ಲಾಕ್ಡೌನ್ ಅವಧಿಯ ವಾಯು ಮಾಲಿನ್ಯ ಕುಸಿತ ಆಧುನಿಕ ಇತಿಹಾಸದಲ್ಲೇ ಗರಿಷ್ಠ: ಅಧ್ಯಯನ
ಪ್ಯಾರಿಸ್ (ಫ್ರಾನ್ಸ್), ಅ. 14: 2020ರ ಮೊದಲಾರ್ಧದಲ್ಲಿ ಜಗತ್ತಿನಾದ್ಯಂತ ವಿಧಿಸಲ್ಪಟ್ಟ ಕೊರೋನ ವೈರಸ್ ಪ್ರೇರಿತ ಲಾಕ್ಡೌನ್ನಿಂದಾಗಿ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ಅಭೂತಪೂರ್ವ ಮಟ್ಟದಲ್ಲಿ ಕುಸಿದಿತ್ತು ಎಂದು ಪರಿಣತರು ಬುಧವಾರ ಹೇಳಿದ್ದಾರೆ. ಈ ಕುಸಿತವು 2008ರ ಆರ್ಥಿಕ ಬಿಕ್ಕಟ್ಟು ಮತ್ತು ಎರಡನೇ ಮಹಾಯುದ್ಧದ ಅವಧಿಗಿಂತಲೂ ಹೆಚ್ಚಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ಸರಕಾರಗಳು ಲಾಕ್ಡೌನ್ ಘೋಷಿಸುತ್ತಿರುವಂತೆಯೇ, ಸಾರಿಗೆ, ವಿದ್ಯುತ್ ಉತ್ಪಾದನೆ ಮತ್ತು ವಿಮಾನಯಾನಗಳಿಂದ ಉತ್ಪಾದನೆಯಾಗುವ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣದಲ್ಲಿ ಭಾರೀ ಕಡಿತವಾಗಿದೆ ಎಂದು ಅಂತರ್ರಾಷ್ಟ್ರೀಯ ಸಂಶೋಧಕರ ತಂಡವೊಂದು ತಿಳಿಸಿದೆ.
400ಕ್ಕೂ ಅಧಿಕ ನಗರಗಳಲ್ಲಿನ ವಿದ್ಯುತ್ ಉತ್ಪಾದನೆ ಮತ್ತು ವಾಹನ ಸಂಚಾರ, ದೈನಂದಿನ ಪ್ರಯಾಣಿಕ ವಿಮಾನಗಳ ಹಾರಾಟ ಹಾಗೂ ದೈನಂದಿನ ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ವಿಶ್ಲೇಷಿರುವ ತಂಡವು, ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿನ ಪ್ರಮಾಣವು ಆಧುನಿಕ ಇತಿಹಾಸದಲ್ಲೇ ಗರಿಷ್ಠ ಎಂಬ ತೀರ್ಮಾನಕ್ಕೆ ಬಂದಿದೆ.