಚಳವಳಿಯಲ್ಲಿ 15ಕ್ಕೂ ಅಧಿಕ ಮಂದಿ ಮರಣಹೊಂದಿದರು, ಮಿರ್ಚ್‌ ಪುರ್ ಪ್ರಕರಣ(2011)- ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಹಳ್ಳಿಯಲ್ಲಿ ಸವರ್ಣೀಯರು ನಡೆಸಿದ ಕೃತ್ಯದಲ್ಲಿ 18 ದಲಿತ ಮನೆಗಳಿಗೆ ಬೆಂಕಿ ಹಚ್ಚಲಾಯಿತು ಇದರಲ್ಲಿ ಅಂಗವಿಕಲ ಯುವತಿ ಮತ್ತು ಆಕೆಯ ತಂದೆ ಮರಣ ಹೊಂದಿದರು, ಧರ್ಮಪುರಿ ಪ್ರಕರಣ(2012)-ತಮಿಳುನಾಡಿನಲ್ಲಿ ಸವರ್ಣೀಯರು ನಡೆಸಿದ ಕೃತ್ಯದಲ್ಲಿ ದಲಿತರ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿ ದೌರ್ಜನ್ಯವೆಸಗಲಾಗಿತ್ತು, ದಲಿತ-ಜಾಟ್ ಪ್ರಕರಣ(2015)-ರಾಜಸ್ಥಾನದ ನಾಗೋರ್ ಜಿಲ್ಲೆಯ ದಾಗವಾಸ್ ಎಂಬ ಹಳ್ಳಿಯಲ್ಲಿ ದಲಿತರು ಮತ್ತು ಸವರ್ಣೀಯರ ನಡುವಿನ ಕಲಹದಲ್ಲಿ 4 ಮಂದಿ ದಲಿತರು ಮರಣ ಹೊಂದಿದರು, ರೋಹಿತ್ ವೇಮುಲಾ ಪ್ರಕರಣ(2016)-ಸೆಂಟ್ರಲ್ ಯುನಿವರ್ಸಿಟಿ ಹೈದರಾಬಾದ್‌ನಲ್ಲಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಸವರ್ಣೀಯ ಯುವಕರು ನಡೆಸಿದ ಜಾತಿನಿಂದನೆ ಮತ್ತು ಹಲ್ಲೆಯಿಂದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡರು. ದಾನಮ್ಮ ಮತ್ತು ಕೋರೆಗಾಂವ್ ಪ್ರಕರಣ(2017) ಬಿಜಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕ ದಲಿತ ಹೆಣ್ಣುಮಗಳಾದ ದಾನಮ್ಮಳ ಮೇಲೆ ಬಿ.ಜೆ.ಪಿಯ ಕಾರ್ಯಕರ್ತರಿಂದ ಅತ್ಯಾಚಾರ ಮತ್ತು ಹತ್ಯೆಯಾಯಿತು ಹಾಗೆಯೇ ಮಹಾರಾಷ್ಟ್ರದ ಕೋರೆಗಾಂವ್ ಎಂಬ ಹಳ್ಳಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ದಲಿತರ ಮೇಲೆ ಮಾರಣಾಂತಿಕ ಹಲ್ಲೆಯಾಯಿತು.

ಇಷ್ಟೆಲ್ಲಾ ದೌರ್ಜನ್ಯಗಳು ದಲಿತರ ಮೇಲೆ ಕಾಲದಿಂದ ಕಾಲಕ್ಕೆ ನಡೆಯುತ್ತಾ ಬಂದಿವೆ ಹಾಗೂ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ನಾಶವಾಗಿವೆ ಆದರೆ ನಮ್ಮನ್ನು ಪ್ರತಿನಿಧಿಸುವ ರಾಜಕೀಯ ನಾಯಕರು, ಉನ್ನತ ಅಧಿಕಾರಿಗಳು ಇವುಗಳ ಬಗ್ಗೆ ಚಕಾರವೆತ್ತದೆ ತಮ್ಮ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇಷ್ಟೂ ಪ್ರಕರಣಗಳಲ್ಲಿ ಕೆಲವೇ ಪ್ರಕರಣಗಳಿಗೆ ತಕ್ಕ ಮಟ್ಟಿಗೆ ನ್ಯಾಯ ದೊರಕಿದೆಯಾದರೂ ಬಹುಪಾಲು ಪ್ರಕರಣಗಳು ಸಮರ್ಪಕ ಸಾಕ್ಷಾಧಾರಗಳಿಲ್ಲದೆ ಖುಲಾಸೆಯಾಗುತ್ತವೆ ಇಲ್ಲವೇ ದಲಿತರನ್ನೇ ಅಪರಾಧಿಯಾಗಿಸುವ ಹುನ್ನಾರಗಳು ನಡೆಯುತ್ತವೆ, ಇವೆಲ್ಲವೂ ಈ ದೇಶದ ದಲಿತರ ಅಜಾಗರೂಕತೆ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

 ‘ನ್ಯಾಷನಲ್ ಕ್ರೈಮ್ ಬ್ಯೂರೋ 2016’ರ ವರದಿ ಪ್ರಕಾರ ಭಾರತದಾದ್ಯಂತ ಪರಿಶಿಷ್ಟ ಜಾತಿಗಳ ಮೇಲೆ 40,801 ಹಾಗೂ ಕರ್ನಾಟಕ ಒಂದರಲ್ಲೇ 1,869 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೆಯೇ ಪರಿಶಿಷ್ಟ ಪಂಗಡದ ಮೇಲೆ 6,568 ಹಾಗೂ ಕರ್ನಾಟಕದಲ್ಲಿ 374 ಪ್ರಕರಣಗಳು ದಾಖಲಾಗಿವೆ. ಹೀಗೆ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.85 ಪ್ರಕರಣಗಳು ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗುತ್ತವೆ ಇದಕ್ಕೆ ಸ್ಪಷ್ಟ ಉದಾಹರಣೆ ಡಿಸೆಂಬರ್ 19, 2017 ಬಿಜಾಪುರದಲ್ಲಿ ನಡೆದ ದಾನಮ್ಮಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವಾಗಿದೆ. ಸಮುದಾಯದ ರಾಜಕೀಯ ನಾಯಕರು, ಚಳವಳಿಗಾರರು ಇನ್ನಿತರ ವ್ಯಕ್ತಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಹಾಗೂ ಮೇಲ್ವರ್ಗದ ಜನರನ್ನು ಓಲೈಸಲು ಸವರ್ಣೀಯರ ದಾಸ್ಯಕ್ಕೆ ಒಳಗಾಗಿ ಸಾಕ್ಷ್ಯಾಧಾರಗಳ ನಾಶಕ್ಕೆ ಅನುವುಮಾಡಿಕೊಡುವ ಮೂಲಕ ಸಮುದಾಯವನ್ನು ಅಧೋಗತಿಗೆ ನೂಕಿದ್ದಾರೆ.

ಇದು ಸಾಲದೆಂಬಂತೆ ನಾಡಿನ ರಾಜಕಾರಣಿಗಳು, ಮೇಲ್ವರ್ಗದ ಜನರು ಪರಿಹಾರದ ನೆಪದಲ್ಲಿ ಅಷ್ಟೋ ಇಷ್ಟೋ ಹಣವನ್ನು ನೀಡುವ ಮೂಲಕ ದಲಿತರ ಕಣ್ಣು ಒರೆಸುವ ನಾಟಕವಾಡುತ್ತಾರೆ. ಇದಕ್ಕೆ ದಲಿತರು ನಮ್ಮ ಮಾನ-ಪ್ರಾಣ ಮಾರಾಟಕ್ಕಿದೆಯೇ? ಮೇಲ್ವರ್ಗದ ಜಾತಿಯ ಜನರ ಮಾನ-ಪ್ರಾಣಕ್ಕೆ ಹೀಗೆ ಬೆಲೆ ಕಟ್ಟಲಾದೀತೇ? ಎಂಬ ಪ್ರಶ್ನೆಯನ್ನು ದೇಶದ ಮನುವಾದಿ ಧೋರಣೆಗಳಿಗೆ ಕೇಳುವ ಮೂಲಕ ತಮ್ಮ ಮೇಲಾಗುವ ದೌರ್ಜನ್ಯ, ದಬ್ಬಾಳಿಕೆಗಳಿಗೆ ತಕ್ಕ ಪಾಠ ಹೇಳುವತ್ತ ಹೆಜ್ಜೆಯನ್ನಿಡಬೇಕಿದೆ. ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವ ವಿಚಾರದಲ್ಲಿ ಯಾವುದೇ ಸ್ವಾರ್ಥ ಮನಸ್ಥಿತಿಯನ್ನು ತಾಳದೆ ಪ್ರಕರಣಗಳಿಗೆ ಕಾನೂನು ಕ್ರಮಗಳು ಜರುಗುವವರೆಗೂ ಸಮುದಾಯದ ಒಡನಾಡಿಯಾಗಬೇಕೆನ್ನುವ ಸಂವೇದನಾಶೀಲತೆಯನ್ನು ಹಾಗೂ ಸಮುದಾಯದ ನೋವುಗಳಿಗೆ ಸ್ಪಂದಿಸುವ ವಿಶಾಲ ಮನಸ್ಥಿತಿಯನ್ನು ತಾಳಬೇಕಿದೆ. ಇಲ್ಲವಾದರೆ ನೆರೆ ರಾಜ್ಯದಲ್ಲಾದ ಕೃತ್ಯವು ನಮ್ಮ ರಾಜ್ಯದಲ್ಲಿ, ನೆರೆ ಮನೆಯ ಮೇಲಾದ ದೌರ್ಜನ್ಯ, ದಬ್ಬಾಳಿಕೆ ನಮ್ಮ ಮನೆಯ ಮೇಲಾಗುವುದು ನಿಶ್ಚಿತ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top