ಚೀನಾ: ನಾಗರಿಕರಿಗೆ 60 ಡಾಲರ್ ವೆಚ್ಚದಲ್ಲಿ ಕೊರೋನ ಲಸಿಕೆ
ಬೀಜಿಂಗ್, ಅ. 21: ಚೀನಾದ ಝೆಜಿಯಾಂಗ್ ಪ್ರಾಂತದ ಶಾವೊಕ್ಸಿಂಗ್ ನಗರಾಡಳಿತವು ಆದ್ಯತಾ ಗುಂಪುಗಳಲ್ಲಿರದ ನಾಗರಿಕರಿಗೂ ಪ್ರಾಯೋಗಿಕ ಕೊರೋನ ವೈರಸ್ ಲಸಿಕೆಗಳನ್ನು ನೀಡಲಿದೆ.
18ರಿಂದ 59 ವರ್ಷವರೆಗಿನ ನಾಗರಿಕರು ಕೊರೋನ ವೈರಸ್ ಲಸಿಕೆಗಳನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನಗರದ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.
ಆದರೆ, ಅದು ಲಸಿಕೆಯ ಹೆಸರನ್ನು ಬಹಿರಂಗಪಡಿಸಿಲ್ಲ ಹಾಗೂ ಲಸಿಕೆ ನೀಡುವುದನ್ನು ಯಾವಾಗ ಆರಂಭಿಸಲಾಗುವುದು ಮತ್ತು ಎಷ್ಟು ಪ್ರಮಾಣದಲ್ಲಿ ನೀಡಲಾಗುವುದು ಎನ್ನುವುದನ್ನೂ ಅದು ತಿಳಿಸಿಲ್ಲ. ಆದರೆ, ಎರಡು ಡೋಸ್ ಲಸಿಕೆಗಳಿಗೆ 60 ಡಾಲರ್ (ಸುಮಾರು 4,423 ರೂಪಾಯಿ) ಪಾವತಿಸಬೇಕು ಎಂದು ಅದು ಹೇಳಿದೆ.
ಚೀನಾವು ಜುಲೈಯಲ್ಲಿ ‘ಲಸಿಕೆಯ ತುರ್ತು ಬಳಕೆ’ ಕಾರ್ಯಕ್ರಮವನ್ನು ಆರಂಭಿಸಿದಂದಿನಿಂದ ಆ ದೇಶದಲ್ಲಿ ಈವರೆಗೆ ಲಕ್ಷಾಂತರ ಪ್ರಾಯೋಗಿಕ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆ. ಆದರೆ, ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಯನ್ನು ಜನರಿಗೆ ನೀಡುತ್ತಿರುವ ಬಗ್ಗೆ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.
Next Story