ಕೆನಡ: ಸಣ್ಣ ವಿಮಾನ ಪತನ; 7 ಮಂದಿ ಸಾವು
ಒಟ್ಟಾವ (ಕೆನಡ), ನ. 29: ಪೂರ್ವ ಕೆನಡದ ಒಂಟಾರಿಯೊ ಸರೋವರದ ಉತ್ತರದ ದಂಡೆಯಲ್ಲಿರುವ ಅರಣ್ಯ ಪ್ರದೇಶವೊಂದರಲ್ಲಿ ಬುಧವಾರ ಸಂಜೆ ಸಣ್ಣ ವಿಮಾನವೊಂದು ಪತನಗೊಂಡಿದೆ ಎಂದು ಕೆನಡದ ಸಾರಿಗೆ ಸುರಕ್ಷತಾ ಸಂಸ್ಥೆ ಗುರುವಾರ ತಿಳಿಸಿದೆ.
ಅಮೆರಿಕದಲ್ಲಿ ನೋಂದಾವಣೆಗೊಂಡಿರುವ ಏಕ ಇಂಜಿನ್ನ ಪೈಪರ್ ಪಿಎ-32 ವಿಮಾನವು ಟೊರಾಂಟೊದ ಬಟನ್ವಿಲ್ ವಿಮಾನ ನಿಲ್ದಾಣದಿಂದ ಒಂಟಾರಿಯೊದ ಕಿಂಗ್ಸ್ಟನ್ಗೆ ತೆರಳುತ್ತಿದ್ದ ವೇಳೆ, ಸ್ಥಳೀಯ ಸಮಯ ಸಂಜೆ 5 ಗಂಟೆಗೆ ನಾಪತ್ತೆಯಾಯಿತು.
ಬಳಿಕ ನಡೆದ ಶೋಧ ಕಾರ್ಯಾಚರಣೆಯ ವೇಳೆ, ಪತನಗೊಂಡ ವಿಮಾನವು ಅದು ತಲುಪಬೇಕಿದ್ದ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ಅಪಘಾತಕ್ಕೆ ಕಾರಣ ಗೊತ್ತಾಗಿಲ್ಲ.
Next Story