ಚೀನಾ ಹ್ಯಾಕರ್ ಗಳ ಗುಂಪು ಈಗಲೂ ಭಾರತದ ಬಂದರುಗಳನ್ನು ಟಾರ್ಗೆಟ್ ಮಾಡುತ್ತಿವೆ: ಅಮೆರಿಕನ್ ಸಂಸ್ಥೆ
ಹೊಸದಿಲ್ಲಿ: ಚೀನಾದ ಸರಕಾರ ಪ್ರವರ್ತಿತ ಹ್ಯಾಕರ್ ಗಳು ತೆರೆದಿರುವ ಕನಿಷ್ಠ ಒಂದು ಕನೆಕ್ಷನ್ ಭಾರತದ ಬಂದರಿನ ನೆಟ್ವರ್ಕ್ ವ್ಯವಸ್ಥೆಯಲ್ಲಿ ಈಗಲೂ ಸಕ್ರಿಯವಾಗಿದೆ ಎಂದು ಅಮೆರಿಕಾದ ರೆಕಾರ್ಡೆಡ್ ಫ್ಯೂಚರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟುವಾರ್ಟ್ ಸೊಲೊಮನ್ ಹೇಳಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಗ್ರಿಡ್ ವೈಫಲ್ಯದಿಂದ ಉಂಟಾದ ಭಾರೀ ವಿದ್ಯುತ್ ವ್ಯತ್ಯಯಕ್ಕೆ ಚೀನೀ ಹ್ಯಾಕರ್ಗಳು ಕಾರಣ ಎಂದು ಈ ಹಿಂದೆ ಇದೇ ಸಂಸ್ಥೆ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಚೀನೀ ಹ್ಯಾಕರ್ಗಳು ದೇಶದ ಒಂದು ಬಂದರಿನ ಜಾಲವನ್ನು ಬೇಧಿಸಿರುವ ಬಗ್ಗೆ ಹೇಳಿಕೊಂಡಿರುವ ಸಂಸ್ಥೆ ಚೀನಾ ನಂಟು ಹೊಂದಿದ ಹ್ಯಾಕರ್ಗಳು ಹಾಗೂ ಭಾರತದ ಒಂದು ಬಂದರಿನ ನಡುವೆ ಟ್ರಾಫಿಕ್ ಎಕ್ಸ್ ಚೇಂಜ್ ಆಗಿದೆ ಎಂಬುದನ್ನು ಸೂಚಿಸುವ ಅಂಶ ಕಾಣುತ್ತಿದೆ ಎಂದು ಹೇಳಿದೆ.
ಈ ಹ್ಯಾಕಿಂಗ್ ಗುಂಪನ್ನು ರೆಡ್ ಇಕೋ ಎಂದು ಗುರುತಿಸುವ ರೆಕಾರ್ಡೆಡ್ ಫ್ಯೂಚರ್, ಈ ಗುಂಪು ದೇಶದ ಪವರ್ ಗ್ರಿಡ್ ಅಧೀನದಲ್ಲಿರುವ 10 ಸಂಸ್ಥೆಗಳು ಹಾಗೂ ಎರಡು ಬಂದರುಗಳನ್ನು ಟಾರ್ಗೆಟ್ ಮಾಡಿತ್ತು ಎಂದು ಹೇಳಿದೆ.
ಸಂಸ್ಥೆಯ ಲೇಟೆಸ್ಟ್ ಮಾಹಿತಿ ಕುರಿತಂತೆ ದೇಶದ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ ಇಲ್ಲಿಯ ತನಕ ಪ್ರತಿಕ್ರಿಯಿಸಿಲ್ಲ. ಇನ್ನೊಂದೆಡೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿ ಯಾವುದೇ ಆಧಾರವಿಲ್ಲದೆ ಒಂದು ನಿರ್ದಿಷ್ಟ ಕಡೆಯ ಮೇಲೆ ಈ ರೀತಿ ಅಪವಾದ ಹೊರಿಸುವುದು ಬೇಜವಾಬ್ದಾರಿಯುತ ಹಾಗೂ ದುರುದ್ದೇಶದಿಂದ ಕೂಡಿದ ಕ್ರಮ ಎಂದು ಹೇಳಿದ್ದಾರೆ.
ಬೇಜವಾಬ್ದಾರಿಯುತ ವರ್ತನೆ: ಚೀನಾ
‘‘ಯಾವುದೇ ಪುರಾವೆಯಿಲ್ಲದೆ, ಒಂದು ದೇಶದ ಮೇಲೆ ಆರೋಪ ಹೊರಿಸುವುದು ಬೇಜವಾಬ್ದಾರಿಯುತ ಹಾಗೂ ದುರುದ್ದೇಶದ ವರ್ತನೆಯಾಗಿದೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಬುಧವಾರ ಬೀಜಿಂಗ್ನಲ್ಲಿ ಹೇಳಿದರು.