ಬೃಹತ್ ಉದ್ಯಮಗಳಲ್ಲಿ ಲಸಿಕೆ ಕಡ್ಡಾಯ: ಬೈಡನ್ ಆದೇಶ ಮರುಸ್ಥಾಪಿಸಿದ ಅಮೆರಿಕ ನ್ಯಾಯಾಲಯ
ವಾಷಿಂಗ್ಟನ್, ಡಿ.18: ಬೃಹತ್ ಉದ್ಯಮಗಳ ಸಿಬಂದಿ ಕೊರೋನ ವಿರುದ್ಧದ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಆದೇಶವನ್ನು ಅಮೆರಿಕದ ಅಪೀಲು ನ್ಯಾಯಾಲಯ ಎತ್ತಿಹಿಡಿದಿದೆ.
ಈ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದರು. ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಸಿನ್ಸಿನಾಟಿಯ 6ನೇ ಸರ್ಕ್ಯೂಟ್ ಅಪೀಲು ನ್ಯಾಯಾಲಯ ಫೆಡರಲ್ ನ್ಯಾಯಾಧೀಶರ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಕನಿಷ್ಟ 100 ಸಿಬಂದಿಗಳಿರುವ ಉದ್ದಿಮೆಗಳಲ್ಲಿ ಕೊರೋನ ವಿರುದ್ಧದ ಲಸಿಕೆ ಕಡ್ಡಾಯಗೊಳಿಸಿರುವ ಆದೇಶವನ್ನು ಅಮೆರಿಕದ ಔದ್ಯೋಗಿಕ ಸುರಕ್ಷೆ ಮತ್ತು ಆರೋಗ್ಯ ಇಲಾಖೆ (ಒಎಸ್ಎಚ್ಎ) ಪ್ರಕಟಿಸಿದ್ದು ಇದು ಜನವರಿ 4ರಿಂದ ಜಾರಿಗೆ ಬರಲಿದೆ. ಅಮೆರಿಕದ ಸುಮಾರು 80 ಮಿಲಿಯನ್ ಉದ್ಯೋಗಿಗಳಿಗೆ ಈ ಆದೇಶ ಅನ್ವಯಿಸಲಿದೆ. ಆದರೆ ಈ ಆದೇಶವನ್ನು ವಿರೋಧಿಸಿ ಉದ್ಯಮ ಸಂಘಟನೆಗಳು ಹಾಗೂ ಕನ್ಸರ್ವೇಟಿವ್ ತಂಡಗಳು ಪ್ರತಿಭಟನೆ ನಡೆಸಿದ್ದು ಇದಕ್ಕೆ ರಿಪಬ್ಲಿಕನ್ ನೇತೃತ್ವದ ರಾಜ್ಯಗಳಿಂದಲೂ ಬೆಂಬಲ ದೊರಕಿತ್ತು. ಈ ತುರ್ತು ಆದೇಶ ಜಾರಿಗೆ ಒಎಸ್ಎಚ್ಎಗೆ ಅಧಿಕಾರವಿಲ್ಲ ಮತ್ತು ಕೊರೋನವೈರಸ್ ಸಾರ್ವತ್ರಿಕ ಆರೋಗ್ಯ ಅಪಾಯವಾಗಿದ್ದು ಕೇವಲ ಉದ್ಯೋಗಿಗಳಿಗೆ ಮಾತ್ರ ಎದುರಾಗಿರುವ ಅಪಾಯವಲ್ಲ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
ಆದರೆ ಈ ವಾದವನ್ನು ತಳ್ಳಿಹಾಕಿದ ಅಪೀಲು ನ್ಯಾಯಾಲಯ, ಒಎಸ್ಎಚ್ಎಗೆ ಸಾಂಕ್ರಾಮಿಕ ರೋಗ ನಿಯಂತ್ರಣದ ಅಧಿಕಾರವನ್ನು ನೀಡಿರುವುದರಿಂದ ಅದಕ್ಕೆ ಆದೇಶ ಜಾರಿಗೊಳಿಸುವ ಹಕ್ಕು ಇದೆ ಎಂದು ಹೇಳಿದೆ. ಉದ್ಯೋಗದ ಸ್ಥಳದಲ್ಲಿ ಅನಾರೋಗ್ಯ ಸಮಸ್ಯೆಯನ್ನು ನಿಯಂತ್ರಿಸಲು ಈ ಹಿಂದಿನಿಂದಲೂ ಲಸಿಕಾಕರಣ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಸಾಧನವಾಗಿ ಒಎಸ್ಎಚ್ಎ ಬಳಸಿದೆ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶೆ ಜೂಲಿಯಾ ಸ್ಮಿತ್ ಗಿಬ್ಬನ್ಸ್ ಘೋಷಿಸಿದರು.
ಈ ತೀರ್ಪನ್ನು ಸ್ವಾಗತಿಸುವುದಾಗಿ ಶ್ವೇತಭವನ ಹೇಳಿದೆ. ಅಮೆರಿಕವು ಅತ್ಯಧಿಕ ಪ್ರಸರಣ ಸಾಮರ್ಥ್ಯವುಳ್ಳ ಒಮೈಕ್ರಾನ್ ಸೋಂಕಿನ ಭೀತಿ ಎದುರಿಸುತ್ತಿರುವ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಲಸಿಕೆ ಕಡ್ಡಾಯಗೊಳಿಸುವ ಅಗತ್ಯ ಹೆಚ್ಚಿದೆ ಎಂದು ಹೇಳಿಕೆ ನೀಡಿದೆ.
ನ್ಯಾಯಾಲಯದ ತೀರ್ಪನ್ನು ಅಮೆರಿಕದ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ರಿಪಬ್ಲಿಕನ್ ರಾಜ್ಯದ ಅಟಾರ್ನಿ ಜನರಲ್ ಹಾಗೂ ಉದ್ಯಮ ಸಂಸ್ಥೆಗಳು ಹೇಳಿವೆ.