ಜರ್ಮನಿ: ಕೊರೋನ ಸೋಂಕಿನ ಆವರ್ತನ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಬರ್ಲಿನ್, ನ.8: ಜರ್ಮನಿಯಲ್ಲಿ ಕಳೆದ 7 ದಿನದಲ್ಲಿ ಕೊರೋನ ಸೋಂಕಿನ ಹೊಸ ಪ್ರಕರಣಗಳ ಆವರ್ತನ ಪ್ರಮಾಣದಲ್ಲಿ ಹಠಾತ್ತಾಗಿ ಏರಿಕೆ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತೀ 1 ಲಕ್ಷ ಜನರಲ್ಲಿ ಸೋಂಕಿತರ ಪ್ರಮಾಣ ಕಳೆದ 7 ದಿನದಲ್ಲಿ 201.1ಕ್ಕೆ ಏರಿದ್ದು ಒಂದು ವರ್ಷಕ್ಕೂ ಹಿಂದೆ ಕೊರೋನ ಸೋಂಕು ಆರಂಭಗೊಂಡಿದ್ದ ಬಳಿಕ ದಾಖಲಾಗಿರುವ ಅತ್ಯಧಿಕ ಪ್ರಕರಣ ಇದಾಗಿದೆ. 2020ರ ಡಿಸೆಂಬರ್ 22ರಂದು ಈ ಪ್ರಮಾಣ 197.6ಕ್ಕೆ ತಲುಪಿದ್ದು ಇದುವರೆಗಿನ ದಾಖಲೆಯಾಗಿದೆ ಎಂದು ಜರ್ಮನಿಯ ರಾಬರ್ಟ್ ಕಾಚ್ ಇನ್ಸ್ಟಿಟ್ಯೂಟ್(ಆರ್ಕೆಐ) ಅಂಕಿಅಂಶ ಸಹಿತ ವರದಿ ಪ್ರಕಟಿಸಿದೆ.
ಜರ್ಮನಿಯಲ್ಲಿ ಲಸಿಕೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ಮುಂದುವರಿದಿದ್ದು ದೇಶದ ಸುಮಾರು 70% ಜನತೆ ಮಾತ್ರ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯುವಂತೆ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡುತ್ತಿದ್ದರೂ ಈ ಬಗ್ಗೆ ಕೆಲವರು ನಿರಾಸಕ್ತಿ ತೋರಿದ್ದಾರೆ. ಲಸಿಕೆ ಪಡೆಯದವರಿಗೆ ಮುಂದಿನ ದಿನದಲ್ಲಿ ಸೋಂಕು ತಗುಲುವ ಸಂಭವ ಅಧಿಕವಾಗಿದೆ ಎಂದು ಆರ್ಕೆಐ ಮುಖ್ಯಸ್ಥ ಲೊಥಾರ್ ವೀಲರ್ ಎಚ್ಚರಿಸಿದ್ದಾರೆ.
ಪೂರ್ವದ ಸ್ಯಾಕ್ಸೊನಿ ರಾಜ್ಯದಲ್ಲಿ ಕೊರೋನ ಸೋಂಕಿನ ಆವರ್ತನ ಪ್ರಮಾಣವು ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಜಾರಿಗೆ ಬರುವಂತೆ ಲಸಿಕೆ ಪಡೆಯದ ಜನರಿಗೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಸೋಂಕಿನ ವಿರುದ್ಧದ ಪೂರ್ಣ ಪ್ರಮಾಣದ ಲಸಿಕೆ ಪಡೆದವರು ಅಥವಾ ಸೋಂಕಿನಿಂದ ಚೇತರಿಸಿಕೊಂಡ ಪುರಾವೆ ಒದಗಿಸುವವರಿಗೆ ಮಾತ್ರ ರೆಸ್ಟಾರೆಂಟ್, ಹೋಟೆಲ್ಗಳಲ್ಲಿ ಉಪಾಹಾರ ಸೇವಿಸಲು ಅವಕಾಶವಿದೆ . ಮಕ್ಕಳಿಗೆ ಮತ್ತು ವೈದ್ಯಕೀಯ ಕಾರಣಗಳಿಂದ ಲಸಿಕೆ ಪಡೆಯದವರಿಗೆ ಈ ನಿರ್ಬಂಧದಿಂದ ವಿನಾಯಿತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ
.
ಈ ಮಧ್ಯೆ, ದೇಶದಲ್ಲಿ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸುವ ಯಾವುದೇ ಉದ್ದೇಶವಿಲ್ಲ, ಅಲ್ಲದೆ ಲಾಕ್ಡೌನ್ ಜಾರಿಗೊಳಿಸುವುದಿಲ್ಲ ಎಂದು ಡಿಸೆಂಬರ್ನಲ್ಲಿ ನೂತನ ಸರಕಾರ ರಚಿಸಲು ಸನ್ನದ್ಧರಾಗಿರುವ ಮೈತ್ರಿಕೂಟ ಸ್ಪಷ್ಟಪಡಿಸಿದೆ.