ಭಾರತ ಮೂಲದ ತಾಯಿ- ಮಗ ಅಮೆರಿಕದಲ್ಲಿ ಹತ್ಯೆ
ವಾಷಿಂಗ್ಟನ್, ಫೆ. 2: ಭಾರತ ಮೂಲದ ತಾಯಿ ಮತ್ತು ಮಗ ನಗರದ ವರ್ಜೀನಿಯಾ ಉಪನಗರದಲ್ಲಿ ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿದೆ.
ಮಾಲಾ ಮನ್ವಾನಿ (65) ಮತ್ತು ಅವರ ಪುತ್ರ ರಿಶಿ ಮನ್ವಾನಿ (32) ಹತ್ಯೆಗೀಡಾಗಿದ್ದು, ಅವರ ಹಂತಕರಿಗಾಗಿ ವ್ಯಾಪಕ ಶೋಧ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಟಾಮಿಕೋರ್ಟ್ನಲ್ಲಿ ವಾಸವಿರುವ ಸಹೋದ್ಯೋಗಿಯೊಬ್ಬರು ಒಂದು ವಾರದಿಂದ ಕೆಲಸಕ್ಕೆ ಬರುತ್ತಿಲ್ಲ ಎಂದು ಪೊಲೀಸರಿಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣ ಬಹಿರಂಗವಾಗಿದೆ.
"ಸಿಬ್ಬಂದಿ ಮನೆಯಲ್ಲಿ ಶೋಧ ನಡೆಸಿದಾಗ ಇಬ್ಬರು ಸತ್ತು ಬಿದ್ದಿರುವುದು ಕಂಡುಬಂದಿದೆ. ಬಹುಶಃ ಗುಂಡೇಟಿನಿಂದ ಇವರು ಮೃತಪಟ್ಟಿರುವ ಸಾಧ್ಯತೆ ಇದೆ" ಎಂದು ಲೌಡೊನ್ ಕೌಂಟಿ ಶೆರೀಫ್ ಕಚೇರಿ ಪ್ರಕಟಿಸಿದೆ. ಈ ಕೃತ್ಯದಿಂದ ಸಾರ್ವಜನಿಕರಿಗೆ ಯಾವುದೇ ಭೀತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ತಾಯಿ ಮತ್ತು ಮಗ ಮಾತ್ರ ಇಲ್ಲಿ ವಾಸವಿದ್ದರು.
Next Story