ಹಾಲಿವುಡ್ ನಟ ಜಾರ್ಜ್ ಕ್ಲೂನಿ, ಪತ್ನಿ ಅಮಲ್ ರಿಂದ ವಲಸಿಗ ಮಕ್ಕಳಿಗೆ 68 ಲಕ್ಷ ರೂ. ದೇಣಿಗೆ
ಲಾಸ್ ಏಂಜಲಿಸ್, ಜೂ. 21: ಹಾಲಿವುಡ್ ನಟ ಜಾರ್ಜ್ ಕ್ಲೂನಿ ಮತ್ತವರ ವಕೀಲೆ ಪತ್ನಿ ಅಮಲ್ ಕ್ಲೂನಿ ಜತೆಯಾಗಿ ತಮ್ಮ ಕ್ಲೂನಿ ಫೌಂಡೇಶನ್ ಫಾರ್ ಜಸ್ಟಿಸ್ ಮುಖಾಂತರ ಅಮೆರಿಕಾ-ಮೆಕ್ಸಿಕೋ ಗಡಿಯಲ್ಲಿ ತಮ್ಮ ಕುಟುಂಬಗಳಿಂದ ಪ್ರತ್ಯೇಕಗೊಳಿಸಲಾಗಿದ್ದ ವಲಸಿಗರ ಮಕ್ಕಳಿಗಾಗಿ ಅವರು ಆಶ್ರಯ ಪಡೆದಿರುವ ಯಂಗ್ ಸೆಂಟರ್ ಫಾರ್ ಇಮ್ಮಿಗ್ರೇಶನ್ ಚಿಲ್ಡ್ರನ್ಸ್ ರೈಟ್ಸ್ ಗೆ ಒಂದು ಲಕ್ಷ ಡಾಲರ್ ದೇಣಿಗೆ ನೀಡಿದ್ದಾರೆ.
‘‘ನಮ್ಮ ದೇಶ ನಿಜವಾಗಿಯೂ ಶಿಶುಗಳನ್ನು ತಮ್ಮ ಹೆತ್ತವರಿಂದ ಪ್ರತ್ಯೇಕಿಸಿ ಅವರನ್ನು ಬೇರೆ ಕಡೆ ಇರಿಸಿತ್ತೇ ? ಇದು ನಿಜವೇ ಎಂದು ಭವಿಷ್ಯದಲ್ಲಿ ಒಂದಲ್ಲಾ ಒಂದು ದಿನ ನಮ್ಮ ಮಕ್ಕಳು ನಮ್ಮನ್ನು ಕೇಳುತ್ತಾರೆ. ಆಗ ನಾವು ಹೌದು ಎಂದು ಉತ್ತರ ನೀಡುವಾಗ ಈ ವಿಚಾರದಲ್ಲಿ ನಾವೇನು ಮಾಡಿದ್ದೇವೆ ಎಂದು ಅವರು ನಮ್ಮನ್ನು ಕೇಳಬಹುದು. ನಾವೇನು ಹೇಳಿದ್ದೇವೆ ನಮ್ಮ ನಿಲುವೇನಾಗಿತ್ತು ಎಂದು ಅವರು ಕೇಳಬಹುದು. ನಾವು ಈ ಆಡಳಿತದ ನೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಆ ನೀತಿಯಿಂದ ಬಾಧಿತರಾದವರನ್ನು ಸಮರ್ಥಿಸಬಹುದು’’ ಎಂದು ಕ್ಲೂನಿ ದಂಪತಿ ಹೇಳಿದ್ದಾರೆ.
ಟ್ರಂಪ್ ಸರಕಾರದ ಹೊಸ ನೀತಿಯಂತೆ ಸುಮಾರು 2,000 ಮಕ್ಕಳನ್ನು ಎಪ್ರಿಲ್-ಮೇ ತಿಂಗಳ ಆರು ವಾರುಗಳ ಅವಧಿಯಲ್ಲಿ ಅವರ ಹೆತ್ತವರಿಂದ ಪ್ರತ್ಯೇಕಿಸಲಾಗಿತ್ತು. ಆದರೆ ಬುಧವಾರ ಇನ್ನೊಂದು ಆದೇಶದಲ್ಲಿ ಟ್ರಂಪ್ ಅವರು ವಲಸಿಗ ಕುಟುಂಬಗಳನ್ನು ಜತೆಯಾಗಿಡುವುದಾಗಿ ಹೇಳಿದ್ದಾರೆ.
ಕ್ಲೂನಿ ದಂಪತಿ ಈ ಹಿಂದೆ ಫೆಬ್ರವರಿಯಲ್ಲಿ ತಮ್ಮ ಎಂಟು ತಿಂಗಳ ಅವಳಿ ಮಕ್ಕಳಾದ ಎಲ್ಲಾ ಹಾಗೂ ಅಲೆಕ್ಸಾಂಡರ್ ಹೆಸರುಗಳಲ್ಲಿ 5 ಲಕ್ಷ ಡಾಲರ್ ಹಣವನ್ನು ಅಮೆರಿಕಾದಲ್ಲಿ ಕಠಿಣ ಬಂದೂಕು ಕಾನೂನುಗಳಿಗಾಗಿನ ಹೋರಾಟಕ್ಕೆ ದೇಣಿಗೆ ನೀಡಿದ್ದರು.