ಇರಾನ್: ನೂತನ ಅಧ್ಯಕ್ಷರಾಗಿ ಇಬ್ರಾಹೀಮ್ ರೈಸಿ ಆಯ್ಕೆ
ಟೆಹರಾನ್, ಜೂ. 19: ಇರಾನ್ ನಲ್ಲಿ ಶುಕ್ರವಾರ ಅಧ್ಯಕ್ಷೀಯ ಚುನಾವಣೆ ನಡೆದಿದ್ದು, ಧರ್ಮಗುರು ಇಬ್ರಾಹೀಮ್ ರೈಸಿ ವಿಜಯಿಯಾಗಿದ್ದಾರೆ ಎಂದು ಶನಿವಾರ ಘೋಷಿಸಲಾಗಿದೆ. ಹಲವು ಹಿರಿಯ ರಾಜಕೀಯ ನಾಯಕರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ, ಜನರು ಇದೇ ಫಲಿತಾಂಶವನ್ನು ನಿರೀಕ್ಷಿಸಿದ್ದರು.
ಚಲಾವಣೆಯಾದ ಮತಗಳ 90 ಶೇಕಡ ಎಣಿಕೆ ಮುಗಿದಿದ್ದು, ರೈಸಿ 62 ಶೇಕಡ ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಇತರ ಮೂವರು ಅಭ್ಯರ್ಥಿಗಳು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.
‘‘ಜನರು ಮಾಡಿರುವ ಆಯ್ಕೆಗಾಗಿ ನಾನು ಜನರನ್ನು ಅಭಿನಂದಿಸುತ್ತೇನೆ’’ ಎಂದು ನಿರ್ಗಮನ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ. ಅವರು ನಾಲ್ಕು ವರ್ಷಗಳ ನಿರಂತರ ಎರಡು ಅವಧಿಗಳಲ್ಲಿ ದೇಶದ ಅಧ್ಯಕ್ಷರಾಗಿದ್ದು, ಆಗಸ್ಟ್ ನಲ್ಲಿ ನಿರ್ಗಮಿಸುತ್ತಿದ್ದಾರೆ.
ಪ್ರಬಲ ದೇಶಗಳೊಂದಿಗೆ ಇರಾನ್ ಮಾಡಿಕೊಂಡಿರುವ ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳಲು ಇರಾನ್ ಪರದಾಡುತ್ತಿರುವ ಸಂಧಿಗ್ಧ ಸಮಯದಲ್ಲಿ 60 ವರ್ಷದ ರೈಸಿ ಇರಾನ್ ನ ಆಡಳಿತದ ಸೂತ್ರವನ್ನು ವಹಿಸಿಕೊಳ್ಳುತತಿದ್ದಾರೆ.