ಎಚ್.ಕೆ. ಪಾಟೀಲರು ಎದುರಿಸಬೇಕಿದೆಯೇ ತೀವ್ರ ಪೈಪೋಟಿ?

ಕಾಂಗ್ರೆಸ್ ಕೋಟೆ ಎನ್ನಿಸಿದರೂ ಜೋರಾಗುತ್ತಿದೆಯೆ ಕಮಲದ ಪೈಪೋಟಿ?
ಗೆಲುವಿನ ಹತ್ತಿರ ಹತ್ತಿರ ಬಂದುಹೋಗಿರುವ ಬಿಜೆಪಿಯ ರಣತಂತ್ರವೇನು?
ಜನಪ್ರೀತಿ ಗಳಿಸಿರುವ ಎಚ್.ಕೆ. ಪಾಟೀಲರಿಗೆ ಈ ಬಾರಿ ಯಾರು ಎದುರಾಳಿ?
ಜೆಡಿಎಸ್ ಲೆಕ್ಕಕ್ಕಿಲ್ಲದ ಗದಗ ಕ್ಷೇತ್ರದಲ್ಲಿ ಹೇಗಿರಲಿದೆ ಕೈ-ಕಮಲ ಕದನ?
ರಾಜ್ಯ ರಾಜಕಾರಣದಲ್ಲಿ ಗದಗ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಮಹತ್ವ. ಕಾಂಗ್ರೆಸ್ನ ಭದ್ರಕೋಟೆ. ಈವರೆಗೆ ನಡೆದ 14 ವಿಧಾನಸಭಾ ಚುನಾವಣೆಗಳಲ್ಲಿ 12 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 1978ರಲ್ಲಿ ಜನತಾ ಪಕ್ಷದಿಂದ ಸಿ.ಎಸ್. ಮುತ್ತಿನಪೆಂಡಿಮಠ ಹಾಗೂ 2008ರಲ್ಲಿ ಬಿಜೆಪಿಯಿಂದ ಶ್ರೀಶೈಲಪ್ಪಬಿದರೂರ ಬಿಟ್ಟರೆ ಉಳಿದ ಎಲ್ಲ ಚುನಾವಣೆಗಳಲ್ಲೂ ಕೈ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಎಚ್.ಕೆ. ಪಾಟೀಲರ ತಂದೆ ಕೆ.ಎಚ್. ಪಾಟೀಲ್ ಹಾಗೂ ಸಹೋದರ ಡಿ.ಆರ್. ಪಾಟೀಲ್ ಸತತ ನಾಲ್ಕು ಬಾರಿ ಜೊತೆಗೆ ಸ್ವತಃ ಎಚ್.ಕೆ. ಪಾಟೀಲ್ ಅವರು ಸತತ ಎರಡು ಬಾರಿ ಸೇರಿದಂತೆ ಒಟ್ಟು 10 ಬಾರಿ ಒಂದೇ ಕುಟುಂಬದ ಸದಸ್ಯರೇ ಗದಗ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿದ್ದು ವಿಶೇಷ.
ಹುಲಕೋಟಿ ಪಾಟೀಲರ ಪ್ರಭಾವ
ಈ ಹಿಂದೆ ಹುಲಕೋಟಿ ಹುಲಿ ಖ್ಯಾತಿಯ ಕೆ.ಎಚ್. ಪಾಟೀಲರು ಸ್ಪರ್ಧಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತೀ ಚುನಾವಣೆಯಲ್ಲಿಯೂ ಗದಗ ವಿಧಾನಸಭಾ ಕ್ಷೇತ್ರ ಗಮನಸೆಳೆಯುತ್ತಿತ್ತು. ಕಳೆದ 15 ವರ್ಷಗಳಿಂದ ಎಚ್.ಕೆ. ಪಾಟೀಲರಿಂದ ರಾಜ್ಯದಲ್ಲಿ ಗದಗ ಕ್ಷೇತ್ರ ಗಮನ ಸೆಳೆಯುತ್ತಿದೆ. ತಂದೆ ಕೆ.ಎಚ್. ಪಾಟೀಲರಂತೆ ಎಚ್.ಕೆ. ಪಾಟೀಲರು ಕೂಡ ಜನಪ್ರೀತಿ ಸಂಪಾದಿಸಿದವರು.
ಈ ಮೊದಲು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶಿಸುತ್ತಿದ್ದ ಎಚ್.ಕೆ. ಪಾಟೀಲರು 2008ರಲ್ಲಿ ತಮ್ಮ ಸಹೋದರ ಡಿ.ಆರ್. ಪಾಟೀಲರು ಸ್ಪರ್ಧಿಸುತ್ತಿದ್ದ ಗದಗ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಯತ್ನದಲ್ಲಿ ಶ್ರೀಶೈಲಪ್ಪಬಿದರೂರ ವಿರುದ್ಧ ಪರಾಭವಗೊಂಡಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ. ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಮತ್ತು ಬಿ.ಎಸ್. ಯಡಿಯೂರಪ್ಪಕೆಜೆಪಿ ಸ್ಥಾಪಿಸಿದ್ದರಿಂದ ಗದಗ ಕ್ಷೇತ್ರದ ಬಿಜೆಪಿಯಲ್ಲಿ ಒಡಕು ಮೂಡಿತು. ಶ್ರೀರಾಮುಲು ಅವರು ಸ್ಥಾಪಿಸಿದ ಬಿಎಸ್ಆರ್ ಪಕ್ಷದಿಂದ ಎಚ್.ಕೆ. ಪಾಟೀಲರಿಗೆ ಪ್ರತಿಸ್ಪರ್ಧಿಯಾಗಿ ಅನಿಲ್ ಮೆಣಸಿನಕಾಯಿ 2013ರಲ್ಲಿ ಸ್ಪರ್ಧಿಸಿದರು. ಬಿಜೆಪಿಯಲ್ಲಿನ ಭಿನ್ನಮತದ ಮಧ್ಯೆಯೂ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಎಚ್.ಕೆ. ಪಾಟೀಲ್ ಗೆಲುವು ದಾಖಲಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2018ರಲ್ಲಿ ಮತ್ತೆ ಬಿಎಸ್ವೈ, ಶ್ರೀರಾಮುಲು ಬಿಜೆಪಿ ಸೇರಿದ ಹಿನ್ನೆಲೆ ಅನಿಲ್ ಮೆಣಸಿನಕಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಎಚ್.ಕೆ. ಪಾಟೀಲ್ 1,868 ಅತ್ಯಲ್ಪಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಇತ್ತೀಚೆಗಷ್ಟೆ ನಿಧನ ಹೊಂದಿದ್ದಾರೆ. ಈಗ ಆಕಾಂಕ್ಷಿಗಳಲ್ಲಿ ಹಾಲಿ ಶಾಸಕ ಎಚ್.ಕೆ. ಪಾಟೀಲ್ ಒಬ್ಬರಾದರೆ, ಮತ್ತೊಬ್ಬರು ಬಲರಾಂ ಬಸವ. ಆದರೆ ಎಚ್.ಕೆ. ಪಾಟೀಲ್ ಅವರಿಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಬಹುತೇಕ ಪಕ್ಕಾ ಎನ್ನಲಾಗಿದೆ.
ಬಿಜೆಪಿಯಿಂದ ಯಾರು?
ಈಗಾಗಲೇ ಗದಗ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗು ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಸ್ಥಾನ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಭಾರೀ ಪ್ರಮಾಣದಲ್ಲಿ ಸಿದ್ಧತೆ ಕೈಗೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪಮತಗಳ ಅಂತರದಿಂದ ಪರಾಭವಗೊಂಡಿದ್ದ ಅನಿಲ್ ಮೆಣಸಿನಕಾಯಿ ಈ ಬಾರಿಯಾದರೂ ವಿಧಾನಸೌಧದ ಮೆಟ್ಟಿಲೇರುವ ಕನಸು ಕಟ್ಟಿಕೊಂಡಿದ್ದಾರೆ. ಆದರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಈ ಬಾರಿ ದೊಡ್ಡದಿದ್ದು, ಅವರಿಗೆ ಕೊಂಚ ಹಿನ್ನಡೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಬಿಜೆಪಿ ಪಾಳೆಯದಲ್ಲಿ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ, ನಾಗೇಶ ಹುಬ್ಬಳ್ಳಿ, ವಿಜಯಕುಮಾರ ಗಡ್ಡಿ, ಮೋಹನ ಮಾಳಶೆಟ್ಟಿ, ಶರಣ ಪಾಟೀಲ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಗುಜರಾತ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 40 ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿರುವುದರ ಮಾದರಿಯನ್ನೇ ಈ ಬಾರಿ ರಾಜ್ಯದಲ್ಲಿಯೂ ಅನುಸರಿಸಬಹುದು ಎಂಬ ಲೆಕ್ಕಾಚಾರವೇ ಬಿಜೆಪಿ ಆಕಾಂಕ್ಷಿಗಳು ಹೆಚ್ಚಾಗಲು ಕಾರಣ. ಇವರಲ್ಲಿ ರಾಜು ಕುರಡಗಿಯವರು ಗೋವಾ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯ, ರೋಣ ವಿಧಾನಸಭಾ ಚುನಾವಣೆ ಉಸ್ತುವಾರಿ, ಬೀದರ್ ಬೀಜ ನಿಗಮದ ಚುನಾವಣೆ ಹೊಣೆ ನಿರ್ವಹಿಸಿದವರು. ಅಲ್ಲದೆ 2009, 2014, 2019ರ ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಹಿನ್ನೆಲೆಯುಳ್ಳವರು. ಬಿಜೆಪಿ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರೂ ಹೌದು. ಇನ್ನು ಮತ್ತೋರ್ವ ಆಕಾಂಕ್ಷಿ ವಿಜಯಕುಮಾರ ಗಡ್ಡಿ ಪಂಚಮಸಾಲಿ ಸಮುದಾಯದವರು. ಅವರ ಪತ್ನಿ ಈಗಾಗಲೇ ನಗರಸಭೆ ಸದಸ್ಯರಾಗಿದ್ದಾರೆ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟರ್ ಕೂಡ ಆಕಾಂಕ್ಷಿ. ಗದಗ ಮತ ಕ್ಷೇತ್ರಕ್ಕೆ ಹೊಸ ಮುಖವಾಗಿರುವ ಶರಣ ಪಾಟೀಲ್ ಅನೇಕ ಚಟುವಟಿಕೆಗಳ ಮೂಲಕ ಜನರನ್ನು ತಲುಪುವ ಪ್ರಯತ್ನದಲ್ಲಿರುವವರು.
ಕೈ-ಕಮಲ ನಡುವೆ ಜಿದ್ದಾಜಿದ್ದಿ
ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡುವುದರಿಂದಾಗಿ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇನ್ನು ಬಿಜೆಪಿ ಮುಖಂಡರಲ್ಲಿನ ಒಗ್ಗಟ್ಟಿನ ಕೊರತೆಯೇ ಕಾಂಗ್ರೆಸ್ ಪಾಲಿಗೆ ಆಕ್ಸಿಜನ್. ಹೀಗಾಗಿ, ಈ ಚುನಾವಣೆಯಲ್ಲಿ ಭಾರೀ ಸವಾಲೊಡ್ಡುವ ತಯಾರಿಯಲ್ಲಿರುವ ಎಚ್.ಕೆ. ಪಾಟೀಲರು ಕಳೆದ ಒಂದು ವರ್ಷದಿಂದಲೇ ಸೇವಾ ತಂಡದ ಮೂಲಕ ಗದಗ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸಗಳನ್ನು ಕೈಗೊಂಡು ಜನರ ಪ್ರೀತಿ, ವಿಶ್ವಾಸ ಗಳಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳ ಮೂಲಕ 60,000ಕ್ಕೂ ಅಧಿಕ ಜನರಿಗೆ ಸೇವೆ ಒದಗಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿಯೂ ಕೂಡ ಸೇವಾ ಕಾರ್ಯ ಭರದಿಂದ ನಡೆದಿದೆ.
ಮತದಾರರಿಗೆ ‘ಆಟ’ವಾಡಿಸುತ್ತಿರುವ ನಾಯಕರು
ಇನ್ನೊಂದೆಡೆ ಬಿಜೆಪಿ-ಕಾಂಗ್ರೆಸ್ನಲ್ಲಿ ಸ್ಪೋರ್ಟ್ಸ್ ಪೊಲಿಟಿಕ್ಸ್ ಕೂಡ ನಡೆದಿದೆ. ಈಗಾಗಲೇ ಅನಿಲ್ ಮೆಣಸಿನಕಾಯಿ ಗದಗ ನಗರ ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಜಿಸಿಎಲ್ ಕ್ರಿಕೆಟ್ ಲೀಗ್ ಆಡಿಸುತ್ತಿದ್ದು, ಇತ್ತ ಎಚ್.ಕೆ. ಪಾಟೀಲರ ಅಭಿಮಾನಿಗಳು ಕೂಡ ವಾಲಿಬಾಲ್, ಫುಟ್ಬಾಲ್ ಜೊತೆಗೆ ಇದೀಗ ಕೆ.ಎಚ್. ಪಾಟೀಲ್ ಲೀಗ್ ಆಡಿಸುತ್ತಿದ್ದಾರೆ.
ವೀಕ್ಷಿಸಿ: ಐದನೇ ಬಾರಿ ಗೆಲ್ಲುವ ವೆಂಕಟಶಿವಾರೆಡ್ಡಿ ಕನಸಿಗೆ ಸಾಥ್ ನೀಡಲಿದೆಯೆ BJP ?
ಕಳೆದ ವಿಧಾನಸಭೆ ಚುನಾವಣೆ ವೇಳೆ ಮುಸ್ಲಿಮರು ಎಚ್.ಕೆ. ಪಾಟೀಲರ ಮೇಲೆ ಮುನಿಸಿಕೊಂಡಿದ್ದರು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಎಚ್.ಕೆ. ಪಾಟೀಲರು ಆಸಕ್ತಿಯಿಂದ ಕೆಲಸ ಮಾಡಲಿಲ್ಲ ಎನ್ನುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ಕೂಡ ಪಾಟೀಲರ ಗೆಲುವಿನ ಅಂತರ ತೀರಾ ಕಡಿಮೆಯಾಗಲು ಕಾರಣವಾಗಿತ್ತು. ಆದರೆ ಈಗ ವೈಮನಸ್ಸು ಮರೆತು ಮುಸ್ಲಿಮ್ ಮತದಾರರು ಕೈಹಿಡಿದಿದ್ದಾರೆ. ಇದು ಎಚ್.ಕೆ. ಪಾಟೀಲರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಇನ್ನು ಬಿಜೆಪಿಯಲ್ಲಿ ಅಂದುಕೊಂಡಂತೆ ಆದರೆ ಅನಿಲ್ ಮೆಣಸಿನಕಾಯಿ ಅವರಿಗೆ ಟಿಕೆಟ್ ಸಿಕ್ಕಿದ್ದೇ ಆದರೆ ಚುನಾವಣೆ ಎರಡೂ ಪಕ್ಷಗಳ ಪಾಲಿಗೆ ಜಿದ್ದಾಜಿದ್ದಿನದ್ದಾಗುವುದರಲ್ಲಿ ಅನುಮಾನವಿಲ್ಲ.







