ಅಫ್ಘಾನ್: ಮಾನವಹಕ್ಕು ಹೋರಾಟಗಾರ್ತಿ ಸಹಿತ ನಾಲ್ವರ ಹತ್ಯೆ; ಇಬ್ಬರ ಬಂಧನ
ಕಾಬೂಲ್,ನ.6: ಅಫ್ಘಾನಿಸ್ತಾನದ ಉತ್ತರ ಭಾಗದ ನಗರ ಮಝರೆ ಶರೀಫ್ನಲ್ಲಿ ಮಾನವಹಕ್ಕು ಹೋರಾಟಗಾರ್ತಿ ಸೇರಿದಂತೆ ನಾಲ್ವರು ಮಹಿಳೆಯರ ಹತ್ಯೆಯಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಈ ನಾಲ್ವರು ಮಹಿಳೆಯರ ಮೃತದೇಹಗಳು ನಗರದ ಮನೆಯೊಂದರಲ್ಲಿ ಪತ್ತೆಯಾಗಿದ್ದವು ಎಂದು ತಾಲಿಬಾನ್ನ ಆಂತರಿಕ ಸಚಿವಾಲಯದ ವಕ್ತಾರ ಖ್ವಾರಿ ಸಯ್ಯದ್ ಖೋಸ್ತಿ ತಿಳಿಸಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದವರು ತಿಳಿಸಿದರು.
ಬಂಧಿತ ಆರೋಪಿಗಳು ಈ ಮಹಿಳೆಯರನ್ನು ಮನೆಗೆ ಆಹ್ವಾನಿಸಿದ್ದರೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪ್ರಕರಣವನ್ನು ನ್ಯಾಯಾಲಯದ ವಿಚಾರಣೆಗೆ ಒಪ್ಪಿಸಲಾಗುವುದು ಎಂದು ಖ್ವಾರಿ ಸಯೀದ್ ಖೋಸ್ತಿ ತಿಳಿಸಿದರು.
ಖೋಸ್ತಿ ಅವರು ಮೃತರ ಹೆಸರುಗಳನ್ನು ಬಹಿರಂಗಪಡಿಸಿಲ್ಲವಾದರೂ, ಹತ್ಯೆಗೀಡಾದವರಲ್ಲಿ ಒಬ್ಬಾಕೆ ಮಾನವಹಕ್ಕುಗಳ ಹೋರಾಟಗಾರ್ತಿ ಹಾಗೂ ವಿವಿ ಉಪನ್ಯಾಸಕಿ ಫಿರೋಝಾನ್ ಸಾಫಿ ಎಂದು ಮಝರೆ ಶರೀಫ್ನಲ್ಲಿ ಅಂತರಾಷ್ಟ್ರೀಯ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ವಿದೇಶಕ್ಕೆ ಸುರಕ್ಷಿತವಾಗಿ ತೆರಳಲು ತಾನು ನಡೆಸುತ್ತಿರುವ ಪ್ರಯತ್ನಗಳಿಗೆ ನೆರವಾಗುವುದಾಗಿ ಸೋಗಿನಲ್ಲಿ ಮೂರು ವಾರಗಳ ಹಿಂದೆ ತನಗೂ ಯಾರೋ ಒಬ್ಬರು ಕರೆ ಮಾಡಿದ್ದರೆಂದು ಆಕೆ ಹೇಳಿದ್ದಾರೆ. ಆತನಿಗೆ ತನ್ನ ಕುರಿತಾದ ಎಲ್ಲಾ ಮಾಹಿತಿಗಳು ತಿಳಿದಿದ್ದವು ಹಾಗೂ ಆತ ತನ್ನ ದಾಖಲೆಗಳನ್ನು ಕಳುಹಿಸುವಂತೆ ಸೂಚಿಸಿದ್ದ. ಇದರಿಂದ ಸಂಶಯಗೊಂಡ ಮಹಿಳೆಯ ಆತನ ದೂರವಾಣಿ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು. ಆವಾಗಿನಿಂದ ತಾನು ನಿರಂತರವಾದ ಭೀತಿಯಲ್ಲಿ ಬದುಕುತ್ತಿರುವುದಾಗಿ ಆ ಮಹಿಳೆ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಮಾನವ ಹಾಗೂ ಮಹಿಳಾ ಹಕ್ಕು ಹೋರಾಟಗಾರರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.