ತೈವಾನ್ನ ಪ್ರಜಾತಂತ್ರಕ್ಕೆ ಚೀನಾದ ನೇರ ಬೆದರಿಕೆ: ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಆತಂಕ
ತೈಪೆ, ಡಿ.29: ಸ್ವಯಮಾಡಳಿತ ಹೊಂದಿರುವ ತೈವಾನ್ನ ಪ್ರಜಾಪ್ರಭುತ್ವಕ್ಕೆ ಚೀನಾದಿಂದ ನೇರ ಬೆದರಿಕೆ ಎದುರಾಗಿದೆಯೆಂದು, ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ರವಿವಾರ ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾದ ಬೆದರಿಕೆಯನ್ನು ಎದುರಿಸಲು ತೈವಾನ್, ಅಮೆರಿಕ ಹಾಗೂ ಇತರ ರಾಷ್ಟ್ರಗಳ ಜೊತೆ ನಿಕಟವಾದ ಬಾಂಧವ್ಯವನ್ನು ತೈವಾನ್ ಬಲಪಡಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ತೈವಾನ್ನ ಪ್ರಮುಖ ಪ್ರತಿಪಕ್ಷ ನ್ಯಾಶನಲಿಸ್ಟ್ ಪಾರ್ಟಿಯ ನಾಯಕ ಹಾನ್ ಕ್ಯೊ ಯು ಹಾಗೂ ಹಿರಿಯ ರಾಜಕಾರಣಿ ಮತ್ತು ಪೀಪಲ್ಸ್ ಫಸ್ಟ್ ಪಾರ್ಟಿಯ ನಾಯಕ ಜೇಮ್ಸ್ ಸೂಂಗ್ ಜೊತೆ ಇಂದು ನಡೆದ ಟಿವಿ ಸಂವಾದದಲ್ಲಿ ಪಾಲ್ಗೊಂ ಸಂದರ್ಭದಲ್ಲಿ ತ್ಸಾಯಿ ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ತೈವಾನ್ನ ಅಧ್ಯಕ್ಷೀಯ ಹಾಗೂ ಶಾಸಕಾಂಗ ಚುನಾವಣೆ ಜನವರಿ 11ರಂದು ನಡೆಯಲಿದೆ.
ಚೀನಾದ ವಿಸ್ತರಣಾವಾದಿ ಮಹತ್ವಾಕಾಂಕ್ಷೆಯಿಂದಾಗಿ ತೈವಾನ್ ಅತ್ಯಂತ ಒತ್ತಡಕರವಾದ ಸವಾಲನ್ನು ಎದುರಿಸುತ್ತಿದೆ ಎಂದು ತ್ಸಾಯಿ ಕಳವಳ ವ್ಯಕ್ತಪಡಿಸಿದರು. ‘‘ನಮ್ಮ ಪ್ರದೇಶದಲ್ಲಿನ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹೆಚ್ಚು ಸಂಕೀರ್ಣವಾಗುತ್ತಾ ಹೋಗುತ್ತಿದೆ ಹಾಗೂ ತೈವಾನ್ನ ಸಾರ್ವಭೌಮತೆ, ಪ್ರಜಾತಂತ್ರವಾದಿ ಜೀವನಶೈಲಿಯನ್ನು ಕಸಿದುಕೊಳ್ಳುವ ಬೆದರಿಕೆ ಎದುರಾಗಿದೆ’’ ಎಂದವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ತೈವಾನ್ ತನ್ನ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಹಾಗೂ ಪ್ರಸಕ್ತ ಅದು ಅರ್ಥಿಕೆತೆಗೆ ಸಂಬಂಧಿಸಿ ಹಲವು ದೇಶಗಳ ಜೊತೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದವರು ಹೇಳಿದರು.