ಸಂಘಟಿತ ಪ್ರಯತ್ನ ನಡೆಸದಿದ್ದರೆ 20 ಲಕ್ಷ ಕೋವಿಡ್ ಸಾವು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಜಿನಿವಾ: ವಿಶ್ವದಲ್ಲಿ ಕೋವಿಡ್-19 ಸಾಂಕ್ರಾಮಿಕ ತಡೆಗೆ ಸಂಘಟಿತ ಪ್ರಯತ್ನ ನಡೆಯದಿದ್ದರೆ 20 ಲಕ್ಷಕ್ಕೂ ಅಧಿಕ ಮಂದಿ ಈ ಸೋಂಕಿಗೆ ಬಲಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ವಿಶ್ವಾದ್ಯಂತ ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಈ ಪರಿಸ್ಥಿತಿಯನ್ನು ಸಂಘಟಿತವಾಗಿ ನಿಭಾಯಿಸದಿದ್ದರೆ ಇನ್ನೂ 10 ಲಕ್ಷ ಸಾವುಗಳು ಸಂಭವಿಸಲಿದೆ ಎಂದು ಸ್ಪಷ್ಟಪಡಿಸಿದೆ.
"ಹತ್ತು ಲಕ್ಷ ಸಾವು ಎನ್ನುವುದು ಭಯಾನಕ ಸಂಖ್ಯೆ. ನಾವು ಎರಡನೇ ಹತ್ತು ಲಕ್ಷವನ್ನು ಪರಿಗಣಿಸುವ ಮೊದಲು ಇದನ್ನು ಎಚ್ಚರಿಕೆಯಿಂದ ಗಮನಿಸಬೇಕು" ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸ್ಥಿತಿಗಳ ವಿಭಾಗದ ನಿರ್ದೇಶಕ ಮೈಕೆಲ್ ರಿಯಾನ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಷ್ಟೊಂದು ದೊಡ್ಡ ಸಂಖ್ಯೆಯ ಸಾವನ್ನು ತಪ್ಪಿಸಲು ನಾವು ಸಂಘಟಿತರಾಗಿ ಸಜ್ಜಾಗಿದ್ದೇವೆಯೇ ಎನ್ನುವ ಬಗ್ಗೆ ಆತ್ಮವಿಮರ್ಶೆ ಅಗತ್ಯ ಎಂದರು.
ಕಳೆದ ಡಿಸೆಂಬರ್ನಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬಳಿಕ ಈ ವೈರಸ್ ಇದುವರೆಗೆ 9,84,068 ಮಂದಿಯನ್ನು ಬಲಿ ಪಡೆದಿದೆ. ಇದುವರೆಗೆ ಸುಮಾರು 3.23 ಕೋಟಿ ಮಂದಿಗೆ ಸೋಂಕು ತಗುಲಿದೆ.
ಅಮೆರಿಕ: 70 ಲಕ್ಷ ದಾಟಿದ ಕೊರೋನ ಸೋಂಕು
ವಾಶಿಂಗ್ಟನ್, ಸೆ. 26: ಅಮೆರಿಕದಲ್ಲಿ ದಾಖಲಾಗಿರುವ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಶುಕ್ರವಾರ 70 ಲಕ್ಷವನ್ನು ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ ಸಂಖ್ಯೆಗಳು ತಿಳಿಸಿವೆ.
ಇದು ದೇಶವೊಂದರಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆಯ ಸೋಂಕು ಪ್ರಕರಣಗಳಾಗಿವೆ. 58 ಲಕ್ಷ ಕೊರೋನ ವೈರಸ್ ಪ್ರಕರಣಗಳನ್ನು ಹೊಂದಿರುವ ಭಾರತವು ಎರಡನೇ ಸ್ಥಾನದಲ್ಲಿದೆ ಮತ್ತು 47 ಲಕ್ಷ ಸೋಂಕು ಪ್ರಕರಣಗಳೊಂದಿಗೆ ಬ್ರೆಝಿಲ್ 3ನೇ ಸ್ಥಾನದಲ್ಲಿದೆ.
ವಿಶ್ವವಿದ್ಯಾನಿಲಯದ ಅಂಕಿಅಂಶಗಳ ಪ್ರಕಾರ, ಅಮೆರಿಕದಲ್ಲಿ ಈ ಸಾಂಕ್ರಾಮಿಕದಿಂದಾಗಿ ಸತ್ತವರ ಸಂಖ್ಯೆ 2,03,240ಕ್ಕೆ ಏರಿದೆ. ಇದು ಕೂಡ ಜಗತ್ತಿನಲ್ಲೇ ಅತ್ಯಧಿಕವಾಗಿದೆ.