ಚೀನಾದಲ್ಲಿ ಡೆಲ್ಟಾ ಸೋಂಕು ಉಲ್ಬಣ ಹಿನ್ನೆಲೆ: ಕರ್ತವ್ಯ ಲೋಪದ ಆರೋಪದಲ್ಲಿ 30 ಅಧಿಕಾರಿಗಳಿಗೆ ಶಿಕ್ಷೆ
ಬೀಜಿಂಗ್, ಆ.9: ಚೀನಾದಲ್ಲಿ ಇತ್ತೀಚೆಗೆ ಕೊರೋನ ಸೋಂಕಿನ ಡೆಲ್ಟಾ ರೂಪಾಂತರ ಮತ್ತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ, ಸೋಂಕು ನಿಯಂತ್ರಣದ ಬಗ್ಗೆ ಸೂಕ್ತವಾಗಿ ಕಾರ್ಯನಿರ್ವಹಿಸದ ಆರೋಪದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳಿಗೆ ವಜಾ ಸೇರಿದಂತೆ ತೀವ್ರ ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಉಪಮೇಯರ್, ಜಿಲ್ಲಾಕೇಂದ್ರಗಳ ಮತ್ತು ಆರೋಗ್ಯ ಕೇಂದ್ರಗಳ ಮುಖ್ಯಸ್ಥರು, ಆಸ್ಪತ್ರೆ, ವಿಮಾನನಿಲ್ದಾಣ , ಪ್ರವಾಸೋದ್ಯಮ ವಿಭಾಗದ ಅಧಿಕಾರಿಗಳು ವಜಾಗೊಂಡವರಲ್ಲಿ ಸೇರಿದ್ದಾರೆ. ಚೀನಾದಲ್ಲಿ ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆ ಅವಧಿಯಲ್ಲಿ ಕೊರೋನ ಸೋಂಕಿನ ಡೆಲ್ಟಾ ರೂಪಾಂತರದ 94 ಹೊಸ ಪ್ರಕರಣ ದಾಖಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ಮಾಡಿದೆ.
ನಾಂಜಿಂಗ್ ನಗರದ ವಿಮಾನನಿಲ್ದಾಣದ ಕೆಲಸಗಾರರ ಮೂಲಕ ಸೋಂಕು ಹರಡಿದೆ. ದಕ್ಷಿಣದ ಹೆನಾನ್ ಪ್ರಾಂತ್ಯ ಮತ್ತು ಉತ್ತರದ ಮಂಗೋಲಿಯಾದಲ್ಲಿ ಡೆಲ್ಟಾ ಸೋಂಕು ಪ್ರಕರಣ ಹೆಚ್ಚಿದೆ. ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಮಾರು 1.5 ಮಿಲಿಯನ್ ಜನಸಂಖ್ಯೆಯಿರುವ ಝಾಂಗ್ಜೈಜೆ ನಗರವನ್ನು ಸೀಲ್ಡೌನ್ ಮಾಡಲಾಗಿದ್ದರೆ, ಕೆಲವೆಡೆ ಲಾಕ್ಡೌನ್ ಜಾರಿಯಾಗಿದೆ. ವಿಮಾನಪ್ರಯಾಣ ನಿರ್ಬಂಧವನ್ನು ಪರಿಷ್ಕರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.