ಪತ್ರಕರ್ತ ದಾನಿಶ್ ಸಿದ್ದೀಕಿ ನಮ್ಮ ಅನುಮತಿ ಕೇಳಿರಲಿಲ್ಲ: ತಾಲಿಬಾನ್
"ನಾವು ಮೃತದೇಹವನ್ನು ಛಿದ್ರಗೊಳಿಸಿಲ್ಲ"

photo : PTI
ಹೊಸದಿಲ್ಲಿ, ಆ.13: ಫೋಟೊಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಅವರು ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾರೆ ಮತ್ತು ತಾಲಿಬಾನ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಅವರು ತಪ್ಪು ಮಾಡಿದ್ದರು ಎಂದು ಕತರ್ ನ ದೋಹಾದಲ್ಲಿನ ತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರ ಮುಹಮ್ಮದ್ ಸೊಹೈಲ್ ಶಾಹೀನ್ ಶುಕ್ರವಾರ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ಈಗಾಗಲೇ ಅಫಘಾನಿಸ್ತಾನದ ಶೇ.80ರಷ್ಟು ಭಾಗವನ್ನು ವಶಪಡಿಸಿಕೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ತಾಲಿಬಾನ್ ಹೋರಾಟಗಾರರಿಂದ ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿರುವ ದಾನಿಶ್ ಸಿದ್ದೀಕಿ ಸಾವಿನ ಕುರಿತು ಪ್ರಶ್ನೆಗೆ ಉತ್ತರಿಸಿದ ಶಾಹೀನ್,‘ನಮ್ಮ ಹೋರಾಟಗಾರರು ಅವರನ್ನು ಕೊಂದಿದ್ದಾರೆ ಎಂದು ನೀವು ಹೇಳುವಂತಿಲ್ಲ. ಅವರು ನಮ್ಮೊಂದಿಗೆ ಏಕೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಎಂದು ಕೇಳಿ. ಪತ್ರಕರ್ತರು ನಮ್ಮ ಸ್ಥಳಗಳಿಗೆ ಬಂದಾಗ ದಯವಿಟ್ಟು ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಮತ್ತು ನಾವು ಅವರಿಗೆ ಭದ್ರತೆಯನ್ನು ಒದಗಿಸುತ್ತೇವೆಂದು ನಾವು ಹಲವಾರು ಬಾರಿ ಪ್ರಕಟಿಸಿದ್ದೇವೆ. ಆದರೆ ಸಿದ್ದಿಕಿ ಅಫಘಾನಿಸ್ತಾನದ ಭದ್ರತಾ ಪಡೆಗಳೊಂದಿಗೆ ಸೇರಿಕೊಂಡಿದ್ದರು. ಭದ್ರತಾ ಸಿಬ್ಬಂದಿಯಾಗಿರಲಿ, ಬಂಡುಕೋರರಾಗಿರಲಿ, ಕಾಬೂಲಿನ ಸೈನಿಕರಾಗಿರಲಿ ಅಥವಾ ಪತ್ರಕರ್ತರೇ ಆಗಿರಲಿ, ಗುಂಡಿಗೆ ಯಾವುದೇ ವ್ಯತ್ಯಾಸವಿಲ್ಲ. ದಾನಿಶ್ ಸಿದ್ದೀಕಿ ಗುಂಡಿನ ವಿನಿಮಯದಲ್ಲಿ ಕೊಲ್ಲಲ್ಪಟ್ಟಿದ್ದಾರೆ, ಹೀಗಾಗಿ ಯಾರ ಗುಂಡು ಅವರನ್ನು ಕೊಂದಿತ್ತು ಎನ್ನುವುದು ಗೊತ್ತಿಲ್ಲ ’ಎಂದು ಹೇಳಿದರು.
ತಾಲಿಬಾನಿಗಳು ದಾನಿಶ್ ಸಿದ್ದೀಕಿಯವರನ್ನು ಸೆರೆ ಹಿಡಿದಿದ್ದರು, ಅವರನ್ನು ಹತ್ಯೆ ಮಾಡಿದ್ದರು ಮತ್ತು ಅವರ ಶವವನ್ನು ಛಿದ್ರವಿಚ್ಛಿದ್ರಗೊಳಿಸಿದ್ದರು ಎಂಬ ವರದಿಗಳನ್ನು ತಿರಸ್ಕರಿಸಿದ ಶಾಹೀನ್,‘ನಾವು ಶವವನ್ನು ಛಿದ್ರವಿಚ್ಛಿದ್ರಗೊಳಿಸಿದ ಆರೋಪವನ್ನು ಈಗಾಗಲೇ 2-3 ಬಾರಿ ನಿರಾಕರಿಸಿದ್ದೇವೆ. ಅದು ನಮ್ಮ ನೀತಿಯಲ್ಲ. ನಮ್ಮ ಹೆಸರು ಕೆಡಿಸಲು ಭದ್ರತಾ ಪಡೆಗಳು ಅದನ್ನು ಮಾಡಿರಬಹುದು. ಮೃತದೇಹಗಳನ್ನು ಛಿದ್ರವಿಚ್ಛಿದ್ರಗೊಳಿಸುವುದು ಇಸ್ಲಾಮಿನ ನಿಯಮಗಳಿಗೆ ವಿರುದ್ಧವಾಗಿದೆ ’ಎಂದರು.
ಪತ್ರಕರ್ತರು ತಾಲಿಬಾನ್ ಅನ್ನು ಸಂಪರ್ಕಿಸಿದರೆ ಸಾಕೇ? ಅವರಿಗೆ ಘಟನಾ ಸ್ಥಳಗಳಿಂದ ವರದಿ ಮಾಡಲು ಅವಕಾಶ ನೀಡಲಾಗುವುದೇ ಎಂಬ ಪ್ರಶ್ನೆಗೆ ಶಾಹೀನ್, ‘ವಿಶ್ವಾದ್ಯಂತದ ಪತ್ರಕರ್ತರು ನಮ್ಮ ಪ್ರದೇಶಗಳಿಗೆ ಬಂದು ವರದಿ ಮಾಡಲು ಬಯಸಿದರೆ ಅವರು ಹಾಗೆ ಮಾಡಬಹುದು. ತಳಮಟ್ಟದ ವಾಸ್ತವಗಳನ್ನು ಕಣ್ಣಾರೆ ಕಾಣಲು ಅವರು ನಮ್ಮ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯಬಹುದು ’ಎಂದು ಉತ್ತರಿಸಿದರು.







