"ಕೊರೋನ ಕಾಲದಲ್ಲಿ ಅತಿ ಶ್ರೀಮಂತರು 3.9 ಟ್ರಿಲಿಯನ್ ಡಾಲರ್ ಗಳಿಸಿದರು, ಬಡವರು ಕೆಲಸ ಕಳೆದುಕೊಂಡು ಹಸಿವಿನಿಂದ ಬಳಲಿದರು"
ಆಕ್ಸ್ಫಾಮ್ ವರದಿ
ಸಾಂದರ್ಭಿಕ ಚಿತ್ರ
ಲಂಡನ್, ಜ. 25: ಕೊರೋನ ವೈರಸ್ ಸಾಂಕ್ರಾಮಿಕವು ಜಗತ್ತಿನಾದ್ಯಂತ ಶ್ರೀಮಂತರು ಮತ್ತು ಬಡವರ ನಡುವಿನ ಆದಾಯ ತಾರತಮ್ಯವನ್ನು ಗಟ್ಟಿಗೊಳಿಸಿದೆ ಹಾಗೂ ಆ ಮೂಲಕ ಉತ್ತಮ ಶಿಕ್ಷಣ, ಆರೋಗ್ಯ ಸೇವೆ ಮತ್ತು ಉತ್ತಮ ಜೀವನವನ್ನು ಪಡೆಯುವ ಕೋಟ್ಯಂತರ ಮಂದಿಯ ಕನಸನ್ನು ಛಿದ್ರಗೊಳಿಸಿದೆ.
ಜಗತ್ತಿನ ಅತಿ ಶ್ರೀಮಂತರು ವೈಭವೋಪೇತ ಜೀವನವನ್ನು ನಡೆಸಿದರೆ, ನೂರಾರು ಕೋಟಿ ಜನರು ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ ಎಂದು ಪರೋಪಕಾರಿ ಸಂಘಟನೆ ‘ಆಕ್ಸ್ಫಾಮ್’ ಸೋಮವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ. ಸ್ವಿಟ್ಸರ್ಲ್ಯಾಂಡ್ನ ಡಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಮ್ಮೇಳನದಲ್ಲಿ ಈ ವರದಿಯನ್ನು ಮಂಡಿಸಲಾಗುತ್ತದೆ.
‘ದ ಇನ್ಇಕ್ವಾಲಿಟಿ ವೈರಸ್’ ಎಂಬ ಶೀರ್ಷಿಕೆಯ ವರದಿಯು ದೋಷಪೂರಿತ ಹಾಗೂ ಶೋಷಣಾತ್ಮಕ ಆರ್ಥಿಕ ವ್ಯವಸ್ಥೆಗಳು; ಪುರುಷಪ್ರಧಾನ ಮತ್ತು ವ್ಯಾವಸ್ಥಿಕ ಜನಾಂಗೀಯ ತಾರತಮ್ಯ ಎಂಬ ಸ್ಥಾಪಿತ ಅಸಮಾನತೆ ಮತ್ತು ಶೋಷಕ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದೆ. ಇವುಗಳನ್ನು ‘ಅನ್ಯಾಯ ಮತ್ತು ಬಡತನದ ಮೂಲ ಕಾರಣಗಳು’ ಎಂಬುದಾಗಿ ವರದಿ ಗುರುತಿಸಿದೆ.
10 ಅತಿ ಶ್ರೀಮಂತರ ಸಂಪತ್ತಿನಲ್ಲಿ ಭಾರೀ ಹೆಚ್ಚಳ
‘‘ಜಾಗತಿಕ ಮಟ್ಟದಲ್ಲಿ, ಬಿಲಿಯಾಧೀಶರ ಸಂಪತ್ತು 2020ರ ಮಾರ್ಚ್ 18 ಮತ್ತು ಡಿಸೆಂಬರ್ 31ರ ನಡುವಿನ ಅವಧಿಯಲ್ಲಿ 3.9 ಟ್ರಿಲಿಯನ್ ಡಾಲರ್ (ಸುಮಾರು 285 ಲಕ್ಷ ಕೋಟಿ ರೂಪಾಯಿ)ನಷ್ಟು ಹೆಚ್ಚಿದೆ. ಈ ಅವಧಿಯಲ್ಲಿ ಜಗತ್ತಿನ 10 ಅತಿ ಶ್ರೀಮಂತ ಬಿಲಿಯಾಧೀಶರ ಸಂಪತ್ತಿನಲ್ಲಿ 540 ಬಿಲಿಯ ಡಾಲರ್ (ಸುಮಾರು 39.38 ಲಕ್ಷ ಕೋಟಿ ರೂಪಾಯಿ)ನಷ್ಟು ಹೆಚ್ಚಾಗಿದೆ’’ ಎಂದು ವರದಿ ತಿಳಿಸಿದೆ.
‘‘ಅದೇ ವೇಳೆ, ನೂರಾರು ಕೋಟಿ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಹಾಗೂ ಹಸಿವೆಯಿಂದ ಬಳಲಿದರು... ಈ ಅವಧಿಯಲ್ಲಿ ಬಡತನದಲ್ಲಿ ಬದುಕಿದ ಜನರ ಸಂಖ್ಯೆಯು 20ರಿಂದ 50 ಕೋಟಿಯಷ್ಟು ಹೆಚ್ಚಾಗಿರಬಹುದು’’ ಎಂದು ವರದಿ ಹೇಳಿದೆ.
ಪ್ರಯಾಣಕ್ಕೆ ಖಾಸಗಿ ವಿಮಾನಗಳನ್ನೇ ಖರೀದಿಸಿದರು
‘‘ಭೂಮಿಯಲ್ಲಿರುವ ಹೆಚ್ಚಿನ ಜನರು ದಿನಕ್ಕೆ 2ರಿಂದ (ಸುಮಾರು 145 ರೂಪಾಯಿ) 10 ಡಾಲರ್ (ಸುಮಾರು 730 ರೂಪಾಯಿ)ವರೆಗಿನ ಆದಾಯದಲ್ಲಿ ಬದುಕುವವರು. ಅವರಿಗೆ ಒಂದು ತಿಂಗಳ ವೇತನ ಸಿಗದಿದ್ದರೆ ಹಸಿವೆಯಿಂದ ಬಳಲುತ್ತಾರೆ’’ ಎಂದು ಆಕ್ಸ್ಫಾಮ್ ವರದಿ ತಿಳಿಸಿದೆ.
‘‘ವಾಣಿಜ್ಯ ವಿಮಾನಗಳನ್ನು ದೇಶಗಳು ನಿಷೇಧಿಸಿದಾಗ, ತಮ್ಮ ತಿಜೋರಿಯಲ್ಲಿ ಬಿಲಿಯಗಟ್ಟಳೆ ಡಾಲರ್ಗಳನ್ನು ಕೂಡಿ ಹಾಕಿರುವ ಅತಿ ಶ್ರೀಮಂತರು ಖಾಸಗಿ ವಿಮಾನಗಳನ್ನೇ ಖರೀದಿಸಿದರು’’ ಎಂದು ಅದು ಬೆಟ್ಟು ಮಾಡಿದೆ.