ಸ್ತನಗಳೊಳಗೆ ಕೊಕೇನ್ ಸಾಗಿಸುತ್ತಿದ್ದ ಮಹಿಳೆ ಬಂಧನ
ಬರ್ಲಿನ್, ಮಾ. 10: ತನ್ನ ಸ್ತನಗಳ ಒಳಗೆ ಒಂದು ಕೆಜಿ ಕೊಕೇನ್ (ಮಾದಕ ದ್ರವ್ಯ) ಸಾಗಿಸುತ್ತಿದ್ದ ಕೊಲಂಬಿಯದ 24 ವರ್ಷದ ಮಹಿಳೆಯೊಬ್ಬಳನ್ನು ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಜರ್ಮನ್ ಸುಂಕ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಫೆಬ್ರವರಿ 24ರಂದು ನಡೆದ ಶೋಧದ ವೇಳೆ, ಮಹಿಳೆಯ ಸ್ತನಗಳ ಕೆಳಗೆ ಶಸ್ತ್ರಕ್ರಿಯೆಯ ಹಸಿ ಕಲೆಗಳು ಇರುವುದನ್ನು ಕಂಡ ವಿಮಾನ ನಿಲ್ದಾಣದ ಅಧಿಕಾರಿಗಳು ಸಂಶಯ ತಾಳಿದರು. ಸ್ತನಗಳಲ್ಲಿ ವಿಪರೀತ ನೋವಾಗುತ್ತಿದೆ ಎಂಬುದಾಗಿಯೂ ಮಹಿಳೆ ಹೇಳಿದಳು.
ಬಳಿಕ, ತಾನು ಮಾದಕ ದ್ರವ್ಯವನ್ನು ಸಾಗಿಸುತ್ತಿರುವುದನ್ನು ಆ ಮಹಿಳೆ ಒಪ್ಪಿಕೊಂಡಳು. ಅವಸರವಸರವಾಗಿ ಶಸ್ತ್ರಕ್ರಿಯೆ ನಡೆಸಿ ಆಕೆಯ ಸ್ತನಗಳೊಳಗೆ ಕೊಕೇನನ್ನು ಇಡಲಾಗಿತ್ತು.
ಬಳಿಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಆಕೆಯ ಎರಡೂ ಸ್ತನಗಳಿಂದ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದ ತಲಾ 500 ಗ್ರಾಂ ತೂಕದ ಕೊಕೇನ್ ಪೊಟ್ಟಣಗಳನ್ನು ತೆಗೆಯಲಾಯಿತು.
ಸ್ಪೇನ್‌ಗೆ ಸಾಗಿಸಲಾಗುತ್ತಿದ್ದ ಈ ಮಾದಕದ್ರವ್ಯದ ಮಾರುಕಟ್ಟೆ ವೌಲ್ಯ ಸುಮಾರು 1.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ.







