ಫೈಝರ್-ಬಯೋಎನ್ಟೆಕ್ ಕೋವಿಡ್ ಲಸಿಕೆ ಬಳಕೆಗೆ ಅನುಮೋದಿಸಿದ ಬಹರೈನ್
ಮನಾಮ, ಬಹರೈನ್ : ಅಮೆರಿಕನ್ ಫಾರ್ಮಾ ಕಂಪೆನಿ ಫೈಝರ್, ಜರ್ಮನಿಯ ಬಯೋಎನ್ಟೆಕ್ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿರುವುದಾಗಿ ಬಹರೈನ್ ಶುಕ್ರವಾರ ಘೋಷಿಸಿದೆ. ಇದರೊಂದಿಗೆ ಈ ಲಸಿಕೆ ಬಳಕೆಗೆ ಬ್ರಿಟನ್ ನಂತರ ಅನುಮೋದನೆ ನೀಡಿದ ಎರಡನೇ ರಾಷ್ಟ್ರ ಬಹರೈನ್ ಆಗಿದೆ.
ಆದರೆ ಲಸಿಕೆ ಬಳಕೆ ಯಾವಾಗ ಆರಂಭಗೊಳ್ಳಲಿದೆ ಎಂಬುದರ ಕುರಿತು ಮೇಲಿನ ಮಾಹಿತಿ ನೀಡಿದ ರಾಷ್ಟ್ರೀಯ ಆರೋಗ್ಯ ನಿಯಂತ್ರಣಾ ಪ್ರಾಧಿಕಾರದ ಸಿಇಒ ಮರಿಯಮ್-ಅಲ್-ಜಲಹ್ಮ ತಿಳಿಸಿಲ್ಲ.
ಚೀನಾದ ಸಿನೋಫಾರ್ಮ್ ಲಸಿಕೆಯನ್ನು ಕೋವಿಡ್ ಹೋರಾಟದ ಮುಂಚೂಣಿಯಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರಿಗೆ ನೀಡಲು ಬಹರೈನ್ ನವೆಂಬರ್ ತಿಂಗಳಲ್ಲಿ ಅನುಮತಿ ನೀಡಿತ್ತು.
ಬಹರೈನ್ನಲ್ಲಿ ಇಲ್ಲಿಯ ತನಕ 87,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 341 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
Next Story