ಇಮ್ರಾನ್ ಸರಕಾರ ಸರ್ವಾಧಿಕಾರಕ್ಕಿಂತಲೂ ಕೆಟ್ಟದು: ಸರಕಾರ ವಿರೋಧಿ ರ್ಯಾಲಿಯಲ್ಲಿ ಪಾಕ್ ಪ್ರತಿಪಕ್ಷ ನಾಯಕರ ವಾಗ್ದಾಳಿ
ಕರಾಚಿ (ಪಾಕಿಸ್ತಾನ), ಅ. 19: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಸಮರ್ಥರಾಗಿದ್ದಾರೆ ಹಾಗೂ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ; ಅವರ ಸರಕಾರ ಸರ್ವಾಧಿಕಾರಕ್ಕಿಂತಲೂ ಕೆಟ್ಟದಾಗಿದೆ ಎಂದು ದೇಶದ ಪ್ರತಿಪಕ್ಷಗಳು ಹೇಳಿವೆ.
ಇಮ್ರಾನ್ ಖಾನ್ರನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕಾಗಿ ಸ್ಥಾಪನೆಗೊಂಡ ಪ್ರತಿಪಕ್ಷ ಒಕ್ಕೂಟ ‘ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್’ ರವಿವಾರ ನಡೆಸಿದ ಎರಡನೇ ಪ್ರತಿಭಟನಾ ಸಭೆಯಲ್ಲಿ ಪ್ರತಿಪಕ್ಷ ನಾಯಕರು ಈ ಆರೋಪಗಳನ್ನು ಮಾಡಿದ್ದಾರೆ.
11 ಪ್ರತಿಪಕ್ಷಗಳನ್ನು ಒಳಗೊಂಡ ಒಕ್ಕೂಟವು ಸೆಪ್ಟಂಬರ್ 20ರಂದು ಅಸ್ತಿತ್ವಕ್ಕೆ ಬಂದಿದ್ದು, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಸರಕಾರವನ್ನು ಉರುಳಿಸುವುದಕ್ಕಾಗಿ ಮೂರು ಹಂತಗಳ ಸರಕಾರ ವಿರೋಧಿ ಚಳವಳಿಯನ್ನು ಆರಂಭಿಸಿದೆ.
‘‘ದೇಶದಲ್ಲಿ ಏನು ನಡೆಯುತ್ತದೆ ಎಂಬ ಮಾಹಿತಿಯಿರದ ಈ ಅಸಮರ್ಥ ಪ್ರಧಾನಿ ಮನೆಗೆ ಹೋಗಲೇ ಬೇಕು’’ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಮುಖ್ಯಸ್ಥ ಬಿಲಾವಲ್ ಭುಟ್ಟೊ ಝರ್ದಾರಿ ಜಿನ್ನಾ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
‘‘ದೊಡ್ಡ ದೊಡ್ಡ ಸರ್ವಾಧಿಕಾರಿಗಳು ಉಳಿಯಲಿಲ್ಲ ಎನ್ನುವುದನ್ನು ಇತಿಹಾಸ ಸಾಧಿಸಿ ತೋರಿಸಿದೆ. ಇನ್ನು ಈ ಸೂತ್ರದ ಗೊಂಬೆ ಹೇಗೆ ಉಳಿಯುತ್ತದೆ’’ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ಮಾಡಿದ ಅವರು ಹೇಳಿದರು.
ಮರ್ಯಮ್ ಭಾಷಣದ ಗಂಟೆಗಳ ಬಳಿಕ ಗಂಡನ ಬಂಧನ
ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್) ಪಕ್ಷದ ನಾಯಕಿ ಮರ್ಯಮ್ ನವಾಝ್ ಶರೀಫ್ರ ಗಂಡ ಸಫ್ದರ್ ಅವನ್ರನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಪ್ರತಿಪಕ್ಷಗಳ ಒಕ್ಕೂಟ ರವಿವಾರ ಸರಕಾರದ ವಿರುದ್ಧ ಏರ್ಪಡಿಸಿದ ಸಮಾವೇಶದಲ್ಲಿ, ಮರ್ಯಮ್ ನವಾಝ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಹರಿಹಾಯ್ದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಮರ್ಯಮ್ ಮತ್ತು ಅವರ ಗಂಡ ತಂಗಿದ್ದ ಹೊಟೇಲ್ನಿಂದ ಅವರನ್ನು ಬಂಧಿಸಲಾಗಿದೆ.
‘‘ಕರಾಚಿಯಲ್ಲಿ ನಾವು ತಂಗಿದ್ದ ಹೊಟೇಲ್ ಕೋಣೆಗೆ ನುಗ್ಗಿದ ಪೊಲೀಸರು ನನ್ನ ಗಂಡ ಕ್ಯಾಪ್ಟನ್ ಸಫ್ದರ್ರನ್ನು ಬಂಧಿಸಿದ್ದಾರೆ’’ ಎಂದು ಮರ್ಯಮ್ ಸೋಮವಾರ ಮುಂಜಾನೆ ಟ್ವೀಟ್ ಮಾಡಿದ್ದಾರೆ.