-

ಈ ವಾರ

-

ಬಲಿ ಪಡೆಯುತ್ತಿರುವ ಮೆಟ್ರೊ

 ಈ ವಾರ ಬೆಂಗಳೂರಿನಲ್ಲಿ ದುರಂತವೊಂದು ನಡೆಯಿತು. ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ತಾಯಿ ಮತ್ತು ಮಗುವನ್ನು ಬಲಿತೆಗೆದುಕೊಂಡ ಘಟನೆ ಮೆಟ್ರೊ ಹೊಣೆಗೇಡಿತನಕ್ಕೆ ಸಾಕ್ಷಿ. ಘಟನೆಯಲ್ಲಿ ಮಹಿಳೆಯ ಪತಿ ಮತ್ತು ಇನ್ನೊಬ್ಬ ಮಗು ಕೂಡ ಗಾಯಗೊಂಡಿದ್ದು, ಮೆಟ್ರೋ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಐವರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಸೈಟ್ ಇಂಜಿನಿಯರ್‌ಗಳು, ಮೆಟ್ರೋ ಗುತ್ತಿಗೆದಾರರು, ಸೈಟ್ ಇನ್‌ಚಾರ್ಜ್ ಅಧಿಕಾರಿಗಳು, ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಇತರರನ್ನು ಸೇರಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ನಂತರ ಎಫ್‌ಐಆರ್ ದಾಖಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳಿಗೆ ನೊಟೀಸ್ ನೀಡಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಹಾಗೂ ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ನೆರವು ಪ್ರಕಟಿಸಲಾಗಿದೆ.

ಆದರೆ, ಹೊಣೆಗೇಡಿತನಕ್ಕೆ ಬಲಿಯಾದ ಜೀವಗಳನ್ನು ಮರಳಿ ತರಬಹುದೆ? ಜನರ ನಿರಂತರ ಓಡಾಟವಿರುವ ರಸ್ತೆಯಲ್ಲಿ ಕಾಂಕ್ರಿಟ್ ಮಾಡದೆ ಪಿಲ್ಲರ್ ನಿಲ್ಲಿಸಿ ಹಾಗೇ ಬಿಟ್ಟಿದ್ದು ಯಾರ ತಪ್ಪು? ಮೃತಳ ತಂದೆ ಕೇಳಿರುವಂತೆ ಅವರ ಮಗಳು ಮತ್ತು ಮೊಮ್ಮಗುವಿನ ಜೀವವನ್ನು ಮರಳಿ ತರಬಹುದೇ? ಬಿಎಂಆರ್‌ಸಿಎಲ್ ಮತ್ತು ಗುತ್ತಿಗೆದಾರ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್ (ಎನ್‌ಸಿಸಿ) ಲೋಪ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸರಕಾರ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳನ್ನು ಬಂಧಿಸಬೇಕು. ಮುಖ್ಯಮಂತ್ರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿದ್ದರೆ ನೂರಾರು ಜನಜೀವನ ಅಪಾಯಕ್ಕೆ ಸಿಲುಕಲಿದೆ ಎಂದು ಮೃತಳ ತಂದೆ ನೋವು ಮತ್ತು ಆಕ್ರೋಶದಿಂದಲೇ ಹೇಳಿದ್ದಾರೆ. ಮೆಟ್ರೋ ಕಾಮಗಾರಿ ನಡುವೆ ನಡೆದ ಅವಘಡಗಳಿಗೆ ಬಲಿಯಾದ ಜೀವಗಳು ಹಲವು. ಅಲ್ಲಿಯೇ ಕೆಲಸ ಮಾಡುವ ಕಾರ್ಮಿಕರೂ ಇದಕ್ಕೆ ಬಲಿಯಾಗಿದ್ದಿದೆ. ಮೆಟ್ರೋ ಕಾಮಗಾರಿ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರರು ಜೀವ ಕಳೆದುಕೊಂಡಿದ್ದಾರೆ. ಇಷ್ಟಾಗಿಯೂ ದುರಂತಗಳು ಪುನರಾವರ್ತನೆಯಾಗುತ್ತಲೇ ಇರುವುದು ಮೆಟ್ರೋ ಆಡಳಿತ ವ್ಯವಸ್ಥೆಯ ಹೊಣೆಗೇಡಿತನವನ್ನೇ ಹೇಳುತ್ತಿದೆ. ವರ್ಷಗಳಿಂದ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಇನ್ನೂ ಎಷ್ಟು ಬಲಿ ಕೇಳಲಿದೆ ಎಂಬುದೇ ನೋವಿನ ಪ್ರಶ್ನೆ.

ಕೋಲಾರದಲ್ಲಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಕುರಿತ ಪುಸ್ತಕ ಬಿಡುಗಡೆ ವಿಚಾರ ಕೊಂಚ ಉದ್ವಿಗ್ನತೆಗೆ ಎಡೆ ಮಾಡಿಕೊಟ್ಟಿದ್ದ ದಿನವೇ ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದ್ದರು. ಮುಂದಿನ ಚುನಾವಣೆಗೆ ಕೋಲಾರ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಬಾದಾಮಿಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದ ಬಳಿಕ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಅಲ್ಲಿಯವರೆಗೂ ಊಹೆಯ ವಿಚಾರ ಮಾತ್ರವಾಗಿಯೇ ಉಳಿದಿತ್ತು.

ಕೋಲಾರದಲ್ಲಿನ ಜಾತಿ ಸಮೀಕರಣ, ಪಕ್ಷದ ನಾಯಕರ ಬೆಂಬಲ ಇವೆಲ್ಲವೂ ಅವರು ಅಲ್ಲಿಂದಲೇ ಸ್ಪರ್ಧಿಸಲು ನಿರ್ಧರಿಸಿರುವುದರ ಹಿಂದಿನ ಕಾರಣಗಳೆನ್ನಲಾಗುತ್ತಿದೆ. ಪಕ್ಷದೊಳಗೆ ಅಪಸ್ವರ ಎದ್ದಿದೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತಾದರೂ, ಅಹಿಂದದ ಹಿನ್ನೆಲೆಯುಳ್ಳ ಕೋಲಾರ ಅವರ ಪಾಲಿಗೆ ಗಟ್ಟಿ ನೆಲೆಯಾಗಬಹುದು ಎಂತಲೂ ಹೇಳಲಾಗುತ್ತಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ 60,000ಕ್ಕೂ ಹೆಚ್ಚು ಮತಗಳಿವೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಒಕ್ಕಲಿಗರು ಮತ್ತು ಕುರುಬರು ಇದ್ದಾರೆ. ಇದು ಸಿದ್ದರಾಮಯ್ಯ ಅವರ ಪಾಲಿಗೆ ಅನುಕೂಲಕರ ಎಂಬ ಲೆಕ್ಕಾಚಾರವಿದೆ. ಅಲ್ಲದೆ, ದಲಿತ ಚಳವಳಿಗೆ ನೆಲೆಕೊಟ್ಟಿದ್ದ ನೆಲ ಕೋಲಾರ. ಅಹಿಂದ ಚಳವಳಿಗೆ 1998ರ ಬೃಹತ್ ಸಮಾವೇಶದ ಮೂಲಕ ನಾಂದಿ ಹಾಡಿದ್ದು ಕೂಡ ಕೋಲಾರವೇ. ಇದರೊಂದಿಗೇ, ಕಳೆದ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದಿದ್ದ ಕೆ.ಶ್ರೀನಿವಾಸಗೌಡರು ಮತ್ತೆ ಕಾಂಗ್ರೆಸ್‌ಲ್ಲಿದ್ದಾರೆ. ಸಿದ್ದರಾಮಯ್ಯನವರಿಗಾಗಿ ಕ್ಷೇತ್ರ ಬಿಟ್ಟುಕೊಡುತ್ತಿದ್ದಾರೆ. ರಮೇಶ್ ಕುಮಾರ್ ಸೇರಿದಂತೆ ಹಲವು ನಾಯಕರ ಒತ್ತಾಯ ಹಾಗೂ ಕೆ.ಎಚ್. ಮುನಿಯಪ್ಪ ಅವರ ಹಸಿರು ನಿಶಾನೆ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಗಟ್ಟಿಗೊಳಿಸಿದಂತಿದೆ.

ಮಾದಕ ಕೂಪ

ಗಾಂಜಾ ಸೇವನೆ ಮತ್ತು ಮಾರಾಟದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳೂ ತೊಡಗಿರುವ ಪ್ರಕರಣ ಮಂಗಳೂರಿನಲ್ಲಿ ಬಯಲಿಗೆ ಬಂದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. ಕಳೆದ 10 ದಿನಗಳಲ್ಲಿ ಡ್ರಗ್ಸ್ ಮಾರಾಟ ಜಾಲದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಸುಮಾರು 100 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅನಿವಾಸಿ ಭಾರತೀಯ ಪ್ರಜೆ ಕಿಶೋರಿಲಾಲ್ ರಾಮ್‌ಜಿ ಷಾ ಬಂಧನದಿಂದ ಇದೆಲ್ಲವೂ ಬಯಲಿಗೆ ಬಂದಿದೆ.

ಮಂಗಳೂರಿನ ವೈದ್ಯಕೀಯ ಕಾಲೇಜುಗಳ ವೈದ್ಯ ಹಾಗೂ ವೈದ್ಯ ವಿದ್ಯಾರ್ಥಿಗಳೂ ಗಾಂಜಾ ಮಾರಾಟ ಮತ್ತು ಸೇವನೆ ಜಾಲದಲ್ಲಿ ಸಕ್ರಿಯರಾಗಿರುವುದು ಬೆಳಕಿಗೆ ಬರುವುದರೊಂದಿಗೆ, ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನು ಮೊದಲು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಮತ್ತೆ ಮೂವರನ್ನು ಬಂಧಿಸಲಾಗಿತ್ತು. ಶುಕ್ರವಾರ ಈ ಜಾಲದಲ್ಲಿರುವ ಇನ್ನೂ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇನ್ನಷ್ಟು ಜನರ ಬಂಧನವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಆತಂಕಕಾರಿ ಸಂಗತಿಯೆಂದರೆ ಯುವ ವೈದ್ಯರೇ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದು. ಇದು ಯುವ ಜನಾಂಗವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬ ಕಳವಳಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಂಗಳೂರು ಇತ್ತೀಚೆಗೆ ಡ್ರಗ್ಸ್ ಮಾಫಿಯಾದ ಸುಲಿಗೆ ಸಿಲುಕಿದೆ, ಇಲ್ಲಿನ ಹೈಸ್ಕೂಲ್ ಮಕ್ಕಳವರೆಗೂ ಇದರ ಪಿಡುಗು ವ್ಯಾಪಿಸಿದೆ ಎಂಬ ವರದಿಗಳು ಆತಂಕ ಸೃಷ್ಟಿಸಿವೆ.

ಮೊದಲೇ ಕೋಮು ಹಿಂಸೆಯ ಘಟನೆಗಳಿಂದ ಆಗಾಗ ಸುದ್ದಿಯಾಗುವ ಮಂಗಳೂರು ಅದರ ಜೊತೆ ಡ್ರಗ್ಸ್ ಬಲೆಗೂ ಬಿದ್ದರೆ ಆಗುವ ಅಪಾಯ ಬಹಳ ದೊಡ್ಡದು. ಜನತೆ, ಜನಪ್ರತಿನಿಧಿಗಳು ಹಾಗೂ ಆಡಳಿತ ಈಗಲಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ.

ಸ್ಯಾಂಟ್ರೊ ರವಿ ಸಿಕ್ಕಿಬಿದ್ದ

ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ. ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರು ಗುಜರಾತ್‌ನಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಸ್ಯಾಂಟ್ರೊ ರವಿ ತನ್ನ ವಿರುದ್ಧ ತಿರುಗಿಬಿದ್ದ ಸಹೋದರಿಯರಿಬ್ಬರನ್ನು ಜೈಲಿಗೆ ಕಳಿಸುವ ಸಂಚಿನಲ್ಲಿ ಇನ್‌ಸ್ಪೆಕ್ಟರ್ ಒಬ್ಬರು ಷಾಮೀಲಾಗಿ ಸಹೋದರಿಯರಿಬ್ಬರ ಮೇಲೆ ಸುಳ್ಳು ಸಾಕ್ಷ ಸೃಷ್ಟಿಸಿದ್ದ ವಿಚಾರ ಬಹಿರಂಗವಾಗಿತ್ತು.

ಪ್ರಕರಣ ಬಯಲಿಗೆ ಬರುತ್ತಲೇ ತಲೆಮರೆಸಿಕೊಂಡಿದ್ದ ಆತ ಕಡೆಗೂ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಲು ಸರಕಾರ ಹಿಂದೆಮುಂದೆ ನೋಡುತ್ತಿದೆ ಎಂಬ ಟೀಕೆಗಳೂ ಇದ್ದವು. ಅಂತೂ ಸಿಎಂ ತನಗೆ ವನ್ ಟು ವನ್ ಎಂದು ಹೇಳಿಕೊಂಡಿದ್ದವನು ಗುಜರಾತ್‌ವರೆಗೂ ಹೋಗುವಂತಾದದ್ದು ಮಾತ್ರ ತಮಾಷೆಯಾಗಿದೆ. ಆತನ ತನಿಖೆ ಎಷ್ಟು ನಿಷ್ಪಕ್ಷವಾಗಿ ನಡೆಯಲಿದೆ, ಅದರಲ್ಲಿ ಏನೇನು ಮಾಹಿತಿ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಜನಸಾಹಿತ್ಯ

  ಒಂದೆಡೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಆ ಸಮ್ಮೇಳನಕ್ಕೆ ಪ್ರತಿರೋಧ ವ್ಯಕ್ತಪಡಿಸುವುದಕ್ಕಾಗಿ ಬೆಂಗಳೂರಿನಲ್ಲಿ ಜನಸಾಹಿತ್ಯ ಸಮ್ಮೇಳನ ನಡೆಯಿತು. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ, ಇದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮತ್ತು ಲೇಖಕ ಪುರುಷೋತ್ತಮ ಬಿಳಿಮಲೆ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವುದರೊಂದಿಗೆ ಸುದ್ದಿಯಾಯಿತು. ಹಾವೇರಿ ಸಮ್ಮೇಳನದಲ್ಲಿ ಪೆಂಡಾಲ್ ಹಾಕಲು ಮುಸ್ಲಿಮರೊಬ್ಬರಿಗೆ ಅವಕಾಶ ನೀಡಲು ಕೇಳಿದ್ದರು ಎಂದು ಬಿಳಿಮಲೆ ವಿರುದ್ಧ ಜೋಶಿ ಆರೋಪಿಸಿದ್ದರು. ಅದನ್ನು ಬಿಳಿಮಲೆ ನಿರಾಕರಿಸಿದ್ದರು. ಒಂದುವೇಳೆ ಬಿಳಿಮಲೆ ಅಂಥದೊಂದು ಬೇಡಿಕೆ ಇಟ್ಟಿದ್ದರೂ ಅದು ತಪ್ಪಲ್ಲ, ಒಳ್ಳೆಯ ಉದ್ದೇಶವುಳ್ಳ ಬೇಡಿಕೆಯಾಗಿರುತ್ತಿತ್ತು ಎಂಬ ಅಭಿಪ್ರಾಯಗಳೂ ಚಿಂತಕರ ವಲಯದಲ್ಲಿ ವ್ಯಕ್ತವಾದವು. ಇದೆಲ್ಲದರ ನಡುವೆಯೇ ಹಾವೇರಿ ಸಮ್ಮೇಳನದ ಕೊನೇದಿನ ಜನಸಾಹಿತ್ಯ ಸಮ್ಮೇಳನ ನಡೆಯಿತು. ಹಾವೇರಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ದೊಡ್ಡರಂಗೇಗೌಡರ ವಿರುದ್ಧವೂ, ತನ್ನನ್ನು ತಾನು ಗುರುಗೋವಿಂದ ಭಟ್ಟರ ಮರಿಮೊಮ್ಮಗ ಎಂದು ಹೇಳಿಕೊಳ್ಳುವ ಜೋಶಿ ಬಗ್ಗೆಯೂ ಆಕ್ರೋಶ ವ್ಯಕ್ತವಾಯಿತು. ಸಮ್ಮೇಳನ ಉದ್ಘಾಟಿಸಿದ ಮೂಡ್ನಾಕೂಡು ಚಿನ್ನಸ್ವಾಮಿ ಹಿಂದಿ ಹೇರಿಕೆಯನ್ನು ಖಂಡಿಸಿದರೆ, ಅಧ್ಯಕ್ಷತೆ ವಹಿಸಿದ್ದ ಕವಯಿತ್ರಿ ಬಾನು ಮುಷ್ತಾಕ್, ಯುವ ಪೀಳಿಗೆಗೆ ಒಳ್ಳೆಯ ಬದುಕನ್ನು ಕಟ್ಟಿಕೊಡುವ ನಿಟ್ಟಿನ ಕಾಳಜಿಯ ಅಗತ್ಯವನ್ನು ಒತ್ತಿಹೇಳಿದರು. ಕನ್ನಡದ ವಿಚಾರವಾಗಿ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವನ್ನು ಬಿಳಿಮಲೆಯವರು ಪ್ರತಿಪಾದಿಸಿದರೆ, ಬಹುತ್ವ ಮತ್ತು ಪ್ರಭುತ್ವ ಎಂಬ ಪ್ರಮುಖ ಗೋಷ್ಠಿ ಹಾಗೂ ಟಿಪ್ಪು ಕುರಿತ ಗೋಷ್ಠಿ, ಆಹಾರ ಗೋಷ್ಠಿಗಳಲ್ಲಿ ಇಂದಿನ ಪ್ರಭುತ್ವದ ದಮನಕಾರಿ ಮತ್ತು ಒಡೆಯುವ ನಡೆಯನ್ನು ಟೀಕಿಸಲಾಯಿತು. ಮುಸ್ಲಿಮರು ಹೇಗೆ ಈಗ ಹೊಸ ಅಸ್ಪಶ್ಯರಾಗಿದ್ದಾರೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ವಿವರಿಸಿದರು. ಇನ್ನೊಂದೆಡೆ, ಹಾವೇರಿ ಸಮ್ಮೇಳನದಲ್ಲಿ ದೊಡ್ಡರಂಗೇಗೌಡರು ಸರಕಾರಿ ಶಾಲೆಗಳನ್ನು ಸಂಸದರು ದತ್ತು ತೆಗೆದುಕೊಳ್ಳಬೇಕು, ಮತ್ತೊಂದು ಗೋಕಾಕ್ ಚಳವಳಿ ಕರ್ನಾಟಕದಲ್ಲಿ ಬೇಕಿದೆ ಮೊದಲಾದ ವಿಚಾರಗಳನ್ನು ವ್ಯಕ್ತಪಡಿಸಿದರು. ಆದರೆ ಸಾಹಿತ್ಯ ಪರಿಷತ್ತಿನ ನಿಲುವಿನ ಜೊತೆಗೆ ಸಹಮತವಿದ್ದಂತಿದ್ದ ಅವರ ಮಾತುಗಳು, ಒಪ್ಪಿಸುವ ಶಾಸ್ತ್ರದಂತೆ ಇದ್ದವೇ ಹೊರತು ಅದು ಗಟ್ಟಿದನಿಯದ್ದೆಂದು ಅನ್ನಿಸದೇ ಹೋಯಿತು.

ಸಾರಾ ಅಬೂಬಕರ್ ನಿಧನ

ಕನ್ನಡದ ಮಹತ್ವದ ಲೇಖಕಿಯಾಗಿದ್ದ ಸಾರಾ ಅಬೂಬಕರ್ 86ನೇ ವಯಸ್ಸಿನಲ್ಲಿ ನಿಧನರಾದರು. ಗಡಿನಾಡು ಕಾಸರಗೋಡಿನ ಮಲಯಾಳಂ ಮಾತನಾಡುವ ಕುಟುಂಬದಲ್ಲಿ ಹುಟ್ಟಿದ್ದ ಸಾರಾ, ತಮ್ಮ ಸ್ತ್ರೀವಾದಿ ಚಿಂತನೆ ಮತ್ತು ಸೃಜನಶೀಲ ಬರವಣಿಗೆ ಮೂಲಕ ನಾಡಿನಲ್ಲಿ ಮನೆಮಾತಾಗಿದ್ದರು. ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರ’ದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿತ್ತು. 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ ನಾಟಕ, ಲೇಖನ, ಪ್ರವಾಸ ಕಥನ ಹೀಗೆ ಹಲವು ಪ್ರಕಾರಗಳಲ್ಲಿ ಅವರ ಬರವಣಿಗೆಯ ವ್ಯಾಪ್ತಿಯಿತ್ತು. ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮೊದಲಾದ ಗೌರವಗಳು ಸಂದಿವೆ.

ಆದರೆ ಇಂತಹ ಹಿರಿಯ ಲೇಖಕಿಯೊಬ್ಬರ ನಿಧನದ ಸಂದರ್ಭದಲ್ಲಿ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಸಾಹಿತಿಗಳು ಮತ್ತು ಚಿಂತಕರಿಂದ ಖಂಡನೆ ವ್ಯಕ್ತವಾಗಿದೆ. ಸೂಕ್ತ ಗೌರವ ಸಲ್ಲಿಸದೆ ಅವಗಣನೆ ಮಾಡಿರುವುದು ಖೇದಕರ ಎಂದು ಸಾಂಸ್ಕೃತಿಕ ವಲಯ ಟೀಕಿಸಿದೆ. ಸಂಸ್ಕೃತದ ಬಗ್ಗೆ ಮಾತನಾಡುವವರಿರುವ ಆಡಳಿತ ಪಕ್ಷದ ಪರಿವಾರದಲ್ಲಿ ಕನ್ನಡ ಸಂಸ್ಕೃತಿ ಮತ್ತು ಅದಕ್ಕೆ ಕೊಡುಗೆ ಕೊಟ್ಟವರ ಬಗ್ಗೆ ಗೊತ್ತಿದ್ದವರೆಷ್ಟೊ ಯಾರಿಗೆ ಗೊತ್ತು?

ಜನಗಣತಿಯ ಜರೂರು

ಇಂದಿನ ಹಿಂದುತ್ವ ರಾಜಕಾರಣದ ಅಜೆಂಡ ನಡುವೆ ಬಿಹಾರ ಸರಕಾರ ದಿಟ್ಟ ಹೆಜ್ಜೆ ತೆಗೆದುಕೊಂಡಿದ್ದು, ಜಾತಿಗಣತಿಯ ಮೊದಲ ಹಂತವನ್ನು ಆರಂಭಿಸಿದೆ. ಜಾತಿಗಣತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿಗೆ, ಜಾತಿಗಣತಿ ಎಲ್ಲಿ ಜನರನ್ನು ಜಾತಿಯಾಧಾರದಲ್ಲಿ ಒಗ್ಗೂಡಿಸುವ ಮೂಲಕ ತನ್ನ ಮತಬ್ಯಾಂಕನ್ನು ಛಿದ್ರಗೊಳಿಸಿಬಿಡುವುದೋ ಎಂಬ ಆತಂಕವಿದೆ ಎನ್ನುತ್ತಾರೆ ಕೆಲವು ರಾಜಕೀಯ ಪಂಡಿತರು. ಇದೀಗ ಬಿಹಾರ ಸರಕಾರ ಆರಂಭಿಸಿರುವ ಜಾತಿಗಣತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಗಳು ದಾಖಲಾಗಿರುವುದರ ಹಿಂದಿನ ಪ್ರೇರಣೆಗಳನ್ನು ಕೂಡ ಈ ಹಿನ್ನೆಲೆಯಲ್ಲಿ ನೋಡಬಹುದು. ಸುಪ್ರೀಂ ಕೋರ್ಟ್ ಆ ಅರ್ಜಿಗಳ ವಿಚಾರಣೆಯನ್ನು ಜನವರಿ 20ಕ್ಕೆ ಕೈಗೆತ್ತಿಕೊಳ್ಳಲಿದೆ.

 ಇದೇನೇ ಇದ್ದರೂ, ಮತ್ತೊಮ್ಮೆ ಜಾತಿಗಣತಿ ಚರ್ಚೆಗೆ ಬಂದಿದೆ. ದೇಶದ ಶಕ್ತಿಯೇ ಆಗಿರುವ ಸಣ್ಣ ಸಣ್ಣ ಜಾತಿ ಸಮುದಾಯಗಳನ್ನು, ಅವುಗಳ ಅಸ್ಮಿತೆಯನ್ನು ಗುರುತಿಸುವುದು ನೀತಿ ನಿರೂಪಣೆಯ ದೃಷ್ಟಿಯಿಂದಲೂ ಸಾಂಸ್ಕೃತಿಕವಾಗಿಯೂ ಬಹುಮುಖ್ಯ. ಹಾಗಾಗಿ ಮೀಸಲಾತಿ ಹಂಚಿಕೆಯ ಹೊರತಾಗಿಯೂ ಜನಗಣತಿಗೆ ಪ್ರಾಮುಖ್ಯತೆಯಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆಯ ಲಾಭಗಳನ್ನು ತಲುಪಿಸುವ ನಿಟ್ಟಿನಲ್ಲಿ ನೆರವಾಗುವುದು ಒಂದೆಡೆಗಾದರೆ, ಸಮಾಜದ ಎಲ್ಲರಿಗೂ ಅನುಕೂಲವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಅಗತ್ಯ ಎಂಬ ಕಾರಣದಿಂದಲೂ ಜನಗಣತಿಗೆ ಮಹತ್ವವಿದೆ. ದುರಂತವೆಂದರೆ ಈ ದೇಶದಲ್ಲಿ ಜಾತಿ ಜನಗಣತಿಯನ್ನು ನಡೆಸುವ ಇಚ್ಛಾಶಕ್ತಿಯನ್ನೇ ಸರಕಾರಗಳು ತೋರುತ್ತಿಲ್ಲ. 1931ರ ಜನಗಣತಿಯೊಂದಿಗೆ ನಡೆದ ಜಾತಿಗಣತಿ ಬಿಟ್ಟರೆ ಆನಂತರ ಈ ದಿಸೆಯಲ್ಲಿನದು ಶೂನ್ಯ ಸಂಪಾದನೆ. 2015ರಲ್ಲಿ ಸಿದ್ದರಾಮಯ್ಯ ಸರಕಾರ 162 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿಗಣತಿ ನಡೆಸಿತಾದರೂ, ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಮುಖ್ಯಮಂತ್ರಿಗಳ ಅವಧಿಯಲ್ಲೂ ಯಾವ ಸರಕಾರವೂ ಆ ವರದಿಯನ್ನು ಬಹಿರಂಗಗೊಳಿಸದೆ ಇರುವುದರಿಂದ ಹಾಗೆಯೇ ಉಳಿಯುವಂತಾಗಿದೆ. ಇಂಥ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಸನ್ನಿವೇಶದಲ್ಲಿ ಬಿಹಾರದ ನಡೆ ಸದ್ಯಕ್ಕಂತೂ ಮಹತ್ವದ್ದೆನಿಸಿದೆ. ಮುಂದೇನೆಂಬುದನ್ನು ಕಾದುನೋಡಬೇಕಷ್ಟೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top