-

ಇಂದು ಮಹಾಶ್ವೇತಾದೇವಿ ಜನ್ಮದಿನ

ಹೋರಾಟವನ್ನೇ ಬರವಣಿಗೆಯ ಹಾದಿಯಾಗಿಸಿದ್ದ ಮಹಾಶ್ವೇತಾದೇವಿ

-

ಅವರ ಬದುಕೆಂಬುದು ನಿರಂತರ ಹೋರಾಟದ್ದಾಗಿತ್ತು. ಹಾಗಾಗಿಯೇ ಅವರು ಇತರರಿಗಿಂತಲೂ ಭಿನ್ನ. ಬರಹ-ಬದುಕಿನುದ್ದಕ್ಕೂ ಅವರು ಸಾಮಾಜಿಕ ಕಾರ್ಯಕರ್ತೆಯಾಗಿಯೇ ಗುರುತಿಸಿಕೊಂಡರು. ಬುಡಕಟ್ಟು ಜನರ ಪರವಾಗಿ ಕೆಲಸ ಮಾಡಿದರು. ಅವರ ಹಕ್ಕುಗಳಿಗಾಗಿ ಅನೇಕ ವರ್ಷಗಳ ಕಾಲ ಹೋರಾಡಿದರು. ಮತ್ತೆ ಆ ಹೋರಾಟದ ಮುಂದುವರಿಕೆಯಾಗಿಯೇ ಅವರ ಕೃತಿಗಳಿರುತ್ತಿದ್ದವು.

ಕರ್ನಾಟಕದಲ್ಲಿ ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸುವ ಯತ್ನ ನಡೆದಂತೆಯೇ ಎರಡು ವರ್ಷಗಳ ಕೆಳಗೆ ದಿಲ್ಲಿ ವಿಶ್ವವಿದ್ಯಾನಿಲಯದ ಪದವಿಪೂರ್ವ ತರಗತಿಗಳ ಇಂಗ್ಲಿಷ್ ಪಠ್ಯದಿಂದ ಕೆಲವು ಬರಹಗಳನ್ನು ತೆಗೆದುಹಾಕಲಾಯಿತು. ಹಾಗೆ ತೆಗೆದುಹಾಕಲಾಗಿದ್ದ ಬರಹಗಳಲ್ಲಿ ಬಂಗಾಲಿ ಲೇಖಕಿ, ಹೋರಾಟಗಾರ್ತಿ ಮಹಾಶ್ವೇತಾದೇವಿ ಅವರ ‘ದ್ರೌಪದಿ’ ಎಂಬ ಕಥೆಯೂ ಸೇರಿತ್ತು.

ಮಹಾಶ್ವೇತಾದೇವಿ ಬುಡಕಟ್ಟು ಮತ್ತು ಶೋಷಣೆಗೊಳಗಾದ ಇತರರಿಗಾಗಿ ಜೀವನಪರ್ಯಂತ ಹೋರಾಡಿದವರಾಗಿದ್ದರು. ಬರಹಗಾರ್ತಿಯೊಬ್ಬರು ನಿಜವಾದ ಕಾಳಜಿಯನ್ನು, ಕಳಕಳಿಯನ್ನು ತನ್ನ ಹೋರಾಟಗಳ ಮೂಲಕ ತೋರಬಹುದು ಮತ್ತು ಅದು ನಿಜವಾದ ಬರವಣಿಗೆಯಾಗಿರುತ್ತದೆ ಎಂದು ತೋರಿಸಿಕೊಟ್ಟ ಬಹುದೊಡ್ಡ ಲೇಖಕಿ ಅವರು. ಭಾರತ ಹಲವರಿಗೆ ಹಲವು ರೀತಿ ಕಾಣುತ್ತದೆ. ಆದರೆ, ಅಂತಿಮವಾಗಿ ಎಲ್ಲರ ಭಾರತವೊಂದೇ ಎಂಬುದನ್ನು ಹೇಳುತ್ತಿದ್ದ ಅವರ ಮಾತುಗಳು ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತ. 

ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ಪದ್ಮವಿಭೂಷಣ ಪುರಸ್ಕೃತರಾಗಿದ್ದ ಅವರು, ಶೋಷಿತರ ಪರವಾಗಿ ಸರಕಾರಗಳ ಜೊತೆ ಮಾತನಾಡಬಲ್ಲವರಾಗಿದ್ದರು. ಅವರ ಬದುಕು ಮತ್ತು ಬರಹಗಳ ಮಧ್ಯೆ ಅಂಥ ವ್ಯತ್ಯಾಸವೇನೂ ಇರಲಿಲ್ಲ. ಅವರು, ತಮ್ಮ ಯಾವುದೇ ಕೃತಿಯಲ್ಲಿ ಸಮಸ್ಯೆಯೊಂದನ್ನು ಪ್ರಸ್ತಾಪಿಸುವುದು ವಾಸ್ತವದ ಕುರಿತ ಚರ್ಚೆಯಾಗಿಯೇ ಮುಂದುವರಿಯುತ್ತಿತ್ತು. ಮಾತ್ರವಲ್ಲ, ಬರವಣಿಗೆಯ ನಂತರವೂ ಅದರ ಕುರಿತು ಒಂದು ತಾರ್ಕಿಕ ಅಂತ್ಯವನ್ನು ಕೊಡುವ ನಿಟ್ಟಿನಲ್ಲಿ ಅವರ ನಡೆ ಮತ್ತು ನಿಲುವು ಇರುತ್ತಿತ್ತು. ಹಾಗಾಗಿ ಅವರ ಬದುಕೆಂಬುದು ನಿರಂತರ ಹೋರಾಟದ್ದಾಗಿತ್ತು. ಹಾಗಾಗಿಯೇ ಅವರು ಇತರರಿಗಿಂತಲೂ ಭಿನ್ನ. 

ಬರಹ-ಬದುಕಿನುದ್ದಕ್ಕೂ ಅವರು ಸಾಮಾಜಿಕ ಕಾರ್ಯಕರ್ತೆಯಾಗಿಯೇ ಗುರುತಿಸಿಕೊಂಡರು. ಬುಡಕಟ್ಟು ಜನರ ಪರವಾಗಿ ಕೆಲಸ ಮಾಡಿದರು. ಅವರ ಹಕ್ಕುಗಳಿಗಾಗಿ ಅನೇಕ ವರ್ಷಗಳ ಕಾಲ ಹೋರಾಡಿದರು. ಮತ್ತೆ ಆ ಹೋರಾಟದ ಮುಂದುವರಿಕೆಯಾಗಿಯೇ ಅವರ ಕೃತಿಗಳಿರುತ್ತಿದ್ದವು. ಹೋರಾಟದ ವಿಚಾರ ಬಂದಾಗ, ಅನ್ಯಾಯವನ್ನು ಎದುರಿಸುವ ಮಾತು ಬಂದಾಗ ಅವರು ಯಾವುದೇ ಪಂಥದ ಸರಕಾರದ ವಿಚಾರವಾಗಿ ದಾಕ್ಷಿಣ್ಯ ತೋರಿಸಿದವರಲ್ಲ. ಕೆಲವು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರಕಾರದ ವಿವಾದಾತ್ಮಕ ಭೂಸ್ವಾಧೀನ ಕಾಯ್ದೆ ವಿರುದ್ಧ ಬೀದಿಗಿಳಿದಿದ್ದರು. ಮೂರು ದಶಕಗಳ ಎಡರಂಗ ಸರಕಾರದ ದುರಾಡಳಿತ ಕೊನೆಗೊಳಿಸಲು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು. ಆದರೆ, ಮಮತಾ ಬ್ಯಾನರ್ಜಿ ನಡೆ ಕೂಡ ಮಹಾಶ್ವೇತಾದೇವಿಯವರಿಗೆ ಭ್ರಮನಿರಸನವನ್ನುಂಟು ಮಾಡಿತ್ತು. ಹಾಗಾಗಿ ಕಡೆಕಡೆಗೆ ಅವರಿಂದಲೂ ದೂರವೇ ಇದ್ದರು.

ಮಹಾಶ್ವೇತಾದೇವಿಯವರು ಬರೆದದ್ದು ನೂರಕ್ಕೂ ಹೆಚ್ಚು ಕಾದಂಬರಿಗಳು ಮತ್ತು 20ಕ್ಕೂ ಹೆಚ್ಚು ಸಣ್ಣ ಕಥೆಗಳ ಸಂಕಲನಗಳು. ‘ಮಾಸ್ಟರ್ ಸಾಬ್’, ‘ಹಜಾರ್ ಚೌರಾಸಿರ್ ಮಾ’, ‘ಅರಣ್ಯೇರ್ ಅಧಿಕಾರ’, ‘ಚೋಟಿ ಮುಂಡಾ ಆರ್ ತಾರ್ ತೀರ್’ ಅವರಿಗೆ ಹೆಸರು ತಂದುಕೊಟ್ಟ ಕೃತಿಗಳು. ದೇಶ ಎದುರಿಸುತ್ತಿರುವ ಸಾಮಾಜಿಕ ತಲ್ಲಣಗಳು, ಈಗಿನ ಸಮಸ್ಯೆಗಳ ಬಗ್ಗೆ ತಮ್ಮ ಕೃತಿಗಳಲ್ಲಿ ಚರ್ಚಿಸಿದ್ದಾರೆ. ಅವರು ಕಲ್ಪನೆಗಳನ್ನು ಬರಹಕ್ಕಿಳಿಸಲಿಲ್ಲ. ಬದಲಾಗಿ ಎಲ್ಲವೂ ಕಟುವಾಸ್ತವವೇ. ನಮ್ಮ ಕಣ್ಣೆದುರಿನ ಸತ್ಯಗಳೇ ಅವರ ಕಥೆಗಳಲ್ಲಿ ಇರುತ್ತಿದ್ದುದರಿಂದ ಅವೆಲ್ಲವೂ ಬಹುಬೇಗನೆ ಜನರ ಮನಸ್ಸಿನಾಳಕ್ಕೆ ಇಳಿಯುತ್ತಿದ್ದವು. ವಲಸಿಗರು, ಭೂರಹಿತ ಕಾರ್ಮಿಕರು, ತಳವರ್ಗದ ಮಹಿಳೆಯರು, ದಮನಿತರೇ ಅವರ ಕಥೆಗಳಲ್ಲಿನ ಪ್ರಮುಖ ಪಾತ್ರಗಳು. ಆ ಪಾತ್ರಗಳ ಮೂಲಕ ಈ ಸಮಾಜವನ್ನು ಕಾಣಿಸುವ ವಿಶಿಷ್ಟ ಕ್ರಮ ಮಹಾಶ್ವೇತಾದೇವಿ ಅವರ ಕೃತಿಗಳ ಹೆಚ್ಚುಗಾರಿಕೆ.

ಅವರ ‘ರುಡಾಲಿ’ಯಂತಹ ಕೃತಿ ಒಬ್ಬರ ಪ್ರತಿಷ್ಠೆಯೂ ಹೇಗೆ ಇನ್ನೊಬ್ಬರ ಹೊಟ್ಟೆಪಾಡಾಗಬಹುದು ಎಂಬ ಹೃದಯವಿದ್ರಾವಕ ವಾಸ್ತವವನ್ನು ಕಟ್ಟಿಕೊಡುವ ಕಥನ. ಉತ್ತರಭಾರತದಲ್ಲಿ ಪ್ರಚಲಿತವಿರುವ ಈ ಪದ್ಧತಿ, ಸಾಹುಕಾರರು ಸತ್ತಾಗ ಸಾವಿನ ಮನೆಯಲ್ಲಿ ಅಳುವ ಹೆಣ್ಣುಗಳ, ಅಳುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವ ಹೆಣ್ಣು ಕುಲದ ಕಥೆಯನ್ನು ಹೇಳುತ್ತದೆ. ಈ ರುಡಾಲಿಗಳ ಕಥೆ ನೋವು, ನಿರಾಸೆ, ಹತಾಶೆಗಳಿಂದ ಕೂಡಿರುವಂಥದ್ದು. ಆದರೆ ಅವರು ಅಳುವುದು ಮಾತ್ರ ತಮಗೆ ಸಂಬಂಧವೇ ಇರದ, ದುಡ್ಡಿದ್ದವರ ಸಾವಿನ ಮನೆಯಲ್ಲಿ ಅವರ  ಪ್ರತಿಷ್ಠೆಗೋಸ್ಕರ. ಈ ರುಡಾಲಿಗಳ ಹಸಿವು ನೀಗುವುದು ಉಳ್ಳವರ ಸಾವಿನ ಮೂಲಕ ಎಂಬುದು ಬಹು ಆಯಾಮದ ರೂಪಕವಾಗುವಂಥದ್ದು. ಇದೆಂಥ ವ್ಯಂಗ್ಯವೆಂದರೆ ಉಳ್ಳವರ ಸಾವಿಗೆ ಅಳುವವರೂ ಗತಿಯಿರುವುದಿಲ್ಲ. ಅಂಥವರು ಸತ್ತಾಗ ಅಳುವುದೂ ಒಂದು ವೃತ್ತಿಪರತೆ ಎನ್ನುವ ಮಟ್ಟಕ್ಕೆ ರುಡಾಲಿಗಳ ಅಳು, ಆಕ್ರಂದನ ಸಾವಿನ ಮನೆ ತುಂಬುತ್ತದೆ. ಅವರಿಗಾಗಿ ಎಷ್ಟೆಲ್ಲ ಮಂದಿ ಅತ್ತರು ಅನ್ನಿಸುವ ಸನ್ನಿವೇಶವೊಂದು ಹಾಗೆ ಕೃತಕವಾಗಿ ಸೃಷ್ಟಿಯಾಗುತ್ತದೆ. ಅಳುವ ರುಡಾಲಿಗಳ ಹೊಟ್ಟೆಯೂ ತುಂಬುತ್ತದೆ.

ರುಡಾಲಿಯ ಕಥೆಯಲ್ಲಿ ಇನ್ನೂ ಒಂದು ಆಯಾಮವನ್ನು ಕಾಣುತ್ತೇವೆ. ಈ ಕಥೆಯ ನಾಯಕಿ ಶನಿಚರಿ ತನ್ನ ಸಹಚರಳಾದವಳೊಬ್ಬಳು ಸತ್ತಾಗ ಅಳಲಾರಳು. ಯಾಕೆಂದರೆ ಅವಳಿಗಾಗಿ ಅಳುವುದರಿಂದ ಏನೂ ಪ್ರಯೋಜನವಿಲ್ಲ. ಏನೂ ಸಿಗದೆ ಇರುವಲ್ಲಿ ಕಣ್ಣೀರು ಹಾಕಬಾರದು ಎಂಬ ವ್ಯಾವಹಾರಿಕತೆ. ಇದು ಅಮಾನವೀಯವಾದುದಲ್ಲ. ಬದಲಾಗಿ, ದುಡ್ಡಿಗಾಗಿ ಅಳುವಲ್ಲಿ ಇರುವಷ್ಟೇ ಪ್ರಖರವಾದ ನಿರ್ಲಿಪ್ತತೆ. 

ಮಹಾಶ್ವೇತಾ ದೇವಿ 1926ರ ಜನವರಿಯಲ್ಲಿ, ಈಗಿನ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಜನಿಸಿದರು. ಇವರ ತಂದೆ ಮನೀಷ್ ಘಟಕ್ ಖ್ಯಾತ ಕವಿಯಾಗಿದ್ದವರು ಮತ್ತು ಹೋರಾಟಗಾರರಾಗಿದ್ದರು. ತಾಯಿ ಧರಿತ್ರಿ ದೇವಿ ಕೂಡ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಘಟಕ್ ಅವರ ಸಹೋದರ ರಿತ್ವಿಕ್ ಘಟಕ್ ಸಿನೆಮಾ ರಂಗದಲ್ಲಿ ಹೆಸರು ಮಾಡಿದ್ದವರು. ಧರಿತ್ರಿ ದೇವಿ ಅವರ ಸಹೋದರ ಶಂಖ ಚೌಧರಿ ಖ್ಯಾತ ಶಿಲ್ಪಿ. ಮತ್ತೊಬ್ಬ ಸಹೋದರ ಸಚಿನ್ ಚೌಧರಿ ಅವರು ‘ಇಕನಾಮಿಕ್ ಆ್ಯಂಡ್ ಪಾಲಿಟಿಕಲ್ ವೀಕ್ಲಿ ಆಫ್ ಇಂಡಿಯಾ’ದ ಸಂಸ್ಥಾಪಕ ಸಂಪಾದಕ. ಹೀಗೆ ಬಹುದೊಡ್ಡ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಹೋರಾಟದ ಮನಸ್ಸಿನ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರಾಗಿದ್ದರು ಮಹಾಶ್ವೇತಾದೇವಿ. 

ಢಾಕಾದಲ್ಲಿ ಮಹಾಶ್ವೇತಾದೇವಿ ಪ್ರಾಥಮಿಕ ಶಿಕ್ಷಣ ಪಡೆದರು. ದೇಶ ವಿಭಜನೆ ವೇಳೆ, ಮಹಾಶ್ವೇತಾ ದೇವಿ ಅವರ ಕುಟುಂಬ ಭಾರತಕ್ಕೆ ವಲಸೆ ಬಂದಿತು. ಪಶ್ಚಿಮ ಬಂಗಾಳದ ವೆಸ್ಟ್ ಮಿಡ್ನಾಪುರದಲ್ಲಿ ಅವರು ಮಾಧ್ಯಮಿಕ ಶಿಕ್ಷಣ ಮುಗಿಸಿದರು. ವಿಶ್ವಭಾರತಿ ವಿಶ್ವವಿದ್ಯಾನಿಲಯದಲ್ಲಿ ಬಿ.ಎ.ಆನರ್ಸ್ ಪದವಿ ಬಳಿಕ ಕೋಲ್ಕತಾ ವಿವಿಯಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. 1947ರಲ್ಲಿ ಖ್ಯಾತ ನಾಟಕಕಾರ ಬಿಜೋನ್ ಭಟ್ಟಾಚಾರ್ಯ ಅವರನ್ನು ವಿವಾಹವಾದರು. ಸ್ವಲ್ಪದಿನಗಳಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಆದರೆ ತಮ್ಮ ಕಮ್ಯುನಿಸಂ ಪರ ನಿಲುವಿನ ಕಾರಣದಿಂದಾಗಿ ಕೆಲಸ ಕಳೆದುಕೊಳ್ಳಬೇಕಾಯಿತು. ಅವರೆಂದೂ ತಮ್ಮ ನಿಲುವಿನ ವಿಚಾರದಲ್ಲಿ ರಾಜಿಯಾಗಲಿಲ್ಲ. ಅದಕ್ಕಾಗಿ ವೈಯಕ್ತಿಕ ಬದುಕಿನ ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ಳಬೇಕಾಗಿ ಬಂದರೂ ಅದಕ್ಕಾಗಿ ಅವರು ಚಿಂತಿಸಲಿಲ್ಲ ಮತ್ತು ಧೃತಿಗೆಡಲಿಲ್ಲ. ಈ ದಿಟ್ಟತನ ಅವರ ಬದುಕಿನುದ್ದಕ್ಕೂ ಬರವಣಿಗೆಯ ವಿಸ್ತಾರಕ್ಕೂ ಇತ್ತು.

ಅವರ ‘ರುಡಾಲಿ’ ಮತ್ತು ‘ಹಜಾರ್ ಚೌರಾಸಿ ಕಿ ಮಾ’ ಕೃತಿಗಳ ಆಧಾರಿತ ಸಿನೆಮಾಗಳು ಮಹಾಶ್ವೇತಾದೇವಿಯವರ ಆಶಯದ ಕಾರಣಕ್ಕೇ ಬಹುದೊಡ್ಡ ಕಲಾಕೃತಿಗಳಾಗಿ ಸಲ್ಲುತ್ತವೆ ಮತ್ತು ನಿಲ್ಲುತ್ತವೆ, ಇಂದಿಗೂ. ಆಂತರ್ಯದಿಂದಲೇ ಹೋರಾಟಗಾರ್ತಿ ಯಾಗಿದ್ದ, ಸ್ತ್ರೀವಾದಿಯಾಗಿದ್ದ ಮಹಾಶ್ವೇತಾದೇವಿ ಹೇಳಿದ ಕಥೆಗಳಲ್ಲಿ ಅಸಾಧಾರಣ ತೀವ್ರತೆಯಿತ್ತು.

ಮಹಾಶ್ವೇತಾ ದೇವಿ ಅವರು 91ನೇ ವಯಸ್ಸಿನಲ್ಲಿ 2016ರ ಜುಲೈನಲ್ಲಿ ನಿಧನರಾದರು. ಅವರ ನಿಧನದೊಂದಿಗೆ ಈ ದೇಶ ದಮನಿತರ ಪರ ದನಿಯೊಂದನ್ನು ಕಳೆದುಕೊಂಡಿತು. ಈಗಿನ ಸನ್ನಿವೇಶ ದಮನಿತರೆಲ್ಲರ ದನಿಯಡಗಿಸುವ ಸಮಯಕ್ಕಾಗಿಯೇ ಹೊಂಚಿಕೊಂಡಿರುವಂತಿದೆ. ಮಹಾಶ್ವೇತಾದೇವಿಯವರಂಥ ಗಟ್ಟಿ ಮನೋಭಾವದವರು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿರಳರಾಗಿದ್ದಾರೆ. ರಾಜಕೀಯವೊಂದು ಮಾನವೀಯವಾದುದೆಲ್ಲವನ್ನೂ ಸದ್ದಿಲ್ಲದೆ ಕೊಂದುಹಾಕುವ ವಿಕಟತೆ ಮತ್ತು ವಿಕೃತಿಯಲ್ಲಿ ತೊಡಗಿದೆ. ಮತ್ತೆ ಮಹಾಶ್ವೇತಾದೇವಿಯವರನ್ನು, ಅವರಂಥ ಹೋರಾಟಗಾರರ ಬದುಕನ್ನು ನಾವು ಓದಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top