ಕೊರೋನ ಸೋಂಕು ಮತ್ತೆ ಹೆಚ್ಚಳ ಆಂಶಿಕ ಲಾಕ್ಡೌನ್ ಘೋಷಿಸಿದ ಆಸ್ಟ್ರಿಯಾ
ಸಾಂದರ್ಭಿಕ ಚಿತ್ರ
ವಿಯೆನ್ನಾ, ನ.22: ಕೊರೋನ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಆಸ್ಟ್ರಿಯಾದಲ್ಲಿ ಮತ್ತೆ ಆಂಶಿಕ ಲಾಕ್ಡೌನ್ ಘೋಷಿಸಲಾಗಿದ್ದು, ಪ್ರತಿಯೊಬ್ಬರೂ ಲಸಿಕೆ ಕಡ್ಡಾಯ ಎಂಬ ನಿಯಮವನ್ನು ಫೆಬ್ರವರಿ 1ರಿಂದ ಜಾರಿಗೊಳಿಸುವುದಾಗಿ ಅಲ್ಲಿನ ಸರಕಾರ ಹೇಳಿದೆ. ಲಸಿಕೀಕರಣ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ, ಆಸ್ಟ್ರಿಯಾದಲ್ಲಿ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಲಾಯಿತು. ಆದರೂ ಜನತೆ ಲಸಿಕೆ ಪಡೆಯಲು ಹೆಚ್ಚಿನ ಆಸಕ್ತಿ ತೋರದ ಕಾರಣ ಈಗ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಲಾಗಿದ್ದು, 10 ದಿನದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಾನ್ಸಲರ್ ಅಲೆಕ್ಸಾಂಡರ್ ಷಲೆನ್ಬರ್ಗ್ ಘೋಷಿಸಿದ್ದಾರೆ.
ಸೋಮವಾರ ಅಂಗಡಿ, ಹೋಟೆಲ್ಗಳು ಹಾಗೂ ಹಬ್ಬದ ಮಾರುಕಟ್ಟೆ ಮುಚ್ಚಲಾಗುವುದು. ಕೆಲಸಕ್ಕೆ ಹೋಗುವವರು, ಅಗತ್ಯ ವಸ್ತುಗಳ ಖರೀದಿಗೆ ತೆರಳುವವರು ಮಾತ್ರ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿದೆ. ಶಾಲೆಗಳು ಹಾಗೂ ನರ್ಸರಿ ಶಾಲೆಗಳು ತೆರೆದಿರುತ್ತವೆ, ಆದರೆ ಸಾಧ್ಯವಾದರೆ ಮಕ್ಕಳನ್ನು ಮನೆಯಲ್ಲೇ ಇರಿಸಿಕೊಳ್ಳುವಂತೆ ಪೋಷಕರಿಗೆ ಸೂಚಿಸಲಾಗಿದೆ. ಇದು ಅತ್ಯಂತ ಗೊಂದಲದ ಪರಿಸ್ಥಿತಿ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರಿಯಾ ಸರಕಾರ ಕೊರೋನ ಸೋಂಕನ್ನು ನಿಯಂತ್ರಿಸಲಾಗಿದೆ ಎಂಬ ಕಟ್ಟುಕತೆಯನ್ನು ಹೇಳುತ್ತಾ ಬಂದಿದ್ದು , ಮುಂದಿನ ಅಲೆ ಅಪ್ಪಳಿಸಲಿದೆ ಎಂಬ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ.
ಈಗಿನ ಗೊಂದಲ ನಿರೀಕ್ಷಿತ ಎಂದು ರಾಜಕೀಯ ವಿಶ್ಲೇಷಕ ಥಾಮಸ್ ಹಾಫರ್ ಟೀಕಿಸಿದ್ದಾರೆ. ಆಸ್ಟ್ರಿಯಾದಲ್ಲಿ ಇನ್ನು ಮುಂದೆ ಕಠಿಣ ನಿರ್ಬಂಧ ಜಾರಿಯಾಗದು ಎಂದು ಮೇ ತಿಂಗಳಿನಲ್ಲಿ ಅಂದಿನ ಚಾನ್ಸಲರ್ ಸೆಬಾಸ್ಟಿಯನ್ ಕರ್ಜ್ ಘೋಷಿಸಿದ್ದರು. ಆದರೆ ಲಸಿಕೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ಮುಂದುವರಿದ ಕಾರಣ ದೇಶದಲ್ಲಿ ಸೋಂಕು ಪ್ರಕರಣ ಕ್ರಮೇಣ ಹೆಚ್ಚುತ್ತಿದೆ. ಅಕ್ಟೋಬರ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದ ನೂತನ ಚಾನ್ಸಲರ್ ಅಲೆಕ್ಸಾಂಡರ್ ಷಲೆನ್ಬರ್ಗ್, ದೇಶದ ಲಸಿಕೀಕರಣ ಪ್ರಮಾಣ ಅತ್ಯಂತ ನಾಚಿಕೆಗೇಡು ಎಂದು ಟೀಕಿಸಿದ್ದರು. ಅಕ್ಟೋಬರ್ ವೇಳೆ ಆಸ್ಟ್ರಿಯಾದಲ್ಲಿ ಲಸಿಕೀಕರಣ ಪ್ರಮಾಣ 66% ಆಗಿದ್ದರೆ, ಫ್ರಾನ್ಸ್ನಲ್ಲಿ 75% ಮಂದಿ ಲಸಿಕೆ ಹಾಕಿಸಿಕೊಂಡಿದ್ದರು. ಈ ಮಧ್ಯೆ, ಕೊರೋನ ವಿರುದ್ಧದ ನಿರ್ಬಂಧಗಳನ್ನು ವಿರೋಧಿಸಿ ಯುರೋಪ್ ನ ಹಲವು ದೇಶಗಳಲ್ಲಿ ಜನತೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಸ್ಟ್ರಿಯಾದ ವಿಯೆನ್ನಾದಲ್ಲಿ ಶನಿವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸುಮಾರು 40,000 ಜನತೆ ಪಾಲ್ಗೊಂಡಿದ್ದರು. ರವಿವಾರ ಲಿಂಝ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 6000 ಜನ ಭಾಗವಹಿಸಿದ್ದರು.
ಹಲವು ದೇಶಗಳಲ್ಲಿ ಪ್ರತಿಭಟನೆ
ನೆದರ್ಲ್ಯಾಂಡಿನಲ್ಲಿ ಕೊರೋನ ಸೋಂಕಿನ ನಿರ್ಬಂಧಕ್ಕೆ ಜಾರಿಗೊಳಿಸಿದ ಕರ್ಫ್ಯೂ ವಿರೋಧಿಸಿ ಶನಿವಾರ ನಡೆದ ಪ್ರತಿಭಟನೆ ಸಂದರ್ಭ 145 ಮಂದಿಯನ್ನು ಬಂಧಿಸಲಾಗಿದೆ. ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ರವಿವಾರ ಸುಮಾರು 35000 ಜನ ಪ್ರತಿಭಟನೆ ನಡೆಸಿದಾಗ ಅವರನ್ನು ಚದುರಿಸಲು ಜಲಫಿರಂಗಿ ಪ್ರಯೋಗಿಸಲಾಗಿದೆ. ಡೆನ್ಮಾರ್ಕ್ನಲ್ಲಿ , ಸರಕಾರಿ ಉದ್ಯೋಗಿಗಳಿಗೆ ಕೋವಿಡ್ ಪಾಸ್ ನೀಡುವ ಸರಕಾರದ ನಿರ್ಧಾರವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 1000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಫ್ರಾನ್ಸ್ನಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳನ್ನು ವಿರೋಧಿಸಿ ರವಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆದಿದ್ದು 38 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಇಬ್ಬರು ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ. ಈ ಚಳಿಗಾಲ ಮುಗಿಯುವುದರೊಳಗೆ ದೇಶದ ಎಲ್ಲಾ ನಿವಾಸಿಗಳು ಕೊರೋನ ವಿರುದ್ಧದ ಲಸಿಕೆ ಪಡೆಯಬೇಕು, ಯಾಕೆಂದರೆ ಡೆಲ್ಟಾ ರೂಪಾಂತರಿತ ಸೋಂಕು ಅಪಾಯಕಾರಿಯಾಗಿ ಗೋಚರಿಸುತ್ತಿದೆ ಎಂದು ಜರ್ಮನಿಯ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಎಚ್ಚರಿಸಿದ್ದಾರೆ.